ನಿನ್ನಿಂದಲೇ
ನಿನ್ನಿಂದಲೇ
"ಪವಿ ಏನಾಯ್ತು? ಏಳಮ್ಮ ಇಲ್ನೋಡು.. ನನ್ನ ನೋಡಿಲ್ಲಿ.. ಕಣ್ಣು ತೆಗಿ" ಎಂಬ ಮಾತುಗಳು ಪವಿತ್ರಾಗೆ ಕೇಳುತ್ತಿದ್ದರೂ ಕಣ್ಣು ಕರೆಯಲಾಗುತ್ತಿರಲಿಲ್ಲ.ರಕ್ತದ ಮಡುವಿನಲ್ಲಿ ನರಳುತ್ತಿದ್ದಳು.
ಅವಳು ತಂದೆಯೊಂದಿಗೆ ಬೈಕಿನಲ್ಲಿ ಹೋಗುವಾಗ ಎದುರಿನಿಂದ ಬಂದ ಕಾರೊಂದು ಗುದ್ದಿದ ಪರಿಣಾಮ ಪವಿ ಬೈಕಿನಿಂದ ಕೆಳಗೆ ಬಿದ್ದು ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ಎಚ್ಚರ ತಪ್ಪಿದಂತಾಗಿತ್ತು. ಆಕ್ಸಿಡೆಂಟ್ ಮಾಡಿದ ಕಾರ್ ನವನು ಅಲ್ಲಿ ನಿಲ್ಲಿಸದೆ ಪರಾರಿಯಾಗಿದ್ದ.ಅಕ್ಕ ಪಕ್ಕದವರ ಸಹಾಯದಿಂದ ಅವಳ ತಂದೆ ಅವಳನ್ನು ಆಸ್ಪತ್ರೆಗೆ ಕರೆದ್ಯೊದರು. ಎರಡು ಗಂಟೆಯ ಸತತ ಚಿಕಿತ್ಸೆ ನಂತರ ಹೊರಬಂದು ಡಾಕ್ಟರ್ ಹೇಳಿದ ವಿಚಾರ ಕೇಳಿ ಪವಿಯ ತಂದೆಗೆ ದಿಕ್ಕು ತೋಚದಂತಾಯಿತು.
ಐಸಿಯು ನಲ್ಲಿ ಮಲಗಿದ್ದ ಮಗಳನ್ನು ದೂರದಿಂದಲೇ ನೋಡಿದರು. ಸಾವಿನಿಂದ ತಪ್ಪಿಸಿಕೊಂಡರು ವಿಧಿಯಾಟದಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಪವಿತ್ರ ಕೇಳುವ ಶಕ್ತಿಯನ್ನು ಮಾತನಾಡುವ ಶಕ್ತಿಯನ್ನು ಆಕ್ಸಿಡೆಂಟ್ ನಿಂದ ಕಳೆದುಕೊಳ್ಳುವಂತಾಗಿತ್ತು .ಅರಳು ಹುರಿದಂತೆ ಮಾತನಾಡುತ್ತಿದ್ದ ಮಗಳು ಇನ್ನು ಮುಂದೆ ಮಾತನಾಡಲಾರಳು.. ನನ್ನ ಧ್ವನಿ ಕೇಳಿದೊಡನೆ ಚಿಗರೆಯ ಮರೆಯಂತೆ ಓಡಿ ಬರುತ್ತಿದ್ದ ಮಗಳಿಗೆ ಇನ್ನು ಮುಂದೆ ಕೇಳಿಸುವುದಿಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳಲಾಗದೆ ಕುಗ್ಗಿದರು. ಮಗಳ ಭವಿಷ್ಯದ ಚಿಂತೆ ಕಾಡತೊಡಗಿತು.
ತನಗೆ ಮಾತನಾಡಲಾಗದು ಕೇಳಿಸುವುದಿಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ಪವಿತ್ರ ಬಹಳ ಪ್ರಯಾಸ ಪಡಬೇಕಾಯಿತು. ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಅವಳ ಛಲ ಅವಳನ್ನು ಕಾಲೇಜಿಗೆ ಸೇರುವಂತ ಮಾಡಿತು.ಧೃತಿಗೆಡದೆ ತನ್ನಲ್ಲಿರುವ ಎಲ್ಲಾ ಶಕ್ತಿಯನ್ನು ಒಗ್ಗೂಡಿಸಿಕೊಂಡು ಬದುಕನ್ನು ಮುನ್ನಡೆಸಲು ನಿರ್ಧರಿಸಿದಳು.
ಒಂದು ವರ್ಷದಲ್ಲಿ ಸುಧಾರಿಸಿಕೊಂಡ ಪವಿ ತನ್ನ ಕಾಲೇಜನ್ನು ಮುಗಿಸಿ ಒಳ್ಳೆಯ ಉದ್ಯೋಗಕ್ಕೆ ಸೇರಿದಳು. ಪವಿಯ ಮದುವೆ ಮಾಡಬೇಕೆಂಬ ಮಾತುಕಥೆಗಳು ಮನೆಯಲಿ ನಡೆಯುತ್ತಿದ್ದವು. "ಈ ಜನ್ಮದಲ್ಲಿ ಅವಳ ಮದುವೆ ಅಸಾಧ್ಯ" ಎಂದು ಮಾತನಾಡುತ್ತಾ ಆಡಿಕೊಳುತ್ತಿದ್ದ ನೆಂಟರು, ಅಕ್ಕಪಕ್ಕದವರ ಮಾತಿಗೆ ತಲೆ ಕೆಡಿಸಿಕೊಳ್ಳದೆ ಮದುವೆಯಾಗುವ ಯೋಗವಿಲ್ಲ ಎಂದು ಸುಮ್ಮನಿದ್ದಳು. ಮನೆಯಲ್ಲಿ ಆರಿಸಿ ತರುವ ಹುಡುಗರು ಮನೆಗೆ ಬಂದು ನೋಡಿ ಒಪ್ಪುತ್ತಿದ್ದರು. ಆದರೆ ಅವಳ ಕೊರತೆ ಅವರಿಗೆ ತಿರಸ್ಕರಿಸಲು ಕಾರಣವಾಗಿತ್ತು. ಹುಡುಗಿ ಲಕ್ಷಣವಾಗಿದ್ದಾಳೆ, ಒಳ್ಳೆಯ ವಿದ್ಯಾವಂತೆ ಆದರೆ ಈ ಮಾತು ಬಾರದ ಹುಡುಗಿಯನ್ನು ಸೊಸೆಯಾಗಿ ಸ್ವೀಕರಿಸಲು ನಮಗೆ ಮನಸ್ಸಿಲ್ಲ ಎಂಬ ಮಾತುಗಳನ್ನು ಕೇಳಿ ಕೇಳಿ ಮದುವೆ ಆಸೆಯನ್ನೇ ಬಿಟ್ಟಿದ್ದಳು. ವಯಸ್ಸಿಗೆ ಬಂದ ಮಗಳು ಇನ್ನು ಮದುವೆಯಾಗಿಲ್ಲ ಎಂಬ ಕೊರಗಿನಲ್ಲಿ ತಾಯಿ ಹಾಸಿಗೆ ಹಿಡಿದು ಕೊರಗುತ್ತಾ ಸಾವನ್ನಪ್ಪಿದರು..ಹೆಂಡತಿಯ ಸಾವಿಗೆ ಪರೋಕ್ಷವಾಗಿ ಮಗಳು ಕಾರಣ ಎಂಬ ಸಿಟ್ಟು ಅಪ್ಪನನ್ನು ಅವಳಿಂದ ದೂರ ಉಳಿಯುವಂತೆ ಮಾಡಿತು.
ಒಮ್ಮೆ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದಳು.ಮಗುವೊಂದು ರಸ್ತೆ ದಾಟುವಾಗ ಗಾಡಿಯೊಂದು ರಭಸವಾಗಿ ಬರುತ್ತಿದ್ದಿದ್ದನ್ನು ನೋಡಿದವಳು ಮಗುವನ್ನು ಕಾಪಾಡಲು ಹೋಗುವಷ್ಟರಲ್ಲಿ ಯುವಕನೊಬ್ಬ ಆ ಮಗುವನ್ನು ಕಾಪಾಡಿದ.ಮಗುವನ್ನು ಕಾಪಾಡಿದವನಿಗೆ ಕೃತಜ್ಞತೆ ಹೇಳಲು ಬಯಸಿದಳು.ಆದರೆ ಆಗಲಿಲ್ಲ.ಅಂದೇ ಇಬ್ಬರ ಕಣ್ಣು ಪ್ರೀತಿಯ ಸಂದೇಶವನ್ನು ರವಾನಿಸಿತ್ತು.ಅಂದಿನಿಂದ ಆ ಹುಡುಗ ಪವಿಗಾಗಿ ನಿತ್ಯ ಅದೇ ಜಾಗದಲ್ಲಿ ಕಾಯುತ್ತಿದ್ದ.ಮೌನ ಗೌರಿಯಂತೆ ತಲೆ ಆಡಿಸುತ್ತಾ ನಗುವವಳ ಗುಟ್ಟು ತಿಳಿದವ ಮರುದಿನದಿಂದ ಅವಳ ಕಣ್ಣಿಗೆ ಕಾಣಿಸಲಿಲ್ಲ.ಮನದಲಿ ನೊಂದಳು.ಮೌನವಾಗಿ ಅತ್ತು ಸುಮ್ಮನಾದಳು.ದಿನಗಳು ಉರುಳಿದವು.
ಒಂದು ದಿನ "ಮಗಳೇ, ನಾಳೆ ಒಳ್ಳೆಯ ದಿನವಂತೆ ಪುರೋಹಿತರು ತಿಳಿಸಿದರು ಮುಂಜಾನೆ ಮದುಮಗಳಂತೆ ತಯಾರಾಗು ಹತ್ತಿರದ ದೇವಸ್ಥಾನದಲ್ಲಿ ನಿನ್ನ ಮದುವೆ " ಎಂದು ಹೇಳಿದ ಅಪ್ಪನ ಮಾತಿಗೆ ಏನು ಉತ್ತರಿಸಬೇಕೆಂದು ತೋಚದೆ ಕುಸಿದು ಕುಳಿತಳು.ಹುಡುಗನ ಪೂರ್ವಪರ ತಿಳಸದೆ ಪವಿಯನ್ನು ಮದುವೆಗೆ ಒಪ್ಪಿಸಿ ಹಸೆ ಮಣೆ ಏರಿಸಿದರು. ಅಂತರ್ಪಟ ಸರಿದಾಗ ಪವಿಗೆ ಆಶ್ಚರ್ಯವಾಯಿತು. ಬಸ್ ಸ್ಟ್ಯಾಂಡ್ ನಲ್ಲಿ ತನ್ನನ್ನು ಹಿಂಬಾಲಿಸುತ್ತಿದ್ದವ ಇಂದು ತನ್ನೆದುರಿಗೆ ತನ್ನನ್ನುವರಿಸಲು ನಿಂತಿದ್ದಾನೆ ಎಂಬ ವಿಚಾರ ಅವಳ ಕಣ್ಣಲ್ಲಿ ಆನಂದ ಭಾಷ್ಪ ಸುರಿಸುವಂತೆ ಮಾಡಿತು.
ಪ್ರದೀಪ್ ಅವಳ ಸ್ನೇಹಿತರಿಂದ ಅವಳ ವಿಚಾರವನ್ನು ತಿಳಿದ ಮೇಲೆ ಅವಳ ತಂದೆಯೊಂದಿಗೆ ಮಾತನಾಡಿ ಮದುವೆಯಾಗುವುದಾಗಿ ಕೇಳಿದ .ಪವಿಯ ತಂದೆಗೆ ಹೇಗಾದರೂ ಮಗಳ ಜವಾಬ್ದಾರಿ ತಪ್ಪಿದರೆ ಸಾಕಿತ್ತು.ಮದುವೆಗೆ ಒಪ್ಪಿಗೆ ಸೂಚಿಸಿದ್ದರು.
ಊಹಿಸದ ಸುಖದ ಜೀವನ ಪವಿತ್ರಳಿಗೆ ದೊರೆಯಿತು. ಪ್ರದೀಪ್ ನೊಂದಿಗೆ ಸಂತೋಷದ ಜೀವನವನ್ನು ಆರಂಭಿಸಿದಳು. ಸಮಯ ಯಾರಿಗೂ ಕಾಯುವುದಿಲ್ಲ ಅದಾಗಲೇ ಪವಿತ್ರ ಪ್ರದೀಪರ ಮದುವೆಯಾಗಿ ಮೂರು ವರ್ಷ ಕಳೆದಿತ್ತು. ಆಕಸ್ಮಿಕವಾಗಿ ಡ್ರಾಯರ್ ನಲ್ಲಿ ಅವನದೊಂದು ಹಳೆಯ ಫೋಟೋ ಕಂಡು ಬೆಚ್ಚಿದಳು. ಫೋಟೋದಲ್ಲಿದ್ದ ಕಾರಿನ ಮುಂದೆ ನಿಂತ ತನ್ನವನನ್ನು ನೋಡಿ ದಿಕ್ಕು ತೋಚದಂತಾಯಿತು. ಅಂದು ಆಕ್ಸಿಡೆಂಟ್ ಮಾಡಿ ಪರಾರಿಯಾದ ಕಾರ್ ನ ಮುಂದೆ ತನ್ನ ಗಂಡ ನಿಂತಿರುವುದು ನೋಡಿ ತಲೆ ಸುತ್ತಿ ಬಿದ್ದಳು.
ಪ್ರದೀಪ್ ಕಾನ್ಫರೆನ್ಸ್ ಇದೆ ಎಂದು ಬರುವುದು ಎರಡು ದಿವಸ
ತಡವಾಗುವುದೆಂದು ತಿಳಿಸಿ ಕೆಲಸದಾಕೆಯನ್ನು ನೇಮಿಸಿ ಹೊಗಿದ್ದ.ಮನೆಗೆ ಬಂದ ಕೆಲಸದಾಕೆ ಪ್ರಜ್ಞೆ ತಪ್ಪಿ ಬಿದ್ದ ಪವಿತ್ರಳನ್ನು ಕಂಡು ಗಾಬರಿಯಾಗಿ ಆಸ್ಪತ್ರೆಗೆ ಸೇರಿಸಿದಳು. ಎಚ್ಚರವಾದ ಪವಿತ್ರಾಗೆ ತಾನು ಆಸ್ಪತ್ರೆಯಲ್ಲಿರುವುದು ತಿಳಿದು ಗಾಬರಿಯಾಯಿತು. ಡಾಕ್ಟರ್ ಹೇಳಿದ ವಿಚಾರ ಕೇಳಿ ಸಂತಸ ಪಡಬೇಕೋ ದುಃಖ ಪಡಬೇಕೊ ಎಂದು ತಿಳಿಯದೆ ಯೋಚನೆಯಲ್ಲಿ ಮುಳುಗಿದಳು.
ಕೆಲಸದಾಕೆಯೊಂದಿಗೆ ಮನೆಗೆ ಬಂದವಳು ದೀರ್ಘವಾದ ಉಸಿರನ್ನು ಹೊರದಬ್ಬಿ ಪೆನ್ನು ಪೇಪರ್ ಹಿಡಿದು ಬರೆಯಲಾರಂಭಿಸಿದಳು.
ಪ್ರದೀ...
ಇಂದೇಕೋ ನಿನಗೆ ಪತ್ರ ಬರೆಯಬೇಕೆಂಬ ಮನಸಾಗಿದೆ. ಹೆಚ್ಚಾಗಿ ನಾನು ಹೇಳಬೇಕೆಂದ ಮಾತುಗಳನ್ನು ನೀನು ನನ್ನನ್ನು ನೋಡಿ ಗ್ರಹಿಸಿರುತ್ತಿದ್ದೆ. ಹಾಗಾಗಿ ಮಾತನಾಡಬೇಕೆಂಬ ಹಂಬಲ ನನಗೆ ಹೆಚ್ಚಾಗಿ ಕಾಡಲಿಲ್ಲ.ಏನು ಹೇಳಬೇಕೆಂದರು ಮೊಬೈಲ್ ಮೂಲಕ ನಿನಗೆ ಮೆಸೇಜ್ ಮಾಡುತಿದ್ದೆ. ಇಂದಿಗೆ ನಮ್ಮ ಮದುವೆಯಾಗಿ ಮೂರು ವರ್ಷ ಕಳೆದಿದೆ.
ಮದುವೆಗೆ ಮುನ್ನ ಅನೇಕ ನೋವು ಅವಮಾನಗಳನ್ನು ಸಹಿಸಿ ಮನಸ್ಸು ಕಲ್ಲಾಗಿದ್ದ ಕಾರಣ ಬಂಡೆಯಂತೆ ಬದುಕುತ್ತಿದ್ದೆ. ಎಲ್ಲಾ ಭಾವನೆಗಳು ಸತ್ತು ಹೋಗಿದ್ದವು.ಬಂಡೆಯಂತೆ ಬದುಕುತ್ತಿದ್ದ ನನಗೆ ಜೀವ ನೀಡಿದವನು ನೀನು. ಜೀವಕ್ಕೆ ಜೀವ ಎಂಬಂತೆ ಬಾಳಿಸುತ್ತಿರುವವನು ನೀನು.
ನಾವಿಬ್ಬರು ಭೇಟಿಯಾಗಿದ್ದೆ ಒಂದು ಆಕ್ಸಿಡೆಂಟ್ ನಿಂದ.ಬಹುಶಃ ನಿನಗೆ ನೆನಪಿರಬಹುದು.ಕಾಲೇಜಿನಲ್ಲಿ ಓದುವಾಗ ದಿನವೂ ನನ್ನ ಹಿಂದೆ ಹುಡುಗರ ಗುಂಪೊಂದು ಅಲಿಯುತ್ತಿತ್ತು ಗೆಳೆತಿಯರಿಂದ ನಾನು ಮೂಗಿ ಎಂದು ತಿಳಿದುಕೊಡಲೇ ನನ್ನ ಹಿಂದೆ ಬರುವುದನ್ನು ನಿಲ್ಲಿಸುತ್ತಿದ್ದರು. ಹಾಗಾಗಿ ನೀನು ನನಗಾಗಿ ಬರುವುದನ್ನು ತಡೆಯಲು ನನ್ನ ಗೆಳತಿಯರಿಂದ ನಿನಗೆ ವಿಷಯ ಮುಟ್ಟಿಸಿದೆ. ಅದು ತಿಳಿದು ಮೇಲೆ ನೀನು ಮತ್ತೆ ನನ್ನೆದುರು ಬರಲೇ ಇಲ್ಲ.ಆದರೆ ತಂದೆಯಿಂದ ಒಪ್ಪಿಗೆ ಪಡೆದು ನನ್ನ ಮದುವೆಯಾದೆ.
ಹೇಗೆ ತೀರಿಸಲಿ ಈ ಋಣವನ್ನು?ಮದುವೆಯಾದ ದಿನದಿಂದ ಮೊಗೆದಷ್ಟು ಪ್ರೀತಿಯನ್ನು ನೀನು ಧಾರೆ ಎರೆಯುತ್ತಿರುವೆ. ನಿನ್ನ ಪ್ರೀತಿಯನ್ನು ಬಣ್ಣಿಸಲು ಪದಗಳಿಲ್ಲ.ಮುಖ್ಯವಾದ ವಿಚಾರಕ್ಕೆ ಬರುವೆ.
ನಾನು ಮೂಕಿಯಾಗಿದ್ದು ನಿನ್ನಿಂದಲೇ ಎಂಬ ವಿಚಾರ ನಿನಗೆ ತಿಳಿದಿಲ್ಲ.ಆದರೆ ಅದೇ ಸತ್ಯ ಪ್ರದಿ .ಕಾರ್ ಓಡಿಸುತ್ತಿದ್ದವರು ಯಾರೆಂದು ತಿಳಿದಿಲ್ಲ.ಆದರೆ ಆ ಕಾರ್ ನಿನ್ನದೇ ಎಂಬ ವಿಚಾರ ನನಗೆ ತಿಳಿದು ಬೇಸರವಾಯಿತು. ಆದರೆ ಕಾರ್ ನಿನ್ನದಾಗಿದ್ದ ಮಾತ್ರಕ್ಕೆ ಓಡಿಸಿದವನು ನೀನಾಗಿರಬೇಕೆಂದಿಲ್ಲ. ಯಾರೋ ಮಾಡಿದ ತಪ್ಪಿಗೆ ನಿನ್ನನ್ನು ಹೊಣೆಯನ್ನಾಗಿಸಲಾರೆ. ಗೊತ್ತಿದ್ದೋ ಗೊತ್ತಿಲ್ಲದೆಯೋ ನಿನ್ನಿಂದಲೇ ಆದ ಅನ್ಯಾಯಕ್ಕೆ ನೀನೇ ಪರಿಹಾರ ಕೊಟ್ಟಿರುವೆ. ನಾನಿಂದು ಮದುವೆ ಎಂಬ ಸುಂದರ ಜೀವನ ಅನುಭವಿಸುತ್ತಿರುವುದು ನಿನ್ನಿಂದಲೇ.
ನಿನ್ನನ್ನು ಬಿಟ್ಟು ನನ್ನ ಬದುಕನ್ನು ನನ್ನಿಂದ ಉಳಿಸಲು ಅಸಾಧ್ಯ. ನಿನ್ನನ್ನು ದ್ವೇಷಿಸಿ ಬದುಕಲಾರೆ. ಎಲ್ಲರಂತೆ ನಾನು ಮಾತನಾಡಬೇಕು ಎಂದು ಅನಿಸಿದಾಗ ನಿನ್ನ ಮಡಿಲಿನಲ್ಲಿ ಮಲಗಿ ಸಮಾಧಾನ ಪಟ್ಟುಕೊಳ್ಳುತ್ತಿದ್ದೆ. ನೀನು ನನ್ನ ಪಾಲಿಗೆ ದೇವರು ಕೊಟ್ಟ ವರ. ಪ್ರತಿ ಬಾರಿ ಮೆಸೇಜ್ ಮಾಡಿ ಮಾತನಾಡುವಂತೆ ಈ ಬಾರಿ ಮಾತನಾಡಲು ಮನಸಾಗಲಿಲ್ಲ. ಈ ಪತ್ರ ಬರೆಯುವ ಮೂಲಕ ನಿನ್ನೊಂದಿಗೆ ಮನಬಿಚ್ಚಿ ಮಾತನಾಡುತ್ತಿದ್ದೇನೆ ಎಂಬ ಭಾವ ನನ್ನಲ್ಲಿ ಮೂಡಿದೆ.ಓದುವಾಗ ನಿನಗೂ ನಾನು ಮಾತನಾಡುತ್ತಿರುವೆ ಎಂದು ಅನಿಸಬಹುದು.
ಪ್ರದೀ.. ಈ ಮೂರು ವರ್ಷಗಳಲ್ಲಿ ನಾನು ಮೂಗಿ ಎಂಬುದನ್ನೇ ಮರೆತಿರುವೆ. ನಿನ್ನೊಂದಿಗೆ ಕಳೆದ ಪ್ರತೀ ಕ್ಷಣವು ನಾನು ಮಾತನಾಡುವಂತೆ ಭಾಸವಾಗುತ್ತದೆ. ಇಂದು ಜಗತ್ತಿನಲ್ಲಿ ನನ್ನಷ್ಟು ಸುಖದಿಂದ ಸಂತೋಷದಿಂದ ಬಾಳುತ್ತಿರುವವರು ಯಾರಿಲ್ಲವೆಂದು ಭಾವಿಸುತ್ತೇನೆ. ನಿನ್ನಂತಹ ಸ್ನೇಹ ಜೀವಿ ಅದ್ಭುತಪ್ರೇಮಿ ಉತ್ತಮ ವಾಗ್ಮಿ ನನ್ನ ಪಾಲಿಗೆ ಪತಿಯಾಗಿ ದೊರಕಿದ್ದು ನನ್ನ ಅದೃಷ್ಟ. ಹೊಗಳುವಿಕೆಗಾಗಿ ಈ ಮಾತುಗಳನ್ನು ಹೇಳುತ್ತಿಲ್ಲ. ಮದುವೆಯ ದಿನದ ನೆನಪಿಗಾಗಿ ನಿನಗೊಂದು ಸಿಹಿ ಸುದ್ದಿಯನ್ನು ನೀಡುತ್ತಿದ್ದೇನೆ. ನಾವಿಬ್ಬರೇ ಇದ್ದ ಪುಟ್ಟ ಜಗತ್ತಿನಲ್ಲಿ ನಮ್ಮ ಪ್ರೀತಿಯನ್ನು ಹಂಚಿಕೊಳ್ಳಲು ಪುಟಾಣಿಗಳಿಬ್ಬರು ಕೆಲವು ತಿಂಗಳಲ್ಲಿ ಆಗಮಿಸಲಿದ್ದಾರೆ.
ಹೌದು ಪ್ರದೀ... ನಾನು ಗರ್ಭಿಣಿ. ಇದನ್ನು ಮೆಸೇಜ್ ನಲ್ಲಿ ಹೇಳುವ ಬದಲು ನನ್ನ ಭಾವನೆಗಳನ್ನು ತೆರೆದಿಟ್ಟು ಪತ್ರದ ಮೂಲಕ ಹೇಳುವುದು ಸೂಕ್ತ ವೆನಿಸಿತು. ಹಾಗಾಗಿ ಈ ಪತ್ರ. ತಾಯಿ ಆಗುತ್ತಿದ್ದೇನೆ ಎಂಬ ಖುಷಿ, ಮುಗಿಲು ಮುಟ್ಟಿದೆ. ಪುಟ್ಟ ಅವಳಿಗಳು ನನ್ನಂತೆ ಮೂಕವಾಗಿರದೆ ನಿನ್ನಂತೆ ಉತ್ತಮ ವಾಗ್ಮಿ ಆಗಿರಲಿ ಎಂದು ಆ ದೇವರಲ್ಲಿ ಬೇಡುತ್ತೇನೆ. ಥ್ಯಾಂಕ್ ಯೂ ಸೋ ಮಚ್ ನನ್ನೊಂದಿಗೆ ಜೀವನ ಕಳೆಯುವ ನಿನ್ನ ನಿರ್ಧಾರಕ್ಕೆ. ನನ್ನ ಈ ಸಂತೋಷದ ಜೀವನಕ್ಕೆ ನೀ ತಾನೇ ಕಾರಣ.... ನಿನ್ನಿಂದಲೇ ಬೆಳಕಾಯಿತು ಕತ್ತಲಾಗಿದ್ದ ನನ್ನ ಜೀವನ..
ಇಂತಿ ನಿನ್ನವಳು..
ಎಂದು ಬರೆದು ಮುಗಿಸುವಷ್ಟರಲ್ಲಿ ಪ್ರದೀಪ್ ಅವಳ ಮುಂದೆ ನಿಂತು ನೋಡುತ್ತಿದ್ದ .ಅವನ ಆಗಮನ ತಿಳಿಯದೆ ತಲೆ ಎತ್ತಿ ನೋಡಿದವಳು ಅವನ್ನನ್ನು ತಬ್ಬಿದಳು.ಪತ್ರ ನೀಡಿ ನಕ್ಕಳು.
ಓದಿದವನ ಕಂಗಳು ತುಂಬಿದವು. ಅವಳನ್ನು ತಬ್ಬಿದ.ಪ್ರೀತಿಯ ಮುತ್ತಿಟ್ಟು ತನ್ನ ಮನೆಯವರಿಂದ ಆದ ಅನ್ಯಾಯಕ್ಕೆ ಕ್ಷಮೆ ಕೋರಿದ.