ಅಜ್ಜಿಯ ಗೋಲಕ
ಅಜ್ಜಿಯ ಗೋಲಕ


ಈಗ ಐದು ದಶಕಗಳ ಹಿಂದೆ ನಮ್ಮ ಅಜ್ಜಿ , ನಮ್ಮ ತಾತ ತರುತ್ತಿದ್ದ ಅಲ್ಪ ಹಣದಿಂದಲೇ ಅಚ್ಚುಕಟ್ಟಾಗಿ ಸಂಸಾರ ನಿರ್ವಹಿಸಿಕೊಂಡು ಹೋಗುತ್ತಿದ್ದರು. ಬಡತನವಿದ್ದರೂ ಎರಡು ಹೊತ್ತು ಊಟ, ಒಂದು ತಿಂಡಿ ಹಾಗೂ ಎರಡು ಹೊತ್ತು ಕಾಫಿಗೆ ಕೊರತೆಯಿರದೆ ನೆಮ್ಮದಿಯ ಜೀವನ ನಡೆಸುತ್ತಿದ್ದರು. ತಮ್ಮ ಹಿತ್ತಲ ಕೈ ತೋಟದಲ್ಲಿ ದಿನ ನಿತ್ಯದ ಪೂಜೆಗೆ ಬೇಕಾದ ಹೂಗಳನ್ನು ಬೆಳೆಸುತ್ತಾ ಜೊತೆಗೆ ಕರಿಬೇವು , ಕೊತ್ತಂಬರಿ, ಮೆಂತ್ಯ, ದಂಟು,ಮುಂತಾದ ಸೊಪ್ಪಿನ ಗಿಡಗಳು, ಹುರಳೀಕಾಯಿ,ಮೂಲಂಗಿ,ಸೀಮೆ ಬದನೆಕಾಯಿ, ಬದನೆಕಾಯಿ ಮುಂತಾದ ತರಕಾರಿಗಳನ್ನು ಬೆಳೆಸುತ್ತಿದ್ದದ್ದರಿಂದ , ಇವುಗಳನ್ನು ಹೊರಗಿನಿಂದ ತರುವ ಅಗತ್ಯವಿರಲಿಲ್ಲ. ಹೊಟ್ಟೆ ಬಟ್ಟೆಗೆ ನೆಮ್ಮದಿಯಾಗಿದ್ದರೂ ಚಿನ್ನ ಬಣ್ಣ ಗಳ ಆಸೆಗೆ ದುಡ್ಡು ಎಟುಕುತ್ತಿರಲಿಲ್ಲ. ಒಮ್ಮೆ ಅಜ್ಜಿಗೂ ಸಹ ಒಂದು ಜೊತೆ ಚಿನ್ನದ ಬಳೆ ಹಾಕಿಕೊಳ್ಳಬೇಕು ಎಂಬ ಆಸೆ ಆಯಿತಂತೆ. ಆದರೆ ಅದಕ್ಕಾಗಿ ಹಣವನ್ನು ಗಂಡನಲ್ಲಿ ಕೇಳುವುದಂಟೆ? ಅದಂತೂ ಸಾಧ್ಯವಾಗದ ಮಾತು.
ಹೇಗಾದರೂ ಮಾಡಿ ಮುಂದಿನ ಗೌರೀ ಹಬ್ಬದ ವೇಳೆಗಾದರೂ ತಮ್ಮ ಆಸೆಯನ್ನು ನೆರವೇರಿಸಿಕೊಳ್ಳಬೇಕೆನಿಸಿತಂತೆ. ಅದಕ್ಕಾಗಿ ಒಂದು ಹೊಸ ಗೋಲಕ ಅದು ದೇವರ ಮನೆಯಲ್ಲಿ ಸೇರಿತು.
ಸಾಮಾನ್ಯವಾಗಿ ನನ್ನ ಅಜ್ಜಿ ಪ್ರತಿದಿನ ಪೂಜೆ ಮಾಡಿ ಮುಗಿಸಿದಾಗ ಕಡೆಯಲ್ಲಿ ಮಕ್ಕಳು ಮೊಮ್ಮಕ್ಕಳು ಚೆನ್ನಾಗಿರಲಿ ಎಂದು ದೇವರನ್ನು ಪ್ರಾರ್ಥಿಸಿ, ಮನೆದೇವರು ಶ್ರೀಕಂಠೇಶ್ವರ ,ಪಂಡರಾಪುರದ ಪಾಂಡುರಂಗ, ಧರ್ಮಸ್ಥಳದ ಮಂಜುನಾಥ ಹೀಗೆ ಗೋಲಕಗಳನ್ನಿಟ್ಟು, ಒಂದೊಂದು ದಿನ ಒಂದೊಂದು ಗೋಲಕದಲ್ಲಿ ತಪ್ಪದೆ ಒಂದೆರಡು ನಾಣ್ಯಗಳನ್ನು ಹಾಕುತ್ತಿದ್ದರು. ವರ್ಷಕ್ಕೋ, ಎರಡು ವರ್ಷಕ್ಕೋ ದೇವರ ದರ್ಶನಕ್ಕೆ ಹೋದಾಗ ಹುಂಡಿಯಲ್ಲಿ ಆ ಗೋಲಕದ ದುಡ್ಡನ್ನು ದೇವರಿಗೆ ಒಪ್ಪಿಸುತ್ತಿದ್ದರು ಇಲ್ಲವಾದರೆ ಪೋಸ್ಟ್ ಆಫೀಸನಿಂದ ಮನಿ ಆರ್ಡರ್ ಮಾಡಿಸುತ್ತಿದ್ದರು. ಈಗ ಆ ಗೋಲಕಗಳ ಜೊತೆ ಮತ್ತೊಂದು ಸೇರಿತು. ಪ್ರತಿ ತಿಂಗಳೂ ತಾತ ಮನೆ ಖರ್ಚಿಗೆಂದು ಕೊಡುವ ಹಣದಲ್ಲಿ ಸ್ವಲ್ಪ ಉಳಿಸಿ
ಚಿನ್ನದ ಬಳೆಗಾಗಿ ಆ ಹೊಸ ಗೋಲಕದಲ್ಲಿ ಹಾಕುತ್ತಾ ಹೋದರು. ದಿನವೂ ಹನಿಹನಿಯಾಗಿ ನಾಣ್ಯ ಹಾಗೂ ನೋಟುಗಳು ಆ ಗೋಲಕ ಸೇರುತ್ತಿತ್ತು. ಗಟ್ಟಿ ಕೆನೆ ಮೊಸರು ಕಡೆದ ಮಜ್ಜಿಗೆಯಾಗತೊಡಗಿತು.
ಅನ್ನಕ್ಕೆ ಗಟ್ಟಿ ತುಪ್ಪದ ಬದಲು ನೀರು ತುಪ್ಪ ಬೀಳಲು ಶುರುವಾದಾಗ ತಾತನಿಗೆ ಆಶ್ಚರ್ಯವಾಯಿತು. ಹುಳಿಯಲ್ಲಿ ಹೋಳು ಸ್ವಲ್ಪ ತೇಲುತ್ತಿತ್ತು. ಒಂದು
ದಿನ ತಾತ ಅಜ್ಜಿಯೊಡನೆ ಅಡುಗೆಯಲ್ಲಾದ ಬದಲಾವಣೆ ಕೇಳಿ ಗಲಾಟೆ ಮಾಡಿದಾಗ ಅಜ್ಜಿ ಸಮಾಧಾನವಾಗಿ ,,"ಅಲ್ಲಾ, ನಮ್ಮಿಬ್ಬರಿಗೂ ವಯಸ್ಸಾಗುತ್ತಾ ಬರ್ತಿದೆ. ಜಿಡ್ಡು ತುಪ್ಪಗಳನ್ನು ಕಡಿಮೆ ಮಾಡಿಕೊಂಡರೆ ಆರೋಗ್ಯ ಕ್ಕೆ ಒಳ್ಳೇದು ಅಂತಾರಲ್ಲ ಅದಕ್ಕೆ "', ಎಂದು ಹೇಳಿ ತಾತನ ಬಾಯಿ ಮುಚ್ಚಿ ಸುತ್ತಿದ್ದರು. ಆದರೆ ತಾತನಿಗೆ ತುಂಬಾ ಸಿಟ್ಟು ಬಂದು
"ನೋಡೆ, ಈ ದೇಹಕ್ಕೆ ಗಟ್ಟಿ ಮೊಸರು ತುಪ್ಪ ,ಪುಷ್ಕಳವಾದ ಹಣ್ಣು ತರಕಾರಿಗಳು ಅಭ್ಯಾಸ ಆಗಿ ಹೋಗಿದೆ. ನನಗೆ ಕಂಡ್ರಾವಿ ಊಟ ಆಗುವುದಿಲ್ಲ. ನನಗೆ ಮಾಮೂಲಾಗಿ ಗಟ್ಟಿ ಮೊಸರು ತುಪ್ಪ ತಿಂದರೆ ಏನೂ ಆಗುವುದಿಲ್ಲ. ನಾಳೆಯಿಂದ ಈ ರೀತಿ ಊಟ ಹಾಕಬೇಡ" ಎಂದು ಗುಡುಗಿದಾಗ,
ಅಜ್ಜಿ "ಅಯ್ಯೋ ನಿಮಗೆ ಒಳ್ಳೆಯದಾಗಲಿ ಅಂತ ಹೇಳಿದರೆ ನೀವು ಕೇಳಲ್ಲ. ನೀವೇನಾದರೂ ಮಾಡಿಕೊಳ್ಳಿ" ಎಂದುಕೊಳ್ಳುತ್ತಾ ಗಂಡನಿಗೆ ಮಾಮೂಲಿನಂತೆ ಊಟ ಹಾಕಿ, ತಾವು ಸ್ವಲ್ಪ ಕಡಿತಗೊಳಿಸಿ ಕೊಂಡರು.
ಹೀಗೇ ಒಂದು ವರುಷ ಕಳೆಯಿತು. ಅಜ್ಜಿಗೆ ಗೋಲಕವನ್ನು ಒಡೆದು ನೋಡಬೇಕೆಂಬ ಕುತೂಹಲ ಉಂಟಾಗಿ, ನಾವು ಮೊಮ್ಮಕ್ಕಳು ಊರಿಗೆ ಬರುವುದನ್ನೇ ಕಾಯುತ್ತಿದ್ದ ರು. ಎಲ್ಲರಿಗಿಂತ ಹಿರಿಯಳಾಗಿದ್ದ ಹಾಗೂ ಅವರ ನಂಬಿಕೆಗೆ ಅರ್ಹವಾಗಿದ್ದ ನನ್ನನ್ನು ಗುಟ್ಟಾಗಿ ಕರೆದು ,ಆ ಗೋಲಕದ ಬೀಗ ತೆಗೆದು ದುಡ್ಡನ್ನು ಲೆಕ್ಕ ಹಾಕುವಂತೆ ತಿಳಿಸಿದರು.
ಆ ಗೋಲಕದಲ್ಲಿದ್ದ ಹಣದ ಮೊತ್ತ ನೋಡಿ ನನಗೆ ಆಶ್ಚರ್ಯ ವಾಯಿತು. ಸುಮಾರು ಮೂರೂವರೆ ಸಾವಿರದಷ್ಟು ಹಣವಿತ್ತು. ಈಗಐದು ದಶಕಗಳ ಹಿಂದೆ ಅದು ಇಂದಿನ ಮೂವತ್ತು ಸಾವಿರಕ್ಕೂ ಹೆಚ್ಚು.
ಅಜ್ಜಿಯ ಮುಖ ಅರಳಿಹೋಯಿತು. ಹನಿ ಹನಿ ಗೂಡಿ ಹಳ್ಳವಾಗಿತ್ತು. ಅಂದು ಸಂಜೆಯೇ ಅದೇ ಬೀದಿಯ ತುದಿಯಲ್ಲಿ ದ್ದ ಅಕ್ಕಸಾಲಿಗನನ್ನು ಕರೆದು ಒಂದು ಜೊತೆ ಮೆಣಸು ಕಾಳಿನ ಪ್ಯಾಟ್ರನ್ ಬಳೆ ಮಾಡಿಕೊಡಲು ಹೇಳಿದರು.
ಅಂತೂ ಇಂತೂ ಆ ವರ್ಷದ ಗೌರೀ ಹಬ್ಬಕ್ಕೆ ಬಂಗಾರದ ಬಳೆ ಅಜ್ಜಿಯ ಕೈಗಳನ್ನು ಅಲಂಕರಿಸಿತ್ತು. ಹೆಂಡತಿಯ ಕೈಗಳಲ್ಲಿ ಹೊಳೆವ ಬಂಗಾರದ ಬಳೆಗಳನ್ನು ನೋಡಿದ ತಾತನಿಗೆ ಆಶ್ಚರ್ಯ ವೋ ಆಶ್ಚರ್ಯ. ಅಜ್ಜಿಯ ಒಗ್ಗರಣೆ ಡಬ್ಬಿಯ ಸಣ್ಣ ಉಳಿತಾಯ ದ ವಿಷಯ ತಾತನಿಗೆ ಗೊತ್ತಾದಾಗ ಅವರು ತಮ್ಮ ಹೆಂಡತಿಯನ್ನು ಹೆಮ್ಮೆಯಿಂದ ನೋಡುತ್ತಾ, "ಭಲೇ,, ನಾನು ನಿನ್ನನ್ನು ಏನೂ ತಿಳಿಯದ ದಡ್ಡಿ ಅಂತ ಅಂದ್ಕೊಂಡಿದ್ದೆ.ಆದರೆ ನೀನು ನನಗಿಂತಲೂ ಬುದ್ದಿವಂತೆ ಅಂತ ತೋರಿಸಿ ಬಿಟ್ಟೆ,"
ಎಂದಾಗ, ಅಜ್ಜಿಯ ಮುಖ ಊರಗಲವಾಯಿತು.