PRASANNA KUMAR

Abstract Classics Others

4.5  

PRASANNA KUMAR

Abstract Classics Others

ಫಜೀತಿ

ಫಜೀತಿ

5 mins
434


                             

                                       

       ಕೆಲಸದ ಸಮಯ ಮುಗಿದು ಸಂಜೆ 5-30 ಆಗಿದೆ. ಗುಡುಗು ಸಿಡಿಲಿನ ಶಬ್ದ ಕಿವಿಗಡಚಿಕ್ಕಿದೆ. ಭಾರವಾದ ಮನಸ್ಸಿನಿಂದ ಪರೀಕ್ಷಿತ ಕಂಪ್ಯೂಟರನ್ನು ಷಟ್ ಡೌನ್ ಮಾಡಿದ. ನಂತರ ಮನೆಯ ಕಡೆಗೆ ಹೊರಡಲು ಅನುವಾದ. ಹೊರಗೆ ಬಂದು ನೋಡಿದರೆ ಮಳೆ ಜೋರಾಗಿದೆ. “ಅಯ್ಯೋ ದೇವರೆ ನಿನ್ನ ಕರುಣೆಗೆ ದೊಡ್ಡ ಥ್ಯಾಂಕ್ಸ್. ಬಗ್ಗಿದವರ ಮೇಲೆ ಎಷ್ಟು ಭಾರ ಹಾಕ್ತೀಯೋ ಮಾರಾಯ . “ ಆಯಾಸ ಆಗಿದೆ ಮನೆಗೆ ಹೋಗಿ ರೆಸ್ಟ್ ತಗೋಳ್ಳೋಣ ಅಂದ್ರೆ ಈ ಮಳೆ ಬೇರೆ. ಸ್ವಲ್ಪ ನಿಂತ್ಮೇಲೆ ಹೋಗ್ಬೇಕು ಅಂದು ಕೊಂಡ ಮನಸ್ಸಿನಲ್ಲಿ. 


       ಮಳೆ ಸ್ವಲ್ಪ ಕಡಿಮೆಯಾಯ್ತು ಆದರೂ ಸಹ ರೈನ್ ಕೋಟ್ ಹಾಕಿಕೊಂಡು ಹೀರೋ ಹೋಂಡಾ ಗಾಡಿಯಲ್ಲಿ ಸಾಗಿದ. ಹೋಗುವಾಗ ಅಂದು ಕೊಳ್ಳುತ್ತಾನೆ ನಾನು ಸವಾರಿ ಮಾಡುತ್ತಿರುವುದು ಹೀರೋ ಹೋಂಡಾ ಯಾಮಾರಿದರೆ ಹೊಂಡ. ಎಚ್ಚರಿಕೆ ಬಹಳ ಮುಖ್ಯ. ಗಾಡಿ ಚಲಾಯಿಸುವಾಗ ತಲೆಯಲ್ಲಿ ಬೇರೆ ಯೋಚನೆಗಳು ಬರಬಾರದು ಎಂದು ಕೊಂಡು ದಾರಿಯ ಕಡೆ ಗಮನ ಕೊಟ್ಟ. ಸ್ವಲ್ಪ ದೂರ ಹೋದ ಕೂಡಲೇ ಇದ್ದಕ್ಕಿದ್ದ ಹಾಗೆ ಟುಸ್ಸ್… ಎಂದು ಗಾಡಿ ನಿಂತಿತು. ನೋಡಿದರೆ ಟೈರ್ ಪಂಕ್ಚರ್ . ಬೇರೆ ದಾರಿ ಕಾಣದೆ ಗಾಡಿಯನ್ನು ಸ್ವಲ್ಪದೂರ ತಳ್ಳಿಕೊಂಡು ಹೋಗುತ್ತಾನೆ ದಾರಿಯಲ್ಲಿ ಅವನಿಗೆ ಅನುಕೂಲ ಕಾಣಲಿಲ್ಲ. ಪುಣ್ಯಕ್ಕೆ ಯಡೆಯೂರು ಸರ್ಕಲ್ ಗೆ ಬಂದ ಪರಿಚಯಸ್ಥರ ಮನೆಯ ಮುಂದೆ ಗಾಡಿಯನ್ನು ನಿಲ್ಲಿಸಿ ತಾನು ಆಟೋ ಹಿಡಿದ. ಆಟೋ ಚಾಲಕ ಡಬಲ್ ಮೀಟರ್ ಚಾರ್ಜ್ ಸರ್ ಎಂದ. ಬೇರೆ ದಾರಿಯಿಲ್ಲದೆ ಕೆಂಗೇರಿಯ ಮನೆಯ ಕಡೆಗೆ ಸಾಗಿದ. ಬರುವ ಪಗಾರ ಒಂದು ಪಟ್ಟಾದರೆ ಬರುವ ಖರ್ಚು ಹೀಗೆ ಎಂದು ಕೊಂಡ. ಮೊದಲೇ ಮನಸ್ಸು ಸೊರಗಿದೆ. ಆಟೋದವನು “ ವಿಧಿ ವಿಪರೀತ ವಿಧಿ ಆಘಾತ ವಿಧಿ ವಿಲಾಸವೇ ನೀನೇನಃ “ ಎನ್ನುವ ಹಾಡನ್ನು ಹಾಕಿದ. ಯಾಕಪ್ಪಾ ನಿನಗೆ ಬೇರೆ ಯಾವ ಹಾಡೂ ಸಿಗಲಿಲ್ವ ಎಂದ ಪರೀಕ್ಷಿತ. ಅವನು ಮತ್ತೆ ಇನ್ನೊಂದು ಹಾಡನ್ನು ಹಾಕಿದ “ ಯಾರೋ ಗೀಚಿಹೋದ ಹಾಳು ಹಣೆಯ ಬರಹ “ಅಯ್ಯೋ ಯಾವ ಹಾಡೂ ಬೇಡಪ್ಪ ಸಾಕು ಸುಮ್ಮನೆ ಹೋಗೋಣ ಎಂದ. ಆಟೋ ಕೆಂಗೇರಿಯ ಮನೆ ಕಡೆಗೆ ಬಂತು, ಸಾರ್ 575 ಆಗತ್ತೆ ಗಾಡಿ ಖಾಲಿ ಹೋಗತ್ತೆ ನಖರಾ ಮಾಡದೆ 700 ರೂಪಾಯಿ ಕೊಡಿ ಸರ್ ಎಂದ . 


       ವಿಧಿ ಇಲ್ಲದೆ ಹಣ ಕೊಟ್ಟು ಮನೆಯ ಕಾಲಿಂಗ್ ಬೆಲ್ ಬಟನ್ ಒತ್ತಿದ . ಬಾಗಿಲು ತೆರೆಯಲಿಲ್ಲ. ಶೈಲೂ .. ಶೈಲೂ.. ಎಂದ ಪಕ್ಕದ ಮನೆಯವರು ಊರಿನಲ್ಲಿ ಹಬ್ಬವಂತೆ ಅದಕ್ಕೆ ಹೋಗಿದ್ದಾರೆ. ನಾಳೆ ನೀವೂ ಹೊರಡ ಬೇಕಂತೆ ಎಂದು ಬೀಗದ ಕೈ ಕೊಟ್ಟರು. ಸಪ್ಪೆ ಮುಖದಲ್ಲಿ ಮನೆಯ ಬಾಗಿಲನ್ನು ತೆರೆದ. ಗಂಟಲು ಒಣಗಿದೆ, ಸುಸ್ತಾಗಿದೆ ನೀರು ಕೊಡುವವರಿಲ್ಲ ಎಂದುಕೊಂಡು ಕೈಕಾಲುತೊಳೆದು ಕೊಂಡ ಅಡುಗೆ ಮನೆಗೆ ಹೋದವನೆ ನೀರು ಕುಡಿದ . ಗಟ್ಟಿಹಾಲಿಗೆ ನೆಸ್ ಕೆಫ಼ೆ ಹಾಕಿಕೊಂಡು ಕುಡಿಯೋಣ ಎಂದು ಹಾಲಿನ ಬಟ್ಟಲನ್ನು ಒಲೆಯ ಮೇಲಿಟ್ಟ ಹೊತ್ತಿಸಿದ ಕ್ಷಣ ಮಾತ್ರದಲ್ಲೇ ಹಾಲು ಒಡೆದು ಹೋಯ್ತು. ಅಯ್ಯೋ ಎಂದು ಕೊಂಡ. 


      ಸುಮಾರು ಎಂಟರ ಹೊತ್ತಿಗೆ ಸುಲಭದ ತಿಂಡಿ ಸ್ವಲ್ಪ ಉಪ್ಪಿಟ್ಟನ್ನು ಮಾಡಿಕೊಂಡು ಬಿಸಿಬಿಸಿಯಾಗಿ ತಿಂದ. ಬಳಿಕ ಮನೆಯ ಪಕ್ಕದಲ್ಲಿದ್ದ ಭಟ್ಟರ ಕೆಫ಼ೆಯಲ್ಲಿ ಕಾಫ಼ಿ ಕುಡಿದ. ಮತ್ತೆ ಮನೆಗೆ ಬಂದವನು ನಾಳೆ ಊರಿಗೆ ಹೋದರೆ ಎರಡು ದಿನಗಳ ನನ್ನ ಕೆಲಸ ಯಾರು ಮಾಡುತ್ತಾರೆ. ಅಲ್ಲಿಗೆ ಹೋದರೆ ತಿನ್ನುವುದು ಮತ್ತೆ ಬೇಡದ ಮಾತುಗಳನ್ನು ಆಡುವುದು ಕಾಲಹರಣ ಮಾಡುವ ಬದಲು ಕೆಲಸಕ್ಕೆ ಹೋಗುವುದೇ ಒಳ್ಳೆಯದಲ್ಲವೆ ಎಂದು ಮಲಗಿಕೊಂಡ . ನಿದ್ರೆ ಬಾರದೆ ತಲೆಯಲ್ಲಿ ಹಲವಾರು ವಿಚಾರಗಳು ಕೊರೆಯ ತೊಡಗಿದವು.


      ಮೊಬೈಲ್ ರಿಂಗಣಿಸಿತು ಓ ಸತಿ ಶಿರೋಮಣಿ ಶೈಲೂ ಎಂದವನೆ ಹೇಳು ಎಂದ. ರೀ ರಜೆ ಹಾಕಿ ಬನ್ನಿ . ಎರಡು ದಿನಗಳ ಮಟ್ಟಿಗೆ ನಂತರ ವಾಪಸ್ ನಾನೂ ಬಂದು ಬಿಡುತ್ತೇನೆ . ಊರ ಹಬ್ಬಕ್ಕೆ ಬರುವಿರೆಂದು ನಿಮ್ಮ ನಿರೀಕ್ಷೆ ಮಾಡುತ್ತಿದ್ದಾರೆ. ಮರೆಯಬೇಡಿ ನಾನು ಫ಼ೋನ್ ಮಾಡ್ದೆ ಅಂತ ಹೇಳಬೇಡಿ ಮರೀದೀರಾ ಬನ್ನಿ ಮರೆಯದೆ ಬೆಳಿಗ್ಗೆ 10 ರ ಸಮಯಕ್ಕೆ ಹಾಜರಾಗಿ ಫ಼ೋನ್ ಇಡ್ತೇನೆ, ಕಟ್ ಆಯ್ತು. ಬಲುಜಾಣೆ ನನಗೆ ಒಂದು ಮಾತು ಆಡೋಕೆ ಅವಕಾಶ ಕೊಡ್ಲಿಲ್ಲ. ಹೌದು ಇವಳು ಹೀಗ್ ಮಾತಾಡ್ತಳಲ್ಲ ಒಂದು ವೇಳೆ ಬಾಯಿಗೆ ಪ್ಲಾಸ್ಟರ್ ಹಾಕಿದ್ರೆ ಅದಕ್ಕೂ ತೂತು ಬೀಳತ್ತೋ ಏನೋ ಇರಲಿ ನಾಳೆ ಸಿಎಲ್ ಗೆ ಅಪ್ಲೈ ಮಾಡಿ ಹಾಗೆ ಗಾಡಿ ಸರಿ ಮಾಡಿಸಿಕೊಂಡು ಊರಿಗೆ ಹೋದರಾಯ್ತು ಎಂದು ಕೊಂಡು ಮಲಗಿದ. ಪವಡಿಸು ಪರಮಾತ್ಮ ಎಂದು ಹಾಡಿಕೊಳ್ಳುತ್ತಾ ಹಾಗೆಯೇ ನಿದ್ರೆ ಮಾಡಿದ. ಮೈಕೈ ನೊಂದು ಸುಸ್ತಾಗಿದ್ದ ಅವನನ್ನು ನಿದ್ರಾದೇವಿ ಜೋಗುಳ ಹಾಡುತ್ತಾ ತನ್ನ ಮಡಿಲಿನಲ್ಲಿ ಮಲಗಿಸಿ ಕೊಂಡಳು. ಮಗು ನಿದ್ರೆ ಮಾಡುವಂತೆ ಪರೀಕ್ಷಿತ ನಿದ್ರೆ ಮಾಡಿದ. 


        ಬೆಳಗಾಯ್ತು 4 ಗಂಟೆಗೆ ಅಲಾರಾಂ ಎಚ್ಚರಿಸಿತು. ಸುಸ್ತಾಗಿದ್ದವನು ಗಡಿಯಾರದ ತಲೆಯ ಮೇಲೆ ಮಟ್ಟಿ ಮತ್ತೆ ಮಲಗಿದನು ಬಳಿಕ ಎಚ್ಚರವಾದಾಗ ಸಮಯ 7 ಗಂಟೆ ಆಗಿತ್ತು. ಲಗುಬಗೆಯಿಂದ ರೆಡಿಯಾದವನು ಬಿಎಂಟಿಸಿ ಬಸ್ಸಿನಲ್ಲಿ ಬನಶಂಕರಿಯವರೆಗೆ ಬಂದನು. ಅಲ್ಲಿಂದ ಪಾಕಶಾಲೆಗೆ ಹೋದ. ತಿಂಡಿ ಕಾಫ಼ಿ ಮುಗಿಸಿದ.    

       ಯಡೆಯೂರಿನಲ್ಲಿ ಪರಿಚಯಸ್ಥರ ಮನೆಯ ಮುಂದೆ ನಿಲ್ಲಿಸಿದ್ದ ಗಾಡಿಯನ್ನು ರಿಪೇರಿ ಮಾಡಿಸಿಕೊಂಡ. ಅಲ್ಲಿಂದ ಆಫ಼ೀಸಿಗೆ ಹೋದವನು ಅಧಿಕಾರಿಯ ಟೇಬಲ್ ಮೇಲೆ ರಜೆ ಪತ್ರವನ್ನು ಇಡಲು ಹೋದ. ಹೋದವನೆ ಈ ರೀತಿ ಮಾಡಿದರೆ ಬಂಬಡಾ ಬಜಾಯಿಸಿ ಬಿಟ್ರೆ ಏನ್ ಮಾಡೋದು. ಆ ಯಪ್ಪ ಬರುವ ತನಕ ನನ್ನ ಕ್ಯಾಬಿನ್ ನಲ್ಲಿ ಕೂತಿರುತ್ತೇನೆ ಎಂದು ಮಹಡಿ ಹತ್ತಿದ. ದುರಾದೃಷ್ಟವಶಾತ್ ಆ ದಿನ ಮ್ಯಾನೇಜರ್ ಬರುವುದಿಲ್ಲ ಎಂದು ತಿಳಿಸಿ ಹೋಗಿದ್ದರು ಅದರ ಅರಿವು ಪರೀಕ್ಷಿತನಿಗೆ ಇರಲಿಲ್ಲ ಪಾಪ ಹೆಜ್ಜೆ ಹೆಜ್ಜೆಗೂ ಅವನಿಗೆ ಪರೀಕ್ಷೆಯೆ. ಸುಮ್ಮನೆ ಕೂತಿದ್ದಾನೆ. ತನ್ನ ಎದುರಿಗಿನ ಗೋಡೆಯ ಮೇಲೆ ರಮಣೀಯವಾದ ನಿಸರ್ಗದ ಚಿತ್ತಾರವಿತ್ತು. ಅದನ್ನು ನೋಡಿದವನೇ ಬೇಂದ್ರೆ ಮಾಸ್ತರ್ ರಚನೆಯ “ ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕ “ ಎಂದು ಗುನುಗುತ್ತಿದ್ದ. ಇದ್ದಕ್ಕಿದ್ದ ಹಾಗೆ ಅಟೆಂಡರ್ ಆಫ಼ೀಸಿನಲ್ಲಿ ಯಾರೂ ಇಲ್ಲ , ಈ ಬಾಗಿಲನ್ನು ಮಾತ್ರ ಹಾಕೇ ಇಲ್ಲ ಎಂದವನು ಹೊರಗಡೆ ಚಿಲಕ ಹಾಕಿಕೊಂಡು ಹೋದ. ಚಿಲಕ ಹಾಕಿದ ಸದ್ದು ಕೇಳಿದ್ದೇ ತಡ ಪರೀಕ್ಷಿತ ಜೋರಾಗಿ ಕಿರುಚಿಕೊಂಡ -’ ಲೋ ಸುಲ್ತಾನಾ ಬಾಗಿಲು ತೆಗೆಯೋ ಮಾರಾಯ ಅಂದ ಇವನ ಮಾತು ಎಲ್ಲಿ ಕೇಳಬೇಕು ಸುಲ್ತಾನನಿಗೆ, ಅವನ ಲೋಕ ಅವನಿಗೆ, - ‘ ಚಲಾ ಜಾತಾ ಹೂ… ಅಕೆಲಿಯೇ ಮೇ ‘ ಅಂಥ ಹಾಡ್ಕೊಂಡ್ ಹೊರಟೇ ಬಿಟ್ಟ . ಈಗ ಪರೀಕ್ಷಿತನ ತಲೆಯ ಮೇಲೆ ದೊಡ್ಡ ಬೆಟ್ಟ ಬಿದ್ದಂತಾಯಿತು.


       ಏನಪ್ಪ ಮಾಡೋದು ಈಗ, ಅಷ್ಟು ಜೋರಾಗಿ ಕೂಗಿದ್ರು ಸುಲ್ತಾನಾ ಹೋಗಿಯೇ ಬಿಟ್ಟ..  ಗೊತ್ತಿರುವವರ ಹೆಸರನ್ನು ಕೂಗಿದ ಆದರೆ ಕೇಳಿಸಿಕೊಳ್ಳುವವರು ಯಾರು? ಕೆಳಗಿನ ಮಹಡಿಯಲ್ಲಿ ಹೋಟೆಲಿಗೆ ಹೋಗಲು ಮಾತನಾಡಿಕೊಳ್ಳುತ್ತಿದ್ದ ಮಹಿಳಾ ಸಹೋದ್ಯೋಗಿಗಳಿಗೆ ಇವನ ಮಾತು ಸುತಾರಾಂ ಕೇಳಿಸಲಿಲ್ಲ. ಖುಷಿಯಿಂದ ಹೊರಟು ಹೋದರು. ಸ್ವಲ್ಪ ಗಾಭರಿಯಾದ ಇವನು ಬೆವರಿದನು ಧೈರ್ಯಗೆಡಲಿಲ್ಲ. ಬಾಗಿಲಿನ ಸ್ಕ್ರೂಗಳನ್ನು ತೆಗೆಯಲು ಪ್ರಯತ್ನಪಟ್ಟ. ಗಾಜನ್ನು ಒಡೆಯುವುದು ಬೇಡ ಒಮ್ಮೆ ಕಿಟಕಿಯ ಬಳಿ ನೋಡಿದರೆ ಯಾರಾದರೂ ಸಹೋದ್ಯೋಗಿ ಅಥವಾ ಸೆಕ್ಯುರಿಟಿ ಕಂಡರೆ ಜೋರುದನಿಯಲ್ಲಿ ಕೂಗೋಣ ಎಂದು ಕಿಟಕಿಯನ್ನು ತೆರೆದು ನೋಡುತ್ತಾನೆ ಅಲ್ಲಿ ಯಾರೂ ಕಾಣುತ್ತಿಲ್ಲ. ಕಿಟಕಿಯಿಂದ ಕೆಳಗೆ ನೋಡಿದರೆ ಪರಿಚಯವಿರದ ಹೆಂಗಸರು ನಿಂತಿದ್ದಾರೆ. ಅವರಿಗೆ ಸಂಜ್ಞೆಯ ಮೂಲಕ ಹೇಳಿದರೆ ಅನರ್ಥವಾಗಿ ಅದೊಂದು ರಗಳೆಯಾಗುವುದು ಖಂಡಿತ ನನ್ನ ಕಷ್ಟ ನನಗೆ. 


      ಏನಪ್ಪ ಮಾಡೋದು. ಸಿ ಎಲ್ ಗೆ ಬರೆದು ಕೊಟ್ಟು 10 ಗಂಟೆಗೆ ಹೊರಡೋಣ ಎಂದು ಪ್ಲ್ಯಾನ್ ಮಾಡಿದ್ದೆ. ಎಲ್ಲಾ ಉಲ್ಟಾ ಆಯ್ತು. ಈಗ ನಾಲ್ಕು ಗಂಟೆ ಆಗಿದೆ. ಅಯ್ಯೋ ದೇವರೆ ಈಗೇನ್ಮಾಡ್ಲಿ. ಧೈರ್ಯಗೆಟ್ಟಿಲ್ಲ ಭಯ ಪಟ್ಟಿಲ್ಲ ಇನ್ನೊಂದು ಸಲ ಕಿಟಕಿಯ ಕಡೆ ನೋಡಿ ಯಾರನ್ನಾದರೂ ಕರೆಯಲು ಪ್ರಯತ್ನಿಸೋಣ ಇಲ್ಲದಿದ್ದರೆ ಬಾಗಿಲಿನ ಗಾಜಿನ ಭಾಗವನ್ನು ಒಡೆಯೋದೇ ಎಂದು ಕಿಟಕಿಯಿಂದ ಹೊರಗೆ ನೋಡಿದ. ಅದೃಷ್ಟಕ್ಕೆ ಪರಿಚಯವಿದ್ದ ಒಬ್ಬ ಸೆಕ್ಯುರಿಟಿ ಕಂಡ ಅವನನ್ನು ವೀರಣ್ಣ ಎಂದು ಜೋರಾಗಿ ಕೂಗುತ್ತಾನೆ. ಐದಾರು ಬಾರಿ ಕೂಗಿದ ನಂತರ ಕೊನೆಗೂ ಅವನು ತಲೆಯೆತ್ತಿ ಮೇಲೆ ನೋಡಿದಾಗ ಕೊನೆಯ ಮಹಡಿಯಲ್ಲಿ ಬಾಗಿಲ ಚಿಲಕ ಹಾಕಿರುವುದನ್ನು ಹೇಳುತ್ತಾನೆ. ಆಗ ಅವನು ಬಂದೆ ಸಾರ್ ಎಂದು ಸ್ವಾಗತಕಾರಿಣಿ ( ರಿಸೆಪ್ಷನಿಸ್ಟ್) ಗೆ ವಿಷಯ ತಿಳಿಸಿ ಬರುತ್ತಾನೆ. ಬಂದವನು ಚಿಲಕವನ್ನು ತೆಗೆದು ಸಾರ್ ಯಾಕ್ ಹೀಗ್ಮಾಡಿದ್ರಿ ಫ಼ೋನ್ ಮಾಡ್ಬಾರ್‍ದೆ ಎಂದಾಗ. ಅಯ್ಯಾ ಫ಼ೋನ್ ಸ್ವಿಚ್ ಆಫ಼್ ಅಗಿದೆ. ಚಾರ್ಚ್ ಮಾಡೋಕೆ ಈ ದಿನ ಸಂಜೆ 6 ರವರೆಗೆ ಕರೆಂಟ್ ಇರಲ್ಲ ಎಂದು ಪೇಪರಲ್ಲಿ ನ್ಯೂಸ್ ಇತ್ತು. ಅದರಂತೆ ಕರೆಂಟ್ ಇಲ್ಲ. ನನ್ನ ದುರಾದೃಷ್ಟಕ್ಕೆ ಜನರೇಟರ್ ಆನ್ ಆಗಿಲ್ಲ ಏನ್ಮಾಡಬೇಕಿತ್ತು ಹೇಳು ಎಂದಾಗ, ವೀರಣ್ಣ - ‘ ಹೌದು ಸರ್ ಇವತ್ತು ಜನರೇಟರ್ ಕೆಟ್ಟುಹೋಗಿದೆ ರಿಪೇರಿ ಆಗ್ಬೇಕು. ಬನ್ನಿ ಸರ್ ಹೋಗೋಣ ಎಂದ ಅವನ ಗೌರವದ ಮಾತಿಗೆ 20 ರೂಗಳನ್ನು ಕೊಟ್ಟು ಕಾಫ಼ಿ ಕುಡಿಯಿರಿ ವೀರಣ್ಣ ಎಂದವನು ನಡೆದ ಘಟನೆಯನ್ನು ವಿವರಿಸುತ್ತಾ ಆಫ಼ೀಸಿನಿಂದ ಹೊರಕ್ಕೆ ಬಂದ. ಎಲ್ಲರಿಗೂ ಆಶ್ಚರ್ಯ ಸರ್ ! 10 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ಲಾಕ್ ಆಗಿದ್ರಲ್ಲ ಏನ್ಸರ್ ಇದು.

ಲಾಕ್ ಮಾಡಿದ್ದು ನಮ್ಮವರೇ - ಚಲಾ ಜಾತಾ ಹೂ ಅಂತ ಹಾಡ್ತಾ ಬಂದ್ಬಿಟ್ರು. ಎಲ್ರೂಗು ಥ್ಯಾಂಕ್ಸ್ . 

ಥ್ಯಾಂಕ್ಸ್ ವೀರಣ್ಣ ಎಂದವನು ಗಡಿಯಾರ ನೋಡಿದ ಗಂಟೆ 5-30 ಆಗಿತ್ತು. 


          ಬೆಳಿಗ್ಗೆ 10 ರ ಸಮಯಕ್ಕೆ ಹಾಜರಾಗಿ ಎಂದವಳಿಗೆ ನನಗೆ 5 ಗಂಟೆಗೆ ಬಿಡುಗಡೆ ಆಯ್ತು ಎಂದು ಹೇಳಿದರೆ ನಂಬುವಳೇ? ಅಥವಾ ನಗುವಳೇ? ಇಲ್ಲವೇ ಕೋಪಿಸಿಕೊಳ್ಳುವಳೇ ಒಂದು ಸಲ ಫ಼ೋನ್ ಮಾಡಿ ನಾಳೆ ಬೆಳಿಗ್ಗೆ ಬರುತ್ತೇನೆ ಎಂದರಾಯಿತು ಅದರೆ ಫ಼ೋನ್ ಚಾರ್ಜ್ ಆಗಬೇಕು. ಮನೆಗೆ ಹೋಗಿ ಫ಼ೋನ್ ಮಾಡೋಣ ಒಂದು ದಿನದ ಸಿಎಲ್ ದಂಡವಾಯ್ತು ಎಂದುಕೊಂಡು ಗಾಡಿ ಹತ್ತಿದ. ಗಾಡಿಯೂ ಸಹ ಅವನ ಹಣೆಬರಹಕ್ಕೆ ನಸುನಗುತಾ ನಿನಗೆ ನಾನೇ ದಿಕ್ಕು ನಡಿ ಎಂದು ಹೇಳುತ್ತಿತ್ತು. ಕೊನೆಗೂ ಮನೆತಲುಪಿದ ಪರೀಕ್ಷಿತ ಒಳಗೆ ಹೋಗಿ ಲ್ಯಾಂಡ್ ಲೈನ್ ಮೂಲಕ ಮಡದಿಯ ಮೊಬೈಲ್ ಗೆ ಕರೆ ಮಾಡಿದ ಫ಼ೋನ್ ರಿಂಗಣಿಸುತ್ತಿದೆ ಉತ್ತರವಿಲ್ಲ. ಸುಧಾರಿಸಿಕೊಂಡು ನೋಡೋಣ ಎಂದು ಊಟವಿರದ ಪರೀಕ್ಷಿತ ಪಕ್ಕದಲ್ಲಿನ ಭಟ್ಟರ ಹೋಟೆಲಿಗೆ ಹೋಗಲು ಮುಂದಾದ ಆಗ ದೂರವಾಣಿ ಕರೆಯಿತು, ಹಲೋ ಎಂದ , ಹಲೋ ಶೈಲೂ ಎಂದ ಹೇಳುವ ಇವನ ಮಾತು ಎಲ್ಲಿ? ಕೇಳಿದ್ದೆಲ್ಲಾ ಅವಳ ಮಾತೆ ಕೊನೆಗೆ ಹೇಳಿದ ಸರಿ ನಾಳೆ ಖಂಡಿತ ಬರುತ್ತೇನೆ. ಅವನು ಪಟ್ಟ ಪಾಡನ್ನು ಭಟ್ಟರ ಹೋಟೆಲಲ್ಲಿ ಹೊಟ್ಟೆಗೆ ಹಾಕಿಕೊಳ್ಳುತ್ತಾ ಅವರ ಹತ್ತಿರ ಹಂಚಿಕೊಂಡರಾಯಿತು ಎಂದು ಹೋದ. ಹೋದಕೂಡಲೇ ಭಟ್ಟರು ಹೇಳಿದರು ಬನ್ನಿ ಮಾರಾಯ್ರೆ ಈಗ ನಿಮಗೆ ತಿನ್ನಲು ಮೊಸರನ್ನ ಮಾತ್ರ ಉಂಟು ಆಗುತ್ತದಲ್ಲವೋ ಎಂದರು. ಆಗಲೇ ಬೇಕು ಭಟ್ಟರೆ ಎಂದು ತಿನ್ನುತ್ತಾ ಮಾತಿಗಿಳಿದ ಭಟ್ಟರೂ ಕೂಡ ಪರೀಕ್ಷಿತ ಮಹಾರಾಜರೇ ನಿಮ್ಮ ಜೊತೆ ಮಾತನಾಡಿದರೆ ಪಿರಿಪಿರಿ ಆಗುವುದಿಲ್ಲ ಎಂದು ನಕ್ಕರು. ಇಬ್ಬರ ಮಾತೂ ಮುಂದುವರಿಯಿತು.


Rate this content
Log in

Similar kannada story from Abstract