ಜ್ಞಾನ ದೀವಿಗೆ ಬೆಳಗಿತು...!!
ಜ್ಞಾನ ದೀವಿಗೆ ಬೆಳಗಿತು...!!
ಭಾನುವಾರ ತೋಟ, ಗದ್ದೆಯಲ್ಲಿ ಕೆಲಸ ಮಾಡಿ ಸುಸ್ತಾದ ರಾಘವ್, ಹೆಂಡತಿ ಕೊಟ್ಟ ಒಂದು ಕಪ್ ಟೀ ಯನ್ನು ಆಸ್ವಾದಿಸುತ್ತಾ ದೂರದರ್ಶನವನ್ನು ವೀಕ್ಷಿಸತೊಡಗಿದ.
" ಬೆಂಗಳೂರು ಮಂಗಳೂರು ಎಲ್ಲೆ ಹೋದ್ರೂ ಬಿಂದಾಸ್, ಭಾನುವಾರ ಸೋಮವಾರ ಎಲ್ಲಾ ವಾರ ಬಿಂದಾಸ್" ಎಂಬ ಬಿಂದಾಸ್ ಚಿತ್ರದ ಹಾಡನ್ನು ಕೇಳಿ ಹಳ್ಳಿಯಲ್ಲಿ ಒಂದು ಸಣ್ಣ ಉದ್ಯೋಗ ಹೊಂದಿ, ಒಂದು ಸ್ವಲ್ಪ ಜಮೀನಿನಲ್ಲಿ ಜೀವನ ಸಾಗಿಸುತ್ತಿದ್ದ ರಾಘವ್ ಗೆ ಪಟ್ಟಣದ ಜೀವನ, ಸಿನೆಮಾ ನಟರ ಥಳುಕು ಬಳುಕಿನ ಜೀವನ ಶೈಲಿ ಅದೆಷ್ಟು ವರ್ಣರಂಜಿತ ಅನ್ನಿಸಿತು!!
ಹಾಡನ್ನು ಕೇಳುತ್ತಾ ಗಾಢವಾದ ಯೋಚನಾ ಲಹರಿಯಲ್ಲಿ ಮುಳುಗಿ ಹೋದ ರಾಘವ್!, " ದಿನ ನಿತ್ಯ ಈ ಹಳಿಯಲ್ಲಿ ಹೊಲ, ಗದ್ದೆ, ತೋಟ ಎಂದು ಜಂಜಾಟದ ಬದುಕು ಮುಗಿಯುವುದೇ ಇಲ್ಲ, ಇರುವ ಸಣ್ಣ ಉದ್ಯೋಗದಲ್ಲಿ ಜೀವನ ಸಾಗಿಸಲು ಕೂಡ ಕಷ್ಟ, ಉದ್ಯೋಗದ ಜೊತೆಗೆ ತೋಟ, ಗದ್ದೆಗಳನ್ನು ನೋಡಿಕೊಂಡು ಬರುವುದೆಂದರೆ ಅಬ್ಬಬ್ಬಾ ಬಲು ಕಷ್ಟದ ಕೆಲಸ, ನನಗೂ ಸಿನೆಮಾ ನಟನಾಗಬೇಕು ಎಂಬ ಆಸೆಯಾಗುತ್ತಿದೆ, ಸಿನೆಮಾ ನಟರ ಬದುಕೆಷ್ಟು ವರ್ಣರಂಜಿತ!! ಹಾಗಾಗಿ ನಾನು ಕೂಡ ಪಟ್ಟಣದ ಕಡೆಗೆ ಹೋಗಿ ಸಿನೆಮಾ ನಟನಾಗುತ್ತೇನೆ ಆಗ ಹಣದ ಜೊತೆಗೆ ಹೆಸರೂ ಬರುತ್ತದೆ, ವರ್ಣರಂಜಿತ ಬದುಕೂ ನನ್ನದಾಗುತ್ತದೆ" ಎಂದು ಯೋಚಿಸಿದ.
ರಾಘವ್ ದೋ ತುಂಬಾ ಸುಂದರ ಸಂಸಾರ. ತಂದೆ, ತಾಯಿ, ಮಡದಿ ಹಾಗೂ ಒಂದು ಪುಟ್ಟ ಮಗಳಿನ ಜೊತೆಗೆ ನೆಮ್ಮದಿಯಿಂದ ಸಂಸಾರ ಸಾಗಿಸುತ್ತಿದ್ದ. ಮನೆ ಸಣ್ಣದಾದರೂ ವಿಶಾಲವಾದ ಮನಸ್ಸನ್ನು ಹೊಂದಿದ್ದರು ಮನೆಯ ಸದಸ್ಯರು. ದಿನ ಬೆಳಗ್ಗೆದ್ದು ಕೊಟ್ಟಿಗೆಯಲ್ಲಿನ ಹಸು ಕರುಗಳ ಚಾಕರಿ ಮಾಡಿ, ಹೊಲ, ತೋಟಗಳ ಕಡೆಗೆ ಒಮ್ಮೆ ಕಣ್ಣಾಯಿಸಿ, ಉದ್ಯೋಗಕ್ಕೆ ತೆರಳಲು ತಯಾರಾಗುವುದು ರಾಘವ್ ನ ಅನುದಿನದ ರೂಢಿಯಾಗಿತ್ತು.
ಇಂದೇಕೋ ರಾಘವ್ ಗೆ ತಾನು ಮಾಡುತ್ತಿರುವ ಕೆಲಸಗಳಲ್ಲಿ ಜಿಗುಪ್ಸೆ ಬಂದು ಪಟ್ಟಣದ ಕಡೆಗೆ ಹೆಜ್ಜೆ ಹಾಕಬೇಕೆಂದಿದೆ ಆತನ ಮನಸ್ಸು!, ಆತನು "ಒಂದು ಸ್ವಲ್ಪ ಸಮಯ ಪಟ್ಟಣದ ಕಡೆಗೆ ಹೋಗಿ ಬರುವೆ" ಎಂದು ತನ್ನ ತಂದೆಯಲ್ಲಿ ಹೇಳಿದಾಗ ತಂದೆ ನಿರಾಕರಿಸಿದರೂ ಹೇಗಾದರೂ ತಂದೆಯ ಮನವೊಲಿಸಿ ಪಟ್ಟಣದ ಕಡೆಗೆ ಒಬ್ಬನೇ ಹೆಜ್ಜೆ ಹಾಕಿದ.
ಮುಂಜಾನೆ 4 ಘಂಟೆಯ ಸುಮಾರಿಗೆ ಬೆಂಗಳೂರು ಕಡೆಯ ಬಸ್ ಹತ್
ತಿ ತನ್ನ ಪ್ರಯಾಣ ಬೆಳೆಸಿದ. ಹಾಗೋ ಹೀಗೋ ಮಹಾನಗರಿ ಬಂದೇ ಬಿಟ್ಟಿತ್ತು. ಉಳಿದುಕೊಳ್ಳಲೆಂದು ಹೋಟೆಲ್ ವ್ಯವಸ್ಥೆ ಮಾಡಿದ ಹಾಗೂ ಸಿನೆಮಾ ನಟನಾಗಬೇಕೆಂಬ ಕನಸನ್ನು ಈಡೇರಿಸಲು, ಚಲನಚಿತ್ರದ ಶೂಟಿಂಗ್ ನಡೆಯುವ ಜಾಗಕ್ಕೆ ಭೇಟಿಯಾದ.
ಹಳ್ಳಿಯಲ್ಲಿ ಹೆಂಡತಿ ಮಾಡಿ ಬಡಿಸುವ ಹಿತವಾದ ತಿಂಡಿ, ಸ್ವಚ್ಛವಾದ ನೀರು, ಹಳ್ಳಿಯ ಪರಿಶುದ್ಧ ವಾತಾವರಣದಲ್ಲಿ ಬೆಳೆದ ರಾಘವ್ ಗೆ ಪಟ್ಟಣದ ವಾತಾವರಣ ಉಸಿರುಗಟ್ಟುವಂತೆ ಮಾಡಿತ್ತು ಹಾಗೂ ಪದೇ ಪದೇ ಮನೆ ಮಂದಿಯ ನೆನಪಾಗುತ್ತಿತ್ತು. ತನ್ನ ಪುಟ್ಟಿ ಮಾಡುತ್ತಿದ್ದ ಹರಟೆ, ತಂಟೆಗಳೆಲ್ಲವೂ ನೆನಪಾಗಿ ಮನೆಯನ್ನು ತುಂಬಾ ಮಿಸ್ ಮಾಡಿಕೊಳ್ತಾ ಇದ್ದೇನೆ ಅನ್ನಿಸಿತು ಆದರೂ ಕೂಡ ಸಿನೆಮಾ ನಟನಾಗಬೇಕು ಎಂಬ ತನ್ನ ಕನಸನ್ನು ಈಡೇರಿಸಲೋಸುಗ ಹಾಗೂ ವರ್ಣರಂಜಿತ ಬದುಕನ್ನು ನಡೆಸಲೋಸುಗ ಪಟ್ಟಣದ ಕಡೆಗೆ ಹೆಜ್ಜೆ ಹಾಕಲೇಬೇಕಾಯಿತು!
ಸಿನೆಮಾ ಶೂಟಿಂಗ್ ನೋಡುತ್ತಿದ್ದ ಆತ ನಿರ್ದೇಶಕರು ನಟರಲ್ಲಿ ಬಾರಿ ಬಾರಿ ಹೇಳುತಿದ್ದ, " ಡೈಲಾಗ್ ಸರಿಯಾಗಲಿಲ್ಲ, ರಿಯಾಕ್ಷನ್ ಸರಿಯಾಗಲಿಲ್ಲ, ಸ್ಮೈಲ್ ಕೊಟ್ಟದ್ದು ಸಾಕಾಗಿಲ್ಲ, ಸ್ಮೈಲ್ ಜಾಸ್ತಿಯಾಯಿತು, ಅತ್ತದ್ದು ಕಡಿಮೆಯಾಯಿತು, ಕೋಪ ಇನ್ನೂ ಜಾಸ್ತಿ ಬರಬೇಕು, ಫೀಲಿಂಗ್ಸ್ ಕೊಟ್ಟದ್ದು ಕಡಿಮೆಯಾಯಿತು" ಎಂಬ ಮಾತುಗಳನ್ನು ಕೇಳಿ ರಾಘವ್ ಗೆ ಸಿನೆಮಾ ನಟನಾಗುವುದು ಎಂದರೆ ಅಷ್ಟು ಸುಲಭವಲ್ಲ ಎಂದೆನಿಸಿತೇನೋ ತಕ್ಷಣ ತನ್ನ ಕನಸನ್ನು ಕೈ ಬಿಟ್ಟು ಮನೆಯ ಕಡೆಗೆ ತರೆಳಲು ತಯಾರಾದ!
ದೂರದರ್ಶನದಲ್ಲಿ ತೋರಿಸಿದಂತೆ ನಟರ ಬದುಕಿಲ್ಲ, ಪರದೆಯ ಮೇಲೆ ಅಷ್ಟೊಂದು ವರ್ಣರಂಜಿತವಾಗಿ ಕಾಣಬೇಕಾದರೆ ತುಂಬಾ ಕಷ್ಟ ಪಡಬೇಕಾಗುತ್ತದೆ. ತಮ್ಮ ನಟನಾ ಕೌಶಲ್ಯ, ಸಾಮರ್ಥ್ಯಗಳಿಂದ ಪ್ರೇಕ್ಷಕರ ಮನ ಗೆಲ್ಲುವ ನಟನೊಬ್ಬನು ತುಂಬಾ ಗ್ರೇಟ್. ಅವರ ಬದುಕೇ ಬೇರೆ, ದುಃಖದ ಬದುಕಿದ್ದರೂ ನಗುವಿನ ಮುಖವಾಡ ಹಾಕಿ ನಟನೆ ಮಾಡಬೇಕಾದ ಪರಿಸ್ಥಿತಿ ಅವರದ್ದು ಎಂದೆನಿಸಿ ಆತನಿಗೆ ವರ್ಣರಂಜಿತ ಬದುಕೆಂದರೆ ಇರುವ ನಮ್ಮ ಜೀವನದಲ್ಲಿ ತೃಪ್ತಿ ಪಟ್ಟುಕೊಂಡು, ಯಾವುದಕ್ಕೂ ಅತಿಯಾಸೆ ಪಡದೇ, ನಮ್ಮ ಬದುಕನ್ನು ಇತರರಿಗೆ ಹೋಲಿಸಿಕೊಳ್ಳದೆ, " ದೂರದ ಬೆಟ್ಟ ನುಣ್ಣಗೆ" ಎಂದಾಗದೇ ಸಂಸಾರದ ಜೊತೆ ನೆಮ್ಮದಿಯಿಂದ ನಗು ನಗುತಾ ಬಾಳುವುದೇ "ವರ್ಣರಂಜಿತ ಬದುಕಿನ ರಹಸ್ಯ" ಎಂದು ಕೊನೆಗೂ ಆತನ ಜ್ಞಾನದೀವಿಗೆ ಬೆಳಗಿತು!!