ಬರುವನೋ ಬಾರನೋ
ಬರುವನೋ ಬಾರನೋ


ಅಂದು ರಮ್ಯಳಿಗೆ ತುಂಬಾ ದುಗುಡ. ಏನು ಕೆಲಸ ಮಾಡುತ್ತಿದ್ದರೂ ಅವನದೇ ನೆನಪುಗಳು. ಊಟ ತಿಂಡಿ ನಿದ್ದೆ ಏನೂ ಬೇಡವೆನಿಸಿ, ತಿಂದರೆ ತಿಂದಳು ಇಲ್ಲದಿದ್ದರೆ ಇಲ್ಲ ಎನ್ನುವಂತಾಗಿದೆ. ಏನೋ ಚಡಪಡಿಕೆ. ಒಂಟಿತನ ಕಿತ್ತು ತಿನ್ನುತ್ತಿದೆ. ಯಾಂತ್ರಿಕವಾಗಿ ಆಫೀಸ್ ಹಾಗೂ ಮನೆ ಕೆಲಸಗಳನ್ನು ನಿರ್ವಹಿಸುತ್ತಿದ್ದಳಾದರೂ ಮನದೊಳಗೆ ಕಾರ್ಮೋಡ. ಕ್ಷಣ ಕ್ಷಣಕ್ಕೂ ಮೊಬೈಲ್ ನೋಡುತ್ತಲೇ ಅವನ ಮೇಸೆಜಿಗಾಗಿ, ಫೋನಿಗಾಗಿ ಕಾದು ಕಾದು ಸಾಕಾಗಿ ಹೋಗಿದೆ. ಅವಳೇ ಅವನ ಮೊಬೈಲಗೆ ಫೋನ್ ಮಾಡಿದರೂ ಸಿಗುತ್ತಿಲ್ಲ. ಏನಾಗಿದೆ ಅವನಿಗೆ? ನೂರಾರು ಯೋಚನೆಗಳು ಅವಳನ್ನು ಸುತ್ತುವರಿಯಿತು.
ರಾಜು ತನ್ನ ಮನೆಯಲ್ಲಿ ಯಾವ ಒತ್ತಡದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾನೋ? ಅವನಿಗೆ ಅವಳೇ ಹಕ್ಕಿನವಳು. ನಮ್ಮದೇನಿದ್ದರೂ ಒಂದು ರೀತಿಯ ಒಪ್ಪಂದ. ನಮ್ಮ ಸಂಬಂಧಕ್ಕೆ ಯಾವ ಹೆಸರೂ ಕೊಡಲಾಗದು. ರಾಜನ ಮೇಲೆ ಹಕ್ಕು ಚಲಾಯಿಸಲು ಸಾಧ್ಯವಾಗದು. ಅದೇನು ಮೋಹವೋ ನನಗೆ ಅವನ ಮೇಲೆ.ತಿಳಿಯದು. ಆಫೀಸಿನಲ್ಲಿ ನನ್ನೆಲ್ಲಾ ಕಷ್ಟಗಳಿಗೂ ಜೊತೆಯಾಗಿ ನಿಲ್ಲುತ್ತಿದ್ದ ರಾಜು (ನನಗಿಂತ ಚಿಕ್ಕವನಾಗಿದ್ದರೂ ) ನನಗೆ ತುಂಬಾ ಆಪ್ತವಾಗಿ ಹೋಗಿದ್ದ. ನನಗರಿಯದಂತೆ ಅವನಿಗೆ ಮನಸು ಕೊಟ್ಟೆ. ಹೆತ್ತವರನ್ನು ಕಳೆದುಕೊಂಡು ಏಕಾಂಗಿಯಾಗಿಯೇ ಇದ್ದ ನನಗೆ ರಾಜು ಹತ್ತಿರವಾಗುತ್ತಾ ಬಂದ. ನನಗೆ ಸಹಾಯ ಮಾಡುವುದೆಂದರೆ ಅವನಿಗೂ ಖುಷಿ. ಇಬ್ಬರೂ ಮಾನಸಿಕವಾಗಿ ಹತ್ತಿರವಾಗುತ್ತಿದ್ದಂತೆ ದೈಹಿಕವಾಗಿಯೂ ಬೆರೆಯತೊಡಗಿದೆವು. ನಮ್ಮ ಸುತ್ತಲಿನ ಸಮಾಜದ ದುರ್ಬೀನ್ ನೋಟದಿಂದ ಪಾರಾಗಲು ಮತ್ತು ನನ್ನ ಸೆಕ್ಯುರಿಟಿಗಾಗಿ ನಾನು ಮದುವೆಗೆ ಪಟ್ಟು ಹಿಡಿದಾಗ, ಅವನಿಗೆ ಈಗಾಗಲೇ ಮದುವೆಯಾಗಿರುವ ಕಟು ಸತ್ಯ ಹೊರ ಬಿದ್ದಿತು. ವಿಷಯ ತಿಳಿದಾಗ, ನನಗೆ ನನ್ನ ಬಗ್ಗೆಯೇ ತಿರಸ್ಕಾರ ಉಂಟಾಯಿತು. ನಾನೇಕೆ ಇಷ್ಟು ಅವಿವೇಕಿಯಾದೆ ಎನಿಸಿತು. ಒಂದು ವಾರ ಒಂದೇ ಸಮ ಅಳುತ್ತಿದ್ದಾಗ ರಾಜುವೇ ಸಾಂತ್ವನಗೊಳಿಸಿದ್ದ. ಅವನಿಲ್ಲದೆ ನನಗೆ ಬದುಕೇ ಇಲ್ಲ ಎಂದಾಗಿತ್ತು. ಆದರೆ ಅವನ ಹೆಂಡತಿಯಾಗುವಂತಿಲ್ಲ. ದಿಕ್ಕು ತೋಚದೇ ಕಂಗಾಲಾದೆ.
ಕಡೆಗೆ ನಾವಿಬ್ಬರೂ ಹೀಗೆ ಯಥಾಸ್ಥಿತಿ ಮುಂದುವರಿಯುವುದೆಂದು ತೀರ್ಮಾನಿಸಿದೆವು. ನಮ್ಮ ಸ್ನೇಹ ಸಂಬಂಧ ಯಾವ ಕಟ್ಟು ಕಟ್ಟಳೆಗೂ ಒಡಂಬಡದೆ ಮುಂದುವರಿದಿದೆ. ಅವನ ಪ್ರೇಯಸಿಯಂತೆ , ಅವನು ಬಂದಾಗ ಸಂತೋಷವಾಗಿರುತ್ತಾ ,ಬಾರದಿದ್ದಾಗ ಕಾಯುತ್ತಾ, ಕಾಲ ಕಳೆಯುತ್ತಿರುವ ನನಗೆ , ಈಗ ಒಂದು ವಾರವಾದರೂ ನನ್ನನ್ನು ನೋಡಲು ಬಂದಿರದ ಅವನಿಗಾ,ಗಿ ಕಿಟಕಿಯ ತೆರೆ ಸರಿಸಿ ನೋಡುತ್ತಲೇ ಇದ್ದೀನಿ. ಅವನಿಗೆ ನನ್ನ ನೆನಪಾಗಿಲ್ಲವೆ?
ರಾಜನ ಆಗಮನಕ್ಕಾಗಿ ರಮ್ಯ ಕಿಟಕಿಯ ಸಂಧಿಯಿಂದ ಇಣುಕಿ ನೋಡುತ್ತಲೇ ಇದ್ದಾಳೆ.
ಎಂದು ಬರುವೆ ರಾಜ್ ? ನನ್ನ ಮನದ ಕಗ್ಗತ್ತಲ ಎಂದು ತೊಡೆಯುವೆ? ಅವಳು ಚಡಪಡಿಸುತ್ತಾ ಇದ್ದಳು.
ಬರುವನೋ ಬಾರನೋ ?