ಬಾಳು ಬೆಳಕಾಯಿತು.....
ಬಾಳು ಬೆಳಕಾಯಿತು.....
ಕಿರಣ ಬಡತನದಲ್ಲಿ ಬೆಳೆದ ಹುಡುಗ, ಅವನಿಗೆ ಒಬ್ಬ ತಮ್ಮಾ ಹಾಗೂ ಒಬ್ಬಳು ತಂಗಿ ಇದ್ದಳು. ಹೀಗೆ ಕಿರಣನ ಅಪ್ಪ, ಅಮ್ಮನಿಗೆ ಮೂವರು ಮಕ್ಕಳು ಆದರೆ ಕಿರಣನಿಗೆ 6 ವರ್ಷ ಆದಾಗಲೇ ಅವನ ತಂದೆ ವಿಪರೀತವಾದ ಜ್ವರ ನೆತ್ತಿಗೇರಿ ತೀರಿ ಹೋಗಿದ್ದರು. ಕಿರಣನ ಅಮ್ಮನಿಗೋ ಬಾಲ್ಯ ವಿವಾಹ, ವಿವಾಹವಾದ 7 ವರ್ಷಗಳಲ್ಲಿ ಪತಿಯನ್ನು ಕಳೆದುಕೊಂಡು ವಿಧವೆಯಾದರು ಅಮ್ಮಾ ಜಾನಕಿ.
ಜಾನಕಿ ಹೆಚ್ಚು ಕಲಿತವರಲ್ಲ, ಕಲಿಯುತ್ತಿರುವಾಗಲೇ ಸಣ್ಣ ವಯಸ್ಸಿನಲ್ಲಿಯೇ ಅವರಿಗೆ ಮದುವೆ ಮಾಡಿಸಿ ಬಿಟ್ಟಿದ್ದರು ಅವರ ಅಪ್ಪ, ಅಮ್ಮಾ ಏಕೆಂದರೆ ಹಿಂದಿನ ಕಾಲದಲ್ಲಿ ಹೆಣ್ಣು ಮಗು ಹುಟ್ಟಿತೆಂದರೆ ಅವರನ್ನು ಬೇಗ ಮದುವೆ ಮಾಡಿಸಿ ಕೊಟ್ಟು ತಮ್ಮ ಜವಾಬ್ದರಿಯಿಂದ ಆದಷ್ಟು ಬೇಗ ವಂಚಿತರಾಗಬೇಕು ಎಂಬ ಧ್ಯೇಯ ಅದೂ ಕೂಡ ವರ ಅಂಗವಿಕಲನಾದರೂ ಸರಿಯೇ ಬಂದ ವರನಿಗೆ ಮಗಳನ್ನು ಧಾರೆಯೆರೆದು ಕೊಡುವ ಸಂಪ್ರದಾಯ!! ಇಲ್ಲವೆಂದರೆ ಹೆಣ್ಣಿಗೆ ಗಂಡು ಸಿಗದೇ ಇದ್ದರೆ?!, ಮದುವೆಯಾಗದೆ ಉಳಿದು ಬಿಟ್ಟರೆ ಅವಳಿಗೆ ಮುಂದಾರು ಗತಿ ಎಂಬ ಭಯ, ಕಳವಳವೂ ಹಿಂದಿನ ಕಾಲದಲ್ಲಿ ಇತ್ತು ಹಾಗೆಯೇ ಜಾನಕಿಯ ಅಪ್ಪ, ಅಮ್ಮನಿಗೆ ಕೂಡ ಇಂತಹ ಭಯವಿದ್ದ ಕಾರಣ ಜಾನಕಿಯನ್ನು ಬಾಲ್ಯ ವಿವಾಹ ಮಾಡಿಸಿದ್ದರು ಆಕೆಯ ಅಪ್ಪ, ಅಮ್ಮಾ.
ಜಾನಕಿಗೆ ಹಿರಿಯ ಮಗನಾಗಿ ಕಿರಣನ ಜನನವಾಯಿತು. ತನಗೆ ತಂದೆ ಇಲ್ಲದ ಕಾರಣ ಅಮ್ಮಾ, ತಮ್ಮಾ ಹಾಗೂ ತಂಗಿಯ ಜವಾಬ್ದಾರಿಗಳೂ ಕಿರಣನ ತಲೆಗೆ ಬಿತ್ತು. ಮನೆಯಲ್ಲಿ ಅಲ್ಪ ಸ್ವಲ್ಪ ಜಮೀನಿತ್ತು ಹಾಗಾಗಿ ಆ ಜಮೀನಿನ ಕೃಷಿ_ಕಾರ್ಯಗಳು, ತನ್ನ ವಿದ್ಯಾಭ್ಯಾಸದ ಜೊತೆಗೆ ತಮ್ಮಾ ಹಾಗೂ ತಂಗಿಯ ವಿದ್ಯಾಭ್ಯಾಸದ ಜವಾಬ್ದಾರಿ, ವ್ಯಾವಹಾರಿಕ ಜವಾಬ್ದಾರಿಗಳೆಲ್ಲವೂ ಹಿರಿ ಮಗನಾದ ಕಿರಣನಿಗೆ ಬಿತ್ತು.
ಹಾಗೆಯೇ ಕಿರಣನೂ ಕೂಡ ಮನೆ, ಜಮೀನುಗಳ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡು, ಜೊತೆಗೆ ತನ್ನ ವಿದ್ಯಾಭ್ಯಾಸವನ್ನೂ ಮುಂದುವರಿಸಿಕೊಂಡು, ಅಮ್ಮಾ, ತಮ್ಮಾ, ಹಾಗೂ ತಂಗಿಗೆ ಪ್ರೀತಿಯ ಆಸರೆಯಾಗಿದ್ದ.
ಮೂರು ಹೊತ್ತು ಊಟಕ್ಕೂ ಗತಿ ಇಲ್ಲದ ಸಂದರ್ಭ, ಒಂದೊಂದು ಕಾಸಿಗೂ ಪರದಾಡುವ ಸ್ಥಿತಿ ಬಂದಿತ್ತು. ತನ್ನ ಜಮೀನಿನಲ್ಲಿನ ಸೌದೆಯನ್ನು ಮಾರಿ, ಅಲ್ಪ ಸ್ವಲ್ಪ ಅಡಿಕೆ ಹಾಗೂ ತೆಂಗಿನಕಾಯಿಯ ಕೃಷಿಯಿಂದ ಹೇಗೋ ಜೀವನ ನಡೆಸುತ್ತಿದ್ದರು.
ಸರ್ಕಾರಿ ಶಾಲೆಯಲ್ಲಿ ಕಲಿತ ಕಾರಣ ಶಿಕ್ಷಣಕ್ಕೆಂದು ಅಷ್ಟೊಂದು ದುಡ್ಡು ಖರ್ಚು ಆಗಿರಲಿಲ್ಲ ಮಕ್ಕಳಿಗೆ. ಹೇಗೋ ಇರುವ ದುಡ್ಡಿನಲ್ಲಿ ಎಲ್ಲಾ ವ್ಯವಹಾರಗಳನ್ನು ನಿಭಾಯಿಸುತ್ತಿದ್ದರು ಜಾನಕಿ ಹಾಗೂ ಕಿರಣ.
ಹೀಗೆ ಜಾನಕಿಯ
ಮೂರೂ ಮಕ್ಕಳೂ ಕೂಡ ಬೆಳೆದು ದೊಡ್ಡವರಾದರು. ಈಗ ಜಾನಕಿಗೆ ತನ್ನ ಮಗಳಿನ ಮದುವೆಯ ಚಿಂತೆ. ಮಗಳು ಅಮ್ಮಾ ಹಾಗೂ ಅಣ್ಣನ ಸಹಾಯದಿಂದ ಪದವಿ ಶಿಕ್ಷಣವನ್ನು ಪೂರೈಸಿದ್ದಳು. ಇನ್ನೂ ಕಲಿಯಬೇಕೆಂಬ ಆಸೆಯು ಲಕ್ಷ್ಮಿಗಿದ್ದರೂ ತನ್ನ ಮನೆಯ ಪರಿಸ್ಥಿತಿಯನ್ನು ತಿಳಿದು ಸುಮ್ಮನಾದಳು. ಸದ್ಯದ ಪರಿಸ್ಥಿತಿಯಲ್ಲಿ ಅಣ್ಣ ಕಷ್ಟಪಟ್ಟು ಪದವಿಯ ವರೆಗೆ ನನ್ನನ್ನು ಕಲಿಸಿದ್ದೇ ನನ್ನ ಪುಣ್ಯ ಅಂದುಕೊಂಡಳು.
ಕಿರಣ ತನ್ನ ತಂಗಿಯ ಮದುವೆಯ ಪ್ರಯತ್ನದಲ್ಲಿ ತೊಡಗಿದ ಸ್ವಲ್ಪ ಸಮಯದಲ್ಲಿ ತಂಗಿ ಲಕ್ಷ್ಮಿಯ ವಿವಾಹವಾಯಿತು. ಲಕ್ಷ್ಮಿಯು ವಿವಾಹದ ನಂತರ ಬಿ.ಎಡ್ ಕಲಿತು ತನ್ನ ಕನಸಿನ ಪ್ರಕಾರ ಒಂದು ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿ ಈ ಮಕ್ಕಳ ಬಾಳನ್ನು ಬೆಳಗಲು ಮೂಲ ಕಾರಣವಾಗಿ ತನ್ನ ಬಾಳನ್ನು ಬೆಳಗಿದ ತನ್ನ ಅಣ್ಣ ಹಾಗೂ ಅಮ್ಮನನ್ನು ಪ್ರತಿ ದಿನವೂ ಸ್ಮರಿಸರೊಡಗಿದಳು ಲಕ್ಷ್ಮೀ.
ಇತ್ತ ಕಿರಣನ ತಮ್ಮನೂ ಪದವಿ ಶಿಕ್ಷಣವನ್ನು ಮುಗಿಸಿ ಉದ್ಯೋಗಕ್ಕೆಂದು ಪ್ರಯತ್ನ ಪಡುತ್ತಿದ್ದನು. ಈ ನಿಮಿತ್ತ ಸರ್ಕಾರಿ ನೌಕರಿಗೆಂದು ಅನೇಕ ಪರೀಕ್ಷೆಗಳನ್ನು ಬರೆದನು ಹಾಗೂ ನಿರಂತರ ಪ್ರಯತ್ನಗಳ ಫಲವಾಗಿ ತಾನು ಬರೆದ ಸರ್ಕಾರಿ ನೌಕರಿಯ ಪರೀಕ್ಷೆಯೊಂದರಲ್ಲಿ ಉತ್ತೀರ್ಣನಾಗಿ ಸರ್ಕಾರಿ ಕೆಲಸವನ್ನೂ ಪಡೆದನು. ತನ್ನ ಯಶಸ್ಸಿಗೆ ಕಾರಣವಾದ ಅಮ್ಮಾ ಹಾಗೂ ಅಣ್ಣನನ್ನು ಮನಸಾರೆ ವಂದಿಸಿದನು ವರುಣ.
ಪದವಿ ಮುಗಿಸಿದ್ದರೂ ತನ್ನ ತಮ್ಮಾ ಹಾಗೂ ತಂಗಿಯ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸಿ, ಅವರನ್ನು ಒಂದು ಹಂತಕ್ಕೆ ತಂದು ನಿಲ್ಲಿಸಿದ ನಂತರ ಕಿರಣ ಕೆಲಸಕ್ಕೆಂದು ಅರ್ಜಿ ಹಾಕತೊಡಗಿದ. ತನಗೂ ತಮ್ಮನಂತೆ ಸರ್ಕಾರಿ ಉದ್ಯೋಗಕ್ಕೆ ಹೋಗುವ ಇಚ್ಛೆಯಿತ್ತು ಆದರೂ ವಯಸ್ಸಿನ ಮಿತಿಯು ಮೀರಿದ್ದ ಕಾರಣ ಕಿರಣನ ಕನಸು ಕನಸಾಗಿಯೇ ಉಳಿಯಿತು!!
ಪಾಲಿಗೆ ಬಂದದ್ದೇ ಪಂಚಾಮೃತವೆಂದು ತಿಳಿದು ಕಿರಣ ಪಕ್ಕದಲ್ಲಿದ್ದ ಶಾಲೆಯೊಂದರಲ್ಲಿ ಶಿಕ್ಷಕನಾಗಿ ಕಾರ್ಯನಿರ್ವಹಿಸಿ ತನ್ನ ಅಮ್ಮನ ಕೊನೆಯವರೆಗೂ ಅಮ್ಮನನ್ನು ಪ್ರೀತಿಯಿಂದ ಸಾಕಿ ಆಸರೆಯಾದ. ಕಿರಣನಿಗೆ ತನ್ನ ಜೀವನದಲ್ಲಿ ಸಂತೃಪ್ತಿ ಇತ್ತು ಅದಕ್ಕಿಂತ ಹೆಚ್ಚಾಗಿ ತನ್ನ ತಂಗಿ ಹಾಗೂ ತಮ್ಮನಿಗೆ ಅವರ ಜೀವನದಾದ್ಯಂತ ತಾನು ಉರಿದು ಅವರ ಬೆಳಕಿನ ಕಿರಣವಾಗಿ ಪ್ರಜ್ವಲಿಸಿದ ಆತ್ಮತೃಪ್ತಿಯೂ ಕಿರಣನಿಗಿತ್ತು ಹಾಗೂ ಕಿರಣನು ತನ್ನ ಮನೆ ಮಂದಿಯ ಬಾಳನ್ನಷ್ಟೇ ಬೆಳಗುವ ಕಿರಣವಾಗದೇ ಒಂದು ಶಾಲೆಯ ಶಿಕ್ಷಕನಾಗಿ ಪ್ರತಿ ಮನೆಯ ಪುಟ್ಟ ಮಕ್ಕಳ ಬಾಳನ್ನು ಬೆಳಗುವ ಕಿರಣವಾಗಿ ಪ್ರಜ್ವಲಿಸಿದ!!