ಋಣಾನುಬಂಧ
ಋಣಾನುಬಂಧ
ಭೂಮಿ ಅಪ್ಪ, ಅಮ್ಮನ ಮುದ್ದಿನ ಮಗಳು. ಅಂದದಲ್ಲಿಯೂ ಅಪ್ಸರೆ!, ಮಾತಿನ ಮಲ್ಲಿ ನಮ್ಮ ಅರಗಿಣಿ ಭೂಮಿ. ಸಂಸ್ಕಾರವಂತ ಮನೆತನದಲ್ಲಿ ಹುಟ್ಟಿ ಬೆಳೆದಿದ್ದಳು ಭೂಮಿ. ತುಂಟು ತುಂಟು ಮಾತಿನಲ್ಲಿ ತಂಟೆ ಮಾಡುತ್ತಾ, ತನ್ನ ತಮ್ಮಾ ಹಾಗೂ ತಂಗಿಗೆ ಕೀಟಲೆ ಮಾಡುತ್ತಾ, ಇದೇ ಕಾರಣಕ್ಕಾಗಿ ಅಪ್ಪ, ಅಮ್ಮನಿಂದ ಏಟು ತಿನ್ನುತ್ತಾ, ಒಂದಲ್ಲಾ ಒಂದು ರಗಳೆ ಮಾಡುತ್ತಲೇ ಬೆಳೆದಿದ್ದಳು ಭೂಮಿ.
ಈಗ ಭೂಮಿ ಕಾಲೇಜ್ ನಲ್ಲಿ ಪದವಿ ಶಿಕ್ಷಣವನ್ನು ಪಡೆಯುತ್ತಿದ್ದಳು. ಬಾಯಿ ತೆಗೆದರೆ ವಟ ವಟ ಎಂದು ಮಾತನಾಡುವ ಭೂಮಿಗೆ ಕಾಲೇಜಿನಲ್ಲಿ ಸ್ನೇಹಿತರಿಗೇನೂ ಕೊರತೆಯಿರಲಿಲ್ಲ. ಸ್ನೇಹಿತರೊಡನೆ ತಂಟೆ ಮಾಡುತ್ತಾ, ಹರಟೆ ಹೊಡೆಯುತ್ತಾ ಕೂರುವುದೆಂದರೆ ಭೂಮಿಗೆ ಎಲ್ಲಿಲ್ಲದ ಪ್ರೀತಿ!!, ಸಣ್ಣ ವಯಸ್ಸಿನಿಂದಲೇ ಭೂಮಿಗೆ ಓದುವುದೆಂದರೆ ಅಷ್ಟಕ್ಕಷ್ಟೆ. ಎಲ್ಲೋ ಪರೀಕ್ಷೆಯ ಹಿಂದಿನ ದಿನ ಅಲ್ಪ ಸ್ವಲ್ಪ ಓದಿಕೊಂಡು ಹೋಗುತ್ತಿದ್ದಳಷ್ಟೇ ಭೂಮಿ ನಂತರ ಪರೀಕ್ಷೆ ಬರೆದು ಹೇಗೋ ಪಾಸ್ ಆಗುತ್ತಿದ್ದಳು ಭೂಮಿ!!
ಭೂಮಿಗೆ ಹಿಮ ಎಂದರೆ ಬಹಳ ಅಚ್ಚುಮೆಚ್ಚು, ಭೂಮಿಯ ಬಾಲ್ಯ ಸ್ನೇಹಿತೆ ಹಿಮ. ಪ್ರಾಥಮಿಕ ಶಾಲೆಯಿಂದ ಹಿಡಿದು ಕಾಲೇಜ್ ದಿನಗಳವರೆಗಿನ ಬಾಂಧವ್ಯ ಭೂಮಿ ಹಾಗೂ ಹಿಮಾರದ್ದು ಹಾಗಾಗಿ ಭೂಮಿ ಎಲ್ಲೇ ಹೋದರೂ ಕೂಡ ಆಕೆಯ ಆಪ್ತ ಗೆಳತಿ ಹಿಮಾಳನ್ನು ತನ್ನೊಂದಿಗೆ ಕರೆದೊಯ್ಯತ್ತಿದ್ದಳು.
ಒಂದು ದಿನ ಕಾಲೇಜ್ ಮುಗಿದ ನಂತರ ಭೂಮಿ ಹಾಗೂ ಹಿಮ ಅಲ್ಲಿಯೇ ಪಕ್ಕದಲ್ಲಿದ್ದ ಮಾಲ್ ಗೆ ಹೋಗೋಣ ಎಂದು ನಿರ್ಧರಿಸಿದರು. ಸಂಜೆಯಾಗುತ್ತಿದ್ದಂತೆ ಭೂಮಿ ಹಾಗೂ ಹಿಮ ಮಾಲ್ ನತ್ತ ಧಾವಿಸಿದರು ಹಾಗೂ ಯಪ್ಪಾ, ತಡೆಯಲಾರದ ಶೆಕೆಯೆಂದು ಮಾಲ್ ನಿಂದ ಐಸ್ ಕ್ರೀಮ್ ನ್ನು ಖರೀದಿಸಿದರು.
ಮಾಲ್ ನಲ್ಲಿ ತನ್ನ ಗೆಳತಿ ಹಿಮ ಳ ಜೊತೆಗೆ ಐಸ್ ಕ್ರೀಮ್ ತಿನ್ನುತ್ತಾ, ಹರಟೆ ಹೊಡೆಯುತ್ತಾ ಕುಳಿತಿದ್ದ ಭೂಮಿಗೆ ಅವಳ ಕಣ್ಣೆದುರಿನಲ್ಲಿ ಒಬ್ಬ ಸುಂದರ ತರುಣನ ಆಗಮನವಾಯಿತು!!
6 ಫೀಟ್ ಉದ್ದದ ತರುಣ ಮುದ್ದಾದ ಬಿಳಿಯ ಮುಖಕ್ಕೆ ಕಪ್ಪು ಕೂಲಿಂಗ್ ಗ್ಲಾಸ್ ನ್ನು ಹಾಕಿದ್ದ, ಕಪ್ಪಾದ ನೈಸ್ ಕೂದಲು, ಹೈಟ್ ಗೆ ತಕ್ಕ ವೈಟ್ ನ್ನು ಹೊಂದಿ ಲಕ್ಷಣವಾಗಿದ್ದ ತರುಣ!!, ಭೂಮಿ ಅಂತಹ ಹಾಂಡ್ಸಮ್ ಹುಡುಗನನ್ನು ಎಲ್ಲಿಯೂ ಕಂಡಿರಲಿಲ್ಲ!!, ಭೂಮಿಯೂ ಸುಂದರಿಯೇ, ಅವಳೂ ಕೂಡ ಎತ್ತರವಿದ್ದ ಕಾರಣ ಈ ಹುಡುಗ ನನಗೆ ಸರಿಯಾದ ಜೋಡಿ ಆಗಬಹುದೇನೋ ಅಂದುಕೊಂಡಿದ್ದಳು.
ಅವನನ್ನು ನೋಡುತ್ತಾ ನೋಡುತ್ತಾ ಅವಳ ಕೈಯಲ್ಲಿದ್ದ ಐಸ್ ಕ್ರೀಮ್ ಜಾರಿ ನೀರಾಗಿ ಕೆಳಗೆ ಬಿದ್ದ ಅರಿವೂ ಇಲ್ಲದಷ್ಟು, ಇತ್ತ ತನ್ನ ಗೆಳತಿ ಅವಳೊಡನೆ ಏನು ಮಾತನಾಡುತ್ತಾ ಇದ್ದಾಳೆ ಎಂದು ಅರಿವಿಲ್ಲದಷ್ಟು ತನ್ನದೇ ಕಲ್ಪನೆಯ ಕನಸಿನ ಲೋಕದಲ್ಲಿದ್ದಳು ಭೂಮಿ!!
ಅವಳು ನೋಡ ನೋಡುತ್ತಿದ್ದಂತೆಯೇ ಸೂಪರ್ ಮಾರ್ಕೆಟ್ ನಲ್ಲಿ ಅದೆತ್ತಲೋ ಮರೆಯಾದ ಹುಡುಗ!!, ಭೂಮಿ ಅಲ್ಲಿ ಅದೆಷ್ಟೇ ಹುಡುಕಿದರೂ ಅವನು ಮಾತ್ರ ಇವಳಿಗೆ ಸಿಗಲೇ ಇಲ್ಲ!!, ಈ ವಿಷಯವನ್ನು ಹಿಮಾ ಗೆ ತಿಳಿಸಿದ ಭೂಮಿ, ದಾರಿಯುದ್ದಕ್ಕೂ ಅವನ ಗುಣಗಾನ ಮಾಡುತ್ತಾ ಹೋದಳು!!, ಛೇ ಹಿಮಾ ಕೊನೆಗೆ ಅವನು ಎಲ್ಲಿ ಹೊದನೋ ತಿಳಿಯದಾದೆ ಎಂದು ಹಿಮ ಳಲ್ಲಿ ಹೇಳಿ ಚಡಪಡಿಸಿದಳು ಭೂಮಿ!!
ಆಗ ಹಿಮಾ ಭೂಮಿಯಲ್ಲಿ, "ಸುಮ್ನಿರು ಭೂಮಿ ನೀನು, ಅದ್ಯಾರೋ ಒಮ್ಮೆ ಮಾಲ್ ನಲ್ಲಿ ಕಂಡ ಕೂಡಲೇ ಅವ್ನ ಯೋಚ್ನೆಯಲ್ಲೆ ಮುಳುಗಿ ಹೋಗಿದ್ಯಲ್ಲಾ?, ನಿಂಗೇನು ತಲೆ ಗಿಲೆ ಕೆಟ್ಟಿದ್ಯಾ ಭೂಮಿ?, ಅದೂ ಅಲ್ದೆ ನೀನು ಸಂಪ್ರದಾಯಸ್ಥ ಮನೆತನದಿಂದ ಬಂದವಳು, ನೀನು ಪ್ರೀತಿ, ಪ್ರೇಮ ಅಂತೆಲ್ಲಾ ಮಾಡಿದ್ರೆ ನಿನ್ ತಂದೆ, ತಾಯಿ ಒಪ್ಕೋತ್ತಾರೆ ಅಂತ ತಿಳ್ಕೊಂಡಿದ್ಯಾ ಭೂಮಿ ನೀನು?, ಇಲ್ಲ ಕಣೇ ಇವೆಲ್ಲಾ ಸಾಧ್ಯವಿಲ್ಲದ ಮಾತು, ಸ್ವಲ್ಪ ಪ್ರಾಕ್ಟಿಕಲ್ ಆಗಿ ಥಿಂಕ್ ಮಾಡೇ ಭೂಮಿ, ಆಗ ನಿಂಗೆ ಎಲ್ಲಾನೂ ಅರ್ಥ ಆಗುತ್ತೆ, ಈ ರೀತಿ ಅಲ್ಲಿ ಇಲ್ಲಿ ಕಂಡ ಕೂಡಲೇ ಅದೇನೋ ಕಲ್ಪನಾ ಲೋಕದಲ್ಲಿ ಮುಳುಗಿ ಹೋಗಿದ್ಯಾ ಅಲ್ವಾ?!, ಇದನ್ನೇನು ಫಿಲ್ಮ್ ಅಂತ ತಿಳ್ಕಂಡಿದ್ಯಾ ಭೂಮಿ?, ಇದು ಸಿನಿಮಾ ಅಲ್ಲ ಕಣೇ, ಇದು ಜೀವನ. ಇಲ್ಲಿ ಯಾವುದೂ ನಮ್ಮಿಚ್ಚೆಯಂತೆ ಇಲ್ಲ ಕಣೇ, ಆ ದೇವ್ರು ಮೊದ್ಲೇ ಸ್ವರ್ಗದಲ್ಲಿಯೇ ನಿರ್ಣಯಿಸಿ ಇಟ್ಟಿರ್ತಾನೆ ಅಂತೆ, ಈ ಹುಡುಗಿಗೆ ಇದೇ ಹುಡುಗ ಎಂದು, ಅದರಂತೆ ಮದುವೆ
ಎಂಬ ನಂಟು ಬರುತ್ತೆ ಹೊರತು ಮತ್ತೇನಿಲ್ಲ, ನೀನ್ ಸುಮ್ನೆ ಯಾವುದೋ ಇಲ್ಲಿ ಕಂಡ ಹುಡುಗನ ಬಗ್ಗೆ ಕನಸು ಕಾಣುವುದರಲ್ಲಿ ಅರ್ಥವೇ ಇಲ್ಲ ಭೂಮಿ, ಸ್ವಲ್ಪ ಯೋಚ್ನೆ ಮಾಡು" ಎಂದು ಹಿಮಾ ಹೇಳಿದಾಗ ಹಿಮಾಳ ಮಾತು ಕೂಡ ಸರಿಯೇ, ಹೌದು ನಾನು ಅಲ್ಲೆಲ್ಲೋ ಕಂಡ ಹುಡುಗನ ಬಗ್ಗೆ ಯೋಚನೆಯಲ್ಲಿ ತೊಡಗುವುದು ಸರಿಯಲ್ಲ ಎಂದನಿಸಿತು ಭೂಮಿಗೆ.
ಇತ್ತ ಪದವಿ ಮುಗಿಸಿದ ಭೂಮಿಯ ತಂದೆ ತಾಯಿ ಅವಳಿಗೆ ವರನ ಅನ್ವೇಷಣೆಯಲ್ಲಿ ತೊಡಗಿದ್ದರು ಆದರೆ ಅದೆಷ್ಟು ಭೂಮಿ ಅವನ ಬಗೆಗಿನ ಯೋಚನೆಗಳಿಗೆ ಕಡಿವಾಣ ಹಾಕಿದರು ಕೂಡ ಅವನದೇ ಬಣ್ಣ ಬಣ್ಣದ ಕನಸುಗಳು ಮೂಡುತ್ತಿದ್ದವು ಭೂಮಿಗೆ!!, "ಲವ್ ಅಟ್ ಫಸ್ಟ್ ಸೈಟ್" ಅಂದ್ರೆ ಇದೇ ಇರ್ಬೇಕು ಅಲ್ವಾ?! ತನಗೆ ಇಷ್ಟು ಬೇಗ ಮದುವೆ ಬೇಡ, ನಾನೀಗ ಮದುವೆ ಆಗಲಾರೆ, ನಾನು ಉದ್ಯೋಗಕ್ಕೆ ಪ್ರಯತ್ನಿಸುವೆ ಎಂದು ಮದುವೆಯಾಗಲು ನಿರಾಕರಿಸುತ್ತಿದ್ದಳು ಭೂಮಿ.
ಪದವಿ ಶಿಕ್ಷಣ ಮುಗಿದ ನಂತರ ಭೂಮಿ ಅವನದೇ ಕನಸುಗಳನ್ನು ಕಾಣುತ್ತಾ, ಉದ್ಯೋಗಕ್ಕೆಂದು ಅರ್ಜಿ ಹಾಕುತ್ತಿದ್ದಳು. ಇತ್ತ ಭೂಮಿಯ ಅಪ್ಪ, ಅಮ್ಮನಿಗೂ ಮಗಳು ಈಗ ಮದುವೆ ಬೇಡ ಎಂದು ನಿರಾಕರಿಸಿದರೆ ಹೇಗೆ?!, ಈ ವಯಸ್ಸಿನಲ್ಲಿ ಮದುವೆಯಾಗದೆ ಇದ್ದರೆ ನಂತರ ವಯಸ್ಸಾದ ಮೇಲೆ ಯಾರು ಒಪ್ಪಿಕೊಳ್ಳುವರು ಮಗಳನ್ನು ಎಂದು ಚಿಂತೆಯಾಗತೊಡಗಿತು.
ಹೀಗೆ ದಿನಗಳು ಉರುಳುತ್ತಿರಲು ಒಂದು ದಿನ ಭೂಮಿಯ ಅಮ್ಮಾ ಬಂದು ಭೂಮಿಯಲ್ಲಿ," ನೀನು ಈ ರೀತಿ ಮದುವೆಯನ್ನು ನಿರಾಕರಿಸಬಾರದು ಮಗಳೇ, ಇನ್ನೂ ವಯಸ್ಸಾಗುತ್ತಾ ಹೋಗುತ್ತದೆ, ನಾವೊಂದು ಹುಡುಗನನ್ನು ಹುಡುಕಿದ್ದೇವೆ, ನಿಮ್ಮಿಬ್ಬರ ಜಾತಕವೂ ಚೆನ್ನಾಗಿ ಹೊಂದಾಣಿಕೆ ಆಗುತ್ತದೆ ಹಾಗಾಗಿ ನೀನು ಈ ಮದುವೆಗೆ ಒಪ್ಪಲೇ ಬೇಕು" ಎಂದಾಗ ಮನಸಿಲ್ಲದ ಮನಸಿನಲ್ಲಿಯೇ ಒಪ್ಪಿಗೆ ಸೂಚಿಸಿದಳು ಭೂಮಿ.
ನಿಶ್ಚಿತಾರ್ಥದ ದಿನ ಸಮೀಪಿಸುತ್ತಾ ಬಂತು ಆದರೆ ಭೂಮಿಗೆ ಅನಿರೀಕ್ಷಿತವಾಗಿ ನಿಶ್ಚಿತಾರ್ಥದ ದಿನದಂದೇ ಒಂದು ಸಂದರ್ಶನಕ್ಕೆ ಹೋಗಲೆಂದು ಕರೆ ಬಂತು ಹಾಗಾಗಿ ಭೂಮಿಯಿಲ್ಲದೇ ತಾಂಬೂಲವನ್ನು ಬದಲಿಸಿದ್ದರು ಭೂಮಿಯ ತಂದೆ ತಾಯಿ ಹಾಗೂ ವರನ ತಂದೆ ತಾಯಿ!!
ಭೂಮಿಗೆ ನಿಶ್ಚಿತಾರ್ಥ ಮುಗಿದ ನಂತರ ಅದೇನೋ ಬೇಜಾರು, ಯಾರ ಜೊತೆಯೂ ಮಾತಮಾಡುತ್ತಿರಲಿಲ್ಲ, ಮೌನಕ್ಕೆ ಜಾರಿ ಬಿಟ್ಟಿದ್ದಳು ಭೂಮಿ!! ದಿನ ಕಳೆಯುತ್ತಿದಂತೆ ಭೂಮಿಯ ಮದುವೆಯ ದಿನವೂ ಬಂತು!!, ಮಾಲ್ ನಲ್ಲಿ ಕಂಡ ಹುಡುಗನ ಕನಸುಗಳನ್ನು ಕಾಣುತ್ತಾ, ತಾನು ಮದುವೆಯಾಗುತ್ತಿರುವ ಹುಡುಗನ ಫೋಟೋ ವನ್ನು ಕೂಡ ನೋಡದೇ, ಅಪ್ಪ, ಅಮ್ಮನ ಅಣತಿಯಂತೆ, ಮನಸಿಲ್ಲದ ಮನಸ್ಸಿನಲ್ಲಿ ಮದುವೆಗೆ ಒಪ್ಪಿದ ಹುಡುಗಿ ಎಂದರೆ ಭೂಮಿಯೇ ಇರಬೇಕೆಂದು ಅನಿಸುತ್ತದೆ!!
ಬಹಳ ಸುಂದರವಾಗಿ ಸಿದ್ಧವಾಗಿತ್ತು ಮದುವೆ ಹಾಲ್, ಮದುವೆ ಮಂಟಪದ ಡೆಕೋರೇಷನ್ ಎಲ್ಲವೂ ಫಳ ಫಳ ಎಂದು ಹೊಳೆಯುತ್ತಿತ್ತು!!, ಈ ಸಂದರ್ಭದಲ್ಲಿಯೂ ಭೂಮಿಯು ಹುಡುಗನನ್ನು ನೋಡಿಯೇ ಇಲ್ಲ!! ಧಾರೆ ಮಂಟಪದಲ್ಲಿ ಹುಡುಗ ಹಾಗೂ ಹುಡುಗಿಯ ನಡುವೆ ಅಡ್ಡ ಪರದೆ ಹಾಕಿದ್ದರು, ವಧು ವರರಿಬ್ಬರೂ ಕೂಡ ಹೂವಿನ ಮಾಲೆಯನ್ನು ಹಿಡಿದು ನಿಂತಿದ್ದರು. ಭೂಮಿಯು ಅದೇನೋ ಬೇಜಾರಿನಲ್ಲಿ ಮುಖವನ್ನು ತಗ್ಗಿಸಿ ನಿಂತಿದ್ದಳು. ಇತ್ತ ಪರದೆ ಸರಿಯಿತು, ಭೂಮಿಯು ನಿಧಾನವಾಗಿ ಕತ್ತನ್ನು ಮೇಲೆತ್ತಿ ನೋಡುತ್ತಾಳೆ ತಾನು ಅಂದು ಮಾಲ್ ನಲ್ಲಿ ಕಂಡ ತರುಣನೇ ಆಕೆಯನ್ನು ವರಿಸಲು ಬಂದಿದ್ದ!!
ಭೂಮಿಗೆ ಭೂಮಿ, ಆಕಾಶವೇ ಒಂದಾದಂತೆ ಭಾಸವಾಯಿತು!!, ವರನ ಹೆಸರು ಕೂಡ ಆಕಾಶ್!!, ಭೂಮಿಗಾದ ಬಹಳ ಸಂತೋಷದಿಂದ ಬಲು ಅಪರೂಪದಲ್ಲಿ ಅವಳ ಮುಖದಲ್ಲಿ ಮಂದಹಾಸವೊಂದು ಮೂಡಿತು!!, ಖುಷಿಯ ಜೊತೆಗೆ ನಾಚಿಕೆಯಿಂದ ಬಲು ಬೆರಗಿನಲ್ಲಿ ತನ್ನ ನಲ್ಲನ ಮುಖ ನೋಡುತ್ತಾ ಭೂಮಿಯು, ಈ ಬೆಡಗಿನ ಮದುವೆಯ ಮಂಟಪದಲ್ಲಿ "ಬೆರಗು, ಬೆಡಗು ಬೆಸೆದು ಸ್ವರ್ಗವೇ ಧರೆಗೆ ಇಳಿದು ಬಂದಾಯ್ತಲ್ಲೋ" ಎಂದು ತನ್ನ ಮನಸ್ಸಿನಲ್ಲಿಯೇ ಆಕೆಯ ಹೃದಯ ಕದ್ದ ಚೋರನಿಗೆ ತಿಳಿಸಿದಳು. "ಋಣಾನುಬಂಧ" ಎಂದರೆ ಇದುವೇ ಇರಬೇಕು ಅಲ್ವಾ?!. ಅವರಿಬ್ಬರನ್ನು ನೋಡಿದ ಹಿಮಾ, ವಾವ್ ಭೂಮಿ ಅದೆಷ್ಟು ಅದೃಷ್ಟವಂತೆ, ಅವಳು ಮನಸಾರೆ ಮೆಚ್ಚಿದ ಹುಡುಗನೇ ಅವಳ ವರನಾಗಿ ಬಂದದ್ದು!!, ಇದು ಜೀವನ ಎಂದಾದರೂ ಯಾವ ಸಿನೆಮಾಗಿಂತಲೂ ಕಡಿಮೆಯಿಲ್ಲ ಎಂದುಕೊಂಡು ನವ ಜೋಡಿಗಳನ್ನು ಬಲು ಸಂತೋಷದಿಂದ ಹಾರೈಸಿದಳು ಹಿಮಾ.