Vadiraja Mysore Srinivasa

Drama Classics Inspirational

5  

Vadiraja Mysore Srinivasa

Drama Classics Inspirational

ಮರೀಚಿಕೆ

ಮರೀಚಿಕೆ

10 mins
918


ನನ್ನ ಹೆಗಲಿನ ಮೇಲಿದ್ದ ಬ್ಯಾಗನ್ನು ಟೇಬಲ್ ಮೇಲೆ ಎಸೆದೆ. ಹಾಗೆ, ಮೊಬೈಲ್ ಅನ್ನು ಕೂಡ. ಮೊಬೈಲ್ ಉರಳಿ ಕೆಳೆಗೆ ಬಿದ್ದು, ಎರಡು ಬಾಗವಾಯಿತು.

ನನ್ನ ಜೀವನ ನನಗೆ ಅಸಹ್ಯವಾಗಿ ಕಾಣುತ್ತಿತ್ತು. ಕೆಲವು ಕ್ಷಣಗಳ ನಂತರ ಎದ್ದು ಬಿದ್ದ್ ಮೊಬೈಲ್ ನೋಡಿದೆ. ಅದು ಪೂರ್ತಿಯಾಗಿ ಹಾಳಾಗಿತ್ತು, ನನ್ನ ಜೀವನದ ಹಾಗೆ.

ಕುರ್ಚಿಯ ಮೇಲೆ ಕುಳಿತು ಯೋಚಿಸಿದೆ; ಹೀಗೇಕಾಯಿತು ನನ್ನ ಜೀವನ? ಕೆಲವೇ ಗಂಟೆಗಳಲ್ಲಿ ಹೇಗಿದ್ದವನು ಹೇಗಾಗಿದ್ದೇನೆ?

ಬೆಳಿಗ್ಗೆ ಮನೆಯಿಂದ ಹೊರಡುವಾಗ, ಎಷ್ಟು ಖುಷಿಯಾಗಿದ್ದೆ. ಇವತ್ತು ಪ್ರಮೋಷನ್ ಇಂಟರ್ವ್ಯೂ ಇತ್ತು ನಾನು 20 ವರ್ಷಗಳಿಂದ ದುಡಿಯುತ್ತಿದ್ದ ಬ್ಯಾಂಕ್ನಲ್ಲಿ. ಹೊಸದಾಗಿ ಕೊಂಡುಕೊಂಡಿದ್ದ ಶರ್ಟ್ ಪ್ಯಾಂಟ್ ಹಾಕಿ, ಟೈ ಕಟ್ಟಿಕೊಂಡು, ಹೊಸ ಸಾಕ್ಸ್ ಹಾಗು ಶೂ ಹಾಕಿಕೊಂಡು ಕನ್ನಡಿಯಲಿ ಒಮ್ಮೆ ನೋಡಿಕೊಂಡೆ.

ಸೀನಿಯರ್ ಮ್ಯಾನೇಜರ್ ಪೋಸ್ಟ್ಗೆ ಲಾಯಕ್ಕಾಗಿದ್ದೀನಿ ಎಂದುಕೊಡು ಮುಗುಳು ನಗೆ ನಗುತ್ತ, ಬ್ಯಾಗ್ ಹಿಡಿದು, ಹೆಡ್ ಆಫೀಸ್ ಕಡೆ ಹೊರಟೆ.

ನನಗಿಂತಲೂ ಮುಂಚೆ ಇದ್ದವರು ಇಬ್ಬರೇ. ಅದರಲ್ಲಿ ಒಬ್ಬ ಒಳಗೆ ಹೋಗಿ ಸುಮಾರು ಹೊತ್ತಾಗಿದೆಯಿಂದು ಪಿಯೋನ್ ಹೇಳಿದ. ಇಂಟರ್ವ್ಯೂ ಪ್ಯಾನೆಲ್ನಲ್ಲಿದ್ದವರೆಲ್ಲರೂ ನನ್ನ ಪರಿಚಯದವವರೇ. ಬಾಂಕ್ನಿಲ್ಲಿ ನಿಷ್ಠೆಯಿಂದ ನಾನು ಮಾಡಿದ ಕೆಲಸಕ್ಕೆ ಒಂದು ರೀತಿಯ ಸಾಕ್ಷಿಗಳೇ ಎನ್ನಬಹುದು. ಒಬ್ಬ ವ್ಯಕ್ತಿಯಂತೂ, ನನ್ನ ಬಾಸೆ!

ಈ ಸಾರಿ ಪ್ರಮೋಷನ್ ಖಚಿತ ಎಂದುಕೊಂಡು ನನಗೆ ನಾನೇ ಬೆನ್ನು ತಟ್ಟಿಕೊಂಡೆ. ಒಳಗಿನಿಂದ ವ್ಯಕ್ತಿ ಹೊರಬಂದ ಹಾಗು ನನ್ನ ಮುಂದೆ ಇದ್ದವನು ಒಳಗೆ ಹೋದ. ಪ್ರಮೋಷನ್ ಆದ ಸುದ್ದಿ ಕೇಳಿಯಾದರೋ ಯಶೋದಾ ಮನೆಗೆ ಖಂಡಿತ ವಾಪಸ್ ಬರುತ್ತಾಳೆ. ಯಾವ ಊರಿಗೆ ಹಾಕುತ್ತಾರೋ ಅಥವಾ ಇಲ್ಲೇ ಹೊಸದಾಗಿ ಆಗಲಿರುವ ಬ್ರಾಂಚ್ಗೆ ಹಾಕುತ್ತಾರೋ ಎಂದೆಲ್ಲ ಯೋಚಿಸಿತ್ತಿರುವಾಗಲೇ, ಒಳಗೆ ಹೋಗಿದ್ದ ಕೊನೆ ಅಭ್ಯರ್ಥಿ ಹೊರಗೆ ಬಂದ.

ನಾನು ಎದ್ದು ನಿಂತೇ, ಪಿಯೋನ್ ನನ್ನ ಹತ್ತಿರ ಬಂದು ಹೇಳಿದ. "ಸರ್, ಐದು ನಿಮಿಷ ಬಿಟ್ಟು ಹೋಗಬೇಕಂತೆ. ಸಾಹೇಬರುಗಳು , ಕಾಫಿ ಬ್ರೇಕ್ ತೊಗೋತಿದ್ದಾರೆ ." 

ಇಷ್ಟು ವರ್ಷ ಕಾದಿದ್ದವನಿಗೆ, ಐದು ನಿಮಿಷಗಳೇನು ಮಹಾ ಎಂದುಕೊಂಡೆ.

ಆದರೆ, ಆ ಐದು ನಿಮಿಷದಲ್ಲಿ ಎಲ್ಲವೂ ಬದಲಾಗಿ ಹೋಯಿತು.


ಒಳಗೆ ಹೋದವನೇ ಎಲ್ಲರಿಗೂ ವಿಶ್ ಮಾಡಿ ಕುಳಿತೆ. ನನ್ನ ಬಾಸ್, ಮೊದಲನೇ ಪ್ರಶ್ನೆ ಕೇಳಬೇನ್ನುವಷ್ಟರಲ್ಲಿ, ಟೇಬಲ್ ಮೇಲಿದ್ದ ಫೋನ್ ರಿಂಗ್ ಆಯಿತು. ಸೀನಿಯರ್ ಜನರಲ್ ಮ್ಯಾನೇಜರ್ ಫೋನ್ ಕೈಗೆ ತೆಗೆದುಕೊಂಡವರು, ಸುಮ್ಮನೆ ಕೇಳಿಸಿಕೊಂಡರು. ಸುಧೀರ್ಘವಾಗಿ ಉಸಿರುತೆಗೆದುಕೊಂಡು, ನನ್ನತ್ತ ನೋಡಿ ನುಡಿದರು. "ತುಂಬಾ ಸಾರೀ ಮಿಸ್ಟರ್ ಕುಮಾರ್. ನಿಮಗೆ ಹೇಗೆ ಹೇಳಬೇಕು ನನಗರ್ಥ್ವಾಗುತ್ತಿಲ್ಲ. ಈಗ ಫೋನ್ ಬಂದಿದ್ದು ಚೇರ್ಮನ್ ಆಫೀಸ್ ನಿಂದ. ಸರ್ಕಾರದ ಆದೇಶದಂತೆ, ನಾವು ಸ್ಪೆಷಲ್ ಕೆಟಗರಿ ಕೋಟಾಗೆ ಮಾತ್ರ ಇಂಟರ್ವ್ಯೂ ಮಾಡಬೇಕಂತೆ. ಜನರಲ್ ಕೆಟಗರಿ ನಿಲ್ಲಿಸಿ ಅಂತ ಆದೇಶ ಬಂದಿದೆ."

ನಾನು ಎದ್ದು ನಿಂತೆ. ಕೊನೆಗಳಿಗೆಯಲ್ಲಿ ಬಂದ ಸುದ್ದಿ ನಂಗೆ ದಿಗ್ಭ್ರಮೆಗೊಳಿಸಿತ್ತು


ನನ್ನ ಬಾಸ್ ಶಶಿಧರ್ ಎದ್ದು ನಿಂತು ನನ್ನ ಭುಜದ ಮೇಲೆ ಕೈ ಇಟ್ಟು ಮೆಲುವಾದ ದನಿಯಲ್ಲಿ ಹೇಳಿದರು "ಇದು ಎಷ್ಟರ ಮಟ್ಟಿಗೆ ನಿಮಗೆ ಸಾಂತ್ವನ ಕೊಡುವುದು ನನಗೆ ಗೊತ್ತಿಲ್ಲ. ಇದುವರೆಗೂ ಆದ ಎಲ್ಲಾ ಜನರಲ್ ಕೆಟಗರಿ ಕ್ಯಾಂಡಿಡೇಟ್ಸ್ ಇಂಟರ್ವ್ಯೂ ಕೂಡ ಬದಿಗಿಡಲಾಗುತ್ತೆ."

ಈ ಘಟನೆ ನನ್ನ ಗಾಯದ ಮೇಲೆ ಕಾದ ಕಬ್ಬಿಣದ ಬರೇ ಎಳೆದಂತಾಯ್ತು. ಮೊದಲೇ ಕೋಪಿಸಿಕೊಂಡು ಊರಿಗೆ ಹೋದ ಹೆಂಡತಿ, ಮೇಲೆ ಈ ರೀತಿಯಾದ ಅವಮಾನ. ನನ್ನ ಮೇಲೆ ನಂಗೆ ಜಿಗುಪ್ಸೆ ಬಂತು, ಮನೆಯೊಳಗಿದ್ದರೆ ಇನ್ನೂ ತಲೆ ಕೆಡುತ್ತೆಂದೂ, ಚಪ್ಪಲಿ ಹಾಕಿಕೊಂಡು, ಪಕ್ಕದ ಪಾರ್ಕಿಗೆ ಹೋದೆ.

ಪಾರ್ಕಿನಲ್ಲಿ ಹೆಚ್ಚು ಜನರಿರಲಿಲ್ಲ. ಒಂದು ಖಾಲಿ ಬೆಂಚಿನ ಮೇಲೆ ಕುಳಿತು, ಚಪ್ಪಲಿ ಬಿಟ್ಟು ಅತ್ತಿತ್ತ ನೋಡಿದೆ.

ಇದ್ದಕ್ಕಿದಂತೆ, ಯಾರೋ ಬಂದು ನನ್ನ ಮುಂದೆ ನಿಂತಂತಾಯಿತು. ನೋಡಿದರೆ, ಜುಬ್ಬಾ, ಶುಭ್ರವಾದ ಬಿಳೀ ಪಂಚೆ ಉಟ್ಟಿದ್ದ ಮಧ್ಯವಯಸ್ಸಿನ ವ್ಯಕ್ತಿ ನನ್ನನ್ನೇ ನೋಡುತಿದ್ದ. ಬಹುಶಃ ಕುಳಿತುಕೊಳ್ಳಲು ಜಾಗ ಬೇಕೇನು ಎಂದು, ಪಕ್ಕಕ್ಕೆ ಸರಿದು ಕುಳಿತೆ.

ಪಕ್ಕದಲ್ಲಿ ಕುಳಿತವನು ಹೇಳಿದ. "ಈ ಬಾರಿಯೂ ಸೆಲೆಕ್ಟ್ ಆಗದಿದ್ದಕ್ಕೆ ತುಂಬಾ ನಿರಾಶೆ ಆಗಿರಬೇಕು ಅಲ್ಲವೇ? "

ಎಲ್ಲಾ ಇವನ! ಇವನಿಗೆ ಹೇಗೆ ಗೊತ್ತಾಯಿತು ನಾನು ಇಂಟರ್ವ್ಯೂಗೆ ಹೋಗಿದ್ದು? ನನ್ನ ಮನಸ್ಸನ್ನು ಓದಿದವನಂತೆ, ಹೇಳಿದ “ನಿನ್ನ ಹೆಂಡತೀ ನಿನ್ನನ್ನು ಬಿಟ್ಟು ಹೋಗಿರುವ ವಿಷಯ ಕೂಡ ನನಗೆ ಗೊತ್ತು. ಅಷ್ಟೇ ಅಲ್ಲ, ಷೇರು ಮಾರುಕಟ್ಟೆಯಲ್ಲಿ, ನೀನು ಕೂಡಿಟ್ಟಿದ್ದ ಹಣವನ್ನೆಲ್ಲ ಕಳೆದುಕೊಂಡಿದ್ದು ಕೂಡ ನನಗೆ ಗೊತ್ತು."

ದಿಗ್ಭ್ರಮೆಯಿಂದ ಎದ್ದು ನಿಂತೆ.


"ಯಾರು ನೀನು? ನನ್ನ ಪರ್ಸನಲ್ ವಿಷಯಗಳೆಲ್ಲ ನಿನಗೆ ಹೇಗೆ ಗೊತ್ತು?”


 "ನನ್ನ ಪೋಷಾಕು ನೋಡಿ ನಾನು ಒಬ್ಬ ಸಾಮಾನ್ಯ ವ್ಯಕ್ತಿ ಈ ಪಾರ್ಕಿನಲ್ಲಿ ಅಡ್ಡಾಡಲು ಬಂದೆ ಎಂದು ನೀನೆಣಿಸಿದರೆ, ಅದು ನಿನ್ನ ತಪ್ಪು. ನಾನು ಸಾಮಾನ್ಯನಲ್ಲ. ನಾನೊಬ್ಬ ಯಕ್ಷ! ನಿನ್ನ ಜೀವನದ ಆಗುಹೋಗುಗಳನೆಲ್ಲವನ್ನು ಬಲ್ಲೆ, ಕುಮಾರ್." ಆ ಪಂಚೆದರಿಸಿದ್ದ ವ್ಯಕ್ತಿ ಹೇಳಿದ.


ನಾನು ತಾಳ್ಮೆ ಕಳೆದುಕೊಂಡು ಜೋರಾಗಿ ಕಿರುಚಿದೆ. "ಯಾವ ಡ್ರಾಮಾ ಕಂಪನಿಯವನಯ್ಯಾ ನೀನು? ನಿನಗೆ ಬೇರೆ ಯಾರು ಸಿಗಲಿಲ್ಲವೇ ತಲೆ ತಿನ್ನಕ್ಕೆ? ನನ್ನ ಪ್ರಾಬ್ಲೆಮ್ಸ್ ಸಾಕಷ್ಟು ಇರುವಾಗ, ಹೊಸದಾಗಿ ನನಗೆ ಯಾವ ತಲೆನೋವು ಬೇಡ. ಓಕೆ?


"ಕುಮಾರ್. ನಿನಗೆ ಸಮಸ್ಯೆ ಇರೋದಿಕ್ಕೆ ನಾನು ಬಂದಿರೋದು," ಹೇಳಿದ ಆ ಅಪರಿಚಿತ.


ಅವನು ಹಾಕಿದ್ದ ಡ್ರೇಸ್ ನಾರ್ಮಲ್ ಆಗೇ ಇತ್ತು. ಬೆಲೆ ಬಾಳುವ ಚಪ್ಪಲಿ ದರಿಸಿದ್ದ. ಮೋಸಗಾರನ ಹಾಗೆ ಕಾಣುತ್ತಿರಲಿಲ್ಲ. ಅಸ್ತವ್ಯಸ್ತವಾಗಿರುವ ನನ್ನ ಜೀವನದ ಬಗ್ಗೆ ಇವನಿಗೆ ಹೇಗೆತಾನೆ ಗೊತ್ತಾಯಿತು?


"ಹೌದು, ನಿನಗ್ಯಾರು ಹೇಳಿದರು ನನಗೆ ಸಹಾಯ ಬೇಕೆಂದು? ಈ ಊರಿನಲ್ಲಿ ಕೋಟಿಗಟ್ಟಲೆ ಜನರಿದ್ದಾರೆ ಸಮಸ್ಯೆಗಳ ಸಾಗರದಲ್ಲಿ ತೆಲಾಡ್ತಾ ಇದ್ದಾರೆ. ಹೋಗು ಅವರಿಗೆ ಯಾರಿಗಾದರೋ ಸಹಾಯ ಮಾಡು." ತಿರಸ್ಕಾರದ ಧ್ವನಿಯಲ್ಲಿ ಹೇಳಿ ಹೊರಡಲು ಎದ್ದು ನಿಂತೆ.


"ನೀವು ನನ್ನನ್ನು ಯಕ್ಷ ಎಂದು ಕರೆಯಬಹುದು. ಏಕೆಂದರೇ ನಾನು ಯಕ್ಷನೇ ಆಗಿದ್ದೇನೆ. ನನಗೆ ಅತಿ ವಿಚಿತ್ರವಾದ ಶಕ್ತಿಗಳಿವೆ. ಜನರ ಜೀವನವನ್ನೇ ಮಾರ್ಪಾಡುಮಾಡುವ ಶಕ್ತಿ ಇದೆ ನನಗೆ. ಯಾರನ್ನು ಬದಲಾಯಿಸ ಬೇಕು ಅವರನ್ನು ನಾನು ಹುಡುಕುತ್ತೇನೆ. ಈಗ ನಿನ್ನ ಸರದಿ." ಆ ಯಕ್ಷ ಎನ್ನುವ ವ್ಯಕ್ತಿ ಹೇಳಿದ.


ಯಾಕೊ ಇದು ಸ್ವಲ್ಪ ಅತಿಯಾಯಿತೆನಿಸಿತು. "ಯಕ್ಷ ಅಥವಾ ನೀನು ಯಾರೇ ಆಗಿರು. ನಿನ್ನಿಂದ ನನಗೆ ಯಾವ ಸಹಾಯವು ಬೇಡ. ಇಲ್ಲಿಂದ ನೀನು ಹೊರಟರೆ ಸಾಕು." ಬೇಸರದ ಧ್ವನಿಯಲ್ಲಿ ಹೇಳಿದೆ.


"ನೀನು ಮಾಡ ಬೇಕಾಗಿರುವುದು ಇಷ್ಟೇ. ನನ್ನ ಜೊತೆ, ಎದುರುಗಿರುವ ರಸ್ತೆಯಲ್ಲಿನ ಒಂದು ಮನೆಗೆ ಬಾ. ನಿನ್ನ ಜೀವನ ಹೀಗೆ ಬದಲಾಗುತ್ತದೆಯೆಂದು ನೋಡಿ ನೀನೆ ಆಶ್ಚರ್ಯ ಪಡುತ್ತಿ.ನಿನ್ನ ಏನೆ ಬಯಕೆಗಳಿದ್ದರೂ ಎಲ್ಲವನ್ನು ಪೂರ್ತಿಮಾಡುವ ಶಕ್ತಿಯಿದೆ ನನಗೆ" ಹೇಳಿದ ಯಕ್ಷ.


"ಯಾಕೆ? ನೀನೇನು ದೇವರೇ?" ವ್ಯಂಗವಾಗಿ ನುಡಿದೆ.


"ದೇವರಲ್ಲ. ದೇವ ದೂತ ಎಂದು ಹೇಳಬಹುದು. ನೀನು ಕಳೆದುಕೂಳ್ಳುವುದಾದರೋ ಏನು? ಐದು ನಿಮಿಷ ನನ್ನ ಜೊತೆ ಬಂದರೆ ಸಾಕು." ವಿಚಿಲಿತನಾಗದೇ ನುಡಿದ ಯಕ್ಷ.

ನನಗರಿಯದಂತೆ, ಆ ಯಕ್ಷನನ್ನು ಹಿಂಬಾಲಿಸಿದೆ. ಪಾರ್ಕ್ ಪಕ್ಕದ ರೋಡಿನಲ್ಲಿದ್ದ ಒಂದು ಹಳೆ ಮನೆಯ ಬೀಗ ತೆಗೆದು ಒಳಗೆ ನಡೆದ, ಯಕ್ಷ. ನಿದ್ದೆಯಲ್ಲಿ ನಡೆದವನಂತೆ ಅವನನ್ನು ಹಿಂಬಾಲಿಸಿ ಒಳಗೆ ನಡೆದೆ.


ಎಷ್ಟೋ ಸಾರಿ ಪಾರ್ಕಿಗೆ ಹೋಗಿದ್ದರೂ ಈ ಮನೆಯನ್ನು ನೋಡಿದ್ದೇ ಇಲ್ಲ.

ಅದೊಂದು ದೊಡ್ಡ ರೂಮಾಗಿತ್ತು. ರೂಮಿನ ಒಂದು ಕೊನೆಯಲ್ಲಿ ಒಂದು ಮಂಚ. ಇನ್ನೊಂದು ಕೊನೆಯಲ್ಲಿ ತಾರಸಿಗೆ ಕಟ್ಟಿದ್ದ ಚಕ್ರಾಕಾರದ ಕಂಬಿಯಲ್ಲಿ ತೂಗು ಹಾಕಿದ್ದದೊಡ್ಡದಾದ, ಸುಮಾರು ಆರು ಅಡಿ ಉದ್ದ, ಎರಡು ಆಡಿ ಅಗಲದ ಐದು ಬಿಳೀ ಹಾಳೆಗಳ ಗುಚ್ಛ.

ಕುತೂಹಲದಿಂದ ಹತ್ತಿರ ಹೋಗಿ ನೋಡಿದೆ. ಇಂಗ್ಲಿಷ್ನಲ್ಲಿ ಏನೂ ಬರೆದಂತಿತ್ತು.


"ನೀನು ನೋಡುತ್ತಿರುವುದು ನಿನಗೆ ಜೀವನದಲ್ಲಿ ಏನೇನು ಆಸೆ ಆಕಾಂಕ್ಷೆಗಳಿವೆಯೋ, ಹಣ, ಆಸ್ತಿ, ಅಂತಸ್ತುಅವೆಲ್ಲವನ್ನು ಹೊಂದಿರುವ ವ್ಯಕ್ತಿಗಳ ಜೀವನದ ಹಿಸ್ಟರಿ. ಅವರ ಬಗ್ಗೆ ಬೇಕಾದ ಎಲ್ಲ ವಿವರಗಳೂ, ಆ ಪಟ್ಟಿಯಲ್ಲಿದೆ. ಒಟ್ಟು ಇದು ಮಂದಿಯ ವಿವರಗಳು ಇಲ್ಲಿವೆ.

ನೀನು ಆ ಪಟ್ಟಿಯಲ್ಲಿ ಬರೆದಿರುವ ಅಂಕಿಯ ಕ್ರಮದಲ್ಲಿಯೇ ಹೋಗಬೇಕು. ನೋಡು, ಮೊದಲನೆಯ ವ್ಯಕ್ತಿ, ನಂಬರ್ 1 ಎಂದು ಬರೆದಿರುವ ಪಟ್ಟಿಯಲ್ಲಿರುವ ಎಲ್ಲ ವಿವರಗಳನ್ನು ಗಮನವಿಟ್ಟು ಓದು. ಮುಂದೆ ನಿಂಗೆ ಉಪಯೋಗಕ್ಕೆ ಬರುತ್ತದೆ.

ನೀನು ಯಾವ ವ್ಯಕ್ತಿಯಾಗಿ ಬೇಕಾದರೋ ಮಾರ್ಪಾಡಾಗಬಹುದು. ಸರಿಯಾಗಿ ಮಧ್ಯ ರಾತ್ರಿ 12 ಘಂಟೆಗೆ, ಅಲ್ಲಿರುವ ಮಂಚದ ಮೇಲೆ ಮಲಗಿಕೊ. 12 ಘಂಟೆ ಒಂದು ನಿಮಿಷವಾಗುತ್ತಲೇ, ನೀನು ಆ ವ್ಯಕ್ತಿಯಾಗಿ ಮಾರ್ಪಾಡಾಗುವೆ. ದೇಹ ಮಾತ್ರ ಬೇರೆಯವರದು; ಮನಸ್ಸು ನಿನ್ನದೇ ಆಗಿರುತ್ತದೆ. ಒಂದು ದಿನ ಪೂರ್ತಿ ಆ ವ್ಯಕ್ತಿಯಾಗಿ ನೀನು ಜೀವನ ನಿರ್ವಹಣೆ ಮಾಡಿ, ನಿನಗೆ ಇಷ್ಟವಾಗದಿದ್ದರೆ, ರಾತ್ರಿ 11 ಘಂಟೆ 59 ನಿಮಿಷಕ್ಕೆ, ಇಲ್ಲಿರುವ ಬಟನ್ ಒತ್ತ ಬೇಕು. ಆಗ ಮತ್ತೆ ನೀನಾಗುತ್ತೀ. ಒಂದು ನಿಮಿಷ ತಡವಾದರೆ, ಜೀವನ ಪೂರ್ತಿ ಅದೇ ವ್ಯಕ್ತಿಯಾಗಿರಬೇಕಾಗುತ್ತದೆ.


ಹೀಗೆ ಒಂದೊಂದಾಗಿ ಈ ಐದು ವ್ಯಕ್ತಿಗಳಲ್ಲಿ ನೀನು ಪರಕಾಯ ಪ್ರವೇಶಿಸಿ ಅವರ ಜೀವನವನ್ನು ನಡೆಸು. ಜ್ಞಾಪಕ ವಿರಲಿ! 1 ರಿಂದ 5 ರ ವರೆಗೆ ಕ್ರಮಾಂಕದಲ್ಲೇ ಹೋಗ ಬೇಕು. ಒಂದುಸಾರಿಗೆ, ಒಬ್ಬ ವ್ಯಕ್ತಿಯ ಜೀವನದ ಬಗ್ಗೆ ಮಾತ್ರ ನೀನು ತಿಳಿದಿಕೊಳ್ಳಲು ಸಾಧ್ಯ.

ನಿನ್ನ ಐದೂ ಜೀವನ ಮುಗಿದ ನಂತರ ನಾನು ಮತ್ತೆ ಬಂದು ನಿನ್ನನ್ನು ಕಾಣುತ್ತೇನೆ. ಅಲ್ಲಿಯವರೆಗೆ, ನೀನು ಮತ್ತೆ ನನ್ನನ್ನು ನೋಡಲಾಗುವುದಿಲ್ಲ.

ಮುಂದಿನ ಐದು ದಿನದಲ್ಲಿ, ನೀನು ಈ ಐದು ಜೀವಗಳಲ್ಲಿ ಪ್ರವೇಶಿಸಿ ಅವರಂತೆ ಜೀವನ ನಡೆಸು. ನೀನು ಬ್ಯಾಂಕಿಗೆ ಒಂದು ವಾರ ರಜೆ ಹಾಕಿರುವುದು ನನಗೆ ಗೊತ್ತು. ಹಾಗೆ, ನಿನ್ನ ಮೊಬೈಲ್ ಕೂಡ ಕೆಲಸ ಮಾಡ್ತಾ ಇಲ್ಲ. ಹಾಗಾಗಿ, ನಿನಗೆ ತಿಳಿದವರು ಯಾರೂ, ನಿನ್ನನು ಕಾಂಟಾಕ್ಟ್ ಮಾಡಲಾಗುವುದಿಲ್ಲ.

ಬೇರೆ ವ್ಯಕ್ತಿಯಾಗಿ ನೀನು ಜೀವನ ನಡೆಸುತ್ತಿರುವಾಗ, ನಿನ್ನ ದೇಹ, ಇಲ್ಲೇ, ಈ ರೂಮಿನಲ್ಲೇ, ಹಾಸಿಗೆಯ ಮೇಲಿರುತ್ತೆ.

ನೀನು ಏನೇನೆಲ್ಲ ಬಸುತ್ತಿದೆಯೋ ಅದೆಲ್ಲೆವೂ ನಿನಗೆ ಪ್ರಾಪ್ತಿಯಾಗಲಿದೆ."


ನಾನು ಆ ಯಕ್ಷನನ್ನು ಏನಾದರೂ ಕೇಳುವುದಕ್ಕೆ ಮುಂಚೆ, ಅವನು ಬಾಗಿಲನ್ನು ಏಳುದುಕೊಂಡು, ಹೊರಟೇ ಹೋದ.

ಗಡಿಯಾರ ನೋಡಿದೆ. 12 ಘಂಟೆಗೆ ಇನ್ನೂ 15 ನಿಮಿಷ ಇತ್ತು.

ನಂಬರ್ 1 ಎಂದು ಬರೆದಿದ್ದ ಲಿಸ್ಟ್ ಓದುತ್ತಾ ಹೋದೆ. ಅವನ ಹೆಸರು ಸುಶಾಂತ್. ಅವನ ಬಗ್ಗೆ ಓದಿ ಹಾಸಿಗೆಯ ಮೇಲೆ ಮಲಗಿ ಕಣ್ಣು ಮುಚ್ಚಿದೆ.

ಕೆಲೆವೆ ಸೆಕೆಂಡುಗಳಲ್ಲಿ ಒಂದು ದೊಡ್ಡ ಸುಪ್ಪತ್ತಿಗೆಯ ಮೇಲೆ ಮಲಗಿದ್ದೆ ನಾನು. ಮೇಲೆ ರೂಮಿನುದ್ದಕ್ಕೂ ಕನ್ನಡಿಯನ್ನು ಕೂಡಿಸಲಾಗಿತ್ತು. ಪಕ್ಕದಲ್ಲಿ ಒಂದು ಹುಡುಗಿ ಮಲಗಿದ್ದಳು. ಬಹುಶ ಸುಶಾಂತನ ಹೆಂಡತಿ ಇರಬೇಕು.

ಶಬ್ದವಾಗದಂತೆ ಎದ್ದು, ಮಂಚದ ಪಕ್ಕ ಇದ್ದ ದೊಡ್ಡ ಬೀರುವಿನ ಮುಂದೆ ಇದ್ದ ಕನ್ನಡಿಯಲ್ಲಿ ನೋಡಿಕೊಂಡೆ. ಕನ್ನಡಿಯಲ್ಲಿ ಕಂಡ ದೃಶ್ಯ ನನ್ನನ್ನು ದಂಗು ಬಡಿಸಿತು. ನಾನೊಬ್ಬ ಸುಮಾರು 25 ವರ್ಷದ ತುಂಬಾ ಸುಂದರವಾದ ಹುಡುಗನ ರೂಪದಲ್ಲಿದ್ದ ನನ್ನನ್ನೇ ಕಂಡು ಬೆರಗಾದೆ. ಮುಖದ ಮೇಲಿದ್ದ ಕಲೆಗಳೆಲ್ಲವೂ ಮಾಯವಾಗಿದ್ದವು, ಕಂದು ಬಣ್ಣದ ಚರ್ಮದ ಬದಲು, ಹೊಳೆಯುತ್ತಿದ್ದ ಬೆಳೀ ಬಣ್ಣದ ತೊಗಿಲಿನ ಶರೀರವನ್ನು ಕಂಡು, ಎಷ್ಟೋ ವರ್ಷದ ತಪಸ್ಸು ಇಂದು ನಿಜವಾಯಿತೆಂದು ಆನಂದ ಪಟ್ಟೆ.

ಕೇವಲ ನನ್ನ ಮುಖವನ್ನೇ ನೋಡುತ್ತಿದ್ದ ನನಗೆ, ನಾನು ಹಾಕಿಕೊಂಡಿದ್ದ ನೈಟ್ ಡ್ರೆಸ್ ಬಗ್ಗೆ ಗಮನವೇ ಇರಲಿಲ್ಲ. ನೋಡಿದರೆ, ತುಂಬಾ ಬೆಲೆಬಾಳುವ ನೈಟ್ ಸೂಟ್. ಹಾಗೆ, ಬೀರುವಿನ ಬಾಗಿಲು ತೆಗೆದವನಿಗೆ, ಮತ್ತಷ್ಟು ಆಶರ್ಯ ಕಾದಿತ್ತು. ಬೀರುವಿನ ತುಂಬಾ ಬೆಲೆ ಬಾಳುವ ಡ್ರೆಸ್ಸೆಸ್. ಕೆಳೆಗೆ, ನೂರಾರು ಜೊತೆ ಶೂಸ್! ಒಹ್, ನನ್ನ ಹರಿದಿದ್ದ ಚಪ್ಪಲಿಯನ್ನು ಬಿಸಾಕಿದ್ದಕ್ಕೆ, ಹೆ0ಡತಿಯ ಹತ್ತಿರ ಒಂದು ದಿವಸ ಪೂರ್ತಿ ಜಗಳ ವಾಡಿದ್ದು ಜ್ಞಾಪಕ ಬಂದು, ಮುಖದಲ್ಲಿ, ಕಿರುನಗೆ ಕಾಣಿಸಿಕೊಂಡಿತು.


"ಸುಶಾಂತ್, ಸುಶಾಂತ್" ಯಾರೂ ಕೂಗುತಿದ್ದನ್ನು ಕೇಳಿ ತಿರುಗಿ ನೋಡಿದೆ. ಮಚದ ಮೇಲೆ ಮಲಗಿದ್ದ ಆ ಹುಡುಗಿ ಎದ್ದು ಬಂದು ನಿಂತು ನನ್ನೆನ್ನೇ ನೋಡುತ್ತಾ ಕಿರುಚಿದಳು.


"ಯಾಕೆ? ಕಿವಿ ಕೇಳಿಸುವುದಿಲ್ಲವಾ ನಿನಗೆ? ಆವಾಗಿನಿಂದ ಅರಚಿಕೊಳ್ತಾ ಇದ್ದೀನಿ."

ನಾನೇ ಸುಶಾಂತ್ ಎಂದು ಆಗಲೇ ನನಗೆ ಅರಿವಾಗಿದ್ದು.


ಗಡ ಬಡಿಸಿಕೊಂಡು ನುಡಿದೆ, "ಸಾರೀ ಡಿಯರ್ ಏನೋ ಆಲೋಚನೆಯಲ್ಲಿದ್ದೆ.”


"ಅಲ್ಲ 8 ಘಂಟೆಗೆ ಮೀಟಿಂಗ್ ಇದೆ ಅಂತ ನಿನ್ನೆಯೆಲ್ಲ ಅಂದವನು, ಈಗ ನೋಡು ಟೈಮ್ ಎಷ್ಟು ಅಂತ? ಯಾಕೆ ಮೀಟಿಂಗ್ಗೆ ಹೋಗೋದಿಲ್ಲವಾ? "


ಇದ್ದಕಿದ್ದಂತೆ, ನೆನೆಪು ಬಂದು, ಓಡಿಹೋಗಿ ಸ್ನಾನ ಮುಗಿಸಿ, ಬಟ್ಟೆ ಹಾಕಿಕೊಂಡು, ಕೆಳೆಗಿಳಿದು, ಸುಶಾಂತನ, ಮೆರ್ಸಿಡೀಜ್ ಕಾರಿನಲ್ಲಿ ಆಫೀಸ್ನತ್ತ ಪ್ರಯಾಣ ಮಾಡುತ್ತಾ, ಕನ್ನಡಿಯಲ್ಲಿನೋಡಿದೆ. ನನ್ನ ಹೊಸ ಜೀವನವನ್ನ ಕಂಡು, ಕಿರುನಗೆ ಮೂಡಿತು.

ಆ ನಗು, ಅಂದಿನ ನನ್ನ ಕೊನೆ ನಗುವಾಗಿತ್ತು.


ಆಫೀಸ್ ರೀಚ್ ಆಗಿ, ಮೀಟಿನ್ಗ್ ರೂಮ್ ಕಡೆ ಓಡಿದೆ. ಮೀಟಿಂಗ್ ರೂಮ್ ಫುಲ್ ಆಗಿತ್ತು. ಖಾಲಿ ಇದ್ದ ಕುರ್ಚಿಯಲ್ಲಿ ಕುಳಿತು, ನಿಂತು ಮಾತನಾಡುತ್ತಿದ್ದ ವ್ಯಕ್ತಿಯ ಕಡೆ ನೋಡಿದೆ. ಬಹುಶ ಆತನೇ ಎಂ ಡಿ ಇರಬೇಕು. ನನ್ನ ಹೆಸರು ಕೇಳಿ ಅವನ ಮಾತಿನ ಕಡೆ ಗಮನ ಕೊಟ್ಟೆ.

ಮ್ಯಾನೇಜಿಂಗ್ ಡೈರೆಕ್ಟರ್ ಕಿಡಿ ಕಾರುತ್ತಿದ್ದರು. ಕಂಪನಿಯ ಅಧೋ ಪತನಕ್ಕೆ ಸೇಲ್ಸ್ ಡೆಪಾರ್ಟ್ಮೆಂಟಿನ ಫೇಲ್ಯೂರ್ ಕಾರಣ. ಸುಶಾಂತ್, ಹೆಡ್ ಆಫ್ ಮಾರ್ಕೆಟಿಂಗ್, ಪೆರ್ಸನಲ್ಲಾಗಿ ಇದಕ್ಕೆ ಜವಾಬ್ದಾರಿ ಎಂದು ಅವರು ಹೇಳುತ್ತಿದ್ದಂತೆ, ನನ್ನ ಮುಖದಲ್ಲಿ ಬೆವರು ಕಿತ್ತಿ ಬರುತ್ತಿತ್ತು. 7 ನೆ ಮಹಡಿಯಿಂದ ನನ್ನನ್ನು ಆ ಎಂ ಡಿ ದಬ್ಬಿದರೂ ಆಶರ್ಯವಿಲ್ಲವೆಂದು ನನಗನ್ನಿಸಿತು.


ಮೀಟಿಂಗ್ ಮುಗಿಸಿ ಹೊರಗಡೆ ಬಂದೊಡನೆ, ಎಂ ಡಿ ಪಿ.ಏ, ಪಿಂಕ್ ಸ್ಲಿಪ್ ಕೈಗಿತ್ತು, ನನ್ನ ಕ್ಯಾಬಿನ್ ಬೀಗದ ಕೈ ಕಿತ್ತುಕೊಂಡು ವಿಚಿತ್ರವಾಗಿ ನಗುತ್ತಾ ಹೋದ.

ಮನೆಗೆ ಬರುತ್ತಿದ್ದಂತೆ, ಡೈನಿಂಗ್ ಟೇಬಲ್ ಮೇಲೆ ಸುಶಾಂತನ ಹೆಂಡತಿ ಬರೆದಿಟ್ಟಿದ್ದ ಪತ್ರ ನೋಡಿ ತಲೆ ತಿರುಗಿತು. ಕೇವಲ, ಎರಡೇ ಸಾಲಿತ್ತು; "ಗುಡ್ ಬೈ, ಸೀ ಯು ಇನ್ ಕೋರ್ಟ್."


ಅಲ್ಲೇ ಇದ್ದ ಕುರ್ಚಿಯ ಮೇಲೆ ಕುಳಿತುಕೊಳ್ಳುವಷ್ಟರಲ್ಲಿ, ಟೆಲಿಫೋನ್ ರಿಂಗ್ ಆಯಿತು. ಕಿವಿಗಿಟ್ಟು ಕೇಳಿ ನನ್ನ ಎದೆಯೇ ಒಡೆದು ಹೋಯಿತು.

"ನಾನು ಹೇಳಿದಂತೆ, ಬ್ರೀಫ್ ಕೇಸ್ ನಲ್ಲಿ ಹಣ ತುಂಬಿಸಿ, ನಾನು ಹೇಳಿದ ಜಾಗಕ್ಕೆ ಇನ್ನು ಒಂದು ಘಂಟೆಯೊಳಗೆ ಬಾ, ಮನೆಯಿಂದ ನೀನು ಹೊರಟಿದ್ದು ನನಗೆ ತಿಳುತ್ತದೆ. ಎಲ್ಲಿ ಬರಬೇಕೆಂದು ಹೇಳಲು ನಾನು ಮತ್ತೆ ಫೋನ್ ಮಾಡ್ತೀನಿ. ನಾನು ಹೇಳಿದಂತೆ ಮಾಡದೆ ಇದ್ದರೇ, ಹೆಣದ ಮುಂದೆ ಚಾಕು ಹಿಡಿದು ನಿಂತ ನಿನ್ನ ಫೋಟೋ, ಪೊಲೀಸ್ ಸ್ಟೇಷನ್ ನಲ್ಲಿರುತ್ತೆ."

ಲೈನ್ ಡಿಸ್ಕನೆಕ್ಟ್ ಆಯಿತು.


ಘಾಬರಿಯಿಂದ, ಬೀರು ಬಾಗಿಲು ತೆರುದು ನೋಡಿದೆ, ಹಣದಿಂದ ತುಂಬಿದ ಬ್ರೀಫ್ ಕೇಸ್ ಅಲ್ಲೇ ಇತ್ತು.

ತೆಗೆದು ಕೊಂಡು, ಕೆಳೆಗೆ ಹೋಗಿ ಕಾರಿನಲ್ಲಿಟ್ಟು ಹೊರಗೆ ಹೋದೆ. ಮೊಬೈಲ್ ಮತ್ತೆ ರಿಂಗ್ ಆಯಿತು. ವ್ಯಕ್ತಿ ಹೇಳಿದ ಅಡ್ದ್ರೆಸ್ಗೆ ಕಾರ್ ಓಡಿಸಿಕೊಂಡು ಹೋದೆ.

ಸುಶಾಂತನ ಜೀವನ ನನಗೆ ಸಾಕಾಗಿತ್ತು. ಬ್ರೀಫ್ ಕೇಸ್ ಕೊಟ್ಟು ತೊಲಗಿದರೆ ಸಾಕು ಎಂದೆನಿಸುತ್ತಿತ್ತು. 

ಕತ್ತಲಲ್ಲಿ ನಿಂತಿದ್ದ ನನ್ನ ತಲೆಯ ಮೇಲೆ ಯಾರೂ ಹೊಡೆದ ಹಾಗಾಗಿ ಕೆಳಗೆ ಬಿದ್ದೆ.


ಎಚ್ಚರ ವಾದಾಗ, ರೂಮಿನಲ್ಲಿ ಮಲಗಿದ್ದೆ. ಎದುರುಗಿದ್ದ ಗಡಿಯಾರದಲ್ಲಿ ರಾತ್ರಿ 11.30 ತೋರಿಸುತ್ತಿತ್ತು. ಮೊದಲಿಗೆ ಯಕ್ಷ ಹೇಳಿದ್ದಂತೆ ಅಲ್ಲಿದ್ದ ಬಟನ್ ಒತ್ತಿ, 2ನೆ ನಂಬರ್ ಬರೆದಿದ್ದ ಲಿಸ್ಟ್ ಹತ್ತಿರ ಹೋಗಿ ನೋಡಿದೆ. ಮತ್ತೊಬ್ಬ ಶ್ರೀಮಂತ ಅವನು. ಕಿರುನಗೆಯೊಂದಿಗೆ, ಹಾಸಿಗೆಯ ಮೇಲೆ ಮಲಗಿ ಕಣ್ಣು ಮುಚ್ಚಿದೆ.

ಎಚ್ಚರವಾದಾಗ, ಮತ್ತೊಂದು ಸುಖದ ಸುಪ್ಪತ್ತಿಗೆಯ ಮೇಲೆ ಮಲಗಿದ್ದೆ. ತುಂಬಾ ದೊಡ್ಡ ರೂಮು; ಮಂಚದ ಪಕ್ಕದಲ್ಲಿ ದೊಡ್ಡ ಪ್ಯಾನೆಲ್ ತುಂಬಾ ಸ್ವಿಟ್ಚ್ಗಳು. ಮಲಗಿದ್ದ ಕಡೆಯೇ ಮೇಲೆ ನೋಡಲು ದೊಡ್ಡ ಟಿವಿ, ಮಂಚದ ಪಕ್ಕದಲ್ಲಿ ಮಾರ್ಬಲ್ ಟೇಬಲ್. ಮಂಚದ ಮೇಲೆ ನಾನೊಬ್ಬನೇ ಮಲಗಿದ್ದೆ.

ಅಲ್ಲೇ ಇದ್ದ ಬೆಲ್ ಶೇಪಿನ ಬಟನ್ ಒತ್ತಿದ ಕೂಡಲೇ, ಬಿಳಿ ಬಣ್ಣದ ಡ್ರೆಸ್ನಲ್ಲಿದ್ದ ಮೂವರು ನರ್ಸ್ಗಳು ಓಡೋಡಿ ಬಂದರು. ಏನು ಬೇಕೆಂದು ಕೇಳಿದಾಗ, ಏನು ಹೇಳಲು ತೋಚದೆ, ಸುಮ್ಮನೆ ಮುಖ ನೋಡಿದೆ.


ಎದ್ದೇಳಲು ಪ್ರಯತ್ನ ಪಟ್ಟಾಗ ಏಳಲು ಆಗಲೇ ಇಲ್ಲ. ಮೈ ಮೇಲಿದ್ದ ಬೆಡ್ ಶೀಟ್ ಸರಿಸಿ ನೋಡಿದಾಗ ಶಾಕ್ ಕಾದಿತ್ತು. ನನಗೆ ಎರಡೂ ಕಾಲುಗಳಿರಲಿಲ್ಲ. ಈಗ ಗೊತ್ತಾಯಿತು, ಟಿವಿ ಮೇಲೆ ಏಕಿದೆಯೆಂದು.

ನನ್ನ ಮುಖವನ್ನೇ ನೋಡುತ್ತಿದ್ದ ನರ್ಸ್ ಗಳಿಗೆ ನೀರು ಬೇಕೆಂದು ಹೇಳಿದೆ. ಕಾಫಿ, ಜ್ಯೂಸು, ಹಾಲು, ಒಂದೊಂದಲ್ಲ, ಎಲ್ಲವನ್ನು ತಂದು ಟೇಬಲ್ ಮೇಲಿಟ್ಟು, ನನಗೇನು ಬೇಕೆಂದು ಕೇಳಿ, ನನ್ನನು ಕೂಡಿಸಿ, ಕುಡಿಸಿದರು.

 ಇದ್ದಕಿದ್ದಂತೆ, ನರ್ಸ್ ಗಳೆಲ್ಲರೂ ಹೊರಗಡೆ ಹೊರಟರು. ಏಕೆಂದು ಯೋಚಿಸುತ್ತಿರುವಾಗಲೇ, ಸುಂದರವಾದ ಒಬ್ಬ ಹೆಂಗಸು, ಆಧುನಿಕ ಉಡುಪು ಧರಿಸಿ, ಬಳುಕುತ್ತ ಬಂದು ಕೇಳಿದಳು.


"ಹೇಗಿದ್ದೀಯಾ ವಿವೇಕ್ ಇವತ್ತು? ಪೇಪರ್ ಸೈನ್ ಮಾಡಲು ತಯ್ಯಾರಾಗಿದ್ದೀಯ ತಾನೇ? ಅಥವಾ, ನೆನ್ನೆಯ ಹಾಗೆ ಹೊಸದಾಗಿ ಇವತ್ತು ಏನಾದರೋ ನೆಪ ಹೇಳಬೇಕೆಂದುಕೊಡಿದ್ದೀಯ?”


ಏನು ಮಾತನಾಡದೆ, ಅವಳ ಮುಖವನ್ನೇ ನೋಡಿದೆ.


"ಇನ್ನು ನೀನು ತಡ ಮಾಡಬಾರದು, ವಿವೇಕ್. ನಾಳೆ ಬೆಳಿಗ್ಗೆ ನಿನ್ನ ಆಪರೇಷನ್ ಆಗಲಿದೆ. ಮೊದಲೇ ಹೈ ಶುಗರ್ ಪಾರ್ಟಿ ನೀನು, ಮೇಲೆ ಹಾರ್ಟ್ ಆಪರೇಷನ್ ಬೇರೆ. ಹಾಗಾಗಿ, ಎಲ್ಲ ಪ್ರಾಪರ್ಟಿ ಪೇಪರ್ಸ್ ಈವತ್ತೇ ಸೈನ್ ಮಾಡುವುದು ಉತ್ತಮ."


ನನ್ನ ಉತ್ತರಕ್ಕೂ ಕಾಯದೆ, ಪೇಪರ್ಗಳ ಕಂತೆಯನ್ನು ತಂದು, ಪೆನ್ ನನ್ನ ಕೈಯಲ್ಲಿ ಕೊಟ್ಟು ಸಹಿ ಹಾಕಲು ಹೇಳಿದಳು. ಸುಮ್ಮನೆ ಒಂದು ಸಾರಿ ಪೇಪರ್ಸ್ ನೋಡಿದೆ; ನಾನು, ವಿವೇಕ್, ನನ್ನ ಎಲ್ಲಾ ಪ್ರೊಫೆರ್ಟಿಗಳನ್ನು, ನನ್ನ ಹೆಂಡತಿಯಾದ ವಿಜಯರಾಜೇಗೆ ಬರೆದುಕೊಡುತ್ತಲಿದ್ದೆ.

ಶ್ರೀಮಂತಿಕೆಯಿಂದ ಕೂಡಿದ ಆ ದೇಹ ನನಗೆ ಬೇಡವಾಗಿತ್ತು. ಹಣದ ಜೊತೆಗೆ, ಬೇಡವಾದ ಖಾಯಿಲೆಗಳು, ಅದರ ಜೊತೆ ಬಂದ ಬೇಡವಾದ ಸಂಬಂಧಗಳ ಸಂಕೋಲೆ. ಒಹ್, ನಾನು ಯಕ್ಷನ ಜೊತೆ, 24 ಘಂಟೆಗಳ ಬದಲು, 12 ಘಂಟೆಗಳ ಅವಧಿ ಕೇಳಬೇಕಿತ್ತು.

 

ಎಲ್ಲ ಪೇಪರ್ ಗಳಿಗೆ ಸೈನ್ ಮಾಡಿದ ಕೂಡಲೇ ನನ್ನಿಂದ ಪೇಪರ್ ಕಸಿದುಕೊಂಡು, ಎಲ್ಲ ಸರಿಯಾಗಿದೆಯಾ ಎಂದು ಪರಿಶೀಲಿಸಿದಳು. ಆ ಸುಂದರಿಯ ಕುರೂಪವಾದ ಮನಸ್ಸಿನ ಪರಿಚಯ ನನಗೆ ಕಾದಿತ್ತು ಸಿಡಿಸಿದಳು ಬಾಂಬ್ ಒಂದನ್ನು ಆ ಸುಂದರಾಂಗಿ.


"ಥಾಂಕ್ ಯು ವಿವೇಕ್ ಇನ್ನೊಂದ್ ಕೆಲಸ ಬಾಕಿ ಇದೆ. ಡಾಕ್ಟರ್ಸ್ ಟಿಶ್ಯೂ ಮ್ಯಾಚ್ ಆಗತ್ತೆ ಅಂತ ಹೇಳಿದ್ದಾರೆ, ನಿನ್ನ ಹಾರ್ಟ್ ಆಪರೇಷನ್ ಜೊತೆ, ಕಿಡ್ನಿ ಆಪರೇಷನ್ ಕೂಡ ಮಾಡಿ ನನ್ನ ತಮ್ಮನಿಗೆ ಟ್ರಾನ್ಸ್ ಪ್ಲಾಂಟ್ ಮಾಡ್ತಾರೆ. ನಿನಗೆ ಎರಡು ಕಿಡ್ನಿಗಳ ಅವಶ್ಯಕೆ ಹೇಗೂ ಇಲ್ಲ. ನೋಡು ವಿವೇಕ್, ಕೊನೆಗೂ ನೀನು ಬೇರೆಯವರಿಗೆ ಉಪಯೋಗಕ್ಕೆ ಬಂದೆ." ಕಾಗದ ಪತ್ರಗಳನ್ನು ಹಿಡಿದು, ರೂಮಿಂದ ತೇಲಿ ಹೋದಳು ಆ ಹಸುಮುಖದ ವ್ಯಾಗ್ರ.


ಮತ್ತೆ ಆ ರೂಮಿನ ಮಂಚದ ಮೇಲೆ ಬಂದು ಮಲಗಿದ್ದೆ. ಎಲ್ಲಿ ಮತ್ತೆ ವಿವೇಕನ ಜನ್ಮ ನನಗೆ ಬಂದು ಬಿಡುತ್ತೋ ಅನ್ನೋ ಭಯದಿಂದ, ಮೊದಲಿಗೆ ಸ್ವಿಚ್ ಒತ್ತಿದೆ.

ಒಂದೇ ಸಾರಿಗೆ ಯಾಕೆ 5ನೆ ಜನ್ಮಕ್ಕೆ ಹೋಗಿಬಿಡಬಾರದೆಂದು, ಹೋಗಿ ನೋಡಿದರೆ, 3ನೆ ನಂಬರ್ ಒಂದನ್ನು ಬಿಟ್ಟು, ಮಿಕ್ಕ ಎರಡೂ ಖಾಲಿ ಹಾಳೆಗಳಾಗಿದ್ದವು. ಬೇರೆ ದಾರಿ ಇಲ್ಲದೆ, 3ನೆ ನಂಬರ್ನಲ್ಲಿದ್ದ ವಿವರಣೆಯನ್ನು ಓದಲು ಶುರು ಮಾಡಿದೆ.


ಹೆಸರಿನಲ್ಲೇ ನನಗೆ ಶಾಕ್ ಕಾದಿತ್ತು; ಅದು ಬೇರೆ ಯಾರೂ ಅಲ್ಲದೆ, ನನ್ನ ಬಾಸ್ ಶಶಿಧರ್! ಇದೆಂತ ನ್ಯಾಯ! ಎರಡು ದಿವಸದ ಹಿಂದೆ ನನ್ನ ಪ್ರೊಮೋಷನ್ಗೆ ಅಡ್ಡ ಬಂದ ವ್ಯಕ್ತಿಗಳಲ್ಲಿ, ಅವನು ಒಬ್ಬ. ಈಗ ನನಗೆ ಸೇಡು ತೀರಿಸಿಕೊಳ್ಳಲು ಸರಿಯಾದ ಸಮಯ ಎಂದೆನಿಸಿ, ಖುಷಿಯಾಗಿ ಹೋಗಿ ಹಾಸಿಗೆಯ ಮೇಲೆ ಮಲಗಿದೆ.

ಎದ್ದಿದ್ದು ಮತ್ತೊಂದು ಹಾಸಿಗೆಯಲ್ಲಿ; ತುಂಬಾ ಚಿಕ್ಕದಾದ ರೂಮು. ಕಣ್ಣು ಬಿಟ್ಟೊಡನೆ ಕಂಡಿದ್ದು, ಹಾಸಿಗೆಯ ಮೇಲೆ ಮಲಗಿದ್ದ ವೃದ್ದೆ. ಯಾರೂ ಜೋರಾಗಿ ಜಗಳವಾಡುತ್ತಿರುವಂತೆ ಕೇಳಿಸಿತು. ಎದ್ದು ನೋಡಿದಾಗ ಇಬ್ಬರು ಹುಡುಗರು, ಹಣಾ, ಹಣಿ ಜಗಳವಾಡುತಿದ್ದರು. ನನ್ನನ್ನು ನೋಡಿದ ಕೊಡಲೇ, ಜಗಳ ನಿಲ್ಲಿಸಿದರು. ಹಾಸಿಗೆಯ ಮೇಲೆ ಮಲಗಿದ್ದ ಮುದುಕಿ ಕಿರುಚಿದಳು.


"ಶಶಿ .... ಓ ಶಶಿ.."


ಅವಳು ಕರೆಯುತ್ತಿರುವುದು ನನ್ನನ್ನೇ ಎಂದು ಅರಿತು ಓಡಿ ಹೋದೆ.

ಅಲ್ಲಿ ಹೋಗಿ ನಿಂತು ಆ ಮುದುಕಿ ಹೇಳಿದ್ದೆಲ್ಲವನ್ನು ಸಮಾಧಾನವಾಗಿ ಕೇಳಿಸಿಕೊಂಡೆ. ಅವತ್ತುಮಧ್ಯಾಹ್ನ ಆಕಿಗೆ ಮಂಡಿಯ ಆಪರೇಷನ್, ಶಶಿಧರನ ಹೆಂಡತಿ, ಕಿಟ್ಟಿ ಪಾರ್ಟಿ ಅಟೆಂಡ್ ಮಾಡಬೇಕಿತ್ತು. ಹಾಗಾಗಿ, ಆಪರೇಷನ್ ಮುಂದೆ ಹಾಕಬೇಕೆಂದು ಹೆಂಡತಿಯ ವಾದ. ಮುದುಕಿ, ಕಾಲು ನೋವಿನಿಂದ ಬಳಲುತ್ತಿದ್ದು, ಆದಷ್ಟು ಬೇಗ ಆಪರೇಷನ್ ಮಾಡಿಸಿಕೊಳ್ಳಬೇಕೆಂದು ಮಗನಿಗೆ ತಾಕೀತು ಮಾಡುತಿದ್ದಳು. ಅತ್ತ ತಾಯಿ, ಇತ್ತ ಮಡದಿ; ಇವರಿಬ್ಬರ ಮಧ್ಯೆ ಇದ್ದ ಶಶಿ….. ಅಂದರೆ, ನಾನು ಒಂದು ನಿರ್ಧಾರ ಮಾಡಬೇಕಿತ್ತು.


ಕೊನೆಗೆ ಹೆಂಡತಿಯ ಮಾತಿಗೆ ಒಪ್ಪಿಕೊಂಡು ಅಮ್ಮನ ಮುಖ ನೋಡಿದಾಗ, ಮುದುಕಿ ನೆಲಕ್ಕೆ ಉಗುಳಿ ಹೇಳಿದಳು, "ನೀನೆಂತ ಗಂಡಸಯ್ಯಾ? ಹೆಂಡತಿಗೆ ಅಷ್ಟೊಂದು ಹೆದರುವುದಾ? ನಿನ್ನ ಹೆಂಡತಿಯ ಆ ಅರ್ಥವಿಲ್ಲದ ಪಾರ್ಟಿ ನಿನ್ನ ಅಮ್ಮನ ಆರೋಗ್ಯಕ್ಕಿಂತ ಹೆಚ್ಚಾ? ದೇವರೇ, ನನಗೆ ಸಾವಾದರೋ ಬರಬಾರದೇ?"


ಏನು ಹೇಳದೆ ಸುಮ್ಮನೆ ನಿಂತಿದ್ದವನಿಗೆ, ಮೊಬೈಲ್ ರಿಂಗ್ ಆದ ಶಬ್ದ ಕೇಳಿಸಿತು. ಶಶಿಧರನ ಹೆಂಡತಿ ಮೊಬೈಲ್ ತಂದು ಮೂತಿಯ ಮುಂದೆ ಹಿಡಿದಳು. ನೋಡಿದರೆ, ಛೇರ್ಮನ್ ಆಫೀಸ್ನಿಂದ ಅಂತ ಇತ್ತು. ಕೇಳಿಸಿಕೊಂಡಾಗ ಎದೆವೊಡೆಯುವ ಸಮಾಚಾರ ಕಾದಿತ್ತು. ಛೇರ್ಮನ್ ಪಿ ಏ ಆಫೀಸ್ ನಿಂದ. ಇಂಟರ್ವ್ಯೂ ನಲ್ಲಿ ಬಂದಿದ್ದ ಮೂರು ಜನರನ್ನು, ಅಂದರೆ, ನಾನು, ಕುಮಾರ್ ಸೇರಿ, ಟ್ರಾನ್ಸ್ಫರ್ ಮಾಡಲು ಆದೇಶಿದ್ದಾರಂತೆ, ಛೇರ್ಮನ್. ನನ್ನ ಡೆತ್ ಸರ್ಟಿಫಿಕೇಟಿಗೆ, ನಾನೇ ಸಹಿ ಮಾಡಿದಂತೆ!

ಅಕಸ್ಮಾತ್, ನಾನು ಶಶಿಧರ್ ಆಗಿ ರೆಸಿಗ್ನೇಷನ್ ಕೊಟ್ಟರೆ? ಸ್ವಲ್ಪ ಸಮಯವಾದರೋ ಸಿಗತ್ತೆ ಎಂದೆಲ್ಲ ಯೋಚಿಸಿದೆ. ಸುತ್ತಲೂ ಇದ್ದ ಶಶಿಯ ಸಂಪಾದನೆಯ ಮೇಲೆ ಅವಲಂಬಿಸಿರುವ ತಾಯಿ, ಹೆಂಡತಿ ಹಾಗು ಮಕ್ಕಳ್ನು ನೋಡಿದಾಗ, ನನ್ನ ಬಾಸ್ ಮೇಲೆ ನನಗೆ ಕನಿಕರ ಬಂತು.


ಆಫೀಸಿಗೆ ಹೋದಾಗ ಅಲ್ಲಿ ಇನೊಂದು ಆಘಾತ ಕಾದಿತ್ತು. ಬ್ಯಾಂಕಿನಲ್ಲಿ ಸಿಬಿಐ ಆಫೀಸರ್ಗಳು ಬಂದು ಎಲ್ಲರ ಕ್ಯಾಬಿನ್ ಸೀಲ್ ಮಾಡುತ್ತಿದ್ದರು. ಶಶಿಧರ್, ಹಾಗು ಸೀನಿಯರ್ ಜನರಲ್ ಮ್ಯಾನೇಜರ್ ಆದಿಯಾಗಿ ಎಲ್ಲರನ್ನೂ ವಿಚಾರಣೆಗೆ ಒಳಪಡಿಸಿ, ನಂತರ ಅವರ ಮೇಲೆ ಕಾರುವಾಯಿ ಮಾಡುತ್ತಾರೆಂದು ತಿಳಿದು, ನಿಂತಲ್ಲೇ ನೆಲ ಅದುರಿತು. ಜೈಲಿಗಿ ಹೋಗುವುದು ಗ್ಯಾರಂಟಿ. ಯಾಕೆಂದರೆ, ಬೋರ್ಡ್ನಲ್ಲಿದ್ದವರಿಗೆ, ಇದು ಯಾವುದು ತಟ್ಟದು. ಯಾವಾಗಲೂ ಕೆಳಗಿನ ಆಫೀಸರ್ ಗಳೇ ಇದಕ್ಕ ಬಲಿ ಪಶು.

ರಾತ್ರಿಯಾಗುವುದನ್ನೇ ಕಾದಿದ್ದ ನನಗೆ, ಈ ಜೀವನಗಳಾವುದು ಬೇಡವಾಗಿತ್ತು. ಮತ್ತೆ ಕುಮಾರನಾದರೆ ಸಾಕಾಗಿತ್ತು.


11.50ಕ್ಕೆ ಸರಿಯಾಗಿ, ಯಕ್ಷ ಬಾಗಿಲಿಂದ ಒಳಗೆ ಬಂದವನೇ ಹೇಳಿದ. "ಕುಮಾರ್, ನೀನು ಎಲ್ಲಾ ನಾಲಕ್ಕು ಜೀವನವನ್ನ ತಿರಸ್ಕರಿಸಿದ್ದೀಯಾ, ಏಕೆಂದರೇ ಘಡಿಯಾರ 12 ಘಂಟೆ ಹೊಡೆಯುವುದರೊಳಗೆ, ನೀನು ಪ್ರತಿಸಾರಿ ಬಟನ್ ಒತ್ತಿದ್ದೀಯ. ಈಗ ಬಾಕಿ ಉಳಿದಿರುವು ಒಂದೇ, ಅದರ ಡೀಟೇಲ್ಸ್ ನೋಡೋಣ.. ಯಕ್ಷ ನನ್ನ ಕೈ ಹಿಡಿದು ಪಟ್ಟಿಗಳಿದ್ದಲ್ಲಿಗೆ ಕರೆದುಕೊಂಡು ಹೋದ. ಕೈ ಬಿಡಿಸಿಕೊಳ್ಳುತ್ತ ಹೇಳಿದೆ, "ಯಕ್ಷ. ನೀನು ಹೇಳುತ್ತಿರುವುದು ತಪ್ಪು. ನಾಲಕ್ಕು ಜೀವನವಲ್ಲ, ನಾನು ಪ್ರವೇಶಿಸಿದ್ದು, ಮೂರೇ ದೇಹಗಳಲ್ಲಿ."

ಯಕ್ಷ ನಗುತ್ತ ಹೇಳಿದ. "ಇಲ್ಲ ಕುಮಾರ್, ಮೂರಲ್ಲ, ನಾಲಕ್ಕು. ಏಕೆಂದರೆ 4ನೆಯದು, ನಿನ್ನದೇ ಆದ ಕುಮಾರನ ದೇಹ. ಬೇಕಿದ್ದರೆ ನೀನೆ ನೋಡು."


ಯಕ್ಷ ಹೇಳಿದ ಮೇಲೆ, 4 ಎಂದು ಬರೆದಿದ್ದ ಹಾಳೆಯೆತ್ತ ನೋಡಿದೆ. ಅದು ನಿಜವಾಗಲೂ ನನ್ನದೇ ಆಗಿತ್ತು. ನನ್ನ ಪ್ರಶ್ನಾರ್ಥಕ ಮುಖವನ್ನು ನೋಡಿ ಯಕ್ಷ ನಗುತ್ತಾ ಹೇಳಿದ. "ನಿನಗೆ ಕುಮಾರನ ಜೀವನ ಇಷ್ಟವಿಲ್ಲವೆಂದು ತಾನೇ ಬೇರೆ ಜೀವನಕ್ಕೆ ನೀನು ಪ್ರವೇಶ ಮಾಡಿದ್ದು? ನನಗೆ ಗೊತ್ತಿತ್ತು. ಒಮ್ಮೆ ಬೇರೆ ಜೀವಗಳ ಪರಿಚಯವಾದಾಗ, ನೀನು ಮತ್ತೆ ಕುಮಾರನಾಗ ಬಯಸುವೆ ಎಂದು. ಆದರೆ, ಅದು ಅಷ್ಟು ಸುಲಭವಲ್ಲ.ನೀನಿನ್ನೂ, 5ನೆ ಜೀವದ ಬಗ್ಗೆ ತಿಳಿದು, ಅದರಿಂದ ಮತ್ತೆ ಕುಮಾರಾನಗಬಹುದು."


ಯಕ್ಷ, 5ನೆ ನಂಬರ್ ಲಿಸ್ಟ್ ಹತ್ರ ಕರೆದೊಯ್ದ. ಅಲ್ಲಿ ಇನ್ನೊಂದು ಶಾಕ್ ಕಾದಿತ್ತು

ಅಲ್ಲಿ ಬರೆದಿದ್ದ ಹೆಸರು ಬೇರೆ ಯಾರದ್ದೂ ಅಲ್ಲ; ಯಕ್ಷನದ್ದು. "ಹೇ, ಇದೇನು ಜೋಕ? ನನಗೆ ಯಕ್ಷನಾಗ ಬೇಕಿಲ್ಲ. ಇದೆಂತ ವಿಪರ್ಯಾಸ? ನಾನು ಕುಮಾರ್ ಆಗಿ ಮತ್ತೆ ನನ್ನ ಜೀವನಕ್ಕೆ ಹೋಗುತ್ತೇನೆ." ಸ್ವಲ್ಪ ಜೋರಾಗೆ ಹೇಳಿದೆ ನಾನು.


ನಗುತ್ತಾ ಹೇಳಿದ ಯಕ್ಷ."ಖಂಡಿತ ಕುಮಾರ್. ಯಕ್ಷನಾದರೆ ಮಾತ್ರ ನೀನು ಮತ್ತೆ ಕುಮಾರನಾಗಬಹುದು. ನಿನ್ನ ಕೋಪ ನನಗರ್ಥವಾಗುತ್ತದೆ. ಸ್ವಲ್ಪ ನನ್ನ ಮಾತನ್ನು ಗಮನವಿಟ್ಟು ಕೇಳು.


ನೀನು ಯಕ್ಷನಾದರೆ ಮಾತ್ರ ನನಗೆ ಮುಕ್ತಿ. ಯಾಕೆಂದರೆ, ನಿನ್ನ ಹಾಗೆ ನಾನು ಮತ್ತೆ, ನಾನಾಗಬಹುದು. ಇಕೋ, ಈ ಬೀಗದ ಕೈ. ಇಂದಿನಿಂದ ನಿನಗೆ, ನನ್ನೆಲ್ಲ ಶಕ್ತಿಗಳು ಬರುತ್ತದೆ. ಜನರನ್ನು ನೋಡಿದಾಗ, ಅವರ ಪೂರ್ತಿ ಜೀವನ ನಿನ್ನ ಕಣ್ಣ ಮುಂದಿರುತ್ತದೆ. ಈ ದೊಡ್ಡ ಊರಿನಲ್ಲಿ ಬೇಕಾದಷ್ಟು ಕುಮಾರರಿದ್ದಾರೆ. ಸರಿಯಾದ ವ್ಯಕ್ತಿಯನ್ನು ಹುಡುಕಿ, ನಾನು ನಿನಗೆ ಹೇಳಿದಂತೆ ಅವನಿಗೂ ಹೇಳು. ಅವನು ಕೂಡ ಮತ್ತೆ ಅವನ ನಿಜ ಜೀವನಕ್ಕೆ ಹೋಗಬೇಕೆಂದಾಗ, ನೀನು ಅವನನ್ನು ಯಕ್ಷನನ್ನಾಗಿ ಮಾಡಿ, ನೀನು ನಿನ್ನ ಜೀವನಕ್ಕೆ ಹೋಗಬಹುದು. ಥಾಂಕ್ ಯು ಯಕ್ಷ." ಎಂದು ಹೇಳುತ್ತಾ, ಯಕ್ಷ ಬೀಗದ ಕೈ ಗೊಂಚಲನ್ನು ನನ್ನ ಕೈಗೆ ಕೊಟ್ಟ. ಇದ್ದಕಿದ್ದಂತೆ, ನನ್ನ ಮೈತುಂಬ ವಿದ್ಯುತ್ ಪ್ರವಾಹ ಹರಿದಂತಾಯಿತು.


ಹೇಳಿದ ಯಕ್ಷ. “ನಿನಗೆ ದೊರೆಯುವ ಶಕ್ತಿಯನ್ನು, ನಿನ್ನ ಸ್ವಂತಕ್ಕೆ ಬಳಸಿಕೊಳ್ಳಲಾಗುವುದಿಲ್ಲ; ಕೇವಲ ಬೇರೆಯವರಿಗೆ ಮಾತ್ರ, ನೆನಪಿರಲಿ.

ಬೈ ದಿ ವೆ, ನನ್ನ ಹೆಸರು, ಸುನಿಲ್. ಥಾಂಕ್ ಯು ಯಕ್ಷ." ಯಕ್ಷ, ಸಾರೀ, ಸುನಿಲ್ ಹೊರಟೇಹೋದ.

ಬೀಗದ ಕೈ ಹಿಡಿದು, ಹೊರಗೆ ಹೊರಟಾಗ, ವಿಚಿತ್ರವಾದ ಅನುಭವವಾಯಿತು.


ಶಿಳ್ಳೆ ಹೊಡೆಯುತ್ತ ಹೊರಟೆ, ಮತ್ತೊಬ್ಬ ಕುಮಾರನನ್ನು ಹುಡುಕುತ್ತಾ.


Rate this content
Log in

Similar kannada story from Drama