Vadiraja Mysore Srinivasa

Drama Classics Inspirational

3  

Vadiraja Mysore Srinivasa

Drama Classics Inspirational

ಸಾತ್ಯಕಿ

ಸಾತ್ಯಕಿ

5 mins
276


ಫಳ ಫಳನೆ ಹೊಳೆಯುತ್ತಿದ್ದ ಹೊಸಾ ಮರ್ಸಿಡೀಜ್ ಕಾರು 18 ಫ್ಲೋರಿನ ಆ ಭವ್ಯ ಆಫೀಸಿನ ಮುಂದೆ ನಿಂತಾಗ. ಕಾರಿನಿಂದ ಕೆಳಗಿಳಿದ ಆರು ಅಡಿ ಎತ್ತರದ ಸಾತ್ಯಕಿ, ತನ್ನ ಹೊಸ ಸೂಟನ್ನು ಸರಿಪಡಿಕೊಳ್ಳುತ್ತ, ತಲೆಯೆತ್ತಿ ಮೇಲೆ ಹೊಸದಾಗಿ ಅಳವಡಿಸಿದ್ದ ಜೆ ಕೆ ಸಾತ್ಯಕಿ ಡೆವೆಲೊಪರ್ಸ್ ಬೋರ್ಡನ್ನು ನೋಡಿ ತೃಪ್ತಿಯಿಂದ ಒಳ ನಡೆದ.


ನೀಟಾಗಿ ಟ್ರಿಮ್ ಮಾಡಿದ್ದ ಗಡ್ಡ ಅದಕ್ಕೆ ತಕ್ಕಂತಿದ್ದ ಕತ್ತಿ ಮೀಸೆಯನ್ನು ಹೊತ್ತ ಸಾತ್ಯಕಿ, ತನ್ನ ಎಂದಿನ ಪದ್ದತಿಯಂತೆ, ಬಾಗಿಲಿನ ಮುಂದೆ ಇದ್ದ ಗಾಜಿನ ಬಾಕ್ಸ್ ನಲ್ಲಿ ಸಾತ್ಯಕಿ ಬಳಸುತ್ತಿದ್ದ ಗಾರೆ ಕೆಲ್ಸಕ್ಕೆ ಉಪಯೋಗಿಸುವ ಕರಣೆಯೊಂದನ್ನು ಇರಿಸಲಾಗಿತ್ತು. "ಈ ಕಂಪನಿಯ ಮಾಲೀಕರ ಮೊದಲ ಆಸ್ತಿ" ಎಂದು ಅದರ ಮುಂದೆ ಇಟ್ಟಿದ್ದ ಚಿನ್ನದ ಮೆರುಗಿರುವ ಕಂಚಿನ ಫಲಕ ಸಾರುತಿತ್ತು.

“ಎಂ ಡಿ ಲಿಫ್ಟ್ ಕೆಟ್ಟಿದೆಯಂತೆ, ಸತ್ಯಣ್ಣ" ಎಂದು ಹೇಳುತ್ತಾ ಜನರಲ್ ಲಿಫ್ಟ್ ಬಟನ್ ಒತ್ತಿದ ಭೋಲಾ ಸಾತ್ಯಕಿ ಏನನ್ನು ಹೇಳದೆ, ಮುಂದೆ ನೋಡಿದ. ಕೇವಲ ಎಂ ಡಿಗೆ ರಿಸೆರ್ವೆ ಮಾಡಿರುವ ಲಿಫ್ಟ್, 18ನೆ ಮಹಡಿಗೆ ಹೋಗುವಂತ ವ್ಯವಸ್ಥೆ ಇದ್ದುದ ರಿಂದ, ಜನರಲ್ ಲಿಫ್ಟ್ಗಳೆಲ್ಲವೂ 17ನೆ ಮಹಡಿಗೆ ಕೊನೆಗೊಳ್ಳುತ್ತಿತ್ತು.


ಬೋರ್ಡ್ ರೂಮ್ ಮುಂದೆ ನಿಂತಿದ್ದ ಯುನಿಫಾರ್ಮ್ ತೊಟ್ಟ ಸೆಕ್ಯೂರಿಟಿ, ಪಕ್ಕಕ್ಕೆ ಸರಿಯಲಿಲ್ಲ. ತನಗಾಗುತಿದ್ದ ಅಸಮಾಧಾನವನ್ನು ತಡೆಯುತ್ತಾ ಹೇಳಿದ ಸಾತ್ಯಕಿ. "ಯಾಕೆ? ನಾನ್ಯಾರೆಂದು ಗೊತ್ತಿಲ್ಲವೇನು?"

ಕ್ಯಾಬಿನ್ ಡೋರ್ ತೆಗೆದು ಹೊರಬಂದ ಪರ್ಸನಲ್ ಸೆಕ್ರೆಟರಿ, ಸಾತ್ಯಕಿಯ ಮುಂದೆ ಬಂದು ನಿಂತು, ತಡವರಿಸುತ್ತ ನುಡಿದಳು; "ತಮ್ಮನ್ನು ಒಳಗೆ ಬಿಡಬಾರದೆಂದು ಹೊಸ ಎಂ ಡಿ ಹೇಳಿದ್ದಾರೆ ಸರ್.”

ಸಾತ್ಯಕಿಗೆ ನಿಂತಲ್ಲೇ ನೆಲ ಕುಸಿಯುತ್ತಿರುವ ಅನುಭವ ವಾಯಿತು ಇದೇನು ಕನಸೇ ನಾನು ಕಾಣುತ್ತಿರುವುದು? ಇದನ್ನು ಗ್ರಹಿಸಿದ ಭೋಲಾ ಪಕ್ಕದ ಕ್ಯಾಬಿನ್ ಕಡೆಗೆ ಸಾತ್ಯಕಿಯನ್ನು ಕರೆದೊಯ್ದ.


ಹೊಸ ಆಫೀಸಿನ ಉದ್ಘಾಟನೆಯ ದಿನದಂದು ಸೂಟ್ ತೊಟ್ಟ ಸಾತ್ಯಕಿಯ ಜೊತೆ ಅವನ ಮಗ, ನಚಿಕೇತ್ ಬೆಲೆಬಾಳುವ ಸೂಟ್ ತೊಟ್ಟು ನಸುನಗುತ್ತಾ ನಿಂತಿದ್ದ ಬಾವಚಿತ್ರವನ್ನೇ ನೋಡಿದ.  


ತಾಯಿ ಇಲ್ಲದ ತಬ್ಬಲಿಯೆಂದು ನಾನು ತೋರಿಸಿದ ಪ್ರೀತಿ ಇಂದು ಶಾಪವಾಗಿ ಪರಿಗಣಿಸಿದೆಯೇ? ಸಾತ್ಯಕಿಯ ಕಣ್ಣಿನಿಂದ ಕಣ್ಣೀರು ಹರಿಯ ತೊಡಗಿತು. ಎಲ್ಲಿ ಎಡವಿದೆ ನಾನು?


ನೆನ್ನೆ ನಡೆಯಿತೇನೋ ಎಂಬಂತೆ, ಬಹಳ ವರ್ಷಗಳ ಕೆಳೆಗೆ ನಡೆದ ಘಟನೆಯೊಂದು ನೆನಪಾಯಿತು.

"ಸತ್ಯಣ್ಣಾ? ಸತ್ಯಣ್ಣಾ? ಎಂದು 7೦ ವರ್ಷ ದಾಟಿದ್ದ ಮುದುಕಿ ಕೂಗಿದಳು.

ಅದು ಹಳೆಯ ಕಾಲದ ಸಣ್ಣ ಮನೆ.

ನೀಳವಾಗಿ ಬೆಳೆದಿರುವ ಪೊದೆಯಂಥ ಕೂದಲಿನ ಸುಮಾರು 35 ವರ್ಷದ, ಲುಂಗಿ ಉಟ್ಟುಕೊಂಡು, ಹಸಿರು ಬಣ್ಣದ ದೊಗಲೆ ಶರ್ಟಿನ ಮೇಲೆ ಕೆಂಪು ಬಣ್ಣದ ಟವೆಲ್ ಹಾಕಿಕೊಂಡಿದ್ದ ಸಾತ್ಯಕಿ ಹೊರಬಂದು ಕೇಳಿದ. " ಏ ಮುದುಕಿ, ಬೆಳಿಗ್ಗೆ ಬೆಳಿಗ್ಗೆ ಯಾಕ್ ಅರ್ಚ್ಕೋತ ಇದ್ದೀಯ?” 

ಅಲ್ಲಿದ್ದ ಬೆಂಚಿನ ಮೇಲೆ ಕುಳಿತು, ಹರಿದ ಸೀರೆಯ ಕೊನೆಯಿಂದ ಕಣ್ಣೊರೆಸುತ್ತ ಹೇಳಿದಳು ಮುದುಕಿ: "ಮನೆ ಗೋಡೆ ಬಿದ್ದೋಗಿದೆ ಸತ್ಯಣ್ಣ, ಸರಿಮಾಡಿಕೊಡು. ಇಲ್ದೆ ಇದ್ರೆ ನಾಳೆ, ತಲೆ ಮೇಲೆ ಮನೆ ಬಿದ್ದು ನಾನ್ ಸತ್ತೇ ಹೋಗ್ತೀನಿ." 

"ಅಲ್ವೇ, ಮುದುಕಿ ನಿನ್ ಮಗಾನೂ ಗಾರೆ ಕೆಲಸ ಮಾಡ್ತಾನ್ ತಾನೇ? ಅವ್ನ್ ಹತ್ರ ಮಾಡ್ಸೋಕೋಲ್ಡ್ ಬಿಟ್ಟು, ನನ್ನ ಮನೆ ಬಾಗಿಲಿಗೆ ಬಂದು ಅರ್ಚ್ಕೋತಿದೆಯೆಲ್ಲ?” ನುಡಿದ ಸಾತ್ಯಕಿ,

ಮುದುಕಿ ತಲೆ ಚಚ್ಚಿಕೊಳ್ಳುತ್ತ ನುಡಿದಳು. "ಎಲ್ಲಿ ಮಗ ಸತ್ಯಣ್ಣ. ಅವ್ನು ಹೆಂಡ್ತಿ ಜೊತೆ ಓಡಿಹೋಗಿ ಆರು ತಿಂಗಳಾಯಿತು."

ಗಹ ಗಹಿಸುತ್ತ ನುಡಿದ ಸಾತ್ಯಕಿ "ಓಡ್ ಹೋಗ್ಬಿಟ್ನಾ? ನಿಮಗೆಲ್ಲ, ಮಕ್ಕಳನ್ನ ಸಾಕಕ್ಕೆ ಬಂದ್ರೆ ತಾನೇ? ನೋಡು, ನಾನು ನನ್ನ ಮಗನ್ನ ಹೆಂಗ್ ಬೆಳಿಸ್ತಾ ಇದ್ದೀನಿ ಅಂತ." ಮನೆಯೊಳಗೇ ಇಣುಕಿ ಕೂಗಿದ. "ನಚಿ, ಬಾರೋ ಮಗನೆ ಹೊರಗಡೆ.."

ಸಾತ್ಯಕಿಯ ಏಳು ವರ್ಷದ ಮಗ, ನಚಿಕೇತ, ತಾನು ಆಟವಾಡುತಿದ್ದ, ಕಾರಿನೊಂದಿಗೆ ಹೊರಗೆ ಬರುತ್ತಿದ್ದಂತೆ, ಸಾತ್ಯಕಿ, ಅವನನ್ನು ಎತ್ತಿ ಮುದ್ದಾಡುತ್ತಾ, ಕೇಳಿದ.

" ನಚಿ,ನೀನು, ದೊಡ್ಡವನಾದ್ಮೇಲೆ, ಏನ್ ಮಾಡ್ತಿಯಾ ಮಗ?"

"ನಾನಾ? ಒಂದ್ ದೊಡ್ ಕಾರು ತೊಗೊಂಡ, ಜುಯ್ ಅಂತ ಹೋಗ್ತೀನಿ." ತನ್ನ ಎರಡು ಕೈಗಳನ್ನು ಅಗಲ ಮಾಡಿ ತೋರಿಸುತ್ತ ನುಡಿದ ನಚಿಕೇತ.

"ಒಹ್ ಹೌದ? ಹಂಗಾದ್ರೆ, ಆ ದೊಡ್ ಕಾರಲ್ಲಿ ನನ್ನೂ ಕೂಡಿಸ್ಕೊಂತ್ಯ ತಾನೇ?"

ತಲೆ ಅಡ್ಡಡ್ಡವಾಗಿ ಆಡಿಸುತ್ತಾ ನುಡಿದ ನಚಿಕೇತ. "ಇಲ್ಲ, ನನ್ ಕಾರಲ್ಲಿ ನಿನ್ನ ಕೊಡ್ಸ್ಕೊಳೋದಿಲ್ಲ. ನೀನು, ನಿನ್ ಹಳೆ ಸೈಕಲ್ ಇದ್ಯಲ್ಲಾ, ಅದ್ರಲ್ ಬಾ"

ಮುದುಕಿ ಗಹಗಹಿಸಿ ನಗುತಿದ್ದಂತೆ, ಕೋಪ ದಿಂದ ಮುಖ ಕೆಂಪಗೆ ಮಾಡಿಕೊಂಡ ಸಾತ್ಯಕಿ, ಮಗನನ್ನು ಕೆಳಗಿರಿಸಿ, ಮುದುಕಿಯನ್ನು ನೋಡುತ್ತಾ, "ಏ ಮುದುಕಿ, ಯಾಕೆ, ಕೊಬ್ಬಾ? ಬಾಯಿ ಮುಚ್ಕೊಂಡು ಮನೇಗ್ಹೋಗು. ನಾನು ಭೋಲಾ ಹಿಂದೆ ಬರ್ತೀವಿ. ದುಡ್ ರೆಡಿ ಮಾಡು, ಸಿಮೆಂಟು, ಮರಳು ಇಟ್ಟಿಗೆ ಎಲ್ಲ ತರ್ಬೇಕು…ಹೊರಡು."

ಮನೆಯ ಒಳಗೆ ತಿರುಗಿ ಕೂಗಿದ ಸಾತ್ಯಕಿ. "ಭೋಲಾ, ಏ ಭೋಲಾ ಎಲ್ ಹಾಳಾಗ್ ಹೋದ್ಯೋ?"

12 ವರ್ಷದ ಖಾಖಿ ಚಡ್ಡಿ ಧೊಗಳೇ ಶರ್ಟ್ ಹಾಕಿಕೊಂಡು, ಮೂಗಿನಿಂದ ಸುರಿಯುತಿದ್ದ ಗೊಣ್ಣೆ ಒರೆಸಿಕೊಂಡು, ಕೈಯಲ್ಲಿ ಒಂದು ಬಾಂಡಲೆ ಹಾಗು, ಸಾತ್ಯಕಿಯ ಪ್ರಿಯವಾದ ಕರಣೆ ಹಿಡಿದು ಹೊರಬಂದ ಭೋಲಾ.

 "ಏನ್ ಸತ್ಯಣ್ಣ?"

ಹೊರಗೆ ಹೋಗುತ್ತಿರುವ ಮುದುಕಿಯನ್ನು ತೋರಿಸುತ್ತ ನುಡಿದ, ಸಾತ್ಯಕಿ. "ಆ ಮುದುಕಿ ಮನೆ ಬಿದ್ಹೋಗಿರೋ ಗೋಡೆ ಸರಿ ಮಾಡ್ಕೊಡ್ಬೇಕಂತೆ. ಹಿಂದೇನೆ ಹೋಗು. ದುಡ್ಡಿಸ್ಕೊಂಡು ಶಂಕ್ರಪ್ಪನ ಅಂಗಡೀಲಿ ಸಿಮೆಂಟ್, ಮರಳು ಇಟ್ಟಿಗೆಗೆ ಹೇಳಿ ಅಲ್ಲೇ ಇರು, ನಾನು ಹಿಂದೇನೆ ಬರ್ತೀನಿ."


ಫೋಟೋ ಮುಂದೆ ನಿಂತು ಹಳೆಯ ವಿಷಯಗಳನ್ನು ನೆನೆಪಿಸಿಕೊಡ ಸಾತ್ಯಕಿ, ನಿಟ್ಟುಸಿರು ಬಿಡುತ್ತಾ, ತನಗೆ ತಾನೇ ಮಾತನಾಡಿಕೊಳ್ಳುತ್ತಾನೆ. ಈ ಹುಡ್ಗನನ್ನು ನಾನು ಬೆಳಿಸಿದ ರೀತಿಯೇ ಸರಿ ಇಲ್ಲವ ಅಥವಾ, ಅವನನ್ನು, ವಿದೇಶಕ್ಕೆ ಓದಲು, ಕಳುಹಿಸಿದ್ದು ತಪ್ಪಾಯಿತೇ? ಕಳೆದ, 25 ವರ್ಷಗಳಿಂದ ತಾನು ನಡೆದು ಬಂದ ದಾರಿಯನ್ನು ನೆನೆಯುತ್ತ, ಮತ್ತೆ ಹಳೆಯ ನೆನಪಿನ ಜಾಲಕ್ಕೆ ನುಸುಳುತ್ತಾನೆ ಸಾತ್ಯಕಿ.

ಮುದುಕಿಯ ಬಿದ್ದುಹೋದ ಗೋಡೆ ಕಟ್ಟುವ ಕೆಲಸದಲ್ಲಿ ಸಾತ್ಯಕಿಗೆ ಸಿಮೆಂಟ್ ತರಲು ಹೋದ ಭೋಲಾ, ಆಗತಾನೆ ಕಟ್ಟಿರುವ ಗೋಡೆಯ ಮೇಲೆ ನಡೆದಾಡುತ್ತಿರುವ ಜಿರಲೆಯನ್ನು ನೋಡಿ ಕೂಗಿದ.

"ಸತ್ಯಣ್ಣ, ಜಿರಳೆ! ಜಿರಳೆ!"

ಸಾತ್ಯಕಿ ಕರಣೆಯನ್ನು ಕೈಯಲ್ಲಿ ಹಿಡಿದು ಭೋಲಾ ಏನು ಮಾಡುತ್ತಾನೆಂದು ಕೋತೂಹಲದಿಂದ ನೋಡಿದ.

ಬಾಂಡಲೆಯಲ್ಲಿ ಕಲೆಸಿದ್ದ ಸಿಮೆಂಟ್ ಅನ್ನು ಜಿರಲೆಯ ಮೇಲೆ ಹಾಕಿ ಕುಣಿಯುತ್ತಾ ಹೇಳಿದ ಭೋಲಾ;

" ಸತ್ಯಣ್ಣ, ಜಿರುಳೇ ಸತ್ತೋಯಿತು, ಸತ್ತೋಯಿತು,"

ನೋಡುನೋಡುತ್ತಿದಂತೆ, ಸಿಮೆಂಟ್ ಕೆಳಗಿಂದ ನುಸುಳಿ, ಜಿರುಳೇ ಮತ್ತೆ ಹೊರಗೆ ಬಂದು, ತನ್ನ ಮೀಸೆಯನ್ನು ತಿರುಗಿಸುತ್ತಾ ನಡೆಯುವುದನ್ನೇ ನೋಡಿ, ಸಾತ್ಯಕಿ ಗಹಗಹಿಸಿ ನಗುತ್ತಾ ನುಡಿದ;

"ಲೋ ಮುಠ್ಠಾಳ, ಈ ಸಾತ್ಯಕಿ ಆ ಜೆರುಳೇ ಇದ್ದಂತೆ; ಹಂಗ್ಯಾಕೆ ಹೇಳ್ಬೇಕು, ಆ ಜಿರುಳೇ ಈ ಸಾತ್ಯಕಿ ಇದ್ದಂತೆ. ಅಷ್ಟು ಸುಲಭವಾಗಿ ನಾಶವಾಗುವುದಿಲ್ಲ. ಭೋಲಾ, ನಿಂಗೊಂದ್ ವಿಷ್ಯ ಗೊತ್ತಾ? ದೊಡ್ಡ ಬಾಂಬ್ ಹಾಕಿದ್ದ್ರೇ ಲಕ್ಷಾಂತರ ಜನ ಸಾಯುತ್ತಾರೆ; ಆದ್ರೆ, ಈ ನನ್ಮಗನ್ಡ ಜೆರುಳೇ ಇದ್ಯಲ್ಲ, ಇದು ಉಳ್ಕೊಳತ್ತೆ. ಗೊತ್ತೇನಲೇ?

ಇವತ್ ಸಾಯಂಕಾಲ ಇಡೀ ಬೆಂಗಳೂರಿಗೆ ಅತಿ ದೊಡ್ಡ ಶ್ರೀಮಂತ ಅನ್ನುಸ್ಕೊಂಡಿರೋ ಡೆವೆಲಪರ್ ಜೊತೆಗೆ, ಮೀಟಿಂಗ್ ಇದೆ. ಹೋಗಿ ಬೇಗ ಸಿಮೆಂಟ್ ತೊಗಂಡ್ ಬಾ, ಹೋಗು ಬೇಗ ಕೆಲ್ಸಮುಗಿಸ್ಬೇಕು” 


ಅಂದಿನ ಆ ಮೀಟಿಂಗ್ ಸಾತ್ಯಕಿಯ ಜೀವನವನ್ನೇ ಬದಲಾಯಿಸಿತು. ತನ್ನ ಹತ್ತಿರವಿದ್ದ ಅತಿ ಉತ್ತಮವಾದ ಶರ್ಟ್ ಪ್ಯಾಂಟ್ ತೊಟ್ಟು, ಹೆಗಲ ಮೇಲೆ ಕೆಂಪು ವಸ್ತ್ರ ಹೊದ್ದು, ಡೆವೆಲಪರ್ ಮುಂದೆ ನಿಂತ ಸಾತ್ಯಕಿ.


ಡೆವೆಲಪರ್ ಒಮ್ಮೆ ಸಾತ್ಯಕಿಯ ಕಡೆ ನೋಡಿ ನುಡಿದರು. "ಮೊಟ್ಟಮೊದಲಿಗೆ, ನಿಮ್ಮ ಹೆಸರು. ನನ್ನ ಜೀವನದಲ್ಲಿ, ಸಾತ್ಯಕಿ ಎಂದು ಹೆಸರಿಟ್ಟುಕೊಂಡಿದ್ದನ್ನು, ನಾನು ಕೇಳಿದ್ದೆ ಇಲ್ಲ. ಏನು ನಿಮ್ಮ ಹೆಸರಿನ ವಿಶೇಷತೆ?"

ಸಾತ್ಯಕಿ ಅತಿ ಬೆಲೆ ಬಾಳುವ ಸೂಟ್ ದರಿಸಿದ್ದ ಡೆವೆಲಪರ್ ಮುಖ ನೋಡುತ್ತಾ ನುಡಿದ. "ಸಾರ್, ಮಾಹಾಭಾರತದ ಯುದ್ಧ ಮುಗಿದನಂತರ ಉಳಿದವರು ಕೇವಲ 12 ಮಂದಿ ಮಾತ್ರ; ಪಂಚಪಾಂಡವರೊಟ್ಟಿಗೆ, ಉಳಿದವರಲ್ಲಿ, ಸಾತ್ಯಕಿಯು ಒಬ್ಬ. ನಾನು ಹುಟ್ಟುವುದಕ್ಕೆ ಮುಂಚೆ 5 ಮಕ್ಕಳನ್ನು ಕಳೆದುಕೊಂಡಿದ್ದ ನನ್ನ ತಂದೆ ತಾಯಿ, ನನಗೆ ಸಾತ್ಯಕಿ ಎಂದು ಹೆಸರಿಟ್ಟರು. ಅಷ್ಟೇ ಅಲ್ಲ , ನನ್ನ ತಂದೆಯ ಅಣ್ಣ ತಮ್ಮಂದಿರ ಮಕ್ಕಳಲ್ಲೂ ಸಹ, ಬದುಕುಳಿದವನು, ನಾನೊಬ್ಬನೇ. ಒಂದು ರೀತಿಯಲ್ಲಿ ಹೇಳೋದಾದರೆ ನನ್ನನ್ನು ಅಷ್ಟು ಸುಲುಭವಾಗಿ ನಾಶಮಾಡಲಾಗುವುದಿಲ್ಲ.”


ಡೆವೆಲಪರ್ ನಗುತ್ತಾ ನುಡಿದರು I “ಆಮ್ ಶೂರ್, ನಾನು ಕೇಳಿರುವ ಮಟ್ಟಿಗೆ, ನೀವು ಯಾವಾಗಲೂ, ನಿಮ್ಮ ಹೆಸಿರಿಗೆ ತಕ್ಕಂತೆ,ಇದ್ದೀರಿ. ಬಹಳಷ್ಟು ಕತೆಗಳನ್ನು ಕೇಳಿದ್ದೇನೆ ನಿಮ್ಮ ಆತ್ಮ ವಿಶ್ವಾಸದ ಬಗ್ಗೆ. ಆದರೆ, ಒಮ್ಮೆ ಇಡೀ ರಾತ್ರಿ ಜೋರಾದ ಮಳೆಯಲ್ಲಿ, ಆಗ ತಾನೇ ಸೆಂಟ್ರಿಂಗ್ ಹಾಕಿದ ಮನೆಯೊಳಗೇ ಮಲಗಿದ್ದಿರಿಂತೆ? ಬಹಳ ರೋಚಕವಾದ ಕಥೆ. ಅದನ್ನು, ನಿಮ್ಮ ಬಾಯಿಂದಲೇ ಕೇಳೋಣ, ಹೇಳಿ.”

ಅಂದಿನ ಘಟನೆ ನೆನೆಸಿಕೊಂಡು ಸಾತ್ಯಕಿಯ ಮುಖದಲ್ಲಿ ಮುಗುಳುನಗೆ ಮೂಡಿತು.

ಮಳೆಗಾಲವಾದರೂ, ಬೇಗ ಕೆಲಸ ಮುಗಿಸಿಕೊಡಬೇಕೆಂದು, ಒಂದು ದೊಡ್ಡ ಮದುವೆಯ ಮಂಟಪದ ಕಾಂಟ್ರಾಕ್ಟ್ ಕೆಲಸ ಮಾಡುತ್ತಿದ್ದ ಸಾತ್ಯಕಿ; ಮೋಲ್ಡಿಂಗ್ ಹಾಕಿದ ದಿನ ಧಾರಾಕಾರವಾದ ಮಳೆ ಸುರಿಯುತ್ತಿತ್ತು.

ಮಳೆಯಿಂದಾಗಿ ಬಿಲ್ಡಿಂಗ್ ಬೀಳುತ್ತದೆಂದು ಹೆದಿರಿದ ಮಾಲೀಕನ ರೋಧನ ಕೇಳಲಾಗದೆ ನುಡಿದ ಸಾತ್ಯಕಿ.

"ಲೇ ಭೋಲಾ, ನಡೆಯೋ. ಇವತ್ತು, ನಾನು ನೀನು, ಆ ಬಿಲ್ಡಿಂಗ್ ಒಳಗೆ ಮಲ್ಕೋಳೊಣ. ಚಾಪೆ ದಿಂಬು ತೊಗೊಂಡ್ಬಾರ್ಲ” "

ಇಡೀ ರಾತ್ರಿ, ಹೊಸದಾಗಿ ಹಾಕಿದ್ದ ತಾರಸಿಯ ಕೆಳಗೆ ಆ ಜಡಿ ಮಳೆಯಲ್ಲಿ ಮಲಗಿದ್ದ ಸಾತ್ಯಕಿಯ ಕಥೆ ಊರಿಗಿಲ್ಲ ಗೊತ್ತಾಗಿ, ಬೆಳಗಾಗುವುದರಲ್ಲಿ, ಸಾತ್ಯಕಿ, ಒಬ್ಬ ದೊಡ್ಡ ಹೀರೋ ಆಗಿ ಹೋದ.


ಹಳೆಯದನ್ನು ನೆನೆಸಿಕೊಡು ಸಂತಸವಾದರೂ, ತನ್ನ ಈಗಿನ ಪರಿಸ್ಥಿಗೆ ಮರುಗುತ್ತಾ, ಮತ್ತೆ ಪ್ರಸ್ತುತಕ್ಕೆ ಬಂದು ಕುರ್ಚಿಯ ಮೇಲೆ ಕುಳಿತ ಸಾತ್ಯಕಿ.


ಇದ್ದಕಿದ್ದಂತೆ ಅವನಿಗೆ ಹದಿನೈದು ದಿನಗಳ ಹಿಂದಿನ ಘಟನೆ ನೆನಪಾಗಿ, ಇಂದು ಮಗ ತನ್ನನ್ನು ಹೊರಹಾಕುವುದಕ್ಕೆ ಅದೇ ಮೂಲ ಕಾರಣವೆಂದು ಅರಿವಾಯಿತು.

ಎಂದಿನಂತೆ, ಬೋರ್ಡ್ ಮೀಟಿಂಗ್ನಲ್ಲಿ ಎಂ ಡಿ ಸೀಟ್ ನಲ್ಲಿ ಸಾತ್ಯಕಿ ಕುಳಿತಿದ್ದ. ಅಂದು ಬಂದಿದ್ದ ಚೈನೀಸ್ ಇನ್ವೆಸ್ಟರ್ಸ್ ಹಾಗು ಅವರ ಟ್ರಾನ್ಸ್ಲೇಟರ್ ಎದುರಿಗೆ ಕುಳಿತಿದ್ದರು. ನಚಿಕೇತ ಪ್ರೆಸೆಂಟೇಷನ್ ಮಾಡುತಿದ್ದ. ಜೆ ಕೆ ಸಾತ್ಯಕಿ ಡೆವೆಲೊಫೇರ್ಸ್ ಇದುವರೆಗೂ ಮಾಡಿರುವ ಸಾಧನೆಯ ಬಗ್ಗೆ ವಿಶದವಾಗಿ ವಿವರಣೆ ಕೊಡುತ್ತಿದ್ದ. ಅದನ್ನು ಚೈನೀಸ್ ಭಾಷೆಗೆ ತರ್ಜುಮೆ ಮಾಡುವ ಹರ ಸಾಹಸ ಪಡುತ್ತಿದ್ದಳು ಒಬ್ಬ ಹುಡುಗಿ. ಇಂಗ್ಲಿಷ್ ಬಾಷೆಯಲ್ಲಿ ಅಷ್ಟೇನು ಪರಿಣಿತಿ ಇಲ್ಲದಿದ್ದರೂ, ಮಾತನಾಡಿದ್ದನ್ನು ಅರ್ಥ ಮಾಡಿಕೊಳುತ್ತಿದ ಸಾತ್ಯಕಿ.

ಚೈನೀಸ್ ಇನ್ವೆಸ್ಟರ್ಸ್ ಹೇಳಿದ್ದನ್ನು ಇಂಗ್ಲಿಷ್ ಗೆ ತರ್ಜುಮೆ ಮಾಡಿ ಹೇಳಿದಾಗ ಆಘಾತವಾಯಿತು ಸಾತ್ಯಕಿಗೆ. ಜೆ ಕೆ ಸಾತ್ಯಕಿ ಡೆವೆಲೊಫೇರ್ಸ್ ಕಂಪನಿಯಲ್ಲಿ ಅವರು ಸುಮಾರು 2,೦೦೦ ಕೋಟಿ ಹಣ ಹೂಡಲು ತಯ್ಯಾರಾಗಿದ್ದರೆಂದು ಕೇಳಿದೊಡನೆ, ಎದ್ದು ನಿಂತು ಸಾತ್ಯಕಿ ನಚಿಕೇತನನ್ನು ಕುರಿತು ಹೇಳಿದ. "ನಚಿ, ಇದೇನು ನಾನು ಕೇಳುತ್ತಿರುವುದು? ಅವರೇಕೆ ನಮ್ಮ ಕಂಪನಿಯಲ್ಲಿ ಹಣ ಹೂಡಬೇಕು? ನಮ್ಮಲ್ಲಿ ಈಗಿರುವ ಪ್ರೊಜೆಕ್ಟ್ಗಳನ್ನೇ ಮುಗಿಸಲು ಸಾಧ್ಯ ವಾಗುತ್ತಿಲ್ಲ ನಮಗೆ. ಬೇಡ ನಚಿ. ಕಷ್ಟ ಪಟ್ಟು ನಾವು ಬೆಳಿಸಿದ ಈ ಕಂಪನಿಯಲ್ಲಿ ಬೇರೆಯವರನ್ನು ಸೇರಿಸುವುದು ಒಳ್ಳೆಯದಲ್ಲ."


ನಚಿಕೇತ, ಕೋಪದಿಂದ ನುಡಿದ. "ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಕಾಕಿಕೊಂಡರಂತೆ. ನಾನು ಆ ಜಾತಿಗೆ ಸೇರಿದವನಲ್ಲ. ಈ ಕಂಪನಿ ಇಂಟರ್ನ್ಯಾಷನಲ್ ಲೆವೆಲ್ಗೆ ತೊಗೊಂಡು ಹೋಗೋ ಪ್ರಯತ್ನ ಮಾಡ್ತಾ ಇದ್ದೀನಿ. ಇದರಲ್ಲಿ ಮಧ್ಯೆ ಮಾತನಾಡುವ ಯಾವ ಅಧಿಕಾರವೂ ನಿಮಗಿಲ್ಲ."


ಹಳೆಯದನ್ನು ನೆನೆಸಿಕೊಂಡು ದುಃಖವಾದರೂ , ಏನನ್ನೋ ನಿರ್ಧರಿಸಿದವನಂತೆ ಎದ್ದು ಹೊರಗೆ ಬಂದವನೇ, ಬೋರ್ಡ್ ರೂಮ್ ಬಾಗಿಲು ತೆರುದು ಒಳ ನಡೆದ, ಸಾತ್ಯಕಿ.


ಸಾತ್ಯಕಿಯನ್ನು ನೋಡಿ ಒರಟಾಗಿ ನುಡಿದ ನಚಿಕೇತ "ಏನು? ಈಗ ಈ ಕಂಪನಿಯ ಎಂ ಡೀ ನಾನು, ನೀವಲ್ಲ. ಯಾಕೆ? ಅವತ್ತು ಬರೆದುಕೊಟ್ಟಿದ್ದು ಮರೆತುಹೋಯಿತಾ? ಹೊರಡಿ ಹೊರಕ್ಕೇ”


ಮಗನ ಮಾತಿನಿಂದ ನೊಂದು ಕೆಳೆಗೆ ಇಳಿದು ಬಂದ ಸಾತ್ಯಕಿ ಗಾಜಿನ ಬಾಕ್ಸ್ ತೆಗೆದು ಕೊಂಡು ಹೊರಗೆ ಬಂದವನೇ, ಎತ್ತಿ ಕೆಳೆಗೆ ಹಾಕಿದ. ಗಾಜಿನ ಬಾಕ್ಸ್ ಒಡೆದು ಒಳಗಿದ್ದ ಕರಣೆ ದೂರ ಹೋಗಿ ಬಿತ್ತು. 


ಕೈಯಲ್ಲಿ ತನ್ನ ಕರಣೆ ಹಿಡಿದ ಸಾತ್ಯಕಿ, ಮೇಲೆ ಪೆಂಟ್ಹೌಸ್ ಕಿಡಿಕಿಯಿಂದ ನೋಡುತಿದ್ದ ತನ್ನ ಮಗ ನಚಿಕೇತನ ಕಡೆ ತಿರುಗಿ ಜೋರಾಗಿ ಕೂಗಿದ.


"ನಾನು ಸಾತ್ಯಕಿ! ನನ್ನನ್ನು ನಾಶಮಾಡಲು ಯಾರಿಂದಲೂ ಸಾಧ್ಯವಿಲ್ಲ!"


Rate this content
Log in

Similar kannada story from Drama