Prajna Raveesh

Abstract Classics Others

4  

Prajna Raveesh

Abstract Classics Others

ಆಪತ್ಭಾಂಧವ ಕೃಷ್ಣಾ..!

ಆಪತ್ಭಾಂಧವ ಕೃಷ್ಣಾ..!

6 mins
382



"ನಿಂಗೆ ಲ್ಯಾಬ್ ನಲ್ಲಿ ಬೆಂಕಿ ಕಡ್ಡಿಯನ್ನು ಗೀರಿ ಬೆಂಕಿ ಹಚ್ಚುವಾಗ, ತಿರುಗುತ್ತಿರುವ ಫ್ಯಾನ್ ನ್ನು ಆಫ್ ಮಾಡ್ಬೇಕು ಅನ್ನೋ ಪರಿಜ್ಞಾನಾನೂ ಇಲ್ವಾ?, ಅದೂ ಸರಿಯಾಗಿ ಲ್ಯಾಬ್ ಎಕ್ಸಾಮ್ ಮಾಡ್ತಿದ್ರೆ ಆಗ್ತಿತ್ತು ಅದೂ ಇಲ್ಲ, ಏನೂ ಇಲ್ಲ, ಒಂದು ಸ್ವಲ್ಪ ಪರಿಜ್ಞಾನನೂ ಇಲ್ಲ" ಎಂಬ ಜೀವಶಾಸ್ತ್ರದ ಉಪನ್ಯಾಸಕರ ಗದರಿದ ಧ್ವನಿಯನ್ನು ಕೇಳಿ, ರಶ್ಮಿಗೆ ಹೃದಯಕ್ಕೆ ಯಾರೋ ಇರಿದಂತಾಯಿತು.


ರಶ್ಮಿಗೆ ತುಂಬಾ ನೆಚ್ಚಿನ ಉಪನ್ಯಾಸಕರಾಗಿದ್ದರು ಬಾಲು ಸರ್. ಪಾಠ ಮಾಡುವಾಗಲೂ ಹೆಚ್ಚಾಗಿ ತಮಾಷೆಯಾಗಿಯೇ ಮಾತನಾಡುತ್ತಾ, ಎಲ್ಲರ ಮನ ಸೆಳೆಯುವ ಬಾಲು ಸರ್ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಅವರು ಮುನಿಸಿಕೊಳ್ಳುವುದು ಬಲು ಅಪರೂಪ. ತಾವು ನಕ್ಕು, ಇತರರನ್ನೂ ನಗಿಸಿ ಪಾಠ ಮಾಡುವ ಬಾಲು ಸರ್ ಗೆ ನನ್ನ ಮೇಲೆ ಇಷ್ಟೊಂದು ಕೋಪ ಬಂತೇ ಎಂದು ದುಃಖ ಬಂತು ರಶ್ಮಿಗೆ. ಅದೂ ಅಲ್ಲದೇ ಪಠ್ಯದ ಬೇರೆ ಯಾವ ವಿಷಯದಲ್ಲಿಯೂ ತುಂಬಾ ಆಸಕ್ತಿ ವಹಿಸಿ ಕಲಿಯದ ರಶ್ಮಿ, ಬಾಲು ಸರ್ ಮಾಡುತ್ತಿದ್ದ ಜೀವಶಾಸ್ತ್ರವನ್ನು ಮಾತ್ರ ತನ್ನ ಜೀವವೇ ಎಂಬಂತೆ ಕಲಿಯುತ್ತಿದ್ದಳು!!


ಕಾರಣ ಇಷ್ಟೇ ಬಾಲು ಸರೋ ಮದುವೆಯಾಗದ ಸುರಸುಂದರಾಂಗ. ಅವರ ಸೌಂದರ್ಯಕ್ಕೆ ಮಾರು ಹೋಗದ ಹುಡುಗಿಯರೇ ಕಡಿಮೆ!!, ಹಾಸ್ಯ ಪ್ರಜ್ಞೆಯನ್ನು ಹೊಂದಿರುವ ಬಾಲು ಸರ್ ಒಳ್ಳೆಯ ಸಜ್ಜನಿಗ. ಯಾರ ಜೊತೆಯೂ ಮುನಿಸಿಕೊಳ್ಳದೇ ಎಲ್ಲರ ಜೊತೆಯೂ ನಗು ನಗುತಾ ಬೆರೆಯುವ ಬಾಲು ಸರ್ ಮಾತ್ರ ಅವಳಲ್ಲಿಂದು ಕೋಪಗೊಂಡರಲ್ಲಾ ಎಂಬ ದುಃಖ ಒಂದೆಡೆಯಾದರೆ, ಪ್ರತಿ ದಿನವೂ ಬಾಲು ಸರ್ ನ ತರಗತಿಗಳನ್ನು ಮಿಸ್ ಮಾಡಿಕೊಳ್ಳದೆ, ಅವರು ಪ್ರತಿ ದಿನ ಕೇಳುತ್ತಿದ್ದ ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ನೀಡಿ, ಭೇಷ್ ಎನಿಸಿಕೊಳ್ಳುತ್ತಿದ್ದ ಹುಡುಗಿ ರಶ್ಮಿ, ಆದರೆ ಈಗ ರಶ್ಮಿಗೆ ಎಂದೂ ಬೈಯ್ಯದ ಬಾಲು ಸರ್ ಬೈಗುಳವನ್ನು ಕೇಳಿದಾಗ ತುಂಬಾ ಬೇಸರಗೊಂಡು, ಆ ದಿನದ ಪ್ರಯೋಗ ಪರೀಕ್ಷೆಯನ್ನು ಮುಗಿಸಿ, ಮನೆಗೆ ಹಿಂದಿರುಗಿದ್ದಳು ರಶ್ಮಿ.


ಮರು ದಿನವೇ ದೀಪಾವಳಿ ಹಬ್ಬ. ಮನೆಯಲ್ಲೆಲ್ಲಾ ದೀಪಾವಳಿಯ ತಯಾರು ಜೋರಾಗಿಯೇ ನಡೆಯುತ್ತಿತ್ತು. ರಶ್ಮಿಗೆ ಮಾತ್ರ ಹಬ್ಬದ ಖುಷಿಯೇ ಇರಲಿಲ್ಲ. ಬಾಲು ಸರ್ ಬೈದುದ್ದನ್ನೇ ನೆನೆಸಿಕೊಂಡು, ದುಃಖದಲ್ಲಿ ಸಪ್ಪೆ ಮುಖವನ್ನು ಮಾಡಿ ಕುಳಿತಿದ್ದಳು ರಶ್ಮಿ. ರಶ್ಮಿಗೋ ದೀಪಾವಳಿ ಹಬ್ಬವನ್ನು ಖುಷಿಯಿಂದ ಕಳೆಯುವ ಹಾಗಿಲ್ಲ ಏಕೆಂದರೆ ಹಬ್ಬದ ನಡುವೆ ಬರುವ ಪದವಿ ಪರೀಕ್ಷೆಗಳು ಅವಳ ಹಬ್ಬದ ಖುಷಿಯನ್ನೇ ಕಸಿದುಕೊಂಡಿತ್ತು!!


ರಶ್ಮಿ ಅವಳಿಗೇ ಅರಿವಿಲ್ಲದಂತೆ ಬಾಲು ಸರ್ ಗೆ ತನ್ನ ಮನಸ್ಸನ್ನೇ ಕೊಟ್ಟಿದ್ದಳೇನೋ. ಅವರು ರಶ್ಮಿಗೆ ಹೆಚ್ಚು ಬೈಯದೇ ಹೋದರೂ ಕೂಡ ಬಾಲು ಸರ್ ನ ಅಷ್ಟು ನುಡಿಗಳು ಇವಳ ಹೃದಯವನ್ನೇ ಇರಿದವು. ಅವರಾಡಿದ ಮಾತುಗಳನ್ನು ನೆನೆ ನೆನೆದು ದುಃಖದಿಂದ ಮೌನಕ್ಕೆ ಜಾರಿದಳು. ಊಟ, ತಿಂಡಿಯನ್ನು ಕೂಡ ಬಿಟ್ಟು ಒಂದು ರೀತಿ ಗರಬಡಿದವಳಂತೆ ಮಂಕಾಗಿ ಬಿಟ್ಟಳು ರಶ್ಮಿ.


ಹಬ್ಬದ ಗಡಿಬಿಡಿಯ ಕೆಲಸದಲ್ಲಿದ್ದ ಆಕೆಯ ಅಪ್ಪ, ಅಮ್ಮನಿಗೆ ಮಗಳ ಬಗ್ಗೆ ಬೇಸರವಾಯಿತು. "ಇಷ್ಟು ಸಣ್ಣ ವಿಷಯಕ್ಕೆ ಊಟ, ತಿಂಡಿಯನ್ನು ಕೂಡ ಬಿಟ್ಟು ಹೀಗೆಲ್ಲಾ ಯಾರಾದ್ರೂ ಮಾಡ್ತಾರ ಮಗಳೇ?," ಎಂದು ರಶ್ಮಿಯ ಅಮ್ಮಾ ರಶ್ನಿಗೆ ಧೈರ್ಯದಲ್ಲಿ ಇರಬೇಕು ಎಂಬಂತೆ ಅನೇಕ ಬುದ್ಧಿ ಮಾತುಗಳನ್ನು ಹೇಳಿದರೂ ಕೂಡ ರಶ್ಮಿ ಏನೂ ಮಾತನಾಡದೆ ಮೌನಕ್ಕೆ ಜಾರಿದಳು.


ಮರು ದಿನ ದೀಪಾವಳಿ ಹಬ್ಬದ ದಿನ. ಆ ದಿನವೂ ರಶ್ಮಿಯ ಮೊಗದಲ್ಲಿ ಹಬ್ಬದ ಖುಷಿಯೇ ಇರಲಿಲ್ಲ!, ಆಕೆಯ ದುಃಖ ಕಡಿಮೆಯಾಗಿರಲಿಲ್ಲ. ಇತ್ತ ದೀಪಾವಳಿಯಂದು ಪ್ರತಿ ವರ್ಷ ನಡೆಯುವ ತುಳಸಿ ಪೂಜೆ, ಬಲೀಂದ್ರ ಪೂಜೆ, ಗೊ ಪೂಜೆಗಳನ್ನು ನಡೆಸದೇ ಇದ್ದರೆ ಆದೀತೇ ಎಂದು ರಶ್ಮಿಯ ಅಪ್ಪ, ಅಮ್ಮಾ ಹಬ್ಬದ ಕೆಲಸಗಳಲ್ಲಿ ಮಗ್ನರಾದರು.


ಹಬ್ಬದ ಕೆಲಸಗಳಲ್ಲಿ ನಿರತವಾಗಿ ಅವುಗಳನ್ನೆಲ್ಲಾ ಮರೆಯಬೇಕು ರಶ್ಮಿ. ಹೀಗೆ ಅನ್ನಕ್ಕೆ ಬಿದ್ದ ನೊಣದಂತೆ ಒಂದೇ ಕಡೆ ಕುಳಿತುಕೊಂಡು ಅದನ್ನೇ ಯೋಚನೆ ಮಾಡಿಕೊಂಡು ಇದ್ದರೆ ಹುಚ್ಚು ಹಿಡಿದು ಹೋದೀತು ಎಂದು ಅಪ್ಪ, ಅಮ್ಮಾ ಎಚ್ಚರಿಸಿದರು. ಆದರೂ ರಶ್ಮಿ ಮಾತ್ರ ಊಟ, ತಿಂಡಿಯನ್ನು ಕೂಡ ಮಾಡದೇ ಒಂದೇ ಯೋಚನೆಯಲ್ಲಿ ತೊಡಗಿದ್ದಳು!!


ಒತ್ತಾಯದಲ್ಲಿ ಅದು ಹೇಗೋ ಊಟ, ತಿಂಡಿ ಮಾಡುತ್ತಿದ್ದ ರಶ್ಮಿಯ ಮೌನ ಮಾತ್ರ ಹಾಗೆಯೇ ಇತ್ತು. ದಿನಾಲೂ ನಗು ನಗುತಾ, ಖುಷಿ ಖುಷಿಯಾಗಿ ಕಾಲೇಜ್ ಗೆ ಹೋಗಿ ಬರುತ್ತಿದ್ದ ರಶ್ಮಿ, ಇಂದು ಯಾರೊಂದಿಗೂ ಮಾತನಾಡದೇ ಮಂಕಾಗಿ ಕುಳಿತಿದ್ದುದನ್ನು ಆಕೆಯ ಅಪ್ಪ, ಅಮ್ಮನಿಗೆ ನೋಡಲಾಗುತ್ತಿರಲಿಲ್ಲ. 


" ದೀಪಾವಳಿ ಮುಗಿಯಿತು ಮಗಳೆ, ನಾಳೆ ನಿನಗೆ ಪರೀಕ್ಷೆಯಿದೆ, ಹೋಗಿ ಓದಿಕೊ, ಪರೀಕ್ಷೆಗೆ ಹೋಗಿ ಚೆನ್ನಾಗಿ ಪರೀಕ್ಷೆ ಬರೆದು, ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿ, ಉತ್ತಮ ಉದ್ಯೋಗವನ್ನು ಪಡೆಯಬೇಕು ಮಗಳೆ" ಎಂದು ರಶ್ಮಿಯ ಅಮ್ಮಾ ಹೇಳಿದರೂ ಕೂಡ ರಶ್ಮಿ ಏನೂ ಹೇಳದೇ ಅದೇನೋ ಚಿಂತೆಯಲ್ಲಿ ಮುಳುಗಿರುವಂತೆ ಕಂಡಳು.


ಮರುದಿನ ರಶ್ಮಿಗೆ ಪರೀಕ್ಷೆ ಇತ್ತು ಆದರೆ ರಶ್ಮಿ ಪರೀಕ್ಷೆಗೆ ಹೋಗಿರಲಿಲ್ಲ!!, ಮೌನಿಯಾಗಿದ್ದ ರಶ್ಮಿ ಇದ್ದಕ್ಕಿದ್ದಂತೆ ನಗುವುದು, ಅಳುವುದು, ನೀರು ಇರುವ ಕಡೆಗೆ ಓಡುವುದು, ಒಬ್ಬಳೇ ಮನೆಯಿಂದ ದೂರ ಇರುವ ಗುಡ್ಡೆಗೆ, ಕಾಡಿಗೆ ಹೀಗೆ ಎಲ್ಲೆಂದರಲ್ಲಿ ಹೋಗುತ್ತಿದ್ದಳು!!. ಇದನ್ನೆಲ್ಲಾ ಕಂಡು ಆಕೆಯ ಅಪ್ಪ, ಅಮ್ಮನಿಗೆ ಚಿಂತೆಯಾಯಿತು ಹಾಗೂ ಆಕೆಯನ್ನು ಕಾಯುವುದೇ ದೊಡ್ಡ ಕೆಲಸವಾಗಿ ಹೋಯಿತು!!, ಮದುವೆಯಾಗದ ಹುಡುಗಿ ಹೀಗೆ ಹೇಳದೇ ಕೇಳದೇ ಎಲ್ಲೆಲ್ಲಾ ತಿರುಗಿದರೆ ಯಾರಾದರೂ ಅವಳನ್ನು ದುರುಪಯೋಗ ಪಡಿಸಿಕೊಂಡರೆ ಏನು ಗತಿ ಎಂಬ ಭಯ, ಚಿಂತೆಯೂ ಕಾಡಿತು ರಶ್ಮಿಯ ಅಪ್ಪ, ಅಮ್ಮನಿಗೆ. ಇದನ್ನು ಹೀಗೆಯೇ ಬಿಡುವುದು ಸರಿಯಲ್ಲ ಎಂದು ವೈದ್ಯರ ಬಳಿ ತೆರಳಿದರು ರಶ್ಮಿಯ ಅಪ್ಪ, ಅಮ್ಮಾ. ರಶ್ಮಿದು ಒಂದೇ ಹಠ, ನಾನು ವೈದ್ಯರ ಬಳಿ ಬರುವುದಿಲ್ಲ, ನನಗೆ ಏನೂ ಆಗಿಲ್ಲವೆಂದು!!, ಹೇಗಾದರೂ ಮಾಡಿ ರಶ್ನಿಯನ್ನು ವೈದ್ಯರ ಬಳಿ ಕರೆದುಕೊಂಡು ಬಂದಿದ್ದರು ಆಕೆಯ ಅಪ್ಪ, ಅಮ್ಮಾ.


ವೈದ್ಯರ ಬಳಿ ತೆರಳಿ ರಶ್ಮಿಯನ್ನು ತೋರಿಸಿದ ಆಕೆಯ ಅಪ್ಪ, ಅಮ್ಮನಿಗೆ ವೈದ್ಯರು ಹೇಳಿದ ಮಾತುಗಳನ್ನು ಕೇಳಿ ಆಕಾಶವೇ ಕಳಚಿ ಬಿದ್ದಂತಹ ಅನುಭವವಾಯಿತು!!, ಅದೇನೆಂದರೆ ಆಕೆಗೆ ಹುಚ್ಚು ಹಿಡಿದಿದೆ ಎಂದು!! ಔಷಧಿ, ಮಾತ್ರೆಗಳನ್ನು ಬರೆದು ಕೊಡುವೆ ಸರಿ ಹೋಗುವಳೊ ಎಂದು ನೋಡೋಣ ಎಂದು ಮನೆಗೆ ಕಳುಹಿಸಿದರು ವೈದ್ಯರು.


ರಶ್ಮಿಯೋ ಹೊತ್ತು ಹೊತ್ತಿಗೆ ಸರಿಯಾಗಿ ಮಾತ್ರೆಗಳನ್ನು ತಿನ್ನುತ್ತಿರಲಿಲ್ಲ. ನನಗೇನೂ ಆಗಿಲ್ಲ ನನಗ್ಯಾಕೆ ಮಾತ್ರೆ ಎಂದು ಹಠ ಮಾಡಿ, ಮಾತ್ರೆಗಳನ್ನೆಲ್ಲಾ ಅಲ್ಲಿ ಇಲ್ಲಿ ಬಿಸಾಡುತ್ತಿದ್ದಳು ರಶ್ಮಿ. ಹೇಳದೇ ಕೇಳದೇ ಒಬ್ಬಳೇ ಮನೆ ಬಿಟ್ಟು ಹೋಗುವುದು, ನೀರಿರುವ ಕಡೆ ಹೋಗಿ ವಿಚಿತ್ರ ರೀತಿಯಲ್ಲಿ ನಗುವುದು ಹೀಗೆಲ್ಲಾ ಮಾಡುತ್ತಿದ್ದ ರಶ್ಮಿಯನ್ನು ಕಂಡು ಆಕೆಯ ಅಪ್ಪ, ಅಮ್ಮಾ ಆಕೆಯ ಹುಚ್ಚು ಕಡಿಮೆಯಾಗಲು ಹೋಗದ ವೈದ್ಯರೇ ಇಲ್ಲ!!, ಹಗಲಿರುಳು ನಿದ್ದೆ ಇಲ್ಲದೇ ಹಳ್ಳಿ, ದಿಲ್ಲಿ ಎಂದು ವೈದ್ಯರ ಕಂಡು ಮಾಡದ ಮದ್ದೇ ಇಲ್ಲ!!, ಆದರೂ ಆಕೆ ಸಹಜ ಸ್ಥಿತಿಗೆ ಬರುವಂತೆ ಕಾಣಲಿಲ್ಲ!! 


 ಇನ್ನೇನು ಮಾಡುವುದೆಂದು ಚಿಂತೆಗೊಳಗಾದ ದಂಪತಿಗಳಿಗೆ, ಪಕ್ಕದ ಮನೆಯವರು ಸೂಚಿಸಿದಂತೆ ಒಬ್ಬ ಜ್ಯೋತಿಷಿಯ ಬಳಿ ಹೋಗಿ ತಮ್ಮ ಸಮಸ್ಯೆಯನ್ನು ತಿಳಿಸಿದರು.


ಜ್ಯೋತಿಷ್ಯರು ಆಕೆಗೆ ತಾಯತವನ್ನು ಕಟ್ಟಬೇಕೆಂದು ಹೇಳಿ ತಾಯತ ಕಟ್ಟಲು ಕೊಟ್ಟರು ಹಾಗೂ ದೇವರ ಸ್ತೋತ್ರವನ್ನು ಹೇಳಬೇಕೆಂದು ಸೂಚಿಸಿದರು. ಜ್ಯೋತಿಷಿ ಹೇಳಿದ ರೀತಿಯಲ್ಲೇ ತಾಯತವನ್ನು ಕಟ್ಟಿ, ದೇವರ ಸ್ತೋತ್ರವನ್ನು ಪಠಣ ಮಾಡಿಸಿದರು ಹಾಗೂ ಒಬ್ಬ ವೈದ್ಯರ ಹೆಸರನ್ನು ಹೇಳಿ ಅವರು ಕೊಡುವ ಮದ್ದಿನಿಂದ ಕಡಿಮೆಯಾಗಬಹುದು ಎಂದರು.


ಜ್ಯೋತಿಷ್ಯರು ಸೂಚಿಸಿದಂತೆಯೇ ಆ ವೈದ್ಯರ ಬಳಿ ತೆರಳಿ ವೈದ್ಯರಿಂದ, ರಶ್ಮಿ ಮನಸ್ಸಿಗೆ ಸ್ವಲ್ಪ ಕೌನ್ಸೆಲಿಂಗ್ ಪಡೆದಳು. ವೈದ್ಯರು ಮುಕ್ತವಾಗಿ ರಶ್ಮಿಯಲ್ಲಿ ಮಾತನಾಡಿ ಅವಳ ಅಂತರಾಳದ ನೋವಿಗೆ ಕಾರಣವನ್ನು ತಿಳಿದುಕೊಂಡರು. ಮನದ ಅಂತರಾಳವನ್ನು ಬಿಚ್ಚಿಟ್ಟ ರಶ್ಮಿಗೆ ಮನೆಗೆ ಹೋದ ನಂತರ ಇನ್ನು ಬದುಕಬಾರದು ಎಂದೆನಿಸಿತೇನೋ ವಿಷ ಕುಡಿದು ಸಾಯುವ ಪ್ರಯತ್ನ ಮಾಡಿದಳು.


ತನ್ನ ಕೋಣೆಯ ಬಾಗಿಲನ್ನು ತೆರೆದು ಹೊರಬರದ ರಶ್ಮಿಯನ್ನು ಕಂಡು ಆಕೆಯ ಅಪ್ಪ, ಅಮ್ಮಾ ಬಾಗಿಲನ್ನು ದೂಡಿ ಒಳ ಬಂದಾಗ ರಶ್ಮಿ ಪ್ರಜ್ಞೆ ತಪ್ಪಿ ಬಿದ್ದಿದ್ದಳು!! ರಶ್ಮಿಯ ಅಪ್ಪ, ಅಮ್ಮಾ ತಾವು ಪೂಜಿಸುವ ಕೃಷ್ಣ ದೇವರನ್ನು ನೆನೆಯುತ್ತಾ, "ದೇವರೇ ದೀಪವೂ ನಿನ್ನದೇ, ಗಾಳಿಯೂ ನಿನ್ನದೇ, ಆರದಿರಲಿ ಆ ಮುಗ್ಧ ಜೀವದೊಳಗಿನ ಬೆಳಕು, ಮದುವೆಯೂ ಆಗದ ಸಣ್ಣ ವಯಸ್ಸಿನ ಕೂಸು ಆಕೆ, ಬಡವರಾದ ನಾವು ಒಪ್ಪೊತ್ತಿಗೂ ಊಟ ಇಲ್ಲದೇ, ಅಲ್ಲಿ ಇಲ್ಲಿ ಕೂಲಿ ನಾಲಿ ಮಾಡಿಕೊಂಡು ಆಕೆಯನ್ನು ಹೆತ್ತು, ಹೊತ್ತು ಸಾಕಲು ಎಷ್ಟು ಕಷ್ಟ ಪಟ್ಟಿದ್ದೆವೋ ನಮಗೇ ಗೊತ್ತು ದೇವಾ" ಎಂದು ಕಣ್ಣೀರಿಟ್ಟು ರಶ್ಮಿಯ ಅಮ್ಮಾ ಸಣ್ಣ ವಯಸ್ಸಿನಲ್ಲಿ ರಶ್ಮಿಯನ್ನೊಮ್ಮೆ ಮೆಲುಕು ಹಾಕಿದರು.


ಕಡು ಬಡವರಾಗಿದ್ದ ನಮಗೆ ಮದುವೆಯಾಗಿ ಅದೆಷ್ಟೋ ಸಮಯಗಳ ಕಾಲ ಮಕ್ಕಳೇ ಆಗಿರಲಿಲ್ಲ. ಮಕ್ಕಳಾಗಲಿ ಎಂದು ಹೋಗದ ಜ್ಯೋತಿಷರಿಲ್ಲ, ಕೇಳದ ವೈದ್ಯರಿಲ್ಲ. ಅಂತೂ ಇಂತೂ ನಮ್ಮ ಪ್ರಾರ್ಥನೆ ಆ ಕೃಷ್ಣನಿಗೆ ಕೇಳಿತೇನೋ ಮದುವೆಯಾಗಿ 10 ವರ್ಷಗಳ ನಂತರ ಒಂದು ಮುದ್ದಾದ ಹೆಣ್ಣು ಮಗುವನ್ನು ದಯ ಪಾಲಿಸಿದ್ದನು. ಆಕೆಯೇ ರಶ್ಮಿ!!, ರಶ್ಮಿ ಒಬ್ಬಳೇ ಮಗಳು ನಮಗೆ. ನನಗೆ ವಯಸ್ಸಾಗಿದ್ದ ಕಾರಣ ಸಹಜ ಹೆರಿಗೆ ಆಗಿರಲಿಲ್ಲ ಹಾಗಾಗಿ ಶಸ್ತ್ರ ಚಿಕಿತ್ಸೆ ಮಾಡಿ ಹೊರ ತೆಗೆದಿದ್ದರು ರಶ್ಮಿಯನ್ನು. ಶಸ್ತ್ರ ಚಿಕಿತ್ಸೆ ಆದ ಕಾರಣ ಅಳುವ ಕಂದನಿಗೆ ಎದ್ದು ಹಾಲು ಕೊಡಲು ಕೂಡ ಆಗದ ಪರಿಸ್ಥಿತಿ ನನ್ನದು!, ಶಸ್ತ್ರ ಚಿಕಿತ್ಸೆಯ ನೋವಿನಿಂದ ಕುಳಿತುಕೊಂಡು ಹಾಲುಣಿಸಲು ಆಗುತ್ತಿರಲಿಲ್ಲ ಹಾಗಾಗಿ ಮಲಗಿಕೊಂಡೆ ಹಾಲುಣಿಸುತ್ತಿದ್ದೆ. 


ಹಾಲು ಕೂಡ ಕಡಿಮೆ ಇದ್ದ ನನಗೆ ಆಕೆಯನ್ನು ಬೆಳೆಸುವುದು ದೊಡ್ಡ ಸವಾಲೇ ಆಗಿತ್ತು. ಹಗಲಿರುಳು ಅಳುತ್ತಿದ್ದಳು ಪಾಪ ಆಕೆ ಹಸಿವಿನಲ್ಲಿ. ಹೇಗಾದರೂ ಲಾಕ್ಟೋಜನ್, ಮಣ್ಣಿ ಎಂದೆಲ್ಲಾ ಕೊಟ್ಟು ಆಕೆಯನ್ನು ಬೆಳೆಸಿದೆ. ಹೀಗೆ ಬೆಳೆಯುತ್ತಾ ತುಂಟಾಟವಾಡುತ್ತಾ ದೊಡ್ಡವಳಾದ ರಶ್ಮಿಯ ಶರೀರ ಸಣಕಲಿತ್ತು ಹೊರತು ದಪ್ಪವಾಗುತ್ತಿರಲಿಲ್ಲ. ತುಂಬಾ ಕೂದಲು ಕೂಡ ಉದುರಲು ಶುರುವಾಗಿತ್ತು ನಾಲ್ಕನೆಯ ವಯಸ್ಸಿನಲ್ಲಿಯೇ!!, ಬಲು ಬೇಗ ಸುಸ್ತಾಗುತ್ತಿದ್ದಳು ರಶ್ಮಿ. 


ದಿನಗಳೆದಂತೆ ಆಟೋಟ, ತುಂಟಾಟಗಳು ಎಲ್ಲವೂ ಕಡಿಮೆಯಾಗಿ ಸುಸ್ತು ಅಮ್ಮಾ ಎಂದು ಹೇಳಿ ಮಲಗಿ ಬಿಡುತ್ತಿದ್ದಳು. ಮಂಕಾದ ಅವಳ ಮೊಗವನ್ನು ನೋಡಲಾಗುತ್ತಿರಲಿಲ್ಲ ನಮಗೆ. ಒಂದು ದಿನ ವೈದ್ಯರ ಬಳಿ ರಶ್ಮಿಯನ್ನು ಕರೆಗದುಕೊಂಡು ಹೋಗಿಯೇ ಬಿಟ್ಟೆವು. ಪರೀಕ್ಷಿಸಿದ ವೈದ್ಯರು ನೀಡಿದ ಉತ್ತರ ಆಕೆಗೆ ಕ್ಯಾನ್ಸರ್ ಇದೆ ಎಂದು!!, ಮೊದಲನೇ ಹಂತದಲ್ಲಿ ಇರುವ ಕಾರಣ ಗುಣ ಪಡಿಸಬಹುದು ಎಂದಿದ್ದರು ವೈದ್ಯರು. ನಮಗೆ ಆಕಾಶವೇ ಕಳಚಿ ಬಿದ್ದಂತಹ ಅನುಭವವಾಯಿತು. ಕಡು ಬಡವರಾದ ನಮಗೆ ಏನು ಮಾಡಬೇಕೆಂದು ತೋಚದೇ ಕೃಷ್ಣನ ಮೊರೆ ಇಟ್ಟೆವು. ಅವಳ ಔಷಧಿಗೆಂದು ಖರ್ಚು ಮಾಡುವಷ್ಟು ಹಣ ಇರಲಿಲ್ಲ ನಮ್ಮಲ್ಲಿ. ಕೃಷ್ಣಾ ನೀನೇ ಗತಿ ನಿನ್ನ ದಯೆಯಿಂದಲೆ ಹುಟ್ಟಿದ ಜೀವ ಅದು ನೀನೇ ದಾರಿ ತೋರಪ್ಪಾ ಎಂದು ಕೃಷ್ಣನ ಬಳಿ ಮೊರೆ ಇಟ್ಟೆವು. ಖರ್ಚು ಮಾಡದೇ ಉಪಾಯವಿಲ್ಲ ಮಗಳನ್ನು ಉಳಿಸಲೇಬೇಕೆಂದು ನಾವು ದಿನಾಲೂ ಕೆಲಸಕ್ಕೆ ಹೋಗುವ ಸಾಹುಕಾರರ ಬಳಿ ಹೋಗಿ ಸಾಲ ಕೇಳಿದ್ದೆವು. ರಶ್ಮಿಯನ್ನು ಕಂಡರೆ ಅವರಿಗೂ ಪ್ರೀತಿಯೇ, ಅವರು ನಮಗೆ ಧನ ಸಹಾಯ ಮಾಡಿ, ರಶ್ಮಿಗೆ ಚಿಕಿತ್ಸೆ ಕೊಡಿಸಿ, ರಶ್ಮಿಯ ಜೀವ ಉಳಿಸಿದ ದೇವರಂತೆ ಕಂಡರು!. ನಿಧಾನವಾಗಿ ಹೇಗಾದರೂ ಮಾಡಿ ನಾನು ಹಾಗೂ ನನ್ನ ಯಜಮಾನರು ಅಲ್ಲಿ ಇಲ್ಲಿ ದುಡಿದು ಧಣಿಗಳ ಸಾಲ ತೀರಿಸಿದೆವು ಆದರೆ ನಾವಂದು ಅಷ್ಟು ಕಷ್ಟಪಟ್ಟು ಉಳಿಸಿದ ನಮ್ಮ ಮನೆಯ ದೀಪ ಈಗ ಈ ರೀತಿ ಮಾಡಿದರೆ ನಾವೇನು ಮಾಡಬೇಕು ದೇವರೇ ಎಂದು ಅತ್ತು ಕಣ್ಣೀರು ಸುರಿಸಿದರು ರಶ್ಮಿಯ ಅಮ್ಮಾ.


ಹೆಚ್ಚು ವಿಷದ ಮಾತ್ರೆಗಳನ್ನು ನುಂಗಿದ್ದ ಕಾರಣ ಇವಳ ಜೀವ ಉಳಿಯಲು ಸಾಧ್ಯವೇ ಇಲ್ಲ ಎಂದು ಹೇಳಿದ್ದ ವೈದ್ಯರು, ದೇವರ ಮಹಿಮೆ ಎಂಬಂತೆ ಅದು ಹೇಗೋ ಸತತ ಪ್ರಯತ್ನದಿಂದ ರಶ್ಮಿಯ ಜೀವವನ್ನು ಉಳಿಸಿದ್ದರು!!, ಬದುಕುಳಿದ ರಶ್ಮಿಗೆ ಅಲ್ಲಿಯೇ ಪಕ್ಕದಲ್ಲಿದ್ದ ಮನೋ ವೈದ್ಯರ ಬಳಿ ಚಿಕಿತ್ಸೆ ಕೊಡಿಸಲಾಯಿತು. ಆಗ ಮನೋವೈದ್ಯರು ರಶ್ಮಿಯಲ್ಲಿ ಹಾಗೂ ಆಕೆಯ ತಂದೆ ತಾಯಿಯರಲ್ಲಿ, " ನೋಡಿ ಏನೂ ಗಾಬರಿ ಮಾಡಿಕೊಳ್ಳಬೇಕಾದ ಅವತ್ಯವಿಲ್ಲ, ಅವಳಿಗೆ ಹುಚ್ಚು ಹಿಡಿದಿಲ್ಲ, ಯಾವುದೋ ಒಂದು ವಿಷಯ ಗಾಢವಾಗಿ ಅವಳ ಮನಸ್ಸಿನ ಮೇಲೆ ಪ್ರಭಾವ ಬಿದ್ದು, ಆಕೆ ಖಿನ್ನತೆಗೆ ಒಳಗಾಗಿದ್ದಾಳೆ ಅಷ್ಟೇ ಬಿಟ್ಟರೆ ಬೇರೇನೂ ಆಗಿಲ್ಲ, ಮೆದುಳಿನಲ್ಲಿ ಸೆರೊಟೋನಿನ್ ಎಂಬ ದ್ರವ ಕಡಿಮೆ ಉತ್ಪತ್ತಿಯಾದರೆ ಹೀಗೆಲ್ಲಾ ಆಗುವುದು ಸಹಜ, ಇದಕ್ಕೆ ನಾನು ಔಷಧಿಯನ್ನು ಕೊಟ್ಟು ಕಡಿಮೆ ಮಾಡುತ್ತೇನೆ" ಎಂದರು. ವೈದ್ಯರ ಔಷಧಿಯಿಂದ ನಿಧಾನವಾಗಿ ಗುಣಮುಖಳಾದಳು ರಶ್ಮಿ.


ಅವಳನ್ನು ಬದುಕಿಸಿ, ಆಪತ್ತಿನಿಂದ ರಕ್ಷಿಸಿದ ಶ್ರೀಕೃಷ್ಣ ದೇವಸ್ಥಾನಕ್ಕೆ ತೆರಳಿ ಮನಸಾರೆ ಕೈ ಮುಗಿದರು ಹಾಗೂ ಮುಂದೆ ಅವಳು ಪ್ರೀತಿ, ಪ್ರೇಮ ಎಂಬ ಹುಚ್ಚಾಟವನ್ನು ಬಿಟ್ಟು ಚೆನ್ನಾಗಿ ಕಲಿತು, ಉತ್ತಮ ಉದ್ಯೋಗ ಪಡೆದು ಈಗ ಉತ್ತಮ ಪತಿಯೊಂದಿಗೆ ಜೀವನ ಸಾಗಿಸುತ್ತಿದ್ದಾಳೆ.


Rate this content
Log in

Similar kannada story from Abstract