ಕಾಡಿನ ಮಕ್ಕಳು ನಾಡಿಗೆ ಬಂದಾಗ...!
ಕಾಡಿನ ಮಕ್ಕಳು ನಾಡಿಗೆ ಬಂದಾಗ...!
"ಲೇ ಸುಮಿ ಇಲ್ಲಿ ನೋಡೆ! ಮತ್ತೆ ನಮ್ಮ ಊರಿಗೆ ನೆನ್ನೆ ಗಜರಾಜನ ಪಡೆ ಬಂದಿತ್ತಂತೆ. ಇದೇನು ಕಾಲ ಬಂತಪ್ಪ. ಕರೆಕ್ಟಾಗಿ ದಸರಾ ಸಮಯಕ್ಕೆ ಆನೆಗಳು ಮೈಸೂರಿನಂತಹ ಊರಿಗೆ ಬರುವುದನ್ನ ಓದಿದ್ದೇನೆ. ಆದರೆ ಇತ್ತೀಚಿಗೇಕೋ ಆನೆಗಳ ಹಿಂಡು ಹೊಲ ಗದ್ದೆಗಳಿಗೆ ನುಗ್ಗಿ ಹಾಳು ಮಾಡೋದು, ಇನ್ನೂ ಸಾಕಾಗಲಿಲ್ಲ ಎಂದರೆ ಜನರಿರುವ ಊರಿನ ಕಡೆಗೆ ಬರುವುದು, ಯಾಕೋ ಹೆಚ್ಚುತ್ತಿದೆ. ನೀನೇನಂತಿ?" ಎಂದು ಕೇಳಿದ ಶಂಕ್ರಣ್ಣ. "ಹೂಂ ಕಣ್ರೀ ನೀವು ಹೇಳೋದು ದಿಟ. ಮೊನ್ನೆ ನಮ್ಮ ಪಕ್ಕದ ಬೀದಿಯ ಸುಬ್ಬಿ ಮನೆಗೆ ನವಿಲು ಬಂದಿತ್ತಂತೆ. ಎಷ್ಟು ಚೆನ್ನಾಗಿತ್ತು ಅಂತೀನಿ! ಅದರ ಸೌಂದರ್ಯವೇನು? ಅದರ ಲಾಲಿತ್ಯಪೂರ್ಣ ನೃತ್ಯವೇನು? ಅಬ್ಬಾ ನಾನೇ ಒಂದು ಕ್ಷಣ ಮರುಳಾಗಿಬಿಟ್ಟೆ. ಇನ್ನೂ ಹೆಣ್ಣು ನವಿಲುಗಳು ಗಂಡು ನವಿಲು ನಾಟ್ಯವನ್ನು ನೋಡಿದರೆ ಫಿದಾ ಆಗೋದು ನೂರು ಪರ್ಸೆಂಟ್ ಗ್ಯಾರೆಂಟಿ ಅಂದುಕೊಂಡೆ!" ಎಂದಳು ಸುಮಿ.
"ಅಯ್ಯೋ ಸುಮಿ, ನಾನು ಟೆನ್ಶನ್ ನಲ್ಲಿ ಆನೆಗಳು ಇತ್ತೀಚಿಗೆ ಕಾಡು ಬಿಟ್ಟು ನಾಡಿನ ಕಡೆಗೆ ಪಯಣ ಬೆಳೆಸುತ್ತಿದೆ ಎಂದರೆ, ನೀನು ಅದನ್ನೇ ಪಾಸಿಟಿವ್ ರೀತಿಯಲ್ಲಿ ಹೇಳ್ತೀಯಲ್ಲ? ನಿಂಗೇನು ಅರವತ್ತು ಸನಿಹವಾದಂಗೆ ಅರಳುಮರುಳಾಗುತ್ತಿದೆ ಅನ್ಸುತ್ತೆ!" ಎಂದು ಬೈದ ಶಂಕ್ರಣ್ಣ. "ಹಂಗಾದ್ರೆ ನಿಮಗೆ ಏನು ವಯಸ್ಸು ಕಡಿಮೆಯಾಗ್ತಿದೆಯಾ? ಈಗ ನಿಮಗೆ ನಲವತ್ತು ಸಮೀಪಿಸುತ್ತಿದೆ. ನಾನು ಮಾತ್ರ ಅರವತ್ತು ಸಮೀಪಿಸುತ್ತಿದ್ದೇನೆ ಅಲ್ವೇ?" ಎಂದು ಸಿಡಿಮಿಡಿಕೊಂಡಳು ಸುಮಿ. "ಅಯ್ಯೋ ತಾಯಿ, ಸರಿ ಬಿಡಮ್ಮ. ಅದಕ್ಕೆ ಯಾಕಿಷ್ಟು ಬೇಸರ? ಬಿಡು ನಾನು ಪೇಪರ್ ಓದುವುದನ್ನೇ ಬಂದ್ ಮಾಡುತ್ತೇನೆ. ಹೋಗು ಒಂದು ಲೋಟ ಕಾಫಿ ತಾ" ಎಂದು ಟಿವಿ ಆನ್ ಮಾಡಿದ ಶಂಕ್ರಣ್ಣ.
"ದೇವ್ರೇ ಇದೇನಂತೀನಿ. ಇವತ್ತೇಕೆ ಇಂತಹ ಸುದ್ದಿಗಳನ್ನೇ ನೋಡುತ್ತಿದ್ದೇನೆ?" ಎಂದು ತಲೆ ಮೇಲೆ ಕೈ ಹೊತ್ತು ಕುಳಿತ ಶಂಕ್ರಣ್ಣನಿಗೆ, ಕಾಫಿ ತಂದುಕೊಟ್ಟಳು ಸುಮಿ. "ಯಾಕ್ರೀ ಏನಾಯ್ತು ನಿಮ್ಮ ಕಂಪನಿ ಏನಾದರೂ ಮುಚ್ಚಿ ಹೋಗ್ತದೆ ಎಂಬ ಸುದ್ದಿ ಏನಾದರೂ ಬಂತಾ?" ಎಂದು ಕೇಳಿದ ಸುಮಿಗೆ, "ನಿನಗೆ ಯಾವಾಗಲೂ ಇದೇ ಆಯ್ತು. ಏನೇನೋ ಹೇಳ್ತೀಯಾ. ಪಾಪ ಅಲ್ಲಿ ನೋಡಿ ಟಿವಿಯನ್ನ. ಪಕ್ಕದ ಸೋಮಪುರಕ್ಕೆ ಬಂದ ಚಿರತೆಯೊಂದು ಐದು ವರ್ಷದ ಮಗುವನ್ನು ತಿಂದು ಹಾಕಿತಂತೆ!" ಎಂದು ಟಿವಿ ತೋರಿಸಿದ. ಮತ್ತದೇ ನ್ಯೂಸ್ ಅನ್ನು ತೋರಿಸುತ್ತಿದ್ದ ಟಿವಿಯನ್ನು ತದೇಕಚಿತ್ತದಿಂದ ನೋಡಿದ ಸುಮಿಯ ಕಣ್ಣುಗಳು ನೀರು ತುಂಬಿಕೊಂಡವು.
ಕಣ್ಣೊರೆಸಿಕೊಳ್ಳುತ್ತಲೇ "ಅದೇನು ಬಂದಿತ್ತು ಅದಕ್ಕೆ ರೋಗ? ತನ್ನ ಪಾಡಿಗೆ ತಾನು ಕಾಡಿನಲ್ಲಿ ಇರುವುದನ್ನ ಬಿಟ್ಟು ನಾಡಿಗೆ ಬಂತಂತೆ? ಏನ್ರೀ ಇದು. ಪಾಪ ನೋಡಿ ಆ ತಾಯಿಯ ಆಕ್ರಂದನ? ಅಲ್ಲಾರೀ ಮನುಷ್ಯರು ಮಾಡುವ ಅಪರಾಧಕ್ಕೆ ಜೈಲು ಶಿಕ್ಷೆ ಅಂತ ಇದೆ. ಆದರೆ ಈ ಪ್ರಾಣಿಗಳು ಮಾಡುವ ಅಪರಾಧಕ್ಕೆ ಶಿಕ್ಷೆಯೇ ಇಲ್ಲವೇ? ಅದೂ ಸಹ ಮಾಡಿದ್ದು ಕೊಲೆಯೇ ಅಲ್ವೇ? ಏಕೆ ಇಂತಹ ವಿಚಿತ್ರ ನ್ಯಾಯ?!" ಎಂದು ಉದ್ವೇಗದಿಂದ ಕೇಳಿದಳು ಸುಮಿ. ಇವಳ ತಿಕ್ಕಲುತನದ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹಾಗೆಯೇ ನ್ಯೂಸ್ ನೋಡುತ್ತಿದ್ದ ಶಂಕ್ರಣ್ಣನಿಗೆ ಆ ಚಿರತೆ ಈ ಹಿಂದೆಯೂ ಆ ಊರಿನ ನಾಲ್ವರನ್ನು ಕಚ್ಚಿ ಸಾಯಿಸಿದೆ ಎಂಬ ವಿಷಯವು ಗೊತ್ತಾಯ್ತು. ಅರಣ್ಯ ಇಲಾಖೆಯವರು ಚಿರತೆಯನ್ನು ಹಿಡಿಯಲು ಅಲ್ಲಲ್ಲಿ ಬೋನುಗಳನ್ನು ಇಟ್ಟರೂ ಪ್ರಯೋಜನವಾಗಿಲ್ಲ. ವೇಗವಾಗಿ ಓಡುವ ಚಿರತೆ ಇಂದು ಒಂದು ಕಡೆಯಿದ್ದರೆ, ನಾಳೆ ಇನ್ನೊಂದು ಕಡೆ ಪ್ರತ್ಯಕ್ಷವಾಗುತ್ತದೆ. ಹಾಗಾಗಿ ಇದನ್ನು ಹಿಡಿಯುವುದು ಸವಾಲಿನ ಸಂಗತಿಯಾಗಿ ಪರಿಣಮಿಸಿದೆ ಎಂದು ವರದಿಗಾರ ಹೇಳುತ್ತಿದ್ದ.
ಇವೆಲ್ಲವನ್ನು ಕೇಳಿಸಿಕೊಂಡ ಶಂಕ್ರಣ್ಣ ದೀರ್ಘವಾದ ಉಸಿರು ಬಿಡುತ್ತಾ ಹೆಂಡತಿಯ ಕಡೆ ನೋಡಿದ. "ಅಲ್ವೇ ಸುಮಿ, ಚಿರತೆಗೆ ಶಿಕ್ಷೆಯಿಲ್ಲವೇ ಎಂದು ಆಗಲೇ ಕೇಳುತ್ತಿದೆಯಲ್ಲ? ಚಿರತೆ ಮೂಕ ಪ್ರಾಣಿ ಎಂಬುದು ಮರೆತು ಹೋಯ್ತಾ?" ಎಂದನು ಶಂಕ್ರಣ್ಣ. "ಅಲ್ಲಾರಿ, ಅದು ಮೂಕ ಪ್ರಾಣಿ ಅಂತ ನನಗೆ ಗೊತ್ತು. ಆದರೆ ಹೀಗೆ ಕಂಡ ಕಂಡವರನ್ನು ಸಾಯಿಸುತ್ತಿದ್ದರೆ ಏನ್ರೀ ಗತಿ?! ಅವುಗಳಿಗೆ ಮನುಷ್ಯನ ರಕ್ತದ ರುಚಿ ಗೊತ್ತಾದರೆ ಮುಗಿಯಿತಂತೆ. ಮತ್ತೆ ಮತ್ತೆ ಹೀಗೆ ಮಾಡುತ್ತದೆ ಎಂದು ನಮ್ಮಜ್ಜಿ ಹೇಳುತ್ತಿದ್ದರು. ಅದರ ಆವಾಸ ಸ್ಥಾನ ಕಾಡು. ಅದು ಕಾಡಲ್ಲಿ ಇದ್ದರೇನೇ ಚೆನ್ನ. ಅದು ಬಿಟ್ಟು ಹೀಗೆ ನಾವು ವಾಸಿಸುವ ನಾಡಿಗೆ ಬಂದರೆ, ನಾವೇನು ಅವುಗಳು ಬಿಟ್ಟು ಬಂದ ಕಾಡಿಗೆ ಹೋಗಿ ವಾಸಿಸಬೇಕಾ? ಸ್ವಲ್ಪನಾದರೂ ಬುದ್ಧಿ ಬೇಡ್ವಾ ಅವಕ್ಕೆ!" ಎಂದಳು ಸುಮಿ.
"ಸುಮಿ ಬರೀ ಈ ಚಿರತೆಗಳ ಹಾವಳಿ ಮಾತ್ರವಲ್ಲ. ತಿಂಗಳ ಹಿಂದೆ ಕಮಲಾಪುರಕ್ಕೆ ಬಂದ ಪುಂಡಾನೆಯೊಂದರ ಹಾವಳಿಯನ್ನು ಮರೆತೆಯಾ? ಅದು ಹೇಗೆಲ್ಲಾ ಅಂಗಡಿ ಮುಂಗಟ್ಟುಗಳನ್ನು ದ್ವಂಸ ಮಾಡಿತು. ಪಾದಾಚಾರಿ ಒಬ್ಬನನ್ನು ಹೇಗೆ ತುಳಿದು ಸಾಯಿಸಿತೆಂದು ಮರೆತೆಯಾ? ಕೊನೆಗೆ ಅರಣ್ಯ ಇಲಾಖೆಯವರ ಸತತ ಪ್ರಯತ್ನದಿಂದ ಮತ್ತು ಬರುವ ಇಂಜೆಕ್ಷನ್ ಅದಕ್ಕೆ ಕೊಟ್ಟು, ಅದನ್ನು ಹಿಡಿಯುವಲ್ಲಿ ಯಶಸ್ವಿಯಾದರು ಎಂಬ ಘಟನೆ ನೆನಪಿದೆ ತಾನೇ?" ಎಂದು ಕೇಳಿ
ದ ಶಂಕ್ರಣ್ಣ. "ಅಯ್ಯೋ, ನೆನಪಿಲ್ಲದೆ ಏನು? ಚೆನ್ನಾಗಿ ನೆನಪಿದೆ. ಟಿವಿಯಲ್ಲಿ ಆ ಇಡೀ ದೃಶ್ಯಾವಳಿಗಳನ್ನು ದಿನಪೂರ್ತಿ ಅಂದು ನೋಡಿದೆನಲ್ಲ. ನನಗಂತೂ ಅವತ್ತು ಮಲಗಿದಾಗಲೂ ಅದೇ ಕನಸು ಕಣ್ರೀ. ತುಂಬಾ ಬೇಸರವಾಗಿತ್ತು ಅವತ್ತು" ಎಂದು ಜ್ಞಾಪಿಸಿಕೊಂಡಳು ಸುಮಿ.
"ಅಲ್ಲಾರಿ, ಇವೇನು ಟೈಮ್ ಪಾಸ್ ಮಾಡುವುದಕ್ಕೆ ಅಂತ ಈ ರೀತಿ ಊರಿಗೆ ಬರುತ್ತವಾ ಅಂತ? ಏನೋ ಮನೆಯ ಅಂಗಳಕ್ಕೆ ಬರುವ ನವಿಲು, ಅಳಿಲು, ನಾಯಿ, ಬೆಕ್ಕು, ಹಸು, ಕುರಿಗಳನ್ನು ಉಪಚರಿಸುವುದಕ್ಕೆ ಚಂದ. ಆದರೆ ಈ ರೀತಿ ಕಾಡುಪ್ರಾಣಿಗಳು ಊರಿಗೆ ಬಂದರೆ ನಾವಾದರೂ ಏನು ಮಾಡಬೇಕು? ಯಾರಿಗೆಂದು ಕಂಪ್ಲೇಂಟ್ ಮಾಡುವುದು?" ಎಂದು ಆತಂಕದಿಂದ ಕೇಳಿದಳು ಸುಮಿ. ಅವಳು ಕೇಳುವ ಚಿತ್ರ ವಿಚಿತ್ರವಾದ ಪ್ರಶ್ನೆಗಳು ಕೆಲವೊಮ್ಮೆ ಶಂಕ್ರಣ್ಣಂಗೆ ಕೋಪ ತರಿಸಿದರೂ ಅಂದೇಕೋ ಅವನಿಗೆ ಮಡದಿಯ ಮಾತುಗಳು ಚಿಂತನೆಗೆ ಹಚ್ಚಿದವು.
"ಹೌದು ಸುಮಿ, ಯಾರಿಗೆಂದು ಕಂಪ್ಲೇಂಟ್ ಮಾಡುವುದು? ಕಂಪ್ಲೇಂಟ್ ಕೊಟ್ಟರೂ ಅರಣ್ಯ ಇಲಾಖೆಯವರು ಎಷ್ಟು ಎಂದು ಪ್ರಾಣಿಗಳನ್ನ ಹಿಡಿಯಲು ಪ್ರಯತ್ನಿಸುತ್ತಾರೆ? ಹಿಡಿದರೂ ಅಷ್ಟು ಹೊತ್ತಿಗೆ ಕೆಲವು ಪ್ರಾಣಿಗಳು ಮನುಷ್ಯರಿಗೆ ತೊಂದರೆಗಳನ್ನ ತಂದೊಡ್ಡಿರುತ್ತವೆ. ಇದು ನಮಗೆ ನಾವೇ ಮಾಡಿಕೊಂಡಿರುವ ಸ್ವಯಂಕೃತ ಅಪರಾಧ ಕಣೆ. ಹಾಗಾಗಿ ನಾವೇ ಅನುಭವಿಸಬೇಕು!" ಎಂದ ಶಂಕ್ರಣ್ಣ. "ಏನ್ರಿ ನೀವು ಹೇಳ್ತಿರೋದು? ನಾವು ಮಾಡಿದ ತಪ್ಪೇ? ನಾವೇನು ಮಾಡಿದ್ವಿ, ನಮ್ಮ ಪಾಡಿಗೆ ನಾವು ಇಲ್ವಾ? ಸುಮ್ಮನೆ ಏನೇನೋ ಹೇಳಬೇಡಿ" ಎಂದು ಗೊಂದಲವಾಗಿ ಹೇಳಿದಳು ಸುಮಿ.
"ಪೂರ್ತಿ ಕೇಳೆ ಸುಮಿ ಇಲ್ಲಿ. ನೋಡು ವರ್ಷಾನುಗಟ್ಟಲೆಯಿಂದ ನಮ್ಮ ವಸತಿಗಾಗಿ ಕಾಡನ್ನು ಆಕ್ರಮಿಸಿಕೊಳ್ಳುತ್ತಾ ಬಂದಿದ್ದೇವೆ. ಅವುಗಳ ಜಾಗವನ್ನು ತೆಗೆದುಕೊಂಡರೆ ಅವುಗಳಾದರೂ ಎಲ್ಲಿಗೆ ಹೋಗಬೇಕು ಹೇಳು? ಇಷ್ಟು ಮಾತ್ರವಲ್ಲ ಪೀಠೋಪಕರಣಗಳನ್ನು ಮಾಡಲು, ಮನೆ ಕಟ್ಟಲು, ಹೀಗೆ ಒಂದಲ್ಲ ಒಂದು ರೀಸನ್ ಗೆ ಕಾಡಿನಲ್ಲಿರುವ ಮರ ಗಿಡಗಳಿಗೆ ಕೊಡಲಿ ಇಟ್ಟಿದ್ದಾರೆ ಮನುಷ್ಯರು. ಪ್ರಾಣಿಗಳಿಗೆ ನೆರಳು ಇಲ್ಲದೆ ಖಾಲಿ ಖಾಲಿಯಂತೆ ಅನಿಸಿದರೆ, ಅವುಗಳು ತಾನೆ ಏನು ಮಾಡಬೇಕು? ಕಾಡು ಬಿಟ್ಟು ನಾಡಿಗೆ ಬರುತ್ತಿದ್ದಾವೆ ಅಷ್ಟೇ. ಇನ್ನು ಅವುಗಳ ಊಟದ ವಿಚಾರಕ್ಕೆ ಬರೋಣ. ಮರ ಗಿಡಗಳನ್ನು ಕತ್ತರಿಸಿ ಅವುಗಳ ನೆಲೆಯನ್ನು ಕಿತ್ತುಕೊಂಡಿದ್ದೇವೆ. ಕಾಡಿನ ನಾಶದಿಂದ ಬರುವ ಮಳೆಯ ಪ್ರಮಾಣವೂ ಕಡಿಮೆಯಾಗಿದೆ. ಹಾಗಾಗಿ ಕೆರೆ ನದಿಗಳು ಬತ್ತಿ ಹೋಗಿವೆ. ಕೊನೆ ಪಕ್ಷ ಅವುಗಳಿಗೆ ಕುಡಿಲಿಕ್ಕೆ ನೀರು ಇರದಿದ್ದರೆ ಹೇಗೆ ಹೇಳು? ಆ ಕಡೆ ನೀರಿಲ್ಲ, ಈ ಕಡೆ ತಿನ್ನಲು ಆಹಾರವಿಲ್ಲ, ಉಳಿಯಲು ಸೊಂಪಾದ ಕಾಡಿಲ್ಲ! ಆಹಾರ ಸರಪಳಿಯು ಕೆಟ್ಟುಹೋಗಿದೆ. ಒಟ್ಟಾರೆ ಪ್ರಕೃತಿ ಸಮತೋಲನವೇ ಮನುಷ್ಯನ ಅತಿಯಾಸೆಯಿಂದ ತಪ್ಪಿಹೋಗಿದೆ. ಅಂತಹ ಸಮಯದಲ್ಲಿ ಅವುಗಳು ಏನು ತಾನೆ ಮಾಡಬೇಕು ನೀನೇ ಹೇಳು? ಆಹಾರ ಸಿಗುತ್ತದೆಯಾ ಎಂದು ಊರುಗಳಿಗೆ ಬರುತ್ತವೆ. ಪಾಪ ಇಲ್ಲಿ ಜನರ ಕಿರುಚಾಟ, ವಾಹನಗಳ ಅರಚಾಟಕ್ಕೆ ಬೆದರಿಹೋಗುತ್ತವೆ. ತಾಯಿಯನ್ನು ಕಳೆದುಕೊಂಡ ಕಂದಮ್ಮನಂತೆ ದಿಕ್ಕೆಟ್ಟು ಅಲೆಯುತ್ತವೆ. ಕೊನೆಗೆ ಸಿಕ್ಕ ಸಿಕ್ಕವರ ಮೇಲೆ ಹಸಿವಿನಿಂದಲೋ ಏನೋ ಆಕ್ರಮಣ ಮಾಡುತ್ತವೆ. ಈ ನಮ್ಮ ಜನರು ಹಾಗೆ ಆಡುತ್ತಾರೆ ನೋಡು! ಅವುಗಳಿಗೆ ಸರಿ ಸಮಾನರೆಂಬಂತೆ ಅವುಗಳನ್ನು ಬೆದರಿಸುವುದು, ಮೊಬೈಲ್ ನಲ್ಲಿ ವಿಡಿಯೋ, ಸೆಲ್ಫಿ, ರೀಲ್ಸ್, ಮಾಡುವುದು ಅವುಗಳ ಮುಂದೆ ತಮ್ಮ ಧೈರ್ಯ ಪ್ರದರ್ಶನ ಮಾಡುವುದು, ಹೀಗೆ ಏನೇನೋ ಮಂಗಾಟ ಮಾಡುತ್ತಾರೆ".
"ಅವುಗಳಿಗೂ ರೋಸಿ ಹೋಗಿ ಕೋಪ ಬರುತ್ತದೆ. ಜನರ ಪ್ರಾಣಗಳನ್ನು ತೆಗೆಯುತ್ತವೆ. ಒಟ್ಟಾರೆ ಹೇಳಬೇಕೆಂದರೆ ಈ ಎಲ್ಲಾ ನಕಾರಾತ್ಮಕ ಬೆಳವಣಿಗೆಗಳಿಗೂ ಕಾರಣ ನಾವುಗಳೇ ಕಣೆ. ಪ್ರಕೃತಿಯನ್ನು ಸರಿಯಾಗಿ ನೋಡಿಕೊಂಡರೆ ಅದು ನಮ್ಮನ್ನು ಚೆನ್ನಾಗಿ ನೋಡಿಕೊಂಡು, ಪಾಲಿಸಿ ಪೋಷಿಸುತ್ತದೆ. ಹಣ, ಮನೆ, ಟೆಕ್ನಾಲಜಿ, ಅತಿಯಾಸೆ, ವೇಗದ ಬದುಕು ಎಂದರೆ, ತಾಯಿಯಂತೆ ಇರುವ ಈ ಭೂಮಾತೆಯು ಕೂಡ ಎಷ್ಟು ದಿನವೆಂದು ತಾಳುತ್ತಾಳೆ? ನಿನ್ನಂತೆ ಅವಳು ಮುನಿಸಿಕೊಳ್ಳುತ್ತಾಳೆ!! ಪರಿಣಾಮವಾಗಿ ಪ್ರಕೃತಿ ವಿಕೋಪಗಳಾಗುತ್ತವೆ. ಮಾತ್ರವಲ್ಲದೆ ಅವಳ ಮುದ್ದಿನ ಮಕ್ಕಳಾದ ಕಾಡಿನ ಪ್ರಾಣಿಗಳನ್ನ ನಾಡಿಗೆ ಕಳುಹಿಸುತ್ತಾಳೆ ಎನಿಸುತ್ತೆ?! ನಿಮ್ಮ ಮನೆಯನ್ನು ಅವರು ನಾಶ ಮಾಡಿದಾಗ, ಅವರ ಮನೆಯ ಕಡೆ ನೀವೂ ಹೋಗಿ ವಿಚಾರಿಸಿಕೊಂಡು ಬನ್ನಿ ಮಕ್ಕಳೇ ಎನ್ನುತ್ತಾಳೇನೋ!! ಅದಕ್ಕೆ ಈ ಕಾಡಿನ ಪ್ರಾಣಿಗಳು ಆಗಾಗ ನಾವಿರುವಲ್ಲಿಗೆ ಬಂದು ಈ ರೀತಿಯ ತೊಂದರೆಗಳನ್ನು ಕೊಡುತ್ತವೆ ಅನಿಸುತ್ತೆ".
"ಇದಕ್ಕೆ ಪರಿಹಾರವೆಂದರೆ ನಮ್ಮ ಅತಿಯಾಸೆ ಬಿಟ್ಟು ಉಸಿರಾಗಿರುವ ಕಾಡನ್ನು ಉಳಿಸಿ ಬೆಳೆಸುವುದಷ್ಟೇ. ಅದಕ್ಕೆ ಅಲ್ವೇನೇ ಹೇಳುವುದು ಹಸಿರೇ ಉಸಿರು ಅಂತ" ಎಂದು ಹೇಳುತ್ತಾ ತನ್ನ ಸುದೀರ್ಘವಾದ ಮಾತುಗಳನ್ನು ಮುಗಿಸಿದ ಶಂಕ್ರಣ್ಣ. ಮಡದಿ ಸುಮಿ ತನ್ನ ಗಂಡನ ಮಾತುಗಳನ್ನು ಅನುಮೋದಿಸುತ್ತಾ "ಹೌದು ರೀ, ಕಾಡಿದ್ದರೆ ನಾವು, ಇಲ್ಲದಿದ್ದರೆ ನಮ್ಮ ಬಾಳು ಬರಿ ಗೋಳು" ಎಂದಳು!!