STORYMIRROR

PRASANNA KUMAR

Abstract Classics Others

4  

PRASANNA KUMAR

Abstract Classics Others

ಪಯಣ … ??? !!!

ಪಯಣ … ??? !!!

2 mins
237

       ಬಿಳಿ ಬಣ್ಣದ ಕುದುರೆ ಹೋಗುತ್ತಿದೆ. ಅದರ ಹಿಂದೆ ಕಲ್ಪನಾ ಹೋಗುತ್ತಿದ್ದಾಳೆ.  ಕುದುರೆಗೆ ನೀಲಗಣ್ಣು. ತನಗೇಕೆ ಹಾಗಿಲ್ಲ ಎಂದುಕೊಳ್ಳುತ್ತಾಳೆ. ಅದರ ಬಾಲದಂತೆ ಅವಳ ತಲೆಯ ಕೂದಲು ಇದೆ. ಬಣ್ಣ ಮಾತ್ರ ಕಪ್ಪು. ಕುದುರೆಯ ಬಾಲದ ಕುಚ್ಚು ಅತ್ತ ಇತ್ತ ಆಡುತ್ತಿದ್ದರೆ ತನ್ನ ಜಡೆಯೂ ಸಹ ಹಾಗೆಯೇ ಆಡುತ್ತಿದೆ ಎಂದು ಭಾವಿಸುತ್ತಾಳೆ. ಜೇನಿನ ಬಣ್ಣದ ಇವಳಿಗೆ ಅದರ ಬಿಳಿ ವಿಶೇಷವಾಗಿ ಕಾಣಿಸುತ್ತಿದೆ. ಅದರ ಪ್ರತಿಹೆಜ್ಜೆಯಲ್ಲೂ ಒಂದು ರೀತಿಯ ಶಬ್ದ ತಾಳದಂತೆ ಕೇಳುತ್ತಿದ್ದರೆ ಇವಳ ಕಾಲಗಜ್ಜೆಯ ಸದ್ದನ್ನು ಅದಕ್ಕೆ ಸಮೀಕರಿಸಲು ಹೋಗುತ್ತಿದ್ದಾಳೆ. ಅಂಥಹ ವಿಷಯ ದೇವರನ್ನು ಒಲಿಸಿಕೊಂಡಂತೆ, ಆದರೂ ಸಹ ಅವಳು ಪ್ರಯತ್ನಿಸುವುದು ಮಾನವ ಸ್ವಭಾವ. 

       ಕಣ್ಣು ಮಿಟುಕಿಸದೆ ಒಂದೇ ಸಮನೆ ಗಮನಿಸುತ್ತಾ ಹೋಗುತ್ತಿರುವಾಗ ಜೋರಾದ ಗಾಳಿಗೆ ಧೂಳಿನ ಕಣವೊಂದು ಹಾರಿ ಅವಳ ಕಣ್ಣಿಗೆ ಬೀಳುತ್ತದೆ ತತ್ ಕ್ಷಣ ಹಾ! ಎಂದು ಕಣ್ಣನ್ನು ಮುಚ್ಚಿಕೊಳ್ಳುತ್ತಾಳೆ . ಕಣ್ಣನ್ನು ಉಜ್ಜಿಕೊಂಡು ತೆರೆದಾಗ ಮೇಲೆ ಫ಼್ಯಾನ್ ತಿರುಗುತ್ತಿದೆ. ಪಕ್ಕದಲ್ಲಿದ್ದ ಮೊಬೈಲ್ ನಲ್ಲಿ ಅಲಾರಾಂ ಸದ್ದುಮಾಡುತ್ತಿದೆ ಸಮಯ ಬೆಳಿಗ್ಗೆ ೬ ಗಂಟೆ. ಮತ್ತೆ ಕಣ್ಣುಮುಚ್ಚಿದರೆ ಕುದುರೆ ಕಾಣುತ್ತಿಲ್ಲ. ಮತ್ತೆ ಅದೇ ತಿರುಕನ ಕನಸೆ ಎಂದು ಕೊಂಡು ಕಾಲೇಜಿಗೆ ಹೋಗುವ ತಯಾರಿಗೆ ಅಣಿಯಾದಳು.

      ವೃತ್ತಿಯಲ್ಲಿ ಅವಳು ಲೆಕ್ಚರರ್ ಆಗಿದ್ದಳು. ಅವಳ ವಿಷಯ ಗಣಿತ. ಪುಸ್ತಕದ ಗಣಿತಕ್ಕೂ ಬದುಕಿನ ಗಣಿತಕ್ಕೂ ಹೊಂದಿಕೆಯಾಗುವುದು ಅಪರೂಪ. ಆದರೆ ೨೪ರ ವಯಸ್ಸಿನ ಅವಳ ಗುರಿಯೇ ಬೇರೆ. ಯಾರಿಗೂ ಹೇಳಿಲ್ಲ. ಕಾಯಕವೇ ಕೈಲಾಸ. ಮಾಡುವ ಕೆಲಸದಲ್ಲಿ ದೇವರನ್ನು ಕಾಣಬೇಕು. ವಿದ್ಯಾರ್ಥಿಗಳಲ್ಲಿ ಆ ದೇವರ ಅಂಶವನ್ನು ಕಾಣಬೇಕು ಮತ್ತು ತಪ್ಪು , ಮೋಸ, ವಂಚನೆ ಹಾಗೂ ನೀಚತನವನ್ನು ತೋರಿದರೆ ಅದು ನ್ಯೂಟನ್ನಿನ ಮೂರನೇ ನಿಯಮದಂತೆ ಪರಿಣಾಮ ಬೀರುತ್ತದೆ ಎಂದು ಭಾವಿಸಿದ್ದಳು. 

      ಸಮಾಜದಲ್ಲಿ ಐದು ಬೆರಳುಗಳೂ ಒಂದೇ ಸಮನಾಗಿ ಇರಲು ಸಾಧ್ಯವಿಲ್ಲ. ವಿಶ್ವವಿದ್ಯಾಲಯದಲ್ಲಿ ಪಡೆಯುವ ಪ್ರಮಾಣಪತ್ರ ಒಂದು ತೂಕವಾದರೆ ಜೀವನವೆಂಬ ವಿಶ್ವವಿದ್ಯಾಲಯದಲ್ಲಿ ಪಡೆಯುವ ಪ್ರಮಾಣಪತ್ರ ವಿಶೇಷವಾಗಿರುತ್ತದೆ. ಬಯಸಿದ ಹಾಗೆ ಬದುಕಿನ ಗಡಿಯಾರ ನಡೆಯುವುದಿಲ್ಲ ಎಂಬುದನ್ನು ಮನಸ್ಸಿನಲ್ಲೇ ಮರೆಯಾಗಿಸಿಕೊಂಡಿದ್ದಾಳೆ.

 

     ಮನೆಯಲ್ಲಿ ಅಪ್ಪ, ಅಮ್ಮ, ಅಣ್ಣ, ಅಕ್ಕ ಎಲ್ಲರೂ ನಿನ್ನ ಕೆಲಸವನ್ನು ನೀನು ಮಾಡು ಬೇರೆಯವರ ವಿಚಾರಕ್ಕೆ ಹೋಗಬೇಡ. ಹೊಗಳಿಕೆಗೆ ಬಲಿಯಾಗಬೇಡ ಅತಿಯಾದ ಸ್ನೇಹ ಗತಿ ಕೆಡಿಸೀತು ಜೋಕೆ ಎಂದೆಲ್ಲಾ ಹೇಳಿದ್ದರು. ಕೆಲವು ದಿನ ಬಸ್ಸಿನಲ್ಲಿ ಓಡಾಡು ಬಳಿಕ ಸ್ಕೂಟಿ ಅಥವಾ ಬೇರೆ ಯಾವುದಾದರೂ ಗಾಡಿಯನ್ನು ಕೊಡಿಸೋಣ ಎಂದು ಹೇಳಿ ಬರುವ ಸಂಬಳದ ಹಣವನ್ನು ಗೌರವಿಸು ಎಂದೆಲ್ಲಾ ಬುದ್ಧಿಮಾತು ಧೈರ್ಯ ಹೇಳಿ ಕಳುಹಿಸಿ ಕೊಟ್ಟಿದ್ದರು.

 

   ಎರಡು ವರ್ಷಗಳನ್ನು ಪೂರೈಸಿದ ಮೇಲೆ ಅವಳು ಸಾಧಿಸಿದ್ದು, ಹೆಸರು ಗಳಿಸಿದ್ದು ಅವಳಿಗೆ ಸೋಜಿಗ ತಂದಿತ್ತು. ಇನ್ನೂ ಈಗ ತಾನೇ ಕೆಲಸಕ್ಕೆ ಹೊಸದಾಗಿ ಸೇರಿದ ಹಾಗಿದೆ ಎಂದೆನಿಸಿತ್ತು. ಆದರೆ ಮೂರನೇ ವರ್ಷಕ್ಕೆ ಹೊಸ ಜೀವನಕ್ಕೆ ಕಾಲಿಡುವ ಸಂದರ್ಭ ಒದಗಿದೆ ಪಿಎಚ್ ಡಿ ಮಾಡುವ ಆಸೆ ಇರುವ ಇವಳಿಗೆ ಮದುವೆಯ ನಂತರ ಕೈಹಿಡಿದವನು ಮುಂದಿನ ಸಾಧನೆಗೆ ಕಡಿವಾಣ ಹಾಕಿದರೆ ಏನು ಮಾಡುವುದು ಎಂದು ಯೋಚನೆಗೆ ಬೀಳುತ್ತಾಳೆ. 

      ಅವಳ ತಂದೆ ಹೇಳಿದ “ ನಿಷ್ಠೆಯಿಂದ ಮಾಡಿದ ನಿನ್ನ ಸಾಧನೆಯ ಪ್ರತಿ ಅಂಶವನ್ನು ಶಿವಾರ್ಪಣ ಕೃಷ್ಣಾರ್ಪಣ ಎಂದು ಭಾವಿಸು ದೇವರು ದಡ ಮುಟ್ಟಿಸುತ್ತಾನೆ” ಎಂಬ ಮಾತನ್ನು ನೆನಪಿಸಿಕೊಂಡು ಮೆಜೆಸ್ಟಿಕ್ ನಿಂದ ಕೆಂಗೇರಿಗೆ ಹೋಗುವ ಬಸ್ಸಿನಲ್ಲಿ ಕುಳಿತು ಕೊಂಡು ಭಗವದ್ಗೀತೆಯ ಕರ್ಮಯೋಗದ ಅಧ್ಯಾಯದ ಕಡೆಗೆ ಕಣ್ಣು ಮತ್ತು ಮನಸ್ಸನ್ನು ಹಾಯಿಸಿದಳು.  

    ಬದುಕಿನ ಗಡಿಯಾರ ಬಯಸಿದ ಹಾಗೆ ನಡೆಯುತ್ತದೋ ಇಲ್ಲವೋ ತಿಳಿಯುವುದಿಲ್ಲ . ಜೀವನ ಒಂದು ಯಕ್ಷಪ್ರಶ್ನೆ, ಆಶ್ಚರ್ಯ ಸೂಚಕ, ಅದರ ಅರ್ಥ ಮರೀಚಿಕೆಯಾಗಿಯೇ ಇರುತ್ತದೆ. ಕೆಂಗೇರಿಗೆ ಬಸ್ ತಲುಪಿತು. ಇಳಿದವಳು ಮನೆಯ ಕಡೆಗೆ ಹೆಜ್ಜೆ ಹಾಕಿದಳು. 


Rate this content
Log in

Similar kannada story from Abstract