Jyothi Baliga

Drama Inspirational Others

4.0  

Jyothi Baliga

Drama Inspirational Others

ಒಲವು‌ ಗೆಲುವು

ಒಲವು‌ ಗೆಲುವು

10 mins
24.5K


"ಸಾಕು, ನಿನ್ನ ಭಾಷಣ ಸುಹಾಸ್ ..!! "

" ಇದು ನಿನ್ನ ಅಮ್ಮನ ಮನೆ ಪ್ರಿಯ, ಜೋರಾಗಿ ಕೂಗಾಡಿ ನನ್ನ ಮರ್ಯಾದೆ ತೆಗಿಬೇಡಾ ‌..‌."

"ನಾನೇನೂ ನೀನು ಸಾಕಿದ ನಾಯಿಯಲ್ಲ ಸುಹಾಸ್, ನೀನು ಹೇಳಿದ್ದನ್ನೆಲ್ಲಾ ಕೇಳೋಕೆ,,,, ನಿನ್ನ ಆಜ್ಞೆಯನ್ನು ಪಾಲಿಸೋಕೆ ...ನೀನು ಹೇಳಿದ್ದು ತಪ್ಪು ಎಂದು ನನಗೆ ಅನಿಸಿದರೆ ಎಲ್ಲಿದ್ದರೂ ನಾನು ಹೇಳೆ ಹೇಳ್ತೀನಿ"

"ಈವಾಗ ನಾನು ಏನು ಹೇಳಿದೆ ಪ್ರಿಯ ? ನೀನು ಇಷ್ಟೊಂದು ರಂಪ ಮಾಡೋದಕ್ಕೆ ..!!"

"ಮತ್ತೆ... ಇರೋ ಕೆಲಸ ಬಿಡು ಅಂದರೆ ಯಾರು ಕೇಳ್ತಾರೆ? ನಿನಗೇನೋ ಗೊತ್ತು ...? ಪ್ರತಿವರ್ಷ ಹಗಲುರಾತ್ರಿ ಓದಿ ರ‌್ಯಾಂಕ್ ಬಂದಿದ್ದೇನೆ , ಅಷ್ಟೊಂದು ಕಷ್ಟಪಟ್ಟಿದ್ದಕ್ಕೆ ನನಗೆ ಈ ಕೆಲಸ ಸಿಕ್ಕಿದೆ.ನೀನು ಹೇಳ್ತಿದ್ದಿಯಾಂತ ನಾನು ಕೆಲಸ ಬಿಡಬೇಕಾ ?"

"ನನ್ನ ಮಾತನ್ನು ಅರ್ಥ ಮಾಡಿಕೋ ಪ್ರಿಯ..!!"

" ಆಗಲ್ಲ... ಸುಹಾಸ್, ನೀನು ಏನ್ ಹೇಳಿದ್ರು ನಾನು ಕೇಳಲ್ಲ..."

" ಆರು ತಿಂಗಳ ಇಬ್ಬರೂ ‌ಮಕ್ಕಳನ್ನು ಮನೆ ಕೆಲಸದವರ ಹತ್ತಿರ ಬಿಟ್ಟು ನೀನು ಕೆಲಸಕ್ಕೆ ಹೋಗಬೇಕಾ ಪ್ರಿಯ...?"

" ಈ ಪ್ರಪಂಚದಲ್ಲಿ ಮಕ್ಕಳಾದ ಮೇಲೆ ಯಾರು ದುಡಿಯಲ್ವಾ ? ಕೆಲಸಕ್ಕೆ ಹೋಗಲ್ವಾ? ಕೂಲಿ ಕೆಲಸ ಮಾಡುವ ಹೆಣ್ಣು ಮಕ್ಕಳನ್ನು ನೋಡು ಸುಹಾಸ್...., ಬಾಣಂತಿಯ ಆರೈಕೆ ಇಲ್ಲದೆ ಇದ್ರೂ‌ ಇಪ್ಪತ್ತು ದಿನದಲ್ಲಿ ಎದ್ದು ಮನೆಯಲ್ಲಿ ಅಡುಗೆ ಕೆಲಸ ಮಾಡಿ,ಮಕ್ಕಳನ್ನು ಎತ್ತುಕೊಂಡು‌ ಕೂಲಿ‌ ಕೆಲಸಕ್ಕೆ ಹೋಗ್ತಾರೆ ಗೊತ್ತಾ ? "

"ಕಾಡಿನಲ್ಲಿ ಇರುವ ಗಿಡ ಮರಗಳಿಗೆ ಮಳೆಗಾಲದಲ್ಲಿ ಮಳೆ ಬಂದರೆ ಮಾತ್ರ ನೀರು. ಅವುಗಳಿಗೆ ಬೇಸಿಗೆಯಲ್ಲಿ ನೀರು‌ ಹಾಕದೆ ಇದ್ರೂ ಅವು ಜೀವಂತವಾಗಿರುತ್ತೆ ಜೊತೆಗೆ ‌ಹಣ್ಣು ಹಂಪಲು ಹೂವು ಕೊಡುತ್ತೆ.ಅದೇ ತರಹ ಕೂಲಿ ಕೆಲಸ ಮಾಡುವ ಹೆಣ್ಣು ಮಕ್ಕಳ ದೇಹ ಪ್ರವೃತ್ತಿ. ದುಡಿತದ ಜೀವನ ಶೈಲಿಯಿಂದ ‌ ಅವರ ಬದುಕಿಗೆ ಅವರು ಒಗ್ಗಿ ಹೋಗಿದ್ದಾರೆ‌ ಕಣೆ. ನಿನ್ನ ಹಾಗೆ ನಾಜೂಕಿನ ಜೀವನ ಅಲ್ಲ ಅವರದ್ದು. ಮನೆ, ಕೆಲಸ, ಮಗು ಅಂತ ನೀನು‌ ಒದ್ದಾಡೋದು ಬೇಡ ಕಣೆ. ಮಕ್ಕಳು ಸ್ಕೂಲಿಗೆ ಹೋಗುವಷ್ಟಾದರೂ ದೊಡ್ಡವರಾಗಲಿ‌, ಆಮೇಲೆ ನೀನು ಬೇಕಾದ್ರೆ ಕೆಲಸಕ್ಕೆ ಹೋಗು ಪ್ರಿಯ.... "

"......"

"ನೋಡು ಪ್ರಿಯ, ನನಗೆ ಬೇಕಾದಷ್ಟು ಆಸ್ತಿ‌ ಇದೆ. ನಮ್ಮ ಅಪ್ಪ ಅಮ್ಮನಿಗೆ ನಾನೊಬ್ಬನೇ ಮಗ .‌ಅವರಿಗೆ ಬೇಕಾದಷ್ಟನ್ನೂ ಇಟ್ಟುಕೊಂಡು ಉಳಿದ ಎಲ್ಲಾ ಆಸ್ತಿ‌ ಈಗಾಗಲೇ ನನಗೆ ಬರೆದುಕೊಟ್ಟಿದ್ದಾರೆ‌. ಜೊತೆಗೆ ನನಗೆ ಬರೋ ಸಂಬಳದಿಂದ ಆರಾಮವಾಗಿ ದಿನ ಹೋಗುತ್ತೆ. ನೀನು ದುಡಿದು ನನ್ನನಾಗಲಿ ಮಕ್ಕಳನ್ನು ಆಗಲಿ ಸಾಕಬೇಕಂತ ಏನೂ‌ ಇಲ್ಲ. ನೀನು ಕೆಲಸ ಬಿಟ್ರೆ ಒಂದು ಮನೆ ಉಳಿಸಿದ ಪುಣ್ಯ ಸಿಗುತ್ತೆ ಕಣೆ ನಿನಗೆ"

"ನೋಡು ಸುಹಾಸ್ , ನಾನು ಕೆಲಸ ಬಿಟ್ರೆ ಒಂದು ‌ಮನೆ ಉಳಿಸಿದ ಪುಣ್ಯ ಸಿಗುತ್ತೆ, ಅದೇ ಕೆಲಸಕ್ಕೆ ಹೋದ್ರೆ ಎರಡು ಮನೆ ಉಳಿಸಿದ ಪುಣ್ಯ ಸಿಗುತ್ತೆ ಗೊತ್ತಾ ? ಅಡುಗೆ ಮತ್ತೆ ಮನೆ ಕೆಲಸಕ್ಕೆ ಒಬ್ಬರನ್ನು, ಮಕ್ಕಳನ್ನು‌ ನೋಡಿಕೊಳ್ಳೋದಕ್ಕೆ ಒಬ್ಬರನ್ನು ಈಗಾಗಲೇ ಬುಕ್ ಮಾಡಿದ್ದೀನಿ ನಾನು. ಪಾಪಾ... ಅವರ ಜೀವನಕ್ಕೂ ಆಧಾರವಾಗುತ್ತೆ"

"ನಾನು ಕೆಲಸಕ್ಕೆ ಸೇರಿ ಇನ್ನೂ ಒಂದು ವರ್ಷ ಆಗಲಿಲ್ಲ, ನನಗೆ ಕೆಲಸದ ಅನುಭವ ಬೇಕೂಂತ ಮದುವೆ ಆಗಿ ಐದು ವರ್ಷವಾದರೂ ಮಕ್ಕಳು ಬೇಡಾಂತ ಹೇಳಿದೆ. ನಿನ್ನ ಸ್ವಾತಂತ್ರ್ಯಕ್ಕೆ ಅಡ್ಡಿ ಬರೋದು ಬೇಡಾಂತ ನೀನು ಹೇಳಿದ ಹಾಗೆ‌ ಐದು ವರ್ಷ ಸುಮ್ಮನಾದೆ. ಜನರೇಷನ್ ‌ಗ್ಯಾಪ್ ಇದೆ.‌ ಅತ್ತೆ ಮಾವನ ಜೊತೆಗೆ ‌ಮಾತಾಡಕ್ಕೆ, ಅವರ ಜೊತೆಯಲ್ಲಿ ಇರೋದಕ್ಕೆ ಆಗಲ್ಲ ಬೇರೆ ಮನೆ ಮಾಡೆಂದು ಹಠ ಮಾಡಿದೆ.ಅದಕ್ಕೂ ಸರಿಯೆಂದು ಒಪ್ಪಿ ಬೇರೆ ಮನೆ ಮಾಡಿದೆ. ನಿನ್ನ ಮೇಲೆ ಪ್ರಾಣ ಇಟ್ಕೊಂಡಿದ್ದೇನೆಂದು ಎಲ್ಲದಕ್ಕೂ ತಲೆ ಆಡಿಸಿಕೊಂಡು ಇರೋದಕ್ಕೆ ಆಗಲ್ಲ ಪ್ರಿಯ..."

"ಪ್ಲೀಸ್ ಹಠಮಾಡಬೇಡಾ, ಒಪ್ಪಿಕೋ ಸುಹಾಸ್.."

"ನನಗೆ ನಿನ್ನ ಹಣ ಬೇಕಾಗಿಲ್ಲ ಪ್ರಿಯ... ನನ್ನ ಹತ್ತಿರ ಹಣ ಕೇಳೋದಕ್ಕೆ ಸಂಕೋಚ ಆದರೆ, ಸ್ವಾಭಿಮಾನಕ್ಕೆ ಪೆಟ್ಟು ಬಿದ್ದ ಹಾಗೆ ಅನಿಸಿದರೆ ಮನೆಯಲ್ಲೇ ಇದ್ದು ಟ್ಯೂಷನ್ ಕೊಡು, ಅದೂ ಆಗಲ್ಲಾಂದ್ರೆ ನೀನು ಓದಿದೀಯಾ ...ಆನ್ ಲೈನ್ ಕೋಚಿಂಗ್ ಕ್ಲಾಸ್ ಮಾಡು . ನಾನು ಹೇಳುವಷ್ಟು ಹೇಳಿದ್ದೇನೆ, ಇನ್ನು ನಿನ್ನ ಇಷ್ಟ ಪ್ರಿಯ. "

"ಅಂದರೆ, ನಿನ್ನ ಪ್ರಕಾರ ನಾನು ಕೆಲಸಕ್ಕೆ ಹೋಗಬಾರದು ಅಲ್ವಾ ?"

" ಏನಾಗ್ತಿದೆ ಮಗಳೇ ? ಇಬ್ಬರೂ ಆಗ್ಲಿಂದ ಜಗಳ ಆಡ್ತಿದ್ದೀರಾ !, ನೀವಿಬ್ಬರೂ ಕೂಗಾಡ್ತಾ ಇರೋದು ಅಂಗಳದವರೆಗೆ ಕೇಳಿಸ್ತಾ ಇದೆ ಗೊತ್ತಾ? ನಿಮ್ಮ ಗಲಾಟೆಗೆ ಮಕ್ಕಳಿಬ್ಬರೂ ಎದ್ದಿದ್ದಾರೆ "

" ಈ ಕೆಲಸ ಸಿಗೋದಕ್ಕೆ ಎಷ್ಟೊಂದು ಕಷ್ಟ ಪಟ್ಟಿದ್ದೇನೆಂತ ನಿನಗೆ ಗೊತ್ತಲ್ವಾ ಮಮ್ಮಿ ? ಇವನು ಹೇಳ್ತಾನೆಂತ ನಾನು ಕೆಲಸ ಬಿಡೋದಕ್ಕೆ ಆಗಲ್ಲ ಮಮ್ಮಿ, ನೀನೆ ಅವನಿಗೆ ಹೇಳು. "

"ಅವತ್ತು,ನಿಮ್ಮ ಅಪ್ಪ ಅಮ್ಮನ ಜೊತೆಯಲ್ಲಿ ‌ಹೊಂದಿಕೊಳ್ಳೊಕೆ ಆಗಲ್ಲ, ಅವರಿಗೆ ಲೋಕ ಜ್ಞಾನ ಸ್ಪಲ್ಪನೂ ಇಲ್ಲಾಂತ ಅಮ್ಮನಿಗೆ ‌ಕೇಳಿಸುವ ಹಾಗೆ ಹೇಳಿದಳು‌ ಅತ್ತೆ. ಇವಳಿಗೆ ಅಮ್ಮನ ಬಗ್ಗೆ ಏನ್ ಗೊತ್ತಿದೆ ಅತ್ತೆ? ನಮ್ಮ ಅಮ್ಮ ಕಾಲೇಜಿನಲ್ಲಿ ಗೋಲ್ಡ್ ಮೆಡಲ್ ಪಡೆದು ಇಪ್ಪತ್ತೈದು ವರ್ಷ ಬ್ಯಾಂಕ್ ನಲ್ಲಿ ಸೇವೆ ಸಲ್ಲಿಸಿದ್ದಾರೆ. ನನಗೆ ಆಕ್ಸಿಡೆಂಟ್ ಆದಾಗ ನೋಡಕೊಳ್ಳಿಕ್ಕೆ ಕೆಲಸದವರು ಬೇಡಾಂತ ಹಿಂದೆ ಮುಂದೆ ನೋಡದೆ ಕೆಲಸಕ್ಕೆ ಎರಡು ತಿಂಗಳು ರಜೆ ಹಾಕಿದ್ರು. ಆಮೇಲೆ ನನಗೆ ಕಷ್ಟ ಆಗುತ್ತೆ ಎಂದು ವ್ಯಾಲಿಂಟರಿ ರಿಟಾಯರ್ ಮೆಂಟ್ ಪಡೆದ್ರು ಗೊತ್ತಾ? ಅಪ್ಪಾ ಯಾವತ್ತೂ ಅಮ್ಮನಿಗೆ ಇದೇ ತರಹ ಬಟ್ಟೆ ಹಾಕಿಕೋ ಎಂದು ಒತ್ತಾಯ ಮಾಡಲಿಲ್ಲ, ಅಮ್ಮ ಅವರಿಗಿಷ್ಟಾಂತ ಸೀರೆ ಉಟ್ಟುಕೊಂಡರೆ ಅಂತವರಿಗೆ ಹಳ್ಳಿಗುಗ್ಗು ಎಂದು ಹೇಳಿದಳು‌. ನನ್ನ ಅಪ್ಪ ಅಮ್ಮನಿಗೆ ಅಡುಗೆ ಮಾಡಿ ಕೊಡೊದಕ್ಕೆ ಆಗಲ್ಲ ಎಂದು ಹೇಳಿದಾಗ್ಲೂ ನಾನು ಸುಮ್ಮನಿದ್ದೆ ಅತ್ತೆ. ಇವಾಗ ಮಕ್ಕಳಿಗೂ ನೋಡಿಕೊಳ್ಳಕ್ಕೆ ಆಗಲ್ಲ, ಕೆಲಸದವರನ್ನು ಇಡ್ತೇನೆಂದು ಹೇಳಿದ್ರೆ ನಾನು ಹೇಗೆ ಸುಮ್ಮನಿರಲಿ ?

"ನಾನು ನಿಮ್ಮಿಬ್ಬರ ಜಗಳ ಆಗದಿಂದ ಕೇಳ್ತಾನೇ ಇದ್ದೇನೆ ಪ್ರಿಯ, ಸುಹಾಸ್ ಹೇಳಿದ್ರಲ್ಲಿ ತಪ್ಪೇನಿದೆ ? ನಿನ್ನ ಮೇಲೆ, ಮಕ್ಕಳ ಮೇಲೆ ಪ್ರೀತಿಯಿಂದ ತಾನೆ ಅವನು ಹೇಳಿದ್ದು"

"ನಿನಗೂ ಅವನು ಹೇಳಿದ್ದೇ ಸರಿ ಅನಿಸುತ್ತಾ ಮಮ್ಮಿ? "

"ಮಮ್ಮಿಗೆ ಮಾತ್ರ ಅಲ್ಲ ಪ್ರಿಯಾ.... ನನಗೂ, ಡ್ಯಾಡಿಗೂ ಸುಹಾಸ್ ಹೇಳಿದ್ದರಲ್ಲಿ ತಪ್ಪಿಲ್ಲ ಅನ್ನೋದೆ ಭಾವನೆ "

"ನಾನೇ ಯಾಕೆ ಕೆಲಸ ಬಿಡಬೇಕು ? ಅವನಿಗೂ ಮಕ್ಕಳು ಅಲ್ವಾ ? ಅವನಿಗೆ ಕೆಲಸ ಬಿಡಲಿಕ್ಕೆ ಹೇಳು ಡ್ಯಾಡಿ"

" ಆರು ತಿಂಗಳ ಮಗುನಾ ಒಂದು ಗಂಟೆ ಎರಡು ಗಂಟೆ ನೋಡಿಕೊಳ್ಳಬಹುದು ಪ್ರಿಯ, ಆದರೆ ಇಡೀ ದಿನ ನೋಡಿಕೊಳ್ಳೋದಕ್ಕೆ ಆಗುತ್ತಾ ನೀವೆ ಹೇಳಿ ಅತ್ತೆ? . ಹೆಣ್ಣಿಗೆ ಎಷ್ಟೇ ಸಿಟ್ಟು, ಸುಸ್ತು ಇದ್ದರೂ ತನ್ನ ಮಗುವಿನ ಅಳು ಕೇಳಿ ಎಲ್ಲಾ ಮರಿಯುವ ಶಕ್ತಿಯನ್ನು ದೇವರು ಅವಳಿಗೆ ಕೊಟ್ಟಿದ್ದಾನೆ. ಒಬ್ಬ ತಾಯಿ ತನ್ನ ಮಗುವಿನ ಮೇಲೆ ತೋರಿಸುವಷ್ಟು ಪ್ರೀತಿ, ಮಮತೆ ತಂದೆಯಾದವನಿಗೆ ತೋರಿಸುವುದಕ್ಕೆ ಆಗಲ್ಲ . ಅದು ಅವನ ದೌರ್ಬಲ್ಯನೋ ಇಲ್ಲಾ ದೇವರ ಸೃಷ್ಟಿನೇ ಹೀಗಿದಿಯೋ‌ ಗೊತ್ತಿಲ್ಲ ನನಗೆ.‌ ಅಮ್ಮ ಆದರೂ ಮನೆಯಲ್ಲಿ ಇದ್ದಿದ್ದರೆ ನಾನೇ ಕೆಲಸ ಬಿಟ್ಟು ಮನೆಯಲ್ಲಿ ಇರ್ತಿದ್ದೆ ಅತ್ತೆ‌. ಗಂಡಸು‌ ಮನೆಯಲ್ಲಿದ್ದು ಕೆಟ್ಟ ಅನ್ನೋ ಬಿರುದು ಸಿಕ್ಕಿದ್ರೂ‌ ತೊಂದರೆ ಇರಲಿಲ್ಲ ನನಗೆ, ನಮ್ಮ ಮಕ್ಕಳ ಭವಿಷ್ಯ ‌ಮುಖ್ಯ "

"ನೋ... ನಿನ್ನ ಅಪ್ಪ ಅಮ್ಮ ನಮ್ಮನೇಲಿ‌ ಇರೋದು‌ ನನಗಿಷ್ಟವಿಲ್ಲ ಸುಹಾಸ್ , ಅದು ಬಿಟ್ಟು ಬೇರೆ ಏನಾದರೂ ಹೇಳು."

"ಆಗಲ್ಲ ಪ್ರಿಯ....ನೀನು ಎಷ್ಟು ಮುಖ್ಯನೋ, ಮಕ್ಕಳು ಅಷ್ಟೇ ಮುಖ್ಯ ನನಗೆ. ಒಂದೋ ಅಪ್ಪ ಅಮ್ಮ ಮನೆಯಲ್ಲಿ ಇರಬೇಕು ಇಲ್ಲ ಮಕ್ಕಳು ದೊಡ್ಡವರಾಗುವವರೆಗೆ ನೀನು ಮನೆಯಲ್ಲಿದ್ದುಕೊಂಡು ಮಕ್ಕಳನ್ನು ನೋಡಿಕೊಳ್ಳಬೇಕು".

"ಓ....! ಹಾಗಾದರೆ ಎಲ್ಲಾ ಮೊದಲೇ ಸೇರಿಕೊಂಡು ಪ್ಲಾನ್ ಮಾಡಿಕೊಂಡೆ ‌ನನ್ನ ಹತ್ತಿರ ಯುದ್ದಕ್ಕೆ ಬಂದಿದ್ದೀರಾ ಅಲ್ವಾ ? ಸರಿ ಹಾಗಾದ್ರೆ ನನಗೂ ಮಕ್ಕಳನ್ನು ನೋಡಿ ಕೊಳ್ಳೋಕೆ ಬರುತ್ತಾ ಇಲ್ವೋ ನೋಡೋಣ ? ನಿಮ್ಮಿಬ್ಬರ ಹಂಗು ಬೇಕಿಲ್ಲ ನನಗೆ‌. ನಾನು ದುಡಿತಿದ್ದೇನೆ , ನನ್ನ ಹಣದಿಂದ ಮಕ್ಕಳ ಭವಿಷ್ಯವನ್ನು ರೂಪಿಸುತ್ತೇನೆ. ನನ್ನ ಫ್ರೆಂಡ್ ಅವಳ ಮನೆಯಲ್ಲಿ ನಿಲ್ಲೋದಕ್ಕೆ ಮೊದಲಿನಿಂದಲೂ ಒತ್ತಾಯ ಮಾಡ್ತಾ ಇದ್ದಳು.ಕೆಲಸಕ್ಕೆ ಹೋಗ್ತಾನೇ ಮಕ್ಕಳನ್ನು ನೋಡಿಕೊಂಡು ಅವಳ ಮನೆಯಲ್ಲಿ ಇರ್ತೇನೆ. ಈ ಚಾಲೆಂಜ್ ನಾನೇ ಗೆಲ್ಲೋದು‌ ಸುಹಾಸ್ ... ಗುಡ್ ಬಾಯ್‌"

"ನೋಡಿದ್ರಾ ಅತ್ತೆ ? ಅವಳನ್ನು ಸರಿ ಮಾಡೋದು‌ ಅಷ್ಟೊಂದು ಸುಲಭವಲ್ಲ ಎಂದು ಮೊದಲೇ ‌ಹೇಳಿದ್ದೆ ಅಲ್ವಾ ನಿಮಗೆ? ಇವಾಗ ನೋಡಿ... ‌ನನ್ನ ಮಕ್ಕಳನ್ನು ನನ್ನಿಂದ ದೂರ ಮಾಡಿ‌ ಹೊರಟೋದಳು."

"ಕಣ್ಣೀರು ಹಾಕಬೇಡಾ ಸುಹಾಸ್...ಒಂದು ಹುಡುಗಿ ಧೈರ್ಯದಿಂದ ಬದುಕಬಹುದು.‌ಮಗು ಅತ್ತಾಗ, ಹುಷಾರು ತಪ್ಪಿದಾಗ ಏನ್ ಮಾಡಬೇಕೆಂದು ಒಬ್ಬ ತಾಯಿಗೆ ಅರ್ಥ ಆದರೂ ಯಾವುದೇ ನಿರ್ಧಾರ ತೆಗೆದುಕೊಳ್ಳೋದಕ್ಕೆ ತನ್ನ ಗಂಡನ ಸಪೋರ್ಟ್ ಬೇಕೆ ಬೇಕು‌ ಕಣೋ.. ಬರೀ ಹಾಲು ‌ಕುಡಿಸಿದ್ದು ಬಿಟ್ರೆ ಇವಳಂತೂ ಒಂದಿನ ಮಕ್ಕಳನ್ನು ಎತ್ತಿ ಮುದ್ದಾಡಲಿಲ್ಲ. ಅವಳಿಗೆ ಅಷ್ಟು ಅಹಂಕಾರ ಇರಬೇಕಾದರೆ ಅವಳ ಅಮ್ಮ ನಾನು, ನನಗೆ ಎಷ್ಟು ಅಹಂಕಾರ ಇರಬೇಕು ಹೇಳು? ಮೂರು ತಿಂಗಳೊಳಗೆ ಅವಳು ನಿನ್ನ ಮನೆಯ ಮುಂದೆ ಇರ್ತಾಳೆ ನೋಡು."

"ಅವಳ ಸೋಲು ನನಗೆ ಬೇಕಿಲ್ಲ ಅತ್ತೆ.‌ ಅವಳ‌ ಪ್ರೀತಿಗಾಗಿ ನಾನು ಹಾತೊರೆಯುತ್ತಿದ್ದೇನೆ ಅಷ್ಟೇ "

" ಅಪಘಾತದಲ್ಲಿ ಗಂಡನನ್ನು ಕಳೆದುಕೊಂಡು‌ ಇಲ್ಲಾ ಬೇರೆ ಸಂಸಾರ ಮಾಡಿ ಹೆಂಡ್ತಿನ ಬಿಟ್ಟು ಹೋದ ಗಂಡನಿಂದ ವಿಚ್ಛೇದನ ಪಡೆದುಕೊಂಡ ಎಷ್ಟೋ ಜನ ಹೆಣ್ಣುಮಕ್ಕಳು ತಮ್ಮ ಮಕ್ಕಳನ್ನು ತುಂಬಾ ಚೆನ್ನಾಗಿ ಸಾಕ್ತಾರೆ ಕಣೋ. ಇವಳಿಗೆ 'ನಾನು' ಎನ್ನುವ ಅಹಂಕಾರ ತಲೆಗೆ ಏರಿದೆ. ಇಳಿದ ಮೇಲೆ ಎಲ್ಲಾ ಸರಿಯಾಗುತ್ತೆ ಚಿಂತೆ ಬಿಡು"


"ಪವಿ...., ನಮ್ಮ ಮನೆಯಲ್ಲಿ ಯಾವಾಗ ಬೇಕಾದರೂ ಬಂದು‌ ನಿಲ್ಲು ಎಂದು ನೀನು ಹೇಳಿದ್ದೆ ಅಲ್ವಾ ? ಅದಕ್ಕೆ ಸುಹಾಸ್ ನನ್ನು ಬಿಟ್ಟು ಬಂದೆ‌ ಕಣೆ ನಾನು."

"ಸುಹಾಸ್ ನನ್ನು ಬಿಟ್ಟು ಬಂದದ್ದು ಬೇಜಾರದ್ರೂ ನೀನು ಇಲ್ಲಿರೋದಕ್ಕೆ ಬಂದದ್ದು...ತುಂಬಾ ಖುಷಿಯಾಯಿತು‌ ಕಣೆ ಪ್ರಿಯ !"

"ನಡಿ ನಿನ್ನ ರೂಮ್ ತೋರಿಸುತ್ತೇನೆ"

"ಇಬ್ಬರೂ ಮಕ್ಕಳನ್ನು ಹೇಗೆ ನೋಡ್ಕೊಳ್ತಿ ಕಣೆ ನೀನು ? ಕೆಲಸಕ್ಕೆ ಹೋಗಲ್ವಾ?"

"ಕೆಲಸಕ್ಕೆ ಹೋಗದೇ ಇರ್ತಿದ್ರೆ ಇಲ್ಲಿಗ್ಯಾಕೆ ಬರ್ತಿದ್ದೆ ಪವಿ, ಸುಹಾಸ್ ನನ್ನ ರಾಣಿ ತರಹ ನೋಡಿಕೊಳ್ತಾ ಇದ್ದ. ಅವನಿಗೆ ಹೆಣ್ಣು ಮಕ್ಕಳು ಅಂದರೆ ತಾತ್ಸರ, ಅವನಿಗೆ ಬುದ್ದಿ ಕಲಿಸಬೇಕೂಂತ ಮಕ್ಕಳನ್ನು ಕರೆದುಕೊಂಡು ಬಂದೆ ಕಣೆ"

"ಹಾಗಾದರೆ ಮಕ್ಕಳನ್ನು ಯಾರು ನೋಡಿಕೊಳ್ತಾರೆ ಪ್ರಿಯ?"

"ಅಡುಗೆ ಮಾಡಿ ಮಕ್ಕಳನ್ನು ನೋಡಿಕೊಳ್ಳುವ ಕೆಲಸಕ್ಕೆ ಜನ ಮಾಡಿದ್ದೀನಿ ಕಣೆ, ನಾಳೆಯಿಂದ ಬರ್ತಾರೆ. ನಿನಗೆ ಅಡುಗೆ ಮಾಡೋ ತಾಪತ್ರಯ ಇಲ್ಲ ಬಿಡು ಇನ್ಮೇಲೆ...."

"ವಾವ್ ! ದಟ್ಸ್ ಗ್ರೇಟ್, ಆದರೆ ನನ್ನ ಹತ್ತಿರ ಅವರ ಸಂಬಳಕ್ಕೆ ಹಣ ಕೇಳಬೇಡಾ..."

"ನೀನು‌ ನನಗೆ‌ ಇಲ್ಲಿರೋದಕ್ಕೆ ಸ್ಥಳ ಕೊಟ್ಟಿದ್ದೀಯಾ ಅದೇ ಸಾಕು‌ ಪವಿ. ನೀನು ಹಣದ ಸಹಾಯ ಮಾಡೋದು ಬೇಡಾ. ಅವರು ಬೆಳಿಗ್ಗೆ ಎಂಟು ಗಂಟೆಗೆ ಬಂದರೆ ಸಂಜೆ ಆರು ಗಂಟೆಗೆ ಹೋಗ್ತಾರೆ ಕಣೆ".


" ಎರಡು ದಿನದೊಳಗೆ ನನ್ನ ಒಂದೇ ಒಂದು ಬಟ್ಟೆ ಸರಿಯಾಗಿ ಕೈಗೆ ಸಿಗ್ತಾ ಇಲ್ಲ ಥೂ... ನನ್ನ ಬಟ್ಟೆ ಮುಟ್ಟೋದು ಬೇಡಾಂತ ನಿನ್ನ ಕೆಲಸದವರಿಗೆ ಹೇಳು ಪ್ರಿಯ".

"ಯಾವ ಕಲರ್ ಬಟ್ಟೆ ಹೇಳು ಪವಿ, ನಾನೇ ಹುಡುಕಿ‌ಕೊಡ್ತೇನೆ ".

"ನೀನು ಹುಡುಕೋದು ಬೇಡಾ ಬಿಡು ತಾಯಿ,

ಈಗಾಗಲೇ ತುಂಬಾ ಲೇಟ್ ಆಯಿತು. ಸಂಜೆ ಬರುವ ಹೊತ್ತಿಗೆ ಆ ನಿನ್ನ ಕೆಲಸದವರಿಗೆ ಹುಡುಕಿಡೋದಕ್ಕೆ ಹೇಳು ಪ್ರಿಯ".

" ರಾಣಿ, ಪವಿ ಅಕ್ಕನ ಬಟ್ಟೆ ಕಾಣಿಸ್ತಾ ಇಲ್ವಂತೆ, ಸಂಜೆ ಬರುವ ಹೊತ್ತಿಗೆ ಹುಡುಕಿಡು.ಮಕ್ಕಳು ಜೋಪಾನ, ಬೆಳಿಗ್ಗೆ ಅವರಿಗೆ ಹಾಲು ಕುಡಿಸಿ ಮಲಗಿಸಿದ್ದೇನೆ. ಹೊತ್ತು ಹೊತ್ತಿಗೆ ಬೇಬಿ‌ ಪುಡ್ ತಿನ್ನಿಸಿ ಸ್ನಾನ ಮಾಡಿಸಿ ರಾತ್ರಿ ಅಡುಗೆಯೆಲ್ಲಾ ಮಾಡಿಡು ಗೊತ್ತಾಯ್ತಾ ?"


"ದಿನಾ ಬೆಳಿಗ್ಗೆ ನಿನ್ನ ಕೆಲಸದವರ ಎಡವಟ್ಟು ನೋಡಿ ಸಾಕಾದರೆ ರಾತ್ರಿ ಹೊತ್ತು ನಿನ್ನ ಮಕ್ಕಳ ಕಿರುಚಾಟದಿಂದ ನಿದ್ದೆ ಇಲ್ಲದೆ ಸಾಕಾಗಿದೆ ಪ್ರಿಯ. ಇನ್ನು ‌ನನ್ನಿಂದ ತಡೆದುಕೊಳ್ಳಲು ಆಗಲ್ಲ, ಬರುವ ತಿಂಗಳೊಳಗೆ ನೀನು ಬೇರೆ ಮನೆ ಮಾಡು ಪ್ರಿಯ..."

"ನೀನಂದ್ರೆ ನನಗೆ ಪ್ರಾಣ, ನನ್ನ ಜೊತೆಯಲ್ಲಿ ಜೀವನ ಪರ್ಯಂತ ನೀನಿರಬೇಕೂಂತ ಆಸೆ ಕಣೆ ಎಂದು ಹೇಳ್ತಿದ್ದು ನೀನೆ ಅಲ್ವಾ ಪವಿ? ಈಗ ನೋಡಿದರೆ ಬೇರೆ ಮನೆ ಮಾಡೂಂತ ಹೇಳ್ತಿದ್ದೀಯಾ ? ಇದೇನಾ ನಿನಗೆ ನನ್ನ ಮೇಲಿನ ಪ್ರೀತಿ?."

"ನಿನ್ನ ಮೇಲಿನ ಪ್ರೀತಿ ಯಾವತ್ತೂ ಕಡಿಮೆ ಆಗಲ್ಲ ಪ್ರಿಯ..., ಹಾಗಂತ‌ ನಿನ್ನಿಂದ ನನಗೆ ತೊಂದರೆ ಆದರೆ ಸಹಿಸಿಕೊಳ್ಳೋದಕ್ಕೆ ನಾನು ಸುಹಾಸ್ ಅಲ್ಲಾ!"

"ನನ್ನ ಪರ್ಸ್ ನಲ್ ವಿಷಯಕ್ಕೆ ಕೈ ಹಾಕಬೇಡಾ ಪವಿ, ಈಗೇನೂ ಒಂದು ವಾರದೊಳಗೆ ಬೇರೆ ಮಾಡಬೇಕು ಅಲ್ವಾ ? ಸರಿ, ಬೇರೆ ಮನೆ ಮಾಡಿ ಹೋಗ್ತೀನಿ‌ ಪವಿ.."


"ಪ್ರಿಯಾ ಯಾಕೆ ಒಂದು ತರಹ ಇದ್ದೀಯಾ ?"

"ಯಾಕೋ ಎದೆ ತುಂಬಾ ನೋಯ್ತಾ ಇದೆ ಕಣೆ,

ಹಾಲು ತುಂಬಿದ ಹಾಗೆ ಆಗಿ ರವಕೆಯೆಲ್ಲಾ ಒದ್ದೆ ಆಗ್ತಿದೆ ಅರ್ಪಿತ".

"ಮಗುವಿಗೆ ಎಲ್ಲೋ ಹಸಿವಾಗಿರಬೇಕು ಪ್ರಿಯಾ; ಅದಕ್ಕೆ ನಿನ್ನ ನೆನಸಿಕೊಳ್ತಾ ಇವೆ"

"ಕೆಲಸದವರ ಹತ್ತಿರ ಎಲ್ಲಾ ಕೊಟ್ಟು ಬಂದಿದ್ದೇನೆ ಅರ್ಪಿತ, ಟೈಮ್ ಟೈಮ್ ಗೆ ಸರಿಯಾಗಿ ತಿನ್ನಿಸೂಂತ ಕೂಡಾ ಹೇಳಿದ್ದೇನೆ."

"ನಿನಗಂತೂ ಹೋಗೋ ಹಾಗೇ ಇಲ್ಲ. ಪರೀಕ್ಷೆ ಹತ್ತಿರ ಬರ್ತಾ ಇದೆಯೆಂದು ಯಾರಿಗೂ ರಜೆ ಕೊಡ್ತಾ ಇಲ್ಲ ಮೇಡಂ, ನಿನ್ನ ಗಂಡನ ಹತ್ತಿರನಾದ್ರೂ ಒಮ್ಮೆ ಮನೆಗೆ ಹೋಗಿ ಮಕ್ಕಳನ್ನು ನೋಡಿ ಬರೋದಕ್ಕೆ ಹೇಳು ಪ್ರಿಯ"

"ನಾನು ನನ್ನ ಗಂಡನ ಜೊತೆಯಲ್ಲಿಲ್ಲ ಅರ್ಪಿತ , ನನಗೆ ಕೆಲಸಕ್ಕೆ ಹೋಗುವುದು ಬೇಡಾಂತ ಹೇಳಿದ ಅದಕ್ಕೆ ಅವನನ್ನು ಬಿಟ್ಟು ಬಂದೆ ಕಣೆ" 

" ನಿನ್ನ ಫ್ರೆಂಡ್ ಅಂತ ಒಂದು ಮಾತು ಹೇಳ್ತೀನಿ ಪ್ರಿಯ, ನಿನ್ನ ಗಂಡ ಸುಹಾಸ್ ಹೇಳಿದ ಹಾಗೆ ಕೆಲಸಕ್ಕೆ ಹೋಗಬೇಡಾಂತ ನನ್ನ ಗಂಡ ಅವಿನಾಶ್ ಹೇಳಿದ್ರೆ ನಾನು ಪುಣ್ಯವಂತೆ ಅಂದುಕ್ಕೊಳ್ತಾ ಇದ್ದೆ. ಅವಿನಾಶ್ ಗೂ ನಾನು ಕೆಲಸಕ್ಕೆ ಹೋಗೋದು, ಶಾಲೆ ಮನೆ ಅಂತ ಒದ್ದಾಡೋದು ಇಷ್ಟ ಇಲ್ಲ ಕಣೆ. ನಾನು ಮನೆಯಲ್ಲಿ ರಾಣಿ ತರಹ ಇರಬೇಕು ಅಂತಾನೇ ಅವರ ಆಸೆ.‌ ನಮ್ಮ ಪರಿಸ್ಥಿತಿಗೆ ಅವರು ಕೆಲಸಕ್ಕೆ ಹೋಗಬೇಡಾ ಅಂದ್ರೂ ನಾನು ಕೆಲಸಕ್ಕೆ ಬರ್ತಾ ಇದ್ದೆ. ಅವಿನಾಶ್ ಸೇಲ್ಸ್ ರೆಪ್ರೆಸೆಂಟೇಟಿವ್ಸ್ ಆಗಿ ಕೆಲಸದಲ್ಲಿ ಇದ್ದಾರೆ, ಅವಿನಾಶ್ ಸೇಲ್ ಮಾಡಿದ ಆಧಾರದಲ್ಲಿ ಅವರಿಗೆ ಸಂಬಳ ಬರುತ್ತೆ. ಕೆಲವೊಮ್ಮೆ ಏನೂ ಸೇಲ್ ಆಗಲ್ಲ ಆಗೆಲ್ಲಾ ನನ್ನ ಸಂಬಳದಿಂದಾನೇ ಮನೆ ಓಡುತ್ತೆ. ಮನೆಯಲ್ಲಿ ಅತ್ತೆ ಮಾವ, ನನ್ನ ಇಬ್ಬರೂ ಮಕ್ಕಳು ನಾನು ಅವಿನಾಶ್ ನಮ್ಮ ಜೀವನ ನನ್ನ ದುಡಿಮೆಯಿಂದಾನೇ ನಡಿಬೇಕು ಪ್ರಿಯ. ಹಾಗಂತ ಅವಿನಾಶ್ ಗೆ ಕೆಟ್ಟ ಅಭ್ಯಾಸ ಯಾವುದು ಇಲ್ಲ. ಮಾವನಿಗೆ ತಿಂಗಳಿಗೆ ಐದು ಸಾವಿರ ರೂಪಾಯಿ ಹೆಲ್ತ್ ಪ್ರಾಬ್ಲಂ ಅಂತ ತೆಗಿದಿಡಬೇಕು. ಪಾಪ... ಅವರಿಗಾಗಿ ನಾನು ಖರ್ಚು ಮಾಡ್ತೇನೆ ಅಂತ ಅತ್ತೆ ಮಕ್ಕಳಿಬ್ಬರನ್ನ ನೋಡಿಕೊಳ್ಳೋದು ಅಲ್ಲದೇ ನಾನು ಮನೆಗೆ ತಲುಪ ಹೊತ್ತಿಗೆ ಆದಷ್ಟೂ ಅಡುಗೆ ಮಾಡಿಡುತ್ತಾರೆ. ನಮ್ಮಂತವರಿಗೆ ಕೆಲಸ ಶೋಕಿಗೆ ಅಲ್ಲ ಕಣೆ... ಅಗತ್ಯ, ಅನಿವಾರ್ಯತೆ ಪ್ರಿಯ. ನೀನು ಆ ಪವಿ ಮಾತು ಕೇಳಿ ಮನೆ ಬಿಟ್ಟು ಬಂದಿದ್ದಿಯಾಂತ ಗೊತ್ತು ಪ್ರಿಯ. ಅವಳಿಗೆ ಸಂಸಾರದ ಸುಖ ಮಾತ್ರ ಬೇಕು ಆದರೆ ಜವಾಬ್ದಾರಿ ಬೇಕಾಗಿಲ್ಲ. ಅದಕ್ಕೆಂದೇ ಇನ್ನೂ ಮದುವೆ ಆಗದೇ ಇದ್ದು ಮದುವೆ ಆಗಿರುವ ಗಂಡುಗಳ ಹಿಂದೆ ಬಿದ್ದಿದ್ದಾಳೆ. ಸುಹಾಸ್ ಹಿಂದೆ ಕೂಡಾ ಬಿದ್ದಿದ್ದಳು, ಅವನು ಪ್ರಿಯಾ ಫ್ರೆಂಡ್ ಅಂತ ಸುಮ್ಮನೆ ಬಿಡ್ತಾ ಇದ್ದೇನೆ ಪವಿತ್ರ. ಇಲ್ಲಾಂದ್ರೆ ನಿನ್ನ ಜನ್ಮ ಜಾಲಾಡಿಸಿ ಬಿಡ್ತಾ ಇದ್ದೆ ಎಂದು ಎಲ್ಲರ ಎದುರಿಗೆ ಹೇಳಿದ್ದ. ಅದೇ ಮಾತನ್ನು ಮನಸ್ಸಿನಲ್ಲಿಟ್ಟುಕೊಂಡು ನಿನ್ನ ಸಂಸಾರ ಹಾಳು ಮಾಡಬೇಕೂಂತ ಆರ್ಥಿಕ ಸಬಲತೆ, ಸ್ತ್ರೀ ಸ್ವಾತಂತ್ರ್ಯ ಅಂತ ನಿನ್ನ ತಲೆಯಲ್ಲಿ ತುಂಬಿದ್ದಾಳೆ. ನೀನು ಅವಳ ಮಾತು ಸರಿಯೆಂದು ಕುಣಿದು ಮನೆಯಿಂದ ಹೊರಗೆ ಬಂದೆ, ಅವಳು ಸೇಡು ತೀರಿಸಿಕೊಂಡೆ ಎಂದು ಎಲ್ಲರ ಹತ್ತಿರ ಹೇಳ್ತಾ ಇದ್ದಾಳೆ. ಇನ್ನಾದರೂ ನಿನ್ನ ಸಂಸಾರ ಉಳಿಸಿಕೋ.. ಮಕ್ಕಳಿಗೆ ಅಪ್ಪ, ಅಜ್ಜಿ ತಾತನ ಪ್ರೀತಿಯಿಂದ ದೂರ ಮಾಡಬೇಡಾ.ನಿನ್ನ ಕ್ಲಾಸ್ ನಾನು ಅಟೆಂಡ್ ಮಾಡ್ತೀನಿ, ಆಫೀಸ್ ನಲ್ಲಿ ಹೇಳಿ ಲಿವ್ ಲೆಟರ್ ಗೆ ಸಹಿಮಾಡಿ ಮನೆಗೆ ಹೋಗು‌ ಪ್ರಿಯ."

"ನಿಜ ಹೇಳು ಅರ್ಪಿ....ಪವಿ ಬಗ್ಗೆ ನೀನು ಹೇಳ್ತಾ ಇರೋದು‌ ನಿಜಾನಾ ? ನಿನಗೆ ಹೇಗೆ ಗೊತ್ತು‌ ಇದೆಲ್ಲಾ ? ಸುಹಾಸ್ ನಿನ್ನ ಹತ್ತಿರನೂ‌ ಬಂದು ಸಿಂಪಥಿ ತೋರಿಸುವ ಹಾಗೆ ನಾಟಕ ಮಾಡಿದ್ದಾನ ?"

"ನಿನ್ನ ದೇವತೆ ತರಹ ಪೂಜಿಸುವ ಗಂಡನ ಮೇಲೆ ನಂಬಿಕೆಯಿಲ್ಲ ನಿನಗೆ, ಬೆನ್ನಿಗೆ ಚೂರಿ ಹಾಕ್ತಾ ಇರೋ ಪವಿ ಮೇಲೆ ವಿಶ್ವಾಸ...ಛೇ, ನೀನು ಸರಿಯಾಗಲ್ಲ ಪ್ರಿಯ. ನಿನಗೆ ಸಾಕ್ಷಿ ತಾನೆ ಬೇಕು. ನೋಡಿಲ್ಲಿ... ನನ್ನದು ನಿನ್ನ ಹಾಗೆ ಆ್ಯಪಲ್ ಮೊಬೈಲ್ ಅಲ್ಲ, ಆದ್ರೂ ಅರ್ಥ ಮಾಡಿಕೊಳ್ಳುವವರಿಗೆ ಇಷ್ಟು ಸಾಕು ಅಂದುಕೊಳ್ಳುತ್ತೇನೆ, ಅವಳು ಅವತ್ತು‌ ಸುಜಾತ ಮಿಸ್ ಹತ್ತಿರ ಹೇಳ್ತಾ ಇದ್ದದನ್ನು ಕೇಳಿ ನಾನು ವಿಡಿಯೋ ಮಾಡಿಕೊಂಡೆ, ಸರಿಯಾಗಿ ನೋಡು...."

"ಥ್ಯಾಂಕ್ಸ್ ಅರ್ಪಿತ, ಪವಿ ನಿಜವಾದ ಬಣ್ಣ ತೋರಿಸಿದಕ್ಕೆ, ಆದರೂ ಒಂದೇ ಒಂದು ಪ್ರಶ್ನೆ ಕೇಳ್ತೀನಿ ಇದಕ್ಕೂ ಉತ್ತರ ಕೊಡ್ತಿಯಾ? ಅತ್ತೆ ಮಾವನ ಜೊತೆಯಲ್ಲಿ ಹೇಗೆ ಇರ್ತಿಯಾ ನೀನು ಅರ್ಪಿತ ? "

"ನಾನು ಅಪ್ಪ ಅಮ್ಮನ‌ ಜೊತೆಯಲ್ಲಿ ಇರ್ತಾ ಇರಲಿಲ್ವಾ ? ಹಾಗೆ ಇದ್ದೇನೆ‌ ಕಣೆ.ನಮ್ಮ ಅಮ್ಮನಿಗೂ ನಮಗೂ ಎಷ್ಟೋ ಸಲ ಎಷ್ಟೋ ವಿಷಯಕ್ಕೆ ಜಗಳ ಆಗಲ್ವಾ? ನಮಗೂ ಅವರಿಗೂ ಹೊಂದಾಣಿಕೆ ಆಗುತ್ತಾ ? ಇಲ್ವಲ್ಲ... ಆದರೂ‌ ಅಪ್ಪ‌ ಅಮ್ಮನ ಜೊತೆಯಲ್ಲಿ ‌ಇರಲ್ವಾ ? ಅದೇ ತರಹ ಅತ್ತೆ ಮಾವನ ಜೊತೆಯಲ್ಲಿ ಇರೋದು ಕಣೆ‌. ನಾವು‌ ಇಷ್ಟಪಡೋ ಗಂಡ ಅಂದರೆ ಅವರ ಪ್ರಾಣ ಅಲ್ವೇನೆ? ಅವರನ್ನೇ ಅಷ್ಟು ಚೆನ್ನಾಗಿ ಬೆಳಿಸಿದವರು ಮೊಮ್ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಲ್ಲವಾ? ನಾನು ಅತ್ತೆ ಮಾವನ ಹೊರಗೆ ಹಾಕಿದ್ದೇನೆ ಅಂದಕೋ, ನಾಳೆ ನನ್ನ ತಮ್ಮನ ಹೆಂಡತಿ ಇದೇ ಕೆಲಸ ಮಾಡಿದ್ರೆ ನಾನು ಅವರಿಗೆ ಏನಾದ್ರೂ ಕೇಳೋದಕ್ಕೆ ಆಗುತ್ತಾ ? ಮೊದಲು ನಿನ್ನ ಸಂಸಾರ ಸರಿ ಮಾಡ್ಕೋಂತ ನಮ್ಮ ಮುಖದ ಮೇಲೆ ಹೊಡದ ಹಾಗೆ ಹೇಳಲ್ವಾ ಅವರು‌? ಅದಕ್ಕೆ ಸಂಸಾರದಲ್ಲಿ ಸಣ್ಣಪುಟ್ಟ ನೋವು ,ಮಾತುಗಳನ್ನು ಬರುತ್ತೆ ಹೋಗುತ್ತೆ ಪ್ರಿಯ. ಅದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಹಗೆ ಸಾಧಿಸಲಿಕ್ಕೆ ಹೋದರೆ ನಾವೇ ನಮ್ಮ ಸಂತೋಷಕ್ಕೆ ಕೊಳ್ಳಿ ಇಟ್ಟ ಹಾಗೆ ಕಣೆ"

"ಪವಿ, ನೀನು ಇಷ್ಟೊಂದು ಪಾಪಿ ಅಂದುಕೊಂಡಿರಲಿಲ್ಲ ಕಣೆ. ನನ್ನ ಸಂಸಾರ‌ ಹಾಳು ಮಾಡಬೇಕೂಂತ ಇಷ್ಟೆಲ್ಲಾ ನನ್ನ ತಲೆಯಲ್ಲಿ ತುಂಬಿದೆಯಾ ? . ಅರ್ಪಿತ, ನೀನು ನನ್ನ ಕಣ್ಣು ತೆರೆಸಿದೆ ಕಣೆ. ನಾನು ಇವತ್ತು ಒಂದು ದಿನಕ್ಕೆ ಮಾತ್ರ ಅಲ್ಲ, ನನ್ನ ಮಕ್ಕಳು ದೊಡ್ಡವರಾಗುವವರೆಗೂ ಕೆಲಸಕ್ಕೆ ಬರಲ್ಲ ಕಣೆ.ನಾನೀಗಲ್ಲೇ ಕೆಲಸಕ್ಕೆ ರಾಜಿನಾಮೆ ‌ಕೊಡ್ತಾ ಇದ್ದೇನೆ. ಬ್ಯಾಗ್ ಪ್ಯಾಕ್ ಮಾಡಿ ಮಕ್ಕಳನ್ನು ಕರೆದುಕೊಂಡು ಸುಹಾಸ್ ಮನೆ, ಅಲ್ಲಲ್ಲಾ ನನ್ನ ಮನೆಗೆ ಹೋಗಬೇಕು ಅರ್ಪಿತ. ಥ್ಯಾಂಕ್ಸ್ ಅ ಲಾಟ್ ಡಿಯರ್... ಬೈ"


"ರಾಣಿ, ಇದೇನೂ ಮಾಡ್ತಾ ಇದ್ದೀಯಾ ? ಮಗು ಆ ತರಹ ಅಳ್ತಾ ಇದ್ದರೆ ನೀನು ಟಿವಿ ನೋಡಿ ಕೂತಿದ್ದೀಯಾ ಅಲ್ವಾ? ಮಕ್ಕಳು ಹಸಿವಿನಿಂದ ಒದ್ದಾಡ್ತಾ ಇದ್ದಾರೆ ಪಾಪ... ಅತ್ತು ಅತ್ತು ಕಣ್ಣೆಲ್ಲಾ ಬತ್ತಿ ಹೋಗಿದೆ. ಸಾಕು ನಿನ್ನ ಕೆಲಸ....ನಿನ್ನ ಒಂದು ತಿಂಗಳ ಸಂಬಳ ತೆಗೋ.. ನಡಿ ಮನೆಗೆ."

"ಇಲ್ಲ ಅಕ್ಕಾ... ಅವರಿಗೆ ಹೊಟ್ಟೆ ತುಂಬಾ ತಿನ್ನಿಸಿದ್ದೇನೆ "

"ಮಕ್ಕಳ ಹೊಟ್ಟೆ ನೋಡಿದ್ರೆ ಗೊತ್ತಾಗುತ್ತೆ ಅವರ ಹಸಿದಿದ್ದಾರೆಂದು, ಸುಳ್ಳು ಬೇರೆ ಬೊಗಳ್ತೀಯಾ ? ನಡಿ ಪೋಲಿಸ್ ಸ್ಟೇಷನ್ ಗೆ"

"ನಿಮ್ಮ ಸಂಬಳನೂ ಬೇಡಾ, ಪೋಲಿಸ್ ಸ್ಟೇಷನ್ ನೂ ಬೇಡ ...ನಿಜ ಹೇಳಿದ್ರೆ ನನ್ನ ಬಿಟ್ಟು ಬಿಡ್ತಿಯಾ ?"

"ಅದೇನೂಂತ ಬಾಯಿಬಿಡು, ಆಮೇಲೆ ನೋಡ್ತೀನಿ ನಿನ್ನ ಬಿಡಬೇಕೋ ಇಲ್ಲಾ ಸ್ಟೇಷನ್ ಗೆ ಹಾಕಬೇಕಾಂತ ? "

"ಎಷ್ಟೊಂದು ಸೊರಗಿದಿಯಾ ರಾಣಿ? ನೀನು ಹೀಗೆ ಇದ್ದರೆ ನಿನ್ನ ಯಾರು ಮದುವೆ ಆಗ್ತಾರೆ? ಮನೆಯಲ್ಲಿ ಬೇಕಾದಷ್ಟು ಹಾಲಿದೆ. ನೀನು ಹೊಟ್ಟೆ ತುಂಬಾ ಕುಡಿ, ಪ್ರೂಟ್ಸ್ ಎಲ್ಲಾ ತಿಂದರೆ ನನ್ನ ತರಹ‌ ತೆಳ್ಳಗೆ ಬೆಳ್ಳಗೆ ಆಗ್ತೀಯಾಂತ ಪವಿ ಅಕ್ಕಾ ಹೇಳಿದ್ರು. ನಾನು ಮಕ್ಕಳಿಗೆ ಮತ್ತೆ ಏನು ಕೊಡಲಿ? ಎಂದು ಕೇಳಿದಕ್ಕೆ ಇಷ್ಟು ಸಣ್ಣ ಮಕ್ಕಳಿಗೆ ಎಷ್ಟು ಸಲ ಹಾಲು ಕೊಡ್ತೀಯಾ ? ಬೆಳಿಗ್ಗೆ ಹೋಗುವಾಗ ಅವಳು ಕುಡಿಸಿ ಹೋಗ್ತಾಳೆ, ಆಮೇಲೆ ಮಧ್ಯಾಹ್ನಾನೇ‌ ಕುಡಿಸು,ಪ್ರಿಯ ಏನೂ ಬರಲ್ಲ ನಿನ್ನ ನೋಡೋದಕ್ಕೆ... ಎಂದು ಬಲವಂತವಾಗಿ ನನಗೆ ಹಾಲು ಕುಡಿಯುವ ಅಭ್ಯಾಸ ಮಾಡಿಸಿದ್ರು ಪವಿ ಅಕ್ಕಾ."

"ಛೇ... ನಡಿ ಮನೆಗೆ, ಮನೆಹಾಳಿ"

"ನನ್ನ ಕ್ಷಮಿಸು ಪ್ರಿಯ ಅಕ್ಕಾ, ಇನ್ಮೇಲೆ ಇಂತಹ ತಪ್ಪು ಮಾಡಲ್ಲ.."

"ಸುಹಾಸ್ ಯಾಕೆ ಕೆಲಸದವರು ಬೇಡಾಂತ ಹೇಳಿದ್ದು ಈವಾಗ ಗೊತ್ತಾಯಿತು ನನಗೆ, ನಿನ್ನಿಂದ ತುಂಬಾ ಕಲಿತೆ ರಾಣಿ. ನನ್ನ ಕಣ್ಣೆದುರು ಯಾವತ್ತೂ ಬರಬೇಡಾ , ಈಗಲೇ ಹೊರಡು...."


ಪಾಪಾ..ಮಕ್ಕಳು ಎಷ್ಟು ಹಸಿದುಕೊಂಡಿದ್ರೋ? ಹೊಟ್ಟೆಗೆ ಬಿದ್ದ ಕೂಡಲೇ ಮಲಗಿಬಿಟ್ರು. ಮಕ್ಕಳು ಮಲಗಿರುವಾಗಲೇ ಎಲ್ಲಾ ಬಟ್ಟೆ ಪ್ಯಾಕ್ ಮಾಡ್ತೇನೆ. ಅತ್ತೆ ಮನೆಗೆ ಹೋಗಿ ಅವರಿಬ್ಬರನ್ನೂ ಒಪ್ಪಿಸಿ ಕರೆದುಕೊಂಡೆ ಬರ್ತೀನಿ.

"ಪ್ರಿಯಾ , ಇದೇನು ಬ್ಯಾಗ್ ಪ್ಯಾಕ್ ಮಾಡ್ತಾ ಇದ್ದಿ?

ಇಷ್ಟು ಬೇಗ ಬೇರೆ ಮನೆ ಸಿಕ್ಕಿತಾ ?"

"ಇಷ್ಟು ದಿನ ನನಗೆ ನಿಲ್ಲೋದಕ್ಕೆ ಅವಕಾಶ ಮಾಡಿ ಕೊಟ್ಟದ್ದಕ್ಕೆ ತುಂಬಾ ಥ್ಯಾಂಕ್ಸ್ ಪವಿ. ನನಗೆ ನನ್ನ ತಪ್ಪಿನ ಅರಿವಾಗಿದೆ ಕಣೆ, ನಾನು ಸುಹಾಸ್ ಜೊತೆಯಲ್ಲಿ ಬದುಕು ನಡೆಸುತ್ತೇನೆ."

"ಮತ್ತೆ ಸುಹಾಸ್ ಜೊತೆಯಲ್ಲಿ ಬದುಕಾ? ಬೇಡಾ ಕಣೆ.. ಅವನು ನಿನ್ನ ಕೆಲಸಕ್ಕೆ ಹೋಗೋದಕ್ಕೆ ಬಿಡಲ್ಲ.."

"ನಿನ್ನನ್ನು ಗೆಳತಿ ಎಂದು ಹೇಳಿಕೊಳೋದಕ್ಕೆ ನಾಚಿಕೆ ಆಗ್ತಾ ಇದೆ ಕಣೆ. ನನ್ನ ಸಂಸಾರ ಹಾಳು ಮಾಡಬೇಕು ಅಂತ ಎಷ್ಟು ದಿನದಿಂದ ಕಾಯ್ತಾ ಇದ್ದೆ ? .ನಿನ್ನ ಕರಾಳ ಮುಖ ನನಗೆ ತಿಳಿಯಿತು, ಛೀ... ನಿನ್ನ ಮುಖ ನೋಡೋದಕ್ಕೂ ಇಷ್ಟ ಇಲ್ಲ ಕಣೆ"

"ನಾನು ಅಹಂಕಾರದಿಂದ ಮಾತನಾಡಿದ್ದು‌ ತಪ್ಪು ಅಂತ ಗೊತ್ತಾಗಿದೆ ಅತ್ತೆ. ನನ್ನ ಮಕ್ಕಳಿಗೆ ಅಜ್ಜ ಅಜ್ಜಿ ಪ್ರೀತಿ ಜೊತೆಗೆ ಸುಹಾಸ್ ಮತ್ತು ನನಗೆ ಮಕ್ಕಳನ್ನು ಉತ್ತಮ ಪ್ರಜೆಯಾಗಿ ಬೆಳೆಸೋದಕ್ಕೆ ನಿಮ್ಮಿಬ್ಬರ ಮಾರ್ಗದರ್ಶನ ಬೇಕೆ ಬೇಕು ಅತ್ತೆ. ನಿಮ್ಮ ಮಗಳು ಎಂದು ತಿಳಿದುಕೊಳ್ಳಿ, ನನ್ನದು ತಪ್ಪಾಯಿತು, ನಮ್ಮ ಮನೆಗೆ ಹೋಗೋಣ."

"ನೀನು ಇಷ್ಟೊಂದು ಪ್ರೀತಿಯಿಂದ ಕರೆಯುವಾಗ ನಾವು ಬರಲ್ಲಾಂತ ಹೇಳ್ತೀವಾ ಪ್ರಿಯ? ನಿನ್ನನ್ನು ಯಾವತ್ತೋ ಕ್ಷಮಿಸಿದ್ದೇನೆ ಇಲ್ಲಾಂದ್ರೆ‌ ಮನೆಯೊಳಗೆ ಕಾಲಿಡೋದಕ್ಕೂ ಬಿಡ್ತಾ ಇರಲಿಲ್ಲ ಕಣಮ್ಮ...."


"ಅಳಿಯಂದ್ರೆ, ಹೆಂಡತಿ ಬಂದ ಮೇಲೆ ಅತ್ತೆ ಮನೆಯವರನ್ನು ಮರ್ತೇ ಬಿಟ್ರಾ ಏನು? ನಾನು ಹೇಳಿಲ್ವಾ? ಮೂರು ತಿಂಗಳಲ್ಲಿ ಅವಳು ನಿಮ್ಮ ಮನೆಯಲ್ಲಿ ಇರ್ತಾಳೆಂತ"

"ಅಷ್ಟು ಗ್ಯಾರಂಟಿಯಾಗಿ ಅದು ಹೇಗೆ ಹೇಳಿದ್ರಿ ಅತ್ತೆ?"

" ಸುಹಾಸ್,ಇದರಲ್ಲಿ ಪ್ರಿಯಳದ್ದು ಮಾತ್ರ ತಪ್ಪಲ್ಲ ಕಣೋ , ನಮ್ಮದು ಕೂಡಾ ಅಷ್ಟೇ ಇದೆ. ಜ್ವರ ತಲೆಗೆ ಏರಿ ಎರಡು ವರ್ಷದ ಮಗು ತೀರಿ ಹೋದ ಐದು ವರ್ಷದ ನಂತರ ಹುಟ್ಟಿದವಳೇ ಪ್ರಿಯ ಕಣೋ...ಗಂಡೋ ಹೆಣ್ಣೋ ನಮ್ಮ ಜೀವನಕ್ಕೊಂದು ಆಸರೆಯಾಗಿ ಮಗು ಹುಟ್ಟಿತ್ತಲ್ಲ ಎಂದು ತುಂಬಾ ಮುಚ್ಚಟೆಯಿಂದ ಬೆಳೆಸಿದ್ವಿ ಕಣೋ, ನಮ್ಮ ಅತಿಯಾದ ಪ್ರೀತಿ ಅವಳು ಹಠಮಾರಿಯಾಗೋದಕ್ಕೆ ಕಾರಣವಾಯ್ತು. ನಮಗೆ ಗೊತ್ತಾಗೋವಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು. ಅವಳು ಅವಳದೇ ಲೋಕ ನಿರ್ಮಿಸಿಯಾಗಿತ್ತು. ಪ್ರಿಯಾಳಿಗೆ ಮಾಡಿದ ಅತಿಯಾದ ಪ್ರೀತಿ ಪ್ರಜ್ವಲ್ ಹುಟ್ಟಿದಾಗ ಮಾಡಲೇ ಇಲ್ಲ.‌ ಅವನು ಹೆಣ್ಣಿನ ಮನಸತ್ವ ಬೆಳೆಸಿಕೊಂಡ. ಇವಳು ಅಹಂಕಾರಿಯಾದಳು.‌ ಅವಳ ಅಹಂಕಾರ ಮುರಿಯೋದಕ್ಕೆ ಇದೇ ಸರಿಯಾದ ಸಮಯಾಂತ ನಾನು ಅವಳ‌ ತಾಳಕ್ಕೆ ಸರಿಯಾಗಿ ‌ತಾಳ ಹಾಕಲಿಲ್ಲ ಕಣಪ್ಪ "

"ನಿಮ್ಮ ಉಪಾಯದಿಂದಲೇ ಇವತ್ತು ನಮ್ಮ ಮನೆ ನಂದನವನವಾಗಿದೆ ಅತ್ತೆ , ತುಂಬಾ ಥ್ಯಾಂಕ್ಸ್ "


"ನಿನ್ನ ಪ್ರೀತಿನಾ ಅರ್ಥ ಮಾಡಿಕೊಳ್ಳುವ ಬದಲು ನಿನ್ನ ಮೇಲೆ ಹಠ ಸಾಧಿಸಿದೆ ಸುಹಾಸ್ ...ನನ್ನ ಕ್ಷಮಿಸಿ ಬಿಡು".

"ನಡೆದ ಘಟನೆಯನ್ನು ನೆನಪಿಸಿಕೊಂಡು ಮನಸ್ಸು ಹಾಳು ಮಾಡಿಕೊಳ್ಳಬೇಡ ಪ್ರಿಯ....ನನಗೆ ನೀನು‌, ನಿನಗೆ ನಾನು ಕೊನೆಯ ತನಕ ಅಷ್ಟೇ ಶಾಶ್ವತ ಕಣೆ...ಬಿಡು ಆ ವಿಚಾರ".

"ಮಕ್ಕಳು ಎಲ್ಲಿದ್ದಾರೆ ಪ್ರಿಯ ?"

"ಮಕ್ಕಳಿಬ್ಬರೂ ಅಜ್ಜ ಅಜ್ಜಿಯ ಮಡಿಲಲ್ಲಿ ಮಲಗಿದ್ದಾರೆ ಸುಹಾಸ್."

"ನಿನ್ನ ಜೊತೆಯಲ್ಲಿ ನನ್ನ ಮನದ ಭಾವನೆಗಳನ್ನು ಹಂಚಿಕೊಳ್ಳಬೇಕು, ನಿನ್ನನ್ನು ಅಪ್ಪಿಕೊಂಡು ಮುದ್ದಾಡಬೇಕು, ನನ್ನ ಬಾಹುಗಳಲ್ಲಿ ನಿನ್ನ ಬಂಧಿಸಬೇಕೆಂದು ಓಡಿ ಬಂದರೆ ನೀನು ಬರೀ ಮಕ್ಕಳ ಬಗ್ಗೆ ಮಾತ್ರ ಯೋಚಿಸುತ್ತಿ ಪ್ರಿಯಾ. ನಿನಗೆ ನನ್ನ ಮೇಲೆ ಪ್ರೀತಿನೇ ಇಲ್ಲಾ ಕಣೆ ?"

" ಹ ಹ ಹ್ಹ... ನಿಮ್ಮ ವಿರಹ ವೇದನೆಯನ್ನು ಶಾಂತ ಮಾಡಲಿಕ್ಕೆಂದೇ ಅತ್ತೆಯ ಹತ್ತಿರ ಮಕ್ಕಳನ್ನು ನೋಡಿಕೊಳ್ಳಲು ಹೇಳಿ ಬಂದಿದ್ದೇನೆ ಪತಿದೇವರೇ..."Rate this content
Log in

Similar kannada story from Drama