STORYMIRROR

Prajna Raveesh

Abstract Tragedy Classics

4  

Prajna Raveesh

Abstract Tragedy Classics

ಕಾಲ ಮಿಂಚಿ ಹೋಗಿತ್ತು..!!

ಕಾಲ ಮಿಂಚಿ ಹೋಗಿತ್ತು..!!

3 mins
404


ದೀಪಾಳ ತಂದೆ ತಾಯಿ ಬಹಳ ಮುದ್ದಿನಿಂದ ಸಾಕಿದ್ದರು ದೀಪಾಳನ್ನು. ದೀಪಾಳ ಪ್ರತಿ ಹುಟ್ಟು ಹಬ್ಬವನ್ನೂ ಬಹಳ ಸಡಗರ ಸಂಭ್ರಮದಿಂದ ನೆಂಟರಿಷ್ಟರನ್ನೆಲ್ಲಾ ಕರೆಸಿ,ದೊಡ್ಡ ಪಾರ್ಟಿಯನ್ನು ಮಾಡಿ ಆಚರಿಸುತ್ತಿದ್ದರು. ಜೀವನದಲ್ಲಿ ಕಷ್ಟಗಳೇನು ಎಂದು ಅರಿವಾಗದಂತೆ ಬಹಳ ಮುದ್ದಿನಿಂದ ಸಾಕಿದ್ದರು ದೀಪಾಳ ನ್ನು ಎನ್ನಬಹುದು. ದೀಪಾಳ ಕುಟುಂಬ ಆಗಾಗ ಉದ್ಯಾವನಕ್ಕೆ ಹೋಗಿ ಖುಷಿ ಪಡುತ್ತಿದ್ದರು. ಆಕೆಯ ಹುಟ್ಟು ಹಬ್ಬದ ಆಸು ಪಾಸಿನಲ್ಲಿ ವರ್ಷಕ್ಕೊಮ್ಮೆಯಾದರೂ ಉದ್ಯಾನವನಕ್ಕೆ ತೆರಳುತ್ತಿದ್ದಳು ಆಕೆಯ ಅಪ್ಪ, ಅಮ್ಮನ ಜೊತೆಗೆ ದೀಪಾ.


ದೀಪಾಳಿಗೆ ಸಿನೆಮಾ ನೋಡುವ ಹುಚ್ಚು ಹೆಚ್ಚೆಂದೇ ಹೇಳಬಹುದು. ಮನೆಯಲ್ಲಿನ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಸಿನೆಮಾ ಮಾತ್ರವಲ್ಲದೆ ಚಿತ್ರಮಂದಿರಕ್ಕೆ ತೆರಳಿಯೂ ಸಿನೆಮಾ ನೋಡಲು ಹೋಗುತ್ತಿದ್ದಳು ದೀಪಾ!! ಜೀವನವೆಂದರೆ ಸಿನೆಮಾದ ರೀತಿ ಎಂದುಕೊಂಡಿದ್ದಳು ದೀಪಾ!!, ಸಿನೆಮಾದ ರೀತಿಯಲ್ಲಿಯೇ ಜೀವನವೂ ನಡೆಯುತ್ತದೆ ಎಂದು ತನ್ನ ಮುಂದಿನ ಜೀವನದ ಬಗ್ಗೆ ಬಣ್ಣ ಬಣ್ಣದ ಕನಸುಗಳನ್ನು ಕಟ್ಟಿಕೊಂಡಿದ್ದಳು ದೀಪಾ. 


ಆಕೆಯ ಮದುವೆಯಾಗುವವರೆಗೂ ಕೂಡ ಆಕೆಯ ತಂದೆ, ತಾಯಿ ಪ್ರತಿ ವರ್ಷವೂ ಬಹಳ ಸಡಗರ, ಸಂಭ್ರಮದಿಂದ ಆಕೆಯ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದರು. ಕಾಲ ಕಳೆದಂತೆ ಒಳ್ಳೆಯ ಸಂಬಂಧ ಬಂತೆಂದು ಮದುವೆ ಮಾಡಿ ಕೊಟ್ಟರು ದೀಪಾಳನ್ನು ಆಕೆಯ ತಂದೆ, ತಾಯಿ. 


ಆಕೆಯ ಗಂಡ ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ದೀಪಾಳನ್ನು. ಬಹಳ ಕಾಳಜಿ ವಹಿಸಿ ಆಕೆಯ ಬೇಕು, ಬೇಡಗಳನ್ನು ವಿಚಾರಿಸುತ್ತಿದ್ದ ಆದರೆ ದೀಪಾಳಿಗೆ ಅವಳು ಹೇಳಿದ್ದೇ ಆಗಬೇಕೆಂದು ಹಠದ ಸ್ವಭಾವ. ಹೀಗೆ ದಿನಗಳು ಉರುಳುತ್ತಿರಲು ಒಂದು ದಿನ ಆಕೆಯ ಹುಟ್ಟು ಹಬ್ಬ ಬಂದೇ ಬಿಟ್ಟಿತ್ತು.


ಆಕೆಗೋ ಮದುವೆಯಾದ ನಂತರ ಆಕೆಯ ಹುಟ್ಟು ಹಬ್ಬವನ್ನು ಬಹಳ ಸಡಗರ, ಸಂಭ್ರಮದಿಂದ ಆಚರಿಸಬೇಕು, ಅಪ್ಪ, ಅಮ್ಮಾ ಕರೆದುಕೊಂಡು ಹೋದಂತೆ ವರ್ಷಕ್ಕೊಮ್ಮೆಯಾದರೂ ಉದ್ಯಾನವನಕ್ಕೆ ತೆರಳಬೇಕು, ಗಂಡ ಆಕೆಗೆ ಗೊತ್ತಾಗದಂತೆ ಬಹಳ ಆಶ್ಚರ್ಯಜನಕವಾಗಿ, ಸಿನಿಮೀಯ ರೀತಿಯಲ್ಲಿ ಅನೇಕ ಉಡುಗೊರೆಗಳನ್ನು ಕೊಟ್ಟು, ಬಲು ಆಕರ್ಷಕವಾಗಿ ಆಕೆಯ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಬೇಕು ಎಂಬ ಬಯಕೆ ಆಕೆಯ ಮನದಲ್ಲಿತ್ತು.


ಹುಟ್ಟು ಹಬ್ಬದ ದಿನ ಗಂಡನು ಶುಭಾಶಯ ಕೋರುವನು, ಹೊರಗೆ ಕರೆದುಕೊಂಡು ಹೋಗುವನು, ಸರ್ಪ್ರೈಸ್ ಗಿಫ್ಟ್ ಕೊಡಿಸುವನು ಎಂದು ಬಹಳ ಕಾತರದಿಂದ ಕಾಯುತ್ತಿದ್ದಳು ದೀಪಾ. ಆದರೆ ಆಕೆಯ ಪತಿಯು, ಆಕೆಯ ಹುಟ್ಟು ಹಬ್ಬದ ನೆನಪೇ ಇಲ್ಲದಂತೆ ಇದ್ದ!!, ಎಲ್ಲಾ ಬಿಟ್ಟು ಹುಟ್ಟು ಹಬ್ಬದ ಶುಭಾಶಯಗಳನ್ನು ಕೂಡ ಹೇಳಿರಲಿಲ್ಲ ಎಂದು ಬಹಳ ನೊಂದುಕೊಂಡಳು ದೀಪಾ.


ಹುಟ್ಟು ಹಬ್ಬ

ಹಾಗಿರಬಹುದು ಹೀಗಿರಬಹುದು ಎಂದು ಅದೇನೇನೋ ಕನಸುಗಳನ್ನು ಕಂಡ ದೀಪಾಳ ಕನಸುಗಳು ಸುಟ್ಟು ಭಸ್ಮವಾದವು. ಇದೇ ವಿಷಯದಲ್ಲಿ ಗಂಡನ ಜೊತೆಗೆ ಜಗಳ ಕೂಡ ಮಾಡಿದಳು ದೀಪಾ. ಆಕೆಯ ಪತಿಯು ಆ ಒಂದು ದಿನ ಏನೋ ಕೆಲಸಗಳ ಒತ್ತಡದಲ್ಲಿ ಆಕೆಯ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಲು ಮರೆತಿದ್ದ ಆದರೆ ಆ ಒಂದು ಸಣ್ಣ ಕಾರಣಕ್ಕಾಗಿ, ಆಕೆಗೆ ಗಂಡ ಇಷ್ಟರವರೆಗೆ ಹಂಚಿದ್ದ ಪ್ರೀತಿಯನ್ನು ಮರೆತೇ ಬಿಟ್ಟು ತವರು ಮನೆಗೆ ಹೋಗಿಬಿಟ್ಟಿದ್ದಳು!!


ಪತಿಯು ಆಕೆಯನ್ನು ಅದೆಷ್ಟೇ ಸಮಾಧಾನಪಡಿಸಿ, ಕರೆ ತರಲು ಪ್ರಯತ್ನಿಸಿದರೂ ಕೂಡ ಆಕೆ ಅವನ ಜೊತೆಗೆ ಹೋಗಲಿಲ್ಲ, ಆತನ ಕರೆಯನ್ನೂ ಸ್ವೀಕರಿಸುತ್ತಿರಲಿಲ್ಲ!!, ಇದರ ಬಗ್ಗೆ ದೀಪಾಳ ಅಪ್ಪ, ಅಮ್ಮಾ ಆಕೆಗೆ ಎಷ್ಟು ಬುದ್ಧಿ ಮಾತುಗಳನ್ನು ಹೇಳಿದರೂ ಕೂಡ ಆಕೆ ಯಾವುದನ್ನೂ ಕೇಳಿಸಲಿಲ್ಲ!!


ಮೊದಲ ಮಳೆಯಂತೆ ಬಂದ ಪ್ರೀತಿ ಮಳೆ ನಿಂತು ಹೋದ ಮೇಲೆ ಎಂಬಂತಾಗಿತ್ತು!!, ಅವರಿಬ್ಬರ ಸಂಪರ್ಕ ಸಂಪೂರ್ಣ ಕಡಿಯಿತು ಎನ್ನಬಹುದು. ವಾಟ್ಸ್ ಆ್ಯಪ್, ಫೇಸ್ಬುಕ್ ನಲ್ಲಿ ಆಕೆಯ ಗೆಳತಿಯರು ಅವರ ಹುಟ್ಟು ಹಬ್ಬದ ದಿನ ಆಚರಿಸಿಕೊಳ್ಳುತ್ತಿದ್ದ ಚಿತ್ರಗಳು, ವಿಡಿಯೋಗಳು, ಉಡುಗೊರೆಗಳನ್ನೆಲ್ಲಾ ಕಂಡು ನನ್ನ ಜೀವನ ಹೀಗೆ ಎಂದು ಮರುಕಪಡುತ್ತಿದ್ದಳು.


ಆಕೆಯ ಗೆಳತಿಯ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿದ ದೀಪಾ, ಆಕೆಯ ಜೀವನವನ್ನು ಪ್ರಶಂಶಿಸತೊಡಗಿದಳು. ನೀನು ಬಹಳ ಅದೃಷ್ಟವಂತೆ ಗೆಳತಿ, ಅದೆಷ್ಟು ಒಳ್ಳೆಯ ಪತಿ ಸಿಕ್ಕಿದ್ದಾರೆ ನಿನಗೆ, ಬಯಸಿದ್ದೆಲ್ಲವನ್ನೂ ನೆರವೇರಿಸುತ್ತಾರೆ ಎಲ್ಲವೂ ಅವರವರು ಪಡೆದುಕೊಂಡು ಬಂದದ್ದು ಎಂದಳು.


ಆಗ ಗೆಳತಿಯು, "ಹಾಗೆಲ್ಲಾ ಏನಿಲ್ಲ ದೀಪಾ, ಇದು ಸುಮ್ನೆ ಪಬ್ಲಿಸಿಟಿ ಗೆ ಮಾತ್ರ, ನನ್ನಲ್ಲಿ ಅವರು ಸ್ವಲ್ಪವೂ ಸಮಯ ಕಳೆಯುವುದಿಲ್ಲ, ಪ್ರೀತಿ ತೋರುವುದಿಲ್ಲ, ಇದೆಲ್ಲಾ ಜನರ ಮುಂದೆ ಶ್ರೀಮಂತಿಕೆಯ ಪ್ರದರ್ಶನವಷ್ಟೇ ದೀಪಾ. ಕೆಟ್ಟ ಚಟದ ದಾಸನಾಗಿ ನನಗೆ ಹೊಡೆದು, ಬಡಿದು ಮಾಡುತ್ತಾರೆ. ನನಗೆ ಶ್ರೀಮಂತಿಕೆಯ ಬದುಕು ಇದೆಯೇ ಹೊರತು ನೆಮ್ಮದಿಯ ಜೀವನವಿಲ್ಲ ದೀಪಾ" ಎಂದಳು.


ಆಗ ದೀಪಾಳು, ಆ ಒಂದು ದಿನ ತನಗೆ ತನ್ನ ಪತಿಯು ಶುಭಾಶಯ ಕೋರಲು ಮರೆತಿದ್ದನು ಎಂಬುದನ್ನು ಬಿಟ್ಟರೆ ಆತ ಅಪ್ಪಟ ಬಂಗಾರ ಎಂದುಕೊಂಡಳು. ಆತ ನೀಡುತ್ತಿದ್ದ ಪ್ರೀತಿ, ಕಾಳಜಿ, ಸಮಯ ಎಲ್ಲವೂ ನೆನಪಾಗಿ, ತನ್ನ ಪತಿಯನ್ನು ನೆನೆದು ಕಣ್ಣೀರು ಹಾಕತೊಡಗಿದಳು ದೀಪಾ. ಈಗ ಆಕೆಗೆ ಸಿನಿಮೀಯ ಜೀವನ ಹಾಗೂ ನಿಜ ಬದುಕಿನ ನಡುವಿನ ನಿಜವಾದ ಅಂತರ ಅರಿವಾಯಿತು. ನಿಜವಾಗಿಯೂ ಜೀವನದಲ್ಲಿ ಬೇಕಾಗಿರುವುದು ಏನು ಎಂಬುದರ ಅರಿವಾಯಿತು. ಈ ಒಂದು ಸಣ್ಣ ಕಾರಣಕ್ಕಾಗಿ ಪತಿಯನ್ನು ತೊರೆಯುವುದು ಸರಿಯಲ್ಲ ಎಂದುಕೊಂಡಳು ಆದರೆ ಅಷ್ಟೊತ್ತಿಗಾಗಲೇ ಕಾಲವು ಮಿಂಚಿ ಹೋಗಿತ್ತು!!


Rate this content
Log in

Similar kannada story from Abstract