ಕೇಸ್ ನಂಬರ್ 21
ಕೇಸ್ ನಂಬರ್ 21


ರಸ್ತೆಯ ಎರಡೂ ಬದಿಯಲ್ಲಿ ಬಾನೆತ್ತೆರಕ್ಕೆ ಬೆಳದ ಮರಗಳು. ಮಧ್ಯಾನ್ಹದ ಸಮಯದಲ್ಲೂ ತಂಪಾದ ವಾತಾವರಣ. ಕಿಡಕಿಯ ಗಾಜು ತೆಗೆದು ಇಣುಕಿ ಅತ್ತಿತ್ತ ನೋಡುತ್ತಾ ನಿಧಾನವಾಗಿ ಡ್ರೈವ್ ಮಾಡುತ್ತಿದ್ದೆ. ಕೊನೆಗೂ ಸಿಕ್ಕಿತು; 6 ನೇ ಮೇನ್ ರಸ್ತೆ. ಕಾರನ್ನು ಇನ್ನಷ್ಟು ಸ್ಲೋ ಮಾಡಿ, ಇಣುಕಿ ಹುಡುಕಿದೆ, ನನಗೆ ಬೇಕಿದ್ದ ಮನೆ ನಂಬರ್ 76.....ಆ ರಸ್ತೆಯ ಕೊನೆಯ ಮನೆಯೇ ನಾನು ಹುಡುಕುತಿದ್ದ ಮನೆಯಾಗಿತ್ತು. ಕಾರಲ್ಲೇ ಕುಳಿತು ಸ್ವಲ್ಪ ಹೊತ್ತು ಆಚೀಚೆ ನೋಡಿದೆ. ರಸ್ತೆ ನಿರ್ಜನವಾಗಿತ್ತು. ಕಾರನ್ನು ಮನೆಯ ಎದುರುಗಡೆ ಮರದ ಕೆಳೆಗೆ ಪಾರ್ಕ್ ಮಾಡಿ, ನಿಧಾನವಾಗಿ ಇಳಿದು ಕಾರನ್ನು ಲಾಕ್ ಮಾಡಿ ಹಿಂಬದಿಯ ಸೀಟ್ನಲ್ಲಿಟ್ಟಿದ್ದ ದೊಡ್ಡ ಅಲ್ಯೂಮಿನಿಯಂ ಪೆಟ್ಟಿಗೆಗಳತ್ತ ನೋಡಿದೆ.
ಈಗಲೇ ತೆಗೆದುಕೊಂಡು ಹೋಗಲೇ? ವೃತ್ತಿಯಲ್ಲಿ ಮನೋವೈದ್ಯನಾದ ನನಗೆ ಇದು ಹೊಸ ಅನುಭವ.
ಬೇಡ ಸಧ್ಯಕ್ಕೆ, ಇಲ್ಲೇ ಇರಲಿ, ಆ ಹುಡುಗಿ ಮನೆಯಲ್ಲಿದ್ದಾಳೂ ಇಲ್ಲವೋ ಗೊತ್ತಿಲ ಎಂದು ನನಗೆ ನಾನೇ ಸಮಾಧಾನ ಹೇಳುತ್ತಾ ಎದುರು ಮನೆಯೆತ್ತ ನಡೆದೆ.
ಸಿಂಗಲ್ ಸ್ಟೋರಿ ಮನೆ, ದೊಡ್ಡ ಗೇಟು, ನಾಯಿಯ ಸುಳಿವಿಲ್ಲ. ಮನೆಯ ಮುಂದೆ ಸಾಕಷ್ಟು ಹೂವಿನ ಗಿಡಗಳು. ಗೇಟನ್ನು ನಿಧಾನವಾಗಿ ತೆಗೆದು ಒಳಗೆ ಹೋಗಿ ಮತ್ತೆ ಕ್ಲೋಸ್ ಮಾಡಿದೆ. ಮುಚ್ಚಿದ ಬಾಗ್ಲಿನ ಮುಂದೆ ನಿಂತು ಅತ್ತಿತ್ತ ನೋಡಿದೆ; ಕಾಲಿಂಗ್ ಬೆಲ್ ಎಲ್ಲೂ ಕಾಣಿಲಿಲ್ಲ. ಕೋಟನ್ನು ಸರಿಪಡಿಸಿಕೊಂಡು, ಬಾಗಿಲನ್ನು ಕೈ ಇಂದ ಬಡಿದು ಶಬ್ದ ಮಾಡಿದೆ. ಒಳಗಿನಿಂದ ಉತ್ತರ ಬರಲಿಲ್ಲ. ಇನ್ನೊಂದು ಸಾರಿ ಶಬ್ದ ಮಾಡಲೆಂದು ಕೈ ಎತ್ತುವಷ್ಟರಲ್ಲಿ, ಬಾಗಿಲು ತೆಗೆಯಿಯಿತು.
ಬಾಗಿಲು ತೆಗೆದವಳು ನೈಟೀ ಹಾಕಿಕೊಂಡು ನನ್ನತ್ತ ಪ್ರಶ್ನಾರ್ಥಕವಾಗಿ ನೋಡುತಿದ್ದ – ನನ್ನಷ್ಟೇ ಸುಮಾರು 30 ವರ್ಷ ವಯಸ್ಸಿನ – ಹುಡುಗಿಯನ್ನು ಕೇಳಿದೆ.
"ನೀವು, ಅಂಜನಾ ಅಲ್ವ?"
(ತನ್ನ ದೊಡ್ಡದಾದ ಕಣ್ಣುಗಳನ್ನು ಚಿಕ್ಕದಾಗಿ ಮಾಡಿ ನನ್ನನ್ನು ಅಡಿಯಿಂದ ಮುಡಿಯವರೆಗೂ ನೋಡಿದಳು. ಅದೇ ಅಗಲವಾದ ಅರ್ಥತುಂಬಿದ ಕಣ್ಣುಗಳು; ಉದ್ದನೆಯ ಮೂಗು, , ಎಲ್ಲೋ ಮಧ್ಯದಲ್ಲಿ ಸೇರುವಂತಿರುವ ಸ್ವಲ್ಪ ದಪ್ಪನಾದ ಹುಬ್ಬುಗಳು; ಎಲ್ಲ ತನ್ನ ತಾಯಿಯ ತದ್ರೂಪಿ.
ಇಷ್ಟೊಂದು ಹೋಲಿಕೆ ಇರಲು ಸಾಧ್ಯವೇ ಎಂದು ಅಶ್ಯರ್ಯ ಪಡುತ್ತಿದವನಿಗೆ, ಇನ್ನ್ನೊಂದು ಶಾಕ್ ಕಾದಿತ್ತು.
ಅವಳ ಧ್ವನಿ!)
"ಹೌದು, ನಾನೇ ಅಂಜನಾ. ನೀವು?"
ಧ್ವನಿಯಲ್ಲೂ ಅದೇ ಹೋಲಿಕೆ! ನನ್ನನು ನಾನೇ ಮರೆಯುತ್ತಿರುವಾಗಲೇ, ಅವಳ ಪ್ರಶ್ನೆಗೆ ಉತ್ತರ ಕೊಡಬೆಂದು ಜ್ಞಾಪಕ ಬಂದಿತು.
ನನ್ನ ಕೈ ಚಾಚುತ್ತಾ ಹೇಳಿದೆ. "ನಾನು ಡಾಕ್ಟರ್ ವಿಶ್ವನಾಥ್, ಮನೋವೈದ್ಯ ನಿಮ್ಮ ಹತ್ತಿರ ಕೆಲವು ನಿಮಿಷ ಮಾತನಾಡಬೇಕಿತ್ತು. ಒಳಗೆ ಬರಬಹುದೇ?"
ಏನೂ ಹೇಳದೆ, ಮತ್ತೆ ತನ್ನ ಕಣ್ಣು ಚಿಕ್ಕದು ಮಾಡುತ್ತಾ ಪಕ್ಕಕ್ಕೆ ಸರಿದಳು.
ನಾನು ನಿಂತಿದ್ದು ಬಹುಶಃ ಲಿವಿಂಗ್ ರೂಮ್. ದೊಡ್ಡ ಹಳೆಯ ಸೋಫಾ ಹಾಗೆ ಎರಡು ಚಿಕ್ಕ, ಮೇಲಿನ ಬಟ್ಟೆ ಹರಿದಿದ್ದ ಸೋಫಾ ಗಳು ಮಧ್ಯೆ ಒಂದು ದೊಡ್ಡ ಟೀಪಾಯ್.
ಲಿವಿಂಗ್ ರೂಮ್ ನಿಂದಲೇ, ಒಳಗೆ ಇದ್ದ ಒಂದು ಸಣ್ಣ ಕಿಚನ್ ಹಾಗು ಬಲಗಡೆಗೆ ಒಂದು ಬೆಡ್ರೂಮ್. ಗೋಡೆಯಮೇಲೆ ವಿಧವಿಧವಾದ ಬಣ್ಣದ ಹಕ್ಕಿಗಳ ಫೋಟೋಗಳು; ಸುಮಾರು ಆರೋ ಏಳು. ವಿಶೇಷವೆಂದರೆ, ಎಲ್ಲ ಹಕ್ಕಿಗಳೂ ಬೋನಿನಿಂದ ಹೊರಗೆ ಬಂದು ಸ್ವತಂತ್ರವಾಗಿ ಹಾರಾಡುತ್ತಿದ್ದವು ಅದನ್ನೇ ನೋಡುತ್ತಾ ನಿಂತಿದ್ದ ನನ್ನನ್ನು ಪ್ರಶ್ನಿಸಿದಳು.
“ಎನ್ ಡಾಕ್ಟ್ರೇ ಹಾಗೆ ತನ್ಮಯವಾಗಿ ನೋಡ್ತಾ ನಿನ್ತಬಿಟ್ರಲ್ಲ? ಆ ಚಿತ್ರಗಳಲ್ಲಿ ಏನಾದ್ರೂ ವಿಶೇಷವಿದೆಯಾ?"
"ನಿಮಗೆ ಫ್ರೀಡಂ ಅಂದ್ರೆ ತುಂಬಾ ಇಷ್ಟ ಅಂತ ಕಾಣತ್ತೆ. " ಸೋಫಾ ಮೇಲೆ ಕೂಡುತ್ತ ಅವಳೆಡೆಗೆ ನೋಡಿದೆ.
ಸುಮಾರು 5 ಅಡಿ 6 ಅಥವಾ 7 ಅಂಗುಲ ಇರಬಹದು ಅವಳ ಹೈಟ್ ಎಂದು ಯೋಚಿಸಿದೆ.
ಎತ್ತರದಲ್ಲೂ ಅಮ್ಮನ ಮಗಳೆ!
ನನ್ನ ಪ್ರಶ್ನೆಗೆ ಉತ್ತರಸಿದೆ ಸುಮ್ಮನೆ ಅಂಜನಾ ಎದುರಿಗಿದ್ದ ಸೋಫಾ ಮೇಲೆ ಕುಳಿತು ನನ್ನೆನೇ ನೋಡಿದಳು.
"ಆಮ್ ಸಾರೀ. ನಾನು ಡಾಕ್ಟರ್ ವಿಶ್ವನಾಥ್ ಮನೋವೈದ್ಯ. ಮೊದಲಿಗೆ, ಹೀಗೆ ಹೇಳದೆ ಕೇಳದೆ ಬಂದಿದದ್ದಕ್ಕೆ ತುಂಬಾ ಸಾರೀ. ನಿಮ್ಮ ಹೆಚ್ಚು ಹೊತ್ತು ತೊಗೊಳ್ಳೋದಿಲ್ಲ"
ಕೈ ಚಾಚುತ್ತಾ ಹೇಳಿದೆ. ಅನುಮಾನದಿಂದ, ಕೈ ಹಿಡಿದು ಕುಲಿಕಿದಳು. ಗಂಟಲು ಸರಿಪಡಿಸಿಕೊಂಡು, ಎಲ್ಲಿಂದ ಶುರು ಮಾಡಲಿ ಎಂದು ಯೋಚಿಸುತ್ತ, ಇಷ್ಟು ದೂರ ಬಂದಾಗಿದೆ, ಇನ್ನು ಹಿಂಜರಿದರೆ ಪ್ರಯೋಜನವಿಲ್ಲ. ಆದದ್ದಾಗಲಿ ಎಂದು ತೀರ್ಮಾನಿಸುತ್ತಾ ಶುರುಮಾಡಿದೆ.
“ನಾನು ಬೆಂಗಳೂರಿನಿಂದ ನಿಮ್ಮನೇ ಹುಡುಕಿಕೊಂಡು ಬಂದಿದ್ದೇನೆ.
ಅಂಜನಾ, ನನ್ನ ಒಬ್ಬ ಪೇಶೆಂಟ್ನ ರಾಯಭಾರಿಯಾಗಿ ಬಂದಿದ್ದೀನಿ ಅಂತ ಹೇಳಬಹುದು. ಆಕಿಯ ಬಹಳ ದಿನದ ಬಯೆಕೆಯೊಂದನ್ನು ಪೂರ್ಣಗೊಳಿಸುವದಕ್ಕೆಂದೇ ಬಂದಿದ್ದ್ದೆನೆ ಅಂದರೆ ತಪ್ಪಾಗಲಾರದು.”
"ನಿಮ್ಮ ಪೇಶೆಂಟ್? ಯಾರು ಡಾಕ್ಟರ್? ಮತ್ತೆ ನಿಮ್ಮನ್ನೇಕೆ ಕಳಿಸಿದ್ದಾರೆ?" ಮತ್ತೆ ತನ್ನ ಕಣ್ಣುಚಿಕ್ಕದು ಮಾಡುತ್ತಾ ಕೇಳಿದಳು ಅಂಜನಾ.
ಮುಂದೆ ಹೇಳುವ ಒಂದೊಂದು ಶಬ್ದಗಳನ್ನೂ ತೂಕ ಮಾಡಿ ಮಾತನಾಡಬೇಕು; ನನಗೆ ನಾನೇ ಎಚ್ಚರಿಕೆ ಕೊಡುತ್ತ ಅಂಜನಾಳ ಮುಖವವನ್ನೇ ನೋಡುತ್ತಾ ಹೇಳಿದೆ.
"ಅಂಜನಾ ಈಗ ನಾನು ಹೇಳುವುದನ್ನು ಕೇಳಿ ನಿಮಗೆ ಅಶ್ಯರ್ಯ ಹಾಗು ವಿಚಿತ್ರ ಅಂತ ಕೂಡ ಅನ್ನಿಸಬಹುದು. ನನ್ನ ಮಾತನ್ನ ನಂಬಿ; ನಾನು ಹೇಳುವ ಪ್ರತಿಯೊಂದು ವಿಷಯವೂ ನನಗೆ ತಿಳಿದ ಮಟ್ಟಿಗೆ ಸತ್ಯವಾದದ್ದು. ಒಬ್ಬ ಪ್ರಾಕ್ಟಿಸಿನ್ಗ್ ಸೈಕಿಯಾಟ್ರಿಸ್ಟ್ ಆಗಿ ನನ್ನ ಬಳಿ ಬರೊ ಪೇಶಂಟ್ಗಳು ದುಃಖ, ನೋವು ಹಾಗು ಅಸಹಾಯಕತೆ ತುಂಬಿದ ತಮ್ಮ ಜೀವನದ ಸಾಕಷ್ಟು ವಿಷಯಗಳನ್ನ ನನ್ನ ಹತ್ತಿರ ಹಂಚಿಕೊಳ್ಳುತ್ತಾರೆ. ನಮಗೆ ಸಾಕಷ್ಟು ಟ್ರೇನಿಂಗ ಇದ್ದರೂ ಸಹಾ, ಕೆಲವೊಮ್ಮೆ ಅವರು ಹೇಳುವ ವಿಷಯಗಳು ನಮ್ಮ ಮೇಲೆ ಮಾನಸಿಕವಾಗಿ ಪರಿಣಾಮ ಬೀರುತ್ತದೆ ಅಂದರೆ ತಪ್ಪಾಗಲಾರಲಾರದು. ನಾವು ಅದಿಕ್ಕೆ ಪೇಶಂಟ್ಗಳೊಟ್ಟಿಗೆ ಡಾಕ್ಟರ್ ಪೇಶೆಂಟ್ ಸಂಬಂಧವೊಂದನ್ನೇ ಇಟ್ಟುಕೊಂಡು ನಮ್ಮ ಮಧ್ಯೆ ಒಂದು ಲಕ್ಷ್ಮಣ ರೇಖೆ ಎಳೆಯುತ್ತೇವೆ.
ಆದರೇ .." ಮುಂದೆ ಹೇಳಲಿರುವ ವಿಷ್ಯದ ಬಗ್ಗೆ ಯೋಚಿಸುತ್ತಾ ಅವಳ ಮುಖವನ್ನೇ ನೋಡುತ್ತಾ ಹೇಳಿದೆ ,” ಒಂದು ಪೇಶೆಂಟ್ ನನಗೇ ತಿಳಿಯದಂತೆ ನನ್ನಮೇಲೆ ಸಾಕಷ್ಟು ಪರಿಣಾಮ ಬೀರಿದ್ದಷ್ಟೇ ಅಲ್ಲದೆ ಆಕಿ ನನಗೆ ಬಹಳ ಹತ್ತಿರವಾದರು.
ಆಕಿ, ಒಂದು ವರ್ಷದ ಕೆಳಗೆ ಮೊದಲಿಗೆ ನನ್ನ ಬಳಿ ಬಂದಾಗ ಅವರಿಗೆ ಸುಮಾರು 58 ವರ್ಷ ವಯಸ್ಸಿರಬಹುದು.
ಅವರ ಹೆಸರು……. ಆರತಿ."
ಒಂದು ಕ್ಷಣ ಅಂಜನಾಳ ಮುಖವನ್ನೇ ನೋಡಿದೆ. ಯಾವ ಪ್ರತಿಕ್ರಿಯೆಯೂ ಕಾಣಲಿಲ್ಲ.
ನಿಟ್ಟುಸಿರು ಬಿಡುತ್ತಾ ಮುಂದುವರಿಸಿದೆ.
"ಸರಿಯಾಗಿ ಹೇಳಬೇಕೆಂದರೆ, ನನ್ನ ಬಳಿ ಬಂದಾಗ ಆರತಿ ಧೈಹಿಕವಾಗಿ ಹಾಗು ಮಾನಸಿಕವಾಗಿ ತುಂಬಾ ವೀಕಾಗಿದ್ರು . ಅವ್ರ ಸಮಸ್ಯೆ ಸರಿಯಾಗಿ ಅರ್ಥ ಮಾಡಿಕೊಳ್ಲಕ್ಕೇನೆ ಸುಮಾರು ಸಮಯ ಹಿಡೀತು. ನೋಡಿ ಅಂಜನಾರವರೇ, ಆರತಿ ಸುಮಾರು 26 ಅಥವಾ 27 ನೇ ವಯಸ್ಸಿನಲ್ಲಿ ಒಬ್ಬ ಹುಡುಗನ ಜೊತೆ ಪ್ರೀತಿಯಲ್ಲಿದ್ದಳು ಆದರೆ, ಆ ಹುಡುಗ ಅವಳನ್ನ ಮದುವೆಯಾಗಲಿಲ್ಲ. ಅರ್ಧದಲ್ಲೇ ಕೈ ಬಿಟ್
ಟು ಹೇಳದೆ ಕೇಳದೆ ಹೊರಟು ಹೋದ.
ಆರತಿ ಗರ್ಭಿಣಿಯಾಗಿದ್ದಳು. ತಂದೆ ತಾಯಿ ಎಷ್ಟೇ ಒತ್ತಾಯ ಮಾಡಿದರೂ, ಗರ್ಭಪಾತ ಬೇಡವೆಂದು ಹಠ ಹಿಡಿದ ಆರತಿ, ಒಂದು ಹೆಣ್ಣು ಮಗುವಿಗೆ ಜನ್ಮ ಕೊಟ್ಟಳು.
ಹೊಟ್ಟೆಯಲ್ಲೇ ಮಗು ಸತ್ತು ಹೋಯಿತೆಂದು ಅವಳ ತಂದೆ ತಾಯಿ ನಂಬಿಸಿದರು. ನರ್ಸಿಂಗ್ಹೋಂ ಡಾಕ್ಟರ್ಗೆ ಹಣ ಕೊಟ್ಟು ಅವರಿಂದಲೂ ಇದೇ ಮಾತು ಹೇಳಿಸಿದರು.
ಆರತಿಗೆ ನಿಜ ಗೊತ್ತಾಗುವಷ್ಟರಲ್ಲಿ ಒಂದು ವರ್ಷವಾಗಿತ್ತು. ಮಗು ಸತ್ತಿತೆಂದು ಸುಳ್ಳು ಹೇಳಿ, ಒಂದು ಅನಾಥಾಶ್ರಮಕ್ಕೆ, ಮಗುವನ್ನು ಕೊಟ್ಟಿದ್ದರು, ಆರತಿಯ ಅಪ್ಪ ಅಮ್ಮ.
ಆರತಿ ಹುಡುಕಿಕೊಂಡು ಹೋದಾಗ ಗೊತ್ತಾಯಿತು, ಆ ಮಗುವನ್ನು ಯಾರೋ ದತ್ತು ತೆಗೆದು ಕೊಂಡು ಬೇರೆ ದೇಶಕ್ಕೆ ಹೋದರೆಂದು.”
ಮೊಮೆಂಟ್ ಆಫ್ ಟ್ರುಥ್; ಧೀರ್ಘವಾಗಿ ಉಸಿರು ತೆಗೆದುಕೊಳ್ಳುತ್ತಾ ಹೇಳಿದೆ,
“ಆರತಿಯ ಮಗಳು ಬೇರೆ ಯಾರೂ ಅಲ್ಲ. ಅಂಜನಾ, ಅದು ನೀವೇ.”
ದಡಕ್ಕನೆ ಎದ್ದು ನಿಂತಳು ಅಂಜನಾ.
"ಡಾಕ್ಟರ್ ವಿಶ್ವನಾಥ್ ಅಥವಾ ನೀವು ಯಾರೋ ನನಗೆ ಗೊತ್ತಿಲ್ಲ. ದಯವಿಟ್ಟು ಮೊದಲು ಇಲ್ಲಿಂದ ಹೊರಡಿ. ನಾನು ಹುಟ್ಟಿದ ಕಥೆ ನನಗೆ ಚೆನ್ನಾಗಿ ಗೊತ್ತು. ಇಷ್ಟು ವರ್ಷಗಳಿಂದ, ನನಗೆ ಜನ್ಮ ಕೊಟ್ಟ ಆ ಹೆಂಗಸನ್ನ ದ್ವೇಷಿಸುತ್ತ ಬಂದಿದ್ದೇನೆ. ಮತ್ತೆ ಗಾಯದ ಮೇಲೆ ಬರೆ ಎಳೆಯುವ ಅವಶ್ಯಕತೆ ಇಲ್ಲ.
ತಾಳ್ಮೆಯಿಂದ ಇದುವರೆಗೂ ನಿಮ್ಮ ಮಾತನ್ನ ಕೇಳಿಸಿಕೊಂಡಿದ್ದೇನೆ. ನಿಮ್ಮ ಕಥೆಯಲ್ಲಿ ನನಗೆ ಒಂದು ಚೂರು ನಂಬಿಕೆ ಇಲ್ಲ. ನಿಜವಾದ ವಿಷಯ ಏನು ಅಂತ ನನಗೆ ಗೊತ್ತು.
ಹಾದರಕ್ಕೆ ಹುಟ್ಟಿದವಳು ನಾನು .ತನ್ನ ಸ್ವಾರ್ಥಕ್ಕಾಗಿ ಏನು ಅರಿಯದ ಮಗುವಿಗೆ ಮೋಸ ಮಾಡಿದ ಆ ಹೆಂಗಸನ್ನ ಯಾವತ್ತೂ ಕ್ಷಮಿಸುವುದಿಲ್ಲ, ನಾನು.”
ಕಣ್ಣಿನಿಂದ ಸುರಿಯುತ್ತದ್ದ ನೀರನ್ನು ಒರೆಸಿಕೊಳ್ಳುವ ಪ್ರಯತ್ನವನ್ನೂ ಮಾಡದೇ, ಸೋಫಾ ಮೇಲೆ ಕುಸಿದು ಕುಳಿತು ಬಿಕ್ಕಿ ಬಿಕ್ಕಿ ಅತ್ತಳು ಅಂಜನಾ.
ಕೆಲವು ಕ್ಷಣ ಸುಮ್ಮನಿದ್ದ ನಾನು ಧೈರ್ಯ ತೆಗೆದುಕೊಳ್ಳುತ್ತಾ ಹೇಳಿದೆ.
“ಆರತಿ ಮೊದಲ ಬಾರಿಗೆ ನನ್ನ ಹತ್ತಿರ ಈ ವಿಷಯ ಹೇಳಿದಾಗ, ನಾನು ಕೂಡ ನಿಮ್ಮ ಹಾಗೆ, ಖಂಡಿತವಾಗಿಯೂ ನಂಬಿರಲಿಲ್ಲ. ಅಂಜನಾ ಒಂದು ಸತ್ಯ ಕೇಳಿ ನಿಮಗೆ ಅಶ್ಯರ್ಯ ಆಗಬಹುದು. ಕಳೆದ ಸುಮಾರು 30 ವರುಷಗಳಿಂದ, ಪ್ರತಿ ದಿನ, ಆರತಿ, ತನ್ನಿಂದ ದೂರಾದ ತನ್ನ ಮಗಳಿಗೆ ಒಂದು ಪತ್ರ ಬರೆದಿದ್ದಾಳೆ. ನಂಬಿದರೇ ನಂಬಿ ಬಿಟ್ಟರೆ ಬಿಡಿ, ಪ್ರತಿ ದಿನ, ಅವಳಿಗಾದ ನೋವು, ಪಟ್ಟಿದ ದುಃಖ ಇವೆಲ್ಲವನ್ನು ಆ ಪತ್ರಗಳಲ್ಲಿ ತೋಡಿಕೊಂಡಿದ್ದಾಳೆ.
ಹೊರಗೆ ನನ್ನ ಕಾರಿನ ಹಿಂಬದಿಯ ಸೀಟ್ನಲ್ಲಿ ಎರಡು ದೊಡ್ಡ ಅಲ್ಯೂಮಿನಿಯಂ ಪೆಟ್ಟಿಗೆಗಳಿವೆ; ಅದರ ತುಂಬಾ ನಾನು ಹೇಳಿದ ಪತ್ರಗಳಿವೆ.
ಆರತಿ 30 ವರ್ಷಗಳಿಗೂ ಮೀರಿ ಅನುಭವಿಸಿದ ನೋವಿನ ಆ ಕ್ಷಣಗಳ ಸಂಪೂರ್ಣ ಚಿತ್ರಣ ಆ ಪತ್ರಗಳ್ಲಿದೆ ಅಂದರೆ ತಪ್ಪಾಗಲಾರದು.
ಅವಳ ತಂದೆ ತಾಯಿ ಮಾಡಿದ ಮೋಸ, ಅವಳನ್ನ ನಂಬಿಸಿ ಬಿಟ್ಟು ಹೋದ ಆ ಹುಡುಗ, ಅಷ್ಟೇ ಅಲ್ಲ ಅವಳು ನಂತರ ಮದುವೆ ಕೂಡ ಮಾಡಿಕೊಳ್ಳದೆ ಯಾವ ಅನಾಥಶ್ರಮದಲ್ಲಿ ನಿಮ್ಮನ್ನ ಬಿಟ್ಟು ಹೋದರೋ ಅಲ್ಲೇ ತನ್ನ ಸರ್ವಸ್ವವನ್ನು ಧಾರೆ ಎರೆಯುತ್ತ ಅಲ್ಲಿರುವ ಅನಾಥ ಮಕ್ಕಳನ್ನು ನೋಡಿಕೊಳುತ್ತಾ ತನ್ನ ಜೀವನವನ್ನೇ ಸೇವೆಗಾಗಿ ಮುಡುಪಾಗಿಟ್ಟಿದ್ದ ವಿಶಯಾ, ಎಲ್ಲವೂ. ನಾನು ಆ ಪೆಟ್ಟಿಗೆಯಲ್ಲಿರು ಪ್ರತಿಯೊಂದು ಪತ್ರಗಳನ್ನು ಓದಿದ್ದೇನೆ ಅಂದರೆ ಅಂಜನಾ, ನಿಮಗೆ ಆಶ್ಚರ್ಯವಾಗಬಹುದು.
ಆದರೆ ಇದು ಸತ್ಯ”
ಅಷ್ಟು ಹೊತ್ತು ಮಾತನಾಡಿದ ನನಗೆ ಸುಸ್ತಾಯಿತು. ಸೋಫಾ ಮೇಲೆ ಹಾಗೆ ಒರಗಿ ಕಣ್ಣು ಮುಚ್ಚಿದೆ.
ನನ್ನ ಜೀವನದಲ್ಲಿ ಒಮ್ಮೆಗೆ ಅಷ್ಟು ಧೀರ್ಘವಾಗಿ ಮಾತನಾಡಿದ್ದೆ ಇಲ್ಲ.
ಕೆಲ ಕ್ಷಣಗಳ ನಂತರ ನಾನು ಹೋರಾಡಲು ಎದ್ದು ನಿಂತೆ.
ಕಣ್ಣು ತುಂಬಾ ನೀರು ತುಂಬಿಸಿಕೊಂಡಿದ್ದ ಅಂಜನಾ ಎದ್ದು ನನಗಡ್ಡವಾಗಿ ನಿಂತಳು.
"ಡಾಕ್ಟರ್. ನೀವು ಹೇಳಿದ್ದೆಲ್ಲವೂ ನಿಜವಾ? ನಾನು ಅನಾಥಾಶ್ರಮಕ್ಕೆ ಸೇರಿದ್ದು ನೀವು ಹೇಳಿದ ರೀತಿಯೇ? ಪ್ಲೀಸ್, ಹೇಳಿ ಡಾಕ್ಟರ್?"
ಮತ್ತೆ ಕುಸಿದು ಕುಳಿತಳು ಅಂಜನಾ.
"ಅಂಜನಾ ನಾನು ಹೇಳಿದ ಪ್ರತಿಯೊಂದು ಮಾತು ಅಕ್ಷರಶಃ ನಿಜ."
ಕಣ್ಣೊರೆಸಿಕೊಂಡು ಎದ್ದು ನಿಂತಳು ಅಂಜನಾ.
“ದಯವಿಟ್ಟು ನನ್ನ ತಾಯಿಯ ಹತ್ತಿರ ನನ್ನನ್ನು ಕರೆದು ಕೊಂಡು ಹೋಗಿ ಡಾಕ್ಟರ್. ನನ್ನಲ್ಲಿರುವ ನೂರಾರು ಪ್ರಶ್ನೆಗಳಿಗೆ ನನಗೆ ಉತ್ತರ ಬೇಕು.”
ಅವಳ ಕೈ ಹಿಡಿದು ಅವಳ ಕಣ್ಣೇರು ತುಂಬಿದ ಕಣ್ಣುಗಳನ್ನೇ ನೋಡುತ್ತಾ ಹೇಳಿದೆ.
"ಬಹಳ ವರ್ಷಗಳ ಹಿಂದೆಯೇ ಕ್ಯಾನ್ಸರ್ ಅವಳನ್ನು ಬಲಿತೆಗೆದುಕೊಂಡಾಗಿತ್ತು. ಯಾವತ್ತಾದರೂ ಒಂದು ದಿವಸ ತನ್ನ ಮಗಳನ್ನು ನೋಡುತ್ತೇನೆನ್ನುವ ಒಂದೇ ಕಾರಣಕ್ಕೆ ತನ್ನ ಜೀವ ಬಿಗಿಹಿಡಿದು ಬದುಕಿದ್ದಳು ಆರತಿ. 15 ದಿವಸದ ಹಿಂದೆ ತನ್ನ ಕೊನೆಯುಸಿರು ಬಿಡುವಾಗ ನನಗೆ ಹೇಳಿ ಕಳಿಸಿದ್ದಳು
ಹೇಗಾದರೋ ಮಾಡಿ ನಿಮ್ಮನ್ನ ಹುಡುಕಿ ಅವಳು ಬರೆದಿರುವ ಪತ್ರಗಳನ್ನು ನಿಮಗೆ ತಲುಪಿಸಬೇಕೆಂಬುದೇ ಅವಳ ಕೊನೆಯಾಸೆಯಾಗಿತ್ತು.
ಅಂಜನಾ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಆ ಪತ್ರಗಳಲ್ಲಿ ಖಂಡಿತ ಉತ್ತರ ಇದೆ"
ಹೊರಗೆ ಹೋಗಿ ಕಾರಿನಿಂದ ಭಾರವಾದ ಪೆಟ್ಟಿಗೆಗಳನ್ನು ತೆಗೆದು ಉಸಿರು ಬಿಡುತ್ತ ಎಳೆದು ತಂದು ಅಂಜನಾಳ ಮುಂದಿಟ್ಟು ಮತ್ತೆ ಕುಸಿದು ಕುಳಿತೆ ಸೋಫಾದಲ್ಲಿ.
ನಾನು ತಂದ ಆ ದೊಡ್ಡ ಪೆಟ್ಟಿಗೆಗಳನ್ನು ನೋಡುತ್ತಾ ಕೃತಜ್ಞತೆಯಿಂದ ನುಡಿದಳು ಅಂಜನಾ.
"ತುಂಬಾ ಉಪಕರವಾಯಿತು ಡಾಕ್ಟರ್ ವಿಶ್ವನಾಥ್. ಆದರೆ….”ಅನುಮಾನಿಸುತ್ತ ನನ್ನತ್ತ ನೋಡಿದಳು.
ತಲೆಯೆತ್ತಿ ಅವಳನ್ನೇ ನೋಡುತ್ತಾ ಕೇಳಿದೆ. "ಆದರೆ? ಹೇಳಿ ಅಂಜನಾ ಏನು ನಿಮ್ಮ ಪ್ರಶ್ನೆ?”
"ನನಗೆ ಒಂದು ವಿಷಯ ಅರ್ಥ್ವಾಗ್ತಾಇಲ್ಲ. ಅಲ್ಲ ಡಾಕ್ಟರ್, ನೀವೇ ಹೇಳಿದ ಹಾಗೆ ಸಾಮಾನ್ಯವಾಗಿ ಡಾಕ್ಟರ್ ತಮ್ಮ ಪೇಶೆಂಟ್ ಜೊತೆ ಕೇವಲ ಡಾಕ್ಟರ್ ಪೇಶೆಂಟ್ಜ್ ಸಂಬಂದ್ದಕ್ಕೆ ಮಾತ್ರ ಅವಕಾಶ ಕೊಡುತ್ತಾರೆ. ಆದರೇ ನೀವು? ಕೇವಲ ಒಬ್ಬ ಪೇಶೆಂಟ್ಗೋಸ್ಕರ ಇಷ್ಟರ ಮಟ್ಟಿಗೆ ತೊಂದರೆ ತೆಗೆದುಕೊಂಡಿದ್ದಾದರೂ ಯಾಕೆ ಅಂತ?"
ಈ ಪ್ರಶ್ನೆ ಬಂದೆ ಬರುತ್ತೆಂದು ನನಗೆ ತಿಳಿದಿತ್ತು. ಸುಮಾರು ದಿನಗಳಿಂದ ಇದಕ್ಕೆ ಏನುತ್ತರ ಕೊಡಬೇಕೆಂದು ಜಿಜ್ಞಾಸೆಯಲ್ಲಿದ್ದ ನಾನು, ಹಾನೆಸ್ಟಿ ಈಸ್ ದಿ ಬೆಸ್ಟ್ ಕೋರ್ಸ್ ಎಂದು ತೀರ್ಮಾನ ಮಾಡಿದ್ದೆ.
ಎತ್ತಿದ್ದ ತಲೆ ತಗ್ಗಿಸಿ ನೆಲ ನೋಡುತ್ತಾ ಹೇಳಿದೆ.
"ಅಂಜನಾ ನಾನು ಆಗಲೇ ಹೇಳಿದ ಹಾಗೆ, ಈ ಪೆಟ್ಟಿಗೆಯೊಳಗಿರುವ ಎಲ್ಲ ಪತ್ರಗಳನ್ನು ನಾನು ಓದಿದ್ದೇನೆ. ಹಾಗೆ ಓದಿದಾಗ ಗೊತ್ತಾಯಿತು ಆರತಿಗೆ ಮೋಸಮಾಡಿ ಓಡಿಹೋದ ವ್ಯಕ್ತಿ ಯಾರೆಂದು."
ಎದ್ದು ನಿಂತು ನಡುಗುವ ಧ್ವನಿಯಲ್ಲಿ ಹೇಳಿದಳು ಅಂಜನಾ. "ಏನು? ನನ್ನಮ್ಮನಿಗೆ ಮೋಸಮಾಡಿದವನು ಯಾರೆಂದು ನಿಮಗೆ ಗೊತ್ತೇ ಡಾಕ್ಟರ್? ಹೇಳಿ ಡಾಕ್ಟರ್? ಯಾರಾ ಪಾತಕಿ?"
ಕೋಪದಿಂದ ಪ್ರಜ್ವಲಿಸುತ್ತಿದ್ದ ಅಂಜನಾಳ ಮುಖವನ್ನು ನೋಡಲಾಗದೆ ಮತ್ತೆ ಅವಮಾನದಿಂದ ತಲೆ ಕೆಳಗೆ ಮಾಡಿ ನುಡಿದೆ.
"ಅಂಜನಾ ಆ ವ್ಯಕ್ತಿ ಬೇರೆ ಯಾರು ಅಲ್ಲ.
ನನಗೆ ಜನ್ಮ ಕೊಟ್ಟ ನನ್ನ ತಂದೆಯೇ ನಿಮ್ಮ ತಾಯಿ ಆರತಿಗೆ ಮೋಸ ಮಾಡಿದ ವ್ಯಕ್ತಿ!"