ಬೆಂಗಳೂರು ಸಹವಾಸ
ಬೆಂಗಳೂರು ಸಹವಾಸ


ಒಂದು ದಿನ ಹಳ್ಳಿಯ ಜನ ಕೆಲವರು ಕೂತು ಮಾತನಾಡುತ್ತಿದ್ದಾಗ ಬೆಂಗಳೂರಿನ ಬಗ್ಗೆ ವಿಷಯ ಬಂತು. ಬೆಂಗಳೂರು ನೋಡಿದ್ದ ಇಬ್ಬರು ಅದು ಸ್ವರ್ಗದಂತೆ ಇದೆ ಅದಕ್ಕೆ ಅಲ್ಲಿಗೆ ಹೋದೋರು ಮತ್ತೆ ನಮ್ಮ ಹಳ್ಳಿಗೆ ಬರೋದೇ ಇಲ್ಲ. ಹೀಗೆ ಬಹಳ ರಸವತ್ತಾಗಿ ವಿವರಣೆ ಕೊಡ್ತಿದ್ದ. ಉಳಿದವರು ಬಾಯಿ ಬಿಟ್ಟುಕೊಂಡು ಕೇಳ್ತಾನೆ ಇದ್ದರು. ಅವರಲ್ಲಿ ಪಟೇಲರ ಮಗ ತಿಮ್ಮಯ್ಯ ಕೂಡ ಇದ್ದ
ಅವನಿಗೆ ಬೇಕಾದಷ್ಟು ಆಸ್ತಿ ಹಣ ಇತ್ತು. ಎಲ್ಲಾ ಇದ್ದರೂ ಇವರು ಹೇಳೋ ಬೆಂಗಳೂರನ್ನೇ ನೋಡಿಲ್ಲವಲ್ಲ ಅಂತ ಮನಸ್ಸಲ್ಲಿ ಕೊರಿಯಕ್ಕೆ ಶುರು ಆಯ್ತು. ಒಬ್ಬ ಕೇಳಿದ ತಿಮ್ಮಯ್ಯ ನೀನೂ ನೋಡಿಲ್ಲ ಅಂದರೆ ಏನಪ್ಪಾ , ನಮ್ಮ ರಾಜ್ಯದ ರಾಜದಾನಿ .ವಿಧಾನ ಸೌಧ ನೋಡಿಲ್ಲ ಅಂದರೆ ಈ ಭೂಮಿಯಲ್ಲಿ ಹುಟ್ಟಿ ಏನು ಪ್ರಯೋಜನ ಅಂದುಬಿಟ್ಟ. ಮತ್ತಷ್ಟು ತಲೆ ಕೆಟ್ಟು ಹೋಯ್ತು. ರಾತ್ರಿ ನಿದ್ದೆ ಬರಲಿಲ್ಲ. ಯಾವಾಗಲೋ ಬೆಳಗ್ಗೆ ನಿದ್ದೆ ಹತ್ತಿದೆ ಗೊತ್ತಾಗಿಲ್ಲ.
ತಿಮ್ಮಯ್ಯ ಒಂದು ಬ್ಯಾಗಲ್ಲಿ ಬೀರುವಿನಲ್ಲಿ ಇದ್ದ ಎಲ್ಲಾ ಹಣ ತುಂಬಿಕೊಂಡ . ಯಾರಿಗೂ ಹೇಳದೆ ಯಾವುದೋ ಲಾರಿಯನ್ನ ನಿಲ್ಲಿಸಿ ಹತ್ತಿ ಪಕ್ಕದ ಊರಿಗೆ ಹೋದ. ಅಲ್ಲಿಂದ ಒಂದು ಆಟೋದಲ್ಲಿ ರೈಲ್ವೆ ಸ್ಟೇಷನ್ ಗೆ ಬಂದ. ಬೆಂಗಳೂರು ಕಡೆಗೆ ಹೋಗೋ ರೈಲು ಇರಲಿಲ್ಲ.ಅಲ್ಲೇ ಮುಂದಿನ ರೈಲಿಗಾಗಿ ಸಂಜೆವರೆಗೂ ಕಾದ. ಬ್ಯಾಗನ್ನು ಭದ್ರವಾಗಿ ಕಾಪಾಡಿಕೊಳ್ಳುವುದೆ ಕಷ್ಟವಾಯ್ತು.
ಊಟ ತಿಂಡಿ ಪಕ್ಕದ ಹೋಟೆಲ್ ನಲ್ಲೆ ಮುಗಿಸಿದ್ದ. ಸಂಜೆ ರೈಲು ಹತ್ತಿ ಕೂತ.ರಾತ್ರಿಯೆಲ್ಲಾ ನಿದ್ದೆ ಇಲ್ಲದ ಕಾರಣ , ಈಗ ನಿದ್ದೆ ಬಂದು ಬಿಟ್ಟಿತು. ಕಣ್ಣು ಬಿಟ್ಟಾಗ ಬೆಂಗಳೂರು ಸ್ಟೇಷನ್ . ಎಲ್ಲರೂ ಇಳಿದು ಹೊರಟು ಹೋಗಿದ್ದಾರೆ. ಹೇಗೋ ತಾನೂ ಇಳಿದು ಬಂದ. ಎಲ್ಲಿಗೆ ಹೋಗಬೇಕು
ಗೊತ್ತಿಲ್ಲ . ಯಾರನ್ನೋ ಕೇಳಿದ ಪಕ್ಕದಲ್ಲೇ ಇದ್ದ ಹೋಟೆಲ್ ತೋರಿಸಿ ರೂಮ್ ಬಾಡಿಗೆಗೆ ತೆಗೆದುಕೊಳ್ಳಲು ಹೇಳಿದರು. ಸ್ನಾನ ಮುಗಿಸಿ ಅಲ್ಲೇ ತಿಂಡಿ ತಿಂದ. ವಿಧಾನ ಸೌಧ ನೋಡಕ್ಕೆ ಆಟೋ ಹಿಡಿದು ಬಂದ . ಆಟೋ ಡ್ರೈವರ್ ಹತ್ತಿರ ಮಾತನಾಡುವಾಗ ಅವನು ಹೇಳಿದ ಬೆಂಗಳೂರು ನೋಡಬೇಕಾದರೆ ಒಂದು ದಿನಕ್ಕೆ ಆಗಲ್ಲ.ನಿಮ್ಮಹೋಟೆಲ್ ಹತ್ತಿರ ನಾನೇ ಬರ್ತೀನಿ ಮೂರುದಿನ ಎಲ್ಲಾ ತೋರಿಸ್ತೀನಿ ಅಂದ. ಆಯ್ತು ಅಂತ ಒಪ್ಪಿಕೊಂಡ. ಮೂರು ದಿನದಲ್ಲಿ ಎಲ್ಲಾ ಸುತ್ತಾಡಿಸಿ ಕೊನೆಗೆ ಹತ್ತು ಸಾವಿರ ಕೇಳ್ದ . ಆಗಲ್ಲ ಅಂದ. ಕೂಡಲೇ ಕೊಡಲೇ ಬೇಕು ಅಂತ ಗಲಾಟೆ ಮಾಡಿದ ಸುತ್ತಲೂ ಇದ್ದ ಆಟೋ ಡ್ರೈವರ್ ಗಳೆಲ್ಲಾ ಸೇರಿದರು .
ಅವನು ಹೇಳಿದ. ಒಂದು ವಾರದ ಹಿಂದೆ ರೈಲ್ವೇ ಸ್ಟೇಷನ್ ಹತ್ತಿರ ಈ ಮನುಷ್ಯ ಆಟೋ ಕೇಳ್ದ. ಪಾಪ ಬೆಂಗಳೂರಿಗೆ ಹೊಸಬ ಯಾರಾದ್ರೂ ಮೋಸ ಮಾಡಿಬಿಡಬಹುದು ಅಂತ ನಾನೇ ಇವನನ್ನ ಲಾಯರ್ ಮನೆ , ಆಫೀಸು , ತಾಲೂಕ ಕಚೇರಿ ಪೊಲೀಸ್ ಸ್ಟೇಷನ್ ಅಂತ ಒಂದು ವಾರದಿಂದ ಸುತ್ತಾಡಿಸಿದ್ದೇನೆ. ಬಂದಾಗ ಇವನ ಹತ್ತಿರ ಒಂದು ಪೈಸಾ ಇರಲಿಲ್ಲ.ಲಾಯರ್ ಹತ್ತಿರ ಹೋದ್ರೆ ಹತ್ತುಸಾವಿರ ಕೊಡ್ತಾರೆ ಅದು ನಿನಗೆ ಕೊಡ್ತೀನಿ ಅಂದ. ನಾನು ನಂಬಿದ್ದಕ್ಕೆ ನನಗೆ ಮೋಸ ಮಾಡಕ್ಕೆ ಹೋಗ್ತಿದಾನೆ .ಅವನ ಬ್ಯಾಗನಲ್ಲಿ ಬೇಕಾದರೆ ನೋಡಿ ಯಾವುದೋ ಕೇಸ್ ನಲ್ಲಿ ಗೆದ್ದಿದ್ದಕ್ಕೆ ಲಾಯರ್ ನನ್ನ ಮುಂದೇನೆ ಹಣ ಕೊಟ್ಟು ಹುಷಾರಾಗಿ ರೈಲು ಹತ್ತಿಸು ಅಂತ ಹೇಳಿದ್ದಾರೆ ಅಂದ. ತಿಮ್ಮಯ್ಯನಗೆ ಬೆಂಗಳೂರಿನ ಕೆಟ್ಟ ಅನುಭವ ಆಯ್ತು ಅಷ್ಟರಲ್ಲಿ ಅವನ ಹೆಂಡತಿ ಏನ್ರೀ ಸೂರ್ಯ ಹುಟ್ಟಿ ಎಷ್ಟೊತ್ತಾದ್ರೂ ಹೊಲದ ಕಡೆ ಹೋಗಲ್ವಾ ಅಂದಾಗ, ಇದು ಬರೀ ಕನಸು ಅಂತ ಗೊತ್ತಾಯ್ತು. ಸಾಕಪ್ಪಾ ಬೆಂಗಳೂರಿನ ಸಹವಾಸ ಅಂದುಕೊಂಡ ಮೇಲೆದ್ದ.
.