ಆ "ಶಾಂತಿ"ಯ ತೋಟ
ಆ "ಶಾಂತಿ"ಯ ತೋಟ
ಸೂರ್ಯ ರಶ್ಮಿ ಆಗ ತಾನೇ ಭೂಮಿಯನ್ನು ಸ್ಪರ್ಶಸಿ ಕೊಂಚ ಮೇಲಕ್ಕೇರಿತ್ತು. ರಾಮ ಭಟ್ಟರ ಮನೆಯಲ್ಲಿ ಸುಪ್ರಭಾತ ಕೇಳುತ್ತಿತ್ತು. ಸ್ನಾನ ಮುಗಿಸಿದ ಭಟ್ಟರು ಪೂಜೆಗೆ ಹೂ ಕೀಳಲು ಮನೆಯ ಮುಂದಿನ ಕೈತೋಟಕ್ಕೆ ಬಂದರು.
ಹೆಚ್ಚೇನೂ ಮನೆಗಳಿಲ್ಲದ ಸಣ್ಣ ಊರದು . ಅಲ್ಲಿ ಇದ್ದಿದ್ದು ಹತ್ತಾರು ಬ್ರಾಹ್ಮಣರ ಮನೆ ಹಾಗೂ ದೊಡ್ಡ ಬಾಯಿಯ ಶಾಂತಿ ಎಂದು ಪ್ರಸಿದ್ದಿ ಪಡೆದ ಶಾಂತಿಯ ಮನೆ ಹಾಗೂ ತೋಟ.
ಶಾಂತಿಯ ಗಂಡ ಊರುಬಿಟ್ಟು ಹೋಗಿದ್ದ ಕಾರಣ ಯಾರಿಗೂ ತಿಳಿದಿರಲಿಲ್ಲ. ಎಲ್ಲರೂ ಇವಳ ಬಾಯಿಯಿಂದಾನೆ ಅಂತ ಮಾತಾಡಿಕೊಳ್ಳುತ್ತಾರೆ . ನಿಜವೇನೋ ಯಾರಿಗೂ ತಿಳಿಯದು.
ಇಂತಿಪ್ಪ ಊರಲ್ಲಿ ,ಆ ದಿನ ಹೂ ಕೊಯ್ಯಲು ಬಂದ ಭಟ್ಟರಿಗೆ ಶಾಂತಿಯ ತೋಟದಿಂದ ಜೋರು ಧ್ವನಿಯಲ್ಲಿ ಬಯ್ಯುವುದು ಕೇಳುತ್ತಿತ್ತು.
" ಲೇ.. ದರ್ಬೇಸಿಗಳಾ .. ನಿಮ್ಮ ನಿಮ್ಮ ದನಗಳನ್ನು ಮೇವು ಕೊಟ್ಟು ಸಾಕಲು ಯೋಗ್ಯತೆ ಇಲ್ಲ ಅಂದಮೇಲೆ ಯಾಕ್ರೀ ಸಾಕ್ತೀರಾ ? ನಿಮ್ಮ ದನಗಳಿಗೆ ನಮ್ಮ ತೋಟನೇ ಬೇಕಾ...? ಮೊನ್ನೆ ಮೊನ್ನೆ ತಾನೇ ಕಟ್ಟಿಸಿದ್ದು ಬೇಲಿ. ಅಷ್ಟು ಬೇಗ ನಿಮ್ಮ ದನಗಳು ಎಲ್ಲಾ ಹಾಳು ಮಾಡಿತು. ಇನ್ನೊಂದು ಸಲ ಬರ್ಲಿ ಈ ಕಡೆ ಅದರ ಕಾಲು ಮುರಿದು ಕಳಿಸ್ತೇನೆ.. " ಹೀಗೆ ಊರಿಗೆ ಊರೇ ಕೇಳಿಸಿಕೊಳ್ಳುವಂತೆ ಬೈಯುತ್ತಿದ್ದರು ಶಾಂತಕ್ಕ.
"ರಾಮಾ, ಏನೋ ಅದು ಅರಚಾಟ, ಏನಂತೆ ಬೆಳಗ್ಗೆ ಬೆಳಗ್ಗೆ ಆ ಶಾಂತಿದು" ಎಂದು ಕೇಳಿಕೊಂಡು ರಾಮ ಭಟ್ಟರ ತಾಯಿ ಗಿರಿಜಕ್ಕ ಹೊರ ಬಂದರು
"ಏನೂ ಇಲ್ಲಮ್ಮ ಅವಳದ್ದು ಇದ್ದದ್ದೇ... ಮೊನ್ನೆ ಆಳುಮಕ್ಕಳನ್ನು ಕರೆದು ತೋಟಕ್ಕೆ ಗಟ್ಟಿಯಾಗಿ ಬೇಲಿ ಕಟ್ಟಿಸಿದ್ಲು, ಇವತ್ತು ಬೆಳಿಗ್ಗೆನೇ ಎದುರು ಮನೆ ಸೀತಾರಾಮ ಭಟ್ಟರ ದನ ಕರುಗಳು ಅವಳ ತೋಟಕ್ಕೆ ಹೊಕ್ಕಿದಾವೆ ಕಾಣ್ತದೆ. ಅದಕ್ಕೆ ತೋಟದಲ್ಲೇ ನಿಂತ್ಕೊಂಡು ಕಿರುಚಾಡ್ತಿದ್ದಾಳೆ. ಇವಳ ಬೊಬ್ಬೆಗೆ ಶಾಂತಿಯ ತೋಟ ಈಗ ಅಶಾಂತಿಯ ತೋಟ ಅಂತ ಊರವರು ಆಡ್ಕೋತಾರೆ" ಎಂದು ನಗುತ್ತಲೇ ಹೂಬುಟ್ಟಿ ಹಿಡಿದು ಒಳನಡೆದರು ರಾಮ ಭಟ್ಟರು.
"ಆ ಸೀತಾರಾಮನಿಗಾದರೂ ಬುದ್ದಿ ಬೇಡ್ವಾ , ಕಟ್ಟಿ ಹಾಕಿ ಮೇವು ಹಾಕೋಕೆ ಆಗಲ್ಲ ಅಂದಮೇಲೆ ದನ ಸಾಕಬೇಕಾ...? ಇದೇನು ಮೊದಲನೇ ಸಲ ಅಲ್ಲ, ಕಂಡೋರ ತೋಟ ನುಗ್ಗಿ ಬೇಲಿ, ಬೆಳೆ ಎಲ್ಲಾನೂ ಹಾಳು ಮಾಡುತ್ತವೆ. ಅವಕ್ಕೆ ಹೇಳುದಕ್ಕಾಗುತ್ತಾ, ಅವು ಪಾಪ ಮೂಕ ಪ್ರಾಣಿಗಳು. ಇವಳು ಕೂಗಾಡುವುದರಲ್ಲೂ ಒಂದರ್ಥ ಇದೆ ಒಂಟಿ ಹೆಂಗಸು ಕಷ್ಟಪಟ್ಟು ತೋಟ ನೋಡಿಕೊಂಡು ಜೀವನ ಸಾಗಿಸ್ತಿದ್ದಾಳೆ. ಇವಳದೇನು ತಪ್ಪಿದೆ" ಎಂದು ಗೊಣಗುತ್ತಾ ಒಳಗೆ ಬಂದರು ಗಿರ್ಜಕ್ಕ.
ಅವರು ಒಳ ಹೋಗುತ್ತಿದ್ದಂತೆ ಗಿರ್ಜಕ್ಕಾ ಅನ್ನುವ ಕೂಗು ಕೇಳಿಸಿತು. ಹಜಾರದಿಂದ ಇಣುಕಿದರೆ ಶಾಂತಿ ಅಂಗಳದಲ್ಲಿ ನಿಂತಿರೋದು ಕಂಡಿತು.
"ಏನೇ ಶಾಂತ... ಯಾಕೆ ಕೂಗಾಡ್ತಿ ಬೆಳಿಗ್ಗೆನೇ? ನೀನೆಷ್ಟು ಅರ್ಚಿದ್ರೂ ಅವನಿಗೆ ಅರ್ಥ ಆಗಲ್ಲ .. ಬಾ ಒಳಗೆ" ತಾವು ಈ ಊರಿಗೆ ಸೊಸೆಯಾಗಿ ಬಂದಾಗಿಂದ ಶಾಂತಿಯನ್ನು ಕಂಡ&nbs
p;ಗಿರಿಜಾಗೆ ಅವಳೆಂದರೆ ಏನೋ ಪ್ರೀತಿ. ಬಾಯಿ ಜೋರಾದರೂ ನ್ಯಾಯವಾಗಿ ನಡ್ಕೊತಾಳೆ ಒಳ್ಳೆ ಹೆಂಗಸು ಎನ್ನುವ ಸದ್ಭಾವನೆ.
"ಏನ್ಮಾಡೋದು ಹೇಳಿ ಗಿರ್ಜಕ್ಕ.?, ಬೇಲಿಯನ್ನೆಲ್ಲ ಪುಡಿ ಮಾಡಿದಾವೆ ಆ ಸೀತಾರಾಮ ಭಟ್ಟರ ಹಸುಗಳು. ಎಷ್ಟು ಹೇಳಿದರೂ ಕಟ್ಟಿ ಹಾಕಲ್ಲ . ಅದಕ್ಕೆ ನಿಮ್ಮ ಹತ್ತಿರ ಸಹಾಯ ಕೇಳೋಕೆ ಬಂದೆ" ಎಂದು ಬಂದ ಉದ್ದೇಶ ಅರುಹಿದಳು.
"ನಾನೇನೇ ಸಹಾಯ ಮಾಡೋದು... ನಾನು ಹೇಳಿದ್ರೆ ಕೇಳ್ತಾನ ಅವ" ಅರ್ಥವಾಗದೆ ಕೇಳಿದರು.
"ಅದೂ ಗಿರ್ಜಕ್ಕ, ರಾಮ ಒಮ್ಮೆ ಸೀತಾರಾಮ ಭಟ್ರ ಬಳಿ ಮಾತಾಡಿದ್ರೆ ಒಳ್ಳೆದಿತ್ತು.." ಹಿಂಜರಿಯುತ್ತಲೇ ಕೇಳಿದರು.
ಆ ಊರಿನಲ್ಲೆಲ್ಲಾ ಹಿರಿತಲೆ ಗಿರಿಜಕ್ಕ. ಅವೆರೆಂದರೆ ಎಲ್ಲರಿಗೂ ಗೌರವವೇ. ಎಲ್ಲರನೂ ತನ್ನ ಸ್ವಂತ ಮಕ್ಕಳಂತೆ ನೋಡಿದವರು ಅವರು . ಅವರ ಸದ್ಗುಣಗಳೇ ಮಗ ರಾಮ ಭಟ್ಟರಿಗೂ ಬಂದಿತ್ತು. ಅದೇ ಊರಿನ ಪದ್ಮನಾಭನ ಗುಡಿಯ ಅರ್ಚಕರಾಗಿ ಊರಿಗೆ ತನ್ನ ಕೈಲಾದ ಮಟ್ಟಿಗೆ ಒಳಿತನ್ನೇ ಮಾಡುತ್ತ ಬಂದಿದ್ದಾರೆ. ಇಡೀ ಊರೇ ಗಿರ್ಜಕ್ಕ ಹಾಗೂ ಅವರ ಮನೆಯವರನ್ನು ಗೌರವದಿಂದಲೇ ಕಾಣುತ್ತದೆ.
ಆದುದರಿಂದಲೇ ಶಾಂತಿ ಇವರ ಬಳಿ ಬುದ್ದಿ ಹೇಳಿಸೋಣ ಅಂದ್ಕೊಂಡು ಬಂದಿದ್ದು ಇವರ ಮನೆಗೆ.
ಅವಳ ಮಾತು ಕೇಳಿದ ಗಿರಿಜಾ "ನೋಡೋ ರಾಮ ಶಾಂತಿ ಪರವಾಗಿ ನೀನಾದ್ರೂ ಅವನ ಬಳಿ ಮಾತಾಡೋ ಒಮ್ಮೆ" ದೇವರ ಕೋಣೆಯೊಳಗೆ ಕೂತಿದ್ದ ಮಗನಿಗೆ ಅಲ್ಲಿಂದಲೇ ಕೂಗಿ ಹೇಳಿದರು.
ಅಷ್ಟರಲ್ಲಿ ಪೂಜೆ ಮುಗಿಸಿ ಆರತಿ ಹಿಡಿದು ಕೊಂಡೆ ಹೊರಬಂದು ಶಾಂತಕ್ಕ ಗಿರ್ಜಕ್ಕನಿಗೆ ಆರತಿ, ಪ್ರಸಾದ ಕೊಟ್ಟು
"ಆಯಿತು ಶಾಂತಕ್ಕ ನಾನು ಮಾತಾಡಿ ನೋಡ್ತೀನಿ ಸೀತಾರಾಮನ ಬಳಿ. ನೀನು ಬೆಳಿಗ್ಗೆ ಬೆಳಿಗ್ಗೆ ಹೀಗೆಲ್ಲಾ ಕೂಗಾಡಿ ನಿನ್ನ ಗಂಟಲು ನೋಯಿಸ್ಕೊಬೇಡ , ಮೊದಲೇ ಊರಲ್ಲಿ ಜನ ಆಡ್ಕೋತಿದ್ದಾರೆ ಅಶಾಂತಿಯ ತೋಟ ಅಂತ " ಚಿಕ್ಕ ವಯಸ್ಸಿನಿಂದ ಶಾಂತಿಯನ್ನು ನೋಡುತ್ತಾ ಬೆಳೆದ ಸಲುಗೆಯಿಂದಲೇ ಹೇಳಿ ನಕ್ಕರು.
"ಆಯಿತು ರಾಮ ನೀನು ಮಾತಾಡ್ತೀನಿ ಅಂದಮೇಲೆ ನಾನ್ಯಾಕೆ ಶಾಂತಿ ಅಂತ ಇಟ್ಟಿರೋ ಹೆಸರನ್ನು ಅಶಾಂತಿ ಅಂತ ಮಾಡಿಕೊಳ್ಳಲಿ ಹೇಳು?" ಎಂದು ಹೇಳಿ ಶಾಂತಕ್ಕನೂ ಅವರ ಜೊತೆ ನಕ್ಕರು.
ಕುಳಿತಲ್ಲಿಂದಲೇ ಗಡಿಯಾರದ ಕಡೆ ನೋಡಿದವರು ಲಗುಬಗೆಯಿಂದ ಎದ್ದು "ನಾನಿನ್ನು ಬರ್ತೀನಿ ಗಿರ್ಜಕ್ಕ, ದನಗಳಿಗೆ ಮೇವು ಹಾಕಿಲ್ಲ , ಹಾಲು ಕರ್ದಿಟ್ಟು ಹಾಗೇ ಇಲ್ಲಿಗೆ ಬಂದೆ " ಎನ್ನುತ್ತ ಹೊರಟರು. ಅವರು ಹೋದತ್ತಲೇ ನೋಡಿದ ಗಿರಿಜಾ
"ಹರಕು ಬಾಯಿಯಾದ್ರೂ ಪ್ರಾಮಾಣಿಕ ಹೆಣ್ಣು ಕಣೋ ರಾಮಾ, ಅವಳಿಗೊಮ್ಮೆ ಸಹಾಯ ಮಾಡೋ, ನೋಡೋಕ್ಕಾಗ್ತಿಲ್ಲ ಅವಳ ಗೋಳು. ಒಂಟಿ ಹೆಂಗಸು ಎಂದು ಎಲ್ಲರೂ ಅವಳನ್ನು ತಾತ್ಸಾರ ಮಾಡೋರೇ ಆದ್ರು ಈ ಊರಲ್ಲಿ" ಎಂದರು ಮಗನಿಗೆ.
ಅಂದೇ ರಾಮ ಭಟ್ಟರು ಸೀತಾರಾಮ ಭಟ್ಟರ ಬಳಿ ಮಾತಾಡಿದ್ರು ಕಾಣ್ತದೆ. ಮಾರನೇ ದಿನದಿಂದ ದನಗಳನ್ನು ಕಟ್ಟಿ ಹಾಕಲಾರಂಭಿಸಿದ್ದರು .
ಅಂದಿನಿಂದ ಅಶಾಂತಿಯ ತೋಟವಾಗಿದ್ದ ಶಾಂತಿಯ ತೋಟ ಮತ್ತೆ ಶಾಂತಿಯ ತೋಟವಾಯಿತು