ಕಾಡಿದ ಕಂಗಳು
ಕಾಡಿದ ಕಂಗಳು


ಕಣ್ಣು ಕಣ್ಣು ಕಲೆತಾಗ ಮನವು
ಉಯ್ಯಾಲೆಯಾಗಿದೆ ತೂಗಿ----------
ಕಣ್ಣಲ್ಲೀ ಜ್ಯೋತಿ ತಂದೋನು ನೀನೆ-------
ಕಣ್ಣಿನ ನೋಟಗಳು
ಕೋಲ್ಮಿಂಚಿನ ಬಾಣಗಳು------------
ಕಣ್ ಕಣ್ಣ ಸಲಿಗೆ.....
ಸಲಿಗೆ ಅಲ್ಲ ಸುಲಿಗೆ-------
ಬ್ಯಾಕ್ ಟು ಬ್ಯಾಕ್..... 98.3 ಬಿಗ್ ಎಫ್ ಎಂ ನಲ್ಲಿ ಹಾಡುಗಳನ್ನು ಕೇಳುತ್ತಾ, ನಾನು ಆ ದಿನ ಮೈಸೂರಿಗೆ ಹೊರಟಿದ್ದೆ.
ಸಾಮಾನ್ಯವಾಗಿ ಏಕಾಂಗಿ ಪಯಣ ಬಯಸದ ನಾನು ಅನಿವಾರ್ಯವಾಗಿ ಕಾರಿನಲ್ಲಿ ಒಂಟಿಯಾಗಿ ಹೋಗಬೇಕಾಯಿತು. ಮನಮೆಚ್ಚಿದ ಹಾಗೂ ಕಣ್ಣುಗಳ ಬಗೆಗಿನ ಹಾಡುಗಳ ಜೊತೆ ಸ್ವತಂತ್ರವಾಗಿ, ನಾನೂ ಪೈಪೋಟಿಗೆ ಬಿದ್ದಂತೆ ಹಾಡುತ್ತಾ ಸಾಗುತ್ತಿದ್ದಾಗ; ನನಗಾಗಿ ರಸ್ತೆಯಲ್ಲಿ ಕಾದಿದ್ದ ಉದ್ದನೆಯ ಚೂಪಾದ ಮೊಳೆಯೊಂದು ನನ್ನ ಕಾರಿನ ಟೈಯರ್ ಗೆ ಚುಚ್ಚಿ ನನ್ನ ಪ್ರಯಾಣದ ಉಲ್ಲಾಸದ ಬುಗ್ಗೆಯ ಗಾಳಿಯನ್ನೆಲ್ಲಾ ಹೊರ ತೆಗೆದಿತ್ತು. ವಾಹನ ಸಂಚಾರ ದಟ್ಟಣೆಯ ರಸ್ತೆಯಾದರೂ, ಅವರವರ ಪಾಡಿನಲ್ಲಿ ಸಾಗುತ್ತಿದ್ದ ಯಾರಿಗೂ ನನಗೆ ಸಹಾಯ ಮಾಡುವ ಮನಸ್ಸು ಆಗಲಿಲ್ಲ. ಸಹಾಯಕ್ಕಾಗಿ ಬೇಡಿ ಬೇಡಿ ಸುಸ್ತಾಗಿ ಕೊನೆಗೆ ನನಗೆ ಬರುವಂತಹ ವಿದ್ಯೆಯಿಂದ ನಾನೇ ಟಯರನ್ನು ಬದಲಾಯಿಸಿದ್ದೆ. ತೀವ್ರ ಆಯಾಸವಾದಾಗ ನನಗೆ ನೆನಪಾಗಿತ್ತು, ನಾನು ಆ ದಿನ ಒಂದು ಬಾಟಲಿಯ ನೀರನ್ನೂ ಸಹ ಜೊತೆಗೆ ಒಯ್ದಿರಲಿಲ್ಲವೆಂದು! ಸುತ್ತಲೂ ನೋಡಿದಾಗ ಅದು ನಿರ್ಜನ ಪ್ರದೇಶವಾಗಿತ್ತು. ನನ್ನ ಗಮನ ವಾಹನಗಳಲ್ಲಿ ಸಾಗುತ್ತಿದ್ದವರ ಬಗ್ಗೆ ಮಾತ್ರವಿತ್ತು. ನಿಂತಲ್ಲಿಂದ ಮುಂದೆ ನೋಡುತ್ತಾ, ಕಾರಿನ ದರ್ಪಣದ ಮೂಲಕ ಹಿಂದೆ ಬರುತ್ತಿದ್ದ ವಾಹನಗಳನ್ನು ಗಮನಿಸುತ್ತಿದ್ದಾಗ, ನನ್ನ ಬೆನ್ನ ಹಿಂದೆ ಒಂದು ನೋಟ ಎವೆಯಿಕ್ಕದೆ ನನ್ನನ್ನೇ ಚುಚ್ಚುವಂತೆ ನೋಡುತ್ತಿರುವುದನ್ನು ಕನ್ನಡಿಯಲ್ಲಿ ಕಂಡು ನಿಬ್ಬೆರಗಾದೆ.
ಒಮ್ಮೆಲೆ ಹಿಂತಿರುಗಿ ನೋಡಿದೆ. ಅಬ್ಬಾ! ಎಂತಹ ಸುಂದರ ಕಂಗಳವು. ನೇರ ನೋಟದಲ್ಲಿ ಯಾವುದೋ ಮಾಯೆಯಿರುವಂತೆ ನನಗೆ ಭಾಸವಾಯಿತು. ಅವಳಿನ್ನೂ ಪುಟ್ಟ ಹುಡುಗಿ. ನಾ ಕಂಡ ಪಟ್ಟಣದ ಹುಡುಗಿಯರಂತಲ್ಲದೆ ಸೀದಾಸಾದಾ ಲಂಗ ಕುಪ್ಪಸದಲ್ಲಿ ತನ್ನ ಮೈ ಮುಚ್ಚಿಕೊಂಡಿದ್ದಳು. ಕೈಯಲ್ಲೊಂದು ಕೋಲು! ಯಾವುದೋ ದನಗಳನ್ನು ಕಾಯುತ್ತಾ ಅಲ್ಲಿ ಬಂದಿದ್ದಾಳೆಂಬ ಅರಿವು ಮೂಡಿಸಿತು. ಮುಗ್ಧತೆಯೇ ರೂಪವೆತ್ತಿದಂತೆ ನಿಂತಿದ್ದಳು. ಹೆಗಲಿಗೆ ಹಾಕಿಕೊಂಡಿದ್ದ ನೀರಿನ ಬಾಟಲನ್ನು ನಾನು ಕೇಳುವ ಮೊದಲೇ, ತಾನೇ ಅರಿತವಳಂತೆ ನನ್ನ ಮುಂದೆ ಹಿಡಿದಳು. ಬೇಡ -ಪರವಾಗಿಲ್ಲ ಎಂಬ ಸೌಜನ್ಯದ ಮಾತುಗಳು ನನ್ನ ಬಾಯಿಂದ ಬರಲಿಲ್ಲವಾದರೂ; ಅಂತಹ ಮಾತುಗಳಿಗೆ ಅವಳೂ ಅವಕಾಶಕೊಡದೆ ಆತ್ಮೀಯ ನೋಟ ಬೀರಿದಳು. ಅವಳಿಂದ ನೀರು ಪಡೆದು ಕುಡಿದು ಧನ್ಯವಾದ ಹೇಳುವ ಮೊದಲೇ ಕಣ್ರೆಪ್ಪೆ ಕದಲಿಸುತ್ತಾ ಪರವಾಗಿಲ್ಲ! ಎಂದು ಸೂಚಿಸಿದ್ದಳು. ಬಾಯಿಂದ ಮಾತುಗಳು ಹೊರಡಿಲ್ಲವಾದರೂ, ಎಲ್ಲವೂ ಕಣ್ಣಿನ ನೋಟವೇ ಸರಾಗವಾಗಿ ಮಾಡುತ್ತಿತ್ತು.
ನಿನ್ನ ಹೆಸರೇನು?
ಪುಟ್ಟಕ್ಕ...
ಯಾವೂರು? ಇಲ್ಲಿ ಏನು ಮಾಡುತ್ತಿದ್ದೀಯಾ?
ಇಲ್ಲೇ ಶಿವಳ್ಳಿ....... ಎಂದು ಹೇಳಿ, ಮೇಕೆಗಳ ಹಿಂಡನ್ನು ತೋರಿದಳು.
ಅರೇ ಇಷ್ಟೊಂದು ಮೇಕೆಗಳನ್ನು ಒಬ್ಬಳೇ ಹೇಗೆ ನೋಡಿಕೊಳ್ಳುತ್ತೀಯ? ಎಂದಾಗ, ಕಣ್ಣಲ್ಲೇ ನಕ್ಕಿದ್ದಳು.
ನಿನ್ನ ವಯಸ್ಸೆಷ್ಟು? ಶಾಲೆಗೆ ಹೋಗುವುದಿಲ್ಲವೇ? ಎಂದೆಲ್ಲಾ ಪ್ರಶ್ನೆಗಳ ಸುರಿಮಳೆಗೈದೆ.
ಉತ್ತರಗಳು ಬಾಯಿಂದ ಪಟಪಟನೆ ಉದುರುತ್ತಿದ್ದರೂ, ಮಾತಿನ ತಾಳಕ್ಕೆ ಕಣ್ಣಲ್ಲಿ ಭಾವನೆಗಳು ಶೃತಿ ಕೊಡುತ್ತಿದ್ದವು. ಅವಳ ಮಾತುಗಳಲ್ಲಿ ಮನೆಯ ಬಡತನ ಮತ್ತು ತನ್ನ ಜಾಣತನ ಎರಡೂ ಅರಿವಾಯಿತು.
ನಾನು ನನ್ನ ಕೆಲಸ ಮರೆತು ಅವಳ ಕಥೆಯಲ್ಲಿ ಲೀನವಾಗಿ ಅವಳಿಗೆ ಏನಾದರೂ ಸಹಾಯ ಮಾಡುವ ಮನಸ್ಸು ಮಾಡಿದೆ. ಕೇವಲ ಮೊದಲ ನೋಟದಲ್ಲೇ ಹುಡುಗಿ ಆತ್ಮೀಯಳಾಗಿದ್ದಳು. ಸರಿಸುಮಾರು ಅದೇ ವಯಸ್ಸಿನ ನನ್ನ ಮಗಳು ಅದೇ ವೇಳೆ ಬೆಚ್ಚನೆ ಶಾಲೆಯಲ್ಲಿ ಕುಳಿತಿರುವುದೂ ನೆನಪಾಗಿತ್ತು!
ನಾನು ನಿನ್ನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುತ್ತೇನೆ, ನೀನು ಮುಂದೆ ಓದುವೆಯಾ? ಎಂದಾಗ ಸಹಸ್ರ ಮಿಂಚಿನ ಬೆಳಕು ಅವಳ ಕಣ್ಣಲ್ಲಿ ಪ್ರಜ್ವಲಿಸಿತು. ಹಿಂದೆಯೇ ತನ್ನ ವಾಸ್ತವಸ್ಥಿತಿ ನೆನಪಾದವಳಂತೆ ಅವಳ ನೋಟ ಕೆಳಕ್ಕೆ ವಾಲಿತು. ಪಾಪ! ಅವಳಿ
ಗೆ ಓದುವ ಆಸೆ ಇದೆಯಾದರೂ, ಪೂರೈಸಿಕೊಳ್ಳಲಾಗದ ಪರಿಸ್ಥಿತಿ.
ಈ ವೇಳೆಗೆ ಇನ್ನೊಂದು ದೊಡ್ಡ ಮೇಕೆಗಳ ಗುಂಪಿನೊಂದಿಗೆ ಅವಳ ತಾಯಿ ಅಲ್ಲಿಗೆ ಬಂದರು. ಮಗಳ ಮೇಲೆ ಜೋರಾಗಿ ಕಣ್ಬಿಟ್ಟು, ಇಲ್ಲಿ ನಿಂತರೆ ಹೇಗೆ? ನಡೆ ಮುಂದೆ! ಎಂದು ಮೇಕೆಗಳನ್ನು ಗದರುವಂತೆ ಅವಳನ್ನು ಗದರಿದರು.
ಆಕ್ಷಣ ನನಗೆ ಮಾತ್ರವಲ್ಲ, ಪುಟ್ಟಕ್ಕನಿಗೂ ನನ್ನನ್ನು ಬಿಟ್ಟು ಹೋಗಲು ಮನಸ್ಸಾದಂತೆ ಇರಲಿಲ್ಲ. ಸಹಾಯಕ್ಕಾಗಿ ನನ್ನನ್ನು ನೋಡಿದಂತಿತ್ತು ಅವಳ ನೋಟ.
ನಾನು ಕ್ಷಣಮಾತ್ರದಲ್ಲಿ ಅದನ್ನು ಅರಿತು, ಅವಳ ತಾಯಿಯೊಂದಿಗೆ.......
ಅಮ್ಮ ನಮಸ್ಕಾರ.... ನಿಮ್ಮ ಮಗಳು ಪುಟ್ಟಕ್ಕನನ್ನು ನೀವು ಶಾಲೆಗೆ ಕಳಿಸುವುದಿಲ್ಲವೇ? ಹಾಗೇನಾದರೂ ಮುಂದೆ ಓದಿಸುವುದಾದರೆ ನಾನು ಸಹಾಯ ಮಾಡುತ್ತೇನೆ! ಎಂದೆ.
ನನ್ನ ಈ ಮಾತು ಸಾಕಾಯ್ತು, ಆಕೆಯ ಪಿತ್ತ ನೆತ್ತಿಗೇರಲು! ನಡುದಾರಿಯಲ್ಲಿ ಗೊತ್ತಿರದ ಅಪರಿಚಿತ ಹೀಗೆ ತಮ್ಮನ್ನು ನಿಲ್ಲಿಸಿ ಬಾಯಿಗೆ ಬಂದಂತೆ ಮಾತನಾಡುತ್ತಿರುವ ಬಗ್ಗೆ ಆಕೆ ಗುಮಾನಿಯ ನೋಟ ಬೀರಿದಳು. ನಾನು ಮಕ್ಕಳ ಕಳ್ಳನಂತೆ ಆ ಕ್ಷಣ ಆಕೆಗೆ ಕಂಡಿರಬಹುದು!
ಯಾರಯ್ಯ ನೀನು? ನಿನಗ್ಯಾಕೆ ನಮ್ಮ ಉಸಾಬರಿ! ನಿನ್ನ ಕೆಲಸ ನೀನು ನೋಡಿಕೋ...... ಎಂದು ಒರಟಾಗಿ ಹೇಳಿ, ಮಗಳನ್ನು ಮುಂದಕ್ಕೆ ನಡೆಯುವಂತೆ ಸೂಚಿಸಿದಳು.
ಅಯ್ಯೋ ಕ್ಷಮಿಸಿ ಅಮ್ಮ, ನನಗೆ ಯಾವ ಕೆಟ್ಟ ಉದ್ದೇಶ ಇಲ್ಲ. ನಾನು ದಾರಿಯಲ್ಲಿ ಹೋಗುವಾಗ ಕಾರಿನ ಟೈಯರ್ ಪಂಚರ್ ಆಯಿತು. ಸರಿ ಮಾಡಿ ಸುಸ್ತಾದೆ. ನೀರಿಗಾಗಿ ಒದ್ದಾಡುವಾಗ ನಿಮ್ಮ ಮಗಳು ನೀರುಕೊಟ್ಟು ಉಪಕಾರ ಮಾಡಿದಳು. ಹೀಗೆಯೇ ಅವಳ ಬಗ್ಗೆ ವಿಚಾರಿಸಿದಾಗ, ಆಕೆಗೆ ಮುಂದೆ ಕಲಿಯುವ ಆಸೆ ಇರುವುದು ಗೊತ್ತಾಗಿ, ನನ್ನ ಕೈಲಾದ ಸಹಾಯ ಮಾಡೋಣವೆಂದು ಕೇಳಿದೆ ಅಷ್ಟೇ! ಎಂದು ಹೇಳಿದೆ.
ಅದಕ್ಕೆ ಆಕೆ ವ್ಯಂಗ್ಯವಾಗಿ ನಕ್ಕು, ಆಯ್ತು ಬಿಡು! ನಾಳೆಯಿಂದ ಇವಳು ಕಲಿಯಕ್ಕೆ ಹೋಗಲಿ ಮೇಕೆಗಳನ್ನು ಕಾಯಲು ನೀನು ಬಾ......!ಎಂದಳು.
ಇನ್ನೂ ಅದೇ ವಿಷಯ ಮುಂದುವರಿಸಿದರೆ ಕೆಲಸ ಕೆಡುವುದೆಂದು ಮೌನವಾದೆ. ಮುಂದೆ ಸಾಗುತ್ತಿದ್ದ ಅವರನ್ನು ಹಿಂಬಾಲಿಸುವುದನ್ನು ಬಿಟ್ಟು ಅಲ್ಲೇ ನಿಂತೆ.
ಎರಡು ಹೆಜ್ಜೆ ಮುಂದೆ ಸಾಗಿದ ಪುಟ್ಟಕ್ಕ ಹಿಂತಿರುಗಿ ನನ್ನನ್ನು ಅಸಹಾಯಕತೆಯಿಂದ ನೋಡಿದಳು. ತಕ್ಷಣ ಜೇಬಿಗೆ ಕೈ ಹಾಕಿ ಕೈಗೆ ಸಿಕ್ಕ ಒಂದಷ್ಟು ದುಡ್ಡನ್ನು ತೆಗೆದು ಮುಂದೆ ಹೆಜ್ಜೆಯಿಟ್ಟು ಅವಳ ಕೈಗೆ ಕೊಡಲು ಹೋದೆ. ತಕ್ಷಣವೇ ಬೆಂಕಿ ಮೆಟ್ಟಿದವಳಂತೆ ತನ್ನ ಕೈಗಳನ್ನು ಹಿಂದಕ್ಕೆ ಹಿಡಿದಳು. ಬೇಡವೆಂದು ತಲೆ ಅಲ್ಲಾಡಿಸಿದಳು. ಆದರೂ ಬಲವಂತ ಮಾಡಿ ಅವಳ ಕೈಗೆ ಹಣ ತುರುಕಿದೆ. ಸ್ವಲ್ಪದೂರ ಮುಂದೆ ಸಾಗುತ್ತಿದ್ದ ಅವಳ ತಾಯಿ ಹಿಂತಿರುಗಿ ನೋಡಿ, ಏನ್ ಸ್ವಾಮಿ ನಿಮ್ಮ ಕಥೆ? ನಮ್ಮ ಪಾಡಿಗೆ ನಮ್ಮನ್ನು ಬಿಡುತ್ತೀರೋ ಇಲ್ಲಾ ಊರವರನ್ನು ಕರೆಯಲೋ...... ? ಎಂದು ಜೋರಾಗಿ ಅರಚುತ್ತಾ ಬಂದು ಪುಟ್ಟಕ್ಕನನ್ನು ಎಳೆದುಕೊಂಡು ಹೊರಟಳು. ಆಕರ್ಷಕವಾಗಿದ್ದ ಪುಟ್ಟ ಕಣ್ಣುಗಳಲ್ಲಿ ಕಣ್ಣೀರ ಹನಿಗಳು ಉದುರಿದವು. ತಾಯಿ ಎಳೆದೊಯ್ದಂತೆ ಪುಟ್ಟಕ್ಕ ಒಂದಷ್ಟು ದೂರ ಓಡಿದಂತೆ ನಡೆಯತೊಡಗಿದಳು. ಸುಮಾರು ನೂರು ಮೀಟರ್ ದೂರ ಸಾಗಿರಬಹುದು! ನಾನಿನ್ನೂ ನೋಡಿ ಪ್ರಯೋಜನವಿಲ್ಲವೆಂದು ಹಿಂತಿರುಗುವವನಿದ್ದೆ. ಅಷ್ಟರಲ್ಲಿ ಪುಟ್ಟಕ್ಕ ತನ್ನ ತಾಯಿಯನ್ನು ಬಿಡಿಸಿಕೊಂಡು ಏದುಸಿರು ಬಿಡುತ್ತಾ ನನ್ನ ಬಳಿ ಓಡಿ ಬರುತ್ತಿದ್ದಳು. ನನಗೆ ಆಶ್ಚರ್ಯವಾಯಿತು. ನನ್ನ ಮುಂದೆ ಬಂದು ನಾನು ಕೊಟ್ಟಿದ್ದ ಹಣವನ್ನು ನನ್ನ ಕೈಗೆ ಹಿಂತಿರುಗಿಸಿ,
ನನಗೆ ಭಿಕ್ಷೆಯ ಹಣ ಬೇಡ. ಬೇಕಾದರೆ ನನ್ನ ಓದಿಗೆ ಸಹಾಯ ಮಾಡಿ. ಆಗ ನಾನೇ ಎರಡು ಮೇಕೆಗಳನ್ನು ನಿಮಗೆ ಕೊಡುತ್ತೇನೆ. ಇದೇ ಊರಲ್ಲಿ ಇರುತ್ತೇನೆ, ನಮ್ಮ ಅಪ್ಪನಿಗೆ ಹೇಳಿ ನನ್ನನ್ನು ಶಾಲೆಗೆ ಕಳಿಸಿ....! ಎಂದು ಆಸೆ ಕಣ್ಣುಗಳಿಂದ ಹೇಳಿ, ಪುನಃ ತಾಯಿಯ ಕಡೆಗೆ ಓಡತೊಡಗಿದಳು.
ಸ್ವಲ್ಪ ದೂರ ಓಡಿ ಮತ್ತೊಮ್ಮೆ ಹಿಂತಿರುಗಿ ನೋಡಿದಳು. ಆ ನೋಟದಲ್ಲಿ ಏನಿತ್ತೆಂಬುದು ಮೊನಾಲಿಸಾ ಚಿತ್ರದ ಮಾರ್ಮಿಕ ಭಾವನೆಯಂತೆ ಇಂದಿಗೂ ನನಗೆ ನಿಖರವಾಗಿ ನಿರ್ಣಯಿಸಲು ಆಗುತ್ತಿಲ್ಲ! ಆದರೂ ಅದು ಮುಗ್ದತೆ ಎಂದು ಮಾತ್ರ ಗುರುತಿಸಬಲ್ಲೆ! ಮರೆಯಲಾಗದ ನೋಟ ಬೀರಿದ ಹುಡುಗಿಯ ನೆನಪು ಮತ್ತೆ ಆ ದಾರಿಯಲ್ಲಿ ಸಾಗುವಾಗೆಲ್ಲಾ ನನ್ನನ್ನು ಕಾಡದೆ ಬಿಡದು. ಹಾಗೆ ಸಾಗುವಾಗೆಲ್ಲಾ ನನ್ನ ನೋಟ ಅವಳನ್ನೇ ಹುಡುಕುತ್ತದೆ. ಕಾಡುವ ಕಂಗಳ ಹುಡುಗಿಯ ಆ ಕಾಡಿದ ನೋಟ ಮಾತ್ರ ಪದೇಪದೇ ನನ್ನ ಅಂತರಾಳವನ್ನು ಕಲಕುತ್ತಿರುವುದು ಮಾತ್ರ ವಿಪರ್ಯಾಸವೇ ಸರಿ!
ಆದರೂ ಇಂತಹ ನೂರಾರು ಪುಟ್ಟಕ್ಕರ ಪಾಲಿಗೆ ನಾಗರೀಕ ಸಮಾಜದಲ್ಲಿಯೂ ನಾವು ಅಸಹಾಯಕರು ಎಂಬುದನ್ನು ಒಪ್ಪಿಕೊಳ್ಳುವುದಾದರೂ ಹೇಗೆ