Vijaya Bharathi

Classics Inspirational Others

4.5  

Vijaya Bharathi

Classics Inspirational Others

ನ ಗುರೋರಧಿಕಂ

ನ ಗುರೋರಧಿಕಂ

5 mins
466



ಬಸ್ ಮುಂದೆ ಚಲಿಸುತ್ತಿದ್ದಂತೆ, ಕಿಟಕಿಯಿಂದ ರಸ್ತೆಯ ಇಕ್ಕೆಲಗಳನ್ನು ನೋಡುತ್ತಾ ಕುಳಿತೆ. ಬೆಂಗಳೂರಿನ ರಸ್ತೆಗಳಲ್ಲಿಕಿಕ್ಕಿರಿದು ಸಾಗುತ್ತಿರುವ 

ವಾಹನಗಳನ್ನು ನೋಡಿ,ನೋಡಿ ಬೇಸತ್ತ ನಾನು ಹಾಗೆ ಕಣ್ಣುಮುಚ್ಚಿ ಕುಳಿತೆ. ಹಾಗೇ ನಿದ್ರೆಗೂ ಜಾರಿದೆ. ನಾನು ಮತ್ತೆ ಕಣ್ಣು ತೆರೆದು, ಕಿಟಕಿಯಿಂದ ಆಚೆಗೆ ದೃಷ್ಟಿ ಹಾಯಿಸಿದಾಗ, ನನ್ನ ಕಣ್ಮನಗಳು ತಂಪಾದವು. ರಸ್ತೆಯ ಇಕ್ಕೆಲಗಳಲ್ಲೂ ಬೆಳೆದು ನಿಂತಿರುವ ಬತ್ತದ ಗದ್ದೆಯ ಹಸಿರು ತೆನೆಗಳನ್ನು ನೋಡುತ್ತಾ ನನ್ನ ಮನಸ್ಸು ಆಹ್ಲಾದಗೊಂಡಿತು. ಆ ತಂಪಾದ ಸಂಧ್ಯಾಸಮಯದಲ್ಲಿ, ಹಸಿರು ತೆನೆಗಳು ನಿಧಾನವಾಗಿ ತೂಗಾಡುತ್ತಿರುವುದನ್ನು ನೋಡುತ್ತಾ,ಮೂವತ್ತು ವರ್ಷಗಳ ನೆನೆಪಿನಾಳಕ್ಕಿಳಿದೆ.


ನಗರದ ಕಲಿಷಿತ ವಾತಾವರಣದಿಂದ ಸುಮಾರು ನಾನೂರು ಕಿಲೊಮೀಟೆರ್ ದೂರದಲ್ಲಿರುವ ನನ್ನ ಆ ಹಳ್ಳಿ, ಹಸಿರು ತೋಟದ ನಡುವೆ ಇದ್ದ ಆ ನನ್ನ ಶಾಲೆ, ಅಲ್ಲಿಯ ಸುಸಂಸ್ಕೃತ ವಾತಾವರಣ, ಆ ನನ್ನ ಶಾಲೆಯ ಶಿಕ್ಷಕವೃಂದ, ಅವರ ಶಿಸ್ತು, ಶಿಷ್ಯಪ್ರೇಮ,ಎಲ್ಲವೂ ಕಣ್ಣು ಮುಂದೆ ಸ್ಥಬ್ಢ ಚಿತ್ರಗಳಂತೆ ಹಾದು ಹೋದವು. ಶಿಕ್ಷಣದ ವ್ಯಾಪಾರೀಕರಣದ ಇಂದಿನ ಶಿಕ್ಷಣ ಕ್ಕೂ, ಅತ್ಯಂತ ಪ್ರೀತಿ ವಿಶ್ವಾಸಗಳಿಂದ ಬೇರೆ ಯಾವ ನಿರೀಕ್ಷೆಯೂ ಇಲ್ಲದೆ, ತಮಗೆ ತಿಳಿದಿರುವ ಎಲ್ಲಾ ವಿಷಯಗಳನ್ನು, ತರಗತಿಯ ಅವಧಿಯಲ್ಲೇ ಕಲಿಸುತ್ತಾ, ಜೊತೆಜೊತೆಗೆ ಜೀವನದ ಮೌಲ್ಯಗಳನ್ನೂ ತಿಳಿಸಿ,ಉತ್ತಮ ನಾಗರೀಕರನ್ನು ತಯಾರ ಮಾಡುತ್ತಿದ್ದ ಅಂದಿನ ಆ ಶಿಕ್ಷಣ ಕ್ಕೂ ಅಜಗಜಾಂತರ ವ್ಯತ್ಯಾಸವಿದೆ.ಅಂದಿನ ಗುರು ಶಿಷ್ಯರ ನಡುವೆ ಹೃದಯ ಬಾಂಧವ್ಯ ವಿತ್ತು. ಕಹಿಯಾದ ಔಷಧಿಗಳು ನಾಲಿಗೆಗೆ ಹಿತವಾದರೂ, ಅಂತ್ಯದಲ್ಲಿ ಒಳ್ಳೆಯ ಪರಿಣಾಮಗಳನ್ನು ಕೊಡುವಂತೆ,ಅಂದಿನ ಗುರುಗಳು ನೀಡುತ್ತಿದ್ದ ಶಿಕ್ಷೆಗಳು ಆ ಕ್ಷಣಕ್ಕೆ ಬೇಸರವೆನಿಸುತ್ತಿದ್ದರೂ, ಅದರಿಂದ ಉತ್ತಮ ಫಲಗಳೇ ದೊರೆಯುತ್ತಿದ್ದವು. ಅವರು ನೀಡುತ್ತಿದ್ದ ಕಠಿಣ ಶಿಕ್ಷೆಯ ಹಿಂದೆ,ಶಿಷ್ಯ ವಾತ್ಸಲ್ಯವಿರುತ್ತಿತ್ತು. ಆದರೆ ಇಂದು ಗುರು ಶಿಷ್ಯರ ನಡುವೆ ಕೇವಲ ವ್ಯಾಪಾರೀಕರಣವಿದ್ದು, ಪರಸ್ಪರ ಪ್ರೀತಿ ವಿಶ್ವಾಸ ಗೌರವಗಳು ಮರೆಯಾಗಿವೆ. ಆ ನನ್ನ ಶಾಲೆಯಲ್ಲಿದ್ದ ಶಿಕ್ಷಕರು ನಿಜವಾಗಿಯೂ"ಗುರು"ಗಳಾಗಿದ್ದರು.

ಶಿಷ್ಯರ ಅಜ್ಞಾನಾಂಧಕಾರವನ್ನು ಕಳೆಯಿಸುತ್ತಾ, ಸುಜ್ಞಾನ ದೀವಿಗೆ ಬೆಳಗಿಸುತ್ತಿದ್ದರು. ಎಂತೆಂತಹ ಗುರುಗಳಿದ್ದರು? ವಿಜ್ಞಾನ ಹಾಗೂ ಗಣಿತದ ಶ್ರೀ ಬಸವರಾಜ್ ಸರ್,ಇಂಗ್ಲೀಷ್ ಕಲಿಸಿದ ಅರುಣ್ ಕುಮಾರ್ ಸರ್, ಹಿಂದಿ ಹೇಳಿಕೊಡುತ್ತಿದ್ದ ಸುಶೀಲ ಮೇಡಂ, ಕನ್ನಡ ಹೇಳಿಕೊಟ್ಟ, ಕನ್ನಡ ಪಂಡಿತ್ ಶ್ರೀಕಂಠ ಅವಧಾನಿಗಳು ,.....ಹೀಗೆ ನೆನೆಪುಗಳು ಮುತ್ತಿಹಾಕುತ್ತಿವೆ. 

  

ಬಸ್ ಮುಂದೆ ಚಲಿಸುತ್ತಿತ್ತು. ಸುತ್ತಲೂ ಕತ್ತಲಾಯಿತು. ಹೊರಗಡೆ ನೋಡುವುದನ್ನು ನಿಲ್ಲಿಸಿ, ಹಾಗೇ ಸೀಟಿಗೊರಗಿ ಕಣ್ಮುಚ್ಚಿದಾಗ,ನನಗೆ ಇದ್ದಕ್ಕಿದ್ದಂತೆ ತುರ್ತಾಗಿ ಬರಹೇಳಿರುವ ಶ್ರೀಕಂಠ ಅವಧಾನಿ ಮಾಸ್ಟರ್ ಕಡೆಗೆ ನನ್ನ ಯೋಚನೆ ಹರಿಯಿತು.ಅವರಿಗೀಗ ತೊಂಭತ್ತು ವರ್ಷಗಳಾಗಿರಬಹುದು. ಅವರ ನೆಚ್ಚಿನ ಶಿಷ್ಯನಾಗಿದ್ದ ನಾನು , ಅವರ ಮನೆಯವರಲ್ಲಿ ಒಬ್ಬನಾಗಿಹೋದೆ. ಅವರ ಮಗ ಮನೀಶ ನನ್ನ ಜೊತೆಯವನೇ. ನಿನ್ನೆ ಬೆಳಗ್ಗೆ ನನಗೆ ಅವನಿಂದ ತುರ್ತು ಕರೆ ಬರಲಾಗಿ, ಆಫೀಸ್ ಗೆ ರಜ ಹಾಕಿ ಇಂದು ಗುರುಗಳನ್ನು ಕಾಣಲು ಹೊರಟಿದ್ದೇನೆ. 

ಅವರಿಗೇನಾಗಿದೆಯೋ? ನನ್ನ ಕಂಡರೆ ಅವರಿಗೆ ತುಂಬಾ ಪ್ರೀತಿ ಹಾಗೂ ಆತ್ಮೀಯತೆ. ಅವರ ವ್ಯಕ್ತಿತ್ವದ ಅಯಸ್ಕಾಂತತೆಯನ್ನು ನಾನಾದರೂ ಹೇಗೆ ತಾನೆ ಮರೆಯಲಿ? ಅವರ ಪರಿಚಯದ ಆ ಮೊದಲ ದಿನವನ್ನು ಮರೆಯುವುದು ಸಾಧ್ಯವೆ?

ಅಂದು ಹೈಸ್ಕೂಲ್ ನ ಮೊದಲ ದಿನದ ಮೊದಲ ಕನ್ನಡ ಪಿರಿಯೆಡ್.ಅವಧಾನಿಗಳು ತರಗತಿಗೆ ಪ್ರವೇಶಿಸಿದರು. ಬಿಳಿಯ ಪಾಯಿಜಾಮ, ಬಿಳಿಯ ಜುಬ್ಬ, ಹೆಗಲ ಮೇಲೊಂದು ಬಿಳಿಯ ಖಾದಿಯ ವಸ್ತ್ರ, ಹಣೆಯಲ್ಲೊಂದು ಪುಟ್ಟದಾದ ಕುಂಕುಮ,ಬೆಳ್ಳಗಿರುವ ಅವರ ಮುಖದಲ್ಲಿ ತೇಜಃಪುಂಜವಾದ ಕಣ್ಣುಗಳು, ಅವುಗಳನ್ನು ಅಪ್ಪಿಕುಳಿತಿದ್ದ ಕನ್ನಡಕ, ಅರೆನೆರೆತ ಕ್ರಾಪ್,ಶಾಂತ ಗಂಭೀರ ವ್ಯಕ್ತಿತ್ವ. ಸಾಮಾನ್ಯವಾಗಿ 

ವಿಜ್ಞಾನ ಹಾಗೂ ಗಣಿತದ ತರಗತಿಗಳಲ್ಲಿ, ಸೈಲೆಂಟ್ ಆಗಿ ಕುಳಿತು ಪಾಠ ಕೇಳುವ ವಿದ್ಯಾರ್ಥಿಗಳು, ಭಾಷಾ ತರಗತಿಗಳಲ್ಲಿ ಅದರಲ್ಲೂ "ಕನ್ನಡ" ದ 

ತರಗತಿಗಳಲ್ಲಿ ಉಡಾಫೆಯಿಂದ ಕುಳಿತು, ಗುಜು ಗುಜು ಶಬ್ದ ಮಾಡುವುದು ಸರ್ವೇಸಾಮಾನ್ಯ. ಅಂದೂ ಸಹ ಇದೇ ನಡೆಯುತ್ತಿತ್ತು. ಹಿಂದಿನ ಬೆಂಚಿನ ಕೆಲವು ಹುಡುಗರು "ಅಯ್ಯೋ, ಕನ್ನಡ ತಾನೆ, ಏನೋ ಹೇಳ್ಕೊಂಡು ಹೋಗ್ಲಿ ಬಿಡು" ಎಂದು ಮಾತನಾಡುತ್ತಿದ್ದುದು , ಅವಧಾನಿ ಮಾಸ್ಟೆರ್ ಕಿವಿಗೆ ಬಿದ್ದಿತ್ತು. ನಂತರ ನಡೆದದ್ದೇ ಬೇರೆ. ಅವರಿಂದ ಹಿಂದಿನ ಬೆಂಚಿನ ವಿದ್ಯಾರ್ಥಿಗಳಿಗೆ ಪ್ರಶ್ನೆಗಳ ಸುರಿಮಳೆಗಳಾಗಿ ಹೋದವು.

"ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ?" .ಆ ಬ್ಯಾಕ್ ಬೆಂಚರ್ಸ್ ತಲಾ ಒಂದೊಂದು ಉತ್ತರ ಹೇಳಿದರು. ನಂತರ ಮತ್ತೊಂದು ಪ್ರಶ್ನೆ ಕೇಳಿದರು.

"ನೀವು ಇಷ್ಟಪಡುವ ಲೋಕ ಮಾನ್ಯವಾಗಿರುವ ಇಂಗ್ಲೀಷ್ ಭಾಷೆಯಲ್ಲಿ ಎಷ್ಟು ಅಕ್ಷರಗಳಿವೆ? ಕಮಾನ್ ಟೆಲ್ ಮಿ"

ಅದಕ್ಕೂ ಸಮರ್ಪಕವಾದ ಉತ್ತರ ಬರದಿದ್ದಾಗ, ಇಡೀ ತರಗತಿಗೆ ಬುದ್ಧಿ ಹೇಳಿದ್ದರು.

"ಕನ್ನಡ ವೆಂಬ ತಾತ್ಸಾರದಿಂದ ಮಾತೃಭಾಷೆಯ ಬಗ್ಗೆಯೂ ಸರಿಯಾದ ತಿಳುವಳಿಕೆಯಿಲ್ಲದೆ, ಇಂಗ್ಲೀಷ್ ಎಂಬ ವಿಶ್ವ ಮೋಹಕ ಆಡಳಿತ  

ಭಾಷೆಯ ಬಗ್ಗೆಯೂ ಜ್ಞಾನವಿಲ್ಲದೆ, ಕೇವಲ ಅಂಧ ವ್ಯಾಮೋಹಗಳಿಂದ,ಮಾತೃ ಭಾಷೆಯನ್ನು ತಿರಸ್ಕಾರದಿಂದ ನೋಡುವ ಪ್ರವೃತ್ತಿ ಇಂದಿನ ಬಹುತೇಕರಲ್ಲಿ ಬೆಳೆದು ಬಂದಿದೆ. ಮೊದಲು ನಮ್ಮ ಮಾತೃಭಾಷೆಯ ಬಗ್ಗೆಯೇ ಸರಿಯಾಗಿ ತಿಳಿಯದೆ, ಪರಭಾಷೆಯ ಬಗ್ಗೆ ತಿಳಿದುಕೊಳ್ಳುವುದು 

ನೀರಿಳಿಯದ ಗಂಟಲಲ್ಲಿ ಕಡುಬು ತುರುಕಿದಂತೆಯೇ ಸರಿ, ಮೊಟ್ಟ ಮೊದಲು ನಮ್ಮ ತಾಯಿಗೆ ಗೌರವ ನೀಡುವುದನ್ನು ಕಲಿತು, ನಂತರ ಇತರ ಸ್ತ್ರೀಯರನ್ನೂ ನಮ್ಮ ಮಾತೆಯಂತೆ ಗೌರವಿಸುವುದನ್ನು ಕಲಿಯಬೇಕು.ನಮ್ಮ ಮಾತೃ ಭಾಷೆಯನ್ನು ಕಲಿತಮಾತ್ರಕ್ಕೆ ಅನ್ಯ ಭಾಷೆಯನ್ನು ತುಚ್ಚೀಕರಿಸಬೇಕೆಂದಿಲ್ಲ . ಮಾನವನ ಭೌದ್ಧಿಕ ವಿಕಾಸಕ್ಕೆ ಬಹು ಭಾಷಾ ಜ್ಞಾನ ಅತ್ಯಂತ ಮುಖ್ಯವೇ ಆದರೂ, ಮಾತೃ ಭಾಷೆಗೆ ಮೊದಲ ಆದ್ಯತೆ. ಇದನ್ನು ವಿದ್ಯಾರ್ಥಿಗಳೆಲ್ಲರೂ ತಿಳಿಯ ಬೇಕು. ನಮ್ಮ ಕನ್ನಡ ಸಾಹಿತ್ಯದ ಅಥಿರಥ ಮಹಾರಥರೆಲ್ಲರೂ, ಇಂಗ್ಲೀಷ್ ಭಾಷಾ ವಿಶಾರದರೆಂಬುದನ್ನು ಮರೆಯಬಾರದು. " ಅವರ ಕಂಚಿನ ಕಂಠದ ಮಾತುಗಳನ್ನು ಆಲಿಸಿದ ವಿದ್ಯಾರ್ಥಿಗಳು ಗಪ್ ಚಿಪ್ ಆದರು. ಅಂದಿನ ತರಗತಿಯಲ್ಲಿ ಅವರು ಮಾಡಿದ ಮೊದಲ ಪಾಠ ವೆಂದರೆ, ಕನ್ನಡ ವರ್ಣಮಾಲೆಯ ಪರಿಚಯ.

ಈ ತರಗತಿಯ ನಂತರ, ಮುಂದೆ ಇವರ ತರಗತಿಗಳಲ್ಲಿ ಯಾರೂ ತರಲೆ ಮಾಡುತ್ತಿರಲಿಲ್ಲ.ಇದಕ್ಕೆಕಾರಣವಿಲ್ಲದಿರಲಿಲ್ಲ. ಸಂಸ್ಕೃತ,ಇಂಗ್ಲೀಷ್, ಕನ್ನಡ ಮೂರೂ ಭಾಷೆಗಳಲ್ಲೂ ಹಿಡಿತವಿದ್ದ ಅವಧಾನಿಗಳ ಮುಂದೆ ಎಲ್ಲರೂ ಹೆದರುತ್ತಿದ್ದರು. ಅಷ್ಟೆ ಅಲ್ಲದೆ ಅವರ ಅಗಾಧವಾದ ಪಾಂಡಿತ್ಯಕ್ಕೆ ಎಲ್ಲರೂ ತಲೆದೂಗುತ್ತಿದ್ದರು. ಅವರ ತರಗತಿಗಳೆಂದರೆ ಒಂದು ರೀತಿಯ ಮಂತ್ರಮುಗ್ಧತೆ,ವಿದ್ಯಾರ್ಥಿಗಳಿಗಿರಲಿ, ಇತರ ಉಪಾಧ್ಯಾಯರುಗಳಿಗೂ 

ತುಂಬಾ ಇಷ್ಟವಾಗುತ್ತಿತ್ತು. ಹಳೆಗನ್ನಡದ ಕವನಗಳು, ನಡುಗನ್ನಡದ ಷಟ್ಪದಿಗಳು, ಆಧುನಿಕ ಕನ್ನಡದ ನವ್ಯ ಕಾವ್ಯಗಳನ್ನು ತುಂಬಾ ಚೆನ್ನಾಗಿ 

ವಾಚನ ಮಾಡುತ್ತ, ಅದರ ವಿವರಣೆಯನ್ನು, ಭಾರತೀಯ ಸಂಸ್ಕೃತಿಯಮೂಲಗಳನ್ನಾಧರಿಸಿ ನೀಡುತ್ತಿದ್ದರು. ಅವರ ಪದ್ಯಗಳ ತರಗತಿಗಳಿಗೆ, ಅನೇಕ ಇತರ ಶಿಕ್ಷಕರೂ ಬಂದು ಹಿಂದೆ ಕುಳಿತು ಕೇಳುತ್ತಿದ್ದರು. ಪಠ್ಯದ ಜೊತೆಜೊತೆಗೇ ನಮ್ಮ ದೇಶ, ಸಂಸ್ಕೃತಿ, ಇತಿಹಾಸ ಪುರಾಣಗಳ ಬಗ್ಗೆ ತಿಳುವಳಿಕೆ ಕೊಡುತ್ತಾ, ದೇಶ ಪ್ರೇಮ, ದೈವಭಕ್ತಿ, ಧರ್ಮ ಶ್ರದ್ಧೆಗಳನ್ನೂ ಮೂಡಿಸುತ್ತಿದ್ದುದು ಅವರ ಪಾಠ ಮಾಡುವ ವೈಶಿಷ್ಟ್ಯತೆ ಎಲ್ಲರನ್ನೂ ಸೆಳೆಯುತ್ತಿತ್ತು. ತಮ್ಮ ವಿದ್ಯಾರ್ಥಿಗಳಿಗೆ ಭಾರತೀಯರ ಜೀವನ ಮೌಲ್ಯಗಳ ಬಗ್ಗೆ ಹೇಳುತ್ತ, ಅವರನ್ನು ಉತ್ತಮ ಪ್ರಜೆಗಳಾಗಿ ಬಾಳುವುದಕ್ಕೆ ಅವರು ಪ್ರೇರೇಪಿಸುತ್ತಿದ್ದರು. ಕೆಲವು ವಿದ್ಯಾರ್ಥಿಗಳಂತೂ ಅವರ ಮಾತಿನ ಮೋಡಿಗೆ ಆಕರ್ಷಕರಾಗಿ, ಅವರ ಮನೆಗೂ ಹೋ ಗಿ ಅನೇಕ ವಿಚಾರಗಳನ್ನು ಚರ್ಚೆ ಮಾಡುತ್ತಿದ್ದರು. ಅಂತಹವರ ಗುಂಪಿನಲ್ಲಿ ನಾನೂ ಇದ್ದುದ್ದರಿಂದ ಅವರ ಮನೆಗೆ ಹೆಚ್ಚು ಹೆಚ್ಚು ಹೋಗಿ ಬಂದು ಮಾಡುತ್ತಾ, ಅವರ ಮನೆಯವನಾಗಿಯೇ ಬಿಟ್ಟೆ. ಆ ಗುರುಗಳ ಶಿಷ್ಯ ವಾತ್ಸಲ್ಯವನ್ನು ಎಷ್ಟು ಹೇಳಿದರೂ ಸಾಲದು. ಅವರ ಮನೆಯಲ್ಲಿ ಶಿಷ್ಯರಿಗೆ ಊಟೋಪಚಾರಗಳು ನಡೆಯುತ್ತಿದ್ದವು. 


ಹೀಗೆ ಬೆಳೆದ ನಮ್ಮ ಗುರುಶಿಷ್ಯರ ಬಾಂಧವ್ಯ, ನನ್ನ ಶಾಲಾ ದಿನಗಳು ಮುಗಿದಮೇಲೂ ಮುಂದುವರೆದಿತ್ತು. ಹೀಗಾಗಿ ಅವರ ಸಂಪರ್ಕ ನನಗಿತ್ತು. ಬೆಂಗಳೂರಿಗೆ ಬಂದ ಮೇಲೂ ವಿರಾಮವಾದಾಗಲೆಲ್ಲ ಗುರುಗಳನ್ನು ನೋಡಿಕೊಂಡು ಬರುತ್ತಿದೆ. ಆದರೆ ಈಗೆರಡು ವರ್ಷಗಳಿಂದ ನನ್ನ ಕೆಲಸ ಹಾಗೂ ಸಾಂಸಾರಿಕ ಒತ್ತಡಗಳಿಂದ ಅವರೊಂದಿಗಿನ ಸಂಪರ್ಕ ಕಡಿಮೆಯಾಗಿತ್ತು. ಆದರೆ ನಿನ್ನೆ ಅವರ ಮಗ 

ಮನೀಶನ ಫೋನ್ ಬಂದ ಮೇಲೆ ನನಗೂ ಆಶ್ಚರ್ಯವಾಗಿತ್ತು.ತಕ್ಷಣ ರಜ ಹಾಕಿ ತಿರುಕಣ್ಣಪುರಂ ಗೆ ಹೊರಟೆ. ಗುರುಗಳು ನನ್ನನ್ನು ಏಕೆ ಬರಹೇಳಿದ್ದಾರೆ? ಅವರ ಆರೋಗ್ಯ ಹೇಗಿದೆಯೋ? 

ಅಂತಹ ಗುರುಗಳನ್ನು ಪಡೆದ ನಾನು ಧನ್ಯ. " ಥ್ಯಾಂಕ್ಯು ಟಿಚರ್"

ಮನದಲ್ಲೇ ಗುರುಗಳಿಗೆ ವಂದಿಸುತ್ತ ಮತ್ತೆ ಕಣ್ಣು ಮುಚ್ಚಿ ಸೀಟಿಗೊರಗಿದೆ.


ಸುಮಾರು ಏಳು ಘಂಟೆಯ ಪ್ರಯಾಣ ಮುಗಿದು, ಕಡೆಗೆ ನಾನು ತಲುಪಬೇಕಾಗಿದ್ದ "ತಿರುಕ್ಕಣ್ಣಪುರಮ್" ನಲ್ಲಿ ಬಸ್ ನಿಂತಾಗ ರಾತ್ರಿ 

ಒಂಭತ್ತು ಹೊಡೆದಿತ್ತು. ಈ ಊರಿಗೆ ಬಂದು ದಶಕಗಳೆ ಆಗಿದ್ದವು. ಸಣ್ಣ ಊರಿನಲ್ಲಿ ತುಂಬಾ ಬದಲಾವಣೆಗಳಾಗಿ,ಆ ಹಳ್ಳಿಗೆ ನಗರದ ಮೆರಗು ಬಂದಿರುವುದು ಕಾಣುತ್ತಿತ್ತು. ಆಟೊ ಹಿಡಿದು, ಅವಧಾನಿ ಮಾಸ್ಟೆರ್ ಮನೆಯ ಮುಂದೆ ಇಳಿದೆ. 

ವಿಶಾಲವಾದ ಕಂಪೌಂಡ್ ನ ಹಿಂಭಾಗಕ್ಕೆ ಸುಮಾರಾಗಿರುವ ಮನೆ, ಮನೆಯ ಮುಂದಿನ ಹೂ ದೋಟ, ಚಿಕ್ಕದಾಗಿದ್ದ ಗೇಟ್. ನನಗಂತೂ 

ಮನಸ್ಸು ಗದ್ಗಿತವಾಯಿತು, ಯಾವುದೋ ಒಂದು ಋಷ್ಯಾಶ್ರಮಕ್ಕೆ ಬಂದಂತೆ ಭಾಸವಾಯಿತು. ಪುಟ್ಟ ಗೇಟ್ ತೆಗೆದು ಮೆಲ್ಲಗೆ ಒಳಕ್ಕೆ ಹೋಗಿ,

ಕಾಲಿಂಗ್ ಬೆಲ್ ಗುಂಡಿಯನ್ನು ಅದುಮಿ ನಿಂತೆ. ಹದಿನೈದರ ಹುಡುಗನೊಬ್ಬ ಬಂದು, ಬಾಗಿಲು ತೆಗೆದು,"ಯಾರು ಬೇಕಿತ್ತು?" ಎಂದಾಗ,ಶ್ರೀಕಂಠ ಅವಧಾನಿಗಳನ್ನು ನೋಡಬೇಕೆಂದು ಹೇಳಿ ಸುಮ್ಮನೆ ನಿಂತೆ. ಬಹುಶಃ, ಈ ಹುಡುಗ ಅವರ ಮೊಮ್ಮಗನಿರಬೇಕೆಂದುಕೊಂಡೆ.

"ತಾತ,ನಿಮ್ಮನ್ನು ಕೇಳಿಕೊಂಡು ಯಾರೋ ಬಂದಿದ್ದಾರೆ" ಎನ್ನುತ್ತಾ ಹುಡುಗ ಒಳಗೆ ಹೋದಾಗ, ಒಳಗಿನಿಂದ ಅವಧಾನಿಗಳ ಮಗ ಮನೀಶ

ಬಂದು, ನನ್ನನ್ನು ಒಳಕ್ಕೆ ಕರೆದು ಕೂರಿಸಿದ. ಇಬ್ಬರೂ ಮಾತನಾಡುವಾಗ, ಗುರುಗಳು ಹಾಸಿಗೆ ಹಿಡಿದು ಮಲಗಿ ಬಿಟ್ಟಿರುವ ವಿಷಯ್, ಹಾಗೂ ಅವರು ಇತ್ತೀಚೆಗೆ ನನ್ನನ್ನು ಪದೇ ಪದೇ ಕೇಳುತ್ತಿದ್ದುದರಿಂದ ನನ್ನನು ಬರಹೇಳಿ ಕರೆಸಿಕೊಂಡಿರುವ ವಿಚಾರ 

ಮನೀಶನಿಂದ ತಿಳಿಯಿತು. ನನಗಂತೂ ಎಷ್ಟು ಹೊತ್ತಿಗೆ ಆ ನನ್ನ ಗುರುಗಳನ್ನು ನೋಡುತ್ತೇನೋ ಎಂಬ ತುಡಿತ ಹೆಚ್ಚಾಗಿ, ಅವರನ್ನು 

ನೋಡಲು ಮನೀಶನೊಂದಿಗೆ ಅವರ ರೂಮಿಗೆ ಕಾಲಿಟ್ಟೆ. ವಯೋಸಹಜವಾದ ಖಾಯಿಲೆಗಳಿಂದ ಬಳಲುತ್ತಿದ್ದು, ಇತ್ತೀಚೆಗೆ ಕಣ್ಣು ಕಾಣಿಸುತ್ತಿಲ್ಲವಾಗಿದ್ದರಿಂದ, ಹೆಜ್ಜೆಯ ಸಪ್ಪಳದ ಮೇಲೆ , ಮಲಗಿದ್ದಲ್ಲಿಂದಲೇ "ಯಾರದು?" ಎಂದು ಕೇಳಿದಾಗ, ಅವರ ಧ್ವನಿ ಕೇಳಿ ಪುಳಕಗೊಂಡು, ಮಂಚದ ಹತ್ತಿರ ಹೋಗಿ,ಅವರ ಬಳಿ ನಿಂತು,

"ನಾನು ಸರ್,ಮುರಳಿ" ಎಂದಾಗ, ಅವರು ನನಗೆ ತಮ್ಮ ಬಳಿ ಬರುವಂತೆ ಕೈ ಬೀಸಿ ಕರೆದರು. "ಬಂದೆಯಾ ಮಗು, ಹತ್ತಿರ ಬಾರಪ್ಪ,ನೀ ಇಲ್ಲಿಗೆ ಬರದೆ ತುಂಬಾ ದಿನಗಳಾಗಿ ಹೋಯಿತಲ್ಲೊ? ನನಗಂತೂ ನಿನ್ನನ್ನು ಕಾಣಬೇಕೆನಿಸಿತ್ತು, ಆದರೆ ಈಗ ನನ್ನ ದೃಷ್ಟಿಯೇ ಮಂದವಾಗಿ ಹೋಗಿದೆ." ಅವರ ಆ ಆತ್ಮೀಯ ಕರೆಗೆ ಕರಗಿ ನೀರಾಗಿ ಹೋಗಿ, ಅವರ ಕಾಲುಗಳನ್ನು ಮುಟ್ಟಿ ನಮಸ್ಕರಿಸುತ್ತಾ, ಅವರ ಸನಿಹದಲ್ಲೇ ಕುಳಿತು,ಯೋಗಕ್ಷೇಮ ವಿಚಾರಿಸಿದೆ. ಅವರೂ ಸಹ ನನ್ನ ತಲೆ, ಬೆನ್ನುಗಳನ್ನು ನೇವರಿಸುತ್ತಾ, ಮನತುಂಬಿ ಹರಸಿದರು. ಕಡೆಗೆ ಅವರಿಗೆ ನಾನು ತೆಗೆದುಕೊಂಡು ಹೋಗಿದ್ದ ಫಲಪುಷ್ಪಗಳು,ಹಾಗೂ ಶಾಲು ವೊಂದನ್ನು ಅವರ ಕೈಯಲ್ಲಿ ಇಟ್ಟು ಮತ್ತೊಮ್ಮೆ ಸಾಷ್ಟಾಂಗ ಪ್ರಣಾಮ ಮಾಡಿ,"ಥ್ಯಾಂಕ್ಯು ಟಿಚರ್, " "ನ ಗುರೋರಧಿಕಂ" ಎಂದು ಹೇಳುವಾಗ ನನ್ನ ಹಾಗು ಗುರುಗಳ ಕಣ್ಗಳಿಂದ ಆನಂದ ಭಾಷ್ಪಗಳುರುಳಿದವು.

ಹಲವು ವರ್ಷಗಳ ನಂತರ ಗುರು ಶಿಷ್ಯರ ಮಿಲನವಾಗಿತ್ತು.ನನ್ನ ಮನಸ್ಸು ಧನ್ಯತಾಭಾವದಿಂದ ತುಂಬಿ ಹೋಯಿತು.





Rate this content
Log in

Similar kannada story from Classics