ಗಂಗೂ ಬಾಯಿ
ಗಂಗೂ ಬಾಯಿ


ಹಲೋ ಮಿತ್ರರೇ...ನಮಸ್ತೇ...
ನಮ್ಮ ಗಂಗೂ ಭಾಯೀ..ಬೀಸುವ ಕಲ್ಲಿನ ಕೆಲಸ ಶುರು ಮಾಡಿದಳಂದ್ರ....
ಎಂಥಾ ಛೊಲೋ..ಹಾಡು ಹೊರಗ ಬರ್ತದ...ಅಂದ್ರ....ಏನ್ ಹೇಳ್ಳಿ ಅದರ ಚಂದಾನ.....
ಹ್ಹಾಂಗ..ಒಂದ್ಸಲಾ..ಬೀಸಾಕ ಸುರು ಆತಂದ್ರ...ಪುಟ್ಯಾಗಿನ ಜೋಳಾ ಖಲಾಸ್...
ನಸುಕಿನ್ಯಾಗಿನ ಹಾಡು ಮಕ್ಕೊಂಡವರ ಕಿವೀ ಮ್ಯಾಲೆ ಬೀಳ್ತಿದ್ದರ..ಯಾವ್ಹ್ ನನ್ನ ಮಗಾ...ಇನ್ನಾ ಮಕ್ಕೋತಾನ ಹೇಳ್ರೀ ನೋಡೂಣ..
ನಮ್ಮ ಗಂಗವ್ವನ ದನಿ ಕೇಳಿ ದಡಬಡ ಎದ್ದು ಕಸಮುಸುರೀ ಮಾಡಿ, ಮುಖಮುಸುಡೀ ತೊಳದು, ಘಮಘಮ ಅಂತ ಛಾ ಕುಡಿದು..ಹೊಲಾ ಉಳ್ಳಾಕ ಎತ್ತಿನ ಗಾಡೀ ಹೂಡಿಕೊಂಡು ಹೋಗೂದ..ಭಾಳ ಚಂದ ಅಲ್ಲೇನ್ರೀ....
ಈಕೀ ಹಾಡಾ ಕೇಳ್ಕೋತ ಇನ್ನಾ ಕನಸು ಕಾಣ್ತಾ ಹಾಸಿಗೀ ಮ್ಯಾಲೆ ಉಳ್ಯಾಡೂ ಗಂಡನಿಗಂತೂ ಏಳೂ ಮನಸ...ಇಲ್ ನೋಡ್ರೀ..ಹ್ಹಾಂಗ..ಸುಗ್ಗೀ ಹುಣ್ಣಿಮೀ ದಿನ ಹೊಲಕ ಚರಗಾ ಚೆಲ್ಲುವಾಗಿನ ಚಂದೊಳ್ಳೀ ಗಂಗವ್ವನ ಕೂಡ ಹಬ್ಬದಡಿಗೀ ಉಂಡು ಅಲ್ಲೇ ಮಾವಿನ ಮರದ ಬುಡಕ್ಕ ತಲೀಕೊಟ್ಟು ಆಕೀ ಮಡಿಲಾಗ ನಿದ್ದೀ ಮಾಡಿದ್ದು ಮರಿಯೂದಾದರೂ ಸಾಧ್ಯ ಆದೀತೇನ್ರೀ..ಅಂಥಾ ಚೆಲುವಿ ನಮ್ಮ ಗಂಗೂ ಭಾಯೀ..
ಊರಿಗೆ ಬಂದ ಚಂದನ ಸೊಸೀಗೆ ಆರತೀ ಎತ್ತಿ ಬರಮಾಡಿಕೊಂಡ ಊರ ಮುತ್ತೈದೆಯರಿಗೆ ಹೊಳೀದಂಡ್ಯಾಗಿನ ಸುರಗೀ ಹೂವಿನ ಮಾಲೀ ಕಟ್ಟೂದು ಹ್ಯಾಂಗಂತಾ ಕಲಿಸಿಕೊಟ್ಟಾಕಿನ ಇಕೀ...
ಪಡ್ಡೇ ಹುಡುಗರ ಗುಂಪು ಕದ್ದೂ ಮುಚ್ಚೀ ಇಕೀ ಹಿಂದಿಂದ ಹೊಲದ ದಾರ್ಯಾಗ ಬರೂದು ಆಕಿಗೆ ಹ್ಯಾಂಗೋ ಗೊತ್ತಾಗಿ, ಅಂದಿಂದಾ...ಅವರಿಗೂ ಚಂದನ ಬುಗುರಿ, ಚಿಣ್ಣೀದಾಂಡು, ರಬ್ಬರ್ ಚಂಡು ಕೊಟ್ಕೂಡ್ಲೇ ಖುಷೀಗೆ ಹಾರ್ಯಾಡಿದ್ವು ಹುಡುಗ್ರು...ಎಂತ್ಹಾ ದೊಡ್ ಮನ್ಸು ನಮ್ಮ ಹುಡುಗೀದು..ಅಂತೀನಿ...
ಮನಿಯಾಗ ಅತ್ತೀ ಕಾರುಬಾರಾದ್ರ....ಮನೀಹೊರಗ ಇಕೀದ ದರ್ಬಾರು..
ದನಕರ, ಎಮ್ಮೀಗಳಿಗೆ ಹುಲ್ಲು ತಿನಿಸೂದಂತೂ ಇಕೀನಾ ಅಂತೀನಿ..
ಕರೀ ಬೆಕ್ಕಂತೂ ಅತ್ತೀ ಕೈಯಾಗಿನ ಹಾಲು ಕುಡುದ್ರ ಕೇಳ್ರೀ...ಗಂಗೂನ ಬೇಕು ಆಕೀಗೂ...
ಆಕೀ ಹಾಡಿದ್ದ ಒಂದು ನುಡೀ ಇಲ್ಲಿ ಹಾಕೀನಿ..ನೋಡ್ರೀ...
ಬಾಲಕ ರಾಮ ಮುತ್ತಿನ ಚಂಡಿನಾಟ ಆಡುವಾಗ ಅದು ಪುಟಿದು ಚಿಕ್ಕಮ್ಮ ರತನಿ ಮನೆಯೊಳಗೆ ನುಗ್ಗುತ್ತದೆ. ಆಗ ಅವಳು ರಾಮನನ್ನು ಕಂಡು ಅತೀವ ಪ್ರೀತಿ ಉಕ್ಕುತ್ತದೆ. ಆದರೆ, ರಾಮನಿಗೆ ಗೊತ್ತು ಈ ಸ್ಥಳ ತನ್ನದಲ್ಲವೆಂದು. ಅಲ್ಲಿಗೆ ತನ್ನ ತಂದೆ ಆಗಾಗ ಬಂದು ಹೋಗುತ್ತಿದ್ದುದರ ಅರಿವಿತ್ತು. ಹಾಗಾಗಿ,ಅವಳನ್ನು ಚಿಕ್ಕಮ್ಮನೆಂದೇ ಸಂಭೋದಿಸುತ್ತಾನೆ. ಅಕ್ಕರೆಯಿಂದ ಅವಳು ಒಳಗೆ ಕರೀತಾಳೆ..ಊಟ ಮಾಡಲು ಹೇಳುತ್ತಾಳೆ...ಅದನ್ನು ನಯವಾಗಿ ನಿರಾಕರಿಸುತ್ತಾ ರಾಮ ಹೇಳುತ್ತಾನೆ...ನೀವು ನಮ್ಮ ತಂದೆಯವರ ಸೊತ್ತು. ನಾ ಊಟ ಮಾಡಿದರೆ ಮಹಾ ದೋಷವಾದೀತು ಅಂತ ಜಾರಿಕೊಳ್ತಾನೆ...ಪಾಪ, ಆಕೆ ದಿಗ್ಮೂಡಳಾಗ್ತಾಳೆ. ಯಾರು ಕಲಿಸಿದರು ಇಂತಹ ಮಾತನ್ನು ಈ ಪುಟ್ಟ ಪೋರನಿಗೆ? ಎಂದು ಆಶ್ಛರ್ಯದೊಂದಿಗೆ ತನ್ನ ಬಗೆಗೆ ಬೇಸರವೂ ಉಂಟಾಗುತ್ತದೆ. ಹಳ್ಳಿಯ ಜೀವನದ ಮತ್ತೊಂದು ಮಜಲು ಹೀಗಿರುತ್ತಿದ್ದವು. ಅಂತೆಯೇ ನೂರಾರು ಸ್ವರಚಿತ ಹಾಡುಗಳನ್ನು ಕಟ್ಟಿ ಹಾಡಿಕೊಳ್ತಿದ್ದರು. ಅವುಗಳು ನಂತರ ಜಾನಪದಗಳಾದವು...ಇತ್ತೀಚೆಗೆ ಇವೆಲ್ಲ ಕಣ್ಮರೆಯಾಗಿವೆ.
" ಸಂಗಾತಿಯೊಡಗೂಡಿ .......
ಚಂಡ ಪುಟಸ್ಯಾನ ರತನಿ ಮನೀಗೆ ಶ್ರೀ ರಾಮ ರಾಮಾ...
ರಾಮನ್ನ ಕಂಡಾಕೀ..ಸನ್ನೀಲೇ ಕೈಮಾಡಿ ಬಂದಾರ ಹೋಗೋ ಎಲೋ ರಾಮಾ ,ಶ್ರೀ ರಾಮಾ ರಾಮಾ....
ಸಣ್ಣಾನ ಶ್ಯಾವೀಗೀ ಹುಗ್ಗೀಯ ಮಾಡೀನಿ..ಉಂಡಾರ ಹೋಗೋ ಎಲೋ ರಾಮಾ...ಶ್ರೀ ರಾಮಾ ರಾಮಾ...
ನಮ್ಮ ತಂದೆ ಉಂಬೂದು ನಾ ಒಮ್ಮೆ ಉಂಡಾರ ಮಾದ್ಹೋಷ ನಮಗ ಚಿಗವ್ವ ರತನೀ ...ಶ್ರೀ ರಾಮ ರಾಮಾ...."""
ಅನ್ನುತ್ತಾ ರಾಮ ಓಡಿದ ತನ್ನ ಮನೇಕಡೆ. ಮುತ್ತಿನ ಚಂಡು ಅವಳ ಬಳಿಯೇ ಉಳೀತು....ನೆನಪಿನ ಕಾಣಿಕೆಯಾಗಿ....
ಎಷ್ಟು ಛೊಲೋ ಹಾಡಿನ ಧಾಟೀ ನಮ್ಮಗಂಗೂ ಭಾಯಿ ಹಾಡಿದ್ರ, ನಾನು ಕಣ್ಣೂ ಬಾಯಿ ಬಿಟ್ಕೊಂಡು ಕೇಳ್ಕೋತ ಕೂಡ್ತಿದ್ದೆ ಸಣ್ಣಾಕಿ ಇದ್ದಾಗ....ಅದರ ಅರ್ಥ ಆಗಿರಲಿಲ್ಲ. ಈಗೀಗ ಅರ್ಥ ಆಗ್ತಿದೆ..ತುಂಬಾ ತುಂಬಾ ಇಷ್ಟದ ಹಾಡುಗಳಿದ್ದವು . ನೆನಪಿಗೆ ಬರ್ತೀಲ್ಲ ಮಾರಾಯ್ರೇ...
ನಮ್ಮ ಚೆಂದುಳ್ಳೀ ಗಂಗೂಭಾಯಿಗೆ ಒಂದು ಲೈಕೊತ್ತೀರಿ ಹೌದಲ್ಲ ಮತ್ತ..😊