ಬಂದೆಯಾ ಬಾಳಿನ ಬೆಳಕಾಗಿ
ಬಂದೆಯಾ ಬಾಳಿನ ಬೆಳಕಾಗಿ
'ಅತ್ತೆ ತಲೆಯ ಮೇಲೆ ಕೈ ಹೊತ್ತು ಕುಳಿತಿದ್ದರು', ಇಂದು ಏನು ಅಡುಗೆ ಮಾಡುವುದು ಎಂದು ಅತ್ತೆಯನ್ನು ಕೇಳಲು ಬಂದ ಸಂಜನಾ, ಈ ದೃಶ್ಯ ನೋಡಿ ದಂಗಾಗಿ ಬಾಗಿಲಲ್ಲೇ ನಿಂತಳು. ಅತ್ತೆ ಶಾರದಮ್ಮನನ್ನು ಆ ಸ್ಥಿತಿಯಲ್ಲಿ ಯಾವತ್ತೂ ನೋಡಿರಲಿಲ್ಲ ಅವಳು, ಏನಾಗಿರ ಬಹುದು ಎಂದು ತಿಳಿಯುವ ಕಾತುರ, ಆದರೆ ಕೇಳಿ ಅವರ ಮನಸ್ಸಿಗೆ ಘಾಸಿಗೊಳಿಸಿದರೆ ಎಂಬ ಆತಂಕ... 'ಈಗಲೇ ಮಾತನಾಡಿಸಿ ಅವರ ಮನಸ್ಸು ನೋಯಿಸುವುದು ಬೇಡ, ಕ್ಷಣ ಕಾಲ ಒಬ್ಬರೆ ಇರಲಿ', ಎಂದು ಸಂಜನ ಅಡುಗೆ ಮನೆಗೆ ನೆಡೆದಳು.
ಶಾರದಮ್ಮ ಬಹಳ ಗಟ್ಟಿ ಮಹಿಳೆಯಾಗಿದ್ದರು, ಚಿಕ್ಕ ವಯಸ್ಸಿನಲ್ಲಿ ಗಂಡನ ಕಳೆದುಕೊಂಡ ಬಳಿಕ ಬ್ಯಾಂಕಿನಲ್ಲಿ ದುಡಿಯುತ್ತ, 14 ವರ್ಷದ ಮಗ, 12 ವರ್ಷದ ಮಗಳನ್ನು, ಚೆನ್ನಾಗಿ ಓದಿಸಿ, ಇಂಜಿನೀಯರಿಂಗ್ ಮಾಡಿಸಿ, ಅವರು ತಮ್ಮ ಕಾಲ ಮೇಲೆ ನಿಲ್ಲುವಂತಾಗಲು ಶ್ರಮಿಸಿದ್ದರು. ಕಷ್ಟದ ಬಿಸಿ ಮಕ್ಕಳಿಗೆ ತಟ್ಟದಂತೆ ಕಾಳಜಿವಹಿಸಿ ನೋಡಿಕೊಂಡಿದ್ದರು. ಮೂರು ವರ್ಷದ ಹಿಂದಷ್ಟೇ ತಮ್ಮ ಮಗಳ ಮದುವೆ ಮಾಡಿ, ಈಗ ಅವರು ಕಟ್ಟಿದ ಮನೆಯಲ್ಲಿ ಒಬ್ಬರೆ ವಾಸಿಸುತಿದ್ದರು, ಮಗ ಸೊಸೆ, ಮಗಳು ಅಳಿಯ, ತಮ್ಮ ಜೊತೆಯಲ್ಲಿಯೇ ಇರುವಂತೆ ಎಷ್ಟು ಹೇಳಿದರು ಒಪ್ಪದೆ, ನನ್ನಲ್ಲಿ ಶಕ್ತಿಯಿರುವವರೆಗು, ಯಾರ ಮೇಲು ಅವಲಂಬಿತವಾಗಿದೆ ಒಬ್ಬಳೆಯಿರುವೆ ಎಂದು ಹೇಳುತ್ತಿದ್ದರು.
ಸಂಜನ ಆ ಮನೆಗೆ ಸೊಸೆಯಾಗಿ ಬಂದು ಐದು ವರ್ಷ ಕಳೆದಿತ್ತು, ಅವಳಿಗೆ ಯಾವಾಗಲು ನಗುತ್ತ, ಸ್ವಾವಲಂಬಿ ಜೀವನ ನಡೆಸುವ ಅತ್ತೆಯ ಬಗ್ಗೆ ಅಭಿಮಾನ. ಸಂಜನಳ ಯಾವ ಆಯ್ಕೆ, ಇಷ್ಟಗಳಿಗೆ ಅಡ್ಡಿ ಮಾಡದೆ, ತುಂಬು ಹೃದಯದಿಂದ ಪ್ರೋತ್ಸಾಹಿಸುತಿದ್ದರು ಶಾರದಮ್ಮ. ಬೇರೆ ಊರಿನಲ್ಲಿ ಇದ್ದರು ಕೂಡ, ತಿಂಗಳಲ್ಲಿ ಒಂದು ಸರಿಯಾದರು ಎರಡು ದಿನಗಳ ಮಟ್ಟಿಗಾದರು ಮಗ ಸೊಸೆ, ಬಂದು ಹೋಗುತ್ತಿದ್ದರು. ಹೋದ ತಿಂಗಳು, ಅನಿವಾರ್ಯ ಕಾರಣಗಳಿಂದ ಬರಲಾಗದಿದ್ದರಿಂದ, ಈ ತಿಂಗಳು ಎರಡು ದಿನ ರಜೆ ಹಾಕಿ, ಶನಿವಾರ ಭಾನುವಾರ ಸೇರಿಸಿ ನಾಲ್ಕು ದಿನಗಳಿಗೆ ಬಂದಿದ್ದರು.
'ತನ್ನಿಂದ ಏನಾದರು ತಪ್ಪಾಗಿರ ಬಹುದೆ? ಯಾಕೆ ಅತ್ತೆ ಒಂಥರಾ ಇದ್ದಾರೆ', ಎಂದು ಚಡಪಡಿಸುತ್ತಲೆ, ಅಡುಗೆ ಮಾಡಿ ಮುಗಿಸಿದಳು ಸಂಜನ. ಒಂದು ಸಲಿ ಹೋಗಿ ಮಾತನಾಡಿಸೋಣ ಎಂದು, ಶುಂಠಿ ಚಹಾ ತಯಾರಿಸಿ, ಎರಡು ಕಪ್ಪಿನಲ್ಲಿ ಬಿಸಿ ಬಿಸಿ ಚಹಾ ಹಾಕಿ, ಅತ್ತೆಯ ಕೋಣೆಯತ್ತ ನಡೆದಳು.
"ಅತ್ತೆ ಚಾಯ್!" ಎಂದು ಒಂದು ಕಪ್ಪನ್ನು ಅವರ ಮುಂದೆ ಹಿಡಿದಳು, "ಓ ಸಂಜನ, ನೀ ಮನೆಯಲ್ಲೇ ಇದ್ದಿಯಾ, ನೀನು ಸುಹಾಸ್ ಜೊತೆ ಹೊರಗಡೆ ಹೋಗಿದ್ದೀಯಾ ಅಂದ್ಕೊಂಡೆ" ಎನ್ನುತ್ತ ಚಹಾದ ಕಪ್ ತಗೊಂಡರು ಶಾರದಮ್ಮ. "ಇಲ್ಲ ಅತ್ತೆ, ನನ್ನ ಪ್ರೀತಿಯ ಅತ್ತೆ ಜೊತೆಗಿರುವ ಅಂತ ನಾನು ಹೋಗಲಿಲ್ಲ" ಎಂದು ನಸು ನಗುತ್ತ ಹೇಳಿದಳು ಸಂಜನ. ಶಾರದಮ್ಮನ ಮುಖದಲ್ಲಿ ಒಂದು ಪುಟ್ಟ ಮಂದಹಾಸ ಮೂಡಿತ್ತು, ಏನು ಹೇಳದೆ ಚಹಾ ಕುಡಿಯುತಿದ್ದರು. "ಏನಾಯಿತು ಅತ್ತೆ ಏಕೆ ಒಂಥರಾ ಇದ್ದೀರ, ಹುಷಾರಿಲ್ವಾ" ಕೇಳಿದಳು ಸಂಜನ. "ಇಲ್ಲ ಚೆನ್ನಾಗೆ ಇದ್ದೀನಲ್ಲ, ನೀವು ಈ ಸಲಿ ನಾಲ್ಕು ದಿನಕ್ಕೆ ಬಂದಿದ್ದು ತುಂಬಾ ಖುಷಿ ನನಗೆ, ಈ ನಾಲ್ಕು ದಿನ ಏನೇನು ಮಾಡ ಬಹುದು ಅಂತ ಯೋಚಿಸುತ್ತಿದ್ದೆ, ಆ ಹೊಸ ಚಿತ್ರ ಸಂಗ್ರಹಾಲಯಕ್ಕೆ ಒಂದು ದಿನ ಹೋಗೋಣ, ಇನ್ನೂ ಎಲೆಲ್ಲಿ ಹೋಗಬಹುದು ಎಂದು ಪಟ್ಟಿ ಮಾಡುತ್ತಿದ್ದೆ ಅಷ್ಟೇ" ಅಂದರು ಶಾರದಮ್ಮ. "ಇಲ್ಲ ಅತ್ತೆ ನೀವು ನನ್ನಿಂದ ಏನೋ ಮುಚ್ಚಿಡ್ತಯಿದ್ದೀರಾ... ನನ್ನಿಂದ ಏನಾದರೂ ತಪ್ಪಾಯಿತಾ ಅತ್ತೆ" ಕೇಳಿದಳು ಸಂಜನ. "ಛೆ, ಛೆ, ಇಲ್ಲ ಮಗಳೇ, ನೀನೇನು ಮಾಡಿಲ್ಲ...
ಹಾ... ನನಗೆ ಬೇಜಾರಾಗಿತ್ತು, ಈಗ ಕೆಲಸದಿಂದ ನಿವೃತ್ತಿ ಬೇರೆ ಆಗಿರುವುದರಿಂದ, ಹೊತ್ತೆ ಹೋಗುತ್ತಿಲ್ಲ, ಯಾವಾಗಲು ಕೆಲಸದಲ್ಲೇ ಮುಳುಗಿದ್ದರಿಂದ ಸ್ನೇಹಿತರು ಕಡಿಮೆ, ಟಿ.ವಿ ನೋಡುವುದು ಕಡಿಮೆ, ನನ್ನ ಜವಾಬ್ದಾರಿ ಎಲ್ಲ ಮುಗಿಸಿದ್ದೇನೆ, ಈಗೀಗ ಎಷ್ಟೇ ವ್ಯಸ್ಥವಾಗಿರಲು ಪ್ರಯತ್ನಿಸಿದರು, ಜೀವನ ಇಷ್ಟೇನಾ ಎಂದು ಅನಿಸದೆಯಿರದು, ಜೀವನವೇ ಬೇಸರವಾಗಿ ಬಿಟ್ಟಿದೆ ಸಂಜನ " ಎಂದು ತಮ್ಮ ದುಃಖ ತೋಡಿಕೊಂಡರು ಶಾರದಮ್ಮ. ಅವರ ಮಾತು ಕೇಳಿ ದಂಗಾದರು, ತೋರಿಸಿ ಕೊಳ್ಳದೆ "ಏನೇನೋ ಯೋಚಿಸಬೇಡಿ ಅತ್ತೆ, ನಿಮ್ಮ ಜೊತೆಗೆ ನಾವೆಲ್ಲ ಇದ್ದೀವಲ್ಲ, ಏಳಿ ಇವಾಗ, ಕೈ ಕಾಲು ತೊಳೆಯಿರಿ ಊಟ ಮಾಡೋಣ" ಎಂದು ಹೊರಡಿಸಿದಳು.
ಆದರೆ ಇದರ ಬಗ್ಗೆಯೇ ಯೋಚಿಸುತಿದ್ದ ಸಂಜನಾಗೆ ಅರ್ಥವಾಗಿದ್ದು, ಇಷ್ಟು ವರ್ಷ ಹೊರಗಡೆ ಹಾಗು ಮನೆಯಲ್ಲಿ ದುಡಿದ ಜೀವಕ್ಕೆ, ಈಗ ಮನೆಯ ನಾಲ್ಕು ಗೋಡೆಗಳ ಮಧ್ಯಯಿರುವುದು ಹಿಂಸೆ ಆಗುತ್ತಿತ್ತು, ಸ್ನೇಹಿತರ ಸಂಪರ್ಕ ಇರದ ಅವರಿಗೆ ಒಂಟಿತನ ಕಾಡುತಿತ್ತು, ಅವರ ಮನಸ್ಸಿನ ಬೇಸರ ನೀಗಿಸಲು,ಕ್ರಿಯಾತ್ಮಕ ಚಟುವಟಿಕೆಯ ಅವಶ್ಯಕತೆಯಿದೆ ಎಂದು. ತನ್ನ ಅತ್ತೆಗೆ ಚಿತ್ರಕಲೆಯಲ್ಲಿ ಇದ್ದ ಆಸಕ್ತಿಯ ಬಗ್ಗೆ ಅರಿವಿದ್ದ ಸಂಜನ, ಒಂದು ಯೋಜನೆ ಮಾಡಿದಳು.
ಅತ್ತೆ ರೆಡಿನಾ? ಹಾ, ನಾ ರೆಡಿ, ಬೇಗ ಬಾ ಚಿತ್ರಸಂಗ್ರಹಾಲಯ ಮುಚ್ಚಿದರೆ ಕಷ್ಟ ಎಂದು ಅವಸರಿಸಿ ಬೇಗನೆ ಇಬ್ಬರು ಹೋಗಿ ತಲುಪಿದರು. ಅಲ್ಲಿ ತೂಗು ಹಾಕಿದ್ದ ಪ್ರತಿ ಚಿತ್ರಪಟವನ್ನು ಆಸಕ್ತಿಯಿಂದ ನೋಡುತ್ತಿದ್ದ ಅತ್ತೆಗೂ ಮನೆಯಲ್ಲಿ ಉದಾಸೀನರಾಗಿ ಕುಳಿತಿದ್ದ ಅತ್ತೆಗೂ ಯಾವ ಹೊಲಿಕೆಯು ಇರಲಿಲ್ಲ, ಹಾಗಿದ್ದರೆ ತನ್ನ ಯೋಜನೆಯ ಬಗ್ಗೆಯಿದ್ದ ಅಲ್ಪಸ್ವಲ್ಪ ಸಂಶಯಗಳು ನಿವಾರಣೆ ಆಯಿತು ಸಂಜನಾಗೆ.
ಆ ಚಿತ್ರಸಂಗ್ರಹಾಲಯದಲ್ಲಿ ನಡೆಯಲಿದ್ದ, ಚಿತ್ರಕಲೆಯಲ್ಲಿ ಒಂದು ವರ್ಷದ ಉನ್ನತ ತರಬೇತಿಯ ಬಗ್ಗೆ ಮಾಹಿತಿ ಕಲೆಹಾಕಿದ್ದಳು ಸಂಜನ, ಅತ್ತೆಯನ್ನು ಆ ತರಬೇತಿಗೆ ನೊಂದಾಯಿಸಿದ್ದಳು, ಆ ದಿನವೇ ಮೊದಲ ಕ್ಲಾಸ್! "ಈ ವಯಸ್ಸಿನಲ್ಲಿ ಇದೆಲ್ಲ ಯಾಕಮ್ಮ ನನಗೆ" ಎಂದು ಒಳಗೆ ಹೋದವರು, ಒಂದು ಘಂಟೆ ತರಗತಿ ಮುಗಿಸಿ, ಎರಡು ಜನ ಹೊಸ ಗೆಳತಿಯರೊಂದಿಗೆ ಹೊಸ ಹುರುಪಿನಿಂದ ಅಲ್ಲೇ ಕಾಯುತ್ತ ನಿಂತಿದ್ದ ಸಂಜನಳ ಹತ್ತಿರ ಬಂದರು ಶಾರದಮ್ಮ, "ಥ್ಯಾಂಕ್ಯು ಸಂಜನ, ಇವತ್ತು ನೀನು, ನಿಜವಾದ ನನ್ನನ್ನು, ನನ್ನೊಂದಿಗೆ ಪರಿಚಯಿಸಿದೆ" ಎಂದು ಸೊಸೆಯನ್ನು ತಬ್ಬಿಕೊಂಡರು. ಅತ್ತೆ ಸೊಸೆ ಇಬ್ಬರ ಕಣ್ಣುಗಳು ಸಂತಸದಿಂದ ತೇವವಾಗಿದ್ದವು!
