ಜೀವನವೆಂದ್ರೆ ಹೀಗೇನಾ..?!
ಜೀವನವೆಂದ್ರೆ ಹೀಗೇನಾ..?!
ಸಂಹಿತಾಳ ದಿನ ಶುರುವಾಗುವುದೇ ದಿನ ಬೆಳಗ್ಗಿನ 6:30ರ ಅಲಾರಂ ಮೂಲಕ. ತಕ್ಷಣವೇ ಏಳುತ್ತಾಳೆ ಅಂದುಕೊಂಡರೆ ನಿಮ್ಮ ಊಹೆ ತಪ್ಪು. ಮತ್ತೆ ಅದನ್ನು ಆಫ್ ಮಾಡಿ ಇನ್ನೂ ಹದಿನೈದು ನಿಮಿಷಗಳ ಕಾಲ ಮಲಗಿ ನಂತರ ಏಳುತ್ತಾಳೆ! ಅದೇನೋ ಅವಳಿಗೆ ಕಿರುಗುಟ್ಟುವ ಅಲಾರಂ ಅನ್ನು ಹೊಡೆದು ಮಲಗಿಸಿ, ತಾನು ಮತ್ತೆ ಇನ್ನೊಂದು ಚಿಕ್ಕ ನಿದ್ದೆಯನ್ನು ಮಾಡುವುದು ಎಂದರೆ ಬಲು ಇಷ್ಟ. ನಂತರ ಎದ್ದ ತಕ್ಷಣವೇ ಕಾಲಿಗೆ ಚಕ್ರ ಹಾಕಿದವಳಂತೆ, ಓಡುತ್ತಾ ಅಡುಗೆ ಮನೆಯ ಕೆಲಸಗಳನ್ನು ಶುರು ಮಾಡಿಕೊಳ್ಳುತ್ತಾಳೆ.
ಗಡಿಬಿಡಿಯಲ್ಲೇ ಹಿಂದಿನ ದಿನ ಫ್ರಿಡ್ಜ್ ನಲ್ಲಿ ಕತ್ತರಿಸಿಟ್ಟ ತರಕಾರಿಗಳನ್ನು ತೆಗೆದು, ರುಚಿಕರವಾದ ಬೆಳಗ್ಗಿನ ತಿಂಡಿಯನ್ನು ತಯಾರಿಸುತ್ತಾಳೆ. ಮುಂಚಿನಿಂದಲೂ ಅವಳು ಹಾಗೆಯೇ ಬೆಳಗ್ಗೆ ಬೇಗ ಏಳಲು ಕಷ್ಟವೆಂದು ಹಿಂದಿನ ದಿನವೇ ಮಾರನೇ ದಿನದ ತಿಂಡಿಗೆ ಬೇಕಾದ ತರಕಾರಿಗಳನ್ನು, ಉಪ್ಪಿಟ್ಟು ಮಾಡುವುದಿದ್ದರೆ ರವೆಯನ್ನು ಹುರಿದಿಟ್ಟುಕೊಳ್ಳುವುದನ್ನು, ಚಪಾತಿಯಾಗಿದ್ದರೆ ಹಿಟ್ಟನ್ನು ನಾದಿ ಫ್ರಿಜ್ಜಿನಲ್ಲಿ ಇಟ್ಟುಕೊಳ್ಳುವುದನ್ನು, ಹೀಗೆ ಮಾರನೇ ದಿನಕ್ಕೆ ತನ್ನ ಬೆಳಗ್ಗಿನ ಚಿಕ್ಕ ಸಿಹಿ ನಿದ್ರೆಗೆ ಭಂಗವಾಗಬಾರದೆಂದು ಎಲ್ಲಾ ಕೆಲಸಗಳನ್ನು ಮೊದಲೇ ಮಾಡಿಟ್ಟುಕೊಳ್ಳುವ ಅಭ್ಯಾಸ. ಚಪಾತಿ, ದೋಸೆ, ಇಡ್ಲಿ ಎಂದಾದರೆ ಅದಕ್ಕೆ ಬೇಕಾದ ಪಲ್ಯ, ತರಕಾರಿ ಗೊಜ್ಜನ್ನು ಸಹ ಕೆಲವೊಮ್ಮೆ ರಾತ್ರಿಯೇ ತಯಾರಿಸಿಟ್ಟು ಬಿಡುತ್ತಾಳೆ!
"ಇದ್ಯಾಕೆ ನೀನು ಹೀಗೆ? ಬೇಗ ಮಲಗಿ, ಬೆಳಗ್ಗೇನೆ ಕೆಲಸ ಮಾಡಬಾರದೇ?" ಎಂದು ಗಂಡ ಕೇಳಿದರೆ, "ಅಯ್ಯೋ ರೀ, ರಾತ್ರಿ 12 ಗಂಟೆಯವರೆಗೂ ಬೇಕಾದ್ರೆ ಎದ್ದಿರುತ್ತೇನೆ. ಆದರೆ ಬೆಳಗ್ಗೆ ಎದ್ದು ಎಲ್ಲಾ ಕೆಲಸಗಳನ್ನು ಮಾಡುವುದು ಎಂದರೆ ನನಗೆ ತುಂಬಾ ಕಷ್ಟ..!" ಎನ್ನುತ್ತಾಳೆ.
"ಅದೇನಾದ್ರೂ ಮಾಡಿಕೋ. ಯಾವಾಗಲೂ ನಿನ್ನದು ಇದೇ ಗೋಳು! ನಿನ್ನದೇ ಸರಿ ಎಂದು ವಾದ ಮಾಡ್ತೀಯಾ..!" ಎಂದು ಹೇಳುತ್ತಾ ಗಂಡ ತನ್ನ ಲ್ಯಾಪ್ಟಾಪ್ ನಲ್ಲಿ ಕೆಲಸ ಮುಂದುವರೆಸುತ್ತಾನೆ.
ಇನ್ನು ಸಂಹಿತಾಳ ಪುಟ್ಟ ಮಕ್ಕಳು ಶಾಲೆಯಲ್ಲಿ ಓದುತ್ತಿದ್ದಾರೆ. ಇಬ್ಬರೂ ಬಹಳ ಚೂಟಿ. ಮಗ ವಿಶ್ವಾಸ್ ಬಲು ತುಂಟ. ಮಗಳು ಖುಷಿ ಓದುವುದರಲ್ಲಿ ಜಾಣೆ. ತಮ್ಮನಂತೆ ಅಷ್ಟಾಗಿ ಅಪ್ಪ ಅಮ್ಮನನ್ನು ಗೋಳು ಹೊಯ್ದುಕೊಳ್ಳುವುದಿಲ್ಲ.
ತನ್ನ ತಮ್ಮನನ್ನು ಶಾಲೆಯಲ್ಲಿ ತುಂಬಾ ಕಾಳಜಿಯಿಂದ ನೋಡಿಕೊಳ್ಳುತ್ತಾಳೆ. ಮನೆಯ ಒಳಗೆ ತಮ್ಮನ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳದಿದ್ದರೂ, ಹೊರಗಡೆ ಹೋದ ತಕ್ಷಣವೇ ತಮ್ಮನ ಬಗ್ಗೆ ವಿಪರೀತ ಕಾಳಜಿ ಬಂದುಬಿಡುತ್ತದೆ ಖುಷಿಗೆ! ಪುಟ್ಟ ವಯಸ್ಸಿಗೆ ಇವಳಿಗಿರುವ ಜವಾಬ್ದಾರಿಯುತ ನಡೆಯನ್ನು ನೋಡಿ ಅಪ್ಪ-ಅಮ್ಮನಿಗೆ ಅವಳನ್ನು ಕಂಡರೆ ಬಹಳ ಅಕ್ಕರೆ. ಮಕ್ಕಳಿಬ್ಬರನ್ನು ಚೆನ್ನಾಗಿ ಸಾಕಿ, ಅವರಿಗೆ ಒಳ್ಳೆಯ ವಿದ್ಯಾಭ್ಯಾಸ, ಉದ್ಯೋಗ ಸಿಗುವಂತೆ ಮಾಡಬೇಕು ಎಂದು ಪ್ರತಿದಿನವೂ ಕನಸು ಕಾಣುತ್ತಾರೆ. ಸಂಹಿತಾಳಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಈಗಿನಿಂದಲೇ ದೇವರಿಗೆ ಪ್ರಾರ್ಥನೆಯನ್ನು ಸಲ್ಲಿಸುತ್ತಾಳೆ.
"ದೇವರೇ ನನ್ನ ಮಕ್ಕಳಿಬ್ಬರು ಚಿಕ್ಕವರು ಎಂದು ಗೊತ್ತು. ಈಗಿನಿಂದಲೇ ಪ್ರಾರ್ಥಿಸಲು ಶುರು ಮಾಡಿದರೆ ಖಂಡಿತ ನನ್ನ ಆಸೆಯನ್ನು ಪೂರೈಸುತ್ತೀಯಾ ಎಂಬ ಬಲವಾದ ನಂಬಿಕೆ ನನಗೆ! ದಯವಿಟ್ಟು ನನ್ನ ಮಕ್ಕಳಿಬ್ಬರನ್ನು ಚೆನ್ನಾಗಿ ನೋಡಿಕೋ. ಅವರನ್ನು ದಡ ತಲುಪಿಸುವ ಹೊಣೆ ನಿನ್ನದೇ..!" ಎಂದು ಕೈ ಮುಗಿಯುತ್ತಾಳೆ.
'ಪ್ರಾರ್ಥಿಸಲು ಪ್ರತಿಯೊಬ್ಬರಿಗೂ ಕಾರಣವಿರುತ್ತದೆ' ಎಂಬ ಮಾತು ನಿಜವೆನಿಸುತ್ತದೆ! ಸಂಹಿತಾಳ ಈ ಕೋರಿಕೆಯ ಪಯಣ ಅವಳು ಚಿಕ್ಕ ಹುಡುಗಿಯಾಗಿದ್ದಾಗಿನಿಂದ ಪ್ರಾರಂಭವಾಯಿತು! ಶಾಲೆಯಲ್ಲಿ ಓದುತ್ತಿದ್ದಾಗ ಒಳ್ಳೆಯ ಮಾರ್ಕ್ಸ್ ಬರಲಿ ಎಂದು ಕೇಳಿಕೊಂಡರೆ, ಕಾಲೇಜಿಗೆ ಕಾಲಿಟ್ಟಾಗ ಮುಂದೆ ತನಗೆ ಒಳ್ಳೆಯ ಕೆಲಸ ಸಿಗುವಂತೆ ಮಾಡು ದೇವರೇ ಎಂದಾಗಿತ್ತು. ಮದುವೆಯ ವಯಸ್ಸಿಗೆ ಬಂದಾಗ ಕೆಲಸವಂತೂ ಸಿಗಲಿಲ್ಲ, ಒಳ್ಳೆಯ ಕೆಲಸದಲ್ಲಿರುವ ಗಂಡನನ್ನಾದರೂ ದಯಪಾಲಿಸು ದೇವರೇ..! ಎಂದು ಹರಕೆ ಹೊತ್ತಳು.
ಮದುವೆಯಾಗಿ ಗಂಡನ ಸಾನಿಧ್ಯದಲ್ಲಿ ಮೈ ಮರೆಯುತ್ತಾ, ತಿಂಡಿ-ಅಡುಗೆ-ಮನೆ ಕೆಲಸಗಳಲ್ಲಿ ವ್ಯಸ್ತಳಾಗಿದ್ದಾಗಲೇ, ಖುಷಿ ಹುಟ್ಟುತ್ತಾಳೆ ಎಂಬ ಸಂತೋಷಕರ ವಿಚಾರ ಅವಳಿಗೆ ಗೊತ್ತಾಯಿತು. ಈಗ ಮತ್ತೆ ಅವಳ ಪ್ರಾರ್ಥನೆ ಹುಟ್ಟಲಿರುವ ಮಗುವಿನ ಬಗ್ಗೆ ಕೇಂದ್ರೀಕೃತವಾಯಿತು.
"ದೇವರೇ ಹುಟ್ಟಲಿರುವ ಮಗು ಆರೋಗ್ಯದಿಂದಿದ್ದು, ನನಗೆ ಮಗುವನ್ನು ನೋಡಿಕೊಳ್ಳುವ ಒಳ್ಳೆಯ ಮನಸ್ಸು ಮತ್ತು ಧೈರ್ಯ ಕೊಡಪ್ಪ..!" ಎಂದಾಗಿತ್ತು.
ಮಗಳು ಖುಷಿ ಸ್ವಲ್ಪ ದೊಡ್ಡವಳಾಗುತ್ತಿದ್ದಂತೆ ಮಗ ವಿಶ್ವಾಸ್ ಹುಟ್ಟುತ್ತಾನೆ ಎಂಬ ಮತ್ತೊಂದು ಸಿಹಿ ಸುದ್ದಿ ಗೊತ್ತಾಯಿತು. ಮತ್ತೆ ಸಂಹಿತಾಳ ದೇವರ ಕೋರಿಕೆಯ ಸರಮಾಲೆ ಶುರುವಾಯಿತು! "ಮಗನನ್ನು ಚೆನ್ನಾಗಿ ನೋಡಿಕೊಳ್ಳಪ್ಪ ದೇವರೇ. ಅವನಿಗೆ ಒಳ್ಳೆಯ ವಿದ್ಯೆ ಬುದ್ಧಿಯನ್ನು ದಯಪಾಲಿಸಪ್ಪ..!" ಎಂದಾಗಿತ್ತು.
ಅಂತೂ ವಿಶ್ವಾಸ್ ಶಾಲೆಗೆ ಅಕ್ಕನೊಟ್ಟಿಗೆ ಹೋಗಿ ಬರುವಷ್ಟರ ಮಟ್ಟಿಗೆ ದೊಡ್ಡವನಾದ. ಎಷ್ಟೋ ವರ್ಷಗಳ ನಂತರ ತಾನು ಸ್ವಲ್ಪ ಬಿಡುವಾಗಿ ತನ್ನ ಬಗ್ಗೆ ಗಮನಹರಿಸಬಹುದು ಎಂದೆನಿಸಿತು ಸಂಹಿತಾಳಿಗೆ.
ಅವಳ ಗಂಡನಿಗೂ ಇತ್ತೀಚಿಗೇಕೋ ಇದೇನು ಜೀವನ ಹೀಗೆ ನಿಂತ ನೀರಂತೆ ಆಗಿದೆ. ಒಂದು ಕಾಲದಲ್ಲಿ ತಾನು ಮತ್ತು ಸಂಹಿತಾ ಪ್ರತಿ ವಾರ ಒಂದೊಂದು ಕಡೆ ಸುತ್ತಾಡುತ್ತಾ, ಆರಾಮಾಗಿ ಕಾಲ ಕಳೆಯುತ್ತಾ ಇದ್ದೆವು. ಆಗ ಒಳ್ಳೆಯ ಸಂಬಳವೂ ಬರುತ್ತಿರಲಿಲ್ಲ. ಆದರೆ ಈಗ ತನಗೆ ಉದ್ಯೋಗದಲ್ಲಿ ಭರ್ತಿ ದೊರೆತು, ಕಾರು-ಬಂಗಲೆ ಎಲ್ಲ ಇದ್ದರೂ, ತನ್ನ ಪ್ರೀತಿಯ ಪತ್ನಿಯನ್ನು ಎಲ್ಲಾದರೂ ಹೊರಗೆ ಕರೆದುಕೊಂಡು ಹೋಗೋಣ ಎಂದರೆ ಒಂದಲ್ಲ ಒಂದು ಕೆಲಸ ಇರುತ್ತದೆ!
ಮಗಳು ಖುಷಿ ಹುಟ್ಟಿ ಇನ್ನೇನು ಹತ್ತು ವರ್ಷ ಆಗುತ್ತಾ ಬಂತು. ಆಗಿನಿಂದಲೂ ಒಂದಲ್ಲ ಒಂದು ಕೆಲಸ ಇದ್ದೇ ಇರುತ್ತದೆ. ಇಬ್ಬರೂ ಜೊತೆಯಾಗಿ ಕುಳಿತು ಒಂದು ಸಿನಿಮಾ ನೋಡುವುದಕ್ಕೂ ಆಗುವುದಿಲ್ಲ. ಈಗಿನಿಂದಾದರೂ ಅವಳ ಜೊತೆ ಸರಿಯಾಗಿ ಒಂದಷ್ಟು ಕಾಲ ಕಳೆದು, ಚೆನ್ನಾಗಿ ಮಾತಾಡಿಸಬೇಕು. ಇನ್ನು ಟೈಮ್ ಸಿಗುತ್ತಿಲ್ಲ ಅಂದರೆ ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ, ನಾವಿಬ್ಬರೂ ಅಜ್ಜ ಅಜ್ಜಿಯರಾಗಿ, ಮೊಮ್ಮಕ್ಕಳನ್ನು ನೋಡಿಕೊಳ್ಳುವ ಹೊಸ ಜವಾಬ್ದಾರಿ ಹೆಗಲ ಮೇಲೆ ಬಂದಿರುತ್ತದೆ ಅಷ್ಟೇ ಎಂದುಕೊಂಡ!
ಅಂದು ರಾತ್ರಿ ತನ್ನ ಮುದ್ದಿನ ಮಡದಿ ಸಂಹಿತಾಳಿಗೆ "ಸಮ್ಮಿ ನಾವಿಬ್ಬರು ಈ ಶನಿವಾರ ಒಂದು ಲಾಂಗ್ ಡ್ರೈವ್ ಹೋಗೋಣ. ಯಾಕೋ ನಿನ್ನೊಂದಿಗೆ ಕಾಲ ಕಳೆಯಬೇಕು ಅನ್ನಿಸುತ್ತಿದೆ. ಬೇಗ ಬೇಗ ಬಟ್ಟೆಗಳನ್ನು ಪ್ಯಾಕ್ ಮಾಡಿಕೋ. ಮಕ್ಕಳಿಬ್ಬರು ಅಜ್ಜಿ ತಾತನ ಜೊತೆ ಇರಲಿ..!" ಎಂದ.
ಬೇಡ ಎಂದು ಹೋಗದೇ ಇರಲು ಮಕ್ಕಳನ್ನು ನೋಡಿಕೊಳ್ಳಬೇಕೆಂಬ ಕಾರಣವಿದ್ದರೂ, ಗಂಡ ಅಷ್ಟು ಹೇಳಿದ ಮೇಲೆ ಇಲ್ಲವೆನ್ನಲು ಮನಸ್ಸಾಗದೇ ಮಕ್ಕಳಿಬ್ಬರನ್ನು ಎರಡು ದಿನಗಳ ಮಟ್ಟಿಗೆ ತನ್ನಮ್ಮನ ಮನೆಯಲ್ಲಿ ಬಿಡಲು ಒಪ್ಪಿಕೊಂಡಳು. ಮಕ್ಕಳನ್ನು ಮೊದಲಿಗೆ ಒಪ್ಪಿಸಲು ಕಷ್ಟವಾದರೂ, ಕೊನೆಗೆ ಅಜ್ಜಿಯ ಕೈರುಚಿ ಮತ್ತು ತಾತನ ಕಥೆಗಳನ್ನು ನೆನೆದು ಮಕ್ಕಳಿಬ್ಬರೂ ಒಪ್ಪಿಕೊಂಡರು.
ಗಂಡನ ಜೊತೆಗೆ ಹಾಯಾಗಿ ಎರಡು ದಿನಗಳ ಟ್ರಿಪ್ ಮುಗಿಸಿ ಮಕ್ಕಳಿಗೆಂದು ಆಟಿಕೆಗಳು, ಬಟ್ಟೆಗಳು, ಮನೆಗೆ ಬೇಕಾದ ಆಲಂಕಾರಿಕ ವಸ್ತುಗಳು, ತಿಂಡಿಗಳೊಂದಿಗೆ ಇಬ್ಬರು ವಾಪಸ್ಸು ಮನೆಯ ಹಾದಿ ಹಿಡಿದರು. ಅಂತೂ ಹತ್ತು ವರ್ಷಕ್ಕೆ ಮತ್ತೆ ತಾನು ತನ್ನ ಹೆಂಡತಿಯೊಂದಿಗೆ ಎರಡು ದಿನಗಳ ಲಾಂಗ್ ಡ್ರೈವ್ ಹೋಗುವಂತಾಯಿತು. ಮತ್ತೆ ಇಂಥ ಚಾನ್ಸ್ ಯಾವಾಗ ಬರುತ್ತದೆಯೋ ಎಂದು ಸಂಹಿತಾಳ ಗಂಡ ಅಂದುಕೊಳ್ಳುತ್ತಿರುವಾಗಲೇ, ಅವಳ ಫೋನಿಗೆ ಕರೆಯೊಂದು ಬಂದಿತು.
"ರೀ, ಅಮ್ಮ ಫೋನ್ ಮಾಡಿದ್ದಾರೆ. ಇನ್ನೇನು ಹದಿನೈದು ನಿಮಿಷದಲ್ಲಿ ಅಲ್ಲಿರುತ್ತೇವೆ ಅಲ್ವಾ..." ಎನ್ನುತ್ತಲೇ ಹಲೋ ಎಂದಳು.
ಆ ಕಡೆಯಿಂದ ಸಂಹಿತಾಳ ತಂದೆ "ಸಮ್ಮಿ, ಅಮ್ಮ ಬಚ್ಚಲಲ್ಲಿ ಬಿದ್ದು ಏಟು ಮಾಡಿಕೊಂಡಿದ್ದಾಳೆ. ಡಾಕ್ಟರ್ ಫ್ರಾಕ್ಚರ್ ಆಗಿದೆ ಅಂದ್ರು. ನೀನು ಎಲ್ಲಿದ್ದೀಯಾ..?" ಎಂದು ಗಾಬರಿಯಿಂದ ಇರುವ ವಿಚಾರ ತಿಳಿಸಿದರು.
"ಹೌದಾ? ಬರ್ತಾ ಇದ್ದೀವಿ ಅಪ್ಪ. ಇನ್ನೇನು ಹತ್ತು ನಿಮಿಷದಲ್ಲಿ ಅಲ್ಲಿರುತ್ತೇವೆ. ಗಾಬರಿಯಾಗಬೇಡ..!" ಎನ್ನುತ್ತಲೇ ಗಂಡನಿಗೆ ಇರುವ ವಿಚಾರವನ್ನು ತಿಳಿಸಿದಳು.
"ಅಮ್ಮ ಬಿದ್ದು ಕೈ ಪೆಟ್ಟು ಮಾಡಿಕೊಂಡಿದ್ದಾರಂತೆ ರೀ. ಮೊದಲೇ ವಯಸ್ಸಾಗಿದೆ. ಅಪ್ಪ ಬೇರೆ ಒಬ್ಬರೇ ಇರುವುದು. ಒಂದಷ್ಟು ದಿನ ಅಮ್ಮನನ್ನು ನಮ್ಮ ಮನೆಗೆ ಕರೆದುಕೊಂಡು ಹೋಗೋಣ. ನಂತರ ಏನು ಅಂತ ಯೋಚಿಸೋಣ..!" ಎಂದಳು.
"ಸರಿ ಹಾಗೇ ಆಗಲಿ..." ಎಂದುತ್ತರಿಸಿದ ಅವಳ ಗಂಡ, "ಇದೇನಪ್ಪಾ ದೇವರೇ ಒಂದು ಮುಗಿಯಿತು ಅಂದರೆ ಇನ್ನೊಂದು ಸಿದ್ಧವಾಗಿ ಇಟ್ಟುಕೊಂಡಿರುತ್ತೀಯಲ್ಲ..?! ಈಗ ತಾನೇ ಎಷ್ಟು ಚೆನ್ನಾಗಿತ್ತು ಟ್ರಿಪ್ಪು ಎಂದು ಮನಸ್ಸಿನಲ್ಲಿ ಖುಷಿಪಡುತ್ತಿದ್ದೆ. ಅದಾಗಲೇ ಒಂದು ಶಾಕ್ ಕೊಟ್ಟೆ. ಪಾಪ ಸಂಹಿತಾ..! ಯಾವಾಗಲೂ ಏನಾದರೂ ಮಾಡುತ್ತಲೇ ಇರುತ್ತಾಳೆ. ಅವಳಿಗೂ ಬಿಡುವು ಸಿಕ್ಕಿ, ಆರಾಮಾಗಿ ಇರಲಿ ಅಂತ ನಾನೆಂದುಕೊಂಡರೆ, ಇನ್ನೊಂದು ಕೆಲಸ ಅದಾಗಲೇ ರೆಡಿ ಮಾಡಿ ಇಟ್ಟಿರುತ್ತೀಯಾ..!"
"ಏಕಪ್ಪಾ ನೀನು ಹೀಗೆ..? ಒಂದಾದರೊಂದರ ಮೇಲೆ ನಮ್ಮಂತವರಿಗೆ ಜವಾಬ್ದಾರಿಗಳನ್ನು ಕೊಡುತ್ತಲೇ ಇರುತ್ತೀಯ..? ಮೊದಲು ಚಿಕ್ಕ ಮಕ್ಕಳನ್ನು ನೋಡಿಕೊಳ್ಳುವುದಕ್ಕೆ ಒಂದಷ್ಟು ವರ್ಷ, ನಂತರ ಏನೋ ಒಂದು ಚಿಕ್ಕ ಬಿಡುವು ಸಿಕ್ಕಿತು ಎನ್ನುವಷ್ಟರಲ್ಲಿ ಅಪ್ಪ ಅಮ್ಮನನ್ನು ನೋಡಿಕೊಳ್ಳುವ ಹೊಸ ಜವಾಬ್ದಾರಿ, ತದನಂತರ ಮೊಮ್ಮಕ್ಕಳ ಲಾಲನೆ-ಪಾಲನೆ..! ಗಂಡಸರಿಗಾದರೂ ಒಟ್ಟೊಟ್ಟಿಗೆ ಅಷ್ಟು ಕೆಲಸ ಮಾಡಲು ಬರದಿರಬಹುದು. ಆದರೆ ಹೆಣ್ಣು ಮಕ್ಕಳನ್ನು ಜೀವನಪೂರ್ತಿ ಜವಾಬ್ದಾರಿಗಳ ಹೊಣೆಯಲ್ಲೇ ಮುಳುಗಿಸುತ್ತೀಯಲ್ಲಪ್ಪ..! ಅದಕ್ಕೇ ಏನೋ ಪುರುಷರಿಗಿಂತ ಹೆಣ್ಣಿಗೆ ತಾಳ್ಮೆ ಶಕ್ತಿ ನೀನು ಜಾಸ್ತಿ ಕೊಟ್ಟಿರುವುದು..?!"
"ಏನಾದರಾಗಲಿ ನಮ್ಮೆಲ್ಲರ ಜೀವನ ಒಂದು ಮುಗಿಯದ ಪಯಣ ಎಂಬುದರಲ್ಲಿ ಸಂದೇಹವಿಲ್ಲ.
ನೀನೇ ಸಾಕು ಎನ್ನುವ ತನಕ ಒಂದಲ್ಲ ಒಂದು ಕೆಲಸಕ್ಕೆ ನಮ್ಮನ್ನು ನಿಯೋಜಿಸುತ್ತಲೇ ಇರುತ್ತೀಯ. ಇದೇ ಜೀವನವಾ ಅಥವಾ ಜೀವನವೆಂದರೆ ಹೀಗೇನಾ..? ಎಂದು ನೀನೇ ಉತ್ತರಿಸಬೇಕು..." ಎಂದುಕೊಳ್ಳುತ್ತಾ ತನ್ನ ಹೆಂಡತಿಯ ತವರು ಮನೆ ಬಂತೆಂದು ಬ್ರೇಕ್ ಒತ್ತಿದ.
