Achala B.Henly

Abstract Comedy Classics

4  

Achala B.Henly

Abstract Comedy Classics

ನಮ್ ಪರ್ಮಿಯ ಪಾರ್ಲರ್ ಪರದಾಟಗಳು

ನಮ್ ಪರ್ಮಿಯ ಪಾರ್ಲರ್ ಪರದಾಟಗಳು

4 mins
288



ಹೌದು, ಇವಳು ನಮ್ಮ ಪರ್ಮಿಯೇ. ಪೂರ್ತಿ ಹೆಸರು ಪರಿಮಳ ಎಂದು. ನಮ್ಮ ಮನೆಯ ಬೀದಿಯಲ್ಲೇ ಅವಳ ಮನೆಯು ಸಹ ಇರುವುದು. ಮೂರು ಜನ ಹೆಣ್ಣು ಮಕ್ಕಳಲ್ಲಿ ಇವಳೂ ಒಬ್ಬಳು. ಓದಿದ್ದು ಬರೀ ಪಿಯುಸಿ ಅಷ್ಟೇ. ಆದರೆ ಟೈಲರಿಂಗ್, ಎಂಬ್ರಾಯ್ಡರಿ ಕಲಿತು ಮನೆಯಲ್ಲಿಯೇ ದುಡಿದು ಸಂಪಾದಿಸುತ್ತಾಳೆ. ನಾವೆಲ್ಲರೂ ಚಿಕ್ಕಂದಿನಿಂದ ಒಟ್ಟಿಗೆ ಆಡಿ ಬೆಳೆದಿದ್ದರಿಂದ ಅವಳನ್ನು ಪ್ರೀತಿಯಿಂದ ಕರೆಯುವುದು "ಪರ್ಮಿ" ಎಂದೇ...!


ಇಂತಹ ಸ್ವಾವಲಂಬಿ ಪರ್ಮಿಗೆ ಪಾರ್ಲರ್ ಹುಚ್ಚು ಬಹಳ. ತಾನು ಚೆನ್ನಾಗಿ, ಸೌಂದರ್ಯವತಿಯಾಗಿ ಕಾಣಬೇಕೆಂಬ ಮಹದಾಸೆ ಇದೆ. ಅಕ್ಕತಂಗಿಯರ ನಡುವೆ ಇವಳು ಸ್ವಲ್ಪ ಎಣ್ಣೆಗೆಂಪಿನ ಬಣ್ಣ. ಹಾಗಾಗಿ ಪಾರ್ಲರ್ ಗೆ ಹೋಗಿ ಅವರು ಹೇಳಿದ್ದನ್ನೆಲ್ಲ ಮಾಡಿಸಿಕೊಂಡರೆ ಲಕಲಕ ಎಂದು ಹೊಳೆಯುತ್ತೇನೆ ಎಂಬ ಹುಚ್ಚು ಭ್ರಮೆ ಇವಳಿಗೆ...!


ನಾನೂ ಸಹ ಗೆಳತಿ ಎಂಬ ಸಲುಗೆಯಿಂದ ಎಷ್ಟೋ ಬಾರಿ ಹೇಳಿದ್ದೇನೆ "ಲೆ ಪರ್ಮಿ, ಮೇಕಪ್ ಗೀಕಪ್ ಎಲ್ಲ ನೀರ ಮೇಲಣ ಗುಳ್ಳೆಯಂತೆ ಕಣೆ. ನೀನು ಎಷ್ಟೇ ಮೇಕಪ್ ಮಾಡಿಕೊಂಡರೂ ಮಳೆಗೋ ಅಥವಾ ನಿಮ್ಮ ಮನೆಯ ನಲ್ಲಿಗೂ ಮುಖ ತೋರಿಸು. ಬಣ್ಣದ ನೀರು ಹರಿದುಕೊಂಡು ಹೋಗಿ, ನಿನ್ನ ನಿಜವಾದ ಬಣ್ಣ ಗೊತ್ತಾಗುತ್ತದೆ!! ಹಾಗಾಗಿ ಸುಖಾಸುಮ್ಮನೆ ಬ್ಯೂಟಿ ಪಾರ್ಲರ್ ಎಂಬ ಭ್ರಮಾಲೋಕದ ಬಗ್ಗೆ ಇಲ್ಲಸಲ್ಲದ ಆಸೆಗಳನ್ನು ಇಟ್ಟುಕೊಳ್ಳಬೇಡ. ಸುಮ್ಮನೆ ದುಡ್ಡು ದಂಡ. ಅದನ್ನೇ ಬ್ಯಾಂಕ್ ಅಕೌಂಟ್ ನಲ್ಲಿ ಸೇವ್ ಮಾಡು, ಇಲ್ಲ ಇಷ್ಟವಾದ ಬಟ್ಟೆಯನ್ನು ಅಥವಾ ಪುಸ್ತಕವನ್ನು ಕೊಂಡುಕೊ" ಎಂದೆ.


ಆದರೆ ಪರ್ಮಿ ಉರಿಗಣ್ಣು ಬಿಡುತ್ತಾ, "ನಿಂಗೇನೆ ಗೊತ್ತು ಪಾರ್ಲರ್ ಬಗ್ಗೆ? ಅದೇ ನಮ್ಮ ಸುಮಾ ಆಂಟಿ, ಪಾರ್ಲರ್ ಇಟ್ಟಿದ್ದಾರಲ್ಲ ಅವರು ಹೇಳಿದರು, ಹೇರ್ ಸ್ಪಾ ಮಾಡಿಸಿಕೊ ನಿನ್ನ ಕೂದಲು ರೇಷ್ಮೆಯಂತೆ ನುಣುಪಾಗುತ್ತದೆ ಎಂದು. ಇನ್ನು ನನ್ನ ಗುಂಗುರು ಕೂದಲನ್ನು ಸ್ಟ್ರೈಟ್ ಮಾಡಿಸಿದರೆ ಯಾವ ಹೀರೋಯಿನ್ಗೂ ಕಡಿಮೆ ಇಲ್ಲ ಕಣೆ...!" ಎಂದೂ ಸಹ ಹೇಳಿದರು.


"ನಾನಂತೂ ಈ ಸಲ ಐಬ್ರೋ ಮಾಡಿಸಲು ಹೋದಾಗ ಇದನ್ನು ಸಹ ಕೇಳಿ ಮಾಡಿಸಿಕೊಳ್ಳುತ್ತೇನೆ. ಫ್ರೀ ಇದ್ದರೆ ನೀನು ಬಾರೆ, ಕಂಪನಿ ಕೊಡುವಿಯಂತೆ" ಎಂದಳು. "ನಾಯಿ ಬಾಲ ಯಾವತ್ತಿದ್ದರೂ ಡೊಂಕು!! ಇನ್ನು ಇವಳಿಗೆ ನಾನು ಬಿಟ್ಟಿ ಬೋಧನೆಯನ್ನು ಮಾಡುವುದಿಲ್ಲ. ಏನೋ ಒಂದೆರಡು ತಿಂಗಳಿಗೆ ಐಬ್ರೋ, ವ್ಯಾಕ್ಸಿಂಗ್ ಮಾಡಿಸಿಕೊಂಡರೆ ಸರಿ. ಆದರೆ ಹದಿನೈದು ದಿನಕ್ಕೊಮ್ಮೆ ಪಾರ್ಲರ್ ಆಂಟಿ ಹತ್ತಿರ ಹೋಗಿ ಅದು ಮಾಡಿ, ಇದು ಮಾಡಿ, ಎಂದು ದುಡ್ಡನ್ನು ವೃಥಾ ಖರ್ಚು ಮಾಡುವುದು ನನಗೇಕೋ ಸರಿ ಕಾಣಲಿಲ್ಲ..!"


"ಏನೋ ಶ್ರೀಮಂತರ ಮನೆ ಮಕ್ಕಳಾದರೆ ಸರಿ. ಆದರೆ ನಾವುಗಳು ಮಿಡಲ್ ಕ್ಲಾಸ್ ಫ್ಯಾಮಿಲಿ ಜನ. ಹೈ ಫೈ ಶೋಕಿ ಮಾಡದೆ ಇರುವುದು ಜಾಣತನ. ಆದರೆ ನಮ್ ಪರ್ಮಿಗೆ ಏಕೆ ಇದು ಅರ್ಥವಾಗುತ್ತಿಲ್ಲ?" ಎಂದುಕೊಂಡೆ.


ಪರ್ಮಿಗೆ ಅವರಪ್ಪ ಅಮ್ಮ ಒಬ್ಬ ಹುಡುಗನನ್ನು ನೋಡಿ ಮದುವೆ ಗೊತ್ತು ಮಾಡಿದ್ದಾರಂತೆ. ಹುಡುಗ ಪ್ರೈವೇಟ್ ಕಾಲೇಜಿನಲ್ಲಿ ಕ್ಲರ್ಕ್ ಆಗಿದ್ದಾನಂತೆ. ಬರುವ ತಿಂಗಳು ಮದುವೆ ಎಂದು ಸಂಭ್ರಮ, ಸಡಗರದಿಂದ ಬಂದು ಹೇಳಿದಳು ನಮ್ ಪರ್ಮಿ...! "ಓಹೋ ಹಾಗಾದರೆ ಇನ್ನೊಂದು ತಿಂಗಳು ಪರ್ಮಿಯ ಠಿಕಾಣಿ ಸುಮಾ ಆಂಟಿ ಪಾರ್ಲರ್ ನಲ್ಲಿಯೇ" ಎಂದುಕೊಂಡೆ ಮನಸ್ಸಿನಲ್ಲಿ....!


"ಏನೇಮ್ಮಾ, ನೀನಂತೂ ಪಾರ್ಲರ್ ಮುಖ ನೋಡಿಲ್ಲ. ನನ್ನ ದೆಸೆಯಿಂದಾದರೂ ನೋಡುವಿಯಂತೆ. ನಾಳೆ ಸರಿಯಾಗಿ ಸಂಜೆ ನಾಲ್ಕು ಗಂಟೆಗೆ ರೆಡಿ ಆಗಿರು. ಇಬ್ಬರು ಹೋಗೋಣ" ಎಂದಳು ಪರ್ಮಿ. ಮನಸ್ಸಿಲ್ಲದ ಮನಸ್ಸಿನಿಂದ ಹೂಂಗುಟ್ಟಿದೆ. ಮಾರನೇ ದಿನ ಪಾರ್ಲರ್ ಗೆ ತೆರಳಿದಾಗ ಪರ್ಮಿ ಫುಲ್ ಖುಷಿಯ ಮೂಡಿನಲ್ಲಿದ್ದಳು.


"ಆಂಟಿ ನನ್ನ ಮದುವೆ ಸೆಟ್ಟಾಗಿದೆ. ಒಂದೇ ಸಲ ಎಲ್ಲವನ್ನು ಮಾಡಿಸಿಕೊಳ್ಳಲು ಆಗುವುದಿಲ್ಲ ಎಂದು ಇವತ್ತು ಬಂದೆ. ನನ್ನ ಬ್ರೈಡಲ್ ಮೇಕಪ್ ಅನ್ನು ನೀವೇ ಮಾಡಬೇಕು. ಅದಕ್ಕೂ ಮುಂಚೆ ಏನೇನು ಸರ್ವಿಸ್ ಗಳಿವೆಯೋ ಅವೆಲ್ಲವನ್ನು ಚೆನ್ನಾಗಿ ಮಾಡಿಕೊಡಿ" ಎಂದಳು. "ಅಂತೂ ಇಂತೂ ಕುರಿ ಹಳ್ಳಕ್ಕೇ ಬಿತ್ತು" ಎಂದುಕೊಂಡರು ಸುಮಾ ಆಂಟಿ...!


"ಹೂಂ ಪರ್ಮಿ, ನಮ್ಮ ಹುಡುಗಿಯನ್ನು ಯಾವ ರೀತಿ ಮದುವೆಗೆ ರೆಡಿ ಮಾಡಬೇಕೆಂದು ನನಗೆ ಹೇಳಬೇಕೇನು? ನೋಡ್ತಾ ಇರು ನಿಮ್ಮ ಹುಡುಗ ಇವಳೇನಾ ಪರ್ಮಿ ಎಂದು ಆಶ್ಚರ್ಯಗೊಳ್ಳುವಂತೆ ನಿನ್ನನ್ನು ತಯಾರು ಮಾಡುತ್ತೇನೆ..!!" ಎಂದು ಬೆಣ್ಣೆ ಹಚ್ಚುತ್ತಾ ಮಾತುಗಳನ್ನಾಡಿದರು.


"ನೋಡು ಪರ್ಮಿ, ಮೊದಲಿಗೆ ನಿನ್ನ ಕೂದಲಿಗೆ ಹೇರ್ ಸ್ಪಾ ಮತ್ತು ಸ್ಟ್ರೈಟ್ ಮಾಡುತ್ತೇನೆ. ಅದಕ್ಕೂ ಮುಂಚೆ ಹೇರ್ ಕಟ್ ಮಾಡೋಣ" ಎಂದು ಚಂದವಾಗಿ ಬೆಳೆದಿದ್ದ ಪರ್ಮಿಯ ಕೂದಲಿಗೆ ಕತ್ತರಿ ಇಟ್ಟರು. ನಂತರ ಹೇರ್ ಸ್ಪಾ ಮತ್ತು ಕೂದಲನ್ನು ಸ್ಟ್ರೇಟ್ ಮಾಡಿ ತಮ್ಮ ಜೇಬನ್ನು ತುಂಬಿಸಿಕೊಂಡರು.


ಬರುವ ವಾರ ಪೆಡಿಕ್ಯೂರ್ ಮೆನಿಕ್ಯೂರ್ ಮಾಡುತ್ತೇನೆಂದು ಹೇಳಿದರು. ಅಲ್ಲಿಯವರೆಗೂ ಬರೀ ಕ್ಯೂರ್ ಎಂಬ ಶಬ್ದವನ್ನು ಕೇಳಿದ್ದ ಪರ್ಮಿ, "ಇದೇನಪ್ಪ ನಂಗೇನು ಕ್ಯೂರ್ ಮಾಡುತ್ತಾರೆ..?" ಎಂದು ಗೊಂದಲಗೊಂಡಳು.


ವ್ಯಾಕ್ಸಿಂಗ್ ಮಾಡಲು ಮೇಣವನ್ನು ಬಿಸಿ ಮಾಡಲು ಶುರುಮಾಡಿದಾಗ "ಏಕೆ ಆಂಟಿ ಜೇನು ತುಪ್ಪವನ್ನು ಬಿಸಿ ಮಾಡುತ್ತಿದ್ದಾರಲ್ಲ?" ಎಂದು ಫುಲ್ ಕನ್ಫ್ಯೂಸ್ ಆದಳು. ನಂತರ ಅದರೊಳಗೆ ಸ್ಟ್ರಿಪ್ಸ್ ಅನ್ನು ಅದ್ದಿ ತನ್ನ ಕೈಗೆ ಕಾಲಿಗೆ ಅಂಟಿಸಿ "ಪರ್" ಎಂದು ಹರಿದಾಗ ಆ......ಎಂದು ಅರಚಿಕೊಂಡಳು. ಕಿರುಚಿದ ಶಬ್ದಕ್ಕೆ ಅಲ್ಲೇ ಕೂತು ಮೊಬೈಲ್ ನೋಡುತ್ತಿದ್ದ ನಾನು ಒಂದು ಕ್ಷಣ ಬೆದರಿ ಕೈಬಿಟ್ಟೆ. ಮೊಬೈಲ್ "ಪಟಾರ್" ಎಂದು ಕೆಳಗೆ ಬಿತ್ತು. ಮನಸ್ಸಿನಲ್ಲಿ ಪರ್ಮಿಯ ಅರೆಚಾಟಕ್ಕೆ ಬೈದುಕೊಳ್ಳುತ್ತಾ ನನ್ನ ಮೊಬೈಲ್ ಅನ್ನು ಎತ್ತಿಕೊಂಡೆ.


ಇನ್ನೇನು ಮೂರು ದಿನಗಳಲ್ಲಿ ಪರ್ಮಿಯ ಮದುವೆ. ಹಾಗಾಗಿ ಬೆಳಗ್ಗೆಯೇ ಪರ್ಮಿ ಬ್ಯೂಟಿ ಪಾರ್ಲರ್ ನಲ್ಲಿ ಹಾಜರ್!! ಆಂಟಿಯು ಸಹ ಎಲ್ಲಾ ವಿಧದ ಸರ್ವಿಸ್ ಗಳನ್ನು ಕೊಡುತ್ತಾ ಇದ್ದಾರೆ. ಕೈಕಾಲಿಗೆ ವಿಧವಿಧವಾದ ಕ್ರೀಮ್ಗಳನ್ನು ಹಚ್ಚಿ, ಮಾಲಿಷ್ ಮಾಡುತ್ತಾ ಇದ್ದಾರೆ. ಉಗುರುಗಳಿಗೆ ಶೇಪ್ ಕೊಟ್ಟು, ಚಂದದ ನೈಲ್ ಪಾಲಿಶ್ ಅನ್ನು ಹಾಕುತ್ತಿದ್ದಾರೆ. ಬೆಚ್ಚನೆಯ ನೀರಿನಲ್ಲಿ ಕಾಲುಗಳನ್ನು ಇಟ್ಟಾಗಲಂತೂ, ಪರ್ಮಿ ಸುಖ ನಿದ್ರೆಗೆ ಜಾರಿಬಿಟ್ಟಿದ್ದಾಳೆ..!!


ಕೊನೆಗೆ ನಾನೇ ಎಬ್ಬಿಸಿದೆ. ಈಗ ಫೇಶಿಯಲ್ ಸರದಿ. "ನನಗೆ ಗೋಲ್ಡ್ ಫೇಶಿಯಲ್ ಅನ್ನೇ ಮಾಡಿ" ಎಂದು ಮಾಡಿಸಿಕೊಳ್ಳುತ್ತಿದ್ದಾಳೆ. ಆಂಟಿ ಅಂತೂ ಇವಳ ಮುಖಕ್ಕೇ ಯಾವ ಯಾವುದೋ ಕ್ರೀಮ್ಗಳನ್ನು ಹಚ್ಚುತ್ತಿದ್ದಾರೆ. ಯಾವುದೋ ಬಿಳಿ ಬಣ್ಣದ ಕ್ರೀಮ್ ಅನ್ನು ಹಾಕಿ ಅರ್ಧ ಗಂಟೆ ಬಿಟ್ಟಿದ್ದಾರೆ. ನನಗೋ ಇದೇಕೆ ಇವಳನ್ನು ಗೊಗ್ಗಯ್ಶನಂತೆ ಕಣ್ಣಿಗೆ ಸೌತೆಕಾಯಿಯನ್ನು ಇಟ್ಟು ಮಲಗಿಸಿದ್ದಾರೆ...!" ಅನಿಸಿದೆ.


ಮದುವೆಯ ದಿನ ಆಂಟಿ ವಧುವಿನ ಕೋಣೆಗೆ ಬಂದು ಪರ್ಮಿಯನ್ನು ರೆಡಿ ಮಾಡುತ್ತಿದ್ದಾರೆ. ಮೊದಲಿಗೆ ಮಿರ ಮಿರನೇ ಹೊಳೆಯುವ ಕೆಂಪು ಬಣ್ಣದ ಸೀರೆಯನ್ನು ಉಡಿಸಿ, ನಂತರ ಫೌಂಡೇಶನ್ ಕ್ರೀಮ್ ಅನ್ನು ಬೆನ್ನಿಗೆ, ಕೈಗೆ, ಕತ್ತಿಗೆ, ಮುಖಕ್ಕೆ ಬಳೆದಿದ್ದಾರೆ. ನಂತರ ಕೂದಲಿಗೆ ನೀಟಾಗಿ ಒಂದು ಕೊಂಡೆಯನ್ನು ಕಟ್ಟಿ, ಅದರ ತುಂಬಾ ಹೂವು ಎಲೆಗಳನ್ನು ಗಾರ್ಡನ್ ನಂತೆ ಸಿಂಗಾರ ಮಾಡಿದ್ದಾರೆ.


ಈಗ ಮುಖದ ಮೇಕಪ್ ಸಮಯ. ಎಣ್ಣೆಗೆಂಪಿನ ಪರ್ಮಿಗೆ, ಕ್ರೀಮ್ ಗಳನ್ನು, ಪೈಂಟ್ಗಳನ್ನ ಬ್ರಷ್ ನಿಂದ ಹಚ್ಚಿ ಸುಣ್ಣದ ಬಣ್ಣಕ್ಕೆ ತರಿಸಿದ್ದಾರೆ. ತುಟಿಗೆ ರಕ್ತದೋಕುಳಿಯಂತೆ ಲಿಪ್ಸ್ಟಿಕ್ ಅನ್ನು ಹಚ್ಚಿದ್ದಾರೆ. ಕಣ್ಣಿಗೆ ಗಾಢವಾಗಿ ಐ ಶಾಡೋ, ಮಸ್ಕಾರ, ಕಣ್ಣು ಕಪ್ಪು ಹಾಕಿದ್ದಾರೆ. ಎಂದಿನಂತೆ ಕುತ್ತಿಗೆ ಕೈಗಳಿಗೆ ಆಭರಣಗಳನ್ನು ತೊಡೆಸಿದ್ದಾರೆ.


ಎಲ್ಲವೂ ಆದಮೇಲೆ, "ಪರ್ಮಿ ನೋಡಿಕೊ ನಿನ್ನ ಮೇಕಪ್ ಅನ್ನು. ಚಂದವಾಗಿ ಕಾಣುತ್ತಿದ್ದೀ..!" ಎಂದರು ಆಂಟಿ. ಅಷ್ಟು ಹೊತ್ತೂ ಕಣ್ಣು ಮುಚ್ಚಿಕೊಂಡು ಎಲ್ಲವನ್ನು ಆಸ್ವಾದಿಸುತ್ತಾ ಮಾಡಿಸಿಕೊಳ್ಳುತ್ತಿದ್ದ ಪರ್ಮಿಯು ಈಗ ನಿಧಾನವಾಗಿ ಕಣ್ಣನ್ನು ತೆರೆದಳು. ತನ್ನ ಮುಂದೆ ಇದ್ದ ಉದ್ದವಾದ ನಿಲುವುಗನ್ನಡಿಯಲ್ಲಿ ತನ್ನನ್ನು ಹುಡುಕಲು ಪ್ರಾರಂಭಿಸಿದಳು. ಕೊನೆಗೆ ಗೊತ್ತಾಯಿತು, ಇಷ್ಟು ಬೆಳ್ಳಗೆ ಹಂಸದಂತೆ ಹೊಳೆಯುತ್ತಿರುವುದು ತಾನೇ!! ನನ್ನನ್ನೇ ನಾನು ಗುರುತಿಸಿಕೊಳ್ಳದಷ್ಟು ಬದಲಾಯಿಸಿದ್ದಾರಲ್ಲ ಆಂಟಿ...! ಎಂದು ಖುಷಿಪಟ್ಟಳು.


ಗಂಡಿನ ಹತ್ತಿರ ಲಜ್ಜೆಯ ಹೆಜ್ಜೆಗಳನ್ನು ಇಡುತ್ತಾ ತೆರಳಿದಾಗ, ಗಂಡಿಗೂ ಒಂದೆರಡು ಕ್ಷಣ ದಿಗ್ಭ್ರಮೆ...! ತನ್ನ ಹುಡುಗಿ ಎಲ್ಲಿ ಎಂದು? ತಾನು ನೋಡಿ, ಒಪ್ಪಿದ ಹುಡುಗಿಯೇ ಬೇರೆ. ಆದರೆ ವಧುವಿನಂತೆ ಅಲಂಕರಿಸಿಕೊಂಡು ಬಂದಿರುವ ಹೆಣ್ಣೇ ಬೇರೆ! ಇಲ್ಲೇನಾದರೂ ಗೋಲ್ಮಾಲ್ ನಡೆಯುತ್ತಿದೆಯೇ? ಎಂದು ಯೋಚಿಸಿದನು.


ಕೊನೆಗೆ ಎಡಗೆನ್ನೆಯ ಮೇಲೆ ಇದ್ದ ಚಿಕ್ಕ ಮಚ್ಚೆಯನ್ನು ನೋಡಿ, ಇಲ್ಲಿರುವುದು ತನ್ನ ಪರ್ಮಿಯೆ. ಮೇಕಪ್ ಎಂಬ ಮಾಯೆ ಇವಳನ್ನು ಹೀಗೆ ಬದಲಾಯಿಸಿದೆ..! ಎಂದು ಸಮಾಧಾನ ಪಟ್ಟುಕೊಂಡನು. ಮದುವೆಯು ಸುಸೂತ್ರವಾಗಿ ನಡೆದು, ಆಂಟಿಯು ಪರ್ಮಿಯ ಬ್ರೈಡಲ್ ಮೇಕಪ್ ಗೆ ಹದಿನೈದು ಸಾವಿರ ರೂಪಾಯಿಗಳನ್ನು ಚಾರ್ಜ್ ಮಾಡಿದರು...!!


ಪ್ರಸ್ತುತ ಪರ್ಮಿಗೆ ಇಬ್ಬರು ಮಕ್ಕಳಿದ್ದಾರೆ. ಪಾರ್ಲರ್ ಗೆ ಹೋಗುವುದು ಎರಡು ತಿಂಗಳಿಗೊಮ್ಮೆ ಅಷ್ಟೇ. "ಮಕ್ಕಳಿಂದ ನಮ್ಮ ಕೆಲಸಗಳಿಗೆ ಸಮಯವೇ ಸಿಕ್ಕುವುದಿಲ್ಲ!" ಎಂದು ಹೇಳುತ್ತಾಳೆ. ನಾನು ಹೇಳಿದ ಮಾತುಗಳು ನಿಜವೆಂದು ಈಗ ಅವಳಿಗೆ ಅನಿಸಿದೆ. "ಅತಿಯಾದರೆ ಅಮೃತವೂ ವಿಷ. ನಾನು ಪಾರ್ಲರ್, ಮೇಕಪ್ ಎಂದು ತುಂಬಾ ತಲೆಕೆಡಿಸಿಕೊಂಡೆ. ಹಾಗಾಗಿಯೇ ನನ್ನ ಮದುವೆ ಫೋಟೋಗಳಲ್ಲಿ ನಾನು ಬಿಳಿ ಭೂತದಂತೆ ಕಾಣುತ್ತೇನೆ..!!" ಎಂದು ಸಿಕ್ಕಾಗ ಹೇಳುತ್ತಿರುತ್ತಾಳೆ.


"ಈಗಲಾದರೂ ಜ್ಞಾನೋದಯವಾಯಿತಲ್ಲ. ಅಷ್ಟು ಸಾಕು. ಪಾರ್ಲರ್ ಗೆ ಭೇಟಿ ಅತಿಯಾಗದೆ, ಹಿತಮಿತವಾಗಿರಬೇಕು ಕಣೇ...!" ಎಂದು ಮಾತು ಮುಗಿಸಿದೆ.




Rate this content
Log in

Similar kannada story from Abstract