ಭರವಸೆಯ ಬೆಳಕು..!!
ಭರವಸೆಯ ಬೆಳಕು..!!
ಸಾರಿಕಾ ಮತ್ತು ರಘು ಇಬ್ಬರು ಕಾಲೇಜಿನಿಂದಲೇ ಪ್ರೀತಿಸಿ ಮದುವೆಯಾದವರು. ಇಬ್ಬರೂ ಒಳ್ಳೆಯ ಉದ್ಯೋಗದಲ್ಲಿ ಇದ್ದುದ್ದರಿಂದ ಜಾತಿ ಬೇರೆಯಾದರೂ ಅವರ ಹೆತ್ತವರಿಗೆ ಇದು ದೊಡ್ಡ ತೊಡಕು ಎನಿಸಲಿಲ್ಲ. ಇಬ್ಬರು ಮಕ್ಕಳು ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದಾರೆ. ಪ್ರೀತಿಯ ಅಮಲಿನಲ್ಲಿ ಇರದೇ ಜವಾಬ್ದಾರಿಯುತವಾಗಿ ಓದಿ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ಹಾಗಾಗಿ ನಮ್ಮದೇನು ಅಭ್ಯಂತರವಿಲ್ಲ ಎಂದು ಎರಡೂ ಸಂಪ್ರದಾಯಗಳನ್ನು ಒಟ್ಟುಗೂಡಿಸಿ ವಿಜೃಂಭಣೆಯಿಂದ ಮದುವೆ ಮಾಡಿಕೊಟ್ಟರು.
ಮದುವೆಯ ತದನಂತರದ ದಿನಗಳು ಹೇಗಿರುತ್ತವೆಯೋ ಎಂದು ಆತಂಕಗೊಂಡಿದ್ದ ಸಾರಿಕಾ ಕ್ರಮೇಣ ಅತ್ತೆಯ ಮನೆಗೆ ಹೊಂದಿಕೊಳ್ಳಲು ಆರಂಭಿಸಿದಳು. ತಾನು ಸಸ್ಯಾಹಾರಿ, ಗಂಡನ ಮನೆಯವರು ಮಾಂಸಾಹಾರಿಗಳು. ಅವರಿಗೆ ಅಡುಗೆ ಮಾಡಿ ಬಡಿಸುವುದು ಹೇಗೆ ಎಂದು ಅವಳಿಗಿದ್ದ ಯೋಚನೆ ಕೆಲವೇ ತಿಂಗಳಲ್ಲಿ ಮಾಯವಾದವು. ಸಾರಿಕಾ ಎಲ್ಲವನ್ನು ಮಾಡಲು ಕಲಿತಳು. ಜೊತೆಗೆ ಬೆನ್ನೆಲುಬಾಗಿ ಅವಳ ಗಂಡ ಮತ್ತು ಅತ್ತೆ ನಿಂತರು. ಹಾಗಾಗಿ ನೆಮ್ಮದಿಯ ದಾಂಪತ್ಯ ತನ್ನದಾಯಿತು ಎಂದುಕೊಳ್ಳುತ್ತಾ ಕಛೇರಿ ಕೆಲಸ-ಮನೆ ಎರಡನ್ನು ಚೆನ್ನಾಗಿ ನಿಭಾಯಿಸಲು ಕಲಿತಳು.
ಹೀಗೆಯೇ ಎರಡು ವರ್ಷ ಕಳೆಯಲು ತಾನು ತಾಯಿಯಾಗಲಿದ್ದೇನೆ ಎಂಬ ಸಿಹಿ ಸುದ್ದಿ ಸಾರಿಕಾಗೆ ಗೊತ್ತಾಯ್ತು. ಮನೆಯವರೆಲ್ಲರೂ ಸಂಭ್ರಮದಲ್ಲಿ ತೇಲಾಡಿದರು. "ನಮ್ಮ ಮನೆಯ ವಂಶೋದ್ಧಾರಕ ಹುಟ್ಟುತ್ತಾನೆ..!" ಎಂದು ಎರಡೂ ಮನೆಯವರು ಸಂತಸದಿಂದ ಹೇಳಲು ಶುರು ಮಾಡಿದರು. ಮತ್ತೊಮ್ಮೆ ಗಾಬರಿಯಾಗುವ ಸರದಿ ಸಾರಿಕಾದು. ಅದು ಹೇಗೆ ಇವರು ಗಂಡು ಮಗುವೇ ಆಗುತ್ತದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ..? ಹೆಣ್ಣು ಅಥವಾ ಗಂಡು ಮಗು ಎನ್ನುವುದು ನಮ್ಮ ಕೈಯಲ್ಲಿ ಇದೆಯೇ..? ಇದೆಂತಹ ವಿಚಿತ್ರ ಮನೋಭಾವದವರು ಇವರೆಲ್ಲ..!! ಎಂದುಕೊಂಡಳು.
ಅವಳ ಅದೃಷ್ಟವೋ ಅಥವಾ ಮನೆಯವರ ಕೋರಿಕೆಯ ಫಲವೋ ಅಂತೂ ಸಾರಿಕಾಗೆ ಗಂಡು ಮಗುವೇ ಹುಟ್ಟಿತು..!! ಎಲ್ಲರೂ ಮಗುವಿನ ಲಾಲನೆ ಪಾಲನೆಯಲ್ಲಿ ಮುಳುಗಿ ಹೋದರು. ತನ್ನ ಮುದ್ದಾದ ಮಗುವಿಗೆ ಚಂದದ ಹೆಸರನ್ನು ಇಡಬೇಕೆಂದು ಯೋಚಿಸಿ "ಆಯುಷ್" ಎಂದು ದೊಡ್ಡ ಮಂಟಪದಲ್ಲಿ ನಾಮಕರಣವನ್ನು ಮಾಡಿದರು.
ಆಯುಷ್ ದಿನ ಕಳೆದಂತೆ ಓದು-ಆಟದಲ್ಲಿ ಚುರುಕಾಗಿ ಭಾಗವಹಿಸುತ್ತಿದ್ದ. ತರಗತಿಗಳಲ್ಲಿಯೂ ಒಳ್ಳೆಯ ಅಂಕಿಗಳೊಂದಿಗೆ ಪಾಸು ಮಾಡುತ್ತಿದ್ದ. ಇತ್ತ ಸಾರಿಕಾ ಮತ್ತು ರಘು ಅವರ ಕಚೇರಿಯ ಕೆಲಸಗಳನ್ನು ಯಾವುದೇ ಅಡೆತಡೆ ಇಲ್ಲದೆ ನಿಭಾಯಿಸುತ್ತಿದ್ದರು. ದೇವರು ತಮಗೆ ಏನಕ್ಕೂ ಕಡಿಮೆ ಮಾಡಿಲ್ಲ ಎಂದುಕೊಂಡು ಪುಟ್ಟ ಆಯುಷ್ನೊಂದಿಗೆ ಸಮಯ ಕಳೆಯುತ್ತಿದ್ದರು.
ವರ್ಷಗಳುರುಳಿ ಆಯುಷ್ ಹೈಸ್ಕೂಲಿಗೆ ಬಂದನು. ತನ್ನ ತಂದೆಯ ಕೋರಿಕೆಯಂತೆ ಪ್ರತಿಷ್ಠಿತವಾದ ಒಂದು ಶಾಲೆಯಲ್ಲಿ ಪ್ರವೇಶ ಪರೀಕ್ಷೆ ಬರೆದು ಸೀಟು ಗಿಟ್ಟಿಸಿದನು. ಇನ್ನು ಮೂರು ವರ್ಷ ಹಾಸ್ಟೆಲ್ ನಲ್ಲಿಯೇ ಇದ್ದು ತನಗೆ ಇಷ್ಟವಾದ ಕಬ್ಬಡಿ ಮತ್ತು ಪಾಠಗಳಲ್ಲಿ ಮೊದಲಿಗನಾಗಿಯೇ ಇರಬೇಕು. ನಂತರ ವಾಪಸ್ಸು ಮನೆಗೆ ತೆರಳಬೇಕೆಂದು ಎಲ್ಲರ ಆಶೀರ್ವಾದಗಳೊಂದಿಗೆ ಹಾಸ್ಟೆಲ್ ಗೆ ತೆರಳಿದ.
ಇತ್ತ ಆಯುಷ್ ಇಲ್ಲದ ಮನೆ ಬಿಕೋ ಎನ್ನುತ್ತಿತ್ತು. ವಯಸ್ಸಾದ ಅತ್ತೆ ಮಾವನಿಗೂ ಬೇಜಾರು. ತಮ್ಮ ಮೊಮ್ಮಗ ಇನ್ನು ರಜೆಗಳಿಗೆ ಮಾತ್ರ ಮನೆಗೆ ಬರುತ್ತಾನಲ್ಲ ಎಂದು. ಸಾರಿಕಾ ಮತ್ತು ರಘುವಿಗೂ ಸಹ ಮಗನ ಅನುಪಸ್ಥಿತಿ ಬಹಳ ಕಾಡುತ್ತಿತ್ತು. ಅದೇಕಾದರೂ ಹಾಸ್ಟೆಲ್ ಗೆ ಸೇರಿಸಿದೆವೋ ಎಂದುಕೊಂಡರು. "ಹರುಷದ ಕೂಳಿಗಾಗಿ ವರುಷದ ಕೂಳು ಕಳೆದುಕೊಳ್ಳಬಾರದೆಂದು" ಸಮಾಧಾನಪಟ್ಟರು.
ದಿನಗಳು ಕಳೆಯಲು, ಒಂದು ದಿನ ಸರಿಯಾಗಿಯೇ ಇದ್ದ ಸಾರಿಕಾ ಸುಸ್ತಾಗಿ ನಿತ್ರಾಣಗೊಂಡಳು. ಡಾಕ್ಟರ್ ಗೆ ತೋರಿಸಿದಾಗ "ನಿಮಗಿಬ್ಬರಿಗೂ ಒಂದು ಗುಡ್ ನ್ಯೂಸ್..! ಸಾರಿಕಾ ಈಗ ಪ್ರೆಗ್ನೆಂಟ್..!!" ಎಂದು ಡಾಕ್ಟರ್ ವಿಶ್ ಮಾಡಿದರು.
ಎರಡು ತಿಂಗಳಿಂದ ಪೀರಿಯಡ್ಸ್ ಸ್ಕಿಪ್ ಆಗಿದ್ದು ಮರೆತೇ ಬಿಟ್ಟೆನಲ್ಲ..!! ನನ್ನ ಕೆಲಸದ ಗಡಿಬಿಡಿ ಜೊತೆಗೆ ಡೇಟ್ ಬೇರೆ ಇರ್ರೆಗುಲರ್ ಆಗಿರುವುದರಿಂದ, ಈ ಸಲವೂ ಹಾಗೆ ಆಯಿತೇನೋ ಎಂದುಕೊಂಡೆನಲ್ಲ ಎಂದು ತಲೆಕೆಡಿಸಿಕೊಂಡಳು ಸಾರಿಕಾ..!!
ಮನೆಗೆ ಬಂದು ಅತ್ತೆ ಮಾವರಲ್ಲಿ ವಿಚಾರ ತಿಳಿಸಿದಾಗ, "ಇಬ್ಬರ ಮಕ್ಕಳ ನಡುವೆ ಹದಿಮೂರು ವರ್ಷಗಳ ಅಂತರ ಹೆಚ್ಚಾಯಿತಲ್ಲವೇ..?! ಇರಲಿ ಹುಷಾರಾಗಿ ಆರೋಗ್ಯವನ್ನು ನೋಡಿಕೋ..!" ಎಂದರು.
"ಆಫೀಸಿನಲ್ಲಿ ಪ್ರಾಜೆಕ್ಟ್ ಗಳು ಒಂದಾದರೊಂದರ ಮೇಲೆ ಬರುತ್ತಿತ್ತು. ಇದರ ಮಧ್ಯೆ ಹೀಗಾಯ್ತಲ್ಲ..! ಇನ್ನು ಸ್ವಲ್ಪ ತಿಂಗಳಲ್ಲೇ ಕೆಲಸವನ್ನು ಸಹ ಬಿಡಬೇಕು..!!" ಎಂದು ಸಾರಿಕಾ ಗಂಡನಲ್ಲಿ ಹೇಳಿದಳು.
"ಪರವಾಗಿಲ್ಲ ಆರತಿಗೊಬ್ಬ ಮಗಳು, ಕೀರ್ತಿಗೊಬ್ಬ ಮಗ ಎಂಬಂತೆ ಮತ್ತೊಂದು ಮಗು ಹೆಣ್ಣಾಗಲಿ ಎಂದು ಆಶಿಸುತ್ತೇನೆ..! ನೀನು ಸುಮ್ಮನೆ ಯೋಚನೆ ಮಾಡಿ, ಆರೋಗ್ಯ ಕೆಡಿಸಿಕೊಳ್ಳಬೇಡ. ಎಲ್ಲವನ್ನು ನಾನು ನೋಡಿಕೊಳ್ಳುತ್ತೇನೆ. ದುಡ್ಡಿನ ಬಗ್ಗೆಯೂ ಯೋಚಿಸಬೇಡ..!!" ಎಂದು ಭರವಸೆ ಕೊಟ್ಟನು ರಘು.
ನವಮಾಸಗಳು ತುಂಬಲು ಆಯುಷ್ ನಿಗೆ ಒಬ್ಬಳು ಕಿನ್ನರಿಯಾದಂತಹ ಕಣ್ಮಣಿ ಹುಟ್ಟಿದಳು..! ಹಾಸ್ಟೆಲ್ನಲ್ಲಿದ್ದ ಆಯ
ುಷ್ ನಿಗಂತೂ ಯಾವಾಗ ತನ್ನ ತಂಗಿಯನ್ನು ನೋಡುತ್ತೇನೆ ಎಂಬ ತವಕ. ಎರಡು ಮನೆಯವರೆಗೂ ಮತ್ತೊಮ್ಮೆ ಸಂಭ್ರಮ. ತಮ್ಮೆಲ್ಲರ ಪ್ರೀತಿಯ ಮಗುವಿದು ಎಂದು "ಕಣ್ಮಣಿ" ಎಂದೇ ಹೆಸರಿಟ್ಟರು..!!
ಪುಟ್ಟ ಕಣ್ಮಣಿಗೆ ವರುಷವೊಂದು ತುಂಬಲು, ಏಕೋ ಮಗುವಿನ ಬೆಳವಣಿಗೆ ಎಲ್ಲ ಮಕ್ಕಳಂತೆ ಇಲ್ಲ ಎಂಬುದು ತಂದೆ ತಾಯಿಯರಿಗೆ ಗೊತ್ತಾಯ್ತು. ಎಷ್ಟೋ ಡಾಕ್ಟರ್ ಗಳನ್ನು ಸಂಪರ್ಕಿಸಿ ಮಾಹಿತಿಯನ್ನು ಈ ಬಗ್ಗೆ ಕಲೆ ಹಾಕಿದರು.
ಆದರೆ ಎಲ್ಲಾ ವೈದ್ಯರಿಂದ ಸಿಕ್ಕಿದ್ದು ಒಂದೇ ಉತ್ತರ. "ಮಗುವಿಗೆ ಬುದ್ಧಿಯ ಬೆಳವಣಿಗೆ ಬೇರೆ ಮಕ್ಕಳಂತೆ ಇಲ್ಲ. ದೈಹಿಕವಾಗಿ ನೋಡುವುದಕ್ಕೆ ಯಾವುದೇ ತೊಂದರೆ ಇಲ್ಲದಂತೆ ಕಂಡರೂ, ಮಾನಸಿಕವಾಗಿ ತೊಂದರೆ ಇದೆ. ಹಾಗಾಗಿ ಮಗುವನ್ನು ಮುಂದೆ ಬುದ್ಧಿಮಾಂದ್ಯರ ಮಕ್ಕಳಿಗಾಗಿ ಇರುವ ವಿಶೇಷ ಶಾಲೆಗೆ ಕಳುಹಿಸುವುದು ಉತ್ತಮ. ಅಲ್ಲಿ ನಿಮಗೆ ಬೇಕಾದ ಸಹಾಯ ಮಾರ್ಗದರ್ಶನ ಎಲ್ಲ ಸಿಗುತ್ತದೆ. ಚಿಂತಿಸಬೇಡಿ ನೀವು ಮಗುವನ್ನು ಯಾವ ರೀತಿ ನೋಡಿಕೊಳ್ಳುತ್ತಿರೋ, ಆ ರೀತಿ ಅದು ತಯಾರಾಗುತ್ತಾ ಹೋಗುತ್ತದೆ" ಎಂದು ಧೈರ್ಯ ತುಂಬಿದರು.
ಕಾಲ ಕೆಳಗಿನ ನೆಲ ಕಂಪಿಸಿದಂತೆ ಭಾಸವಾಯಿತು ರಘು ದಂಪತಿಗೆ. ತಮ್ಮ ಮುದ್ದಾದ ಕಣ್ಮಣಿಗೆ ದೇವರು ಇಂತಹ ಶಿಕ್ಷೆಯನ್ನೇಕೆ ಕೊಟ್ಟ ಎಂದು ಅಳು ಮುಖವನ್ನು ಹೊತ್ತು ಮನೆಗೆ ಮರಳಿದರು. ಇದ್ದ ವಿಷಯವನ್ನೆಲ್ಲ ಅತ್ತೆ ಮಾವರಲ್ಲಿ ಹೇಳಿದಾಗ ಅವರಿಗೂ ಖೇದವೆನಿಸಿತು.
ಸಾರಿಕಾ ತನ್ನ ಮಗುವಿನ ಮುಂದಿನ ಜೀವನಕ್ಕಾಗಿ ಕೆಲಸ ಬಿಡಬೇಕೆಂದು ಖಾತರಿ ಆಯಿತು. ಈಗಂತೂ ಸಾರಿಕಾ ಮಗುವನ್ನು ಒಂದು ಕ್ಷಣವನ್ನು ಬಿಟ್ಟಿರದೇ, ಅದರ ಬೆಂಗಾವಲಾಗಿ ನಿಂತಳು. ತಾನು ಮಗುವಿಗೆ ಎಲ್ಲಾ ರೀತಿಯಲ್ಲೂ ಸಹಾಯ ಮಾಡಿ, ಮಗುವಿಗೆ ಆದಷ್ಟು ತಿಳುವಳಿಕೆ ಕೊಟ್ಟು, ಸ್ವತಂತ್ರವಾಗಿ ಮಾಡಬೇಕೆಂಬುದೇ ಅವಳ ಗುರಿಯಾಯಿತು..!!
ಯಾವಾಗ ಸಾರಿಕಾ ಕೆಲಸವನ್ನು ಬಿಟ್ಟು, ತನ್ನ ಬಗ್ಗೆ ಗಮನಿಸುವುದನ್ನು ಕಡಿಮೆ ಮಾಡಿ, ಸದಾ ಕಣ್ಮಣಿಯ ಲಾಲನೆ ಪಾಲನೆಯಲ್ಲೇ ನಿರತಳಾದಳೋ, ಆಗಿನಿಂದ ರಘು ಬದಲಾಗಲು ಶುರುವಾದನು. ಕೆಲಸದಿಂದ ತಡವಾಗಿ ಮನೆಗೆ ಬರುವುದು, ಕಣ್ಮಣಿಯನ್ನು ಕಡೆಗಣಿಸುವುದು, ಸ್ನೇಹಿತರೊಂದಿಗೆ ದಿನಗಟ್ಟಲೆ ಟ್ರಿಪ್ ಗೆ ತೆರಳುವುದು, ಹೀಗೆ ಎಲ್ಲಾ ದುರಾಭ್ಯಾಸಗಳನ್ನು ಮೈಗೂಡಿಸಿಕೊಂಡನು..!!
ಒಂದು ಕಾಲದಲ್ಲಿ "ನೀನಿನ್ನು ಕೆಲಸ ಮಾಡಿದ್ದು ಸಾಕು. ಇನ್ನು ಮೇಲೆ ನಿಮ್ಮೆಲ್ಲರ ಜವಾಬ್ದಾರಿ ನನ್ನದು..!" ಎಂದು ಹೇಳಿದವನು, ಈಗ ಇದ್ದಕ್ಕಿದ್ದ ಹಾಗೆ ತನ್ನ ಇನ್ನೊಂದು ರೂಪವನ್ನು ಪ್ರದರ್ಶಿಸಲು ಪ್ರಾರಂಭಿಸಿದನು. ಆ ಕಡೆ ಹಾಸ್ಟೆಲ್ನಲ್ಲಿ ಓದುವ ಮಗನ ಬಗ್ಗೆಯೂ ಚಿಂತೆ ಇಲ್ಲ, ಈ ಕಡೆ ವಯಸ್ಸಾದ ಅಪ್ಪ-ಅಮ್ಮನ ನೆರವಿಗೂ ಧಾವಿಸುವುದಿಲ್ಲ, ಕಣ್ಮಣಿ ಮತ್ತು ಸಾರಿಕಾರ ಯೋಚನೆ ಮೊದಲೇ ಇಲ್ಲ. ಹೀಗೆ ಎಲ್ಲ ವಿಧದಲ್ಲೂ ಬೇಜವಾಬ್ದಾರಿಯುತ ಮನುಷ್ಯನಾಗಿ ಪರಿವರ್ತಿತನಾಗಿಬಿಟ್ಟ..!!
ನೋಡುವಷ್ಟು ದಿನ ನೋಡಿದ ಸಾರಿಕಾ, ಮತ್ತೆ ರಘು ಮೊದಲಿನಂತೆ ಆಗುತ್ತಾನೆ ಎಂಬ ಭರವಸೆಯನ್ನೇ ಕಳೆದುಕೊಂಡಳು. ಅವಳ ಹೃದಯವೇಕೋ, ಛಿದ್ರವಾದಂತೆ ಅನಿಸಿತು. ಇರುವ ತೊಂದರೆಗಳೊಂದಿಗೆ ಗಂಡನ ಬೇಜವಾಬ್ದಾರಿಯುತ ನಡೆ ಅವಳನ್ನು ತೀರಾ ಘಾಸಿಗೊಳಿಸಿತ್ತು..! ತನ್ನ ಮತ್ತು ಈ ಮನೆಯ ಋಣ ಇನ್ನು ಮುಗಿಯಿತು ಅಂದುಕೊಂಡು ಮತ್ತೆ ತನ್ನ ತವರು ಮನೆಗೆ ಹಿಂದಿರುಗಿದಳು.
ಅವಳ ತಂದೆ ತಾಯಿ ಮಗಳ ನೋವನ್ನು ನೋಡಿ ದುಃಖಗೊಂಡರು. ತಟಸ್ಥ ಭಾವದಿಂದ ಎಲ್ಲವನ್ನು ಕಾಣಲು ಕಲಿತರು. ಕೆಲವೊಮ್ಮೆ ಕಣ್ಮಣಿಯ ಅತಿರೇಕದ ವರ್ತನೆ, ಇನ್ನೂ ಕೆಲವೊಮ್ಮೆ ಕಣ್ಮಣಿಯ ಅನ್ಯಮನಸ್ಕತೆ, ಎಲ್ಲವನ್ನು ಹೇಗೆ ಸ್ವೀಕರಿಸಬೇಕೆಂದು ಕಲಿತುಕೊಂಡರು. ಸಾರಿಕಾ ಮತ್ತೆ ಕೆಲಸ ಹಿಡಿಯುವಲ್ಲಿ ಯಶಸ್ವಿಯಾದಳು.
ತನ್ನ ಮನೆಯಲ್ಲಿ ಈ ರೀತಿಯ ಬದಲಾವಣೆಗಳು ಆಗಿವೆ ಎಂದು ಗುರುತಿಸಲಾರದ ಸ್ಥಿತಿಯಲ್ಲಿ ರಘು ಇದ್ದನು. ತನಗೂ ತನ್ನ ಹೆಂಡತಿ ಮಕ್ಕಳಿಗೂ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸಿ, ಅವರಿಂದ ಸಂಪೂರ್ಣವಾಗಿ ದೂರವಾದನು.
ಮೂರು ವರ್ಷಗಳು ಕಳೆಯಲು ಆಯುಷ್ ಒಳ್ಳೆಯ ಫಲಿತಾಂಶದೊಂದಿಗೆ ವಾಪಸ್ಸು ತನ್ನ ಅಜ್ಜಿ ಮನೆಗೆ ಬಂದನು. ಆದರೆ ಈ ಬಾರಿ ಹಳೆಯ ಅಜ್ಜಿಯ ಮನೆಗೆ ಹೋಗದೇ, ನೇರವಾಗಿ ತನ್ನ ಹೊಸ ಅಜ್ಜಿಯ ಮನೆ ಅಂದರೆ ಸಾರಿಕಾಳ ಅಪ್ಪ ಅಮ್ಮನ ಮನೆಗೆ ಬಂದನು. ತನ್ನ ಪುಟ್ಟ ತಂಗಿ ಕಣ್ಮಣಿಯನ್ನು ಯಾವಾಗಲೂ ಹತ್ತಿರದಿಂದಲೇ ನೋಡಿಕೊಳ್ಳಬಹುದು ಎಂಬ ಆಸೆ ಅವನಲ್ಲಿ ಅದಾಗಲೇ ಗರಿಗೆದರಿತ್ತು. ಅದೇ ಸಮಯದಲ್ಲಿ ತಮ್ಮೆಲ್ಲರಿಂದ ಶಾಶ್ವತವಾಗಿ ದೂರವಾದ ತನ್ನ ಅಪ್ಪನ ಬಗ್ಗೆ ತಿರಸ್ಕಾರವೂ ಮೂಡಿತು.
ಮುಂದೇನಿದ್ದರೂ ನಮ್ಮ ಕುಟುಂಬ ಎಂದರೆ ಅದು ತನ್ನಮ್ಮ, ಕಣ್ಮಣಿ, ಅಜ್ಜಿ ತಾತ ಮತ್ತು ತಾನು ಮಾತ್ರ. ತಾನು ಇವರೆಲ್ಲರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಆದ್ದರಿಂದ ಇನ್ನು ಮುಂದೆಯೂ ನಾನು ಚೆನ್ನಾಗಿ ಓದಿ, ಒಳ್ಳೆಯ ಕೆಲಸ ಹಿಡಿದು ಅಮ್ಮನಿಗೆ ಎಲ್ಲಾ ರೀತಿಯಲ್ಲೂ ನೆರವಾಗಬೇಕು ಎಂದು ಮನಸ್ಸಿನಲ್ಲಿಯೇ ತೀರ್ಮಾನಿಸಿದನು.
ಪುಟ್ಟ ಕಣ್ಮಣಿಗೆ ಬೇಸರ ನೀಗಿಸುವ ಮುದ್ದಿನ ಅಣ್ಣನಾಗಿ, ತನ್ನ ತಾಯಿಗೆ ಹೆಮ್ಮೆಯ ಮಗನಾಗಿ, ಎಲ್ಲರ ಬಾಳಿಗೆ ಭರವಸೆಯ ಬೆಳಕಾದನು ಆಯುಷ್..!!