STORYMIRROR

Sushma Bijoor

Children Stories Inspirational

2  

Sushma Bijoor

Children Stories Inspirational

ಬೀಜದ ವಿಸ್ಮಯ (ಮಕ್ಕಳ ಕಥೆ)

ಬೀಜದ ವಿಸ್ಮಯ (ಮಕ್ಕಳ ಕಥೆ)

3 mins
151

ಹೀರಾಳ ಬೆಳಿಗ್ಗೆ ದಿನವು ಗಡಿಬಿಡಿಯಿಂದಲೇ ಶುರುವಾಗುತಿತ್ತು. ಬೆಳಿಗ್ಗೆ ಎದ್ದೇಳು, ಸ್ಕೂಲ್ ಗೆ ರೆಡಿಯಾಗು, ಹೊರಡು...


ಹೀರಾ ಹನ್ನೊಂದು ವರ್ಷದ ಮುದ್ದಾದ ಹುಡುಗಿ. ಯಾವಾಗಲು ಖುಷಿ ಖುಷಿಯಾಗಿ, ತನ್ನ ಸುತ್ತಮುತ್ತಲು ಸಂತೋಷ ಪಸರಿಸುತ್ತಾ, ಚಟುವಟಿಕೆಯಿಂದ ಓಡಾಡುತ್ತಿರುವಳು.


ಹೀರಾಳಿಗೆ ತನ್ನ ಬೆಳಿಗ್ಗೆ ಸುಂದರವಾಗಿ, ಶಾಂತವಾಗಿ ಶುರುವಾಗಬೇಕು ಎಂಬ ಆಸೆ.


ಅವಳ ಅಪ್ಪ ಅಮ್ಮ ಕೆಲಸಕ್ಕೆ, ಅವಳು ಸ್ಕೂಲ್ ಗೆ ತೆರಳುವ ಮುಂಚೆ ಅವರೆಲ್ಲರೂ ಜೊತೆ ಕೂತು ಸ್ವಲ್ಪ ಹೊತ್ತು ಆರಾಮವಾಗಿ ಕಾಲ ಕಳೆಯ ಬೇಕು ಎಂಬ ಆಸೆ.


ಆದರೆ ಅವಳ ಅಪ್ಪ ಅಮ್ಮ ಕೂಡ ಪಾಪ ಏನು ಮಾಡಿಯಾರು, ಅವರಿಗೂ ಆಫೀಸ್ ಗೆ ಹೋಗುವ ಆತುರ, ಆ ಗಡಿಬಿಡಿಯಲ್ಲಿ ಸುಸ್ತಾಗಿ ಹೋಗುವರು. ಸ್ವಲ್ಪ ಹೊತ್ತು ಸುಮ್ಮನೆ ಕೂತು ಕಾಲ ಕಳೆಯಲು ಸಮಯವೇ ಇರುತ್ತಿರಲಿಲ್ಲಾ.


ಹೀರಾಳಿಗೆ, ದಿನ ಬೆಳಿಗ್ಗೆ ಸ್ವಲ್ಪ ಸಂತಸ, ನೆಮ್ಮದಿ ತರುತಿದುದ್ದು ಅವಳ ಪ್ರೀತಿಯ ಗಿಡಗಳು ಮಾತ್ರ...


ಹೀರಾ ಅಪ್ಪಾರ್ಟ್ಮೆಂಟ್ ನಲ್ಲಿ ವಾಸವಾಗಿದ್ದರು, ಬಾಲ್ಕನಿಯಲ್ಲಿ ಸುಂದರ ಗಿಡಗಳನ್ನು ಬೆಳೆಸಿದ್ದಳು. ಅವಳ ಪ್ರೀತಿಯ ಆರೈಕೆಯಲ್ಲಿ, ಗಿಡಗಳು ಸೊಂಪಾಗಿ ಬೆಳೆದಿದ್ದವು. ಹೀರಾ, ದಿನಾ ಬೆಳಿಗ್ಗೆ ಬೇಗ ಏಳುವಳು,...ಗಿಡಗಳೊಂದಿಗೆ ಕಾಲ ಕಳೆಯಲು, ಅವುಗಳ ಜೊತೆ ಮಾತನಾಡಲು, ಅವುಗಳಿಗಾಗಿ ಹಾಡು ಹೇಳಲು, ಅವಳ ಗಿಡಗಳೆಲ್ಲಾ ಖುಷಿಯಾಗಿರುವರು ಎಂದು ಖಾತ್ರಿ ಆಗಲು! ಅವಳು ವಾರಾಂತ್ಯವನ್ನಂತು ಗಿಡಗಳ ಬೇಕು ಬೇಡಗಳನ್ನು ಗಮನಿಸುತ್ತಾ ಕಾಲಕಳೆಯುತಿದ್ದಳು.


ಒಂದು ಸಂಜೆ, ಹೀರಾ ಅವಳ ಮನೆಯ ಹತ್ತಿರವಿದ್ದ ಪಾರ್ಕಿನಲ್ಲಿ ವಿಹರಿಸುತಿದ್ದಳು, ಅಲ್ಲಿದ್ದ ಗಿಡ ಮರಗಳ ಸೌಂದರ್ಯ ಆಸ್ವಾದಿಸುತ್ತಾ, ಶುದ್ದ ಗಾಳಿ ಸವಿಯುತ್ತಾ ಹೋಗುತ್ತಿರ ಬೇಕಾದರೆ, ಅವಳಿಗೆ ಒಂದು 'ಬೀಜ' ಕಾಣಿಸಿತು. ಅದು ಕಾಫಿ ಬೀಜದ ಗಾತ್ರದಾಗಿತ್ತು, ಅದು ಅವಳಿಗೆ ಆಕರ್ಷಕವಾಗಿ ಕಾಣಿಸಿದ್ದು ನೀಲಿ ಬಣ್ಣದಿಂದಾಗಿ! ಹೀರಾ ಎಂದೂ ನೀಲಿ ಬಣ್ಣದ ಬೀಜ ನೋಡಿರಲಿಲ್ಲಾ...ಅವಳಿಗೆ ಮೊದಲು ಅದೊಂದು ಮಣಿಯಿರಬಹುದು ಎಂದು ಅನಿಸಿತು, ಆದರೆ ಸೂಕ್ಷ್ಮವಾಗಿ ಗಮನಿಸಿದಾಗ ಅದರಲ್ಲಿ ಜೀವವಿರುವ ಆಭಾಸವಾಯಿತು ಹೀರಾಳಿಗೆ! ಹೌದು ಅದೊಂದು ಬೀಜವೇ ಆಗಿತ್ತು. ಹೀರಾಳಿಗೆ ಬೀಜಗಳ ಬಗ್ಗೆ ಸಾಕಷ್ಟು ಜ್ಞಾನವಿದ್ದರು, ಇದು ಯಾವ ಗಿಡದ ಬೀಜ ಎಂದು ಉಹಿಸಲು ಸಾಧ್ಯವಾಗಿರಲಿಲ್ಲಾ. ಅದನ್ನು 'ಮನೆಗೆ ತೆಗೆದುಕೊಂಡು ಹೋಗಿ ನೆಟ್ಟು, ಯಾವ ಗಿಡ ಬರುವುದೆಂದು ನೋಡುವ' ಎಂದು ನಿರ್ಧರಿಸಿದಳು.


ಹೀರಾ ಮನೆ ತಲುಪುತಿದ್ದಂತೆ, ಗಿಡ ನೆಡಲು ಬೇಕಾದ ಮಣ್ಣು, ಅದರಲ್ಲಿ ಗಿಡಕ್ಕೆ ಬೇಕಾದ ಪೌಷ್ಟಿಕಾಂಶ ಸೇರಿಸಿ ಒಂದು ಪಾಟ್ ನಲ್ಲಿ ಹಾಕಿದಳು. ನಂತರ ಆ ನೀಲಿ ಬೀಜವನ್ನು ಸಾವಧಾನವಾಗಿ, ಆ ಪಾಟ್ ನಲ್ಲಿ ಇಳಿಸಿದಳು, ಸ್ವಲ್ಪ ನೀರು ಹಾಕಿ, 'ಏನು ವಿಸ್ಮಯ ಹೊತ್ತು ತರುವುದು ಈ ಬೀಜ' ಎಂದು ನಿರೀಕ್ಷಿಸುತ್ತಾ ಒಳ್ಳೆಯ ಬೆಳಕು ಬರುವ ಜಾಗದಲ್ಲಿ ಇರಿಸಿದಳು. ಆದರೆ ಅವಳು ನೀರಿಕ್ಷಿಸಿರದ ವಿಸ್ಮಯ ಅವಳ ನಿರೀಕ್ಷೆಯಲಿತ್ತು!


ಮರುದಿನ ಬೆಳಿಗ್ಗೆ, ಒಂದು ಆಹ್ಲಾದಕರ ಸುಗಂಧ ಅವಳನ್ನು ಎಬ್ಬಿಸಿತು, ಅವಳಿಗೆ ಅರಿವಿರದ ಆ ಸುಗಂಧ ಅವಳನ್ನು ತನ್ನೆಡೆಗೆ ಎಳೆದು ಕೊಂಡು ಹೋಯಿತು. ಆ ಸುಗಂಧದ ಜಾಡಲ್ಲಿ ನೆಡೆದ ಅವಳು ತನ್ನ ಬಾಲ್ಕನಿ ತಲುಪಿದಲು. ಏನ್ ಆಶ್ಚರ್ಯ! ನಿನ್ನೆ ಅವಳು ಬೀಜ ನೆಟ್ಟಿದ್ದ ಪಾಟ್ ನಲ್ಲಿ ಒಂದು ಸುಂದರ ಗಿಡ ಬೆಳೆದು ನಿಂತಿತ್ತು! ಗಾಡ ಹಸಿರಿನ ದೊಡ್ಡ ಎಲೆಗಳು ಆ ಗಿಡದ ಸಧೃಡ ಕಾಂಡದ ತುಂಬಾ ಹಬ್ಬಿ ಕೊಂಡಿದ್ದವು, ಅವುಗಳ ಮಧ್ಯ ಒಂದು ಭವ್ಯವಾದ ನೀಲಿ ಹೂವು ಸೂರ್ಯನ ಕಿರಣಗಳಲ್ಲಿ ನಳನಳಿಸುತ್ತಾ ಅರಳಿ ನಿಂತಿತ್ತು! ಆ ಹೂವಿನ ಆಹ್ಲಾದಕರ ಸುಗಂಧವು ಎಲ್ಲೆಡೆ ಪಸರಿಸುತಿತ್ತು ಅದು ಎಷ್ಟು ಪ್ರಬಲವಾಗಿತ್ತೆಂದರೆ, ಅವಳ ಅಪ್ಪ ಅಮ್ಮನನ್ನು ಕೂಡ ತನ್ನೆಡೆಗೆ ಎಳೆದು ತಂದಿತ್ತು. ಅವರು ಆಗಲೇ ಅಲ್ಲಿ ಮೂಕವಿಸ್ಮಿತರಾದಂತೆ ನಿಂತಿದ್ದರು!


ಯಾವಾಗಲು ಕೆಲಸದ ಗಡಿಬಿಡಿಯಲ್ಲಿರುತಿದ್ದ ಅವಳ ಅಪ್ಪಾ ಅಮ್ಮಾ ಅಲ್ಲಿ ಸುಮ್ಮನೆ ನಿಂತಿದ್ದರು, ಹೀರಾ ಕೂಡ ಅಲ್ಲಿ ಸುಮ್ಮನೆ ನಿಂತಳು. ಅವರೆಲ್ಲರೂ ಆ ಸುಂದರ ಭಾವದಲ್ಲಿ, ಆಹ್ಲಾದಕತೆಯಲ್ಲಿ, ಕಳೆದು ಹೋದಂತೆ, ಆ ಸುಗಂಧದ, ಆ ಹೂವಿನ, ಆ ಗಿಡದ ಪ್ರಭೆಯಲ್ಲಿ ಮುಳುಗಿ ಹೋದಂತೆ ಸುಮ್ಮನೆ ನಿಂತರು.


ಅವರೆಲ್ಲರ ಮನಸ್ಸಿಗೂ ಹಿತವೆನಿಸುತಿತ್ತು, ಅವರೆಲ್ಲರೂ ತಮ್ಮ ದಿನನಿತ್ಯದ ಕೆಲಸ ಶುರುಮಾಡುವ ಮೊದಲು, ಕೆಲಹೊತ್ತು ದಿನನಿತ್ಯದ ಜಂಜಾಟವನ್ನು ಮರೆತು ಆಹ್ಲಾದಕರ ಸಮಯವನ್ನು ಅಲ್ಲಿ ಕಳೆದರು, ಅವರ ಮನದ ತುಂಬಾ ನೆಮ್ಮದಿ, ಸಂತೋಷ, ಸಮಾಧಾನ ನೆಲೆ ಮಾಡಿತ್ತು. ಆ ಅನುಭವದಿಂದ ಎಷ್ಟು ಪ್ರಭಾವಿತರಾದರೆಂದರೆ, ತಮ್ಮ ಪ್ರತಿ ಬೆಳಗ್ಗೆಯನ್ನು, ಜೊತೆಗೆ ಕೂತು, ಕೆಲಹೊತ್ತು ಗಿಡಗಳ ಸಾನಿಧ್ಯದಲ್ಲಿ ಕಳೆಯುವ ದಿನಚರಿ ಪ್ರಾರಂಭಿಸಿದರು. ಹೀಗೆ ಹೀರಾಳ ಎಲ್ಲ ಆಸೆಗಳು ನೆರವೇರಿದವು! ಅಲ್ಲಿಗೆ ನಿಲ್ಲಿಸಲಿಲ್ಲಾ ಹೀರಾ... ಆ ಗಿಡಗಳಿಂದ ಮತ್ತೆ ಉದುರಿದ ಬೀಜಗಳನ್ನು ಅವಶ್ಯಕತೆ ಇರುವವರಿಗೆ ಹಂಚಿದಳು, ಅವರೂ ಪ್ರಕೃತಿಯ ಸವಿಉಣ್ಣುವಂತೆ ಮಾಡಿದಳು!


ಪ್ರೀತಿಯ ಮಕ್ಕಳೆ, ನಮ್ಮ ಬಳಿ ಆ ನೀಲಿ ಬೀಜ ಇರದಿದ್ದರೇನಂತೆ? ನಮ್ಮ ಬಳಿ ಆ ಅನುಭವವನ್ನು, ಆ ವಿಸ್ಮಯವನ್ನು ರಚಿಸುವ ಮಾರ್ಗವಿರುವುದು! ಅದಕ್ಕೆ ಬೇಕಾಗಿದ್ದು ಸ್ವಲ್ಪ ಜಾಗ ಮತ್ತು ಸ್ವಲ್ಪ ಗಿಡಗಳು! ಗಿಡಗಳು ನಮ್ಮ ಮನಸ್ಸನ್ನು ಮುದಗೊಳಿಸಿ, ಸಕಾರಾತ್ಮಕತೆ ಹಾಗು ಆಹ್ಲಾದಕರ ಅನುಭವ ಮೂಡಿಸುವವು , ಗಿಡಗಳ ಜೊತೆ, ಪ್ರಕೃತಿಯಲ್ಲಿ ಕಾಲ ಕಳೆಯುವುದರಿಂದ, ಏಕಾಗ್ರತೆ ಹೆಚ್ಚುವುದು. ನಾವು ಹೆಚ್ಚು ಸೃಜನಶೀಲರಾಗಿ, ನೆಮ್ಮದಿ, ಸಂತಸ ನಮ್ಮ ಮನ ತುಂಬುವುದು. ಇದರ ಜೊತೆಗೆ, ಗಿಡಗಳಿಗೆ ಕಾಳಜಿಯಿಂದ ಆರೈಕೆ ಮಾಡುವ ಖುಷಿಯು ಕೂಡ ದೊರೆಯುವುದು! ಹಾಗಿದ್ದರೆ ಇನ್ನೇಕೆ ತಡ? ಬನ್ನಿ ಎಲ್ಲರೂ ಗಿಡ ನೆಡೋಣಾ, ಪ್ರಕೃತಿಯ ಸವಿ ಸವಿಯೋಣ...!


Rate this content
Log in