Achala B.Henly

Abstract Classics Inspirational

4  

Achala B.Henly

Abstract Classics Inspirational

ನಾನು ದೀಪಾ...

ನಾನು ದೀಪಾ...

5 mins
308



ನಾಳೆ ನ್ಯೂಸ್ ರೀಡರ್ ಆಗಿ ಕೆಲಸ ಮಾಡುತ್ತಿರುವ ಚಾನೆಲ್ ನವರು ನನ್ನದೇ ಸಂದರ್ಶನವನ್ನು ತೆಗೆದುಕೊಳ್ಳಲು ರೆಡಿಯಾಗಿ ಬರಲು ಹೇಳಿದ್ದಾರೆ..!! ಇಷ್ಟೂ ದಿನ ಬೇರೆಯವರನ್ನು ಸಂದರ್ಶಿಸುತ್ತಾ, ವಾರ್ತೆಗಳನ್ನು ಓದುತ್ತಾ, ಎಲ್ಲರಿಗೂ ಚಿರಪರಿಚಿತಳಾಗಿದ್ದ ನಾನು, ನಾಳೆಯಿಂದ ಇನ್ನೂ ಎಲ್ಲರಿಗೂ ಹತ್ತಿರವಾಗಲಿದ್ದೇನೆ...!! ನನ್ನ ಸಂದರ್ಶನವನ್ನು ನಮ್ಮ "ವಿಜಯ ನ್ಯೂಸ್ ಚಾನೆಲ್" ಮಾಡಿ ಮುಗಿಸಿದ ಮೇಲೆ, ನನ್ನ ಬದುಕಿನ ಬಗ್ಗೆ ಎಲ್ಲರಿಗೂ ಇನ್ನೂ ಚೆನ್ನಾಗಿ ಗೊತ್ತಾಗಿಬಿಡುತ್ತದೆ. ಇರಲಿ ಇದರಿಂದ ಒಂದಷ್ಟು ಜನರಿಗೆ ಒಳ್ಳೆಯ ರೀತಿಯಲ್ಲಿ ಸಹಾಯವಾದರೆ ನನಗಷ್ಟೇ ಸಾಕು.


ನನ್ನಂತೆ ಇನ್ನೂ ಅನೇಕ ಜನ ಈ ಸಮಾಜದಲ್ಲಿ ಒಂಟಿಯಾಗಿ ಬಾಳುತ್ತಿದ್ದಾರೆ. ಅವರಿಗೆಲ್ಲ "ನನ್ನ ಬದುಕು ನನ್ನ ನಿರ್ಧಾರ" ಈ ಕಾರ್ಯಕ್ರಮದಲ್ಲಿ ನನ್ನನ್ನು ನೋಡಿ ಸ್ಪೂರ್ತಿಗೊಂಡು, ಉತ್ತೇಜಿತರಾದರೆ ನನಗಷ್ಟೇ ಸಾಕು...!! ನನಗೆ ಇನ್ನೇನಾದರೂ ಬೇಕು ಎಂದು ಮತ್ತೆಂದೂ ಹಂಬಲಿಸುವುದಿಲ್ಲ. "ಥ್ಯಾಂಕ್ಯೂ ದೇವರೇ" ಈ ಹಂತದವರೆಗೆ ನನ್ನನ್ನು ತಂದು ನಿಲ್ಲಿಸಿದ್ದಕ್ಕೆ. ನಿನ್ನ ಮೇಲಿನ ನಂಬಿಕೆ ನನ್ನನ್ನು ಇಂದು ಈ ಸಮಾಜದಲ್ಲಿ ತಲೆಯೆತ್ತಿ ನಿಲ್ಲುವಂತೆ ಮಾಡಿದೆ. ನಾಳೆ ನನ್ನ ಸಹೋದ್ಯೋಗಿ ಮೀನಾ ನನ್ನನ್ನು ಸಂದರ್ಶಿಸುತ್ತಾಳಂತೆ.


ಅಂದಹಾಗೆ ಈ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಹೇಳಿದ್ದು ನಾನೇ ಅಲ್ಲವೇ..!! ನಮ್ಮ ಚೀಫ್ ಎಡಿಟರ್ ಬಳಿ "ಸರ್, ವಾರಕ್ಕೊಮ್ಮೆ ಒಬ್ಬ ಸಾಧಕ ಅಥವಾ ಸಾಧಕಿಯ ಬಗ್ಗೆ ಸಂದರ್ಶನ ಮಾಡೋಣ" ಎಂದು ಹೇಳಿದಾಗ ನನ್ನ ಕೆಲಸದ ಬಗ್ಗೆ ತಿಳಿದಿದ್ದ ನಮ್ಮ ಸರ್ "ಏನೆಂದು ಹೆಸರಿಡುತ್ತೀರಿ ಈ ಕಾರ್ಯಕ್ರಮಕ್ಕೆ..?" ಎಂದು ತಕ್ಷಣ ಕೇಳೇಬಿಟ್ಟರು. ನಾನು ಆ ಕ್ಷಣದಲ್ಲಿಯೇ "ಸರ್, ನನ್ನ ಬದುಕು ನನ್ನ ನಿರ್ಧಾರ" ಎಂದು ಇಡಬಹುದು. ತುಂಬಾ ಕ್ಯಾಚಿಯಾಗಿ ಇರುತ್ತದೆ".


ಎಲ್ಲರೂ ಅವರವರ ಬದುಕಿಗೆ ಅವರೇ ನಾಯಕರಲ್ಲವೇ...? ಅವರ ಬದುಕು ಹೇಗಿರಬೇಕೆಂದು ನಿರ್ಧರಿಸುವವರು ಅವರೇ ಅಲ್ಲವೇ..? ನಾವು ಬೇರೆಯವರ ಅಭಿಪ್ರಾಯಗಳನ್ನು ಕೇಳಿದರೂ, ಕೊನೆಗೆ ನಮ್ಮ ನಿರ್ಧಾರವೇ ಅಂತಿಮವಲ್ಲವೇ..? ಹಾಗಾಗಿ ಈ ಹೆಸರು ಸೂಕ್ತ" ಎಂದಿದ್ದೆ. ಇದನ್ನು ಕೇಳಿದ ನಮ್ಮ ಚೀಫ್ "ಸರಿ ಮುಂದುವರೆಯಿರಿ, ಆಲ್ ದ ಬೆಸ್ಟ್" ಎಂದಿದ್ದರು..!!


ಈಗ ಈ ಕಾರ್ಯಕ್ರಮಕ್ಕೆ ನಾಳೆ ಒಂದು ವರ್ಷ ತುಂಬುತ್ತದೆ. ಹಾಗಾಗಿ ನಮ್ಮ ಚೀಫ್ ನನ್ನನ್ನೇ ಮುಖ್ಯ ಅತಿಥಿಯನ್ನಾಗಿ ಬರಲು ಹೇಳಿದ್ದಾರೆ..!! ನಿಜಕ್ಕೂ ಹಾಗೆ ಹೇಳಿದಾಗ ನನಗೆ ಆಶ್ಚರ್ಯವಾಯಿತು. "ನಾನೇನು ಸಾಧನೆ ಮಾಡಿದ್ದೀನಿ ಎಂದು ನನ್ನನ್ನು ಆಯ್ಕೆ ಮಾಡಿದ್ದೀರಿ ಸರ್..?" ಎಂದು ಬೆರಗಿನಿಂದ ಕೇಳಿದ್ದೆ. ಅದಕ್ಕೆ ಅವರು "ನಿಮ್ಮ ಬದುಕು ಎಲ್ಲರಿಗೂ ಸ್ಪೂರ್ತಿ ದೀಪಾ. ನಿಮ್ಮ ಬದುಕಿನ ಒಳನೋಟಗಳು ನಮ್ಮೆಲ್ಲರ ಒಳಗಣ್ಣನ್ನು ತೆರೆದು ಸಮಾಜವು ಸುಧಾರಿಸಿದರೆ, ನಮಗೆ ಅದೇ ತೃಪ್ತಿ..!!" ಎಂದು ಹಾರೈಸಿದ್ದರು. ಹೌದಲ್ಲವೇ ನಾನು ಒಂದು ರೀತಿಯಲ್ಲಿ ಸಾಧಕಿ ಎಂದೇ ಹೇಳಬಹುದು.


ಯಾವುದೋ ಒಂದು ಚಿಕ್ಕ ಹಳ್ಳಿಯಲ್ಲಿ ಹುಟ್ಟಿ, ಈಗ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಾ ಒಬ್ಬಂಟಿಯಾಗಿ ಜೀವಿಸುತ್ತಿದ್ದೇನೆ ಅಂದರೆ, ಅದು ಒಂದು ರೀತಿಯ ಸಾಧನೆಯೇ ಸರಿ. ಇನ್ನೇನು ಕೆಲವೇ ದಿನಗಳಲ್ಲಿ ನನಗೆ ನಲ್ವತ್ತು ವರ್ಷಗಳು ತುಂಬುತ್ತವೆ. ಆದರೆ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲು ನನಗೆ ನನ್ನವರು ಎಂದು ಯಾರೂ ಇಲ್ಲ...!!


ಎಲ್ಲರೂ ಇದ್ದು, ಅನಾಥೆಯಂತೆ ಬದುಕುವ ಸ್ಥಿತಿ ನನ್ನದಾಗಿದೆ. ಅಮ್ಮನೊಟ್ಟಿಗೆ ಮಾತನಾಡುವ ಫೋನ್ ಕಾಲ್ ಮಾತ್ರ ನನಗೆ ಆಸರೆಯ ದೀಪವಾಗಿದೆ..!! ಅವಳನ್ನು ಮುಖತಃ ಭೇಟಿಯಾಗಿ ಹತ್ತರಿಂದ ಹದಿನೈದು ವರ್ಷಗಳೇ ಕಳೆದಿವೆ. ಭೇಟಿಯಾಗಲು ಅಮ್ಮನಿಗೆ ಇಷ್ಟವಿದ್ದರೂ, ಅವಿದ್ಯಾವಂತೆ ಆಕೆ. ಯಾರಾದರೂ ಜೊತೆಗೆ ಇರಲೇಬೇಕು.


ನಾನು ಹುಟ್ಟಿ ಬೆಳೆದ ಮನೆಗೆ ಹೋದರೆ, 'ನನ್ನ ಸ್ವಂತ ಮನೆಯೇ ಇದು..?'


ಎನ್ನುವಂತೆ ನನ್ನನ್ನು ಅತ್ಯಂತ ಪರಕೀಯಳನ್ನಾಗಿ ನಡೆಸಿಕೊಳ್ಳುತ್ತಾರೆ. ಅವರಿಗೆ ನಾನೆಂದರೆ ಕಸವಂತೆ. ಆ ಮಟ್ಟಿಗೆ ನನ್ನ ಬಗ್ಗೆ ಅವರಿಗೆ ಅಸಮಾಧಾನವಿದೆ. ನೀನು ಎಲ್ಲಿಗೂ ಸಲ್ಲದವಳು ಎಂದು ಹೀಯಾಳಿಸುತ್ತಾರೆ. ಈ ರೀತಿ ನನ್ನನ್ನು ನಿಕೃಷ್ಟವಾಗಿ ಕಂಡಿದ್ದೇ, ಇಂದು ನನ್ನನ್ನು ಇಲ್ಲಿಗೆ ತಂದು ನಿಲ್ಲಿಸಿದೆ..!! ನನ್ನನ್ನು ಆರ್ಥಿಕವಾಗಿ ಸ್ವಾವಲಂಬಿಯನ್ನಾಗಿ ಮಾಡಿದೆ.


ಅಷ್ಟಕ್ಕೂ ನಾನು ಮಾಡಿದ ತಪ್ಪಾದರೂ ಏನು..? ಎಲ್ಲವೂ ಪ್ರಕೃತಿದತ್ತವಾಗಿ ಆಗಿದ್ದಲ್ಲವೇ..? ಗಂಡಿನ ದೇಹದೊಳಗೆ ಹೆಣ್ಣಿನ ಮನಸ್ಸನ್ನು ಇಟ್ಟು ಭಗವಂತ ನನ್ನನ್ನು ಹುಟ್ಟಿಸಿದರೆ, ನಾನೇನು ಮಾಡಲಿ..!! ಅದು ನನ್ನ ತಪ್ಪೇ...? ಮಾಡದೇ ಇರುವ ತಪ್ಪಿಗೆ ನನ್ನನ್ನು ಏಕೆ ಬಲಿಪಶುವಂತೆ ಹೆಜ್ಜೆ ಹೆಜ್ಜೆಗೂ ನೀವೆಲ್ಲರೂ ನನ್ನನ್ನು ಕಂಡಿರಿ..!! 


ದೀಪಕ್ ಎಂದು ನಾಮಕರಣ ಮಾಡಿದ ನೀವೆಲ್ಲ, ದಿನವೂ "ದೀಪು ದೀಪು" ಎಂದು ಪ್ರೀತಿಯಿಂದ ಕರೆಯುತ್ತಾ ನನ್ನೊಂದಿಗೆ ಆಟವಾಡುತ್ತಿದ್ದಿರಿ..!! ಆದರೆ ಹನ್ನೆರಡು ಹದಿಮೂರು ವರ್ಷಕ್ಕೆ ಬಂದಾಗ, ನನಗೇಕೋ ಹುಡುಗಿಯರ ಬಟ್ಟೆ, ಆಭರಣಗಳ ಮೇಲೆ ಒಲವಾಗಲು ಶುರುವಾಯಿತು..!!


ಆಂಟಿಯ ಮಗಳ ಚೂಡಿದಾರ, ಫ್ರಾಕ್ ಗಳನ್ನು ಕಂಡರೆ ನನಗೇನೋ ಎಲ್ಲಿಲ್ಲದ ಪ್ರೀತಿ.!! ತೊಟ್ಟುಕೊಳ್ಳಲು ಇಷ್ಟಪಡುತ್ತಿದ್ದೆ. ಮನಸ್ಸು ಅಂತಹ ಡ್ರೆಸ್ ಗಳನ್ನೇ ಹಾಕಿಕೋ, ಹೆಣ್ಣು ಮಕ್ಕಳಂತೆ ಸಿಂಗಾರ ಮಾಡಿಕೋ ಎಂದರೆ, ನಾನೇನು ಮಾಡಲಿ..?


ಎಲ್ಲರೂ ಅಂದಿನಿಂದ ನನ್ನನ್ನು ಆಡಿಕೊಳ್ಳಲು ಶುರು ಮಾಡಿದಿರಿ. "ಅದೇಕೆ ದೀಪು ಹೆಣ್ಣಿಗನಂತೆ ನಡೆಯುತ್ತೀಯಾ, ಅದ್ಯಾಕೆ ದೀಪು ನಿಮ್ಮಕ್ಕನ ಬಟ್ಟೆ ಧರಿಸುತ್ತೀಯಾ..?" ಎಂದು ಕ್ಷಣ ಕ್ಷಣವೂ ಮೂದಲಿಸಲು ಶುರು ಮಾಡಿದಿರಿ. ಪ್ರಾಯ ಹೆಚ್ಚಾದಂತೆ ನನಗೆ ನನ್ನ ಮೇಲೆ ಅನುಮಾನಗಳು, ಗೊಂದಲಗಳು ಶುರುವಾದವು.


"ಹೌದು ನಾನೇಕೆ ಹೀಗೆ..? ಕುಡಿ ಮೀಸೆ ಚಿಗುರುತ್ತಿದೆ. ಆದರೆ ಮನದಲ್ಲಿ ಹುಡುಗರ ಬಗ್ಗೆಯೇ ಬಯಕೆ ಉಂಟಾಗುತ್ತಿದೆ..!! ಎಲ್ಲಾ ಹುಡುಗರಿಗೂ ಹುಡುಗಿಯರ ಮೇಲೆ ಆಕರ್ಷಣೆಯಾದರೆ, ನನಗೆ ಹುಡುಗಿಯರು ಧರಿಸುವ ಬಟ್ಟೆ, ಆಭರಣ, ಮೇಕಪ್ಗಳ ಬಗ್ಗೆ ಒಲವಾಗುತ್ತಿದೆ..!! ಹೌದು ನನಗೇನೋ ಆಗಿದೆ. ಏಕೆ ಹೀಗಾಗುತ್ತಿದೆ..?"


"ನನ್ನ ಧ್ವನಿ ಮೃದುವಾಗಿಯೇ ಉಳಿದಿದೆ. ಏಕೆ ಇತ್ತೀಚಿಗೆ ನನ್ನ ಸ್ಕೂಲಿನ ಗೆಳೆಯರೆಲ್ಲ ನನ್ನ ಬಗ್ಗೆ ಅವರವರೇ ಆಡಿಕೊಂಡು, ನನ್ನಿಂದ ದೂರ ಸರಿಯುತ್ತಿದ್ದಾರೆ...!!" ಹೀಗೆ ಎಷ್ಟೋ ತಿಂಗಳು ಅಲ್ಲಲ್ಲ ವರ್ಷಗಳು ದ್ವಂದ್ವದಲ್ಲೇ ಬದುಕಿದೆ. ಕೊನೆಗೆ ಇದರ ಹಿಂದಿನ ಕಾರಣ ನನಗೆ ಗೊತ್ತಾಗಿ ಹೋಯಿತು..!


ದೇವರ ವರವೋ ಅಥವಾ ಶಾಪವೋ ಗೊತ್ತಿಲ್ಲ. ಆದೇಕೋ ನಾನು ತೃತೀಯ ಲಿಂಗಿಯಾಗಿ ಹುಟ್ಟಿದ್ದೆ. ನಾನು ಮಂಗಳಮುಖಿಯಾಗಿದ್ದು, ಇನ್ನು ಅವರ ಸಮುದಾಯಕ್ಕೆ ಸೇರುವುದೇ ಸರಿ ಎಂದು ತೀರ್ಮಾನಿಸಿಬಿಟ್ಟೆ..!! ಅಮ್ಮನೊಬ್ಬಳನ್ನು ಬಿಟ್ಟು ಮನೆಯವರೆಲ್ಲರೂ ನನ್ನನ್ನು ವೈರಿಯಂತೆ ಕಾಣಲು ಶುರು ಮಾಡಿದರು.


ಹತಾಶೆಗೊಳಗಾದ ನಾನು ಎಷ್ಟೇ ಬೇಡಿಕೊಂಡರೂ, ನನ್ನನ್ನು ಅತ್ಯಂತ ಕೆಳಮಟ್ಟದಲ್ಲಿ ಕಾಣಲು ಶುರುಮಾಡಿದರು. ಕಾಲೇಜಿನಲ್ಲಿ ಸಹ ಇದೇ ಮುಂದುವರೆಯಿತು. ಕೊನೆಗೆ ಗಟ್ಟಿ ಮನಸ್ಸು ಮಾಡಿ ಅಮ್ಮ ಕೊಟ್ಟಿದ್ದ ಹಣ, ತಿಂಡಿಯ ಬುತ್ತಿ, ಫೋನು ಮತ್ತು ಬಟ್ಟೆಗಳೊಂದಿಗೆ ಬೆಂಗಳೂರನ್ನು ತಲುಪಿದೆ.


ನನ್ನ ಪಿಯುಸಿ ಪಾಸ್ ಎಂಬ ಸರ್ಟಿಫಿಕೇಟ್ ಗೆ ಯಾವ ದೊಡ್ಡ ಕೆಲಸವೂ ಸಿಗಲಿಲ್ಲ. ಸಿಕ್ಕಸಿಕ್ಕ ಕೆಲಸವನ್ನು ಶ್ರದ್ಧೆ ಇಟ್ಟು ಮಾಡಲು ಪ್ರಾರಂಭಿಸಿದೆ. ಇಲ್ಲೂ ಆಡಿಕೊಳ್ಳುವವರಿಗೇನೂ ಕಡಿಮೆ ಇಲ್ಲ. ಮುಂದುವರೆಯುತ್ತಲೇ ಇತ್ತು ಇಂತಹ ಅವಮಾನ. ಹಾಗೆಯೇ ನನ್ನ ಹತಾಶೆಗಳು ಸಹ...!! ಆದರೆ ಗಟ್ಟಿ ಮನಸ್ಸಿನಿಂದ ಕೇಳಿಸದವಳಂತೆ ಇದ್ದೆ.


ಮುಂದೆ ನಮ್ಮ ಸಮುದಾಯದವರೇ ನನಗೆ ಪರಿಚಯವಾದರು. ಅವರಿಂದ ಸಿಕ್ಕ ಧೈರ್ಯ, ನನಗೆ ಹೊಸ ಹುರುಪನ್ನು ಮೂಡಿಸಿತು. "ಓದು ದೀಪಕ್ ನಾವು ನೋಡಿಕೊಳ್ಳುತ್ತೇವೆ"ಎಂಬ ಆಶ್ವಾಸನೆ ನನಗೆ ಧೈರ್ಯ ಮೂಡಿಸಿತು. ದೂರ ಶಿಕ್ಷಣದ ಮೂಲಕ ಆರ್ಟ್ಸ್ ನಲ್ಲಿ ಬ್ಯಾಚುಲರ್ ಮತ್ತು ಮಾಸ್ಟರ್ಸ್ ಮಾಡಿದೆ. ಉತ್ತಮವಾದ ಅಂಕಿಗಳನ್ನು ಗಳಿಸಿದೆ. ಜೊತೆಜೊತೆಗೆ ಸಿಕ್ಕ ಕೆಲಸಗಳನ್ನು ಮಾಡುತ್ತಿದ್ದೆ.


ಈ ಮಧ್ಯೆ ನನಗೆ ಮೊಳೆತಿದ್ದ ಒಂದು ಆಸೆ ಯಾವಾಗಲೂ ನನ್ನ ಮನಸ್ಸನ್ನು ಕೊರೆಯುತ್ತಲೇ ಇತ್ತು. ಅದೇ ನಾನು ಪೂರ್ತಿ ಹೆಣ್ಣಾಗಬೇಕೆಂಬ ಹಂಬಲ...!! ಎಷ್ಟು ವರ್ಷಗಳೆಂದು ಬೇರೆಯವರ ದೇಹದಲ್ಲಿ ಜೀವಿಸುವುದು..? ನಾನು ನಾನಾಗಿರಬೇಕು. "ಮನಸ್ಸಿನಿಂದ ನಾನು ಹೆಣ್ಣು. ಆದರೆ ನೋಡುವವರಿಗೆ ಮಾತ್ರ ನಾನು ಗಂಡು..!!"


ಇಲ್ಲ ಸಂಪೂರ್ಣವಾಗಿ ನಾನು ಹೆಣ್ಣಾದರೆ ಮಾತ್ರ ನನ್ನ ಜೀವನಕ್ಕೊಂದು ಅರ್ಥ...!!" ಎಂದು ತೀರ್ಮಾನಿಸಿದೆ. ಮಾಡಿದ ಕೆಲಸಗಳಿಂದ ದೊರೆತ ಹಣವನ್ನು ಕೂಡಿಸುತ್ತಲೇ ಬಂದಿದ್ದೆ. ಅದರೊಂದಿಗೆ ನನ್ನ ಸಮುದಾಯದವರೂ ನನಗೆ ಹಣ ಸಹಾಯ ಮಾಡಿದರು. ಇವೆಲ್ಲದರ ಪ್ರತಿಫಲದಿಂದ ನಾನು ಪೂರ್ತಿಯಾಗಿ ಹೆಣ್ಣಾಗುವಂತೆ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಂಡೆ.


ನೋವನ್ನು ತಾಳಲು ಬಹಳ ಕಷ್ಟಕರವಾಯಿತು. ಆದರೆ ಅಷ್ಟೂ ವರ್ಷ ನನ್ನ ಕುಟುಂಬದವರು, ಸ್ನೇಹಿತರೆಲ್ಲರೂ ನನ್ನನ್ನು ಹೀನಾಯಮಾನವಾಗಿ ಆಡಿಕೊಳ್ಳುತ್ತಿದ್ದರಲ್ಲ..!! ಆ ನೋವಿನ ಮುಂದೆ, ಈ ನೋವು ಅಷ್ಟೇನೂ ದೊಡ್ಡದೆನಿಸಲಿಲ್ಲ..!! ಅಂತೂ ಯಶಸ್ವಿಯಾಗಿ ಲಿಂಗ ಪರಿವರ್ತನೆಯ ಶಸ್ತ್ರ ಚಿಕಿತ್ಸೆಯಾಯಿತು.


ಈಗ ನಾನು ದೀಪಕ್ ಅಲ್ಲ. ಇನ್ನು ಮೇಲಿಂದ ನಾನು ಇಡೀ ಪ್ರಪಂಚಕ್ಕೆ "ದೀಪಾ" ಎಂದೇ ಪ್ರಖ್ಯಾತಳಾಗುತ್ತೇನೆ ಎಂದು ನಿರ್ಧರಿಸಿದೆ. ಅಂದಿನಿಂದ ನನ್ನೆಲ್ಲಾ ವೇಷಭೂಷಣಗಳು ಬದಲಾದವು. ನಾನು ಸಂಪೂರ್ಣವಾಗಿ ಹೆಣ್ಣಾಗಿದ್ದೆ. ಜುಟ್ಟು, ಸೀರೆ, ಮುಖಕ್ಕೆ ಮೇಕಪ್ ಎಲ್ಲವೂ ಬಂತು. ನನ್ನನ್ನು ನಾನು ಸಿಂಗರಿಸಿಕೊಂಡು ಕನ್ನಡಿಯಲ್ಲಿ ನೋಡಿದಾಗ ಬಲು ಆನಂದವಾಯಿತು..!! ಜೀವನದಲ್ಲಿ ಗೆದ್ದ ಖುಷಿ ನನ್ನದಾಗಿತ್ತು.


ಆದರೆ ಸುತ್ತಮುತ್ತ ಇದ್ದ ಕೆಲ ಕಳ್ಳಕಾಕರು, ನನ್ನನ್ನು ರಾತ್ರಿ ಪ್ರಪಂಚಕ್ಕೆ, ಕಾಮುಕರೆಡೆಗೆ ಎಳೆಯಲು ನೋಡಿದರು. "ನೀನು ಸಂಘದಿಂದ ತೆಗೆದುಕೊಂಡ ಹಣವನ್ನು ತೀರಿಸದಿದ್ದರೆ ಬೇರೆಯವರಂತೆ ರಾತ್ರಿ, ಪುರುಷರನ್ನು ಸೆಳೆಯುವ ಕೆಲಸವನ್ನು ಮಾಡಲೇಬೇಕು, ಇಲ್ಲ ಭಿಕ್ಷಾಟನೆಯನ್ನಾದರೂ ಮಾಡಿ ಸಾಲ ತೀರಿಸಬೇಕು" ಎಂದು ಆಜ್ಞೆ ಇಟ್ಟರು.


ಆಗಲೇ ನಾನು ಓದಿದ್ದ ಮಾಸ್ಟರ್ಸ್ ಡಿಗ್ರಿ ನನಗೆ ಸಹಾಯಕ್ಕೆ ಬಂದದ್ದು. ಇಷ್ಟು ಮಾತ್ರವಲ್ಲ ಇತ್ತೀಚಿಗೆ ಸರಕಾರದವರು ಸಹ ನಮ್ಮ ಬಗ್ಗೆ ಸಹಾನುಭೂತಿ ತೋರಿಸಲು ಶುರು ಮಾಡಿದ್ದಾರೆ. ಕೆಲಸದ ಅರ್ಜಿಗಳಲ್ಲಿ ಹೆಣ್ಣು, ಗಂಡು ಎಂಬುದರ ಜೊತೆಗೆ ತೃತೀಯ ಲಿಂಗಿ ಎಂದು ನಮೂದಿಸಲು ಅವಕಾಶ ಕೊಟ್ಟಿದ್ದಾರೆ. ಇಂತಹ ಒಂದು ಅವಕಾಶವನ್ನು ನಾನು ಉಪಯೋಗಿಸಿಕೊಂಡು "ವಿಜಯ ಟಿವಿ" ನ್ಯೂಸ್ ರೀಡರ್ ಕೆಲಸಕ್ಕೆ ಅರ್ಜಿ ತುಂಬಿಸಿದೆ.


ಮೊದಲಿನಿಂದಲೂ ಕನ್ನಡ ಓದಲು, ಬರೆಯಲು ಇಷ್ಟ. ದಿನವೂ ನ್ಯೂಸ್ ಪೇಪರ್ ಓದುತ್ತೇನೆ. ಡಿಗ್ರಿ ಮಾಡಿದ್ದೇನೆ. "ಪರೀಕ್ಷಿಸುವ ನನ್ನ ಅದೃಷ್ಟವನ್ನ" ಎಂದು ಅರ್ಜಿ ಸಲ್ಲಿಸಿದೆ. ಇಂಟರ್ವ್ಯೂ ಅಟೆಂಡ್ ಮಾಡಲು ಹೋದಾಗ, ಅಲ್ಲಿಯೂ ಎಷ್ಟೋ ಜೋಡಿ ಕಣ್ಣುಗಳು ನನ್ನನ್ನು ನೋಡಿ ಒಳಒಳಗೆ ಮುಸಿಮುಸಿ ನಕ್ಕರು. ಆದರೆ ಚೀಫ್ ಎಡಿಟರ್ ಮೋಹನ್ ಸರ್ ಒಬ್ಬರನ್ನು ಬಿಟ್ಟು..!!


ನನ್ನ ಪೂರ್ತಿ ಕಥೆಯನ್ನು ಕೇಳಿ ಕಣ್ಣಲ್ಲಿ ನೀರು ತುಂಬಿಕೊಂಡರು. ನನ್ನ ವಿಸ್ತಾರವಾದ ಜ್ಞಾನದ ಹರಿವಿನ ಬಗ್ಗೆ ಹೆಮ್ಮೆಪಟ್ಟರು..!! "ನಾಳೆಯಿಂದಲೇ ಕೆಲಸಕ್ಕೆ ಬನ್ನಿ ತಿಂಗಳಿಗೆ ಇಪ್ಪತ್ತು ಸಾವಿರ ಸಂಬಳ" ಎಂದು ಅಪಾಯಿಂಟ್ಮೆಂಟ್ ಲೆಟರ್ ಕೊಟ್ಟೇಬಿಟ್ಟರು. ನನಗಂತೂ ಒಂದು ಕ್ಷಣ ಇದು ಕನಸೋ ಅಥವಾ ನನಸೋ ಎಂದು ತಿಳಿಯದೆ, ನನ್ನನ್ನು ನಾನು ಚಿವುಟಿಕೊಂಡೆ...!


ಈಗ ಕೆಲಸಕ್ಕೆ ಸೇರಿ ಎಂಟು ವರ್ಷಗಳೇ ಕಳೆದಿವೆ. ಮಾಡಿದ ಸಾಲವನ್ನೆಲ್ಲ ನನ್ನ ಸಂಘದವರಿಗೆ ತೀರಿಸಿದ್ದೇನೆ. ನನ್ನಂತೆ ಓದು ಮುಂದುವರೆಸಲು ಇಚ್ಚಿಸುವ ನಮ್ಮ ಸಂಘದವರಿಗೆ ಇಂದಿಗೂ ಸಹಾಯ ಮಾಡುತ್ತಲೇ ಬಂದಿದ್ದೇನೆ. ಹಣದ ಅಭಾವದಿಂದ ಸೆರಗನ್ನು ಹಾಸಲು ರೆಡಿಯಾಗಿದ್ದವರನ್ನು ಹಾಗೆ ಮಾಡದಂತೆ ತಿಳಿಹೇಳಿ, ಆರ್ಥಿಕವಾಗಿ ಸಹಾಯ ಮಾಡಿದ್ದೇನೆ. ಅವರೂ ಸಹ ನನ್ನಂತೆ ಕೆಲಸ ಹಿಡಿದು, ಸಮಾಜದ ಮುಖ್ಯವಾಹಿನಿಗೆ ಬರಲು ಪ್ರಯತ್ನಿಸುತ್ತಿದ್ದಾರೆ.


ಅಮ್ಮನೊಟ್ಟಿಗೆ ಬೇಸರವಾದಾಗ ಫೋನ್ ಮಾಡಿ ಹರಟುತ್ತೇನೆ. ಅವಳಿಗೂ ನನ್ನ ಜೀವನದ ಬಗ್ಗೆ ಹೆಮ್ಮೆಯಿದೆ. "ದೀಪದಂತೆ ಸದಾ ಬೆಳಗುತ್ತಿರು ದೀಪಾ" ಎಂದು ಹಾರೈಸುತ್ತಾಳೆ. ನಾಳೆಯ ಸಂದರ್ಶನಕ್ಕೆ ನಾನು ಈ ತಿಳಿಯಾದ ನೀಲಿ ಬಣ್ಣದ ಸೀರೆಯನ್ನು ಉಟ್ಟು, ತೆಳುವಾದ ಮೇಕಪ್ ಧರಿಸಿ ಹೋಗುತ್ತೇನೆ.


ಅಂದು "ದೇವರು ಶಾಪವಾಗಿ ನನ್ನನ್ನು ಹೀಗೆ ಹುಟ್ಟಿಸಿದ" ಎಂದುಕೊಂಡಿದ್ದೆ. ಆದರೆ ಹಾಗೆ ಅಂದುಕೊಂಡಿದ್ದು ನನ್ನ ತಪ್ಪು ಎಂದು ಈಗ ಅರಿವಾಗಿದೆ. ನಾಳೆಯ ನನ್ನ ಸಂದರ್ಶನವನ್ನು ನೋಡಿ "ಒಂದಷ್ಟು ಜನ ಅಸುರಕ್ಷತೆಯಿಂದ ನರಳುತ್ತಿರುವವರು, ಧೈರ್ಯವಹಿಸಿ ಉತ್ಸಾಹದಿಂದ ಸುರಕ್ಷತೆಯ ಕಡೆಗೆ ಹೆಜ್ಜೆ ಹಾಕಿ ಸಾಧಿಸಿದರೆ, ಅದೇ ನನ್ನ ಜೀವನದ ಸಾರ್ಥಕ್ಯ ಕ್ಷಣ. ಅದೇ ನನ್ನ ಜೀವನದ ಚಿಕ್ಕ ಸಾಧನೆ..!!






Rate this content
Log in

Similar kannada story from Abstract