Vadiraja Mysore Srinivasa

Drama Romance Classics

2  

Vadiraja Mysore Srinivasa

Drama Romance Classics

ಹೇಡಿ

ಹೇಡಿ

7 mins
184


ಎಂದಿನಂತೆ, ಜೋರಾಗಿ ಸೈಕಲ್ ನಲ್ಲಿ ಬಂದವನೇ, ಗೇಟನ್ನು ತಳ್ಳಿ ಜಂಪ್ ಮಾಡಿ ಕೆಳಗಿಳಿದ. ಇನ್ನೇನು ಬಾಗಿಲು ತಟ್ಟಬೇಕೆನ್ನುವಷ್ಟರಲ್ಲಿ, ಜೋರಾದ ಚಪ್ಪಾಳೆ ಶಬ್ದವನ್ನು ಕೇಳಿ ತಿರುಗಿ ನೋಡಿದ. ಕಂಪೌಂಡಿನ ಆಚೆ ನಿಂತಿದ್ದ ಹುಡುಗಿ ಅವನನ್ನೇ ನೋಡುತ್ತಾ ಮತ್ತಮ್ಮೆ ಚಪ್ಪಾಳೆ ಹೊಡೆಯುತ್ತ ಹೇಳಿದಳು. "ಒಹ್? ದಿನಾಗಲೂ, ನೀನು ಹೀಗೆನಾ ಹೀರೋ ತರ ಎಂಟ್ರಿ ಕೊಡೋದು?

ಮೊಟ್ಟ ಮೊದಲ ಬಾರಿಗೆ ಅವಳ ಮುಖವನ್ನು ನೋಡಿದ. ಸುಂದರವಾದ ದುಂಡು ಮುಖ, ನಗುವುದಕ್ಕೂ ಮುಂಚೆಯೇ ಎರಡೂ ಕಡೆ ಬೀಳುತಿದ್ದ ಆಳವಾದ ಗುಳಿಗಳು, ಫಳ, ಫಳನೆ ಹೊಳೆಯುವ ಚುರುಕಾದ ತುಂಟುತನ ಹೊರಹೊಮ್ಮುವ ಕಣ್ಣುಗಳು, ಅವಳನ್ನು ನೋಡುತ್ತಾ ನಿಂತವನಿಗೆ, ಮಾತೆ ಹೊರಡಲಿಲ್ಲ.

"ಒಹ್? ಮಾತ್ ಬರೋದಿಲ್ವ ನಿಂಗೆ?” ಕಣ್ಣುಗಲ್ಲಿ ತುಂಟತನ ತೋರಿಸುತ್ತಾ ನುಡಿದಳು. ಆ ಹುಡುಗ, ಮುಖವನ್ನು ಆಕಡೆ ತಿರುಗಿಸಿ ನುಡಿದ. "ಮಾತ್ ಬರದೇ ಏನು. ನೀನು ಸಡನ್ ಆಗಿ ಹಾಗೆ ಮಾಡಿದರೆ ನಾನೇನು ಮಾಡಲಿ. ಎಲ್ಲಿಂದ ಬಂದೆ ನೀನು. ಹಿಂದೆಂದೂ ನಿನ್ನ ನೋಡಿಲ್ಲವಲ್ಲಾ?"

"ಯಾಕೆ? ನನ್ನನ್ನು ಫ್ರೆಂಡ್ ಮಾಡ್ಕೋಬೇಕಾ?"

ಅವಳ ಡೈರೆಕ್ಟ್ ಮಾತು ಕೇಳಿ ಕಕ್ಕಾಬಿಕ್ಕಿಯಾದ ಆ ಹುಡುಗ ಏನನ್ನು ಹೇಳ್ದೆ ಬಾಗಿಲು ತೆಗೆದು ಒಳಗೆ ಹೋದ. ಅವನ ಬೆನ್ನ ಹಿಂದೆಯೇ ಅವಳ ಕಿಲ ಕಿಲ ನಗು ತೇಲಿ ಬಂತು.

ಹೀಗೆಯೇ ಅವನ ಹಾಗು ಪೂರ್ವಿಯ - ಅವಳ ಹೆಸರು ಅನಂತರ ತಿಳಿಯಿತು - ಮಧ್ಯೆ ಸ್ನೇಹ ಬೆಳೆಯಲು ಶುರುವಾಗಿದ್ದು.

ಬರಡು ಬರಡಾಗಿದ್ದ ಅವನ ಜೀವನದಲ್ಲಿ ತಂಪಾದ ತಂಗಾಳಿಯಾಗಿ ಬಂದಳು, ಪೂರ್ವಿ. ಒಂದು ಪ್ರೈವೇಟ್ ಕಂಪನಿಯಲ್ಲಿ ಕೆಲಸಕ್ಕಿದ್ದ ಅವನಿಗೆ, ತಾನಾಯಿತು ತನ್ನ ಕೆಲಸವಾಯಿತು ಮತ್ತೆ, ಸಂಜೆ ಸ್ನೇಹಿತರ ಒಡನಾಟ ಬಿಟ್ಟರೆ ಬೇರೆ ಜೀವನವೇ ಇಲ್ಲವೆಂತಿದ್ದವನಿಗೆ , ಸಂಜೀವಿಯಾಗಿ ಬಂದಳು ಪೂರ್ವಿ.

ರಾತ್ರಿಯಲ್ಲ ನಿದ್ದೆ ಇಲ್ಲದೆ ಹೊರಳಾಡಿದ. ಬೆಳೆಗ್ಗೆ ಎದ್ದವನೇ, ಹೊರಗೆ ಹೋಗಿ ಪಕ್ಕದ ಮನೆಯ ಕಂಪೌಂಡ್ನತ್ತ ನೋಡಿದ. ಮನೆ ಬಾಗಿಲು ಹಾಕಿತ್ತು. ಅವಳ ಸುಳಿವಿಲ್ಲ.

ಆಫೀಸ್ನಲ್ಲಿ ಸಂಜೆ ಯಾಗುವುದನ್ನೇ ಕಾಯುತಿದ್ದವನಿಗೆ, ಸಂಜೆ ಎಂದಿನಂತೆ, ಸೈಕಲ್ ಒಳಗೆ ಇಡುವಾಗ ಮತ್ತೆ ಕಾಣಿಸಿಕೊಂಡಳು, ಗುಳಿ ಕೆನ್ನೆಯ ಚೆಲುವೆ.

"ನೀನು ನಗುವುದು ತುಂಬಾ ಜಾಸ್ತಿ. ಅದಕ್ಕೆ ಏನು ನಿನ್ನ ಹೆಸರು ಪೂರ್ವಿಅಂತ ಇಟ್ಟಿರೋದು”? ಅವಳೆಡೆಗೆ ನೋಡದೆ ನುಡಿದ.

"ಆದ್ರೇ ನೀನು ಸಿಕ್ಕಪಾಟ್ಟೆ ಸೀರಿಯಸ್. ಪರವಾಗಿಲವೇ, ನನ್ನ ಹೆಸರು ಬೇರೆ ತಿಳಿದಿಕೊಂಡಿದೀಯ? ಆದರೆ, ಬೇರೆ ಹುಡುಗರಿಗೆ ಕಂಪೇರ್ ಮಾಡಿದರೆ, ನೀನು ತುಂಬಾ ಲೇಟ್." ನಸುನಗುತ್ತಾ ಹೇಳಿದಳು ಪೂರ್ವಿ.

"ಏನು ಹಾಗೆಂದರೇ? ನನ್ನ ಜೀವನದಲ್ಲಿ, ಮೊಟ್ಟ ಮೊದಲ ಬಾರಿಗೆ ಒಬ್ಬ ಹುಡುಗಿಯ ಹೆಸರು ತಿಳಿದುಕೊಳ್ಳಲು ಪ್ರಯತ್ನಿಸಿದ್ದೇನೆ. ಕಾಲೇಜಿನಲ್ಲಿ ಕೂಡ ಒಂದು ಹುಡುಗಿಯ ಹತ್ತಿರ ಮಾತನಾಡಿದವನಲ್ಲ ನಾನು ಗೊತ್ತಾ?" ತಲೆ ತಗ್ಗಿಸುತ್ತ ನುಡಿದ ಹುಡುಗ.

"ನೀನೆಂತಾಹುಡುಗನಯ್ಯಾ? ನಾನು ಭೇಟಿಮಾಡಿದ ಹುಡುಗರೆಲ್ಲ, ಮೊದಲು ನನ್ನ ಹೆಸರು ತಿಳಿದುಕೊಳ್ಳುವುದಕ್ಕೆ ಶತ ಪ್ರಯತ್ನ ಮಾಡುತ್ತಾರೆ, ಗೊತ್ತ? ಅಲ್ಲಿಂದ ತಾನೇ ಫ್ರೆಂಡ್ಶಿಪ್ ಶುರುವಾಗೋದು?" ಅವನನ್ನು ರೇಗಿಸುವ ಧ್ವನಿಯಲ್ಲಿ ಹೇಳಿದಳು ಪೂರ್ವಿ.

"ಬೇರೆಯವರ ವಿಷಯ ನನಗೆ ಬೇಡ. ನನ್ನ ಜೀವನದಲ್ಲಿ ನಾನು ಮಾತ್ನಾಡಿಸುತ್ತಿರುವ ಮೊದಲನೇ ಹುಡುಗಿ ನೀನು." ಬಾಗಿಲು ತೆರುದು ಒಳಗೆ ಹೋಗುತ್ತಾ ನುಡಿದ.

ಅವಳ ಹತ್ತಿರ ತುಂಬಾ ಮಾತನಾಡ ಬೇಕೆಂದು ಹಾತೊರೆಯುತ್ತಿತ್ತು ಆ ಹುಡುಗನ ಮನಸ್ಸು, ಆದರೆ, ಬೆಳೆಗ್ಗೆ ಹೊತ್ತುಮಾತ್ರ, ಪೂರ್ವಿ ಅವನ ಕಣ್ಣಿಗೆ ಬೀಳುತ್ತಿರಿಲಿಲ್ಲ. ತಾಯಿಯ ಮಾತಿಗೆ ಕಟ್ಟುಬಿದ್ದು, ನಾಸ್ತಿಕನಾದ ಆ ಹುಡುಗ, ಒಂದು ದಿನ ದೇವಾಸ್ಥಾನಕ್ಕೆ ಹೋದವನಿಗೆ ಅಲ್ಲಿ ನಿಂತಿದ್ದ ಪೂರ್ವಿಯನ್ನು ನೋಡಿ ನಿಧಿ ದೊರಕಿದವನಂತೆ, ಹಿಗ್ಗಿದ. 

"ಒಹ್ ಏನು, ಇವತ್ತು ಅಮ್ಮನ ಬದಲಿಗೆ ನೀನು ಬಂದಿದ್ದೆಯಲ್ಲ? ದೇವ್ರ ಹತ್ರ ಏನು ಕೇಳಲಿಕ್ಕೆ?"

ನಸುನಗುತ್ತಲಿದ್ದ ಹುಡುಗಿಯ ಕಣ್ಣಲ್ಲಿ ಕಣ್ಣಿಟ್ಟು ನುಡಿದ ಹುಡುಗ. "ನಿನ್ನನ್ನು"

ಇದ್ದಬದ್ದ ಧೈರ್ಯವನ್ನೆಲ್ಲ ಕಲೆಗೂಡಿಸಿ, ಒಂದು ಸಂಜೆ ಮನೆಗೆ ಬರುತ್ತಲೇ ಕೇಳಿದ ಪೂರ್ವಿಯನ್ನು. "ನನ್ನೊಟ್ಟಿಗೆ ಸಿನಿಮಾಗೆ ಬರುತ್ತೀಯಾ"

"ಪರವಾಗಿಲ್ಲವೇ? ನಾಟ್ ಬ್ಯಾಡ. ಯು ಆರ್ ಫಾಸ್ಟ್ ಲರ್ನರ್. ಒಂದು ಹುಡುಗಿಯನ್ನು ಸಿನೆಮಾಗೆ ಕರೆಯುವಷ್ಟು ಬೆಳೆದಿದ್ದೀಯ. ಶಬಾಷ್. ಆದರೆ ಒಂದು ಪ್ರಾಬ್ಲಮ್. ಇಲ್ಲಿಂದ ನಿನ್ನೊಟ್ಟಿಗೆ ನಾನು ಬರಲ್ಲ. ಥೀಯೇಟರ್ಗೆ ಡೈರೆಕ್ಟ್ ಆಗಿ ಬರ್ತೀನಿ. ಓಕೆ ನ?"

"ನಿಜವಾಗಲೂ ಬರ್ತಿಯಾ?" ಅನುಮಾನದಿಂದ ನುಡಿದ.

ಹುಡುಗ ಕೊಟ್ಟ ಟಿಕೆಟ್ ಕೈಯಲ್ಲಿ ಹಿಡಿದು ಮುಗುಳು ನಗೆ ನಗುತ್ತಾ, ಒಳಗೆ ಹೋಗಿ ಬಾಗಿಲು ಹಾಕಿ ಕೊಂಡಳು ಪೂರ್ವಿ.

ಥೀಯೇಟರ್ ಮುಂದೆ ನಿಂತು ಕಾಯುತ್ತಲಿದ್ದ ಹುಡುಗನಿಗೆ ನಿರಾಶೆಯಾಯಿತು. ಪೂರ್ವಿಯ ಸುಳಿವಿಲ್ಲ!

ಬೇಸರ ಗೊಂಡ ಹುಡುಗ ಸಿನಿಮಾ ಶುರುವಾದ ನಂತರ ಒಳಗೆ ಹೋಗಿ ತನ್ನ ಸೀಟಿನಲ್ಲಿ ಕುಳಿತವನಿಗೆ, ಶಾಕ್ ಕಾದಿತ್ತು. ಪೂರ್ವಿಯ ಸೀಟ್ನಲ್ಲಿ ಬೇರೆ ಯಾರೋ ಕುಳಿತಿದ್ದರು. ಕತ್ತಲಲ್ಲಿ ಏನೂ ಕಾಣಿಸುತ್ತಿರಲಿಲ್ಲ. ಧೈರ್ಯ ಮಾಡಿ ಕೇಳಿದ ಹುಡುಗ. "ಸಾರ್ ಈ ಟಿಕೆಟ್ ನಿಮಗೆ ಹೇಗೆ ಸಿಕ್ತು?"

"ಪೂರ್ವಿ ಕೊಟ್ಟಳು." ಉತ್ತರಿಸಿದ ಆ ವ್ಯಕ್ತಿ. ಕಕ್ಕಾಬಿಕ್ಕಿಯಾದ ಆ ಹುಡುಗ. ಯಾಕೆಂದರೆ, ಆ ಧ್ವನಿ ಪಕ್ಕದ ಮನೆಯ, ಆ ಹುಡುಗನ ಸ್ನೇಹಿತ, ಚಂದ್ರುವಿನದಾಗಿತ್ತು.

ಬುಸುಗುಟ್ಟುತ್ತಾ ಹೊರ ನಡೆದ ಆ ಹುಡುಗ.

ಸಂಜೆ ಎಂದಿನಂತೆ ಸೈಕಲ್ ನಿಂದ ಕೆಳಗಿಳಿದವನೇ, ಕೋಪದಿಂದ ಕುದಿಯುತ್ತಾ, ಮುಖ ಆಕಡೆ ತಿರುಗಿಸಿಕೊಂಡು ಅವಳು ಕರೆಯುತ್ತಿದ್ದರೂ, ಪೂರ್ವಿಯ ಕಡೆ ನೋಡದೆ ನುಡಿದ. "ನಿನಗೆ ಬರಕ್ಕೆ ಇಷ್ಟಾ ಇಲ್ಲದಿದ್ರೆ, ಸುಳ್ಳು ಸುಳ್ಳೇ ಯಾಕೆ ಪ್ರಾಮಿಸ್ ಮಾಡಿ ಟಿಕೆಟ್ ತೆಗೆದುಕೊಂಡೆ? ನನಗೆ ಅವಮಾನ ಮಾಡುವುದಕ್ಕಾ?"

"ಅರೇ, ಮೊದಲಿಗೆ ನಿನ್ನ ಮುಖ ತೋರಿಸು. ಒಹ್ ಮೈ ಗಾಡ್!

ನಿನ್ನ ಆ ಬಿಳೀ ಕೆನ್ನೆಗಳು ಎಷ್ಟು ಕೆಂಪಗಾಗಿದೆ ಗೊತ್ತ? ಯಾವುದಾದರೋ ತಪ್ಪು ನಿರ್ಧಾರ ಮಾಡುವುದಕ್ಕೆ ಮುಂಚೆ, ದಯವಿಟ್ಟು ನನ್ನ ಮಾತು ಕೇಳು."

ಹುಡುಗ ನಿಧಾನವಾಗಿ ಅವಳೆಡೆಗೆ ತಿರುಗಿದ.

"ಪ್ರಾಮಿಸ್! ನಾನು ಬರಬೇಕೆಂದಿದ್ದೆ. ನನ್ನ ಕಸಿನ್ ಚಂದ್ರು, ನಿನ್ನ ಫ್ರೆಂಡ್ ಕೂಡ ಅದೇ ಸಿನೆಮಾಗೆ ಕರೆದುಕೊಂಡುಹೋಗಬೇಕೆಂದಿದ್ದ. ಅದಕ್ಕೆ, ನನ್ನ ಟಿಕೆಟ್ ಅವನಿಗೆ ಕೊಟ್ಟೆ. ದಯವಿಟ್ಟು ಕೋಪ ಮಾಡ್ಕೋಬೇಡ. " ನವಿರಾಗಿ ನುಡಿದಳು ಪೂರ್ವಿ.

ಆ ಹುಡುಗನಿಗೆ ಯಾವ ಸಬೂಬು ಕೇಳಬೇಕಿರಲಿಲ್ಲ. ಸೈಕಲ್ಅನ್ನು ಕಾಲಿನಿಂದ ಒದ್ದು ಒಳ ನಡೆದ.

ಎಂದಿನಂತೆ ಸಂಜೆ ಸೈಕಲ್ ಒಳಗೆ ನಿಲ್ಲಿಸಿದವನು ಅಲ್ಲಿ ಪೂರ್ವಿ ಕಾಣದಿದ್ದನ್ನು ಕಂಡು ಬೇಸರಗೊಂಡ. ಬಹುಶ, ನಾನು ಸ್ವಲ್ಪ ಜಾಸ್ತಿಯೇ ರಿಯಾಕ್ಟ್ ಮಾಡಿದೆ ಎಂದುಕೊಂಡು, ಅವಳು ಕಂಡ ಕೂಡಲೇ ಕ್ಷಮೆಯಾಚಿಸಬೇಕೆಂದುಕೊಂಡ.

ಒಳಗೆ ಹೋದವನಿಗೆ ಶಾಕ್ ಕಾದಿತ್ತು!

ಅವನ ಅಮ್ಮನ ಜೊತೆ ಪೂರ್ವಿ ಹರಟೆ ಹೊಡೆಯುತ್ತ ಕುಳಿತಿದ್ದವಳು, ಅವನನ್ನು ನೋಡಿ ಕಣ್ಣು ಮಿಟುಕಿಸಿ ತುಂಟ ನಗೆ ಬೀರಿದಳು. ಅಂದು ರಾತ್ರಿ 10 ಘಂಟೆಯಾದರು, ಕಾಂಪೌಂಡ್ ಬಳಿ ಕಾಯುತಿದ್ದ ಪೂರ್ವಿಯನ್ನು ನೋಡಿ ಆ ಹುಡುಗ ಕರಗೇ ಹೋದ.

"ನಾಳೆ ಸಂಜೆ ಗುಡಿಯ ಹತ್ತಿರವಿರುವ ಕೆರೆಯ ಹತ್ತಿರ ನಾನು ಕಾದಿರುತ್ತೇನೆ. ನಿನ್ನೊಂದಿಗೆ ತುಂಬಾ ಮಾತನಾಡುವುದಿದೆ. ಬರುತ್ತಿಯಾ?" ಕೇಳಿದಳು ಪೂರ್ವಿ.

ಅವನಿಗೆ ಮತ್ತೆ ಜೀವ ಬಂದಂತಾಯ್ತು.

ಕೆರೆಯ ಏರಿಯ ಮೇಲೆ ಸೈಕಲ್ ಮರಕ್ಕೆ ಒರಗಿಸಿ ಆ ಹುಡುಗ ಅತ್ತಿತ್ತ ನೋಡಿದ. ಸಣ್ಣಗೆ ಮಳೆ ಬರುತ್ತಿತ್ತು. ದೂರದಲ್ಲಿ ಕಂಡ ಪೂರ್ವಿಯ ಕಡೆ ದಾಪುಗಾಲಿಡುತ್ತ ನಡೆದ ಹುಡುಗ. ಅವಳೊಂದಿಗೆ ಮಾತನಾಡುತ್ತಿದವನಿಗೆ, ಹೊತ್ತು ಹೋಗಿದ್ದೆ ಗೊತ್ತಾಗಲಿಲ್ಲ.

ಕೆರೆಯ ಏರಿಯಾ ಮೇಲೆ ಬಿದ್ದಿದ ಸಣ್ಣ ಕಲ್ಲೊಂದನ್ನು ಹಿಡಿದು ಕೇಳಿದಳು, ಪೂರ್ವಿ. "ಈ ಕಲ್ಲನ್ನು ನೀನು ನೀರಿನ ಮೇಲೆ ಎಷ್ಟು ಸಾರಿ ಬೌನ್ಸ್ ಮಾಡಬಲ್ಲೆ? "

ಅವನ ಪ್ರಯತ್ನಕ್ಕೆ ನಗುತ್ತಾ, ಸರಿಯಾಗಿ ಎಸೆಯುವದನ್ನು ತೂರಿಸಿಕೊಟ್ಟಳು ಪೂರ್ವಿ.

ಮನೆಗೆ ಹೊರಟಾಗ, ಸೈಕಲ್ ಏರಲು ಪೂರ್ವಿ ಸಮ್ಮತಿಸಲಿಲ್ಲ. ಹಾಗಾಗಿ, ಇಬ್ಬರೂ, ನಡೆದೇ ಬಂದರು; ಹುಡುಗ ಸೈಕಲ್ ತಳ್ಳಿಕೊಂಡು ಅವಳ ಮುಖವನ್ನೇ ಎವೆ ಇಕ್ಕದೆ ನೋಡುತ್ತಾ ನಡೆದ.

ಇದ್ದಕಿದ್ದಂತೆ, ನಡು ರಸ್ತೆಯಲ್ಲಿ ಪೂರ್ವಿ ನಿಂತಳು. ಆ ಹುಡುಗನ ಕಣ್ಣಿನಲ್ಲಿ ಕಣ್ಣಿಟ್ಟು ಹೇಳಿದಳು. "ನಾನು ಬೆಂಗಳೂರಿಗೆ ಬರುವುದಕ್ಕೂ ಮುಂಚೆಯೇ, ನನ್ನ ಮದುವೆ ಫಿಕ್ಸ್ ಆಗಿದೆ. ನಮ್ಮ ದೂರದ ಸಂಬಂಧಿಯ ಹುಡುಗನೊಂದಿಗೆ ಎಂಗೇಜ್ಮೆಂಟ್ ಆಗಿದೆ. ಇನ್ನು ಎರಡು ಮೂರು ತಿಂಗಳ ಒಳಗೆ ಮದುವೆಯ ಡೇಟ್ ಫಿಕ್ಸ್ ಆಗತ್ತೆ."

ಹುಡುಗನ ಕೈಯಿಂದ ಧಡಾರನೆ ಸೈಕಲ್ ಕೆಳಗೆ ಬಿತ್ತು. ಕಣ್ಣೇರು ಹನಿ ಹನಿಯಾಗಿ ಬೀಳುತ್ತಲಿತ್ತು.

ಅವನ ಕೈ ಹಿಡಿದು ನಿಧಾನವಾಗಿ ಅಮುಕುತ್ತಾ ಕೇಳಿದಳು ಪೂರ್ವಿ. "ನನ್ನನು ಕಂಡರೆ ನಿನಗೆ ಇಷ್ಟ ಅಂತ ನಂಗ್ ಗೊತ್ತು. ನನಗು ನಿನ್ ಕಂಡ್ರೆ ತುಂಬಾ ಇಷ್ಟ. ವಿಲ್ ಯು ಬಿ ಮೈ ಫ್ರೆಂಡ್ ಅಲ್ಲ್ವೆಸ್?"

ಅವಳ ಕೈ ಕೊಸರಿಸಿಕೊಂಡು, ಕೆಳೆಗೆ ಬಿದ್ದಿದ್ದ ಸೈಕಲ್ ಹತ್ತಿ, ಹಿಂದೆ ತಿರುಗಿನೋಡದೆ ಹೊರಟ.

"ಅಲ್ಲ, ಇದೇನು ಇದ್ದಕಿದ್ದಂತೆ? ನೀನು ರಾಕೇಶ್ ಮಾವ ಹತ್ರ ಮಾತಾಡಿದ್ದಾದ್ರೂ ಯಾವಾಗ? ಇದ್ದಕಿದ್ದದಂತೆ ಡೆಲ್ಲಿಗೆ ಹೋಗ್ತೀನಿ ಅಂತೀಯಲ್ಲ?" ಕಾತರ ದಿಂದ ಕೇಳಿದಳು ಆ ಹುಡುಗನ ತಾಯಿ.

 "ತುಂಬಾ ದಿನದ ಹಿಂದೇನೆ ಮಾತಾಗಿತ್ತು. ಇವತ್ತು ಆಫೀಸ್ನಲ್ಲಿ ಕೂಡ ಟ್ರಾನ್ಸ್ಫರ್ ಕೊಡಕ್ಕೆ ಒಪಿಕೊಂಡ್ರು. ಧಡಾರಂತ ಏನು ಇಲ್ಲ ಅಮ್ಮ." ಮುಸುಕು ಹಾಕಿಕೊಂಡೆ ಉತ್ತರಿಸಿದ.

ಹಾಸಿಗೆಯಲ್ಲಿ ಹೊರಳಾಡುತ್ತಾ ನಿರ್ಧರಿಸಿದ, ಇನ್ನೊಮ್ಮೆ ಆ ಪೂರ್ವಿಯ ಮುಖ ನೋಡುವುದಿಲ್ಲವೆಂದು.

ಬೆಳಿಗ್ಗೆ ಕಣ್ಣು ಬಿಡುತ್ತಲೇ ಅವನಿಗೆ ಆಶ್ಚರ್ಯ ಕಾದಿತ್ತು.

ಹಾಸಿಗೆಯಿಂದ ಎದ್ದು ನೋಡಿದವನಿಗೆ ಕಂಡಿದ್ದು, ಅಮ್ಮನ್ನ ಪಕ್ಕ ನಿಂತು ನಸುನಗುತ್ತಲಿದ್ದ ಪೂರ್ವಿ!

"ಏನ್ ಸಾಹೇಬ್ರು? ಡೆಲ್ಲಿಗೆ ಹೊರಟ್ಟಿದ್ದೀರಂತೆ?.. ವಾವ್ ಚಳಿಗಾಲದಲ್ಲಿ ಡೆಲ್ಲಿ ಎಷ್ಟು ಮಜವಾಗಿರತ್ತೆ ಗೊತ್ತ? ನನಗಂತೂ ಚಳಿಗಾಲ ಅಂದ್ರೆ ಪ್ರಾಣ. ಒಂದ್ ಕೆಲಸ ಮಾಡು. ನಿಮ್ ಕಂಪೆನಿಯವರಹತ್ರ ಮಾತಾಡಿ ಒಂದು ದೊಡ್ ಮನೆ ತೊಗೋ. ಡಿಸೆಂಬರ್ನಲ್ಲಿ ನಾನೂ ಬರ್ತೀನಿ. ನೀನು ನನಗೆ ಡೆಲ್ಲಿ ತೋರಿಸ್ತೀಯ ಅಲ್ವ?"

ಏನನ್ನು ಹೇಳಲು ತೋಚದೆ ಸುಮ್ಮನೆ ನಿಂತ ಹುಡುಗ, ಅಮ್ಮ ಅಡುಗೆ ಮನೆ ಕಡೆ ಹೋಗುತ್ತಿದ್ದಂತೆ, ಕೇಳಿದ. "ನಾನು ಈಗಲೇ ಕೆರೆ ಹತ್ರ ಹೋಗ್ತಾ ಇದ್ದೀನಿ. ಬರ್ತೀಯ?"

ಮರದ ಕೆಳೆಗಿನ ಬೆಂಚಿನ ಮೇಲೆ ಕುಳಿತ ಆ ಹುಡುಗ, ಪೂರ್ವಿಯ ಕೈ ಹಿಡಿದು ಕಳಕಳಿಯಿಂದ ಕೇಳಿದ.

"ನೀನು ಮನಸ್ಸು ಬದಲಾಯಿಸಲು ಸಾಧ್ಯವಿಲ್ವಾ? ದಯವಿಟ್ಟು.. ಒಂದ್ ಚಾನ್ಸ್ ಕೊಡು ನನಗೆ. ನಾನು ನಿಜವಾಗಲೂ ನಿನ್ನನ್ನು ಪ್ರೀತಿಸ್ತಿದೀನಿ. ನೀನಿಲ್ಲದೆ ಬದುಕನ್ನು ಇಮ್ಯಾಜಿನ್ ಮಾಡ್ಕೊಳಕ್ಕೂ ಆಗಲ್ಲ."

ಹುಡುಗನ ಕೈ ಮೃದುವಾಗಿ ಅಮುಕುತ್ತಾ ಹೇಳಿದಳು ಪೂರ್ವಿ. "ನನಗ್ ಗೊತ್ತು ನೀನು ನನ್ನನ್ನು ತುಂಬಾ ಇಷ್ಟ ಪಡ್ತೀಯ ಅಂತ. ಆದ್ರೆ, ಮದುವೆ ಯಾರೂ ನನನ್ನು ಕೇಳಿ ಫಿಕ್ಸ್ ಮಾಡಿದ್ದಲ್ಲ. ನನ್ನ ಬೇಕು ಬೇಡಗಳನ್ನು ಯಾರು ಕೇಳುವುದಿಲ್ಲ."

ಹುಡುಗ ಮುಖ ಆಕಡೆ ಮಾಡಿ, ಪೂರ್ವಿಯ ಕೈ ಬಿಡಿಸಿಕೊಂಡ.

"ನಂಗೊಂದು ಕಿಸ್ ಕೊಡ್ತೀಯಾ?" ಕೇಳಿದಳು ಪೂರ್ವಿ.

ಹುಡುಗ ಅವಾಕ್ಕಾಗಿ ನೋಡಿದ ಅವಳೆಡೆಗೆ.

ನಸುನಗುತ್ತಾ ಹೇಳಿದಳು ಪೂರ್ವಿ. "ಸತ್ಯವಾಗ್ಲೂ ಕೇಳ್ತಾ ಇದ್ದೀನಿ. ತಮಾಷೆಗಲ್ಲ. ಇದುವರೆಗೂ, ನಾನು ಯಾರಿಗೂ ಕಿಸ್ ಮಾಡಿದ್ದೇ ಇಲ್ಲ. ನಾನು ಬದುಕಿರೋವರ್ಗು ಈ ಮೊದಲ್ನೇ ಕಿಸ್ ನೆನಪಿರತ್ತೆ."

ಕೆಂಪಾದ ತುಟಿಗಳನ್ನು ನಿಧಾವಾಗಿ ತೆರೆಯುತ್ತಾ, ಕಣ್ಣು ಮುಚ್ಚಿಕೊಂಡಳು ಪೂರ್ವಿ.

ದೆಹಲಿಗೆ ಹೊರಟು ನಿಂತ ಟ್ರೈನ್ ಹತ್ತಿ ತನ್ನ ಭರ್ಥ್ಗಾಗಿ ಹುಡುಕಾಡಿದ ಹುಡುಗ. ಲಗ್ಗೇಜ್ ಭಧ್ರವಾಗಿಟ್ಟು ಸೈಡ್ ಬರ್ತ್ ಸೀಟ್ನಲ್ಲಿ ಬೆಡ್ಶೀಟ್ ಹಾಸಿ, ದಿಂಬಿನ ಮೇಲೆ ತಲೆಯಿಟ್ಟು ಕಣ್ಣು ಮುಚ್ಚಿದ. ಟ್ರೈನ್ ಹೊರಟಿತು. ತನಗಾಗುತ್ತಿದ್ದ ದುಃಖದಲ್ಲಿ, ತನಗರಿವಿಲ್ಲದಂತೆ, ಅವನ ವಿಚಿಲಿತವಾದ ಮನಸ್ಸು ಪೂರ್ವಿ ಮಧುಮಗಳ ಉಡುಗೆಯಲ್ಲಿ, ತನ್ನ ಗಂಡನ ಶವದ ಮುಂದೆ ನಿಂತು ಅಳುತ್ತಿರುವುದನ್ನು ಕಲ್ಪನೆ ಮಾಡಿಕೊಂಡಿತು.

ಕೆರೆ ಏರಿಯಾ ಮೇಲೆ ತನಗಾಗಿ ಕಾಯುತಿದ್ದ ಪೂರ್ವಿಯನ್ನು ಅಪ್ಪಿಕೊಂಡಂತೆ ಕನಸಾಯಿತು.

ಟೀಟಿ ಬಂದು ಟಿಕೆಟ್ ಕೇಳಿದಾಗ ಎಚ್ಚರ ಮಾಡಿಕೊಂಡ ಹುಡುಗ, ತಾನು ಮಾಡಿಕೊಂಡ ಕಲ್ಪನೆಗೆ ಬೇಸರ ಪಟ್ಟ. ತಾನು ಪ್ರೀತಿಸುವ ಪೂರ್ವಿಯ ಬಗ್ಗೆ ಹೀಗೆ ಯೋಚನೆ ಮಾಡುವುದು ಕೂಡ ತಪ್ಪೆಂದು ತನಗೆ ತಾನೇ ಛೀಮಾರಿ ಹಾಕಿಕೊಂಡ.

ಮೂರು ವರುಷಗಳ ನಂತರ ಬಂದವನಿಗೆ, ಬೆಂಗಳೂರು ಹೊಸದಾಗಿ ಕಂಡಿತು. ಏರ್ಪೋರ್ಟ್ ನಿಂದ ಟ್ಯಾಕ್ಸಿ ಮಾಡಿಕೊಂಡು ಮನೆಗೆ ಬಂದ ಮಗನನ್ನು ಅಪ್ಪಿಕೊಂಡು ಅತ್ತಳು ತಾಯಿ. ಮಗನಿಗೆ ರುಚಿ ರುಚಿಯಾಗಿ ಅಡುಗೆ ಮಾಡಿ ಬಡಿಸುತ್ತಾ, ಬೆಂಗಳೂರಿನ ವಿಷಯಗಳನೆಲ್ಲಾ ಹೇಳುತ್ತಾ ಬಂದ ತಾಯಿ, ಇದ್ದಕಿದ್ದಂತೆ ಅವನನ್ನು ಚಕಿತ ಗೊಳಿಸಿದಳು.

"ನೀನು ಡೆಲ್ಲಿಗೆ ಹೋಗಕ್ಕೆ ಮುಂಚೆ ಪಕ್ಕದ ಮನೆಗೆ ಒಬ್ಬಳು ಹುಡುಗಿ ಬಂದಿದ್ದಳು, ಗೊತ್ತಲ್ವಾ, ಪೂರ್ವಿ ಅಂತ."

ಮಾಡುತಿದ್ದ ಊಟ ಬಿಟ್ಟು ಅಮ್ಮನ ಮುಖವನ್ನೇ ನೋಡಿದ.

"ಪಾಪ ಕಣೋ, ಆ ಹುಡುಗಿ ಮದುವೆ ದಿನವೇ ಅವಳ ಗಂಡನ್ನ ಕಳ್ಕೊಂಡ್ಬಿಟ್ಟಳು. ಪಾಪ ಚಿಕ್ ಹುಡುಗಿ ಅವಳಿಗೆ ಹೀಗಾಗಬಾರದಿತ್ತು. ಯಾವಾಗ್ಲೂ ನಗುನಗುತ್ತಾ ಇದ್ದವಳು ಆ ಹುಡುಗಿ."

ಅಮ್ಮ ಮಾತನಾಡುತ್ತಿರುವಾಗಲೇ, ಅರ್ಧ ಊಟದಲ್ಲಿ ಎದ್ದು ಹೊರ ನಡೆದ.

ತನಗಿಂತ 10 ವರ್ಷ ದೊಡ್ಡವನ ಜೊತೆ ಮದುವೆಯಾದ ಪೂರ್ವಿ, ಹೃದಯಾಗಾತಕ್ಕೊಳಗಾಗಿ ಮದುವೆಯ ರಾತಿಯೇ ಮರಣ ಆತ ಹೊಂದಿದ್ದು, ಆತ ಕೆಲಸ ಮಾಡುತಿದ್ದ ಬ್ಯಾಂಕ್ನಲ್ಲಿ, ಪೂರ್ವಿಗೆ ಕೆಲಸ ದೊರೆತಿದ್ದು ಹಾಗು, ಒಂದು ತಿಂಗಳ ಹಿಂದೆ, ಬೆಂಗಳೂರಿಗೆ ಟ್ರಾನ್ಸ್ಫರ್ ಆಗಿ ಬಂದು, ಹೆಡ್ ಆಫೀಸ್ನಲ್ಲಿ ಪೂರ್ವಿ ಕೆಲಸ ಮಾಡುತ್ತಿರುವುದು; ಎಲ್ಲವನ್ನು ಪತ್ತೆ ಹಚ್ಚಿದ ಆ ಹುಡುಗ.

ಮಾರನೆಯ ದಿನ, ಬ್ಯಾಂಕಿನ ಹೆಡ್ ಆಫೀಸ್ ಮುಂದೆ ನಿಂತು ಆಲೋಚಿಸಿದ ಹುಡುಗ. ಏನೆಂದು ಕೇಳುವುದು ಪೂರ್ವಿಯನ್ನು? ಮೊದಲಿನಂತೆ ನನ್ನೊಟ್ಟಿಗೆ ಮಾತನಾಡುತ್ತಾಳಾ? ಧೈರ್ಯ ತಂದುಕೊಂಡು, ಬ್ಯಾಂಕ್ ಒಳಗೆ ಹೋಗಿ ರೆಸೆಪಿಷನಿಸ್ಟ್ ಹತ್ತಿರ ಪೂರ್ವಿಯ ಹೆಸರು ಹೇಳಿ ಅಲ್ಲೇ ಇದ್ದ ಸೋಫಾ ಮೇಲೆ ಕುಳಿತ.

ತಿಳೀ ಬಣ್ಣದ ನೀಲಿ  ಸೀರೆ ಉಟ್ಟ ಪೂರ್ವಿ ಬಂದವಳೇ ಹುಡುಗನ್ನು ನೋಡಿ ನಸುನಕ್ಕಳು. ಆದರೇ, ಅವಳ ಕಣ್ಣುಗಳಲ್ಲಿ ನಗು ಕಾಣಲಿಲ್ಲ.

ಎದ್ದು ನಿಂತು ಹೇಳಿದ ಆ ಹುಡುಗ. “ನಿನ್ನ ಅಡ್ರೆಸ್ ಕೊಟ್ಟರೆ, ನಾನೇ ಬಂದು ನೋಡುತ್ತೇನೆ. ನೀನೆ ನಮ್ಮ ಮನೆಗೆ ಬಂದರು ಸರಿ."

ಪೂರ್ವಿ ತಲೆ ತಗ್ಗಿಸಿಕೊಂಡು ನಿಂತಿದ್ದ ಆ ಹುಡುಗನ ಕಡೆ ನೋಡಿ, ಒಳಗೆ ಹೋಗಿ, ಮನೆಯ ವಿಳಾಸ ಬರೆದ ಪತ್ರವೊಂದನ್ನು ಅವನ ಕೈಗಿತ್ತು ಒಳಗೆ ಹೊರಟಳು.

ಆಫೀಸ್ನ ಕೆಲಸ ಇದೆಯೆಂದು ಅಮ್ಮನ ಹತ್ತಿರ ಹೇಳಿದ ಆ ಹುಡುಗ ಪೂರ್ವಿ ಕೊಟ್ಟ ವಿಳಾಸ ಹುಡುಕುತ್ತ ಹೊರಟ.

ಆ ಮೊಹಲ್ಲಾ ಅತೀ ಶ್ರೀಮಂತಿರಿರುವ ಜಾಗವಾಗದೆ, ಮಿಡ್ಲ್ ಕ್ಲಾಸ್ ಜನರ ಮನೆಗಳಿಂದ ಕೂಡಿತ್ತು. ಸಣ್ಣ ರಸ್ತೆಯ ಎರಡೂ ಬದಿ ಸಣ್ಣ ಸಣ್ಣ ವಠಾರಗಳಿಂದ ಕೂಡಿದ ರಸ್ತೆಯಲ್ಲಿ, ಕೊನೆಗೂ ಸಿಕ್ಕಿತು, ಪೂರ್ವಿ ಕೊಟ್ಟಿದ್ದ ವಿಳಾಸ.

ಮನೆಯ ಬಾಗಿಲು ಹಾಕಿದ್ದ ಕಾರಣ, ಮನೆಯ ವಿಳಾಸ ಸರಿಯಾಗಿದೆಯೇ ಎಂದು ಒಮ್ಮೆ ಅಡ್ರೆಸ್ ತೆಗೆದು ನೋಡಿದ ಆ ಹುಡುಗ.

ಇನ್ನೇನು ಬಾಗಿಲು ಬಡೆಯುವುದಕ್ಕೆಂದು ಕೈ ಎತ್ತಿದವನಿಗೆ, ಒಳಗೆ ಸಣ್ಣ ಮಗುವಿನ ಧ್ವನಿ ಕೇಳಿಸಿ, ಕೈ ಹಾಗೆ ಕೆಳಗಿಳಿಸಿದ.

ಬಾಗಿಲು ಸ್ವಲ್ಪ ತೆಗೆದಿದ್ದರಿಂದ, ಒಳಗೆ ಇಣುಕಿ ನೋಡಿದ. ಕೆಳೆಗೆ ಚಾಪೆಯ ಮೇಲೆ ಸಣ್ಣ ಮಗುವೊಂದು ಆಟಿಕೆಗೊಳೊಂದಿಗೆ ಆಟ ವಾಡುತ್ತಿತ್ತು. ಗೋಡೆಯ ಮೇಲೆ ಹೂವಿನ ಹಾರ ಹಾಕಿದ್ದ ಒಬ್ಬ ವ್ಯಕ್ತಿಯ ಚಿತ್ರವಿತ್ತು. ಬಹುಶ, ಪೂರ್ವಿಯ ಗಂಡನದ್ದು.

ಅಂದರೆ, ಪೂರ್ವಿಗೆ ಮಗುವಿದೆಯಾ? ಈ ವಿಷಯ ಯಾರು ನನಗೆ ಹೇಳಲೇ ಇಲ್ಲವಲ್ಲಾ ಎಂದು ಹುಡುಗ ಯೋಚಿಸಿದ.

ಏನು ಮಾಡಬೇಕೆಂದು ಆ ಹುಡುಗ ಯೋಚಿಸಿತ್ತಿರುವಾಗಲೇ, ಅಡುಗೆಮನೆಯಿಂದ ಹೊರಗೆ ಬಂದ ಪೂರ್ವಿ ಮಗುವನ್ನು ಎತ್ತಿಕೊಂಡು, ಬಾಗಿಲಿನ ಹಿಂದೆ ನಿಂತಿದ್ದ ಹುಡುಗನನ್ನು ನೋಡಿ ನಗುತ್ತ ಹೇಳಿದಳು.

"ಯಾಕೆ ಅಲ್ಲೇ ನಿಂತೇ? ಒಳಗೆ ಬರಬಾರದೇ?"

ಆ ಹುಡುಗ ಅಲ್ಲೇ ನಿಂತು ಏನು ಮಾಡಬೇಕೆಂದು ತಿಳಿಯದೆ ತೊಳಲಾಡಿದ. ಶೂಸ್ ಬಿಚ್ಚಿ ಸಾಕ್ಸ್ ಹಾಕಿಕೊಂಡೆ ಒಳಗೆ ಹೋದ ಹುಡುಗ ಮುಜುಗರದಿಂದ ನಿಂತು ಪೂರ್ವಿಯ ಕಡೆ ನೋಡುತ್ತಾ ನುಡಿದ.

"ಈ ಮಗು ನಿನ್ನದೇ?"

ಆಶ್ಚರ್ಯದಿಂದ ಪೂರ್ವಿ ಆ ಹುಡುಗನ ಕಡೆ ಒಮ್ಮೆ ನೋಡಿ ಆ ಮಗುವಿನ ಕೆನ್ನೆಗೆ ಮುತ್ತು ಕೊಡುತ್ತಾ ಹೇಳಿದಳು. "ತುಂಬಾ ಮುದ್ದಾಗಿದೆ, ಮಗು ಆಲ್ವಾ?”

ಹುಡುಗ ತನಗಾಗುತ್ತಿದ್ದ ಮುಜುಗರವನ್ನು ಬಲವಂತವಾಗಿ ತಡೆ ಹಿಡಿಯುತ್ತಾ ಹೇಳಿದ. "ಒಹ್ ಮರೆತಿದ್ದೆ, ಪೂರ್ವಿ, ಬೆಂಗಳೂರಿಗೆ ನಾನು ಆಫೀಸ್ ಕೆಲಸದ ಮೇಲೆ ಬಂದಿದ್ದೀನಿ. ನಮ್ಮ ಮ್ಯಾನೇಜರ್ ಕೊಟ್ಟ ಒಂದು ಅರ್ಜೆಂಟ್ ಕೆಲಸ ಮಾಡ್ಬೇಕಾಗಿದೆ. ನಾನು ಇನ್ನೊಂದ್ ಸಾರಿ ಬರ್ತೀನಿ.”

ಹೊರಗಿಟ್ಟಿದ್ದ ಶೂಸ್ ಹಾಕಿಕೊಂಡು, ಹಿಂದೆ ತಿರುಗಿ ನೋಡದೆ, ಸರ ಸರನೆ ಹೊರಟು ಹೋದ ಆ ಹುಡುಗ.

ಮುಖದಲ್ಲಿ ಯಾವ ಭಾವನೆಗಳನ್ನು ತೋರಿಸದೆ, ಆ ಹುಡುಗ ಹೋದ ದಿಕ್ಕನ್ನೇ ನೋಡುತಿದ್ದ ಪೂರ್ವಿ, ಮಗುವನ್ನು ಎತ್ತಿಕೊಂಡು ಪಕ್ಕದ ಮನೆಗೆ ಹೋದಳು.

ಬಾಗಿಲು ತೆರೆದ ಹೆಂಗಸು ಪೂರ್ವಿ ಕಡೆ ನೋಡಿ ನಗುತ್ತಾ  ಕೇಳಿದಳು. "ನನ್ನ ಮಗಳು ಹೆಚ್ಚಿಗೆ ತೊಂದರೆ ಕೊಡಲಿಲ್ಲ ತಾನೇ, ಪೂರ್ವಿ? ಪಾಪ ಇಡೀ ದಿವಸ ಕೆಲಸ ಮಾಡಿ ಸುಸ್ತಾಗಿ ಬಂದ ನೀನು, ನಿನ್ನ ದಣಿವನ್ನು ಲೆಕ್ಕಿಸದೇ ಸ್ವಲ್ಪ ಹೊತ್ತು ನನಗೆ ರಿಲೀಫ್ ಕೊಟ್ಟಿದ್ದಕ್ಕೆ ತುಂಬಾ ಥ್ಯಾಂಕ್ಸ್."

ಪೂರ್ವಿ ಆ ಹುಡುಗ ಹೋದ ದಾರಿಯನ್ನೇ ನೋಡುತ್ತಾ ನಿಧಾನವಾಗಿ ತನ್ನ ಮನೆಯತ್ತ ಹೊರಟಳು.

ಅವಳ ಮುಖದಲ್ಲಿ ವಿಷಾದ ತುಂಬಿದ ಕಿರು ನಗೆಯೊಂದು ತೇಲಿ ಬಂತು.


Rate this content
Log in

Similar kannada story from Drama