Vadiraja Mysore Srinivasa

Drama Classics Inspirational

4.5  

Vadiraja Mysore Srinivasa

Drama Classics Inspirational

ಯಾರು ಹೆಚ್ಚು

ಯಾರು ಹೆಚ್ಚು

3 mins
329


ಆಕಿ ಮಧರ್ 'ಸ್ ಡೇ ಬಗ್ಗೆ ಖಂಡಿತವಾಗಿಯೂ ಕೇಳಿರಲಿಲ್ಲ; ಅಷ್ಟೇ ಯಾಕೆ, ಅವಳನ್ನು ನೋಡಿದರೆ, ಅಂತ ವಿಷಯಗಳಿಗೆ ಕ್ಯಾರೇ ಅಂತ ಕೂಡ ಹೇಳುವಳಲ್ಲ ಎಂದು ಎದ್ದು ಕಾಣುತ್ತಿತ್ತು.

ನಾನೆಂತ ನತದೃಷ್ಟ? ಇಡೀ ಪ್ರಪಂಚ ಮಧರ್ 'ಸ್ ಡೇ ವಿಜೃಂಭಣೆಯಿಂದ ಆಚರಿಸುತ್ತಿದ್ದರೆ, ನಾನು ಮಾತ್ರ, ಒಬ್ಬ ತಾಯಿ ಯಾವ ವಾರ್ತೆ ಕೆಳಬಾರದೋ, ಅದನ್ನು ತಿಳುಸುವುದಕ್ಕೆ ಪಂಜಾಬಿನಲ್ಲಿರುವ ಗುರದಾಸಪುರದ ಒಂದು ಹಳ್ಳಿಗೆ ಬಂದ್ದಿದ್ದೆ.

ಸುಮಾರು 7೦ ವರುಷದ ಆ ಹೆಂಗಸಿನ ವೇಷ ಭೂಷಣ ಹಳ್ಳಿಯ ಹೆಂಗಸಿನದಾಗಿತ್ತು, ಮುಖದಲ್ಲಿ ಸುಕ್ಕುಗಳು, ಜೋತುಬಿದ್ದ ಕಿವಿಗಳು. ಅವಳು ಹಾಕಿದ್ದ ಪಂಜಾಬಿ ಉಡುಗೆ, ಬಹಳವೇ ಹಳೆಯದಾಗಿತ್ತು. ಒಬ್ಬ ಕಷ್ಟ ಪಟ್ಟು ಕೆಲಸ ಮಾಡುವ ಹೆಂಗಸಿನದಾಗಿತ್ತು. ಅವಳು ಆ ಹಳ್ಳಿಯಲ್ಲಿ ವಾಸಿಸುವ ಬಡವರಿಗೆ, ಪ್ರತಿನಿತ್ಯ ಯಾವ ಅಪೇಕ್ಷೆಯೂ ಇಲ್ಲದೆ ಉಚಿತವಾಗಿ ಅಡುಗೆ ಮಾಡಿ ಬಡಿಸುವ ಕೆಲಸ ಮಾಡುತ್ತಿದ್ದಳು.

ಕೈಯಲ್ಲಿ ಚಹಾದ ಕಪ್ ಹಿಡಿದು ಅವಳನ್ನೇ ನೋಡುತ್ತಿದ್ದ ನನ್ನನ್ನು ಸೂಕ್ಷ್ಮವಾಗಿ ಗಮನಿಸುತ್ತಾ ನುಡಿದಳು, "ಬೇಟಾ, ಚಹಾ ತಣ್ಣಗಾಗಿರತ್ತೆ, ಎಷ್ಟು ಹೊತ್ತಾಯ್ತು ನಿನಗೆ ಕೊಟ್ಟು, ಬೇರೆ ಬಿಸಿಯಾಗಿ ಮಾಡಿ ಕೊಡಲ?"

ಅವಳನ್ನೇ ಮತ್ತೊಮ್ಮೆ ನೋಡಿ, ಹೇಗೆ ಹೇಳಲಿ ಎಂದು ಯೋಚಿಸುತ್ತಾ, ತಣ್ಣಗಾಗಿದ್ದ ಚಹಾ ಕುಡಿದು ಕಳೆದ ಕೆಲವು ದಿನಗಳ ಘಟನೆಗಳನ್ನು ನೆನೆದು ಕಂಪಿಸಿದೆ.

ಇದೆಲ್ಲ ಶುರುವಾಗಿದ್ದು, 1೦ ದಿನದ ಕೆಳಗೆ.

ಎಂದಿನಂತೆ, ನಾನು ಮಿಲಿಟರಿ ಕ್ಯಾಂಪ್ನಲ್ಲಿ ಅಡುಗೆ ಮನೆಯಲ್ಲಿ, ಅಂದು ಏನು ಮಾಡುವುದೆಂದು ಯೋಚಿಸುತ್ತ, ಮೊದಲಿಗೆ ಎಲ್ಲರಿಗೂ ಚಹಾದ ವ್ಯವಸ್ಥೆ ಮಾಡಲು ನನ್ನ ಸಹಪಾಠಿಗೆ ಹೇಳುತ್ತಿದೆ.

ಆಗಲೇ ನನಗೆ ಸುರ್ಜಿತ್ ಗಾಯಗೊಂಡು ಹೋಸ್ಪಿಟಲ್ಗೆ ಅಡ್ಮಿಟ್ ಆಗಿರುವ ವಿಚಾರ ತಿಳಿದಿದ್ದು.

ತಕ್ಷಣ ಸಾಹೇಬರಿಗೆ ವಿಷಯ ತಿಳಿಸಿ, ಸ್ನೇಹಿತರಿಗೆ ಅಡುಗೆ ಕೆಲಸ ವಹಿಸಿ, ಸುರ್ಜಿತ್ನನ್ನು ನೋಡಲೆಂದು ಹೊರಟೆ.

ನನ್ನ ಸುರ್ಜಿತ್ ಸ್ನೇಹ 6 ವರ್ಷಕ್ಕೂ ಮೀರಿದ್ದು. ಕಮಾಂಡೋ ಯೂನಿಟ್ ನಲ್ಲಿದ್ದ ಸುರ್ಜಿತ್, ಅಲ್ಲಿಯೇ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ನನಗೆ ಕೆಲವೇ ದಿನಗಳಲ್ಲಿ ಆತ್ಮೀಯ ಸ್ನೇಹಿತನಾದ. ತುಂಬಾ ಸರಳವಾದ ವ್ಯಕ್ತಿತ್ವದ ಸುರ್ಜಿತ್ ತುಂಬಾ ಧೈರ್ಯಶಾಲಿ ಹಾಗು ಬುದ್ದಿವಂತ. ತುಂಬಾ ಸ್ನೇಹ ಮಹಿಯಾದ ಸುರ್ಜಿತ್, ತನ್ನ ಎಲ್ಲ ವಿಷಯಗಳನ್ನು ನನ್ನ ಹತ್ತಿರ ಹೇಳಿಕುಳ್ಳುತ್ತಿದ್ದ.

ಊರಿನಲ್ಲಿ ಅವನ ತಾಯಿ ಮಾತ್ರ ಇದ್ದಳು; ಕೆಲವು ವರ್ಷದ ಹಿಂದೆ, ಒಂದು ಆಕ್ಸಿಡೆಂಟ್ ನಲ್ಲಿ ತಂದೆ ಮತ್ತು ತಮ್ಮನನ್ನು ಕಳೆದು ಕೊಂಡ ಸುರ್ಜಿತ್, ತಾಯಿಯನ್ನು ಬಹಳ ಗೌರವಿಸುತ್ತಿದ್ದ. ಅವಳು, ಸುರ್ಜಿತ್ ಕಳುಹಿಸುತ್ತಿದ್ದ ಹಣದಲ್ಲಿ, ಊರಿನಲ್ಲಿರುವ ಬಡವರಿಗೆ, ಪ್ರತಿದಿನ ಅಡುಗೆ ಮಾಡಿ ಬಡಿಸುತ್ತಾ ಅದರಲ್ಲೇ ಆನಂದ ಪಡುತ್ತಿದ್ದಳು.

ಸುರ್ಜಿತ್ ಯಾವುದಕ್ಕೂ ಹೆದರದ ಗಂಡುಗಲಿ; ಅವನಿಗೆ ಇದ್ದದ್ದು ಸಾವಿನ ಭಯವಲ್ಲ. ಕಮಾಂಡೋ ಯೂನಿಟ್ ನಲ್ಲಿ ಇದ್ದ ಪ್ರತಿ ಯೋದ್ಧನಿಗೂ ಇದು ಗೊತ್ತಿತ್ತು; ಸಾವು ತಮ್ಮ ಸುತ್ತಮುತ್ತ ತಿರುಗಾಡುತ್ತಲಿದೆ ಎಂದು. ಸುರ್ಜಿತ್ ತನ್ನ ನಂತರ ತನ್ನ ತಾಯನ್ನು ನೋಡಿಕೊಳ್ಳಲು ಯಾರು ಇಲ್ಲವೆಂದು ಕೊರಗುತ್ತಿದ್ದ.

ಕೆಲವೇ ದಿನಗಳಲ್ಲಿ ರಜೆ ತೆಗೆದುಕೊಂಡು ಸುರ್ಜಿತ್ ಊರಿಗೆ ಹೋಗುವವನಿದ್ದ.

ಜೀಪ್ ಹಾಸ್ಪಿಟಲ್ ಮುಂದೆ ಬಂದು ನಿಲ್ಲುತ್ತಿದ್ದಂತೆ, ನನ್ನೆದೆ ಢವಢವನೆ ಹೊಡಿದುಕೊಳ್ಳುತ್ತಿತ್ತು.

ಒಳಗೆ ಹೋಗಿ ನೋಡುವದಕ್ಕೆ ಮುಂಚೆ ಅಲ್ಲಿದ್ದ ಪ್ಯಾರಾ ಮೆಡಿಕ್ಸ್ ಹೇಳಿದ್ದನ್ನು ಕೇಳಿ ನನ್ನ ಕಣ್ಣೆರಡು ತುಂಬಿ ಬಂತು; ಸುರ್ಜಿತ್ 10ಕ್ಕೂ ಹೆಚ್ಚು ಬುಲೆಟ್ ಗಳ ಗಾಯದಿಂದ ಪಾರಾಗಿದ್ದೆ ಒಂದು ಪವಾಡ, ಹಾಸ್ಪಿಟಲ್ ವರೆಗೆ ಅವನು ಬರುತ್ತಾನೆಂದು ನಮಗೆ ನಂಬಿಕೆ ಇರಲಿಲ್ಲ.

ಹಾಸಿಗೆಯ ಮೇಲೆ ಜ್ಞಾನ ತಪ್ಪಿ ಮಲಗಿದ್ದ ಸುರ್ಜಿತ್; ಅವನ ಮೈ ತುಂಬಾ ಬ್ಯಾಂಡೇಜ್, ಮೂಗಿನಿಂದ ಹಾಕಿದ್ದ ಕೊಳವೆಗಳು, ಕೇವಲ ಕಣ್ಣು ಮಾತ್ರ ಕಾಣುವಂತೆ ತಲಗೆ ಸುತ್ತಿದ್ದ ಬ್ಯಾಂಡೇಜ್, ಒಹ್, ನನಗೆ ತಲೆ ತಿರುಗಿದಂತಾಗಿ, ಸುರ್ಜಿತ್ ನನ್ನೇ ನೋಡ್ದುತ್ತ, ಅವನ ತಾಯಿಯ ಬಗ್ಗೆ ಯೋಚಿಸುತ್ತ, ಅಲ್ಲೇ ಇದ್ದ ಕುರ್ಚಿ ಮೇಲೆ ಕುಳಿತೆ.

ಇದ್ದಕ್ಕಿದಂತೆ ಸುರ್ಜಿತ್ ಕಣ್ಣು ಬಿಟ್ಟು ಅತ್ತಿತ್ತ ನೋಡುತ್ತಾ, ನನ್ನನ್ನು ಗುರುತಿಸಿ ಆಗದಿದ್ದರೂ ಕೂಡ, ಕಷ್ಟ ಪಟ್ಟು ಕಿರು ನಗೆ ಸೂಸಿದ.

ಹಾಸಿಗೆಯ ತುದಿಯಲ್ಲಿ ಕುಳಿತು, ಬ್ಯಾಂಡೇಜ್ ನಿಂದ ಹೊರಬಂದಿದ್ದ ಅವನ ಬೆರಳನ್ನು ಮೃದುವಾಗಿ ಒತ್ತಿದೆ.

ಏನನ್ನೂ ಹೇಳಲು ಅವನು ಪರಿತಪಿಸುತ್ತಿದ್ದ.

ತುಟಿ ಅಲುಗಾಡುತ್ತಿತ್ತು; ಶಬ್ದಗಳು ಹೊರ ಬರುತ್ತಿರಲಿಲ್ಲ.

ಅವನ ಕಿವಿಯ ಹತ್ತಿರ ಮೆಲ್ಲಗೆ ಹೇಳಿದೆ. "ಸುರ್ಜಿತ್? ನೀನು ಏನನ್ನೂ ಹೇಳಬೇಕೆಂದು ಪ್ರಯತ್ನಿಸುತ್ತಿರುವೆ. ಹೌದ?"

ಅವನ ಕಣ್ಣು ಗುಡ್ಡೆಗಳಿಂದಲೇ ಹೌದೆಂದು ಉತ್ತರಿಸಿದ.

"ನಿನ್ನ ತಾಯಿಯ ಬಗ್ಗೆ, ತಾನೇ?" ಮೃದುವಾಗಿ ಹೇಳಿದೆ ನಾನು.

ಪ್ರಯತ್ನ ಪಟ್ಟು ನಿಧಾನವಾಗಿ ಏನನ್ನು ಹೇಳಿದ ಸುರ್ಜಿತ್.

ನನಗೆ ಸರಿಯಾಗಿ ಕೇಳಿಸ ಲಿಲ್ಲ. ಪತ್ರ ಎಂದ ಹಾಗಿತ್ತು.

"ನೀನು ಏನು ಪತ್ರ ಬರೆದಿಟ್ಟಿದ್ದೀಯಾ? ನಿನ್ನ ರೂಮಿನಲ್ಲಿ?"

ಹೌದೆಂದು ಬಹಳ ಪ್ರಯತ್ನ ಪಟ್ಟು ತಲೆಯಾಡಿಸಿದ.

"ನಿನ್ನ ತಾಯಿಯ ಬಗ್ಗೆಯ?"

ಅವನ ಕೆಂಪಾದ ಕಣ್ಣುಗಳು ನೀರಿಂದ ತುಂಬಿ ಹರಿಯಿತು.

ನಾನು ಎದ್ದು ನಿಂತು ಹೇಳಿದೆ.

"ಸುರ್ಜಿತ್, ನಮ್ಮ ಸ್ನೇಹದ ಮೇಲಾಣೆ. ನಿನ್ನ ತಾಯಿ, ಇನ್ನು ಮುಂದೆ ನನ್ನ ತಾಯಿ. ನೀನೇನು ಕಾಳಜಿ ಮಾಡಬೇಡ. ಆ ಪತ್ರ ದಲ್ಲಿ ಏನಿದೆಯೋ ಅದನ್ನು ನಾನು ಪೂರ್ಣ ಮಾಡುತ್ತೇನೆ. ನೀನು ಮೊದಲಿಗೆ ಹುಷಾರಾಗುವುದನ್ನು..."

ನನ್ನ ಮಾತು ಮುಗಿಯುವದಕ್ಕೆ ಮುಂಚೆ, ಸುರ್ಜಿತ್ನ ಪ್ರಾಣ ಪಕ್ಷಿ ಹಾರಿ ಹೋಗಿತ್ತು.

ನನ್ನ ಯೋಚನೆಯಿಂದ ಹೊರಗೆ ಬಂದು ಆ ಮುದುಕಿಯ ಕಡೆ ನೋಡಿದೆ.

ನನ್ನನ್ನೇ ನೋಡುತ್ತಿದ್ದ ಆ ತಾಯಿಯನ್ನು ನೋಡಿ, ಹೇಗೆ ವಿಷಯ ತಿಳಿಸುವುದೆಂದು ಪರದಾಡುತ್ತಿದ್ದ ನನ್ನನ್ನು ನೋಡುತ್ತಾ ಹೇಳಿದಳು, "ಬೇಟಾ, ನೀನು ಇಷ್ಟು ಕಷ್ಟ ಪಡುವುದನ್ನು ನನಗೆ ನೋಡಲಾಗುತ್ತಿಲ್ಲ. ಅದೇನು ಹೇಳಬೇಕು ಧೈರ್ಯವಾಗಿ ಹೇಳು."

"ಮಾಜಿ, ಸುರ್ಜಿತ್ ಬಹಳಷ್ಟು ಗುಂಡೇಟಿನಿಂದ...." ಮುಂದೆ ಹೇಳಲಾಗದೆ, ಜೋರಾಗಿ ಅತ್ತು ಬಿಟ್ಟೆ.

ಎದ್ದು ಬಂದು ನನ್ನ ತಲೆ ಸವರುತ್ತ ನುಡಿದಳು ಆ ತಾಯಿ.

"ನನ್ನ ಸುರ್ಜಿತ್ ಶಹೀದ್ ಆದ?"

ಅವಳ ಮಾತು ಕೇಳಿ ಅವಳ ಮುಖವನ್ನೇ ನೋಡಿದೆ. ಅವಳ ಕಣ್ಣಲ್ಲಿ ನಿಧಾನ ವಾಗಿ ಅಶ್ರುಗಳು ಬರುತ್ತಿತ್ತು.

"ಹೌದು ಮಾಜಿ. ಸುರ್ಜಿತ್ ನಮ್ಮನ್ನು ಬಿಟ್ಟು ಹೊರಟು ಹೋದ. ಅವನ ಇಚೆಯೆಂತೆ, ನಿಮ್ಮನ್ನು ನಮ್ಮ ಮನೆಗೆ ಕರೆದೊಯ್ಯಲು ಬಂದಿದ್ದೇನೆ. ನಾನು ಸುರ್ಜಿತ್ ತುಂಬಾ ಆತ್ಮೀಯ ಸ್ನೇಹಿತರು. ಅವನು ಇಲ್ಲಿನ ಎಲ್ಲಾ ವಿಷಯ ನನಗೆ ಹೇಳುತ್ತಿದ್ದ. ನಿಮ್ಮ ಎಲ್ಲ ಪತ್ರಗಳನ್ನು ಓದಿ ಹೇಳುತ್ತಿದ್ದ..."

ಸುರ್ಜಿತ್ ತಾಯಿಗೆ ಓದು ಬರಹ ಬರುತ್ತಿರಲಿಲ್ಲ, ಸುರ್ಜಿತ್ ಬರೆದ ಪತ್ರಗಳನ್ನು ಊರಿನ ಮುಖಿಯ ಓದಿ ಹೇಳುತ್ತಿದ್ದ, ಹಾಗು ಅವಳ ಉತ್ತರ ಬರೆದು ಕಳುಹಿಸುತ್ತಿದ್ದ.

ಅವಳು ಎದ್ದು ನಿಂತು ನನ್ನೆಡೆಗೆ ನೋಡುತ್ತಾ ನುಡಿದಳು.

"ನನ್ನ ಸುರ್ಜಿತ್ ಮಾತಿಗೆ ಬೆಲೆ ಕೊಟ್ಟು ಇಷ್ಟು ದೂರ ಬಂದ ನಿನಗೆ ತುಂಬಾ ಧನ್ಯವಾದಗಳು. ಆದರೆ, ಬೇಟಾ, ನಾನು ಎಲ್ಲೂ ಬರುವುದಿಲ್ಲ. ನಾನು ಹುಟ್ಟಿದ್ದು ಈ ಊರಿನಲ್ಲೇ, ಇಲ್ಲೇ ನನ್ನ ಕೊನೆ ಉಸಿರು ಕೂಡ.

ನನ್ನ ಮಗ ತಾನು ಇಲ್ಲದಿದ್ದರೂ, ನನ್ನ ಜೀವನಕ್ಕೆ ಬೇಕಾಗುವಷ್ಟು ಹಣದ ವ್ಯವಸ್ಥೆ ಮಾಡಿದ್ದಾನೆಂದು ನೀನೆ ಹೇಳಿದೆಯಲ್ಲ?. ಸರ್ಕಾರದ ಕಡೆಯಿಂದ ಬರುವ ಹಣದಿಂದ ಎಂದಿನಂತೆ, ಬಡ ಬಗ್ಗರಿಗೆ ಊಟ ಮಾಡಿ ಹಾಕುತ್ತಾ ನನ್ನ ಜೀವನ ಕಳೆಯುತ್ತೇನೆ. 

ಆದರೆ ನನಗೆ ಒಂದೇ ಕೊರಗು...

"ಬೇಟಾ, ನನಗೆ ಇಬ್ಬರು ಮಕ್ಕಳು. ಸುರ್ಜಿತ್ ನಂತರ ಇನ್ನೊಬ್ಬ ಮಗ ಇದ್ದ. ಯಾವುದೊ ದುರ್ದೆಶೆಯಿಂದ ಅವನು ಚಿಕ್ಕ ವಯಸ್ಸಿನಲ್ಲಿ ಕಾಲವಾದ. ಅವನು ಬದುಕಿದ್ದರೆ, ಸುರ್ಜಿತ್ ನಂತೆ, ಅವನನ್ನು ಫೌಜಿಗೆ ಭರ್ತಿ ಮಾಡಿಸುತ್ತಿದ್ದೆ. ಈಗ ಅದು ಸಾಧ್ಯವಿಲ್ಲವೆಂಬುದೇ ನನ್ನ ಕೊರಗು."

ಹೊರಡಲು ಎದ್ದು ನಿಂತ ನನ್ನ ಮನಸ್ಸಿನಲ್ಲಿ ಆಗುತ್ತಿದ್ದ ಗೊಂದಲದ ಬಗ್ಗೆ ಯೋಚಿಸುತ್ತ ನಡೆದೆ.

ಯಾರದು ಹೆಚ್ಚು ತ್ಯಾಗ?

ತಮ್ಮ ಪ್ರಾಣವನ್ನೇ ಒತ್ತೆಯಾಗಿಟ್ಟು ದೇಶಕ್ಕಾಗಿ ಹೋರಾಡುವ ಯೋದ್ಧನದೇ? ಅಥವಾ ಅಂತಹ ಮಕ್ಕಳನ್ನು ಹಡೆದು, ನಿಸ್ವಾರ್ಥತೆಯಿಂದ ದೇಶಕ್ಕಾಗಿ ಮುಡುಪಾಗಿಡುವ ತಾಯಿಯದೇ?

ಹಿಂದೆ ತಿರುಗಿ ಹಳೆಯ ಬಟ್ಟೆಯುಟ್ಟು, ಮುರುಕಲು ಮನೆಯ ಮುಂದೆ ನಿಂತಿದ್ದ ಆ ಮುದುಕಿಯ ಕಡೆ ನೋಡಿ ನನ್ನ ತಲೆಯೆತ್ತಿ ಒಂದು ಸಲ್ಯೂಟ್ ಮಾಡಿದೆ.!


Rate this content
Log in

Similar kannada story from Drama