ಅನ್ನದಾತೋ ಸುಖೀಭವ
ಅನ್ನದಾತೋ ಸುಖೀಭವ
"ರೀ ಇವತ್ತು ರಾಮ ಕೆಲಸಕ್ಕೆ ಬರಲ್ವಂತೆ, ಅವನ ಮಗನನ್ನು ಹಾಸ್ಟೆಲಿಗೆ ಓದಕ್ಕೆ ಕಳಿಸಬೇಕು ಅಂತ ಹೇಳ್ತಿದ್ದ. ನಾಳೆ ದನ ಕರುಗಳಿಗೆ ಹುಲ್ಲು ನಾ ತರ್ತೀನಿ ಸೊಪ್ಪು ನೀವೇ ತನ್ನಿ. ಹಾಗೆ ತೋಟದ ಅಡಿಕೆನೂ ನಾವೇ ಇಬ್ಬರು ಹೆಕ್ಕಿ ಆರಿಸಿ ಬಿಡೋಣ. ಮುಂಜಾನೆ ಬೇಗನೆ ಎಲ್ಲ ಕೆಲಸ ಮುಗಿಸಿ ಇಟ್ಕೋತೀನಿ ಕೇಳ್ತಾ" ಎಂದು ಶಾಂತಮ್ಮ ದೇವರ ಮನೆಯಲ್ಲಿ ದೀಪ ಹಚ್ಚಿ ತುಳಸಿಗೆ ದೀಪ ಇಟ್ಟು ಬರುವಾಗ ಹೇಳಿದರು.
ಲೆಕ್ಕದ ಪುಸ್ತಕ ಹಿಡಿದು ಬರೆಯುತ್ತಿದ್ದ ನಾರಾಯಣ ರಾಯರು ಪುಸ್ತಕ ಮಡಿಸಿಟ್ಟು ದೀರ್ಘ ಉಸಿರನ್ನು ತೆಗೆದುಕೊಂಡರು.
"ನಾನು ಚಿಕ್ಕವನಿದ್ದಾಗ ನನ್ನ ಅಪ್ಪನ ಸಹಾಯಕ್ಕೆ ನಿಂತಿದ್ದ ಸೀನ ಅವನ ಮಗನನ್ನು ಓದಲು ಕಳುಹಿಸಿದ. ಓದು ಮುಗಿಸಿ ಬಂದ ಮಗ ಅಪ್ಪನಿಗೆ "ನೀನಿನ್ನು ಕೂಲಿ ಕೆಲಸ ಮಾಡುವುದು ಬೇಡ" ಎಂದು ಸೀನನನ್ನು ಪೇಟೆಗೆ ಕರೆದುಕೊಂಡು ಹೋದ. ನನ್ನ ಅಪ್ಪ ನನಗೆ ಜವಬ್ದಾರಿ ವಹಿಸಿದಾಗ ಈ ರಾಮ ನನಗೆ ಸಾತ್ ನೀಡಿದ. ಇದೀಗ ನನ್ನ ಮಗನನ್ನು ನಾನು ಓದಲು ಹೊರಗೆ ಕಳಿಸುವ ಇಚ್ಛೆ ಇಲ್ಲದಿದ್ದರೂ ಮಗನ ಹಠಕ್ಕೆ ಮಣಿದು ನಿನ್ನ ಮಾತು ಕೇಳಿ ಕಳುಹಿಸಬೇಕಾಯಿತು .ರಾಮ ಅವನಂತೆ ಮಗ ಕಷ್ಟ ಪಡಬಾರದೆಂದು ಅನಿಸಿ ಮಗನನ್ನು ಓದಿ ಒಳ್ಳೆಯ ಕೆಲಸಕ್ಕೆ ಸೇರಿಸುವ ಪ್ರಯತ್ನದಲ್ಲಿ ಇದ್ದಾನೆ .ಶಾಂತ ಬಹುಶಹ ಈ ಜಮೀನು ಈ ವ್ಯವಸಾಯ ಎಲ್ಲಾ ನಮ್ಮೊಂದಿಗೆ ಅಂತ್ಯವೆಂದು ಕಾಣುತ್ತದೆ.ಎಲ್ಲರೂ ಹೀಗೆ ಪೇಟೆಗೆ ಸೇರಿದರೆ ಯಾರು ಬೆಳೆಯುತ್ತಾರೆ? ಏನನ್ನು ಬೆಳೆಯದಿದ್ದರೆ ಮುಂದೆ ಏನನ್ನು ತಿಂದು ಬದುಕುತ್ತಾರೆ?
"ಅಯ್ಯೋ ರೀ, ನಮ್ಮ ಮಕ್ಕಳು ಚೆನ್ನಾಗಿರಬೇಕು ಅನ್ನೋ ಆಸೆ ಎಲ್ಲಾ ತಂದೆ ತಾಯಿಗೂ ಇರ್ತದಪ್ಪ.ಏನ್ ನಮ್ ತೋಟ ಜಮೀನ್ ಇದೆ ಅನ್ಕೊಂಡು ನಮ್ ಮಕ್ಳನ ಓದಕ್ ಕಳ್ಸಿ ಬೇರೆ ಅವ್ರ ಮನೆ ಮಕ್ಕಳನ್ನು ಓದ್ಬೇಡಿ ಅಂತ ಹೇಳೋಕಾಗುತ್ತಾ."?
"ಹಾಗಲ್ಲ ಕಣೆ ಶಾಂತ.. ನಾನು ಏನ್ ಹೇಳ್ತಿದೀನಿ ಅಂತ ನಿನಗೆ ಅರ್ಥ ಆಗಿಲ್ಲ ಅನ್ಸುತ್ತೆ .ನೀನು ಹೇಳೋದು ನಿಜ ಎಲ್ಲರಿಗೂ ಮಕ್ಕಳು ಸುಖವಾಗಿರಬೇಕು ಅನ್ನೋ ಆಸೆ ಇದ್ದೇ ಇರುತ್ತೆ. ಆದ್ರೆ ಎಲ್ಲೇ ಹೋದರೂ ಕಷ್ಟಪಡಲೇಬೇಕು.ಯಾವ ಕೆಲಸ ತಾನೇ ಆರಾಮಾಗಿ ಮಾಡಕ್ ಆಗುತ್ತೆ? ವ್ಯವಸಾಯ ಅನ್ನೋದು ಕಷ್ಟ ಅನಿಸಬಹುದು ಆದರೆ ನನ್ನ ಮಾತು ಕೇಳು ಭೂಮಿ ತಾಯಿನ ನಂಬಿದವರು ಎಂದಿಗೂ ಹಾಳಾಗುವುದಿಲ್ಲ. ಭೂಮಿತಾಯಿ ಎಂದಿಗೂ ನಂಬಿದವರ ಕೈ ಬಿಡಲಾರಳು."
"ರೀ ಹೀಗೆ ಹೇಳ್ತಿನಿ ಅಂತ ತಪ್ಪು ತಿಳ್ಕೋಬೇಡಿ. ನಾವು ಕಷ್ಟಪಟ್ಟು ಬೆಳಿತೀವಿ. ಬೆಳೆದ ಅಡಿಕೆ, ಅಕ್ಕಿ ಪ್ರತಿಯೊಂದ್ದನೂ ಅಷ್ಟು ಜೋಪಾನ ಮಾಡಿ ಹಗಲು ರಾತ್ರಿ ಕಾದು ಅಂಗಡಿಗೆ ಹಾಕ್ತಿವಿ. ನಮಗೆ ಸಿಗೋ ಬೆಲೆ ನಾವು ಪಟ್ಟ ಶ್ರಮಕ್ಕೆ ತಕ್ಕದಾಗಿರುತ್ತಾ?ಕೊಂಡೊಯ್ಯುವ ದಲ್ಲಾಳಿಗಳಿಗೆ ಸಿಗುವಷ್ಟು ಹಣ ಅವರು ಮಾಡಿಕೊಳ್ಳುವಷ್ಟು ಲಾಭ ಬೆಳೆಯುವ ನಮಗೆ ಸಿಗದಾಗಿದೆ. ಈ ಕಷ್ಟದಲ್ಲಿ ಯಾಕೆ ಬೆಳಿಬೇಕು ನಮ್ಮ ಮಕ್ಕಳು ಹೇಗೋ ಬದುಕೋತಾರೆ. ಬೇರೆ ಏನಾದರೂ ಉದ್ಯೋಗ ಮಾಡ್ಲಿ ಬಿಡಿ."
"ಅಲ್ವೇ ಶಾಂತ ಬರಿ ದುಡ್ಡಿದ್ರೆ ಸಾಕಾ ?ತಿನ್ನೋಕೆ ಏನು ಬೇಡ್ವಾ, ಜೀವನ ನಡೆಸೋಕೆ ಹಣ ಬೇಕು ನಿಜ. ಆದರೆ ಆ ಬದುಕನ್ನು ಜೀವಿಸೋಕೆ ಹೊಟ್ಟೆಗೆ ಏನಾದರೂ ತಿನ್ನಬೇಕು ಅಲ್ವಾ?ಏನನ್ನು ಬೆಳೆಯದೇನೆ ಹೋದರೆ ಮಕ್ಕಳು ಹಣ ಸಂಪಾದಿಸಿದರು ಏನನ್ನು ತಿಂದು ಬದುಕುತ್ತಾರೆ?"
"ಅಯ್ಯೋ ನಿಮ್ದು ಒಳ್ಳೆ ಕತೆ. ಅದೇನು ಅಂತ ಮಾತಾಡ್ತೀರಾ? ಏನು ಈಗ ನಮ್ ಜಮೀನಿನಲ್ಲಿ ಬೆಳಿದೆ ಇದ್ದ ಮಾತ್ರಕ್ಕೆ ಏನು ತಿನ್ನಕ್ ಸಿಕ್ಕಲ್ವ? ನಾವು ಬೆಳೆದಿದ್ದರೆ ಏನಂತೆ ಬೇರೆ ಯಾರಾದರೂ ಬೆಳೆಯುತ್ತಾರೆ. ಅದನ್ನೇ ದುಡ್ಡು ಕೊಟ್ಟು ತಗೊಂಡು ಬಂದು ತಿಂದ್ರೆ ಆಯ್ತಪ್ಪ."
"ಲೇ ಶಾಂತು ನಿನ್ ತರಾನೇ ಎಲ್ಲರೂ ಯೋಚನೆ ಮಾಡಿದರೆ ಎಲ್ಲೇ ಬೆಳೆಯೋಕೆ ಆಗುತ್ತೆ ?ನಿನ್ನ ತರಾನೇ ಮಕ್ಕಳು ಹಠ ಮಾಡುತ್ತಿದ್ದಾರೆ ಅಂತ ಎಲ್ಲಾ ತಾಯಂದ್ರು ಕಣ್ಣೀರಾಕಿ ಗೋಗರ್ದು ಗಂಡನನ್ನ ಹೆದ್ರುಸಿ ಮಕ್ಕಳನ್ನ ಓದಕ್ಕೆ ಕಳಿಸಿದರೆ ಗಂಡನಾದವನು ವ್ಯವಸಾಯನ ಕೈ ಬಿಟ್ಟು ಭೂಮಿ ಮಾರಿ ಪಟ್ಟಣ ಸೇರಬೇಕಾಗುತ್ತೆ. ಎಲ್ಲರೂ ಬೆಳೆಯೋದನ್ನ ಬಿಟ್ರೆ ಏನನ್ನ ತಿನ್ನೋದು ಅನ್ನೋದರ ಬಗ್ಗೆ ಸ್ವಲ್ಪ ಯೋಚಿಸು".
"ಅಯ್ಯೋ ಬಿಡಿ ಹಾಗೆಲ್ಲ ಆಗಲ್ಲ. ಎಲ್ಲಾ ಅವರ ಅದೃಷ್ಟ. ಆ ದೇವರು ಏನು ಬರೆದಿರುತ್ತಾನೋ ಅದನ್ನೇ ಅನುಭವಿಸೋದು ಅಷ್ಟೇ, ನಾವಂತೂ ಕಷ್ಟಪಟ್ಟು ಬೆಳೆದಾಗಿದೆ. ಇನ್ನು ನಮ್ಮ ಕೈಯಲ್ಲಿ ಆಗಲ್ಲ. ಮಕ್ಕಳು ಮುಂದುವರಿಸಿಕೊಂಡು ಹೋಗಲ್ಲ ಅಂತ ಅವರನ್ನ ಬಲವಂತ ಮಾಡೋ ಅಧಿಕಾರ ನಮಗೆ ಇಲ್ಲ. ಅವರವರ ಇಚ್ಛೆಯಂತೆ ಅವರವರ ಬದುಕು ನಡಿಲಿ ನಮಗೆ ಆದಷ್ಟು ದಿವಸ ನಾವು ಮಾಡೋದು ಅಷ್ಟೇ. ನನಗೆ ಭಜನೆ ಮಾಡಬೇಕು ನೀವು ಒಮ್ಮೆ ಕೊಟ್ಟಿಗೆ ಹೋಗಿ ಭದ್ರವಾಗಿ ಬಾಗಿಲ ಹಾಕಿ ಬನ್ನಿ" ಎನ್ನುತ್ತಾ ದೇವರ ಮನೆಗೆ ನಡೆದರು.
"ರಾಗಿ ತಂದಿರಾ ಭಿಕ್ಷಕೆ ರಾಗಿ ತಂದೀರಾ ಯೋಗ್ಯ ರಾಗಿ, ಭಾಗ್ಯವಂತರಾಗಿ ನೀವು"ಎಂದು ಸುಶ್ರಾವ್ಯವಾಗಿ ಹಾಡುತ್ತಿದ್ದ ಮಡದಿಯ ಹಾಡನ್ನು ಕೇಳಿದ ನಾರಾಯರಾಯರಿಗೆ ಮನಸ್ಸಿನ ವೇದನೆಯನ್ನು ಸಹಿಸಲಾಗದೆ "ಇನ್ನೆಲ್ಲಿಂದ ರಾಗಿ ಇನ್ನೆಲ್ಲಿಂದ ಅಕ್ಕಿ ಇನ್ನೆಲ್ಲ ಮರದ ಸೊಪ್ಪನ್ನು ತಗೆದು ತಿನ್ನಬೇಕಷ್ಟೇ" ಎಂದು ಗೊಣಗುತ್ತಾ ಕೊಟ್ಟಿಗೆಯ ಕಡೆ ಹೊರಟರು.
ಭಜನೆ ಮುಗಿಸಿ ರಾತ್ರಿ ಊಟಕ್ಕೆ ತಯಾರಿ ನಡೆಸಿ ಊಟ ಮುಗಿಸಿ ಮಲಗುವ ವೇಳೆಗೆ ಮಗನ ಕರೆ ಬಂತು. ನಿತ್ಯ ಒಂದು ಬಾರಿ ಲೋಕೇಶ ,ಅಪ್ಪ ಅಮ್ಮನಿಗೆ ಕರೆ ಮಾಡುತ್ತಿದ್ದ. ರಾತ್ರಿ 9ರ ವೇಳೆಗೆ ಅಪ್ಪ ಅಮ್ಮ ಇಬ್ಬರೊಂದಿಗೆ ಮಾತನಾಡಿ ತನ್ನ ದಿನಚರಿಯನ್ನು ತಿಳಿಸಿ ಫೋನ್ ಇಡುತ್ತಿದ್ದ. ಎಂದಿನಂತೆ ಮಗ ಸೊಸೆ ಮೊಮ್ಮಕ್ಕಳ ಯೋಗ ಕ್ಷೇಮವನ್ನು ವಿಚಾರಿಸಿ ತಮ್ಮ ದಿನಚರಿಯನ್ನು ತಿಳಿಸಿ ಲೋಕ ರೂಢಿಯನ್ನು ಒಂದಿಷ್ಟು ಮಾತನಾಡಿ ಮಲಗಲು ಸಿದ್ದರಾದರು.
ರಂಗನಾಯಕ ರಾಜೀವಲೋಚನ ರಮಣನೆ ಬೆಳಗಾಯಿತೇಳನ್ನುತ ಎಂಬ ಮಡದಿಯ ಉದಯ ರಾಗವನ್ನು ಕೇಳಿದೊಡನೆ ನಾರಾಯಣರಾಯರು ಹಾಸಿಗೆ ಇಂದ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ ದೇವರ ಪೂಜೆಗೆ ಸಿದ್ದತೆ ಮಾಡಿಟ್ಟ ಮಡದಿಯನ್ನು ಹೆಮ್ಮೆಯಿಂದ ಮನಸಾರೆ ಮೆಚ್ಚಿ ಪೂಜೆ ಮಾಡಿ ಮಡದಿ ಮಾಡಿಟ್ಟ ಅಕ್ಕ
ಿ ಮುದ್ದೆಯನ್ನು ತಿಂದು ತೋಟದ ಕಡೆ ನಡೆದರು. ಶಾಂತಮ್ಮ ತಮ್ಮ ಅಡಿಗೆಯ ಕೆಲಸವನ್ನೆಲ್ಲ ಬೇಗ ಮುಗಿಸಿ ತೋಟದ ಕಡೆಗೆ ಗಂಡನನ್ನು ಹಿಂಬಾಲಿಸಿದರು. ಮಧ್ಯಾಹ್ನದ ವೇಳೆಗೆ ಒಂದಿಷ್ಟು ಹುಲ್ಲು ಒಂದಿಷ್ಟು ಸೊಪ್ಪು ಕೊಟ್ಟಿಗೆಗೆ ತಂದು ಹಾಕಿ ಮಾಡಿದ ಅಡುಗೆಯನ್ನು ಊಟ ಮಾಡಿ ಕೊಂಚ ವಿಶ್ರಾಂತಿ ಪಡೆದು ಮತ್ತೆ ತೋಟದ ಕಡೆ ನಡೆದರು..
ಅಪ್ಪನ ಕಾಲದಲ್ಲಿ ಹಚ್ಚ ಹಸಿರಾಗಿ ನಲಿಯುತ್ತಿದ್ದ ಗದ್ದೆ ಇಂದು ಉಳುಮೆ ಮಾಡಲಗಾದೆ ಬರಿದಾಗಿದ್ದನ್ನು ಕಂಡು ರಾಯರ ಮನಸಿಗೆ ಬಹಳ ನೋವಾಯಿತು.ಗದ್ದೆ ಕೆಲಸ ಮಾಡಲು ಯಾರು ಸಿಗಲಾರರು ಎಂದು ಮಗನ ಮಾತನ್ನು ಕೇಳಿ ಗದ್ದೆ ಉಳುಮೆಯನ್ನು ನಿಲ್ಲಿಸಿ ತೋಟ ಮಾಡಿಯಾಗಿತ್ತು. ತೋಟದ ಕೆಲಸಕ್ಕೂ ಯಾರು ಜನ ಸಿಗುತ್ತಿಲ್ಲ ಎಂದು ಮಗ ಜಾಗವನ್ನು ಮಾರಲು ಮುಂದಾಗಿದ್ದಾನೆ ಎಂದು ತಿಳಿದಾಗ ಇಲ್ಲಿ ನಾವಿರುವಷ್ಟು ದಿವಸ ನಮ್ಮನು ಇರಲು ಬಿಡು ನಂತರ ನಿನ್ನಿಷ್ಟ ಎಂದು ಆಜ್ಞೆ ಹೊರಡಿಸಿದ್ದರು. ಮಗನಿಗೂ ಕೂಡ ಅಪ್ಪನ ಮಾತನ್ನು ಧಿಕ್ಕರಿಸುವ ಧೈರ್ಯವಿಲ್ಲದ ಕಾರಣ ತೋಟವನ್ನು ಮಾರುವ ವಿಚಾರವನ್ನು ಕೈ ಬಿಟ್ಟಿದ್ದ. ಒಣಗಿದ್ದ ಗದ್ದೆಗಳನ್ನು ನೋಡಿ ರಾಯರ ಮನಸ್ಸಿನಲ್ಲಿ ಆಸೆಯೊಂದು ಮೂಡಿತು.
"ಶಾಂತ ನಾನು ಬದುಕಿರುವಾಗಲೇ ಈ ಒಣಗಿರುವ ಗದ್ದೆ ಹಸಿರಾಗಿ ನಲಿಯುವುದನ್ನು ನೋಡಬೇಕು ಎಂಬ ಆಸೆ ಇದೆ. ಇಷ್ಟು ವರ್ಷ ಸಲಹಿದ ನನ್ನ ಈ ತಾಯಿಯ ಮಡಿಲು ಬರಿದಾಗಿದೆ. ನಾನು ಕಣ್ಮುಚ್ಚುವುದರೊಳಗೆ ಈ ತಾಯಿ ಮಡಿಲು ತುಂಬಬೇಕು ಎಂಬುದು ನನ್ನ ಕಡೆ ಆಸೆ"ಎಂದು ಮಡದಿಯನ್ನು ಕರೆದು ಕುಸಿದು ಕುಳಿತ ಒಣಗಿದ್ದ ಗದ್ದೆ ಮೇಲೆ ಕೈ ಆಡಿಸುತ್ತಾ ಕಣ್ಣೀರು ಸುರಿಸುತ್ತಾ "ತುಂಬಲಿ ತಾಯಿಯ ಮಡಿಲು " ಎಂದು ಬಿಕ್ಕಳಿಸಿ ಅತ್ತರು.
ಪತಿಯ ಈ ರೀತಿಯ ವರ್ತನೆಯನ್ನು ಶಾಂತಮ್ಮ ಊಹಿಸಿರಲಿಲ್ಲ. ಭೂಮಿ ತಾಯಿಯ ಮೇಲಿನ ಪ್ರೀತಿ ಗೌರವಕ್ಕೆ ಏನು ಮಾತನಾಡಬೇಕೆಂದು ತೋಚದೆ ಮೆಲ್ಲನೆ ಹೆಗಲ ಮೇಲೆ ಕೈ ಇಟ್ಟು ಹಿಡಿದು ಎಬ್ಬಿಸಿ ಮನೆಗೆ ಕರೆದೊಯ್ದರು.ಎಂದಿನಂತೆ ಲೆಕ್ಕ ಪುಸ್ತಕದಲ್ಲಿ ಒಂದಿಷ್ಟು ಬರೆದು ಪುಸ್ತಕ ಮುಚ್ಚಿದವರು ಅದೇ ಚೇರಿಗೊರೆಗೆ ಕಣ್ಣು ಮುಚ್ಚಿ ಕುಳಿತರು.
"ಚಿಂತ್ಯಾಕೆ ಮಾಡುತ್ತಿದ್ದಿ? ಚಿನ್ಮಯನಿದ್ದಾನೆ ನಿನ್ನ ಚಿಂತೆಯ ಬಿಡಿಸೋಗೌರಿ ಕಾಂತನಿದ್ದಾನೆ ಗೌರಿ ಕಾಂತನಿದ್ದಾನೆ" ಎಂದು ಮಡದಿ ಹೇಳುತ್ತಿದ್ದ ಹಾಡಿಗೆ ಕಿವಿಗೊಡುತ್ತಾ " ನನ್ನ ಚಿಂತೆಯ ದೂರ ಮಾಡವ ಸಮಯ ಎಂದು ಬರುವುದು"ಎಂದು ಮನದಲ್ಲಿ ನೆನೆಯುತ್ತಾ ಹಟ್ಟಿ ಕಡೆಗೆ ನಡೆದು ಭದ್ರವಾಗಿ ಬಾಗಿಲುಗಳನ್ನು ಹಾಕಿ ಹೆಂಡತಿ ಭಜನಾ ಮುಗಿಸಿ ಬರುವುದನ್ನು ಕಾದು ಮಗನ ಕರಗಾಗಿ ಕಾಯುತ್ತಾ ಕುಳಿತರು.
ಪ್ರತಿ ದಿನ ಲವಲವಿಕೆಯಿಂದ ಮಾತನಾಡುತ್ತಿದ್ದ ಮಗನ ಸ್ವರ ಇಂದು ಅದೇಕೋ ಮಂಕಾಗಿರುವುದನ್ನು ಗಮನಿಸಿದ ರಾಯರು "ಯಾಕೆ ಮಗ ಸಪ್ಪಗಿದ್ದಿ? ಏನಾಯ್ತು " ಎಂದು ಕೇಳುತ್ತಿದ್ದೊಡನೆ "ಅಪ್ಪ ನನ್ನನ್ನು ಕಂಪನಿಯಿಂದ ತೆಗೆದು ಹಾಕಿದ್ದಾರೆ ಕೈಯಲ್ಲಿದ್ದ ಕೆಲಸ ಈಗಿಲ್ಲ. ಕಳೆದ ವಾರವೇ ಈ ವಿಚಾರವನ್ನು ನಿಮ್ಮ ಬಳಿ ಹೇಳಬೇಕೆಂದುಕೊಂಡೆ. ಆದರೆ ಬೇರೆ ಕಡೆ ಕೆಲಸ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆಯಿಂದ ಹೇಳಿರಲಿಲ್ಲ .ಆದರೆ ಅದಾಗಲೇ ಒಂದು ವಾರ ಕಳೆದರೂ ಬೇರೆಲ್ಲೂ ನನಗೆ ಕೆಲಸ ಸಿಗುವ ಲಕ್ಷಣ ಕಾಣುತ್ತಿಲ್ಲ.ಈ ಪೇಟೆ ಜೀವನದಲ್ಲಿ ಖರ್ಚು ಜಾಸ್ತಿ. ಕೂಡಿಟ್ಟ ಹಣ ಇನ್ನು ಕೆಲವು ದಿನಗಳಲ್ಲಿ ಖಾಲಿ ಆಗುತ್ತದೆ. ಬದುಕಿಗೆ ಏನು ಮಾಡಬೇಕೆಂದು ತೋಚದೆ ಕಂಗಾಲಾಗಿದ್ದೇನೆ ಅಪ್ಪ" ಎಂದವನ ಮಾತಿಗೆ ಚಿಂತಿಸದೆ ನಕ್ಕರು.
"ಮಗ ನಿನ್ನ ಅಪ್ಪ ನಾನಿನ್ನೂ ಬದುಕಿದ್ದೇನೆ. ನಾ ಮಾಡಿಟ್ಟ ಆಸ್ತಿ ನಿನಗಲ್ಲದೆ ಇನ್ಯಾರಿಗೆ ? ನಾನು ಆಸ್ತಿ ಮಾರಲಾರೆ ಎಂದಿದ್ದೆ.ಆದರೆ ನೀನು ಮುಂದುವರಿಸಬಾರದು ಎಂದು ಹೇಳಲಿಲ್ಲವಲ್ಲ. ಆ ಕೆಲಸ ಬಿಟ್ಟು ಇಲ್ಲಿಗೆ ಬಾ. ನಿನ್ನೊಂದಿಗೆ ನಾನಿದ್ದೇನೆ. ಇಬ್ಬರು ಸೇರಿ ವ್ಯವಸಾಯ ಮಾಡೋಣ" ಎಂದ ಅಪ್ಪನ ಮಾತಿಗೆ ಏನು ಹೇಳಬೇಕೆಂದು ತೋಚದೆ
"ಕೊಂಚ ಸಮಯ ಕೊಡಿ ಅಪ್ಪ ತಿಳಿಸುವೆ " ಎನ್ನುತ್ತಾ ಲೋಕೇಶ್ ಫೋನ್ ಇಟ್ಟ.
"ನೋಡಿದ್ಯಾ ಶಾಂತು ನಿನ್ನ ಮಾತು ಕೇಳಿ ನಿನ್ನ ಮಗ ಹೇಳಿದ ಅಂತ ಅವತ್ತೇನಾದ್ರೂ ಈ ತೋಟ ಗದ್ದೆ ಮಾರಿದ್ದಿದ್ರೆ ಇವತ್ತು ಎಲ್ಲರೂ ಬೀದಿಗೆ ಬೀಳ್ಬೇಕಿತ್ತು .ನೋಡೋಣ ನಿನ್ನ ಮಗ ಇನ್ನಾದರೂ ನನ್ನ ಮಾತಿಗೆ ಬೆಲೆ ಕೊಟ್ಟು ಈ ಜಾಗಕ್ಕೆ ವಾಪಸ್ ಬರ್ತಾನ ಅಂತ ನೋಡಬೇಕಿದೆ" ಎಂದು ಹೇಳುಷ್ಟರಲ್ಲಿ ಮತ್ತೆ ಫೋನ್ ರಿಂಗ್ ಆಯ್ತು.
"ಅಪ್ಪ ನಿಮ್ಮ ಮಾತಿನಂತೆ ನಾನು ಊರಿಗೆ ಬರ್ತೀನಿ.ದಯವಿಟ್ಟು ನನ್ನನ್ನು ಕ್ಷಮಿಸಿ.ನಾನು ನಾಳೆನೇ ಹೊರಟು ಬರುವೆ. ವ್ಯವಸಾಯದ ಬಗ್ಗೆ ನಿಮಗಿರುವ ಜ್ಞಾನವನ್ನೆಲ್ಲ ನನಗೆ ಧಾರೆಯೆರೆಯುತ್ತೀರಾ" ಎಂಬ ಮಗನ ಪ್ರಶ್ನೆಗೆ ರಾಯರು ಆನಂದಭಾಷ್ಪರಿಸಿದರು.ನನ್ನ ಭೂಮಿ ತಾಯಿಯ ಮಡಿಲು ಬರೆದಾಗಿದೆ ಎಂದು ತೊಳಲಾಡುತ್ತಿದ್ದೆ. ನನ್ನ ಮಗ ಉಳುಮೆ ಮಾಡಿ ನನ್ನ ಭೂಮಿ ತಾಯಿಯ ಮಡಿಲು ತುಂಬಿಸಲು ಬರುತ್ತಿದ್ದಾನೆ ಎಂದು ತಿಳಿದ ಮೇಲೆ ನನಗೆ ತಿಳಿದಿರುವ ಅಷ್ಟನ್ನು ಖಂಡಿತ ತಿಳಿಸುವೆ.ನಿನ್ನಿಂದಾದರೂ ಬರೆದಾಗಿರುವ ತಾಯಿಯ ಮಡಿಲು ತುಂಬಲಿ" ಎಂದರು.
ಮುಂಜಾನೆ ಮನೆಯಲ್ಲಿ ಹಬ್ಬದ ಸಂಭ್ರಮ ತುಂಬಿತ್ತು. ಮಗ ಸೊಸೆ ಮೊಮ್ಮಕ್ಕಳು ಮನೆಗೆ ಬರುತ್ತಿದ್ದಾರೆಂದು ಶಾಂತಮ್ಮ ಬಗೆ ಬಗೆಯ ತಿಂಡಿ ಅಡುಗೆಗಳನ್ನು ಮಾಡಿದರು.ಮನೆಗೆ ಬಂದ ಮಗ ಸೊಸೆ, ಹಿರಿಯರ ಆಶೀರ್ವಾದವನ್ನು ಪಡೆದು ಅವರೊಂದಿಗೆ ಬಾಳಲು ಮುನ್ನುಡಿ ಬರೆದರು. ಲೋಕೇಶ ಅಪ್ಪನೊಂದಿಗೆ ತೋಟಕ್ಕೆ ತೆರಳಿ ಅಲ್ಲಿನ ಸ್ಥಿತಿಗತಿಗಳನ್ನು ಗಮನಿಸಿ ಬೇಕಾದಂತ ವ್ಯವಸ್ಥೆಗಳನ್ನೆಲ್ಲ ತಿಳಿದು ಆಧುನಿಕ ಸೌಲಭ್ಯಗಳ ಸಹಾಯವನ್ನು ಪಡೆದು ತೋಟ ಗದ್ದೆಯನ್ನು ಅಭಿವೃದ್ಧಿಪಡಿಸಲು ಮುಂದಾದ.
ತುಂಬಲಿ ತಾಯಿಯ ಮಡಿಲು ಎಂದು ಅಳುತ್ತಿದ್ದ ರಾಯರು ತನ್ನ ಕರುಳ ಕುಡಿಯಿಂದ ಭೂತಾಯಿಯ ಮಡಿಲು ತುಂಬಿದೆ. ಹಚ್ಚ ಹಸಿರಿನಿಂದ ತುಂಬಲು ಸಜ್ಜಾಗಿದೆ ಎಂಬ ಸಂತಸ ಕೋಟಿ ಸಿಕ್ಕಷ್ಟು ಸಮಾದಾನವಾಗಿತ್ತು .ರಾತ್ರಿ ಊಟಕ್ಕೆ ಕುಳಿತ ವೇಳೆಗೆ ಮನದಲ್ಲಿ ದೇವರನ್ನು ಸ್ಮರಿಸುತ್ತಾ "ಸರ್ವೇ ಜನ ಸುಖಿನೋ ಭವಂತು ಅನ್ನದಾತೋ ಸುಖೀಭವ " ಎಂದು ಎಲ್ಲಾ ರೈತರನ್ನು ನೆನೆದು ಊಟ ಮಾಡಿದರು.