ಧರಿಣಿಯ ಮಿಯಾಂವಕ್ಕ (ಮಕ್ಕಳ ಕಥೆ)
ಧರಿಣಿಯ ಮಿಯಾಂವಕ್ಕ (ಮಕ್ಕಳ ಕಥೆ)


ಒಂದು ಊರಿನಲ್ಲಿ ಒಂದು ತುಂಟ ಬೆಕ್ಕು ವಾಸವಾಗಿತ್ತು. 'ಮಿಯಾಂವ್ ಮಿಯಾಂವ್ ಮಿಯಾಂವಕ್ಕಾ' ಅಂತ ಅದರ ಹೆಸರು. ಓ! ಇದೆಂತಹ ಹೆಸರು ಅಂದ್ರಾ? ಹೌದು ಇದೇ ಅದರ ಹೆಸರು, ಆ ತುಂಟ ಬೆಕ್ಕಿನ ಪುಟಾಣಿ ಒಡತಿಯಾದ ಧರಿಣಿ ಇಟ್ಟಿದ್ದು! ತೂಕದ ಹೆಸರು ಹೊತ್ತಿದ್ದ ಎಂಟು ವರ್ಷದ ಪೋರಿ ಧರಿಣಿಗೆ ಬೆಕ್ಕಿನ ಮಿಯಾಂವ್ ಕೇಳಿ ಎಷ್ಟು ಖುಷಿಯಾಗಿತ್ತೆಂದರೆ ಅದನ್ನೇ ಬೆಕ್ಕಿನ ಹೆಸರಾಗಿಟ್ಟಿದ್...'ಮಿಯಾಂವ್ ಮಿಯಾಂವ್ ಮಿಯಾಂವಕ್ಕಾ'!
ಮಿಯಾಂವ್ ಮಿಯಾಂವ್ ಮಿಯಾಂವಕ್ಕಾ ಹಾಗು ಧರಿಣಿಯ ಪ್ರಸಂಗಗಳು ಒಂದೆರಡಲ್ಲಾ! ಅಡುಗೆ ಮನೆಯಿಂದ ಯಾರಿಗೂ ಕಾಣಿಸದ ಹಾಗೆ ಬೆಲ್ಲದ ತುಂಡು ತಂದು ಇಬ್ಬರು ಸೋಫಾದ ಹಿಂದೆ ಅಡಗಿ ತಿಂದಿದ್ದು, ಅಡುಗೆ ಮನೆಯಲ್ಲಿ ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿಯುವಾಗ ಧರಿಣಿ ಬಾಗಿಲಿಗೆ ಕಾವಲಾಗಿದ್ದದ್ದು… ಹೀಗೆ ಒಂದೇ ಎರಡೇ, ಸಾವಿರಾರು ಪ್ರಸಂಗಗಳು ಇವರದು. ಧರಿಣಿ ಊಟ ಮಾಡುವಾಗಲೂ ಅವಳ ಪಾದದ ಕೆಳಗೆ ಬೆಚ್ಚಗೆ ಕುಳಿತಿರುತ್ತಿತ್ತು ಮಿಯಾಂವಕ್ಕ, ಊಟದ ಪಾಲನ್ನು ಹೀಗೆ ಇಬ್ಬರು ಹಂಚಿ ತಿನ್ನುತ್ತಿದ್ದರು. ಆದರೆ ಇಂತಹ ಅನೋನ್ಯ ಜೋಡಿ ಇತ್ತೀಚಿಗೆ ಬಹಳ ಸಪ್ಪೆಯಾಗಿತ್ತು ಇದಕ್ಕೆ ಕಾರಣ…
ಆ ಸಂಜೆ ಕೂಡ ಎಂದಿನಂತೆ ಶಾಲೆಯಿಂದ ಬಂದು ಧರಿಣಿ ಟಿವಿ ನೋಡುತ್ತ ಕುಳಿತಿದ್ದಳು. ಕಣ್ಣೆಲ್ಲ ಟಿವಿಯ ಪರದೆ ಮೇಲೆ…ಜೀವವಿರದ ಬೊಂಬೆಯಂತೆ ಅದರಲ್ಲೇ ಮುಳುಗಿ ಹೋಗಿದ್ದಳು ಧರಿಣಿ. "ಮಿಂಯಾಂವ್ ಮಿಯಾಂವ್" ಅಂತ ಮಿಯಾಂವಕ್ಕ ಕರೆದರೂ, "ಸುಮ್ನಿರು ಮಿಯಾಂವಕ್ಕ ಡಿಸ್ಟರ್ಬ್ ಮಾಡಬೇಡ ಅಂತ ಹೇಳಿ ಮತ್ತೆ ಪ್ರತಿಮೆಯಾಗಿದ್ದಳು. ಇತ್ತೀಚಿಗೆ ಇದೇ ದಿನದ ಕತೆಯಾಗಿತ್ತು, ಇದೇ ಕಾರಣದಿಂದ ಅವರ ಆಟಗಳು ಕೂಡ ಕಡಿಮೆಯಾಗಿತ್ತು.
ಸುಮಾರು ಹೊತ್ತಿನ ನಂತರ ಮಿಯಾಂವಕ್ಕನ ನೆನಪಾಗಿ ಕರೆದಳು… ಆದರೆ ಮಿಯಾಂವ್ ಮಿಯಾಂವ್ ಮಿಯಾಂವಕ್ಕಳ ಮಿಯಾಂವ್ ಕೇಳಿಸಲಿಲ್ಲ… ! ಟಿವಿಯಿಂದ ಕಣ್ಣು ತೆಗೆದು ತನ್ನ ಸುತ್ತ ಮುತ್ತ ನೋಡಿದಳು ಮಿಯಾಂವ್ ಮಿಯಾಂವ್ ಮಿಯಾಂವಕ್ಕನ ಪತ್ತೆ ಇಲ್ಲ! ಮಿಯಾಂವಕ್ಕ ಮಿಯಾಂವಕ್ಕ ಅಂತ ಮತ್ತೆ ಕೂಗಿದಳು ತಿರುಗಿ ಮಿಯಾಂವ್ ಕೇಳಿಸಲಿಲ್ಲ! ಅಪ್ಪ ಅಮ್ಮ ಆಫೀಸಿನಿಂದ ಇನ್ನೂ ಬಂದಿರಲಿಲ್ಲ.. ಧರಿಣಿಯನ್ನು ನೋಡಿಕೊಳ್ಳುವ ಅಕ್ಕ ಮೊಬೈಲ್ನಲ್ಲಿ ಮುಳುಗಿದ್ದಳು. ಎಲ್ಲಿ ಹೋದಳು ಮಿಯಾಂವಕ್ಕ ಅಂತ ಅವಳೇ ಹುಡುಕ ತೊಡಗಿದಳು ಧರಿಣಿ.
ಹಸಿವೆಯಾಗಿ ಅಡುಗೆ ಮನೆಗೆ ಏನಾದರು ಹೋಗಿರ ಬಹುದೇ ಅಂತ ಅಲ್ಲಿ ಓಡಿದಳು ಅಲ್ಲಿಯೂ ಇರಲಿಲ್ಲ ತುಂಟ ಬೆಕ್ಕು, ಹಾಸಿಗೆಯ ಮೇಲೆ, ಕುರ್ಚಿಯ ಕೆಳಗೆ, ಬಾಗಿಲ ಹಿಂದೆ… ಅದು ಅಡಗಿರುತ್ತಿದ್ದ ಎಲ್ಲ ಕಡೆ ಹುಡುಕಿದಳು ಎಲ್ಲಿಯೂ ಸಿಗಲಿಲ್ಲ ಮಿಂಯಾವಕ್ಕ…ಧರಿಣಿಗೆ ಅಳು ಬರುವುದೊಂದೆ ಬಾಕಿ.
ಅಂಗಳದಲ್ಲಿ ಹೋಗಿ ಹುಡುಕುವ ಎಂದು ಟಿವಿ ಆಫ್ ಮಾಡಿದೊಡನೆ ನೆರೆ ಹೊರೆಯ ಮಕ್ಕಳ ಕೇಕೆ
ಚಪ್ಪಾಳೆ ಸದ್ದು ಕೇಳಿತು. ಏನಿರಬಹುದು ಎಂದು ನೋಡಲು ಹೊರಗೋಡಿದಳು ಧರಿಣಿ. ಅವರೆಲ್ಲ ಅವಳ ಮನೆಗೆ ತಾಗಿ ಬೆಳೆದ ಮಾವಿನ ಮರವನ್ನು ನೋಡುತ್ತ ನಗುವುದನ್ನು ನೋಡಿ ಮಿಯಾಂವಕ್ಕ ಇರಬಹುದಾ ಎಂದು ಕುತೂಹಲದಿಂದ ಮರದತ್ತ ಓಡಿದಳು. ಹೌದು! ಮರದ ಕೊಂಬೆಯಮೇಲೆ ಕೂತು ಮರದ ಎಲೆಗಳೊಡನೆ ಆಟದಲ್ಲಿ ಮಗ್ನವಾಗಿತ್ತು ಅವಳ ಮಿಯಾಂವ್ ಮಿಯಾಂವ್ ಮಿಯಾಂವಕ್ಕ!
ಮಿಯಾಂವಕ್ಕ ಮಿಯಾಂವಕ್ಕ ಅಂತ ಕರೆದರು ಕೇಳದಂತೆ ತನ್ನ ಆಟ ಮುಂದುವರಿಸಿತ್ತು. ಎಷ್ಟು ಮುದ್ದಾಗಿ ಕಾಣಿಸುತ್ತಿತೋ ಅಷ್ಟೇ ಕೇಳಿಸದಂತೆ ನಟಿಸುತ್ತಿತ್ತು ಮಿಯಾಂವಕ್ಕ! ಅಲ್ಲಿ ನೆರೆದಿದ್ದ ಮಕ್ಕಳು, "ಮರ ಹತ್ತಿ ಹಿಡಿ" ಅಂತ ಕೂಗತೊಡಗಿದರು. "ನನಗೆ ಮರಹತ್ತಲು ಬರಲ್ಲ" ಅಂದಳು ಧರಿಣಿ. "ಅದಕ್ಕೇನಂತೆ ನಾವು ಹೇಳಿ ಕೊಡುತ್ತೇವೆ" ಅಂತ ಹೇಳುತ್ತ ಬಂದರು ಅವಳ ಪಕ್ಕದ ಮನೆಯ ಕಿಟ್ಟು ಮತ್ತು ಪುಟ್ಟಿ.
ಮೊದಲು ಪುಟ್ಟಿ ಎಲ್ಲಿ ಕಾಲಿಡ ಬೇಕು, ಏನು ಹಿಡಿಯ ಬೇಕು, ಹೇಗೆ ಮೇಲೇರಬೇಕು ಅಂತ ತೋರಿಸುತ್ತ ಮರ ಏರತೊಡಗಿದಳು, ಅವಳು ಹೇಳಿದಂತೆ ಮತ್ತೊಮ್ಮೆ ತೋರಿಸುತ್ತ ಕಿಟ್ಟು ಕೂಡ ಮರ ಏರತೊಡಗಿದ.. ಅವರನ್ನು ಅನುಸರಿಸುತ್ತ, ಧರಿಣಿ ಕೂಡ ಮೆಲ್ಲಗೆ ಮರ ಏರತೊಡಗಿದಳು. ನೆಲಕ್ಕಿಂತ ಸ್ವಲ್ಪವೇ ಮೇಲಿದ್ದ ಬಹಳ ಕೊಂಬೆಗಳಿದ್ದ ಮರ ಹತ್ತಲು ಬಹಳ ಸುಲಭವಾಗಿತ್ತು. ಅವರು ಮಿಯಾಂವಕ್ಕನ ಸಮೀಪ ಬಂದಾಗಿತ್ತು, ಇನ್ನೇನು ಹಿಡಿಯಬೇಕು ಅಷ್ಟರಲ್ಲಿ ಮಿಯಾಂವಕ್ಕ ಚಂಗನೆ ಎಗರಿ ಅವರ ಮನೆಯ ಚಾವಡಿಗೆ ಹಾರಿತು! ಮಿಯಾಂವಕ್ಕನ ಹಿಂಬಾಲಿಸುತ್ತ ಪುಟ್ಟಿ, ಕಿಟ್ಟು ಹಾಗು ಧರಿಣಿ ಕೂಡ ಚಾವಡಿಗೆ ಅಂಟಿಕೊಂಡಿದ್ದ ಮರದ ಕೊಂಬೆಯಿಂದ ಚಾವಡಿಯ ತಲುಪಿದರು. ಅವರು ಬರುವವರೆಗೆ ಅಲ್ಲೇ ಇದ್ದ ಮಿಯಾಂವಕ್ಕ ಅವರು ಬಂದೊಡನೆ ಓಡುತ್ತ ಮೆಟ್ಟಿಲಿನಿಂದ ಕೆಳಗಿಳಿಯಿತು. "ನಿಲ್ಲು ಮಿಯಾಂವಕ್ಕ ಏನು ಆಟ ಇದು"? ಅಂತ ನಗುತ್ತ ಮಕ್ಕಳು ಕೂಡ ಕೆಳಗಿಳಿದರು. ಅಲ್ಲಿಂದ ಓಡಿದ ಮಿಯಾಂವಕ್ಕ ಅಲ್ಲೆ ಹೊರಗಡೆಯಿದ್ದ ಬಾಲ್ ಹತ್ತಿರ ನಿಂತು ಅದನ್ನ ಅವರೆಡೆ ತಳ್ಳಿತು. "ಓ ಹೀಗೋ! ಮಿಯಾಂವಕ್ಕನಿಗೆ ಆಟ ಆಡಬೇಕಾ" ಅಂತ ಮೂವರು ಮಕ್ಕಳು ಬಾಲ್ ಹಿಡಿದು ಮಿಯಾಂವಕ್ಕನ ಜೊತೆ ಆಟವಾಡಿದರು.
ಧರಿಣಿಗೆ ಆ ದಿನ ಬಹಳ ಮಜವಾಗಿತ್ತು, ಖುಷಿಯಾಗಿತ್ತು, ಆಟ ಅವಳನ್ನು ಚೇತೋಹರಿಸಿತ್ತು. ಉತ್ಸಾಹ ತುಂಬಿತ್ತು. ಇದನ್ನೆಲ್ಲ ಸಾಧ್ಯ ಮಾಡಿದ ಮಿಯಾಂವಕ್ಕನ ಎತ್ತಿ ಮುದ್ದಾಡಿ ಥ್ಯಾಂಕ್ಯು ಹೇಳಿದಳು. ಹಾಗೆ ಅವಳಿಗೆ ಮರ ಹತ್ತಲು ಹೇಳಿಕೊಟ್ಟು, ಅವರಿಬ್ಬರೊಂದಿಗೆ ಅಡಿದ ಕಿಟ್ಟು ಹಾಗು ಪುಟ್ಟಿಗೆ ಥ್ಯಾಂಕ್ಯು ಹೇಳಿ, ನಾಳೆ ಶಾಲೆಯಿಂದ ಬಂದೊಡನೆ ಅವರೊಂದಿಗೆ ಹೊರಗಡೆ ಅಟ ಆಡುವ ಯೋಜನೆ ಹಾಕಿದಳು.
ಇನ್ನು ಮಿಯಾಂವ್ ಮಿಯಾಂವ್ ಮಿಯಾಂವಕ್ಕನಿಗೆ ತನ್ನ ಹಳೇಯ ಗೆಳತಿ ಮರಳಿ ಸಿಕ್ಕ ಖುಷಿ. ಈಗ ಮತ್ತೆ ಅವರ ಪ್ರಸಂಗಗಳು ಮುಂದುವರೆದಿದೆ…ಆದರೀಗ ಬೆಲ್ಲದ ತುಂಡನ್ನು ಅಡಗಿ ತಿನ್ನುವುದು ಸೋಫಾದ ಹಿಂದಲ್ಲ, ಮರದ ಕೆಳಗಿನ ಕೊಂಬೆಯ ಮೇಲೆ ಅಥವಾ ಆಗಸವ ನೋಡುತ್ತ ಮನೆಯ ಚಾವಡಿಯ ಮೇಲೆ!