ಬಯಸಿದ್ದು ಸಿಕ್ಕಿತೇ ಆಕೆಗೆ?!
ಬಯಸಿದ್ದು ಸಿಕ್ಕಿತೇ ಆಕೆಗೆ?!
ನನಗೆ ನೀನು, ನಿನಗೆ ನಾನು ಎನ್ನುತ್ತಾ ಕೈ ಕೈ ಹಿಡಿದು ನಡೆಯುವ ಆಸೆಯಿತ್ತು, ಆದರೆ ವಿಧಿ ಲಿಖಿತವೇ ಬೇರೆಯಾಗಿತ್ತು!!, ಸನ್ನಿಧಿ ಚಿಕ್ಕಂದಿನಿಂದಲೇ ತುಂಬಾ ತುಂಟು ಸ್ವಭಾವದ ಹುಡುಗಿ, ಆಟವಾಡುತ್ತಾ, ನಗು ನಗುತಾ ಎಲ್ಲರೊಂದಿಗೂ ಬೆರೆಯುವ ಹುಡುಗಿ, ಆಕೆಯ ಅಪ್ಪ ಪ್ರತಿಷ್ಠಿತ ಹಾಸ್ಪಿಟಲ್ ಒಂದರಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು, ಅವರಿಗೆ ಒಬ್ಬಳೇ ಪ್ರೀತಿಯ ಮಗಳು ಸನ್ನಿಧಿ. ಅಪ್ಪ ಅಮ್ಮ ಬಲು ಪ್ರೀತಿಯಿಂದ, ಮುದ್ದಿನಿಂದ ಸಾಕಿದ್ದರು ಸನ್ನಿಧಿಯನ್ನು, ಅವಳು ಬೇಕೆಂದ ಎಲ್ಲವನ್ನೂ ಕೂಡ ಆಕೆಗೆ ತೆಗೆದು ಕೊಡುತ್ತಿದ್ದರು. ಆಕೆಯನ್ನು ಉನ್ನತ ವ್ಯಾಸಾಂಗ ಮಾಡಲೆಂದು ಆಕೆಯನ್ನು ಬೆಂಗಳೂರಿನ ಪ್ರತಿಷ್ಠಿತ ಕಾಲೇಜ್ ಒಂದರಲ್ಲಿ ಹಾಕಿದ್ದರು ಆಕೆಯನ್ನು.
ಹಾಗಾಗಿ ಅವಳ ಕಾಲೇಜ್ ಮನೆಯಿಂದ ದೂರವಿದ್ದ ಕಾರಣ ಆಕೆಗೆ ಹಾಸ್ಟೆಲ್ ನಲ್ಲಿ ಉಳಿಯಬೇಕಾಗಿ ಬಂತು, ಅಪ್ಪ ಅಮ್ಮನನ್ನು ನೆನೆದು ದುಃಖವಾಗುತ್ತಿತ್ತು ಆಕೆಗೆ ಹಾಸ್ಟೆಲ್ ನಲ್ಲಿ, ದಿನಾಲೂ ಅಪ್ಪ ಅಮ್ಮನಿಗೆ ಫೋನ್ ಮಾಡಿ ಮಾತನಾಡುತ್ತಿದ್ದಳು, ಹಾಸ್ಟೆಲ್ ನಲ್ಲಿ, ಕಾಲೇಜ್ ನಲ್ಲಿ ತುಂಬಾ ಗೆಳೆಯ ಗೆಳತಿಯರ ಪರಿಚಯವೂ ಆಯಿತು ಆಕೆಗೆ. ಹಾಸ್ಟೆಲ್ ನಲ್ಲಿ, ಕಾಲೇಜ್ ನಲ್ಲಿ ತನ್ನ ಗೆಳೆಯ, ಗೆಳತಿಯರ ಜೊತೆಗೆ ತುಂಬಾ ಲವ ಲವಿಕೆಯಿಂದ, ಖುಷಿಯಲ್ಲಿದ್ದಳು ಸನ್ನಿಧಿ, ಓದಿನಲ್ಲಿಯೂ ಮುಂದಿದ್ದ ಸನ್ನಿಧಿ ಕ್ಲಾಸ್ ಗೆ ಮೊದಲ ಅಥವಾ ಎರಡನೆಯ ಶ್ರೇಣಿಯಲ್ಲಿ ಬರುತ್ತಿದ್ದಳು, ಕಾಲೇಜ್ ನ ಚುನಾವಣೆಯಲ್ಲಿ ಕೂಡ ಅಭ್ಯರ್ಥಿಯಾಗಿ ಸ್ಪರ್ಧಿಸಿ, ವಿಧ್ಯಾರ್ಥಿಗಳ ಪ್ರತಿನಿಧಿಯಾಗಿಯೂ ಆಯ್ಕೆಯಾಗಿದ್ದಳು ಸನ್ನಿಧಿ, ಸನ್ನಿಧಿಯ ಖುಷಿಯನ್ನು ಅರಿತ ಆಕೆಯ ಅಪ್ಪ ಅಮ್ಮನಿಗೆ ಕೂಡ ಖುಷಿಯಾಯಿತು.
ಸನ್ನಿಧಿ ಆಟ ಪಾಠದಲ್ಲಿ ಮುಂದಿದ್ದಂತೆ ಸೌಂದರ್ಯದಲ್ಲಿ ಕೂಡ ಮುಂದಿದ್ದಳು, ತನ್ನ ಸೌಂದರ್ಯದಿಂದ ಯಾರನ್ನೂ ಕೂಡ ಆಕರ್ಷಿಸುವಂತಿದ್ದಳು, ಸುಂದರಿಯಾದ ಸನ್ನಿಧಿಗೆ ಕಾಲೇಜ್ ನ ಹುಡುಗರೆಲ್ಲರೂ ಕಣ್ಣು ಕಾಣುತ್ತಿದ್ದರು, ಇದರಿಂದ ಅವಳಿಗೆ ಖುಷಿಯೂ ಆಗುತ್ತಿತ್ತು, ಅವಳಷ್ಟು ಸುಂದರಿಯಾಗಿದ್ದರೂ ಕೂಡ ತನ್ನ ಕಡೆಗೆ ತಿರುಗಿ ನೋಡದ ರಾಹುಲ್ ಮೇಲೆ ಮನಸ್ಸಾಯಿತು ಆಕೆಗೆ, ರಾಹುಲ್ ಕೂಡ ನೋಡಲು ಬಲು ಸುಂದರವಾಗಿದ್ದನು. ಒಂದು ದಿನ ಸನ್ನಿಧಿ ರಸ್ತೆಯಲ್ಲಿ ಹೋಗುತ್ತಿದ್ದಾಗ, ಯಾವುದೋ ಅಪಘಾತದಲ್ಲಿ ಜೀವನ್ಮರಣದಲ್ಲಿ ಹೋರಾಡುತ್ತಿದ್ದ ಅಜ್ಜ, ಅಜ್ಜಿಯನ್ನು ಯಾರೂ ಅವರಿಗೆ ನೆರವಾಗದೇ ಇದ್ದ ಸಂದರ್ಭದಲ್ಲಿ, ರಾಹುಲ್ ಹೋಗಿ ಸಹಾಯ ಮಾಡಿದಾಗ ಸನ್ನಿಧಿಗೆ ರಾಹುಲ್ ಮೇಲೆ ಇನ್ನೂ ಹೆಚ್ಚು ಮನಸ್ಸಾಯಿತು, ಯಾರೋ ಅಪರಿಚಿತ ಅಜ್ಜ ಅಜ್ಜಿಯನ್ನೇ ಕಾಪಾಡಿದ ರಾಹುಲ್ ಸನ್ನಿಧಿಯನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳಬಹುದು ಎಂದು ಅನಿಸಿ, ಅವನೊಡನೆ ತನ್ನ ಮದುವೆಯಾದರೆ ನಾನು ಜೀವನದಲ್ಲಿ ಖುಷಿಯಲ್ಲಿರುವೆನು ಅಂದುಕೊಂಡಳು ಸನ್ನಿಧಿ.
ಆಕೆಯ ತರಗತಿಯ ಕಡೆಗೆ ರಾಹುಲ್ ಬಂದರೆ ಸಾಕು ಅವನನ್ನು ನೋಡಿ ಖುಷಿ ಪಡುತ್ತಿದ್ದಳು ಸನ್ನಿಧಿ,ಓರೆ ನೋಟದಲ್ಲಿ ಅವನನ್ನು ಕಂಡು ನಗೆ ಬೀರಿದಳು ಸನ್ನಿಧಿ, ನೋಟದಲ್ಲಿಯೇ ನಿಧಾನವಾಗಿ ಶುರುವಾದ ಅವರಿಬ್ಬರ ಪ್ರೇಮ ಸಂಭಾಷಣೆ ಕೊನೆಗೆ ಅವರಿಬ್ಬರು ಮಾತನಾಡಲು ಶುರ
ು ಮಾಡಿದರು, ಕಷ್ಟ ಸುಖಗಳನ್ನು ಹಂಚಿಕೊಳ್ಳಲು ಶುರು ಮಾಡಿದರು, ತನ್ನ ಹಿನ್ನಲೆಯನ್ನು ಆಕೆಗೆ ಸರಿಯಾಗಿ ವಿವರಿಸಿದನು, ಆತನ ಮನೆಯವರು ಶ್ರೀಮಂತರಲ್ಲ, ನಮಗೆ ಆಸ್ತಿ, ಅಂತಸ್ತು ಏನೂ ಇಲ್ಲ ಎಂದು ಹೇಳಿದನು, ಸನ್ನಿಧಿ ಆಸ್ತಿ, ಅಂತಸ್ತು ಏನೂ ಬೇಡ, ನಿನ್ನ ಪ್ರೀತಿ ಒಂದಿದ್ದರೆ ಅಷ್ಟೇ ಸಾಕು ಎಂದಿದ್ದಳು.
ಸನ್ನಿಧಿ ಆಕೆಯ ಪ್ರೇಮದ ವಿಚಾರವನ್ನು ಅಪ್ಪ, ಅಮ್ಮನ ಬಳಿ ಹೇಳಿದಾಗ, ಆತನ ಹಿನ್ನಲೆಯನ್ನು ತಿಳಿದ ನಂತರ ಆತನಿಗೆ ನಿನ್ನನ್ನು ಕೊಟ್ಟು ವಿವಾಹ ಮಾಡಿಸಲಾರೆ, ನಾವು ಶ್ರೀಮಂತರು, ಅವರು ಬಡವರು, ಅದು ಹೇಗೆ ಸಾಧ್ಯ ಈ ಸಂಬಂಧ ಮುಂದುವರಿಸಲು ಎಂದಿದ್ದರು ಸನ್ನಿಧಿಯ ಅಪ್ಪ. ಸಣ್ಣ ವಯಸ್ಸಿನಲ್ಲಿಯೇ ಸನ್ನಿಧಿಗೆ ಬೇಕಾದುದನ್ನು ಎಲ್ಲವನ್ನೂ ಕೂಡ ತೆಗೆಸಿ ಕೊಡುತ್ತಿದ್ದ ಅಪ್ಪ, ತನ್ನ ಪ್ರೀತಿಯ ವಿಚಾರದಲ್ಲಿ ಹೀಗೆ ಮಾಡಬಹುದು ಎಂದು ಯೋಚನೆ ಕೂಡ ಮಾಡಿರಲಿಲ್ಲ ಸನ್ನಿಧಿ, ಇದರಿಂದ ಸನ್ನಿಧಿ ತುಂಬಾ ನೊಂದು, ಮಂಕಾದಳು, ಸರಿಯಾಗಿ ಊಟ, ನಿದ್ದೆಯೂ ಮಾಡಲಿಲ್ಲ, ತುಂಬಾ ತುಂಟಿಯಾಗಿದ್ದ ಸನ್ನಿಧಿ ನಿಧಾನವಾಗಿ ಮೌನಿಯಾದಳು.
ನಾವು ನಿನಗೆ ಬೇರೆ ಶ್ರೀಮಂತ ಮನೆತನದ ಹುಡುಗನನ್ನು ಹುಡುಕಿ ಮದುವೆ ಮಾಡಿ ಕೊಡುತ್ತೇವೆ, ಅವನನ್ನು ನೀನು ಮರೆಯದೇ, ಅವನನ್ನೇ ಮದುವೆಯಾಗುವೆ ಎಂದು ಹಠ ಹಿಡಿದರೆ ನಾವಿಬ್ಬರೂ ಕೂಡ ವಿಷ ತೆಗೆದುಕೊಂಡು ಸಾಯುತ್ತೇವೆ ಎಂದು ಹೇಳಿದ ಅಪ್ಪ, ಅಮ್ಮನ ಮಾತಿಗೆ ಅಂಜಿ ಸನ್ನಿಧಿ ಅಪ್ಪ, ಅಮ್ಮನ ಮಾತಿಗೆ ಒಪ್ಪಿಗೆ ಸೂಚಿಸಿದಳು. ರಾಹುಲ್ ನನ್ನು ಮದುವೆಯಾದರೆ ಸುಖವಾಗಿರುತ್ತೇನೆ ಎಂದು ಬಯಸಿದ ಸನ್ನಿಧಿಗೆ, ಅವಳನ್ನು ಅವಳು ಪ್ರೀತಿಸಿದ ಹುಡುಗನಿಗೆ ಕೊಟ್ಟು ಮದುವೆ ಮಾಡದೇ ಬೇರೊಬ್ಬನಿಗೆ ಕೊಟ್ಟು ಮದುವೆ ಮಾಡಿದರೆ, ಅವಳು ಸುಖವಾಗಿ, ಸಂತೋಷದಲ್ಲಿ ಇರುವಳೇ ಎಂದು ಯೋಚನೆ ಕೂಡ ಮಾಡದೇ ಹೋದರೆ ಆಕೆಯನ್ನು ಅಷ್ಟೊಂದು ಪ್ರೀತಿಸುವ ಆಕೆಯ ಅಪ್ಪ, ಅಮ್ಮಾ??, ಈ ರೀತಿಯಲ್ಲಿ ಆಕೆಯ ಅಪ್ಪ, ಅಮ್ಮ ನಡೆದುಕೊಳ್ಳುವುದು ಸರಿಯೇ??, ಆಕೆಯನ್ನು ತುಂಬಾ ಶ್ರೀಮಂತರಿಗೆ ಮದುವೆ ಮಾಡಿ ಕೊಟ್ಟರೆ ಆ ಶ್ರೀಮಂತ ವ್ಯಕ್ತಿ ಒಳ್ಳೆಯವನಾಗಿರದೇ ಇದ್ದರೆ??, ಶ್ರೀಮಂತಿಕೆಗಿಂತ ಹೃದಯವಂತಿಕೆಯೇ ಶ್ರೇಷ್ಠ ಎಂದು ಗೊತ್ತಿಲ್ಲವೇ ಆಕೆಯ ಅಪ್ಪ, ಅಮ್ಮನಿಗೆ?? ಈ ರೀತಿ ಮಾಡಿದರೆ ತಮ್ಮ ಪ್ರೀತಿಯ ಮಗಳು ನೊಂದು ಆತ್ಮಹತ್ಯೆ ಮಾಡಿದರೆ ಮುಂದೇನು ಗತಿ??
ಆದರೂ ತನ್ನ ಅಪ್ಪ, ಅಮ್ಮನಿಗೆ ಬೇಸರವಾಗಬಾರದು ಎಂಬ ಒಂದೇ ಒಂದು ಕಾರಣಕ್ಕೆ ರಾಹುಲ್ ನನ್ನು ಮನಸ್ಸಿಲ್ಲದ ಮನಸ್ಸಿನಲ್ಲಿಯೇ ಬಿಟ್ಟು ಕೊಟ್ಟಳು ಸನ್ನಿಧಿ, ಏನು ಮಾಡುವುದು ಎಲ್ಲಾ ವಿಧಿ ಲಿಖಿತವಲ್ಲವೇ??, ನಾವು ಅಂದುಕೊಂಡಂತೆ ಒಂದೂ ಆಗದು ಅಲ್ಲವೇ ಜೀವನದಲ್ಲಿ??, ಇದೊಂದು ಕಥೆಯಷ್ಟೇ, ಹೀಗೆ ಒಂದಾನೊಂದು ರೀತಿಯಲ್ಲಿ ಅದೆಷ್ಟೋ ಹುಡುಗಿಯರಿಗೆ ಅವರು ಪ್ರೀತಿಸಿದ ಹುಡುಗನಿಗೆ ಅವರ ಅಪ್ಪ ಅಮ್ಮ ಮದುವೆ ಮಾಡಿ ಕೊಡದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಅದೆಷ್ಟೋ ವಿಚಾರಗಳನ್ನು ನೋಡುತ್ತಾ, ಕೇಳುತ್ತಾ ಬಂದಿದ್ದೇವೆಯಲ್ಲವೇ?? ಮನಸ್ಸಿಲ್ಲದ ಮನಸ್ಸಿನಲ್ಲಿ ಯಾರನ್ನೋ ಮದುವೆಯಾಗಿ ಜೀವನ ನಡೆಸುವುದಕ್ಕಿಂತ ಮಕ್ಕಳು ಪ್ರೀತಿಸಿದವರಿಗೆ ಅವರನ್ನು ಮದುವೆ ಮಾಡಿ ಕೊಟ್ಟರೆ, ಅವರ ಜೀವನವೂ ಕೂಡ ಖುಷಿಯಿಂದ ಸಾಗುವುದಲ್ಲವೇ??