Gireesh pm Giree

Abstract Children Stories Inspirational

3  

Gireesh pm Giree

Abstract Children Stories Inspirational

ಬಾಲ್ಯದ ಒಡನಾಟ

ಬಾಲ್ಯದ ಒಡನಾಟ

2 mins
173



ಸ್ನೇಹದ ಬೆಸುಗೆಯ ಬಂಧ, ಅನುರಾಗ ಸಂಬಂಧ ,ಬಾಳಿನಲ್ಲಿ ಬೀರುವುದು ಸುಗಂಧ .ಬಾಲ್ಯದ ದಿನಗಳನ್ನು ಮೆಲುಕು ಹಾಕಿ ನೋಡಿದಾಗ ಕಣ್ಣೆದುರಿಗೆ ಕಳೆದ ನೆನಪಿನ ಕ್ಷಣಗಳು ಆಗಸದಲ್ಲಿ ಹೊಳೆಯು ನಕ್ಷತ್ರದಂತೆ ಕಣ್ಣನ್ನು ಆಕರ್ಷಿಸುತ್ತದೆ .ಬಾಲ್ಯದಲ್ಲಿ ಮಾಡಿದ ಆಟ ತುಂಟಾಟಗಳಿಗೆ ಗಡಿಯೂ ಎಲ್ಲೇಯೂ ಇರಲಿಲ್ಲ. ಆಡಿದ್ದೇ ಆಟ ,ಮಾಡಿದ್ದೆ ಮೋಜು ,ಸ್ನೇಹದ ಒಡನಾಟದ ಸಮ್ಮಿಲನ ಸ್ನೇಹದ ಸವಿರಾಗಕ್ಕೆ ಶ್ರುತಿಯಾಗಿದ್ದು ಸ್ನೇಹಿತರು.

   ಬಾಲ್ಯದಲ್ಲಿ ಆಡಿದ ಆಟ ಒಂದಾ! ಎರಡಾ! ಬೇಸಿಗೆ ಆದರೆ ಸಾಕಿತ್ತು .ಯಾವಾಗ ಮಾವಿನ ಹೂವು ಕಾಯಾಗುತ್ತೋ ? ಕಾಯಿ ಯಾವಾಗ ಹಣ್ಣಾಗುತ್ತೋ? ಎಂದು ಕಾಯುತ್ತಿದ್ದ ಕಾಲ. ಆಡುವ ಮೈದಾನದ ಸನ್ನಿವೇ ನೆರಳಾಗಿ ನಿಂತ ಮಾಮರವು ಮಾವಿನ ಕಾಯಿ ಹಣ್ಣಿನಿಂದಾಗಿ ಸಾಕಷ್ಟು ಪೆಟ್ಟುಗಳನ್ನು ತಿಂದು ನಮಗೆ ಆಹಾರವಾಗಿತ್ತು. ಸ್ನೇಹಿತರು ನಾವುಗಳು ಜೊತೆಗೂಡಿ ಕಲ್ಲನ್ನು ಎಸೆಯುತ್ತಿದ್ದೆವು . ಸಿಗುತ್ತಿದ್ದ ಮಾವಿನ ಕಾಯಿಯನ್ನು ಉಪ್ಪು ಖಾರವನ್ನು ಬೆರೆಸಿ ತಿನ್ನುತ್ತಿದ್ದಾಗ ಸಿಗುತ್ತಿದ್ದ ಮಜಾ ಈಗ ಬಾಯಲ್ಲಿ ನೀರೂರಿಸುತ್ತದೆ. ಮಾವಿನ ದಾಹವು ಅಧಿಕವಾಗಿ ಕಲ್ಲುಗಳನ್ನು ಎಸೆದಾಗ ಗುರಿತಪ್ಪಿ ಪಾದ ಚಾರಿಗಳ ಮೇಲೆ ಸನಿಹವೇ ಬಿದ್ದು ಬೈಗುಳ ತಿಂದಿದ್ದೇವೆ. ಅತಿಯಾಸೆಯೇ ಗತಿಗೇಡು ಮಾಡಿತು.

   ಹಾಗೆಯೇ ಊರಲ್ಲಿ ಜಾತ್ರೆಯ ಸಂಭ್ರಮ ಯಕ್ಷಗಾನ ಬಯಲಾಟವನ್ನು ಸವಿಯಲು ಗೆಳೆಯರ ಜೊತೆಗೂಡಿ ಹೋಗುತ್ತಿದ್ದೆ. ಪ್ರಸಂಗವನ್ನು ಸವಿಯುತ್ತಾ ಸಿಗುತ್ತಿದ್ದ ಚಟ್ಟಂಬಡೆಗಾಗಿ ಕೋಳಿ ಜಗಳವನ್ನೇ ನಮ್ಮ ಬಳಗದವರು ಮಾಡುತ್ತಿದ್ದೆವು. ಕೆಂಪು ಕಣ್ಣಿನ ಅಸುರ ವೇಷವು ನನ್ನನ್ನೇ ದಿಟ್ಟಿಸಿ ನೋಡುವಾಗ ಭಯವಾದದ್ದು ನಿಜ .ಕೆಲವು ಗೆಳೆಯರು ನಿದ್ರೆಯ ಮಂಪರಿನ ಹೋರಾಟದಲ್ಲಿ ನನ್ನ ಭುಜವೇ ಆಸರೆ ಆಗಿತ್ತು. ನವರಾತ್ರಿ ದಿನಗಳಲ್ಲಿ ನವದಿನವೂ ದೇವಾಲಯದಲ್ಲಿ ಭಜನೆಯನ್ನು ಮಾಡಿ ರಾತ್ರಿ ಜೊತೆಯಲ್ಲಿ ಕುಳಿತು ಊಟ ಮಾಡಿ ಹರಟೆ ಹೊಡೆದು ಸುಖ ಕಷ್ಟಗಳ ಮಾತನ್ನು ಆಡುವಾಗ ಎಷ್ಟೊಂದು ಖುಷಿ. ತರಗತಿಯಲ್ಲಿ ಹೀಗಾಯ್ತು ಹಾಗಾಯ್ತು, ಹೀಗಾಗಬೇಕಿತ್ತು ಎನ್ನುವ ಗೆಳೆಯರ ಮಾತಿಗೆ ಕಿವಿಯಾಗಿ ಆಗಸವೇ ಚಪ್ಪರಹಾಕಿ ಕಾಯುತ್ತಿದ್ದಂತಿತ್ತು.

 ಬೇಸಿಗೆ ರಜೆಯಲ್ಲಿ ಐಸ್ ಕ್ಯಾಂಡಿಯ ಮಜಾವನ್ನು ಸವಿಯುತ್ತಾ ಕ್ರಿಕೆಟ್ ಆಟವನ್ನು ಆಡುತ್ತಾ ಸೋತರೂ ಗೆದ್ದರೂ ಅದನ್ನು ಸಮನಾಗಿ ಸ್ವೀಕರಿಸುತ್ತಾ ಆ ದಿನಗಳನ್ನು ಕಳೆಯುತ್ತಿದ್ದೆ. ಮೈದಾನ ಇತ್ತಾದ್ರೂ ಅಲ್ಲಿ ಸಂಜೆ ಮಾತ್ರ ಆಡುವುದು ಸಾಮಾನ್ಯವಾಗಿತ್ತು. ಉಳಿದ ಹೊತ್ತಲ್ಲಿ ನಮ್ಮನೆ ಅಂಗಳವೇ ಆಟದ ಮೈದಾನವಾಗಿತ್ತು. ಊರಲ್ಲಿ ಜಾತ್ರೆಯ ಸಡಗರ ಇದ್ದ ಕಾರಣ ಕಿಣಿಕಿಣಿ ಮಾಡುತ್ತ ಐಸ್ ಕ್ಯಾಂಡಿ ಮಾವನು ಅತ್ತ-ಇತ್ತ ಓಡಾಡುತ್ತಿದ್ದನು. ಆಗ ಅವನ ಸುತ್ತಲು ಹೋಗಿ ಚಿಲ್ಲರೆ ನಾಣ್ಯದ ಐಸ್ ಕ್ಯಾಂಡಿಯನ್ನು ತೆಗೆದು ಸವಿಯುವಾಗ ಎಷ್ಟೊಂದು ಖುಷಿ. ಈ ಪಟ್ಟಿಯಲ್ಲಿ ಬೊಂಬೈ ಮಿಠಾಯಿ ಹಳೆಯದೇನು ಅಲ್ಲ.

    ಇನ್ನೂ ಮಳೆಗಾಲ ಬಂತಂದರೆ ಸಾಕಿತ್ತು .ಊರಲ್ಲಿ ಹರಿಯುತ್ತಿದ್ದ ನದಿಯ ಪಕ್ಕದ ತೋಡಿನಲ್ಲಿ ದೋಣಿಯ ಸಾಲುಗಳನ್ನು ಬಿಡುತ್ತಿದ್ದೆವು. ಶಾಲೆಯ ಆರಂಭದ ದಿನಗಳಲ್ಲಿ ಶಾಲೆಗಳಿಗೆ ಹೋಗಲು ಉತ್ಸಾಹವೇ ಇರದು. ಆದರೆ ಶಾಲೆಗೆ ನಡೆದುಕೊಂಡು ಹೋಗುವ ದಾರಿಯ ಮದ್ಯೆ ಗೆಳೆಯರೊಂದಿಗೆ ಸೇರಿ ಮಾಡಿದ ಗಮ್ಮತ್ತು ತುಸು ಹೆಚ್ಚಿತ್ತು. ಸ್ನೇಹಿತರ ನಗುವಿನ ಆಲಾಪನೆ, ಅವರ ಕಥೆಗಳ ಬಿತ್ತನೆ, ಆ ನಡಿಗೆಯ ಸಂತಸಕ್ಕೆ ಪುಷ್ಟಿ ನೀಡುತ್ತಿತ್ತು. ಆ ಮಾರ್ಗವಾಗಿ ನಡೆವಾಗ ಇಂದಿಗೂ ಆ ದಿನಗಳು ಕಣ್ತುಂಬಿ ಬರುತ್ತದೆ.

   ಮನದ ನೋವನ್ನು ಸ್ನೇಹಿತರ ಜೊತೆಯಲ್ಲಿ ಹಂಚಿಕೊಳ್ಳುವಾಗ ಏನೂ ಒಂಥರಾ ಉಲ್ಲಾಸ. ಸಮಸ್ಯೆಗಳು ಎಷ್ಟೇ ಹಿರಿದಾದರೂ- ಕಿರಿದಾದರೂ ಮನದ ಮಾತನ್ನು ಹೇಳಿಕೊಂಡರೆ ಆಗುವಂತಹ ಸಮಾಧಾನವೇ ಬೇರೆ. ಬಾಲ್ಯದಲ್ಲಿ ನಡೆದ ಸಣ್ಣ ಸಣ್ಣ ಸಂಚಿಕೆಯನ್ನು ಪ್ರಸ್ತುತ ಗೆಳೆಯರೊಂದಿಗೆ ಹೇಳಿಕೊಳ್ಳುವಾಗ ಆ ಬಾಲ್ಯ ಮತ್ತೆ ಬರಬಾರದು ಎಂಬುದಾಗಿ ಮನವು ಮತ್ತೆ ಮತ್ತೆ ಕೋರುತ್ತಿದೆ.

ಅಳಿದುಳಿದ ಭಾವನೆಗಳಿಗೆ ಮರು ಜೀವ ತುಂಬುವ ಆ ಸ್ಥಳಗಳು, ಶಾಲಾ ಗುಂಪಿನ ಭಾವಚಿತ್ರಗಳು, ಮಾವಿನ ಮರ, ಗಣೇಶೋತ್ಸವ ,ನಾವು ಓಡಾಡಿದ ಪರೀಕ್ಷೆ ಬಸ್ಸು, ಕಿಣಿ ಕಿಣಿ ಐಸ್ ಕ್ಯಾಂಡಿ ಮಾವ, ತೆಂಗಿನ ಹೆಡೆ. ಹೀಗೆ ಹಳೆಯ ನನ್ನ ಬೆಚ್ಚಗಿನ ಭಾವವು ಇವುಗಳನ್ನು ನೋಡುವಾಗ ಬಾಲ್ಯವೆನ್ನುವ ಆಗಸವು ನೆನಪುಗಳನ್ನು ಮೋಡಗಳಿಂದ ಅನುಭವ ಎನ್ನುವ ಮಳೆಯನ್ನು ಮನಸು ಎನ್ನುವ ಭುವಿಯ ಮೇಲೆ ಮುದ್ದಾಗಿ ಉದುರುವಾಗ ಸಂತಸದ ಚಿಗುರು ಹುಲುಸಾಗಿ ಬೆಳೆಯುತ್ತದೆ .ಬಾಲ್ಯದ ಸವಿಯ ಸವಿಯಲ್ಲಿ ಸುವರ್ಣಾಕ್ಷರವು ನನ್ನ ಗೆಳೆಯರು . ಅವರ ಸ್ನೇಹದ ಕಾಣಿಕೆ ಪ್ರೀತಿಯ ಆರೈಕೆ ಸದಾ ನನ್ನೊಳಗೆ ಶಾಶ್ವತ.


Rate this content
Log in

Similar kannada story from Abstract