STORYMIRROR

Prajna Raveesh

Abstract Inspirational Children

4  

Prajna Raveesh

Abstract Inspirational Children

ಮುಗ್ಧ ಮನದ ಮೌನ ಮಾತಾದಾಗ.....

ಮುಗ್ಧ ಮನದ ಮೌನ ಮಾತಾದಾಗ.....

4 mins
354


ಅಮ್ಮಾ, ಅಮ್ಮಾ ನಂಗೆ ಚೋಕಿ ಬೇಕಮ್ಮಾ, ಬಾ ಅಮ್ಮಾ ಅಂಗಡಿಗೆ ಹೋಗಿ ತಕ್ಕೊಂಡು ಬರೋಣ ಬಾ ಅಮ್ಮಾ ಎಂದು ತನ್ನ 2 ವರ್ಷದ ಮುಗ್ಧ ಹಸುಗೂಸು ತನ್ನ ಮುದ್ದು ಮುದ್ದಾದ ತೊದಲು ಮಾತಿನಲ್ಲಿ ಸುಷ್ಮಾಳ ಜೊತೆ ಹಠ ಹಿಡಿದಾಗ, ಸುಷ್ಮಾಳಿಗೆ ಅದೇಕೋ ಕಿರಿ ಕಿರಿ ಉಂಟಾಗುತ್ತಿತ್ತು!!


ಕಾರಣ ಇಷ್ಟೇ ಸುಷ್ಮಾಳೋ ಮದುವೆಗೆ ಮುಂಚೆ ಪೇಟೆಯಲ್ಲಿದ್ದು ಸಾಫ್ಟ್ವೇರ್ ಕಂಪನಿಯಲ್ಲಿ ದುಡಿಯುತ್ತಿದ್ದಾಕೆ ಹಾಗಾಗಿ ಆಕೆಯ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದ ಸೂರಜ್ ನನ್ನೇ ಪ್ರೀತಿಸಿ ಮದುವೆಯಾಗಿದ್ದಳು ಸುಷ್ಮಾ.


ಮದುವೆ ಆದೊಡನೆ ಮಕ್ಕಳಾದರೆ ತನ್ನ ಉದ್ಯೋಗಕ್ಕೆ ತೊಂದರೆಯಾದೀತು, ನಂತರ ಮಗುವಿನ ಜವಾಬ್ದಾರಿಗಳ ಜೊತೆಗೆ ಉದ್ಯೋಗ ಮುಂದುವರಿಸಿಕೊಂಡು ಹೋಗುವುದು ಕಷ್ಟವಾದೀತು ಎಂದು ಸುಷ್ಮಾಗೆ ಅನಿಸುತ್ತಿತ್ತಾದರೂ ದೇವರು ಮದುವೆಯಾಗಿ ಒಂದು ವರ್ಷ ಪೂರ್ಣಗೊಳ್ಳುತ್ತಿದ್ದಂತೆಯೇ ಅವಳ ಮಡಿಲಿಗೊಂದು ಹಸುಗೂಸನ್ನು ಕರುಣಿಸಿದ್ದ.


ಒಂಬತ್ತು ತಿಂಗಳಿನವರೆಗೆ ತನ್ನ ಕಂದನನ್ನು ಗರ್ಭದಲ್ಲಿರಿಸಿ ಉದ್ಯೋಗ ಮಾಡುತ್ತಿದ್ದಳು ಸುಷ್ಮಾ ನಂತರ ತನ್ನ ಹೆರಿಗೆಯ ನಂತರದ ದಿನಗಳನ್ನು ತನ್ನ ತವರು ಮನೆಯಲ್ಲಿ ಕಳೆದಳು. ಬಾಣಂತನ ಮುಗಿದು 6 ತಿಂಗಳುಗಳು ಆಗುತ್ತಿದ್ದಂತೆಯೇ ತನ್ನ ಉದ್ಯೋಗದತ್ತ ಗಮನ ಹರಿಸಿದಳು ಸುಷ್ಮಾ.


ಇತ್ತ ತನ್ನ ಪುಟ್ಟ ಹಸುಗೂಸನ್ನು ನೋಡಿಕೊಳ್ಳಲೆಂದು ತನ್ನ ತವರಿನಿಂದ ಆಕೆಯ ತಾಯಿ ಬಂದಿದ್ದರಾದರೂ, ಮಗುವಿಗೆ 1 ವರ್ಷ ಪೂರ್ಣಗೊಳ್ಳುತ್ತಿದ್ದಂತೆಯೇ ಸುಷ್ಮಾಳ ಅಮ್ಮಾ ಕಾರಣಾಂತರಗಳಿಂದ ಮರಳಿ ತಮ್ಮ ಮನೆಗೆ ತೆರಳಿದರು.

ಇತ್ತ ಸುಷ್ಮಾಳು ಮಗು ಸಣ್ಣದಾದ ಕಾರಣ ಮನೆಯಿಂದಲೇ ಕೆಲಸ ಮಾಡುವ ಆಯ್ಕೆಯನ್ನು ಆರಿಸಿಕೊಂಡಿದ್ದಳು ಆದರೂ ಕಂಪೆನಿಗೆ ಬೆಳಗ್ಗೆ ಬೇಗ ತೆರಳುವ ತನ್ನ ಪತಿಯನ್ನು ಅಣಿಗೊಳಿಸುವ ಜವಾಬ್ದಾರಿಯೂ ಬಿದ್ದಿತ್ತು.


ಇತ್ತ ತನ್ನ ಹಸುಗೂಸು ದಿನಾ ರಾತ್ರಿಯಿಡೀ ಅಳುತ್ತಿದ್ದ ಕಾರಣ ನಿದ್ದೆಯೂ ಸರಿಯಾಗಿ ಬರುತ್ತಿರಲಿಲ್ಲ ಸುಷ್ಮಾಗೆ. ಅರೆ ನಿದ್ದೆಯಲ್ಲಿ ಮಗುವಿನ ಜವಾಬ್ದಾರಿ, ಮನೆ ಕೆಲಸಗಳ ಜೊತೆಗೆ ಉದ್ಯೋಗದ ಜವಾಬ್ದಾರಿಯೂ ಇದೆ ಎಂದಾಗ ಮನಸ್ಸಿಗೆ ಹಾಗೂ ದೇಹಕ್ಕೆ ವಿಶ್ರಾಂತಿಯಿಲ್ಲದೆ ತುಂಬಾ ಒತ್ತಡವಾಗುತ್ತಿದೆ ಅನಿಸುತ್ತಿತ್ತು.


ಎಲ್ಲಾ ಕೆಲಸಗಳನ್ನು ನಿಭಾಯಿಸಿ ಆಯಾಸಗೊಂಡಾಗ, ಮಗುವಿನ ಅಳುವನ್ನು ಕೇಳಿದೊಡನೆ ಸಿಟ್ಟು ಬರುತ್ತಿತ್ತು ಸುಷ್ಮಾಳಿಗೆ. ಸಿಟ್ಟಿನಲ್ಲಿ ಮಗುವನ್ನು ಬೈದು, ಹೊಡೆದು ಮಾಡುತ್ತಿದ್ದಳು ಸುಷ್ಮಾ!!, ಹಗಲಿಡೀ ಆ ಕೆಲಸ, ಈ ಕೆಲಸ ಎಂಬ ಕೆಲಸಗಳ ಒತ್ತಡದಲ್ಲಿದ್ದು, ಇನ್ನೇನು ಮಲಗುವೆ ಎಂದಾಗ ಮಗು ಬೇಗ ಮಲಗದೆ, ಅತ್ತು ರಂಪ ಮಾಡಿದಾಗ ತುಂಬಾ ಕಿರಿ ಕಿರಿ ಎಂದು ಅನಿಸುತ್ತಿತ್ತು ಸುಷ್ಮಾಳಿಗೆ....


ಹೇಗೋ ಒಂದು ವರ್ಷ ಮಗುವಿನ ಲಾಲನೆ, ಪಾಲನೆ ಮಾಡಿಕೊಂಡು, ಮಗುವಿನ ಕೆಲಸಗಳ ಜೊತೆಗೆ ತನ್ನ ಮನೆ ಕೆಲಸ, ಉದ್ಯೋಗದ ಕೆಲಸಗಳನ್ನೂ ನಿಭಾಯಿಸುತ್ತಿದ್ದ ಸುಷ್ಮಾಗೆ, ಮಗುವಿಗೆ ಎರಡು ವರ್ಷಗಳು ತುಂಬುತ್ತಿದ್ದಂತೆಯೇ ತನ್ನ ಪತಿಯ ಜೊತೆಗೆ ಮಗುವನ್ನು ಬೇಬಿ ಸಿಟ್ಟಿಂಗ್ ಗೆ ಹಾಕೋಣ ಎಂದು ಹೇಳಿ, ಪತಿಯ ಒಪ್ಪಿಗೆಯ ಮೇರೆಗೆ ಮಗುವನ್ನು ಬೇಬಿ ಸಿಟ್ಟಿಂಗ್ ಗೆ ಹಾಕುವ ಮನಸ್ಸು ಮಾಡಿದಳು ಸುಷ್ಮಾ.


ಮಗುವನ್ನು ಬೇಬಿ ಸಿಟ್ಟಿಂಗ್ ಗೆ ಹಾಕಿ, ಪತಿಯ ಜೊತೆಗೆ ತಾನೂ ಕೂಡ ಉದ್ಯೋಗಕ್ಕೆ ತೆರಳಿದಳು ಸುಷ್ಮಾ. ಹೀಗೆ ಮಗು ನಿಧಿ ಸಣ್ಣ ವಯಸ್ಸಿನಿಂದಲೇ ಅಪ್ಪ, ಅಮ್ಮನ ಪ್ರೀತಿಯಿಂದ ವಂಚಿತೆಯಾಗಿದ್ದಳು ಎನ್ನಬಹುದು. ಇತ್ತ ನಿಧಿ ಹುಟ್ಟಿದಾಗಿನಿಂದಲೂ ಅವಳ ಜೊತೆಗೆ ಸ್ವಲ್ಪ ಸಮಯ ಕುಳಿತು ಆಟವಾಡುವುದಕ್ಕಾಗಲಿ, ಅವಳನ್ನು ಅಪ್ಪಿ ಮುದ್ದು ಮಾಡುವುದಕ್ಕಾಗಲಿ ಬಿಡುವಿಲ್ಲದಷ್ಟು ಕೆಲಸದ ಒತ್ತಡ ಅವರಿಬ್ಬರಿಗೂ ಇತ್ತು!!


ದಂಪತಿಗಳಿಬ್ಬರೂ ಉದ್ಯೋಗಕ್ಕೆ ತೆರಳಲೇಬೇಕಾದ ಅನಿವಾರ್ಯತೆ ಇತ್ತು, ಇಲ್ಲದೇ ಹೋದರೆ ದೊಡ್ಡ ಪೇಟೆಯಲ್ಲಿ ಜೀವನ ಸಾಗಿಸುವುದು ಕಷ್ಟ ಎಂಬ ಪರಿಸ್ಥಿತಿ ಅವರನ್ನು ಉದ್ಯೋಗದತ್ತ ಹೆಜ್ಜೆ ಹಾಕುವಂತೆ ಮಾಡಿತ್ತು. ನಿಧಿಗೋ ಅಪ್ಪ, ಅಮ್ಮನೊಂದಿಗೆ ಕಾಲ ಕಳೆಯಬೇಕು ಎಂಬ ಸಣ್ಣ ಬಯಕೆ, ಅತ್ತ ಬೇಬಿ ಸಿಟ್ಟಿಂಗ್ ಗೆ ಹೋಗುವ ಮನಸ್ಸಿರಲಿಲ್ಲ ನಿಧಿಗೆ.


ಬೆಳಗ್ಗೆ ಎದ್ದೊಡನೆ ನರ್ಸರಿ ಗೆ ಹೋಗಲಾರೆ ಎಂದು ಅಳುತ್ತಿದ್ದಳು ನಿಧಿ. ನೀನು ಹೋಗಲೇಬೇಕು ಮಗಳೇ ಎಂದು ಅಪ್ಪ, ಅಮ್ಮನ ನುಡಿಗಳು ನಿಧಿಯ ಮನಸ್ಸನ್ನು ಕುಗ್ಗಿಸತೊಡಗಿತು, ಅವಳಿಗೆ ನನ್ನ ಜೊತೆ ಯಾರೂ ಇಲ್ಲವೆಂಬ ಅನಾಥ ಭಾವ ಮೂಡಿಸಿತು. ಇತ್ತ ಬೆಳಗಾದರೆ ನರ್ಸರಿಗೆ, ಅತ್ತ ರಾತ್ರಿಯಾದರೆ ನಿದ್ದೆ ಎಂದು ಅಪ್ಪ, ಅಮ್ಮನ ಪ್ರೀತಿ ಕಾಣದೇ ಅಕ್ಷರಶಃ ಕಳೆದುಹೋಗಿದ್ದಳು ನಿಧಿ!!


ದಿನ ಕಳೆಯುತ್ತಾ ಇದ್ದಂತೆ ಬೆಳೆದು ದೊಡ್ಡವಳಾಗಿ, ಒಂದನೆಯ ತರಗತಿಗೆ ಸೇರುವ ಹಂತಕ್ಕೆ ಬಂದಳು ನಿಧಿ. ಒಂದು ದಿನ ನಿಧಿ ತನ್ನ ಅಮ್ಮನಲ್ಲಿ ಬಂದವಳೇ, " ಅಮ್ಮಾ

, ಅಮ್ಮಾ ನಾನು ಶಾಲೆಗೆ ಹೋಗಲಾರೆ ಅಮ್ಮಾ" ಎಂದಳು. ಹಾಗೆಲ್ಲಾ ಹೇಳಬಾರದು ಮಗಳೇ ನೀನು ಶಾಲೆಗೆ ಹೋಗಿ ಕಲಿತು ಹುಷಾರಾಗಬೇಕು ಮಗಳೇ ಎಂದು ಸುಷ್ಮಾ ಹೇಳಿದಾಗ, ನಿಧಿಯು ತುಂಬಾ ಅತ್ತಳು.


ಅಳುವಿಗೆ ಕಾರಣ ಕೇಳದೇ ಅಮ್ಮನು ಅವಳಿಗೆ ಒಂದೇಟು ಹೊಡೆದು ನೀನು ಶಾಲೆಗೆ ಹೋಗಲೇಬೇಕು ಎಂದು ಕಳುಹಿಸಿದಳು!!, ಇತ್ತ ಮಾನಸಿಕವಾಗಿ ನೊಂದ ನಿಧಿಗೆ ಶಾಲೆಯಲ್ಲಿಯೂ ನೆಮ್ಮದಿ ಇಲ್ಲ, ಮನೆಯಲ್ಲಿಯೂ ನೆಮ್ಮದಿ ಇಲ್ಲ ಎಂಬಂತಾಯಿತು. ಅಪ್ಪ, ಅಮ್ಮಾ ನನ್ನ ಮಾತುಗಳನ್ನು ಕೇಳಲಾರರು ನಾನೇನು ಮಾಡಲಿ? ಎಂದು ಅನ್ನಿಸಿ ಏನೂ ಹೇಳಲಾಗದೆ ಮೌನಿಯಾದಳು ನಿಧಿ.


ಹೀಗೆ ದಿನಗಳು ಕಳೆಯುತ್ತಿರಲು, ಒಂದು ದಿನ ನಿಧಿಗೆ ಜ್ವರ ಬಂದಿತ್ತು. ಜ್ವರದ ಕಾರಣವನ್ನು ವೈದ್ಯರಲ್ಲಿ ಕೇಳಿದಾಗ ವೈದ್ಯರು, ತಲೆ, ಮೈ ಒದ್ದೆ ಆಗಿ ಜ್ವರ ಬಂದಿದೆ, ಯಾವುದೋ ವಿಷಯ ಅವಳ ಮನಸ್ಸಿಗೆ ಬೇಸರ ತಂದಂತಿದೆ, ಸರಿಯಾಗಿ ಪೌಷ್ಠಿಕ ಆಹಾರವೂ ತೆಗೆದುಕೊಳ್ಳದೇ ಇದ್ದ ಕಾರಣ ದೇಹದಲ್ಲಿ ಪ್ರೊಟೀನ್, ವಿಟಮಿನ್, ಕ್ಯಾಲ್ಸಿಯಂ ಮುಂತಾದವು ಕಡಿಮೆಯಾಗಿ ದೇಹವು ಕೃಶವಾಗಿದೆ, ತೂಕ ಕಡಿಮೆಯಾಗಿದೆ. ಒಮ್ಮೆ ನೀವು ನಿಮ್ಮ ಮಗಳ ಜೊತೆಗೆ ಕುಳಿತು, ಮುಕ್ತವಾಗಿ ಮಾತನಾಡಿ, ಅವಳ ಮನದ ಭಾವನೆಗಳನ್ನು ಆಲಿಸಿ ಎಂದು ಹೇಳಿ ತೆರಳಿದರು.


ವೈದ್ಯರು ಕೊಟ್ಟಿದ್ದ ಮಾತ್ರೆ, ಔಷಧಿಗಳನ್ನು ಸೇವಿಸಿ ನಿಧಿಗೆ ಜ್ವರವು ಕಡಿಮೆಯಾದ ಬಳಿಕ, ಸುಷ್ಮಾ ನಿಧಿಯಲ್ಲಿ ಪ್ರೀತಿಯಿಂದ ಮಾತನಾಡಿದಾಗ ನಿಧಿಯು " ಅಮ್ಮಾ, ನಾನು ಶಾಲೆಗೆ ಹೋಗಲಾರೆ ಅಲ್ಲಿ ನನಗೆ ಹೊಡೆಯುತ್ತಾರೆ, ಬೈಯುತ್ತಾರೆ, ಜೋರು ಗಲಾಟೆ ಮಾಡಿದರೆ ತಲೆಗೆ, ಮೈಗೆ ತಣ್ಣನೆಯ ನೀರನ್ನು ಹಾಕುತ್ತಾರೆ, ಚಳಿ ಆಗುತ್ತದೆ ಅಮ್ಮಾ, ಸರಿಯಾಗಿ ಊಟ, ತಿಂಡಿಯನ್ನೂ ಮಾಡಿಸುವುದಿಲ್ಲ ಹಸಿವಾಗುತ್ತದೆ ಅಮ್ಮಾ, ಮೂತ್ರ ಬಂದಾಗ ಹೋಗಲು ಬಿಡುವುದಿಲ್ಲ ಅಮ್ಮಾ, ಅವರು ನೀಡಿದ ಸಮಯದಲ್ಲಿಯೇ ಹೋಗಿ ಮೂತ್ರ ಮಾಡಿ ಬರಬೇಕು ಅಮ್ಮಾ, ಕೆಲವೊಮ್ಮೆ ಮೂತ್ರವನ್ನು ಕಟ್ಟಿಕೊಂಡು ಹೊಟ್ಟೆಯೇ ನೋವಾಗುತ್ತದೆ ಅಮ್ಮಾ, ಕೆಲವೊಮ್ಮೆ ಶಾಲೆಯಲ್ಲಿನ ಒಬ್ಬ ಅಂಕಲ್ ಎಲ್ಲೆಲ್ಲೋ ಕೆಟ್ಟದಾಗಿ ಮುಟ್ಟುತ್ತಾರೆ ಅಮ್ಮಾ, ನಾನು ಶಾಲೆಗೆ ಹೋಗಲಾರೆ ಅಮ್ಮಾ" ಎಂದಾಗ ಸುಷ್ಮಾಗೆ ಮಗಳು ಶಾಲೆಯಲ್ಲಿ ಇಷ್ಟರವರೆಗೆ ಅನುಭವಿಸುತ್ತಿದ್ದ ವೇದನೆ ಅರಿವಾಯಿತು. ಅವಳು ಶಾಲೆಗೆ ಹೋಗಲಾರೆ ಎಂದು ಅಳುತ್ತಿದ್ದುದಕ್ಕೆ ಕಾರಣ, ನಾನು ಹೊಡೆಯುವೆ ಎಂಬ ಕಾರಣಕ್ಕೆ ತನ್ನ ನೋವುಗಳನ್ನು ಹೇಳದೇ, ಮೌನವಾಗಿ ತನ್ನ ಮುಗ್ಧ ಮನದೊಳಗೆ ಬಂಧಿಸಿ ಅದೆಷ್ಟು ನೋವು ಅನುಭವಿಸಿರಬಹುದು ಎಂದು ತನ್ನ ತಪ್ಪಿನ ಅರಿವಾಗಿ ಕಣ್ಣೀರು ಹಾಕಿದಳು ಸುಷ್ಮಾ.


ಈ ಘಟನೆಯ ನಂತರ ಮಗುವನ್ನು ಆ ಶಾಲೆಯಿಂದ ಬಿಡಿಸಿ, ಒಂದೊಳ್ಳೆಯ ಶಾಲೆಗೆ ಹಾಕಿಸಿದರು ಆಗ ನಿಧಿ ಬಂದು, " ಅಮ್ಮಾ ನನ್ನ ಗೆಳೆಯ, ಗೆಳತಿಯರು ಅವರ ಮನೆಯಲ್ಲಿ ಪುಟ್ಟ ಮಗು ಉಂಟು ಎನ್ನುತ್ತಾರೆ, ಅವರ ಅಪ್ಪ, ಅಮ್ಮಾ ದಿನಾಲೂ ನನ್ನ ಗೆಳೆಯ, ಗೆಳತಿಯರ ಜೊತೆಗೆ ಆಟವಾಡುವರಂತೆ, ಮುದ್ದು ಮಾಡುವರಂತೆ, ಒಂದಿಷ್ಟು ಸಮಯಗಳನ್ನು ಖುಷಿ ಖುಷಿಯಾಗಿ ಅವರ ಜೊತೆಯಲ್ಲಿ ಕಳೆಯುವರಂತೆ, ನನ್ನ ಅಪ್ಪ, ಅಮ್ಮಾ ಯಾಕೆ ಹಾಗೆ ಮಾಡುವುದಿಲ್ಲ ಅಮ್ಮಾ?!, ನಮ್ಮ ಮನೆಯಲ್ಲಿ ಯಾಕೆ ಪುಟ್ಟ ಪಾಪು ಇಲ್ಲಮ್ಮಾ?!, ನೀವು ನನ್ನೊಂದಿಗೆ ಸಮಯ ಕಳೆಯದೆ ಹೋದರೂ ಕೂಡ ಆ ಪುಟ್ಟ ಮಗುವಿನ ಜೊತೆಯಾದರೂ ನಾನು ಆಟವಾಡಿ, ಖುಷಿ ಪಡುತ್ತಿದ್ದೆನಲ್ಲ ಅಮ್ಮಾ" ಎಂದಾಗ ಇಷ್ಟರವರೆಗೆ ತನ್ನ ಪುಟ್ಟ ಕಂದ, ಮುಗ್ಧ ಮನದ ನಿಧಿಯ ಮನದೊಳಗೆ ಅಡಗಿದ್ದ ಮೌನ, ಬೇಸರ ಎಲ್ಲವೂ ಕೂಡ ಮಾತಾಗಿ ಹೊರ ಬಂದಿತ್ತು!!


ಸುಷ್ಮಾಗೆ ನಿಧಿ ಹೇಳಿದ್ದು ನಿಜ ಅನಿಸಿತು. ಕೆಲಸ ಕೆಲಸ ಎಂದು ಇಪ್ಪತ್ನಾಲ್ಕು ಘಂಟೆಯೂ ಕೆಲಸದ ಒತ್ತಡದಲ್ಲಿ ಮುಳುಗಿ, ಮುಗ್ಧ ಮನವನ್ನು ಅರಿಯದಾದೆನಲ್ಲಾ ಎಂಬ ಪಾಪ ಪ್ರಜ್ಞೆ ಉಂಟಾಗಲು ಶುರುವಾಯಿತು ಸುಷ್ಮಾಳಿಗೆ. ನಿಧಿ ಹೇಳಿದ್ದೇ ಸರಿ, ಸಣ್ಣ ವಯಸ್ಸಿನಲ್ಲಿ ಮಕ್ಕಳ ಮಾನಸಿಕ, ದೈಹಿಕ ಬೆಳವಣಿಗೆ ಹಾಗೂ ಆರೋಗ್ಯಕ್ಕೆ ಅಪ್ಪ, ಅಮ್ಮನ ಪ್ರೀತಿ ಬಲು ಮುಖ್ಯ ಎಂದು ಅರಿವಾದ ಸುಷ್ಮಾ, ಎರಡು ಮಕ್ಕಳ ನಡುವೆ ಕಡಿಮೆ ಅಂತರವಿದ್ದರೆ ಅವರಿಬ್ಬರ ಬಾಂಧವ್ಯವೂ ಮುಂದೆ ಚೆನ್ನಾಗಿರುವುದು. ಇದು ನಮ್ಮಿಬ್ಬರ ಅರಿವಿಗೇ ಬಂದಿರಲಿಲ್ಲ, ನಿಧಿಗೆ ಇಷ್ಟೊಂದು ಒಂಟಿತನ ಕಾಡಬಹುದು ಎಂಬ ಸಣ್ಣ ಯೋಚನೆಯೂ ಅಪ್ಪ, ಅಮ್ಮನಾದ ನಮ್ಮ ಮನಸ್ಸಿನಲ್ಲಿ ಮೂಡಿರಲಿಲ್ಲವಲ್ಲ ಎಂದು ಎನಿಸಿ ಕಣ್ಣೀರು ಬಂತು ಸುಷ್ಮಾಳಿಗೆ.


ತನ್ನ ಕಂದನ ಮೌನದ ಹಿಂದಿನ ಮುಗ್ಧ ಮಾತುಗಳನ್ನು ಕೇಳಿದ ಸುಷ್ಮಾ ಮುಂದೆ, ನನ್ನ ಉದ್ಯೋಗವು ನನ್ನ ಕಂದನಿಗಿಂತ ಶ್ರೇಷ್ಠ ಅಲ್ಲ, ನನ್ನ ಮಕ್ಕಳು ದೊಡ್ಡದಾದ ಬಳಿಕ ಉದ್ಯೋಗಕ್ಕೆ ತೆರಳುತ್ತೇನೆ, ಅವರಿಗೆ ಅಪ್ಪ, ಅಮ್ಮನ ಪ್ರೀತಿ ದೊರೆಯುವುದು ಅತಿ ಮುಖ್ಯ ಎಂದೆನಿಸಿ, ತನ್ನ ಉದ್ಯೋಗಕ್ಕೆ ತಾತ್ಕಾಲಿಕವಾಗಿ ವಿರಾಮ ತೆಗೆದುಕೊಂಡ ಸುಷ್ಮಾ, ನಿಧಿಯ ಪುಟ್ಟ ಪಾಪು ಬೇಕು ಎಂಬ ಆಸೆಯನ್ನು ಪೂರೈಸುವಲ್ಲಿ ಮುಂದಡಿ ಇಟ್ಟಳು.


Rate this content
Log in

Similar kannada story from Abstract