ಪುಟಾಣಿ ಇಲಿಮರಿಯ ಪ್ರಸಂಗ! (ಭಾಗ: ೧) (ಮಕ್ಕಳ ಕಥೆ)
ಪುಟಾಣಿ ಇಲಿಮರಿಯ ಪ್ರಸಂಗ! (ಭಾಗ: ೧) (ಮಕ್ಕಳ ಕಥೆ)
ಒಂದು ಚಿಕ್ಕ ಊರು, ಆ ಚಿಕ್ಕ ಊರಿನಲ್ಲಿ ಒಂದು ಪುಟ್ಟ ಮನೆ, ಆ ಪುಟ್ಟ ಮನೆಯಲ್ಲಿತ್ತು ಒಂದು ಪುಟಾಣಿ ಇಲಿ. ಆ ಪುಟಾಣಿ ಇಲಿಮರಿಗಿತ್ತು ಒಂದು ದೊಡ್ಡ ಕೆಲಸ! ಆ ಮನೆಯ ಎಂಟು ವರ್ಷದ ಮಗಳು ತಿಂಡಿ ತಿನ್ನುವುದನ್ನೇ ನೋಡುತ್ತ ಕೂರುವ ದೊಡ್ಡ ಕೆಲಸ! ದೊಡ್ಡ ಕೆಲಸ ಏಕೆಂದರೆ, ಅವಳು ತಿನ್ನಲು ತುಂಬಾ ಸಮಯ ತೆಗೆದು ಕೊಳ್ಳುತ್ತಿದ್ದಳು. ತಾಟಲ್ಲಿ ಇರುವುದನ್ನೇ ಮತ್ತೆ ಮತ್ತೆ ಕಲಸಿ ಕಲಸಿ ಬಾಯಿಗೆ ಹಾಕಿ ಮುಗಿಸುವಷ್ಟರಲ್ಲಿ ಬಹಳ ಹೊತ್ತಾಗುತ್ತಿತ್ತು. ಅದನ್ನು ಲೆಕ್ಕಿಸದೆ ಇಲಿ ಮರಿ ಸಹನೆಯಿಂದ ಅಲ್ಲೇ ನೋಡುತ್ತ ಕುಳಿತಿದ್ದರೆ ಕೊನೆಯಲ್ಲಿ ಪ್ರತಿಫಲ ಮಾತ್ರ ದೊಡ್ಡದು ಅಂತ ಆ ಇಲಿಮರಿಗೆ ಚೆನ್ನಾಗಿ ಗೊತ್ತಿತ್ತು.
ಅವಳು ತಿಂದು ಎದ್ದ ಮೇಲೆ ಅವಳ ತಾಟಿನ ಸುತ್ತಲು ಮೂಡಿರುತ್ತಿದ್ದ ತಿಂಡಿಯ ಚಿತ್ತಾರವನ್ನು ಅವಳ ಅಮ್ಮ ಬೈಯುತ್ತಲೇ ಸ್ವಚ್ಛ ಮಾಡಿ ಕಸದ ಬುಟ್ಟಿಗೆ ಹಾಕಿದ ಕೂಡಲೇ, ಇಷ್ಟೊತ್ತು ಸುಮ್ಮನೆ ಕುಳಿತು ಕಾಯುತ್ತಿದ್ದ ಇಲಿಮರಿ ಛಂಗನೆ ಹಾರಿ ಕಸದ ಬುಟ್ಟಿಯೊಳಗೆ ಇಳಿದು ಖುಷಿಯಿಂದ ಎಲ್ಲವನ್ನು ಖಾಲಿ ಮಾಡುತ್ತಿತ್ತು!
ಇನ್ನೂವರೆಗು ಪೇಪರನಷ್ಟೇ ತಿಂದು, ಬೇರೆಯಾವ ಪದಾರ್ಥಗಳನ್ನು ಅನ್ವೇಷಿಸಿ ತಿನ್ನದ ಆ ಇಲಿಮರಿಗೆ, ಖಾರಾ, ಹುಳಿ, ಸಿಹಿ ಹೀಗೆ ವಿವಿಧ ಸ್ವಾದದ ವಿಧ ವಿಧ ತಿಂಡಿ ಎಷ್ಟು ಇಷ್ಟವಾಗಿತ್ತೆಂದರೆ, ಅವಳು ಯಾವಾಗ ತಿನ್ನಲು ಕೂರುವಳು, ನನಗೇನು ತಿನ್ನಲು ಸಿಗುವುದು ಅಂತ ದಿನಾ ಕಾದು ಕುಳಿತಿರುತ್ತಿತ್ತು ಪುಟಾಣಿ ಇಲಿಮರಿ!
ಈಗಂತೂ ಶಾಲೆಗೆ ರಜೆಯಂತ ಆ ಮಗಳು ಮನೆಯಲ್ಲೇ ಇರುತ್ತಿದ್ದಳು. ಮೇಘಾ ಮೇಘಾ ಅಂತ ಎಲ್ಲರೂ ಕರೆಯುದನ್ನ ಕೇಳಿ ಅವಳ ಹೆಸರು ಮೇಘಾ ಇರಬಹುದು ಅಂತ ಉಹಿಸಿತ್ತು ಇಲಿಮರಿ. ಇಷ್ಟು ದಿನ ಮೂರು ಸಲಿ ಮನೆಯಲ್ಲಿ ತಿನ್ನುತ್ತಿದ್ದ ಮೇಘಾ ಈಗ ಐದು ಸಲಿ ತಿನ್ನಲು ಶುರುಮಾಡಿದಾಗ ಇಲಿಮರಿಗಂತೂ ಖುಷಿಯೋ ಖುಷಿ!
style="color: rgb(0, 0, 0);">ಇದರಿಂದಾಗಿಯೋ ಎನೋ, ಮೇಘಾ ಎಂದರೆ ಇಲಿಮರಿಗೆ ಒಂಥರಾ ಪ್ರೀತಿ. ಅವಳ ಹೆಸರು ಕೇಳಿದಾಕ್ಷಣ ಕಿವಿ ನೆಟ್ಟಗೆ ಮಾಡಿ ಅದು ಅಡಗಿ ಕುಳಿತಿರುತ್ತಿದ್ದ ಬಿಲದಿಂದ ಹೊರಗೆ ಇಣುಕುತಿತ್ತು. ಅವಳು ತನ್ನ ಅಣ್ಣನೊಂದಿಗೆ ಆಡಲು ಹೊರಟರೆ ತಾನೂ ಅವರಿಬ್ಬರ ಆಟ ನೋಡುತ್ತ ಕುಳಿತಿರುತ್ತಿತ್ತು, ಅವಳು ಪುಸ್ತಕ ಓದುವಾಗ, ಟೀವಿ ನೋಡುವಾಗ, ಅವಳ ಹಿಂದೆ, ಅವಳಿಗೆ ಗೊತ್ತಾಗದಂತೆ ಕುಳಿತಿರುತ್ತಿತ್ತು.
ಒಂದು ದಿನ ಅಣ್ಣ ತಂಗಿ ಆಟವಾಡುತ್ತಿದ್ದಾಗ, ಯಾವುದೋ ಕಾರಣಕ್ಕೆ ಇಬ್ಬರು ಜಗಳ ಮಾಡತೊಡಗಿದರು. ಇಲಿಮರಿಗೆ ಅಲ್ಲಿ ಏನಾಗುತ್ತಿದೆ ಎಂದು ತಿಳಿಯಲ್ಲಿಲ್ಲಾ. ಆಗ ಆಣ್ಣ ಮೇಘಾಗೆ ಹೊಡೆದು ಅವಳು ಅಳಲು ಶುರುಮಾಡಿದಾಗಲೇ ಇಲಿಮರಿಗೆ ಅವಳು ದುಃಖದಲ್ಲಿದ್ದಾಳೆ ಎಂದು ತಿಳಿದಿದ್ದು. ಅವಳ ದುಃಖ ಕಂಡು ಇಲಿಮರಿಗೂ ಪಾಪ, ತುಂಬಾ ಬೇಸರವಾಯಿತು, ಜೊತೆಗೆ ಸ್ವಲ್ಪ ಸಿಟ್ಟು ಕೂಡ ಬಂದಿತು.
ಆ ಬೇಜಾರಿನಲ್ಲಿ ಅವಳ ಅಣ್ಣನ ಹಿಂಬಾಲಿಸುತ್ತ ಹೋದ ಇಲಿ, ಅವನು ತನ್ನ ಕಥೆ ಪುಸ್ತಕಗಳನ್ನು ಆಸಕ್ತಿಯಿಂದ ಜೋಡಿಸುವುದನ್ನು ನೋಡಿ ಒಂದು ಉಪಾಯ ಮಾಡಿತು. ಅವನು ಪುಸ್ತಕಗಳನ್ನು ಅಚ್ಚುಕಟ್ಟಾಗಿ ಜೋಡಿಸುವವರೆಗೂ ಅಲ್ಲೇ ಕಾದು ಕೂತು ಅವನು ಅಲ್ಲಿಂದ ಹೋದ ಕೂಡಲೇ ಛಕಛಕನೇ ಓಡಿ, ಪುಸ್ತಕಗಳ ಮೇಲೆ ತನ್ನ ಹಲ್ಲಿನ ಕತ್ತರಿ ಪ್ರಯೋಗ ಇನ್ನೇನು ಮಾಡಬೇಕು ಅಷ್ಟರಲ್ಲಿ, "ಅಮ್ಮಾ, ಅಪ್ಪಾ ಅಣ್ಣಾ ಇಲ್ಲಿ ಬನ್ನಿ , ಇಲಿ ಇಲಿ " ಅಂತ ಜೋರಾಗಿ ಕೂಗುವ ಮೇಘಾಳ ಸ್ವರ ಕೇಳಿತು. ಅಮ್ಮ, ಅಪ್ಪ, ಅಣ್ಣಾ ಎಲ್ಲರು ಅಲ್ಲಿ ಬರುವಷ್ಟರಲ್ಲಿ ಇಲಿ ತನ್ನ ಕೆಲಸ ನಿಲ್ಲಿಸಿ ಓಡಲು ಸಜ್ಜಾಯಿತು. ಮೇಘಾ ಮತ್ತು ಅವಳ ಅಣ್ಣ ಇಲಿಯನ್ನು ಬೆನ್ನಟ್ಟಿದರು. ಇಲಿ ಹೇಗೋ ಹೀಗೋ ಅವರ ಕಣ್ಣು ತಪ್ಪಿಸಿ ತನ್ನ ಬಿಲ ಸೇರಿ ಕೊಂಡಿತು. "ಅಬ್ಬಾ ಉಸ್ಸಪ್ಪಾ!" ಎಂದು ನಿಟ್ಟುಸಿರು ಬಿಟ್ಟಿತು!
ಮುಂದುವರೆಯುವುದು....