Vijaya Bharathi.A.S.

Abstract Classics Others

4.2  

Vijaya Bharathi.A.S.

Abstract Classics Others

ಪಾರ್ವತಿ

ಪಾರ್ವತಿ

2 mins
24


ಅವಳು ಪಾರ್ವತಿ .ಸಹನಾಮಯಿ. ಗಂಡನ ದೌರ್ಜನ್ಯ ಸಹಿಸಿ ಸಾಕಾಗಿ, ಕಡೆಗೆ ವಿಧಿಯಿಲ್ಲದೆ ಅವನ ಜೊತೆ ಜಗಳವಾಗಲು ಶುರು ಮಾಡಿದಳು.ಒಂದು ದಿನ ಗಂಡ ಹೆಂಡತಿಯರ ಮಧ್ಯೆ ಸಿಕ್ಕಾಪಟ್ಟೆ ಹಣಾಹಣಿ ಜಗಳವಾಗಿ, ತುಂಬಾ ನೊಂದು ಹೋದ ಪಾರು, ರಾತ್ರಿ ಹನ್ನೊಂದು ಗಂಟೆಯಲ್ಲೇ ತನ್ನ ಬ್ಯಾಗ್ ತಗಲಿಸಿಕೊಂಡು ಯಾರಿಗೂ ಗೊತ್ತಾಗದಂತೆ ಮನೆಯಿಂದ ಹೊರಬಿದ್ದಳು. ಗೇಟ್ ದಾಟಿ ಹೊರಗೆ ಬಂದು ಹತ್ತಾರು ಹೆಜ್ಜೆ ನಡೆದ ನಂತರ, ಅವಳ ಉದ್ವೇಗ ಸ್ವಲ್ಪ ಕಡಿಮೆಯಾಗಿ ಮುಂದಿನ ದಾರಿ ತಿಳಿಯದೆ ಒಂದು ಅಂಗಡಿಯ ಮುಂದೆ ನಿಂತಳು. ಆ ವೇಳೆಗೆ ನಡುರಾತ್ರಿ ಹನ್ನೆರಡರ ಸಮಯವಾಗಿತ್ತು. ನಗರದ ಜನ ಸಾಂದ್ರತೆ ನಿಧಾನವಾಗಿ ಕಡಿಮೆಯಾಗುತ್ತಾ ಹೋದಂತೆ, ರಸ್ತೆ ಸ್ವಲ್ಪ ತಣ್ಣಗಾಯಿತು. ಅವಳು ನಿಂತಿದ್ದ ಅಂಗಡಿಯ ಬಾಗಿಲು ಮುಚ್ಚಿಬಿಟ್ಟಾಗ ಅವಳಿಗೆ ನಿಜಕ್ಕೂ ಭಯವಾಗುತ್ತಿತ್ತು. ಕುಡುಕರ ಓಡಾಟ ಹೆಚ್ಚಾಗಿ, ಕೆಲವರು ಇವಳು ಸುತ್ತಲೂ ಓಡಾಡುತ್ತಾ ಬಾಯಿಗೆ ಬಂದಂತೆ ಮಾತನಾಡುತ್ತಾ ಹೋಗುವಾಗ, ಪಾರುವಿನ ಜಂಗಾಬಲ ಬಿಟ್ಟು ಹೋಯಿತು. 'ತಾನು ದುಡುಕಿ ಈ ನಡುರಾತ್ರಿ ಮನೆ ಬಿಟ್ಟು ಬರಬಾರದಾಗಿತ್ತೇನೋ?, ಈ ನಡು ರಾತ್ರಿ ನನ್ನ ಮುಂದಿನ ಪಯಣವೆಲ್ಲಿಗೆ? ;ಎಂದು ಯೋಚಿಸುತ್ತಾ ಒಬ್ಬಳೇ ಒಂಟಿಯಾಗಿ , ಹತ್ತಿರದ ಬಸ್ ಸ್ಟಾಪ್ ನಲ್ಲಿ ಕುಳಿತಳು. ರೆಲ್ವೇ ಸ್ಟೇಷನ್ ಗೆ ಹೋಗುವ ಕಡೆಯ ಟ್ರಿಪ್ ಸಿಟಿ ಬಸ್ ಬಂದು ನಿಂತಾಗ, ಏನು ಮಾಡಲೂ ತೋಚದೇ ಆ ಬಸ್ ಏರಿದಳು. ಮನೆಗೆ ಈಗ ಹಿಂತಿರುಗಿ ಹೋದರೆ ತನ್ನ ಗಂಡನಿಗೆ ಬುದ್ಧಿ ಕಲಿಸಿದಂತಾಗುವುದಿಲ್ಲವೆಂದು ಮನಸ್ಸಿನಲ್ಲಿ ಅವನ ಮೇಲೆ ಕುದಿಯುತ್ತಾ , ರೇಲ್ವೆ ಸ್ಟೇಷನ್ ಗೆ ಟಿಕೆಟ್ ತೆಗೆದುಕೊಂಡಳು.

ಸಿಟಿ ಬಸ್ ನಿಂದ ಇಳಿದು ಸ್ಟೇಷನ್ ಒಳಗೆ ಹೋದಾಗ ಅವಳಿಗೆಷ್ಟೋ ಧೈರ್ಯವಾಯಿತು. ಸ್ಟೇಷನ್ ಪ್ರಯಾಣಿಕರಿಂದ ಗಿಜಿಗುಟ್ಟುತ್ತಿತ್ತು. ಆದರೆ ತನ್ನ ಪಯಣ ಎತ್ತಿ ಕಡೆ ಎಂದು ಅವಳಿಗೆ ಇನ್ನೂ ಗೊತ್ತಾಗಿಲ್ಲ. ಸುಮ್ಮನೆ ಹೋಗಿ ಬರುವವರನ್ನು ನೋಡುತ್ತಾ ಬೆಂಚ್ ಮೇಲೆ ಕುಳಿತಳು. ಆ ವೇಳೆಗೆ ಎರಡು ಗಂಟೆ ರಾತ್ರಿ. ಕಡೆಗೆ ನಾಲ್ಕು ಗಂಟೆಗೆ ಶಿರಡಿಯ ಕಡೆ ಹೊರಡುವ ಟ್ರೈನ್ ಗೆ ಟಿಕೆಟ್ ಪಡೆದು ಟ್ರೈನ್ ಏರಿ ಕಿಟಕಿಯ ಬಳಿ ಕುಳಿತು, ಹೊರಗಿನ ಚಾಯ್ ಮಾರುವ ಹುಡುಗರು, ಕಾಫಿ ಕೆಟಲ್ ಹಿಡಿದು, ಚಾಯ ಚಾಯ,ಕಾಫಿ,ಕಾಫಿ‌ ಎಂದು ಕೂಗುತ್ತಾ ಓಡಾಡುತ್ತಿರುವ ವ್ಯಾಪಾರಿಗಳನ್ನು ನೋಡುತ್ತಿದ್ದಳು.

ಅವಳಿಗೂ ಒಂದು ಕಾಫಿ ಕುಡಿಯಬೇಕೆಂದೆನಿಸಿ ಒಂದು ಕಾಫಿ ತೆಗೆದುಕೊಂಡು ಕುಡಿದಳು. ಹಸಿರು ನಿಶಾನೆ ತೋರಿದಾಗ, ಟ್ರೈನ್ ಮುಂದಕ್ಕೆ ಚಲಿಸಿತು. ಆಗ ಪ್ಲಾಟ್ ಫಾರಂ ನ ಹೊರಗಡೆ ತನ್ನನ್ನು ಹುಡುಕುತ್ತಾ ಇದ್ದ ಗಂಡನ ಮುಖ ಕಾಣಿಸಿದಂತಾಯಿತು.

ದಿನದಿನವೂ ತನ್ನನ್ನು ದುಡ್ಡಿಗಾಗಿ ಪೀಡಿಸುತ್ತಾ,ತನ್ನ ತಂದೆಯ ಆಸ್ತಿಯಲ್ಲಿ ಪಾಲು ಕೇಳುವಂತೆ ಒತ್ತಡ ತರುತ್ತಿದ್ದ ಆ ದುರಾಸೆಯ ಗಂಡನ ಜೊತೆಗೆ ಜಗಳವಾಡುತ್ತಾ ಕಳೆಯುವ ಅವನೊಟ್ಟಿಗಿನ ಬದುಕು ಅವಳಿಗೆ ಸಾಕೆನಿಸಿತ್ತು. ಅವನು ಕಾಣಿಸಿದರೂ ಕಾಣದಂತೆ ಇದ್ದು ಬಿಟ್ಟಳು. ಅವಳ ನಡುರಾತ್ರಿಯ ಒಂಟಿ ಪಯಣ ಸಾಯಿನಾಥನ ಸನ್ನಿಧಿಯ ಕಡೆಗೆ ಸಾಗಿತು.‌ ಶಿರಡಿನಾಥನ ಮೇಲೆ ಭಾರ ಹಾಕಿ ತನ್ನ ಪಯಣವನ್ನು ಮುಂದುವರಿಸಿದಳು.


Rate this content
Log in

Similar kannada story from Abstract