manjula g s

Abstract Inspirational Others

4  

manjula g s

Abstract Inspirational Others

ಶಾಂತಿಯಿರಲಿ...!

ಶಾಂತಿಯಿರಲಿ...!

4 mins
328



"ಅವರು ಯಾವಾಗಲೂ ಹಾಗೆಯೇ ಮಾವಯ್ಯ...... ಪ್ರತಿಯೊಂದಕ್ಕೂ ವಿಪರೀತವಾಗಿ ಯೋಚಿಸುತ್ತಾರೆ! ಯಾವ ತೀರ್ಮಾನ ತೆಗೆದುಕೊಳ್ಳಲೂ ಹಿಂಜರಿಯುತ್ತಾರೆ. ಸದಾ ಅನುಮಾನ. ಅವರ ದ್ವಂದ್ವ-ಗೊಂದಲ ನಮ್ಮ ಬದುಕನ್ನು ಹೀಗೆಯೇ ಇಟ್ಟಿದೆ. ಇದರಿಂದ ಮನೆಯಲ್ಲಿ ಶಾಂತಿಯೇ ಇಲ್ಲ !ನೀವಾದರೂ ಈ ಬಾರಿ ಬುದ್ಧಿ ಹೇಳಬಾರದೇ"...... ಎಂದು ವಿನುತ ತನ್ನ ಸೋದರ ಮಾವ ಕೃಷ್ಣಮೂರ್ತಿಗಳನ್ನು ಗೋಗರೆದು ಕೇಳಿದಳು. 


ಅಷ್ಟಕ್ಕೂ ಕೃಷ್ಣಮೂರ್ತಿಗಳಿಗೆ ಸತೀಶನ ಸ್ವಭಾವ ಹೊಸದೇನಲ್ಲ.....! ವಿನುತಾಳನ್ನು ಮದುವೆ ಮಾಡಿಕೊಟ್ಟಾಗಿನಿಂದಲೂ ಅವನನ್ನು ಗಮನಿಸುತ್ತಲೇ ಬಂದಿದ್ದಾರೆ. ತನ್ನ ಮುದ್ದು ಸೊಸೆ ಹೇಳುವ ಮಾತು ಅಕ್ಷರಶಃ ನಿಜ ಎನ್ನುವುದು ಗೊತ್ತು. ಆದರೆ ನೇರವಾಗಿ ಅವಳ ಮಾತಿಗೆ ಒಪ್ಪಿಗೆ ಹೇಳಿದರೆ, ಇವಳಿಗೇ ಬೆಂಬಲ ಕೊಟ್ಟು ಗಂಡ ಹೆಂಡತಿಯರ ನಡುವೆ ಭಿನ್ನಾಭಿಪ್ರಾಯಕ್ಕೆ ಪ್ರೋತ್ಸಾಹ ಕೊಟ್ಟಂತಾಗುತ್ತದೆ! ಮತ್ತು ದಾಂಪತ್ಯಕ್ಕೆ ಹುಳಿ ಹಿಂಡಿದಂತಾಗುತ್ತದೆ ಎಂಬ ದೃಷ್ಟಿಯಿಂದ... 


 "ಹಾಗೇನೂ ಇಲ್ಲ ವಿನು.... ನೀನೇನೂ ಯೋಚಿಸಬೇಡ..... ಸತೀಶ ಬಹಳ ಬುದ್ಧಿವಂತ! ಯಾವುದಕ್ಕೂ ಆತುರ ಬೀಳುವುದಿಲ್ಲ; ಎಲ್ಲವನ್ನು ಅಳೆದು ತೂಗಿ ಒಂದು ಗಟ್ಟಿಯಾದ ತೀರ್ಮಾನ ತೆಗೆದುಕೊಳ್ಳುತ್ತಾನೆ. ವಿನಾಕಾರಣ ನೀನು ಅವನನ್ನು ಒತ್ತಾಯ ಮಾಡಬೇಡ ಸ್ವಲ್ಪ ತಾಳ್ಮೆ ಇರಲಿ ತಾಯಿ"..... ಎಂದರು. 


ಅಷ್ಟಕ್ಕೆ ಸಮಾಧಾನವಾಗದ ವಿನುತ "ಇಲ್ಲ ಮಾವ, ನಿಮಗೆ ಗೊತ್ತಿಲ್ಲ..... ಮದುವೆಯಾಗಿ 10 ವರ್ಷಗಳಾಯಿತು, ಈವರೆಗೆ ಪ್ರತಿ ಸಣ್ಣ ವಿಷಯದಿಂದ ಹಿಡಿದು ದೊಡ್ಡ ವಿಷಯದವರೆಗೆ ಅವರು ಬಹಳವಾಗಿಯೇ ಯೋಚಿಸುತ್ತಾರೆ! ಅನಗತ್ಯ ಚಿಂತೆ ಮಾಡುತ್ತಾರೆ. ಇದು ಮಾಡಿದರೆ ಹೇಗೆ? ಅದು ಮಾಡಿದರೆ ಹೇಗೆ? ಎಂದು ಲೆಕ್ಕಾಚಾರದಲ್ಲೇ ದಿನ ಕಳೆದು ಹೋಗುತ್ತಿದೆಯೇ ವಿನಃ ಏನೊಂದೂ ಆಗುತ್ತಿಲ್ಲ. ಪ್ರತಿಯೊಂದಕ್ಕೂ ನಕಾರಾತ್ಮಕ ಯೋಚನೆ ಅವರನ್ನು ಹಿಡಿದು ಕಟ್ಟಿ ಹಾಕುತ್ತಿದೆ. ಭವಿಷ್ಯದ ಸೋಲಿನ ಭಯ ಅವರನ್ನು ಪ್ರತಿ ಬಾರಿ ಕಾಡುತ್ತದೆ.


ಹೇಳಬೇಕೆಂದರೆ ಮದುವೆಯಾದ ಹೊಸದರಲ್ಲಿ ಅವರಿಗೆ ಕಂಪನಿ ಕೆಲಸದಲ್ಲಿ ಉತ್ತಮ ಸ್ಥಾನಮಾನ ಸಿಗುವ ಬಡ್ತಿ ಸಿಕ್ಕಿತ್ತು. ಆದರೆ ಆ ಬಡ್ತಿ ಸ್ವೀಕರಿಸಿದರೆ ಹೆಚ್ಚಿನ ಕೆಲಸದ ಒತ್ತಡ ಬೀಳಬಹುದು ಎಂಬ ಭಯದಲ್ಲಿ ಅದನ್ನು ಬಿಟ್ಟುಬಿಟ್ಟರು. ಹೋಗಲಿ ಎಂದು ಕೊಂಡರೆ ಈಗಲೂ ಪ್ರತಿದಿನ ತಾವು ಕಳೆದುಕೊಂಡ ಅವಕಾಶದ ಬಗ್ಗೆ ಅನಗತ್ಯ ಯೋಚನೆ ಮಾಡುತ್ತಿರುತ್ತಾರೆ. ಇರುವ ಕೆಲಸದಲ್ಲಿ ತೃಪ್ತಿಯೇ ಇಲ್ಲ! ಈಗಲೂ ಕೈ ತುಂಬಾ ಸಂಪಾದನೆ ಇದೆ. ಆದರೆ ಅದನ್ನು ಹೂಡಿಕೆ ಮಾಡಲು ಎಲ್ಲಿಲ್ಲದ ಅಂಜಿಕೆ ಅವರಿಗೆ. ಕನಿಷ್ಠ ಒಂದು ನಿವೇಶನವನ್ನು ಖರೀದಿಸುವಾಗಲೂ ಸಾವಿರಾರು ಬಾರಿ ಹಗಲು ರಾತ್ರಿ ನಿದ್ದೆ ಇಲ್ಲದೆ ಚಿಂತಿಸುತ್ತಾ, ಮಾತುಕತೆ ಆಡಿಬಂದ ವ್ಯವಹಾರವನ್ನು ಮರುದಿನವೇ ತಮ್ಮ ಗೊಂದಲಗಳ ಕಾರಣದಿಂದ ಕೈ ಬಿಟ್ಟಿರುತ್ತಾರೆ. 

ಅಲ್ಲಿ ಕೆರೆ ಇದೆ, ಈ ಕಡೆ ಹಳ್ಳ ಇದೆ,ಅದು ಎತ್ತರದ ಪ್ರದೇಶ, ಅದು ದೂರ, ಇಲ್ಲಿ ಜನಸಂದಣಿ ಹೆಚ್ಚು..... ಹೀಗೆ ಒಂದೊಂದಕ್ಕೆ ಒಂದೊಂದು ಸಬೂಬು ಕೊಡುತ್ತಾ, ಈವರೆಗೂ ಕೈತುಂಬ ಹಣವಿದ್ದರೂ ಏನನ್ನೂ ಕೊಂಡಿಲ್ಲ!" ಎಂದಳು. 


ಈ ಬಗ್ಗೆ ಮೊದಲೇ ಗೊತ್ತಿದ್ದರೂ ಕೃಷ್ಣಮೂರ್ತಿಗಳು "ಹೌದಮ್ಮ.... ಅವನ ಯೋಚನೆ ಸರಿಯಾಗಿಯೇ ಇದೆ ನಿವೇಶನ ಖರೀದಿಸುವುದು ಒಳ್ಳೆಯ ಮನೆ ಕಟ್ಟಲು ತಾನೆ? ಅಂತಿಂಥ ಕಡೆ ಮನೆ ಕಟ್ಟಲು ಆಗುವುದಿಲ್ಲ; ನಾಳೆ ದಿನ ಹೆಚ್ಚು ಕಡಿಮೆಯಾದರೆ ಮನೆ ಮಂದಿ ಎಲ್ಲಾ ಒದ್ದಾಡಬೇಕಾಗುತ್ತದೆ ಎಂದು ಆಲೋಚಿಸಿರುತ್ತಾನೆ" ಎಂದರು. 


"ಅಯ್ಯೋ ಅಷ್ಟೇ ಅಲ್ಲ ಬಿಡಿ ಮಾವಯ್ಯ, ಮನೆ ಕಟ್ಟುವ ದೊಡ್ಡ ಮಾತು ಇರಲಿ, ಮನೆಯ ಸಣ್ಣ ವಿಷಯಗಳಿಗೂ ಅವರದು ಅನಗತ್ಯ ಚಿಂತೆ. ಮಕ್ಕಳು ಸ್ವಲ್ಪ ಮೌನವಾದರೂ ಸಾಕು ಏನೋ ಕಾಯಿಲೆಯಾಗಿದೆ ಎಂದು ವಿಪರೀತ ಕಾಳಜಿ ವಹಿಸುತ್ತಾರೆ. ಮಕ್ಕಳನ್ನು ಹೊರಗೆ ಆಟವಾಡಲು ಬಿಡುವುದಿಲ್ಲ. ಹಾಗಾಗಿ ಮಕ್ಕಳು ಮನೆಯಲ್ಲಿ ಕುಳಿತರೆ ಇತರ ಮಕ್ಕಳಂತೆ ನಮ್ಮ ಮಕ್ಕಳು ಚಾಲಾಕಿ ಇಲ್ಲ, ಗಟ್ಟಿ ಇಲ್ಲ ಎನ್ನುತ್ತಾರೆ. ಮಕ್ಕಳ ಪ್ರತಿಭೆಯಲ್ಲಂತೂ ಅವರಿಗೆ ತೃಪ್ತಿಯೇ ಇಲ್ಲ! ಹಾಗೆಯೇ ಮನೆಯ ಒಳಗೂ ಹೊರಗೂ ಎಲ್ಲವನ್ನು ನಿಭಾಯಿಸಿಕೊಂಡು ಹೋಗುತ್ತಿರುವ ನನ್ನ ಸಾಮರ್ಥ್ಯದ ಮೇಲೆಯೂ ಅವರಿಗೆ ನಂಬಿಕೆ ಇಲ್ಲ. ಸದಾ ಆಕಾಶ ಕಳಚಿ ಬೀಳುವ ನಿರೀಕ್ಷೆ ಅವರದು. ಮುಂದೆ ಏನೋ ಆಗಿ ಹೋಗುತ್ತದೆ ಎಂದು ಇಂದು ನೆಮ್ಮದಿ ಕಳೆದುಕೊಳ್ಳುತ್ತಾ, ನಮಗೂ ಉಸಿರು ಕಟ್ಟಿಸುವ ವಾತಾವರಣ ನಿರ್ಮಾಣ ಮಾಡಿಟ್ಟುಬಿಡುತ್ತಾರೆ" ಎಂದಳು. 


 "ವಿನು ಎಲ್ಲರ ಸ್ವಭಾವವು ಒಂದೇ ರೀತಿ ಇರುವುದಿಲ್ಲ ಎಂದು ನಿನಗೆ ತಿಳಿದಿಲ್ಲವೇ? ಸಂಸಾರದಲ್ಲಿ ಒಬ್ಬರು ಹಾಗಿದ್ದರೆ, ಒಬ್ಬರು ಹೀಗೆ! ನೀನು ಮೊದಲಿನಿಂದಲೂ ಎಲ್ಲವನ್ನು ಸರಳವಾಗಿ ತೆಗೆದುಕೊಳ್ಳುವ ಶಾಂತ ಸ್ವಭಾವದ ಹುಡುಗಿ. ಅವನು ಸ್ವಲ್ಪ ಭದ್ರತೆಯ ಹುಡುಗ. ಇಬ್ಬರ ಸಮಾಗಮ ನಿಮ್ಮ ಕುಟುಂಬಕ್ಕೆ ಒಳ್ಳೆಯದೇ... ಆ ಬಗ್ಗೆ ನೀನು ಅನಗತ್ಯ ಯೋಚಿಸಬೇಡ.... ನಾನು ಅವನಿಗೆ ಬುದ್ಧಿ ಹೇಳುತ್ತೇನೆ" ಎಂದರು. 


 ಅದಾದ ಸಂಜೆ ಸತೀಶನ ಜೊತೆ ವಾಕಿಂಗ್ ಹೋಗುತ್ತಾ, ಅದು ಇದು ಮಾತನಾಡುತ್ತಾ ನಡುವೆ ವಿಷಯವನ್ನು ಪ್ರಸ್ತಾಪಿಸಿದರು ಕೃಷ್ಣಮೂರ್ತಿಗಳು. 

"ಏನಪ್ಪಾ ಸತೀಶ, ವಿನು ಯಾವುದೋ ಮನೆಯ ವಿಚಾರ ಹೇಳುತ್ತಿದ್ದಳು....... ಯಾವಾಗ ಕೊಂಡುಕೊಳ್ಳುತ್ತೀರಿ ಹೊಸ ಮನೆ?" ಎಂದರು. ಮತ್ತು ಈ ವಿಚಾರದಲ್ಲಿ ತನಗೇನೂ ಹೆಚ್ಚು ಗೊತ್ತಿಲ್ಲ ಎನ್ನುವಂತೆ ತಮ್ಮ ಮಾತುಗಳನ್ನು ಮುಂದುವರಿಸಿದರು.


ಅದಕ್ಕೆ ಸತೀಶ "ಹೌದು ಚಿಕ್ಕಪ್ಪ... ನನ್ನ ಸ್ನೇಹಿತ ರಾಜೇಶ ತಾನೇ ಸ್ವತಃ ಕಟ್ಟಿದ್ದ ಮನೆಯದು. ಬಹಳ ಚೆನ್ನಾಗಿದೆ. ಅವನಿಗೆ ಬೇರೆ ಊರಿಗೆ ವರ್ಗಾವಣೆಯಾದ ಕಾರಣ ಅಲ್ಲೇ ಕುಟುಂಬ ನೆಲೆಸುವ ಉದ್ದೇಶದಿಂದ ಇದನ್ನು ಮಾರಾಟಕ್ಕೆ ಇಟ್ಟಿದ್ದಾನೆ. ಮತ್ತು ನನಗೆ ಕೊಂಡುಕೊಳ್ಳಲು ಹೇಳಿದ್ದಾನೆ. ಅಸಲಿನ ಬೆಲೆಗೆ ಕೊಡುತ್ತಿದ್ದಾನೆ" ಎಂದನು. 


"ಮತ್ತೇಕೆ ತಡ ತೆಗೆದುಕೊಳ್ಳಬಹುದಲ್ಲವೇ....??"' ಎಂದರು ಕೃಷ್ಣಮೂರ್ತಿಗಳು.


"ಎಲ್ಲಾ ಸರಿ.... ಆದರೆ ಅದು ಬಹಳ ದೊಡ್ಡದಾಗಿದೆ. ನಮ್ಮ ನಾಲ್ಕು ಜನರ ಕುಟುಂಬಕ್ಕೆ ಅಷ್ಟು ಅವಶ್ಯಕತೆ ಇಲ್ಲ! ಮತ್ತೆ ಕಟ್ಟಿದ ಮನೆಗೆ ನಾಳೆಯ ಕಾಲಕ್ಕೆ ಬೇಡಿಕೆ ಕಡಿಮೆಯಾಗುತ್ತದೆ.......ಬೇಗನೆ ಹಾಳಾಗಿ ಹೋದರೆ....! ಅದರ ಬದಲು ನಿವೇಶನ ಖರೀದಿಸಿಟ್ಟರೆ, ಮುಂದೊಂದು ದಿನ ನಮಗೆ ಹೇಗೆ ಬೇಕೋ ಹಾಗೆ ನಾವೇ ಕಟ್ಟಿಕೊಳ್ಳಬಹುದು ಎಂದು ಯೋಚಿಸುತ್ತಿದ್ದೇನೆ" ಆದರೆ ಅದಕ್ಕೆ ಹೊಂದುವಂತಹ ಯಾವುದೇ ನಿವೇಶನ ನನಗೆ ಸಿಗುತ್ತಿಲ್ಲ. ಹುಡುಕಾಡಿ ಹುಡುಕಾಡಿ ಸಾಕಾಯ್ತು . ಆದ್ದರಿಂದ ಯಾವ ನಿರ್ಧಾರವನ್ನು ತೆಗೆದುಕೊಳ್ಳಲು ಆಗದೆ ಬಹಳ ಗೊಂದಲವಾಗುತ್ತಿದೆ ಎಂದು ಸತೀಶ ಹೇಳಿದಾಗ,


'ಈ ದಿನವೇ ಅನುಭವಿಸುವ ಸ್ವತ್ತಿಗೆ ನಾಳೆಯ ಬಗ್ಗೆ ಯಾರಾದರೂ ಚಿಂತಿಸುವರೇ?? ಈಗ ಚಿಕ್ಕದಿರುವ ನಿಮ್ಮ ಕುಟುಂಬ ನಾಳೆ ದೊಡ್ಡದಾಗುವುದಿಲ್ಲವೇ? ಸಿಕ್ಕ ಒಳ್ಳೆಯ ಅವಕಾಶವನ್ನು ಬಳಸಿಕೊಳ್ಳುವುದು ಉತ್ತಮವಲ್ಲವೇ? ಏಕೆ ಹೇಳುತ್ತಿದ್ದೇನೆಂದರೆ ಈಗ ಕೈ ಚೆಲ್ಲಿ, ಮತ್ತೆ ತಪ್ಪಿ ಹೋಯಿತು ಎಂದು ಕೊರಗಬಾರದಲ್ಲವೇ....?? ದೇವರು ಮತ್ತೂ ಒಳಿತು ಮಾಡಿದರೆ ಇನ್ನೊಂದು ನಿವೇಶನ ಖರೀದಿಸಿ ಹೇಗೆ ಬೇಕೋ ಹಾಗೆ ಕಟ್ಟಿಕೊಂಡರೆ ಆಯ್ತು! ಎಂದರು ಕೃಷ್ಣಮೂರ್ತಿಗಳು.


'ಆದರೂ ಏಕೋ ಈ ವಿಚಾರದಲ್ಲಿ ನನಗೆ ಶಾಂತವಾಗಿ ತೀರ್ಮಾನಿಸಲು ಆಗುತ್ತಿಲ್ಲ' ಎಂದನು ಸತೀಶ.


ಆಗ ಕೃಷ್ಣಮೂರ್ತಿಗಳು ಪ್ರತಿಯೊಂದು ಸಣ್ಣ ಪುಟ್ಟ ವಿಚಾರಗಳಿಗೆ ಅತಿಯಾಗಿ ಚಿಂತಿಸಿದರೆ ಅದು ನಮ್ಮ ಅಶಾಂತಿಗೆ ಕಾರಣವಾಗುತ್ತದೆ.

ಅಷ್ಟಕ್ಕೂ ಭವಿಷ್ಯವನ್ನು ಕಂಡವರು ಯಾರೂ ಇಲ್ಲ. ಎಲ್ಲವೂ ಅದರ ಪಾಡಿಗೆ ಅದು ನಡೆದುಕೊಂಡು ಹೋಗುತ್ತದೆ. ನಮ್ಮ ಹಣೆಯ ಬರಹ ಹೇಗಿದ್ದರೆ ಅದು ಹಾಗೆಯೇ ಆಗುತ್ತದೆ. ಅದನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ನಮ್ಮ ಭವಿಷ್ಯದ ಮೇಲೆ ನಮಗೆ ನಂಬಿಕೆ ಇರಬೇಕು ಅಷ್ಟೇ! ಧನಾತ್ಮಕವಾಗಿ ಯೋಚಿಸಿದರೆ ಅಸ್ತು ದೇವತೆಗಳು ತಥಾಸ್ತು ಎಂದು ಎಲ್ಲವೂ ಒಳಿತನ್ನೇ ಮಾಡುತ್ತಾರೆ. ಅದು ಬಿಟ್ಟು ಸದಾ ಋಣಾತ್ಮಕ ಮನಸ್ಥಿತಿಯಲ್ಲಿ ನಾವೇ ತೀರ್ಮಾನ ತೆಗೆದುಕೊಳ್ಳಲು ಡೋಲಾಯಮಾನವಾದರೆ ನಾವು ಮಾತ್ರವಲ್ಲ, ನಮ್ಮನ್ನು ನೆಚ್ಚಿಕೊಂಡ ಮನೆಯವರಿಗೂ ತೊಂದರೆ ಉಂಟಾಗುತ್ತದೆ. ಅದರಿಂದ ನಮ್ಮ ಮನೆಯ ಶಾಂತಿಯನ್ನು ನಾವೇ ಕದಡಿದಂತೆ ಆಗುತ್ತದೆ. ಆದರೂ ಇಂದು ಇರುವುದು ಮುಂದೆಯೂ ಹೀಗೆಯೇ ಇರುತ್ತದೆ ಎಂಬುದನ್ನು ನಿಶ್ಚಿತವಾಗಿ ಹೇಳಲು ಆಗುವುದಿಲ್ಲ. ಬದಲಾವಣೆ ಜಗದ ನಿಯಮ. ಅದಕ್ಕೆ ಹೊಂದಿಕೊಂಡಂತೆ ನಾವು ಸಾಗಬೇಕು. ಹಾಗೆಂದು ಬರುವ ಒಳ್ಳೆಯ ಅವಕಾಶಗಳನ್ನು ಕೈ ಚೆಲ್ಲಿ ಮುಂದಿನ ಮರೀಚಿಕೆಗೆ ಕಾಯುತ್ತಾ ಕೂರುವುದು ಒಳಿತಲ್ಲ..... " ಎಂದರು.


ಏನೋ ಅರ್ಥವಾದಂತಾಗಿ ಸತೀಶ "ಆಯ್ತು ಚಿಕ್ಕಪ್ಪ, ನೀವು ಹೇಳಿದಂತೆ ನಾಳೆಯೇ ರಾಜೇಶನಿಗೆ ಮುಂಗಡ ಕೊಟ್ಟುಬಿಡುತ್ತೇನೆ! ಅದಷ್ಟೂ ಬೇಗ ರಿಜಿಸ್ಟರ್ ಮಾಡಿಸಿ ಬಿಡುತ್ತೇನೆ" ಎಂದನು. 


ಇಬ್ಬರೂ ಮನೆಗೆ ಬರುವ ವೇಳೆಗೆ ಮಾವನ ಮೇಲಿನ ನಂಬಿಕೆಯಿಂದ ವಿನುತ ಸಿಹಿ ತಯಾರಿಸಿ ಇಟ್ಟಿದ್ದಳು! 


Rate this content
Log in

Similar kannada story from Abstract