ವಿಕಸಿತೆ
ವಿಕಸಿತೆ


ವೀಣಾ ಳ ಇಪ್ಪತ್ತನೇ ವರ್ಷದ ಹುಟ್ಟು ಹಬ್ಬದ ಸಡಗರ ಮುಗಿದು , ರಾತ್ರಿ ಹತ್ತು ಗಂಟೆಗೆ ಮನೆ ಸಹಜ ಸ್ಥಿತಿಗೆ ಬಂದಾಗ, ಶಾಂತಾ ಹಾಗೂ ಪ್ರಭಾಕರ್ ನೆಮ್ಮದಿ ಯಾಗಿ ಕುಳಿತರು. ಒಬ್ಬಳೇ ಮಗಳು ವೀಣಾಳನ್ನು ತುಂಬಾ ಮುದ್ದಿನಿಂದ ಬೆಳೆಸಿದ್ದರಿಂದ, ಅವಳು ಪದವಿಯ ಕೊನೆಯ ವರ್ಷಕ್ಕೆ ಬಂದರೂ,ಎಳೆ ಮಗುವಿನಂತೆ ಆಡುತ್ತಿದ್ದಳು.
"ಗುಡ್ ನೈಟ್ ಡ್ಯಾಡ್,ಗುಡ್ ನೈಟ್ ಮಮ್"ಎಂದು ಹೇಳುತ್ತ ವೀಣಾ ಅವಳ ರೂಂ ಗೆ ಮಲಗಲು ಹೋದಾಗ,ಶಾಂತ ಳೂ ತಮ್ಮ ರೂಂಕಡೆ ಹೊರಟರು.ಬೆಳಗ್ಗಿನಿಂದಲೂಓಡಾಡಿ ಸಾಕಾಗಿದ್ದ ಶಾಂತಳಿಗೆ ಹಾಸಿಗೆಯಲ್ಲಿ ಉರುಳಿದರೂ ನಿದ್ರೆ ಬಾರದೆ,ತಾರಸಿ ನೋಡುತ್ತಾ, ಮಗಳ ಬಗ್ಗೆಯೇಯೋಚಿಸುತ್ತಿದ್ದಾಗ,ಅವಳ ಕಣ್ಣು ಗಳಿಂದ ನೀರು ಇಳಿಯತೊಡಗಿತು.
ಇಪ್ಪತ್ತು ವಸಂತ ಗಳು ಕಳೆದರೂ, ವೀಣಾ ಇನ್ನೂ ಹೂವಾಗಿ ಅರಳದೇ ಇರುವುದು ಶಾಂತಳಿಗೆ ತುಂಬಾ ಯೋಚನೆಯಾಗಿತ್ತು. ಅವಳು ಬಯಸಿದ್ದೆಲ್ಲವನ್ನೂ ದೇವರು ಅವಳಿಗೆ ನೀಡಿದ್ದ. ಮನೆ ಮೆಚ್ಚಿ ಮದುವೆಯಾದ ಪತಿ ,ಧನ ಕನಕ,ವಸ್ತು ವಾಹನ ಯೋಗಗಳೆಲ್ಲವೂಅವಳಿಗೆ ದೊರಕಿತ್ತು. ಮದುವೆಯಾಗಿ ಹಲವು ವರ್ಷಗಳ ನಂತರ ಹುಟ್ಟಿದ ಮಗಳು ವೀಣಾ, ಅವಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡಿದ್ದರು. ಒಳ್ಳೆಯ ರೂಪ, ವಿದ್ಯೆಗುಣ, ಶ್ರೀ ಮಂತಿಕೆ ಎಲ್ಲವೂ ವೀಣಾಳಿಗಿದ್ದರೂ,ದೇವರು ಒಂದೇ ಒಂದರಲ್ಲಿ ಕೊರತೆ ಕೊಟ್ಟಿದ್ದು, ತಾಯಿ ಶಾಂತಳಿಗೇ ಚಿಂತೆಯಾಗಿತ್ತು. ಎಲ್ಲಾ ಹೆಣ್ಣು ಮಕ್ಕಳಂತೆ ಸ್ತ್ರೀ ಸಹಜವಾಗಿ ಆಗಬೇಕಾಗಿದ್ದ ಋತು ಚಕ್ರ ದ ಬದಲಾವಣೆ ಅವಳ ದೇಹದಲ್ಲಿ ಆಗಿಯೇ ಇರಲಿಲ್ಲ. ಶಾಂತ ಹಾಗೂ ಪ್ರಭಾಕರ್ ಗೆ ಇದೊಂದು ಚಿಂತೆಯಾಗಿ ಕಾಡತೊಡಗಿತು.ಹಲವಾರು ಸ್ಪೆಷಲಿಸ್ಟ್ ಡಾಕ್ಟರ್ ಗಳಲ್ಲಿ ವೀಣಾಳನ್ನು ಕರೆದುಕೊಂಡು ಹೋಗಿ ಪರೀಕ್ಷೆ ಮಾಡಿಸತ್ತಿದ್ದರೂ ಏನೂ ಪ್ರಯೋಜನವಾಗಿರಲಿಲ್ಲ.
ಹತ್ತಾರು ದೇವರಿಗೆ ಹರಕೆ ಕಾಣಿಕೆಗಳು ನಡೆದವು.ಇಂದಿಗೆ ವೀಣಾ ಳಿಗೇ ಇಪ್ಪತ್ತು ವರ್ಷಗಳೂ ಮುಗಿದವು.ಮುಂದೆ ಅವಳ ಭವಿಷ್ಯ ಹೇಗೆ?
ಚಿಂತೆಯಿಲ್ಲಿ ಮುಳುಗಿದ್ದ ಶಾಂತಳಿಗೆ ಪ್ರಭಾಕರ್ ಒಳಗೆ ಬಂದದ್ದೂ ಸಹ ತಿಳಿಯಲಿಲ್ಲ. ಅವನು ಇವಳ ಭುಜ ಹಿಡಿದು ಅಳುತ್ತಿರುವ ಕಾರಣ ಕೇಳಿದಾಗ , ಶಾಂತಾ ಗಂಡನೆದೆಗೆ ಒರಗಿ, ತನ್ನ ಮನದಳಲನ್ನು ತೋಡಿಕೊಂಡಾಗ, ಅವನು ಅವಳನ್ನು ಸಮಾಧಾನ ಮಾಡಿ ದನು.
ಮತ್ತೆರಡು ವರ್ಷ ಗಳೂ ಉರುಳಿ, ವೀಣಾ ಳ ಸ್ನಾತಕೋತ್ತರ ಪದವಿ ಮುಗಿದರೂ ಅವಳಲ್ಲಿ ಯಾವುದೇ ದೈಹಿಕ ಬದಲಾವಣೆಗಳು ಆಗದಿದ್ದಾಗ,ಶಾಂತಳ ಜೊತೆ ವೀಣಾಳಿಗೂ ಯೋಚನೆಯಾಯಿತು.ಆದರೆ ಪ್ರಭಾಕರ್ ಮಾತ್ರ ಇಬ್ಬರಿಗೂ ಧೈರ್ಯ ಹೇಳುತ್ತಾ, ತನ್ನ ಮಗಳನ್ನು ಮಗನಂತೆಯೇ ನೋಡಿಕೊಂಡರಾಯಿತು ಎಂದು ಧೈರ್ಯ ಹೇಳಿ, ಮಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅರ್ಜಿ ಹಾಕಲು ಹುರಿದುಂಬಿಸಿ ದನು.
ವೀಣಾ ಯು.ಪಿ.ಏಸ್.ಸಿ. ಪರೀಕ್ಷೆ ಗಳು, ಸಿವಿಲ್ ಸರ್ವೀಸ್ ಪರೀಕ್ಷೆ ಗಳನ್ನು ಬರೆಯುತ್ತಾ ಬರೆಯುತ್ತಾ,ಕಡೆಗೂ ಐ.ಎ.ಎಸ್ ಪರೀಕ್ಷೆ ಯಲ್ಲಿ ತೇರ್ಗಡೆಯಾಗಿ, ಉತ್ತರ ಪ್ರದೇಶದ ಲ್ಲಿ ಜಿಲ್ಲಾಧಿಕಾರಿ ಯಾಗಿ ಆಯ್ಕೆ ಗೊಂಡಾಗ,ಪ್ರಭಾಕರ್ ಹಾಗೂ ಶಾಂತಾ ಇಬ್ಬರಿಗೂ ಹಿಡಿಸಲಾರದಷ್ಟು ಖುಷಿಯಾಯಿತು.
ಒಬ್ಬಳೇ ಮಗಳನ್ನು ಬೀಳ್ಕೊಡುವಾಗ ಶಾಂತಾ ಹಾಗೂ ಪ್ರಭಾಕರ್ ಗೆ ತುಂಬಾ ಬೇಸರವಾದರೂ,ಮಗಳ ಮುಂದಿನ ಉಜ್ವಲ ಭವಿಷ್ಯ ಕ್ಕಾಗಿ, ತಮ್ಮ ಬೇಸರವನ್ನುಒಳಗೇ ನುಂಗಿ ಕೊಂಡರು.
p>
ತನ್ನ ಔದ್ಯೋಗಿಕ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಗಳಿಸುತ್ತಾ ತನ್ನ ವೃತ್ತಿ ಜೀವನದಲ್ಲಿ ಹಂತ ಹಂತವಾಗಿ ಮೇಲೇರ ತೊಡಗಿದ ವೀಣಾ, ತನ್ನ ದೈಹಿಕ ನ್ಯೂನತೆ ಯನ್ನು ಕಡೆಗಣಿಸಿ,ತನ್ನ ಕ್ಷೇತ್ರಕ್ಕೆ ಉತ್ತಮ ಸೇವೆ ಸಲ್ಲಿಸುತ್ತಿದ್ದಳು.
ಒಮ್ಮೆ ದೆಹಲಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ, ವೀಣಾಳಿಗೆವಿಕಾಸ್ ನ ಪರಿಚಯವಾಯಿತು. ಅವನೂ ಸಹ ಒಬ್ಬ ಐ.ಎ.ಎಸ್. ಅಧಿಕಾರಿಯಾಗಿದ್ದರಿಂದ ಅವನೊಂದಿಗೆ ಅವಳ ಪರಿಚಯ ಮುಂದುವರೆದು ಸ್ನೇಹಕ್ಕೆ ತಿರುಗಿತು.
ಈ ಸ್ನೇಹ ಬರಬರುತ್ತಾ ಆತ್ಮೀಯತೆ ಗೆ ತಿರುಗಿ,ಪರಸ್ಪರ ತಮ್ಮ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಿದ್ದರು.
ಒಂದು ದಿನ, ವಿಕಾಸ್ ವೀಣಾ ಳ ಮುಂದೆ ತನ್ನ ಮನದಾಸೆಯನ್ನು ತೋಡಿಕೊಂಡು,ಮದುವೆಯ ಪ್ರಸ್ತಾಪ ಇಟ್ಟಾಗ, ವೀಣಾಳ ಮುಖ ಮುದುಡಿದಂತಾಯಿತು.ಮದುವೆಯ ವಿಷಯವನ್ನು ಅಲ್ಲಿಗೇ ಮೊಟಕುಗೊಳಿಸಿವಿಷಯಾಂತರ ಮಾಡಿದಳು.ವಿಕಾಸ್ ಗೂ ಇವಳ ಈ ರೀತಿಯ ನಡವಳಿಕೆ ನೋಡಿ ಆಶ್ಚರ್ಯ ವಾಯಿತು.
ಮುಂದೆ ಹಲವು ತಿಂಗಳುಗಳು ಕಳೆದರೂ, ವೀಣಾ ಮದುವೆ ವಿಷಯವನ್ನೇ ತೆಗೆಯದಿದ್ದಾಗ, ವಿಕಾಸ್ ಗೂ ಬೇಸರವಾಗುತ್ತಿತ್ತು. ಒಮ್ಮೆ ಇವರಿಬ್ಬರೂ ಆಫೀಸ್ ನ ಕಾನ್ಫರೆನ್ಸ್ ಗಾಗಿ ಒಟ್ಟಿಗೆ ಮನಾಲಿಗೆ ಹೋಗಿದ್ದಾಗ, ವೀಣಾ ಳ ಮೆಡಿಕಲ್ ರಿಪೋರ್ಟ್ ಗಳು ಆಕಸ್ಮಿಕ ವಾಗಿವಿಕಾಸ್ ನ ಕಣ್ಣಿಗೆ ಬಿದ್ದಾಗ, ಮದುವೆಯ ಬಗ್ಗೆ ವೀಣಾಳ ಅನಾಸಕ್ತಿ ಗೆ ಕಾರಣ ತಿಳಿಯಿತು.ಅಂದೇ ವಿಕಾಸ್ ಮದುವೆಯಾದರೆ ವೀಣಾಳನ್ನೇ ಎಂದು ನಿರ್ಧರಿಸಿ ದ.
ಇಬ್ಬರೂ ಮನಾಲಿಯಲ್ಲಿ ಖುಷಿ ಖುಷಿಯಾಗಿ ಕಾಲ ಕಳೆದರು. ಅಲ್ಲಿಂದ ಹೊರಡುವ ಹಿಂದಿನ ದಿನ, ಇಬ್ಬರೂ ಒಂದು ರೆಸ್ಟೋರೆಂಟ್ ಗೆ ಊಟಕ್ಕೆ ಹೋಗಿದ್ದಾಗ ವಿಕಾಸ್ ಮತ್ತೆ ಮದುವೆಯ ಪ್ರಸ್ತಾಪ ಮಾಡಿದಾಗ ವೀಣಾ ಮಾತು ಬದಲಿಸುವ ಪ್ರಯತ್ನ ಮಾಡಿದರೂ ಬಿಡದೆ ,ಬಲವಂತವಾಗಿ ಕಾರಣ ಹೇಳುವಂತೆ ಒತ್ತಾಯಿಸಿ ದಾಗ, ವೀಣಾ ವಿಧಿಯಿಲ್ಲದೆ ತನ್ನ ದೈಹಿಕ ನ್ಯೂನತೆ ಯನ್ನು ಅವನ ಮುಂದೆ ಹೇಳಿ, ತನನ್ನು ಮರೆತು ಬಿಡುವಂತೆ ಹೇಳಿ ಬಿಟ್ಟು ಅಲ್ಲಿಂದ ಹೊರಡಲು ಎದ್ದಾಗ, ಅವಳ ಹಿಂದೆಯೇ ಬಂದ ವಿಕಾಸ್ ಅವಳ ಕೈಯನ್ನು ತನ್ನ ಕೈಯಲ್ಲಿ ಹಿಡಿದು, ಅವಳ ಕಣ್ಣಲ್ಲಿ ಕಣ್ಣಿಟ್ಟು,,
" ವೀಣಾ ನಾನು ಮದುವೆ ಯಾಗುವುದಾದರೇ ನಿಮ್ಮನ್ನೇ.ನೀವು ಯಾವುದರಲ್ಲೂ ಕಡಿಮೆ ಯಿಲ್ಲ. ಕೇವಲ ಮಕ್ಕಳಾಗದಿರುವುದೊಂದೇ ನ್ಯೂನತೆ. ಅದಕ್ಕೆ ಬೇಕಾದಷ್ಟು ದಾರಿಗಳಿವೆ. ಯಾವುದಾದರೂ ಅನಾಥಾಶ್ರಮ ದಿಂದ ಒಂದಲ್ಲದಿದ್ದರೆ ಎರಡು ಮಕ್ಕಳನ್ನು ದತ್ತು ಪಡೆದು ಬೆಳೆಸೋಣ.
" ಡೊಂಟ್ ವರಿ" ಎಂದಾಗ, ವೀಣಾಳ ಕಣ್ಣು ಗಳಿಂದ ಆನಂದಾಶ್ರುಗಳಿಳಿದವು.
", ಥ್ಯಾಂಕ್ಸ್ ವಿಕಾಸ್. ಈ ಜಗತ್ತಿನಲ್ಲಿ ನಿಮ್ಮಂತಹ ವಿಶಾಲ ಮನೋಭಾವ ವುಳ್ಳ ಗಂಡಸರು ಸಿಗುವುದು ತುಂಬಾ ಅಪರೂಪ. ನನ್ನಂತಹ ಅರಳಿದ ಹೂವನ್ನು ನೀವು ಸ್ವೀಕರಿಸಿ ಮುಡಿಗೇರಿಸಿಕೊಳ್ಳುತ್ತಿದ್ದೀರಿ. ಆದರೆ ದುಡುಕಬೇಡಿ. ನಿಧಾನವಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ" ವೀಣಾ ಹೇಳಿ ಹೊರಟಳು.
ಮುಂದೆ ಒಂದೆರಡು ತಿಂಗಳಲ್ಲಿ ವೀಣಾಳ ಮದುವೆ ವಿಕಾಸ್ ನೊಂದಿಗೆ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.ಮಗಳ ಜೀವನ ಇಂತಹ ಒಳ್ಳೆಯ ತಿರುವು ಪಡೆದಾಗ ಶಾಂತ ಹಾಗೂ ಪ್ರಭಾಕರ್ ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ಹೂವು ಅರಳದಿದ್ದರೂ ದೇವರ ಮುಡಿ ಸೇರಿತ್ತು.