Gireesh pm Giree

Abstract Drama Inspirational

2.9  

Gireesh pm Giree

Abstract Drama Inspirational

ಅಪ್ಪ

ಅಪ್ಪ

2 mins
606



ಬಾನ ಬೆಳಗಲು ಸೂರ್ಯ, ಚಂದ್ರ, ನಕ್ಷತ್ರಗಳೆಷ್ಟು ಮುಖ್ಯವೋ, ನನ್ನ ಮನಸೆಂಬ ಬಾನಲ್ಲಿ ಕನಸಿಗೆ ಮೆಟ್ಟಿಲಾಗಿ, ಬಾಳೆಂಬ ಬಂಡಿಗೆ ಅಪಾಯ ಎದುರಾಗದಂತೆ, ಕಣ್ಣರೆಪ್ಪೆಯಂತೆ ಕಾಪಾಡುವ, ಉಸಿರಿಗೆ ಉಸಿರು ನೀಡುವ ಅಪ್ಪನೂ ಅಷ್ಟೇ ಮುಖ್ಯ. ಅವರಿಗಿಂತ ನೆಚ್ಚಿನ ಗೆಳೆಯ ನನಗೆ ಈ ಜಗತ್ತಿನಲ್ಲಿ ಯಾರೂ ಇಲ್ಲ. 


ಅಪ್ಪನೆಂದರೆ ಸಾವಿರ ನೆನಪುಗಳು… ಬೆನ್ನಲ್ಲಿ ಕೂಸುಮರಿ ಮಾಡಿದ ನೆನಪು, ಕದ್ದುಮುಚ್ಚಿ ದೀಪಾವಳಿಗೆ ತಂದ ಪಟಾಕಿ ಒಡೆದದ್ದಕ್ಕೆ ಬೆನ್ನ ಮೇಲೆ ಬಿದ್ದ ಕೈಯಚ್ಚಿನ ನೆನೆಪು…ಹೀಗೆ! ಅಮ್ಮನಿಗೆ ಅಂಕಪಟ್ಟಿ ಕಾಣಿಸಿದರೆ ಬೈಗುಳ ಸಿಗುತ್ತೆ ಎಂಬ ಭಯಕ್ಕೆ ಅಪ್ಪನಲ್ಲಿ ಸಹಿ ಹಾಕುವಂತೆ ಮನವೊಲಿಸುತ್ತಿದ್ದೆ. ಆದರೆ ಅಕ್ಕ ಅಮ್ಮನಲ್ಲಿ ಹೇಳಿ ನನ್ನೆಲ್ಲಾ ಯೋಜನೆಯನ್ನು ಹಾಳು ಮಾಡುತ್ತಿದ್ದಳು. ಇದು ಮುಂದಿನ ನನ್ನ ಮತ್ತು ಅಮ್ಮನ ಜಗಳಕ್ಕೆ ತಕ್ಷಣದ ಕಾರಣವಾಗಿರುತ್ತಿತ್ತು. ಆಗ ಅಪ್ಪ, "ನೋಡು ಮಗ, ಬಡತನ ನಾನು ಸರಿಯಾಗಿ ಕಲಿಯಲಾಗದೆ ಕೂಲಿ ಕೆಲಸ ಮಾಡುವಂತೆ ಮಾಡಿತು. ಆದರೆ ನಿನಗೆ ಒಳ್ಳೆ ರೀತಿಯಾಗಿ ಕಲಿಯಲು ಎಲ್ಲಾ ಅವಕಾಶಗಳಿವೆ. ಚೆನ್ನಾಗಿ ಕಲಿತರೆ ಲೋಕದ ಜ್ಞಾನವ ಅರಿತರೆ ಮುಂದೆ ಒಳ್ಳೆಯ ಸ್ಥಾನಕ್ಕೆ ಖಂಡಿತಾ ಹೋಗುವೆ,” ಎನ್ನುತ್ತಿದ್ದರು. ಅವರ ಪ್ರೇರಣೆಯ ಮಾತನ್ನು ಎಂದಿಗೂ ಮರೆಯಲಾಗದು.


ಭಾನುವಾರ ಬಂತೆಂದರೆ ನನಗೊಂತರ ಹಬ್ಬ. ನಾನು ಮತ್ತು ಅಪ್ಪ ಹತ್ತಿರದ ನದಿಗೆ ಹೋಗಿ ಮೀನು ಹಿಡಿಯುತ್ತಿದ್ದೆವು, ಪೇಟೆಗೆ ಹೋಗಿ ಐಸ್ ಕ್ರೀಮ್ ತಿನ್ನುತ್ತಿದ್ದೆವು. ವರ್ಷಕ್ಕೊಮ್ಮೆ ಬರುವ ಸರ್ಕಸ್ ಅನ್ನು ನೋಡದೇ ಬಿಡುತ್ತಿರಲಿಲ್ಲ. ಮಳೆ ಬಂತೆಂದರೆ ಸಾಕಿತ್ತು ಅಪ್ಪನ ತಲೆಯನ್ನು ನಾನು ಕೆಡಿಸಿಬಿಡುತ್ತಿದ್ದೆ. ದೋಣಿ ಮಾಡಿಕೊಡು ಎಂದು ಹಠ ಹಿಡಿಯುತ್ತಿದ್ದೆ. ನನ್ನ ಹಠಕ್ಕೆ ಮಣಿಯುತ್ತಿದ್ದ ಅಪ್ಪನ ಕೈಯಿಂದ ಅಂದವಾದ ಕಾಗದದ ದೋಣಿ ಮೂಡಿಬರುತ್ತಿತ್ತು. ಮಳೆಯ ನಡುವೆ ಸಮೀಪದ ಬಯಲಲ್ಲಿ ಆಡುವಾಗ ಅಪ್ಪ ನನ್ನ ಕೈಹಿಡಿದು ಸಾಥ್ ಕೊಡುತ್ತಿದ್ದರು. ಅಲ್ಲಿದ್ದ ಕೆಸುವಿನ ಎಲೆಯನ್ನು ತಲೆಗೆ ಹಿಡಿಯುವಂತೆ ಹೇಳಿ ನನ್ನನ್ನು ಮಳೆಯಿಂದ ರಕ್ಷಿಸುತ್ತಿದ್ದರು. 


ಮನೆಯ ಆಧಾರಸ್ತಂಭವೇ ಅಪ್ಪ. ಅವರ ದುಡಿಮೆಯ ತುಡಿತದ ಹಿಂದೆ ಅವರಿಗಾಗಿ ಮಾತ್ರವಲ್ಲದೆ ತನ್ನನ್ನು ನಂಬಿದ ಪರಿವಾರದ ಜೀವಕ್ಕೂ ಆಸರೆಯಾಗುವ ಕಾಳಜಿಯಿತ್ತು. ಮನೆಯ ಪ್ರತಿ ಸಂತಸದ ಹಿಂದೆ ತಂದೆಯ ಬೆವರಿನ ಕಥೆ ಇರುತ್ತದೆ. ಮನೆಯವರ ಸಂತಸದ ಹಿಂದೆ ಅವರ ತ್ಯಾಗವಿರುತ್ತದೆ. ಅಪ್ಪನ ಪ್ರೀತಿ, ತ್ಯಾಗವನ್ನು ನಾ ಮರೆತರೆ ನನ್ನಷ್ಟು ದೊಡ್ದ ದಡ್ಡ ಯಾರೂ ಇರಲಾರ. 


ಹಲವರ ಬಾಳ ಬೆಳಗುವ ದೀಪ ಅಪ್ಪ-ಅಮ್ಮ. ಅಮ್ಮನ ಪ್ರೀತಿ ಬೇಗನೆ ಅರಿವಿಗೆ ಬರುತ್ತದೆ. ಆದರೆ ಅಪ್ಪನ ಮಮತೆ ಅವರ ಮನದಾಳದಲ್ಲೇ ನೆಲೆಯೂರಿರುತ್ತದೆ. ಅದು ನಂದಾದೀಪದಂತೆ ಸದಾ ಪ್ರಜ್ವಲಿಸುತ್ತಿರುತ್ತದೆ. ಕೇವಲ ಅಪ್ಪನ ದಿನಾಚರಣೆಗಾಗಿ ಅವರೊಂದಿಗೆ ಸೆಲ್ಫಿ ತೆಗೆದು ಹಾಕುವ ಬದಲು ಅವರೊಂದಿಗೆ ಪ್ರತಿ ದಿನವನ್ನೂ ನೆಮ್ಮದಿಯಿಂದ ಬಾಳೋಣ. ಲವ್ ಯು ಅಪ್ಪ…



Rate this content
Log in

Similar kannada story from Abstract