Vijaya Bharathi.A.S.

Abstract Classics Others

4  

Vijaya Bharathi.A.S.

Abstract Classics Others

ಅನುಬಂಧ

ಅನುಬಂಧ

6 mins
37



ಮಧ್ಯರಾತ್ರಿ ಎರಡು ಗಂಟೆಯ ವೇಳೆಗೆ ಮೊಬೈಲ್ ರಿಂಗ್ ಆದಾಗ ಗಾಢ ನಿದ್ರೆಯಲ್ಲಿದ್ದ ಸುರೇಶನಿಗೆ ಕಾಲ್ ರಿಸೀವ್ ಮಾಡಲು ಆಗದೆ ಹಾಗೇ ಮಲಗಿದ.ಆದರೆ ನಿರಂತರವಾಗಿ ಮೊಬೈಲ್ ರಿಂಗಣಿಸುತ್ತಲೇ ಇದ್ದಾಗ, ಬಲವಂತವಾಗಿ ಕಣ್ಣನ್ನು ಹೊಸಕಿಕೊಳ್ಳುತ್ತಾ, ಮೊಬೈಲ್ ಎತ್ತಿಕೊಂಡು ನೋಡಿದಾಗ,

"ವಿನುತಾಮೇಡಂ ಕಾಲಿಂಗ್" ಎಂದಿರುವುದನ್ನು ನೋಡಿ, ಏನು ಎಮರ್ಜೆನ್ಸಿನೋ? ಎಂದುಕೊಳ್ಳುತ್ತಾ "ಹಲೋ" ಎಂದ.

"ಸುರೇಶ, ನಿಮ್ಮ ಸಾಹುಕಾರರಿಗೆ ತುಂಬಾ ಹುಷಾರಿಲ್ಲಪ್ಪ, ಬೇಗ ಬಾ,"ಎಂದಷ್ಟೇ ಹೇಳಿದಾಗ, "ಆಯ್ತು ಅಮ್ಮ, ನಾನೀಗಲೇ ಹೊರಟೆ. ನೀವು ಧೈರ್ಯವಾಗಿರಿ" ಎಂದು ಹೇಳುತ್ತಾ, ಹಾಸಿಗೆ ಬಿಟ್ಟು ಎದ್ದ. ಇವನು ರೆಡಿಯಾಗುವಾಗ, ಎಚ್ಚರಗೊಂಡ ಅವನ ಹೆಂಡತಿ ಚಿತ್ರಳಿಗೆ ವಿಷಯ ತಿಳಿಸುತ್ತಾ ತಾನು ಈಗಲೇ ಸಾಹುಕಾರರ ಮನೆಗೆ

ಹೊರಡ ಬೇಕಾಗಿದೆಯೆಂದು ಹೇಳುತ್ತಾ, ಕಾರ್ ಕೀ ತೆಗೆದುಕೊಂಡು ಹೊರಡುವಾಗ, ಹೆಂಡತಿಗೆ ಒಂದು ಹೂ ಮುತ್ತನ್ನಿತ್ತು,ಬಾಗಿಲು ಹಾಕಿಕೊಳ್ಳುವಂತೆ ಹೇಳಿ ಹೊರಟ ಸುರೇಶ.

*******

ಕಾರ್ ಓಡಿಸುತ್ತಿದ್ದ ಸುರೇಶನಿಗೆ ಕಾರಿನ ಚಕ್ರಗಳು ಉರುಳಿದಂತೆ, ಅವನ ಮನಸ್ಸಿನಲ್ಲಿ ತನ್ನ ಹಾಗೂ ತನ್ನ ದಣಿಗಳಾದ ಆನಂದ ರಾವ್ ರವರ ನಡುವಿನ ಬಾಂಧವ್ಯದ ನೆನಪುಗಳು ಹರಿದಾಡಿದವು.ತಾನು ಮೊದಲ ದಿನ ತನ್ನ ಮಾಲೀಕರನ್ನು ಭೇಟಿಯಾದ ದಿನದಿಂದ ಇಂದಿನವರೆವಿಗೂ‌ ಬೆಸೆದು ಕೊಂಡಿದ್ದ ಅವರ ಮತ್ತು ಅವನ ನಡುವಿನ ಅನುಬಂಧದ ನೆನಪುಗಳು ಸುರುಳಿ ಸುರುಳಿಯಾಗಿ ಬಿಚ್ಚಿಕೊಳ್ಳುತ್ತಾ ಹೋದವು.

"’ ಹದಿನೆಂಟು ತುಂಬಿದ್ದ ನಾನು ಅಂದು ಆನಂದರಾವ್ ಮನೆಯ ಕಾರ್ ಡ್ರೈವರ್ ಆಗಿ ಸೇರಿಕೊಳ್ಳಲು ಹೋದಾಗ,ಆಗತಾನೆ ಚಿಗುರು ಮೀಸೆಯೊಡೆಯುತ್ತಿದ್ದ ನನ್ನನ್ನು ನೋಡಿದ ಅವರು ಜೋರಾಗಿ ನಕ್ಕು

’ಏನಪ್ಪ, ನಿನಗೆ ಡ್ರೈವಿಂಗ್ ಲೈಸೆನ್ಸ್ ಕೊಟ್ಟವರು ಯಾರು? ಇನ್ನೂ ನೀನು ಚೋಟ ಬಚ್ಚ, ಹೋಗಪ್ಪ, ನೀನು ಓದನ್ನು ಮುಂದುವರೆಸು. ನಮ್ಮ ಬಳಿ ದೊಡ್ಡ ದೊಡ್ಡ ಕಾರ್ ಗಳಿವೆ. ನಾನು ನಿನ್ನನ್ನು ಯಾವ ಧೈರ್ಯದ ಮೇಲೆ ಡ್ರೈವರ್ ಆಗಿ ಸೆಲೆಕ್ಟ್ ಮಾಡಿಕೊಳ್ಳಲಿ? ಹೋಗು ಮಗು. ನೀನು ಇಷ್ಟು ಚಿಕ್ಕ ವಯಸ್ಸಿನಲ್ಲೇ ಕೆಲಸ ಮಾಡುವುದು ಸರಿಯಲ್ಲ’ ಎಂದು ಬಿಟ್ಟಾಗ, ನಾನು ಅವರ ಕಾಲುಗಳನ್ನು ಹಿಡಿದು,

"ಸರ್, ಇಲ್ಲ ಅನ್ನಬೇಡಿ ಸರ್, ನನ್ನ ಮನೆಯಲ್ಲಿ ನಾನೇ ಹಿರಿಯ ಮಗ, ನನ್ನ ಹಿಂದೆ ಇಬ್ಬರು ತಮ್ಮಂದಿರು ಇಬ್ಬರು ತಂಗಿಯರು ಇದ್ದಾರೆ.ನನ್ನ ತಂದೆ ಅಪಘಾತವೊಂದರಲ್ಲಿ ಎರಡೂ ಕಾಲುಗಳನ್ನು ಕಳೆದುಕೊಂಡು

ಅಸಹಾಯಕ ಸ್ಥಿತಿಯಲ್ಲಿದ್ದಾರೆ.ನನ್ನ ತಾಯಿ ನಾಲ್ಕಾರು ಮನೆಗಳಲ್ಲಿ ಮನೆಗೆಲಸ ಮಾಡಿ ನಮ್ಮನ್ನು ಸಾಕುತ್ತಿದ್ದಾರೆ. ನಾನು ಚೆನ್ನಾಗಿ ಡ್ರೈವಿಂಗ್ ಕಲಿತಿದ್ದೇನೆ. ಪ್ಲೀಸ್ ಸರ್. ನನಗೆ ಈ ಕೆಲಸ ತುಂಬಾ ಅಗತ್ಯವಿದೆ." ಎಂದು

 ನನ್ನ ಮನೆಯ ಕಷ್ಟಗಳನ್ನು ಹೇಳಿಕೊಂಡು, ಗೋಗರೆದಾಗ, ನನ್ನ ಮೇಲೆ ಕನಿಕರ ತೋರಿದ ದಣಿಗಳು

" ನಿನ್ನನ್ನು ನೋಡಿದರೆ ಅಯ್ಯೋ ಅನ್ನಿಸುತ್ತದೆ ಕಣೋ, ದೇವರ ಮೇಲೆ ಭಾರ ಹಾಕಿ ನಿನಗೆ ಈ ಡ್ರೈವರ್ ಕೆಲಸ ಕೊಡುತ್ತೀನಿ. ಆದರೆ ನನ್ನನ್ನು ಪೋಲೀಸ್ ಸ್ಟೇಷನ್, ಜೈಲ್ ಮೆಟ್ಟಿಲುಗಳನ್ನು ಹತ್ತಿಸ ಬೇಡ." ಎಂದು ಹೇಳಿದ ಅವರು ನನ್ನ ತಲೆಯ ಮೇಲೆ ಕೈಯಿಟ್ಟು ಆಶೀರ್ವಾದ ಮಾಡಿ ಕಳುಹಿಸಿದ್ದರು.ನನ್ನನ್ನು ಡ್ರೈವರ್ ಆಗಿ ನೇಮಕ ಮಾಡಿ ಕೊಂಡರೂ, ನನ್ನ ಜೊತೆಗೆ ಯಾವಾಗಲೂ ಒಬ್ಬ ನುರಿತ ಡ್ರೈವೆರ್ ಅನ್ನು ಜೊತೆಗೆ ಕಳುಹಿಸುತ್ತಿದ್ದರು. ನನ್ನ ಡ್ರೈವಿಂಗ್ ಮೇಲೆ ಅವರಿಗೆ ನಂಬಿಕೆ ಬರುವವರೆಗೂ, ನನ್ನ ಜೊತೆಗೆ ಒಬ್ಬ ನುರಿತ ಡ್ರೈವೆರ್ ಇರುವಂತೆ ನೋಡಿಕೊಳ್ಳುತ್ತಿದ್ದರು.. ನಂತರ ನನ್ನ ಕೆಲಸದ ಮೇಲೆ ಅವರಿಗೆ ವಿಶ್ವಾಸ ಬೆಳೆದು, ತಮ್ಮ ವೈಯಕ್ತಿಕ ಕೆಲಸಗಳಿಗೆಲ್ಲಾ ನನ್ನನ್ನೇ ಕರೆದೊಯ್ಯುತ್ತಿದ್ದರು. ಬರಬರುತ್ತಾ,ನಮ್ಮಿಬ್ಬರ ವಿಶ್ವಾಸ ತಂದೆ ಮಗನಂತೆ ಬೆಳೆದದ್ದು, ಅವರ ಮೂವರು ಹೆಣ್ಣು ಮಕ್ಕಳೂ ಮದುವೆಯಾಗಿ ಅಮೇರಿಕಾದಲ್ಲಿ ನೆಲೆಸಿದಾಗ, ನನ್ನನ್ನೇ ಮನೆಯ ಮಗನಂತೆ ಕಾಣುತ್ತಿದ್ದು, ನನಗೊಂದು ಮನೆ ಕಟ್ಟಿಕೊಟ್ಟು, ಮದುವೆ ಮಾಡಿಸಿ, ನನ್ನ ತಮ್ಮ ತಂಗಿಯರಿಗೂ ದಾರಿ ತೋರಿಸಿದ ದಣಿಗಳು ತುಂಬಾ ಉದಾರ ಮನಸ್ಸಿನವರು. ನನ್ನನ್ನು ಕಂಡರೆ ಅವರಿಗೆ ತುಂಬಾ ಅಕ್ಕರೆ. ಪ್ರತಿದಿನವೂ ನನಗೆ ಕೊಡದೆ ಅವರೇನೂ ತಿನ್ನುತ್ತಿರಲಿಲ್ಲ. ಅಷ್ಟೊಂದು ಉದಾರ ಮನಸ್ಸಿನವರು. ಈ ಹದಿನೈದು ವರ್ಷಗಳಲ್ಲಿ ಅವರ ಕೃಪಾಕಟಾಕ್ಷದಿಂದ ನಮ್ಮ ಮನೆಯ ತಾಪತ್ರಯಗಳೆಲ್ಲಾ ಮಂಗಮಾಯವಾಯಿತು. ಅವರ ಪತ್ನಿ ವಿನುತಾ ಮೇಡಂ ಕೂಡ ತುಂಬಾ ಒಳ್ಳೆಯ ಹೆಂಗಸು. ಅವರ ಮನೆಯಲ್ಲಿ ಯಾವುದೇ ಕೆಲಸವಾಗ ಬೇಕಾದರೂ ನನ್ನನ್ನು ಮೊದಲು ಬರ ಹೇಳುತ್ತಿದ್ದರು.

ಅವರ ಮೂವರು ಹೆಣ್ಣುಮಕ್ಕಳ ಮದುವೆಗಳಲ್ಲಿ, ನನ್ನ ಕೈಯಲ್ಲೇ ಅವರ ಬೀರುವಿನ ಕೀಗಳು, ಮನೆಯ ಕೀಗಳು ಎಲ್ಲವನ್ನೂ ಕೊಟ್ಟು ಬಿಟ್ಟು, ನನಗೇ ಜವಾಬ್ದಾರಿ ವಹಿಸುತ್ತಿದ್ದರು. ಇದನ್ನು ಕಂಡು ಅವರ ನೆಂಟರಿಷ್ಟರು ನನ್ನ ಬಗ್ಗೆ ಅನುಮಾನಿಸಿ ಮಾತನಾಡಿದರೆ ದಣಿಗಳು ಸಹಿಸುತ್ತಿರಲಿಲ್ಲ. ಅವರಿಗೆಲ್ಲಾ ತಕ್ಕ ಉತ್ತರ ಕೊಟ್ಟು ಅವರ ಬಾಯಿ ಮುಚ್ಚಿಸುತ್ತಿದ್ದರು.

ನನ್ನ ಲೆವೆಲ್ ಏನು? ಅವರ ಲೆವೆಲ್ ಏನು? ಇಂತಹ ಮಾಲೀಕರನ್ನು ಪಡೆದಿರುವುದು ನನ್ನ ಭಾಗ್ಯವೇ ಸರಿ.ಆದರೆ ದಣಿಗಳಿಗೆ ಈಗ ಇದ್ದಕ್ಕಿದ್ದಂತೆ ಏನಾಯಿತು? ಮೊನ್ನೆ ನಾನೇ ಅವರನ್ನು ರೆಗುಲರ್ ಚೆಕ್ ಅಪ್ ಗೆ ಹಾಸ್ಪಿಟಲ್ ಗೆ ಕರೆದುಕೊಂಡು ಹೋಗಿದ್ದನಲ್ಲ? ವಯೋಧರ್ಮದಂತೆ ರಕ್ತದಲ್ಲಿ ಸ್ವಲ್ಪ ಸಕ್ಕರೆಯ ಏರಿಳಿತಗಳು, ಕ್ಯಾಲ್ಸಿಯಮ್ ಕೊರತೆ,ಸೋಡಿಯಂ ಏರುಪೇರುಗಳು ಆಗುತ್ತಲೇ ಇದ್ದವು. ಅವುಗಳಿಗೆ ತಕ್ಕ ಔಷಧಿಗಳನ್ನು ತಪ್ಪದೆ ತೆಗೆದುಕೊಳ್ಳುತ್ತಿದ್ದರು.ಆ ಮಹಾತಾಯಿ ವಿನುತಾ ಮೇಡಮ್ ಅಂತೂ ಗಂಡನನ್ನು ತನ್ನ ಕಣ್ಣ ರೆಪ್ಪೆಗಳಂತೆ ಜೋಪಾನ ಮಾಡುತ್ತಿದ್ದಾರೆ. ಅಂತಹುದರಲ್ಲಿ ಇದ್ದಕ್ಕಿದ್ದಂತೆ ನಮ್ಮ ದಣಿಗಳಿಗೆ ಏನಾಯಿತು ?"

ಯೊಚನೆಗಳೊಂದಿಗೇ ಸುರೇಶ ತನ್ನ ದಣಿ ಆನಂದರಾವ್ ಅವರ ಮನೆಯ ಮುಂದೆ ಬಂದಿದ್ದ.

****

ಕಾರಿನಿಂದಿಳಿದವನೇ ಮನೆಯ ಬಾಗಿಲ ಮುಂದೆ ನಿಂತು ಕಾಲಿಂಗ್ ಬೆಲ್ ಮಾಡಿದ. ವಿನುತಾ ಮೇಡಂ ಬಂದು ಬಾಗಿಲು ತೆರೆದಾಗ ಅವನು ಒಳಗೆ ಹೋದ.ಸೊಫಾದಲ್ಲೇ ಒರಗಿ ಕುಳಿತ್ತಿದ್ದ ಆನಂದ ರಾವ್ ಇವನು ಬಂದ ಕೂಡಲೇ

"’ಬಾಪ್ಪ ಸುರೇಶ ಬಾರೋ, ನನಗೆ ಉಸಿರು ಮೇಲೆ ಮೇಲಕ್ಕೆ ಬರುತ್ತಿದೆ ಕಣೋ, ನೋಡೋ ನನಗೆ ಮೂರು ಹೆಣ್ಣು ಮಕ್ಕಳಿದ್ದೂ ಈಗ ಯಾರೂ ಹತ್ತಿರ ಇಲ್ಲವಲ್ಲಪ್ಪ, ಇಷ್ಟೊಂದು ಆಸ್ತಿ ಸಂಪಾದಿಸಿ ಏನು ಪ್ರಯೋಜನ? ಕಡೆಗಾಲದಲ್ಲಿ ಯಾರೂ ಇಲ್ಲವಲ್ಲೋ? ನೀನು ನನಗೆ ಮಗ ಕಣೊ.ನನ್ನ ಹತ್ತಿರ ಬಾ " ಒಂದೇ ಸಮನೆ ಬಡ ಬಡಿಸುತ್ತಿದ್ದ ದಣಿ ಗಳನ್ನು ನೋಡಿ,ಅವರ ಹತ್ತಿರ ಹೋಗಿ ಕುಳಿತುಕೊಂಡು ಅವರ ಕೈಗಳನ್ನು ಭದ್ರವಾಗಿ ಹಿಡಿದುಕೊಂಡು,

’ಸರ್, ನೀವು ಹೆದರಬೇಡಿ, ನಾನಿದ್ದೇನಲ್ಲ, ಈಗಲೇ ನಾವು ಹಾಸ್ಪಿಟಲ್ ಗೆ ಹೋಗೋಣ." ಎಂದು ಧೈರ್ಯ ಹೇಳಿ, ಅವರು ರೆಗುಲರ್ ಆಗಿ ಹೋಗುವ ಹಾಸ್ಪಿಟಲ್ ಗೆ ಫೋನ್ ಮಾಡಿದ. ಅಲ್ಲಿಂದ ಬಹಳ ಹೊತ್ತು ಉತ್ತರವೇ ಬರದಿದ್ದಾಗ, ಮತ್ತೊಂದು ಹಾಸ್ಪಿಟಲ್ ಗೆ ಫೋನ್ ಮಾಡಿದ.

"ನಮ್ಮಲ್ಲಿ ಬೆಡ್ ಇಲ್ಲ. ಬೇರೆ ಕಡೆ ನೋಡಿ" ಎಂದು ನಿರಾಶಾದಾಯಕವಾದ ಉತ್ತರ ದೊರೆತಾಗ,ಮಗದೊಂದು ಹಾಸ್ಪಿಟಲ್ಗೆ ಫೋನಾಯಿಸಿದ. ಹೀಗೆ ಹತ್ತಾರು ಹಾಸ್ಪಿಟಲ್ ಗೆ ಫೋನ್ ಮಾಡುತ್ತ, ಮಾಡುತ್ತ, ಒಂದು ಗಂಟೆ ಕಳೆದು ಹೋಗಿ, ಆನಂದ ರಾವ್ ಅವರ ಪರಿಸ್ಥಿತಿ ಬಿಗಡಾಯಿಸುತ್ತಾ ಬಂದಾಗ, ವಿನುತಾ ಆತಂಕ ದಿಂದ ಅಳುವುದಕ್ಕೆ ಪ್ರಾರಂಭಿಸಿದರು. ಕೊನೆಗೂ ಸುರೇಶನ ಸತತ ಪ್ರಯತ್ನದಿಂದ "ಮೇಘ ನರ್ಸಿಂಗ್ ಹೋಂ "ನಲ್ಲಿ ಬೆಡ್ ಖಾಲಿ ಇರುವುದು ಗೊತ್ತಾದ ತಕ್ಷಣ, ಸುರೇಶ ಅವರಿಬ್ಬರನ್ನೂ ಕರೆದುಕೊಂಡು ಆ ನರ್ಸಿಂಗ್ ಹೋಂ ನತ್ತ ಧಾವಿಸಿದ. 

ಎಪ್ಪತ್ತೈದರ ಆನಂದರಾವ್ ನನ್ನು ಮೇಘಾ ನರ್ಸಿಂಗ್ ಹೋಂ ನವರು ಅಡ್ಮಿಟ್ ಮಾಡಿಕೊಂಡು, ಕೋವಿಡ್ ಟೆಸ್ಟ ಗಳನ್ನು ಮಾಡಿಸಿ, "ಐ.ಸಿ.ಯು." ಗೆ ಹಾಕಿದರು. ’ಸಧ್ಯ ಕೊನೆಗೂ ಒಂದು ನರ್ಸಿಂಗ್ ಹೋಂ ನಲ್ಲಿ ಬೆಡ್ ಸಿಕ್ಕಿತಲ್ಲ " ಸುರೇಶ ಹಾಗೂ ವಿನುತಾ ಮೇಡಂ ನಿಟ್ಟುಸಿರು ಬಿಟ್ಟರು.

ಇವರಿಬ್ಬರೂ "ಡಾಕ್ಟರ್ ಏನು ಹೇಳುತ್ತಾರೋ?" ಎಂದು ಉಸಿರು ಬಿಗಿಹಿಡಿದು ಹೊರಗಡೆ ಐ.ಸಿ.ಯು. ಮುಂದೆ ಕಾಯುತ್ತಾ ಕುಳಿತರು. ಒಳಗಡೆಯಿಂದ ಬಂದ ನರ್ಸ್ ಕೆಲವು ಔಷಧಗಳನ್ನು ತರಲು ಹೇಳಿದಾಗ, ಸುರೇಶ ಎಲ್ಲವನ್ನೂ ತಂದು ಕೊಡುತ್ತಿದ್ದ.

ದೂರದ ಅಮೇರಿಕಾದಿಂದ ಆನಂದ ರಾವ್ ರವರ ಮೂವರು ಹೆಣ್ಣು ಮಕ್ಕಳು ಸರದಿಯಂತೆ ಫೋನ್ ಮಾಡುತ್ತಾ, ಅಲ್ಲಿಂದಲೇ ತಂದೆಯ ಆರೋಗ್ಯವನ್ನು ಕಾಳಜಿಯಿಂದ ವಿಚಾರಿಸುತ್ತಾ, ಜೊತೆಗೆ ತಮಗೆ ತೋಚುತ್ತಿದ್ದ ನೂರಾರು ಸಲಹೆಗಳನ್ನು ಕೊಡುತ್ತಿದ್ದಾಗ, ಮಕ್ಕಳ ಮಾತುಗಳನ್ನು ಕೇಳಿ ಕೇಳಿ ಬೇಸತ್ತ ವಿನುತಾ ,ಮೊಬೈಲ್ ಸ್ವಿಚ್ ಆಫ್ ಮಾಡಿ ಕುಳಿತರು. ಅವರಿಗೆ ಹಳೆಯ ನೆನಪುಗಳು ಕಾಡಿದವು.

"ಹೆಸರಾಂತ ಸಿವಿಲ್ ಕಂಟ್ರಾಕ್ಟರ್ ಆನಂದ ರಾವ್ ರನ್ನು ಮದುವೆಯಾಗಿ ಸಂತೃಪ್ತ ದಾಂಪತ್ಯ ಜೀವನ ನಡೆಸುತ್ತಿದ್ದ ವಿನುತಾಳಿಗೆ ಒಂದರ ಹಿಂದೆ ಒಂದು ಮೂರು ಜನ ಹೆಣ್ಣು ಮಕ್ಕಳೇ ಆದಾಗ, ರಾವ್ ಅವರ ತಾಯಿ ಸಾವಿತ್ರಮ್ಮನವರಿಗೆ ಏನೋ ಒಂದು ಕೊರತೆಯಾದಂತೆ ಅನ್ನಿಸಿ, "ನಮ್ಮ ವಂಶದ ಹೆಸರನ್ನು ಉಳಿಸೋ ಒಂದು ಗಂಡು ಮಗುವನ್ನು ಆ ದೇವರು ನಿನಗೆ ಕರುಣಿಸಲಿಲ್ಲವಲ್ಲೋ ಆನಂದು, ಎಷ್ಟು ಆಸ್ತಿ ಅಂತಸ್ತಿದ್ದರೇನು, ಒಂದು ಮಗನಿಲ್ಲದೆ?" ಎಂದು ಅಲವತ್ತುಕೊಳ್ಳುವಾಗ, ವಿನುತಾ ಮತ್ತು ಆನಂದರಾಯರು ಸಾವಿತ್ರಮ್ಮನವರಿಗೆ

"ಕುವರನಾದೊಡೆ ಬಂದ ಗುಣವೇನದರಿಂದ,

ಕುವರಿಯಾದೊಡೆ ಕುಂದೇನು?’ ಎಂದು ಹೇಳಿ ಹೆಣ್ಣು ಮಕ್ಕಳು ಗಂಡು ಮಕ್ಕಳಿಗಿಂತ ಯಾವುದರಲ್ಲಿ ಕಡಿಮೆ? ಎಂದು ವಾದಿಸಿ,ಹೆಣ್ಣು ಮಕ್ಕಳನ್ನು ಸಮರ್ಥಿಸಿ

ಕೊಳ್ಳುತ್ತಿದ್ದರು. ಆದರೆ ಸಾವಿತ್ರಮ್ಮನವರು

"ಈಗ ಹೀಗೆ ಹೇಳುತ್ತಿದ್ದೀರಿ,ನಾಳೆ ಅವರು ಮದುವೆಯಾಗಿ ಬೇರೆಯವರ ಸ್ವತ್ತಾದಾಗ, ನಿಮ್ಮ ಹತ್ತಿರ ಎಲ್ಲಿ ಇರುತ್ತಾರೆ? ಅದಕ್ಕೆ ಹೇಳೋದು ಕಡೆಗಾಲದ ದಿಕ್ಕಿಗೆ ಮಗನಾದವನಿರಬೇಕು ಅಂತ .ನೋಡಿ,ಇನ್ನೂ ಕಾಲ ಮಿಂಚಿಲ್ಲ,ದೇವರು ಬೇಕಾದಷ್ಟು ಕೊಟ್ಟಿದ್ದಾನೆ. ಇನ್ನೊಂದು ಮಗುವಿಗಾಗಿ ಪ್ರಯತ್ನಿಸಿ" ಎಂದು ತಮ್ಮ ವಾದವನ್ನು ಮಂಡಿಸಿ, ಮಗ ಸೊಸೆಗೆ ಬುದ್ಧಿ ಹೇಳುವಾಗ , ಇಬ್ಬರೂ ನಕ್ಕು ಸುಮ್ಮನಾಗಿದ್ದರು. "ಇನ್ನೊಂದೂ ಹೆಣ್ಣೇ ಆದರೆ?’" ವಿನುತಾ ಅತ್ತೆಯ ಬಾಯಿ ಮುಚ್ಚಿಸುತ್ತಿದ್ದಳು. 

ರಾವ್ ತಮ್ಮ ಮೂವರು ಹೆಣ್ಣು ಮಕ್ಕಳಿಗೂ ಚೆನ್ನಾಗಿ ವಿದ್ಯಾಭ್ಯಾಸ ಕೊಡಿಸಿ, ಅವರೆಲ್ಲರೂ ಒಳ್ಳೆಯ ಉದ್ಯೋಗಗಳನ್ನು ಪಡೆದು , ತಮ್ಮ ಕಾಲ ಮೇಲೆ ತಾವು ನಿಂತುಕೊಳ್ಳುವಂತಾದಾಗ, ಬಂಧು ಬಳಗದವರ ಮುಂದೆ ಬೀಗಿದ್ದರು. ಇಬ್ಬರು ಹೆಣ್ಣು ಮಕ್ಕಳು ಸಾಫ್ಟ್ವೇರ್ ಇಂಜಿನಿಯರ್ಸ್ ಆಗಿ ತಮ್ಮ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಅಮೇರಿಕಾ ಸೇರಿದ್ದರೆ, ಇನ್ನೊಬ್ಬಳು ಮೆಡಿಕಲ್ ಗೆ ಸೇರಿ ಎಂ.ಬಿ.ಬಿ.ಎಸ್. ಆದ ಮೇಲೆ ಸ್ನಾತಕೋತ್ತರ ವಿದ್ಯಾಭ್ಯಾಸಕ್ಕೆ ಅಕ್ಕಂದಿರನ್ನೇ ಅನುಸರಿಸಿ ಅಮೇರಿಕದ ದಾರಿ ಹಿಡಿದಿದ್ದಳು. ಮೂವರು ಮಕ್ಕಳಲ್ಲಿ ಒಬ್ಬರಾದರೂ ತಮ್ಮ ಜೊತೆಯಲ್ಲಿ ಇರಲಿ ಎಂಬುದು ರಾವ್ ಅವರ ಆಸೆಯಾಗಿತ್ತು. ಆದರೆ ಅದಕ್ಕೆ ಯಾರೂ ತಯಾರಿರಲಿಲ್ಲ. ಇದರಿಂದ ಆನಂದ ರಾವ್ ಹಾಗೂ ವಿನುತಾ ಅವರಿಬ್ಬರಿಗೂ ಸ್ವಲ್ಪ ಬೇಸರವೇ ಆದರೂ ಮಕ್ಕಳ ಭವಿಷ್ಯ ಮುಖ್ಯವೆಂದುಕೊಂಡು ಸುಮ್ಮನಾದರು. ಆದರೆ ಆ ಮೂವರು ಹೆಣ್ಣು ಮಕ್ಕಳಿಗೂ ತಕ್ಕ ವರಗಳನ್ನು ಹುಡುಕಿ, ಮದುವೆ ಮಾಡಿ ಮುಗಿಸುವಷ್ಟರಲ್ಲಿ, ಇಬ್ಬರೂ ಹಣ್ಣುಗಾಯಿ ನೀರುಗಾಯಿ ಆಗಿ ಹೋದರು. ಹೆಣ್ಣು ಮಕ್ಕಳು ಇವರಿಬ್ಬರನ್ನೂ ಅಲ್ಲಿಗೇ ಬಂದು ಬಿಡಿ ಎಂದು ಹೇಳಿದರೂ, ಇವರಿಬ್ಬರೂ ಅದಕ್ಕೆ ಒಪ್ಪದೆ, ತಮ್ಮ ಮನೆ,ಬಾಗಿಲು, ವೃತ್ತಿಗಳನ್ನು ತೊರೆದು, ಪರದೇಶಿ ಗಳಾಗಲು ಇಷ್ಟಪಡಲಿಲ್ಲ.

"ತಮ್ಮ ಮನೆ ಬಾಗಿಲು ವೃತ್ತಿಯನ್ನು ತೊರೆದು ಕೊಂಡು ಅಮೇರಿಕಾದಲ್ಲಿ ಹೋಗಿ ಮಾಡುವುದೇನಿದೆ? " ಆನಂದರಾವ್ ಸುತರಾಂ ಒಪ್ಪಲಿಲ್ಲ. ಮಕ್ಕಳು ಕರೆದಾಗ ಹೋಗಿ ಬರುವುದು,. ವರ್ಷಕ್ಕೊಮ್ಮೆ ಮಕ್ಕಳು ಬಂದಾಗ ಅವರೊಂದಿಗೆ ಸಂತೋಷವಾಗಿ ಕಾಲ ಕಳೆಯುವುದು.ಇಷ್ಟು ಹೊರತು,ತಮ್ಮ ಮಕ್ಕಳು ತಮ್ಮ ಕಷ್ಟಕ್ಕೆ ಆಗುವರೆಂಬ ನಿರೀಕ್ಷೆ ಅವರಿಬ್ಬರಿಗೂ ಇರಲಿಲ್ಲ.

ತಮ್ಮ ರಕ್ತವನ್ನು ಹಂಚಿಕೊಂಡು ಹುಟ್ಟಿದ ಮೂವರು ಮಕ್ಕಳಿದ್ದರೂ,ಈಗ ಇವರಿಗೆ ಈ ಸುರೇಶನೇ ಆಧಾರ. ಸ್ವಂತ ಮಕ್ಕಳು ಎಷ್ಟೇ ಇದ್ದರೂ,ಕಷ್ಟದ ಸಮಯಕ್ಕೆ ಈ ಹುಡುಗನೇ ದಿಕ್ಕು.ಅಲ್ಲದೆ ಸುರೇಶ ತುಂಬಾ ನಂಬಿಕಸ್ಥ ಹುಡುಗ. ತಮ್ಮನ್ನು ತುಂಬಾ ಗೌರವಾದರಗಳಿಂದ ಕಾಣುತ್ತಾ, ಕಷ್ಟಕ್ಕೆ ಸಹಾಯಕನಾಗಿ ನಿಲ್ಲುತ್ತಾನೆ.ಯಾವ ಜನ್ಮದ ಋಣಾನುಬಂಧವೋ, 'ಎತ್ತಣ ಮಾಮರ ? ಎತ್ತಣ ಕೋಗಿಲೆ?' ಪಾಪ ತುಂಬಾ ಒಳ್ಳೆಯ ಹುಡುಗ. "

****

ಹಳೆಯ ನೆನಪುಗಳಲ್ಲಿ ಮುಳುಗಿದ್ದ ವಿನುತಾಳಿಗೆ ಸುರೇಶ ಬಂದು ಹತ್ತಿರ ಕುಳಿತಾಗಲೇ,ತಾನಿರುವುದು ನರ್ಸಿಂಗ್ ಹೋಂನಲ್ಲಿ ಎಂದು ಅರಿವಾದದ್ದು.

"ಅಮ್ಮ,ಈಗ ನಿಮ್ಮನ್ನು ಮನೆಗೆ ಬಿಟ್ಟು ಬರುತ್ತೀನಿ. ನಾವು ಇಲ್ಲಿ ಹೀಗೆ ಸುಮ್ಮನೆ ಕುಳಿತಿದ್ದರೆ ಪ್ರಯೋಜನವಿಲ್ಲ,ಡ್ಯೂಟಿ ಡಾಕ್ಟರ್ ಹನ್ನೊಂದು ಗಂಟೆಗೆ ಬರ್ತಾರಂತೆ. ಅಲ್ಲಿಯವರೆಗೂ ನೀವು ಸ್ವಲ್ಪ ಫ್ರೆಶ್ ಆಗಿ ರೆಸ್ಟ್ ತೆಗೆದುಕೊಂಡು ನನಗೆ ಫೋನ್ ಮಾಡಿ,ನಾನು ಬಂದು ಕರೆದುಕೊಂಡು ಬರ್ತೀನಿ.ಈಗ ಈ ಕಾಫಿ ತೆಗೆದುಕೊಳ್ಳಿ"ಸುರೇಶ ಕಾಫಿಯ ಲೋಟವನ್ನು ವಿನುತಾ ಮೇಡಂ ಮುಂದೆ ಹಿಡಿದಾಗ, ವಿನುತಾ ಳಿಗೆ ದುಃಖದ ಕಟ್ಟೆಯೊಡೆಯಿತು.

ಬಿಕ್ಕಿ ಬಿಕ್ಕಿ ಅಳುವುದಕ್ಕೆ ಪ್ರಾರಂಭಿಸಿದಾಗ ಸುರೇಶನೇ ಅವಳನ್ನು ಸಮಾಧಾನ ಮಾಡಿ, ಮನೆಗೆ ಕರೆದೊಯ್ದ.

*****

ಮಾರನೆಯ ದಿನ ಆನಂದ ರಾವ್ ರವರ ಬ್ಲಡ್ ರೆಪೋರ್ಟ್ ನಲ್ಲಿ ಕೋವಿಡ್ ಪಾಸಿಟಿವ್ ಬಂದಾಗ, ವಿನುತಾ ಳ ಜಂಗಾಬಲವೆ ಉಡುಗಿ ಹೋಯಿತು.

ವೈದ್ಯರ ಸಲಹೆಯಂತೆ ವಿನುತಾ ಹಾಗೂ ಸುರೇಶ್ ಇಬ್ಬರೂ ಕೋವಿಡ್ ಟೆಸ್ಟ್ ಗೆ ಒಳಗಾದರು. ಇವರಿಬ್ಬರೂ ರಿಪೋರ್ಟ್ ಬರುವವರೆಗೂ ಸುಮ್ಮನೇ ಕಾಯದೆ ವಿಧಿಯಿರಲಿಲ್ಲ. ಆಗೆಲ್ಲ ಸುರೇಶನೇ ವಿನುತಾಳ ಬೆಂಗಾವಲಾಗಿ ನಿಂತ. ದೇವರ ದಯೆಯಿಂದ ಇವರಿಬ್ಬರಿಗೂ ಕೋವಿಡ್ ನೆಗೆಟಿವ್ ಬಂದಿತ್ತು. ಆದರೂ ಅವರಿಬ್ಬರೂ ಆಸ್ಪತ್ರೆಯ ಬಳಿ ಸುಳಿಯುವಂತಿರಲಿಲ್ಲ. ಎಲ್ಲವನ್ನೂ ಫೋನ್ ಮೂಲಕವೇ ವಿಚಾರಿಸಿ ಕೊಳ್ಳಬೇಕಾಗಿತ್ತು. ತನ್ನ ದಣಿಗಳಿಗಾಗಿ, ಸುರೇಶ ಟೊಂಕ ಕಟ್ಟಿ ನಿಂತ .ಜೊತೆಗೆ ತನ್ನ ಹೆಂಡತಿಯನ್ನು ವಿನುತಾ ಮೇಡಂ ಜೊತೆಯಲ್ಲಿರುವಂತೆ ಹೇಳಿದ.

 ಹಾಸ್ಪಿಟಲ್ ನಿಂದ ಬರುವ ಫೋನ್ ಕಾಲ್ಗಳನ್ನು ಅಟೆಂಡ್ ಮಾಡುತ್ತಾ, ಮನೆಗೆ ಬೇಕಾದ ಸಾಮಾನು ಸರಂಜಾಮುಗಳನ್ನು ತಂದು ಕೊಡುತ್ತ, ಮಾಲೀಕರ ಮೂವರು ಹೆಣ್ಣು ಮಕ್ಕಳಿಗೆ ಫೋನ್ ಮೂಲಕ ಅವರ ಅಪ್ಪನ ಆರೋಗ್ಯದ ಬಗ್ಗೆ ಅಪ್ಡೇಟ್ ಮಾಡುತ್ತ, ಪಾದರಸದಂತೆ ಓಡಾಡುತ್ತಿರುವ ಸುರೇಶನನ್ನು ನೋಡಿ,ವಿನುತಾಳಿಗೆ ಹೃದಯ ತುಂಬಿ ಬರುತ್ತಿತ್ತು.

"ಯಾವ ಜನ್ಮದ ಋಣಾನುಬಂಧವೋ,ಈ ಹುಡುಗನದು ? ಇವನೊಬ್ಬ ಇರದಿದ್ದರೆ ನಮ್ಮ ಕಥೆ ಏನಾಗುತ್ತಿತ್ತೋ? ಸಮಯಕ್ಕಾದವನೇ ನೆಂಟ ಅಂತಾರೆ. ಈಗ ನಮಗೆ ಸುರೇಶನೇ ಸರ್ವಸ್ವ.ಅವನನ್ನು ಆ ದೇವರು ಚೆನ್ನಾಗಿ ಇಟ್ಟಿರಲಿ "ಎಂದು ಕೊಳ್ಳುತ್ತಿದ್ದಳು.

*****

ಒಂದು ವಾರದ ನಿರಂತರ ಸಾವು ಬದುಕಿನ ನಡುವಿನ ಹೋರಾಟದಲ್ಲಿ ಸೆಣಸಾಡಿದ ಆನಂದ ರಾವ್ ಕಡೆಗೂ ಪುನರ್ಜನ್ಮ ಪಡೆದುಕೊಂಡು , ಮನೆಗೆ ಹಿಂತಿರುಗಿದಾಗ, ವಿನುತಾ ನೆಮ್ಮದಿಯ ನಿಟ್ಟುಸಿರು ಬಿಟ್ಟಳು.

ಅಂದು ನರ್ಸಿಂಗ್ ಹೋಂ ನಿಂದ ಬಂದ ರಾವ್, ಸುರೇಶನನ್ನು ತಬ್ಬಿಕೊಂಡು

"ಯಾವ ಜನ್ಮದ ಋಣಾನುಬಂಧವಪ್ಪ ನಿನ್ನದು.? ನಮ್ಮವರೆನಿಸಿಕೊಂಡ ರಕ್ತ ಹಂಚಿಕೊಂಡು ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳೆಲ್ಲರೂ ದೂರವಿರುವಾಗ,ಆ ರಕ್ತ ಸಂಬಂಧವನ್ನೂ ಮೀರಿಸಿದ ನಿನ್ನ ಈ ಭಾವ ಸಂಬಂಧಕ್ಕೆ ನಾನೇನೆಂದು ಹೆಸರಿಡಲಿ? ನೀನು ನನ್ನ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಿಗೆ ಯಾವುದರಲ್ಲೂ ಕಡಿಮೆಯಿಲ್ಲ. ಇನ್ನು ಮೇಲೆ ಈ ನನ್ನ ಮನೆಯಲ್ಲಿ ನಿನಗೆ ಮಗನ ಸ್ಥಾನ ಕೊಡುತ್ತೇನೆ. ನಿನ್ನ ಈ ವಿಶ್ವಾಸ, ನಂಬಿಕೆ,ಪ್ರೀತಿ,ಬದ್ಧತೆ ನನ್ನನ್ನು ಮಂತ್ರಮುಗ್ಧನನ್ನಾಗಿಸಿದೆ.ಎಲ್ಲಿ ನನ್ನ ಹತ್ತಿರ ಬಾ ಮಗು" ಎನ್ನುತ್ತಾ, ಸುರೇಶನನ್ನು ಬಾಚಿ ಎದೆಗಪ್ಪಿ ಕೊಂಡಾಗ,ಅವರ ಕಣ್ಣುಗಳಿಂದ ಆನಂದ ಭಾಷ್ಪ ಇಳಿಯುತ್ತಿದ್ದರೆ,ಅಲ್ಲೇ ಹತ್ತಿರದಲ್ಲಿ ನಿಂತಿದ್ದ ವಿನುತಾ,ತನ್ನ ಸೀರೆಯ ಸೆರಗಿನಂಚಿನಿಂದ ತಮ್ಮ ಕಣ್ಣುಗಳನ್ನು ಒರೆಸಿ ಕೊಳ್ಳುತ್ತಿದ್ದರು. ಮಾಲೀಕ ಹಾಗೂ ನೌಕರನ ಇಂತಹ ಅಪರೂಪದ ಅನುಬಂಧವನ್ನು ಸುರೇಶನ ಹೆಂಡತಿ ಚಿತ್ರ ವಿಸ್ಮಯದಿಂದ ನೋಡುತ್ತಿದ್ದಳು.


Rate this content
Log in

Similar kannada story from Abstract