ವೀಲಿಂಗ್ ವಿನೋದ...!!
ವೀಲಿಂಗ್ ವಿನೋದ...!!


"ಅಲ್ವೇ ರಮಾ, ಎದುರು ಮನೆ ಸಂಗೀತ ಆಚೆ ಮನೆ ಸುಧೀರನೊಂದಿಗೆ ಓಡಿ ಹೋದ್ಲಂತೆ. ವಿಷಯ ಗೊತ್ತಾಯ್ತಾ!" ಎಂದು ಎಂದಿನ ವ್ಯಂಗ್ಯದ ಧಾಟಿಯಲ್ಲಿ ಕೇಳಿದಳು ವಿಮಲಾ. ವಿಮಲಾ ಕಳೆದ ಹತ್ತು ವರ್ಷಗಳಿಂದಲೂ ಹೀಗೆಯೇ ಇರುವುದು. ಅವಳ ಮನೆ, ನಮ್ಮ ಮನೆ ಅಕ್ಕಪಕ್ಕದಲ್ಲಿಯೇ ಇರುವುದು. ಹಾಗಾಗಿ ಬೇಕೆಂದರೂ ಬೇಡವೆಂದರೂ ಆಕೆ ನಮ್ಮ ಮನೆಗೆ ನುಗ್ಗುವುದೇ, ಎಲ್ಲರ ಮನೆಯ ವಿಷಯಗಳನ್ನು ನನ್ನ ಕಿವಿಗೆ ಊದುವುದೇ!! ಎಷ್ಟೆಂದರೂ ನನ್ನದು ಅವಳದು ಹತ್ತು ವರ್ಷಗಳ ಸ್ನೇಹ. ನಾವು ಈ ಮನೆಗೆ ಬಂದಾಗಿನಿಂದಲೂ ಅವಳು ನನಗೆ ಆತ್ಮೀಯ ಗೆಳತಿ. ಒಳ್ಳೆಯ ಹೆಣ್ಣೆ. ಕೆಲಸ ಕಾರ್ಯಗಳಲ್ಲಿ ನಿಪುಣೆ. ನನ್ನಂತೆ ಅವಳು ಗೃಹಿಣಿ. ನಮ್ಮ ಮನೆಯಲ್ಲಿ ನಾನು, ನನ್ನ ಗಂಡ ಮತ್ತು ಇಬ್ಬರು ಮಕ್ಕಳಿದ್ದರೆ, ಅವಳ ಮನೆಯಲ್ಲಿ ಮೂವರು. ಗಂಡ-ಹೆಂಡತಿ ಮತ್ತು ಒಬ್ಬ ಮಗ. ನನ್ನ ಮಕ್ಕಳಿಬ್ಬರು ಶಾಲೆಯಲ್ಲಿ ಓದುತ್ತಿದ್ದರೆ, ಅವಳ ಮಗ ಆಗಲೇ ಕಾಲೇಜಿನಲ್ಲಿ ಓದುತ್ತಿದ್ದಾನೆ. ಏನೇ ಪೂಜೆ, ಹೋಮ, ಕಾರ್ಯಕ್ರಮಗಳು ನಮ್ಮಿಬ್ಬರ ಮನೆಗಳಲ್ಲಿ ನಡೆದರೂ, ನಾವಿಬ್ಬರು ಸ್ವಂತ ಮನೆಯ ಫಂಕ್ಷನ್ನಂತೆ ಓಡಾಡಿಕೊಂಡು ಕೆಲಸ ಹಂಚಿಕೊಳ್ಳುತ್ತೇವೆ. ಎಷ್ಟೆಂದರೆ ನಾವಿಬ್ಬರೂ ಅಕ್ಕತಂಗಿಯರೇ ಎಂದು ಹೊಸ ಜನರು ಕೇಳುವ ಮಟ್ಟಿಗೆ ನಮ್ಮ ಬಾಂಧವ್ಯ ಬೆಳೆದುಬಿಟ್ಟಿದೆ.
ವಿಮಲ ನನಗೆ ಎಷ್ಟೇ ಆತ್ಮೀಯ ಗೆಳತಿಯಾದರೂ ಸಹ ಅವಳಲ್ಲಿ ನನಗೆ ಇಷ್ಟವಾಗದ ಒಂದು ಗುಣವೆಂದರೆ, ಅಕ್ಕಪಕ್ಕ ಮನೆಯವರ ಬಗ್ಗೆ ಅವಳಿಗಿರುವ ಕೆಟ್ಟ ಕುತೂಹಲ. ಏನೋ ಒಂಚೂರು ನನಗೂ ಇದೆ ಇಲ್ಲವೆಂದಲ್ಲ! ಆದರೆ ಈಕೆಗೆ ವಿಪರೀತವೆಂದರೆ ವಿಪರೀತ. ಎಷ್ಟೆಂದರೆ ಅತಿರೇಕಕ್ಕೆ ಹೋಗಿ ತಲುಪಿದೆ ಎನ್ನಬಹುದು. ಎಲ್ಲರ ಬಗ್ಗೆಯೂ ಕೂಲಂಕುಷವಾಗಿ ಅಧ್ಯಯನ ಮಾಡಿ, ಅವಳು ಹೀಗಂತೆ ಅವನು ಹಾಗಂತೆ ಎಂದು ರೇಡಿಯೋದಂತೆ ಎಲ್ಲರ ಮನೆಯ ವಿಷಯಗಳನ್ನು ಜಗತ್ತಿಗೆ ಸಾಗುವುದು. ಎಷ್ಟೋ ಸಲ ಈ ಕೆಟ್ಟ ಚಾಳಿಯಿಂದ ಅವಳು ಸುತ್ತಮುತ್ತ ಇರುವ ಹೆಂಗಸರಿಂದ ಬೈಸಿಕೊಂಡಿದ್ದು ಇದೆ. ಆದರೆ "ನಾಯಿ ಬಾಲ ಯಾವಾಗಲೂ ಡೊಂಕೆ" ಎನ್ನುವಂತೆ ಒಂದೆರಡು ದಿನ ಸುಮ್ಮನಿದ್ದು ಮತ್ತೆ ಶುರುವಿಟ್ಟುಕೊಳ್ಳುತ್ತಾಳೆ.
ನಾನೂ ಹಲವು ಬಾರಿ ಈ ಬಗ್ಗೆ ಅವಳಲ್ಲಿ ಎಚ್ಚರಿಸಿದ್ದೇನೆ. "ಬೇಡ್ವೆ ವಿಮಲ, ನಿನಗೇಕೆ ಬೇರೆಯವರ ಉಸಾಬರಿ? ನೀನಾಯ್ತು ನಿನ್ನ ಪಾಡಾಯ್ತು ಎಂದಂಗೆ ಇದ್ದುಬಿಡು. ಕಾಲ ಕಳೆಯಲು ಕಷ್ಟವಾಗುತ್ತಿದೆ ಎಂದರೆ ಬಾ ನಮ್ಮ ಮನೆಗೆ. ಒಂದೆರಡು ಪುಸ್ತಕಗಳನ್ನು ಕೊಡುತ್ತೇನೆ, ಓದುವಿಯಂತೆ" ಎಂದು ಹೇಳಿದರೆ, ಇದಕ್ಕೆಲ್ಲ ಸೊಪ್ಪು ಹಾಕದ ವಿಮಲ "ಹೋಗೆ ರಮಾ, ನಿಂದೊಳ್ಳೆ ಕಥೆ ಆಯ್ತು. ಇರೋದೊಂದು ಜೀವನ. ಗಂಡ ಮೂರು ಹೊತ್ತು ಕೆಲ್ಸ ಕೆಲ್ಸ ಎನ್ನುತ್ತಾನೆ. ಇನ್ನು ಮಗರಾಯ ಓದು ಓದು ಎಂದು ಕಾಲೇಜು ಟ್ಯೂಷನ್ ಗೆ ಹೋಗುವುದರಲ್ಲಿ ಬ್ಯುಸಿಯಾಗಿರುತ್ತಾನೆ. ನಾನು ಈ ವಯಸ್ಸಲ್ಲಿ ಪುಸ್ತಕ ಹಿಡಿದು ಕೂರ್ಲ! ಹೋಗೆ ನನಗೆ ಬೇರೆ ಕೆಲಸ ಇದೆ" ಎಂದು ಹೇಳುತ್ತಾ ಇನ್ನೊಂದು ಮನೆಯನ್ನು ಇಣುಕಲಿಕ್ಕೆ ಹೋಗುತ್ತಾಳೆ.
"ಅಯ್ಯೋ ದೇವ್ರೇ, ಹುಟ್ಟು ಗುಣ ಸುಟ್ಟರೂ ಹೋಗಲ್ಲ ಎಂದು ಇಂಥವರನ್ನು ನೋಡಿಯೇ ಹಿರಿಯರು ಹೇಳಿರಬೇಕು" ಎಂದುಕೊಳ್ಳುತ್ತೇನೆ ನಾನು! ಹೀಗೇ ಒಂದು ದಿನ ಮಧ್ಯಾಹ್ನ ನಮ್ಮ ಮನೆಗೆ ಬಂದ ವಿಮಲ ನನ್ನ ಮಗಳ ಬಗ್ಗೆಯೇ ಚಾಡಿ ಚುಚ್ಚುವುದೇ? ನನಗಂತೂ ಪರಮಾಶ್ಚರ್ಯ! ಇವಳು ಹೇಳುತ್ತಿರುವುದು ನಿಜವಾ ಸುಳ್ಳಾ ಎಂದು. ಆದರೆ ಅವಳಂತೂ ಖಡಾಖಂಡಿತವಾಗಿ ನನ್ನ ಮಗಳನ್ನು ಮೂರು ಜನ ಸ್ನೇಹಿತರೊಂದಿಗೆ ಹರಟುತ್ತಾ, ಚುರುಮುರಿ ತಿನ್ನುತ್ತಾ ಹೋಗುವುದನ್ನು ಮೊನ್ನೆ ಸಂಜೆ ಆರು ಗಂಟೆಯ ಸುಮಾರಿಗೆ ನೋಡಿದೆ. ಇವಳಂತೆ ಇನ್ನೊಬ್ಬಳು ಹುಡುಗಿ, ಮತ್ತಿಬ್ಬರು ಹುಡುಗರು. ಪ್ರೀತಿ ಗೀತಿ ಅಂತ ಪ್ರೌಢಶಾಲೆಯಲ್ಲಿ ಶುರು ಮಾಡಿದ್ದಾರೋ ಏನೋ? ಯಾವುದಕ್ಕೂ ನೀನು ಸರ
ಿಯಾಗಿ ವಿಚಾರಿಸು. ಹೇಳಲು ಹಿಂದೇಟು ಹಾಕಿದರೆ, ಒಂದೆರಡು ಕೊಟ್ಟಾದರೂ ಬುದ್ಧಿ ಕಲಿಸು" ಎಂದು ಉಪದೇಶ ಕೊಟ್ಟಳು. ಎಲ್ಲವನ್ನು ಕೇಳಿಸಿಕೊಂಡ ನಾನು ಸುಮ್ಮನೆ ಒಂದು ಕಿರುನಗೆ ಬೀರಿ ರೂಮಿನೊಳಗೆ ಹೋದೆ. ನನ್ನ ಹಿಂದೆಯೇ ಬಂದ ವಿಮಲ "ಅಲ್ವೇ ರಮಾ, ನಾನೇನೋ ನೀನು ಶಾಕ್ ಆಗ್ತೀಯಾ ಅಂದುಕೊಂಡರೆ ನೀನೇನು ಆರಾಮವಾಗಿ ಇದ್ಯಲ್ಲ. ಇದನ್ನೆಲ್ಲಾ ಹೀಗೆ ಬಿಡಬಾರದು, ಸರಿಯಾಗಿ ವಿಚಾರಿಸಿ ಬುದ್ಧಿ ಹೇಳು ನಿನ್ನ ಮಗಳಿಗೆ" ಎಂದವಳಿಗೆ ನನ್ನ ಕೈಲಿದ್ದ ಸರ್ಟಿಫಿಕೇಟ್ ಮತ್ತು ಪಾರಿತೋಷಕವನ್ನು ಅವಳ ಕೈಗೆ ಕೊಡುತ್ತಾ "ನೋಡು ಇದು ನನ್ನ ಮಗಳು ಮತ್ತು ಮೊನ್ನೆ ನೀನು ನೋಡಿದ್ಯಲ್ಲ ಆ ಮೂರು ಮಕ್ಕಳು ಅವರೆಲ್ಲ ಅಂತರ ಶಾಲೆ ಕ್ವಿಜ್ ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದ ಬಹುಮಾನ. ಅಂದು ಇನ್ನೊಂದು ಶಾಲೆಯಲ್ಲಿ ನಡೆದ ಸ್ಪರ್ಧೆಗೆ ಬಸ್ ನಲ್ಲಿ ಹೋಗಿದ್ದರು. ವಾಪಸ್ಸು ಬರುವಾಗ ಚುರುಮುರಿ ತಿಂದುಕೊಂಡು ಬಂದ್ವಿ ಅಮ್ಮ ಎಂದು ಮೊನ್ನೆಯೇ ಅವಳು ನಂಗೆ ಹೇಳಿದಳು" ಎಂದೆ.
ವಿಮಲಾಳ ಮುಖ ಏಕೋ ಇಂಗು ತಿಂದ ಮಂಗನಂತೆ ಆಯ್ತು ಎಂದು ಭಾಸವಾಯಿತು ನನಗೆ! ಆದರೂ ಅವಳು ತನ್ನ ತಪ್ಪನ್ನು ತೋರಿಸಿಕೊಳ್ಳದೆ "ಓ ಹೌದಾ, ಸ್ಪರ್ಧೆಗೆ ಹೋಗಿದ್ಲಾ. ವೆರಿ ಗುಡ್. ನನ್ನ ಕಡೆಯಿಂದ ಅಭಿನಂದನೆಗಳನ್ನು ತಿಳಿಸಿದೆ ಎಂದು ಹೇಳು" ಎನ್ನುತ್ತಾ ಮನೆಯಿಂದ ಹೊರ ನಡೆದಳು.
ಹೀಗೆಯೇ ಒಂದು ದಿನ ಮನೆ ಕೆಲಸಗಳು ಬೇಗ ಮುಗಿದಿದ್ದರಿಂದ ದಿನಪತ್ರಿಕೆಯನ್ನು ತಿರುವಿ ಹಾಕುತ್ತಾ ಕುಳಿತಿದ್ದೆ. ಒಂದು ಸುದ್ದಿ ನನ್ನ ಗಮನವನ್ನು ಸೆಳೆಯಿತು. ಕಾಲೇಜು ಓದುವ ಹುಡುಗನೊಬ್ಬ ತನ್ನ ಗರ್ಲ್ ಫ್ರೆಂಡ್ ಅನ್ನು ಬೈಕಿನ ಹಿಂದೆ ಕೂರಿಸಿಕೊಂಡು ವೀಲಿಂಗ್ ಮಾಡಲು ಪ್ರಯತ್ನಿಸುತ್ತಿದ್ದ. ಇವರ ಆಟಗಳನ್ನು ನೋಡಿ ಸಾಕಾದ ಜನರು, ಪೊಲೀಸರಿಗೆ ದೂರನ್ನು ನೀಡಿದ್ದಾರೆ. ಪೊಲೀಸರು ಹುಡುಗ ಹುಡುಗಿ ಇಬ್ಬರನ್ನು ಕರೆದು ಎಚ್ಚರಿಸಿದ್ದಾರೆ. ಜೊತೆಗೆ ಪೋಷಕರಿಗೂ ವಿಷಯ ಮುಟ್ಟಿಸಿದ್ದಾರೆ ಎಂದಿತ್ತು ಆ ವರದಿ. ಹುಡುಗನ ಹೆಸರೇನು ನೋಡೋಣ ಎಂದುಕೊಳ್ಳುವಷ್ಟರಲ್ಲಿ, ಮೊಬೈಲ್ಗೆ ನನ್ನ ಗಂಡನಿಂದ ಒಂದು ಮೆಸೇಜ್ ಬಂತು. ಅದರ ಜೊತೆಗೆ ಫೋನಿನ ಕರೆಯೂ ಕೂಡ! ಕೆಲಸಕ್ಕೆ ಹೋದ ನಂತರ ಹೆಂಡ್ತಿಯನ್ನು ನೆನಪಿಸಿಕೊಳ್ಳದ ಇವರು, ಇಂದೇಕೆ ಹೀಗೆ ಕಾಲ್ ಮಾಡುತ್ತಿದ್ದಾರೆ ಎಂದು ಕರೆಯನ್ನು ಸ್ವೀಕರಿಸಿದೆ.
"ಹಲೋ ರಮಾ, ನಾನು ಕಳಿಸಿರುವ ವಿಡಿಯೋ ಕ್ಲಿಪ್ ಅನ್ನು ಒಮ್ಮೆ ನೋಡು. ಅದೇ ನಿನ್ನ ಮುದ್ದಿನ ಗೆಳತಿ ವಿಮಲಳ ಮಗ ವಿನೋದಂದು ಕಣೆ! ಯಾರೋ ಫಾರ್ವರ್ಡ್ ಮಾಡಿದರು. ತೆಗೆದು ನೋಡಿದರೆ ನಿನ್ನ ರೇಡಿಯೋ ಗೆಳತಿ ವಿಮಲಳ ಮಗಂದು. ನೋಡು ಅವನ ಪ್ರತಾಪಗಳನ್ನ! ಓದುವುದನ್ನ ಬಿಟ್ಟು ಹುಡುಗಿಯನ್ನು ಕೂರಿಸಿಕೊಂಡು ವೀಲಿಂಗ್ ಮಾಡುತ್ತಿದ್ದಾನೆ. ಕರೆದು ತೋರಿಸು ನಿನ್ನ ಗೆಳತಿಗೆ ಈ ವಿಡಿಯೋವನ್ನ! ಯಾವಾಗಲೂ ಆಕೆಗೆ ಬೇರೆ ಮನೆಯವರ ಮೇಲೆಯೇ ಕಣ್ಣು. ತನ್ನ ಕುಟುಂಬದ ಬಗ್ಗೆ ಯೋಚನೆಯೇ ಇಲ್ಲ ಅನಿಸುತ್ತೆ. ಈಗಲಾದರೂ ತಿಳಿ ಹೇಳು ಅವಳಿಗೆ. ಎಲ್ಲರ ಮನೆಯ ದೋಸೆಯೂ ತೂತೇ ಎಂದು!! ಎಲ್ಲರ ಮನೆಗಳಲ್ಲೂ ಒಂದಲ್ಲ ಒಂದು ಪ್ರಾಬ್ಲಮ್ ಗಳು ಇರುತ್ತವೆ. ಪೂರ್ತಿ ಪರ್ಫೆಕ್ಟ್ ಆಗಿರುವುದಕ್ಕೆ ಸಾಧ್ಯವಿಲ್ಲ. ತಾನು ಪರ್ಫೆಕ್ಟ್ ಎಂದು ಇತರರ ವಿಷಯದ ಬಗ್ಗೆ ಮೂಗು ತೋರಿಸಿದರೆ ಇದೇ ಆಗೋದಂತ ಹೇಳವಳಿಗೆ" ಎಂದು ಒಂದೇ ಉಸಿರಿಗೆ ತಮ್ಮ ಮಾತುಗಳನ್ನು ಹೇಳಿ ಫೋನಿಟ್ಟರು. ನಾನೂ ಸಹ ಅವರು ಹೇಳಿದ ಮಾತನ್ನೇ ಮೆಲುಕು ಹಾಕುತ್ತಾ "ಹೌದಲ್ವೇ? ಎಲ್ಲರ ಮನೆಯಲ್ಲೂ ಒಂದಲ್ಲ ಒಂದು ತೊಂದರೆ, ಕಷ್ಟ, ಹುಳುಕು, ನ್ಯೂನ್ಯತೆ ಇದ್ದೇ ಇರುತ್ತದೆ. ಅದನ್ನೇಕೆ ಇವಳು ಇಷ್ಟು ದೊಡ್ಡದು ಮಾಡಿ ಸದಾ ಎಲ್ಲರ ಕಿವಿಗೂ ಊದುತ್ತಿರುತ್ತಾಳೆ?!" ಎಂದು ಪ್ರಶ್ನಿಸಿಕೊಳ್ಳುತ್ತಾ ದೋಸೆ ಹಿಟ್ಟನ್ನು ರುಬ್ಬಲು ಹೋದೆ.