ಈ ಜೀವ ನಿನಗಾಗಿ
ಈ ಜೀವ ನಿನಗಾಗಿ
ಈ ಜೀವ ನಿನಗಾಗಿ ಕಾದು ಕಾದು..........
ಪರಿತಪಿಸಿ ನೋಯುತಲಿಹುದು........
ಹೀಗೆ ಅದೆಷ್ಟು ಬಾರಿ ಕನವರಿಸಿದ್ದಳೋ ಏನೋ ಶೃತಿ! ಒಮ್ಮೆ ಬಂದುಬಿಡು........ಒಮ್ಮೆ ಬಂದುಬಿಡು......! ಎಂದು ಹೇಳಿದಾಗೆಲ್ಲಾ ಚರಣ್ ಮಾತ್ರ ಇಲ್ಲ ಎಂದೇ ಇಲ್ಲ; ಆದರೆ ಅವಳು ಕರೆಗೆ ಓಗೊಟ್ಟು ಈವರೆಗೂ ಬಂದಿಲ್ಲ!
ಚರಣ್ ಮತ್ತು ಶ್ರುತಿ ಒಬ್ಬರನ್ನೊಬ್ಬರು ಇಷ್ಟಪಟ್ಟು, ಮನೆಯವರೆಲ್ಲರ ಒಪ್ಪಿಗೆ ಪಡೆದು ಎಲ್ಲರ ಸಮ್ಮುಖದಲ್ಲಿ ಅದ್ದೂರಿಯಾಗಿ ವಿವಾಹವಾದವರು. ಮನೆಯವರೆಲ್ಲರ ಕಣ್ಮಣಿಗಳಂತೆ ಓಡಾಡಿಕೊಂಡು, ಎರಡೂ ಕುಟುಂಬದಿಂದ ಹೊರಗೆ ಪರವೂರಲ್ಲಿ ಉದ್ಯೋಗ ಅರಸಿ ಬಂದು, ತಮ್ಮದೇ ಪುಟ್ಟ ಕನಸಿನ ಗೂಡಿನಲ್ಲಿ ಸಂಸಾರ ಕಟ್ಟಿ ದಿನಗಳನ್ನು ಕಳೆಯುತ್ತಿದ್ದರು. ಅವರ ಖುಷಿಗೆ ಮತ್ತೊಂದು ಗರಿ ಎಂಬಂತೆ ಎಲ್ಲರ ಹಾರೈಕೆಯಂತೆ ಮುದ್ದಾದ ಕಂದ ಧ್ರುವ ಅವರ ಬಾಳಲ್ಲಿ ಬಂದ.
ಅತ್ತೆಯ ಮನೆಯವರ ಅತಿಯಾದ ಕಾಳಜಿಯಲ್ಲಿ ಒಂಬತ್ತು ತಿಂಗಳು ಸರಾಗವಾಗಿ ಕಳೆದ ಶೃತಿ, ಚೊಚ್ಚಲ ಹೆರಿಗೆಗಾಗಿ ತವರು ಮನೆಗೆ ಬಂದಾಯ್ತು. ಪೂರ್ಣ ಚಂದಿರನಂತೆ ಧ್ರುವ ಜನಿಸಿದ್ದ. ಎರಡು ಕುಟುಂಬಗಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಇದೇ ವೇಳೆಯಲ್ಲಿ ಕುಟುಂಬಕ್ಕೆ ದೃಷ್ಟಿ ತಾಕಿದಂತೆ ಚರಣ್ ನ ಮನಸ್ಸಿನಲ್ಲಿ ಹೊಸ ಆಸೆಯೊಂದು ಚಿಗುರೊಡೆಯಿತು. ಅದೆಂದರೆ ಹೇಗೂ ಪುಟ್ಟ ಕಂದನ ಜವಾಬ್ದಾರಿ ಹೊತ್ತ ಶೃತಿ ಇನ್ನು ಮುಂದೆ ಹೊರಗೆ ದುಡಿಯಲು ಹೋಗುವುದು ಕನಸಿನ ಮಾತು. ಅಂದರೆ ತಮ್ಮ ಸಂಪಾದನೆ ಕಡಿಮೆಯಾಗುವುದು! ಹೇಗಾದರೂ ಮಾಡಿ ತಾನೊಬ್ಬನೇ ಇನ್ನೂ ಹೆಚ್ಚು ಗಳಿಸುವ ಮೂಲಕ ಮುಂದೆ ತಮ್ಮ ಮಗುವಿನ ಭವಿಷ್ಯವನ್ನು ಉತ್ತಮಗೊಳಿಸಬೇಕೆಂಬ ಕನಸನ್ನು ಕಾಣತೊಡಗಿದ.
ಇದೇ ವೇಳೆಯಲ್ಲಿ ಹುಡುಕುತ್ತಿದ್ದ ಬಳ್ಳಿ ಕಾಲಿಗೆ ತೊಡರಿಕೊಂಡಂತೆ ಅವನಿಗೆ ಅವನ ಕಂಪನಿಯಲ್ಲಿ ಪ್ರಮೋಷನ್ ಸಿಕ್ಕಿ ವಿದೇಶದಲ್ಲಿ ಹೆಚ್ಚಿನ ಸಂಬಳಸಿಗುವ ಅವಕಾಶಕ್ಕೆ ಕರೆ ಬಂತು. ತನ್ನ ಅದೃಷ್ಟಕ್ಕೆ ಮಿತಿಯೇ ಇಲ್ಲ ಎಂದುಕೊಂಡು, ನೇರವಾಗಿ ಬಂದು ತನ್ನೆಲ್ಲಾ ಕನಸು ಮತ್ತು ಒದಗಿದ ಅವಕಾಶದ ಬಗ್ಗೆ ಮತ್ತು ಮುಂದಿನ ದಿನಗಳ ಯೋಜನೆಗಳ ಬಗ್ಗೆ ತನ್ನ ಮಡದಿ ಶ್ರುತಿಗೆ ಹೇಳಿದ. ಅವಳು ಒಪ್ಪಿದರೆ ಮಾತ್ರ ತಾನು ಹೋಗುವುದಾಗಿಯೂ ಹೇಳಿದ!
ಅದೇ ವೇಳೆ ಸಂಪೂರ್ಣವಾಗಿ ಮಗುವಿನ ಗುಂಗಿನಲ್ಲಿಯೇ ಇದ್ದವಳಿಗೆ, ಆ ಸ್ವಲ್ಪದಿನಗಳಲ್ಲಿ ಪತಿಯಿಂದ ದೂರವಿದ್ದರೂ ಯಾವುದೇ ಚಿಂತೆ ಆಗಿರಲಿಲ್ಲ! ಇದರಿಂದ ಬೇರೆ ಯಾವ ಮುಂದಾಲೋಚನೆಯನ್ನೂ ಮಾಡದೆ ಖುಷಿಯಿಂದ ಒಪ್ಪಿಗೆ ಕೊಟ್ಟುಬಿಟ್ಟಳು! ಪೂರ್ವಾಪರ ಯೋಚಿಸದೆ ತಾನು ಮಾಡಿದ ಒಂದು ದುಡುಕಿನ ತೀರ್ಮಾನ ತನ್ನನ್ನು ಎಷ್ಟು ಬಾಧಿಸಿತ್ತು ಎಂಬುದು ಕೆಲವೇ ದಿನಗಳಲ್ಲಿ ಅವಳಿಗೆ ಅರಿವಾಯಿತು.
ಪುಟ್ಟ ಕಂದಮ್ಮ ಒಂದೆಡೆ, ಜೊತೆಗೆ ಮನೆಯವರೆಲ್ಲರ ಪ್ರೀತಿ ವಾತ್ಸಲ್ಯಗಳು ಇನ್ನೊಂದೆಡೆ ಇದ್ದರೂ ಸಹ ಚರಣ್ ಇಲ್ಲದೆ ತಾನು ಒಂಟಿ ಎನಿಸತೊಡಗಿತ್ತು. ಧ್ರುವ ಮುಂದೆ ಪ್ರತಿದಿನ ಹೊಸ ಹೊಸದನ್ನು ಕಲಿಯ
ುತ್ತಾ, ಆಡುತ್ತಾ ಬೆಳೆದಂತೆ ತಂದೆಯ ಜೊತೆಗೆ ಅವನು ಒಡನಾಟ ಕಳೆದ ಕೊಳ್ಳುತ್ತಿದ್ದಾನೆ ಅಲ್ಲವೇ..... ಎಂಬ ಅಂಶ ಅರಿವಿಗೆ ಬರತೊಡಗಿತ್ತು. ಮುದ್ದುಮುದ್ದಾಗಿ ಧ್ರುವ ಅಮ್ಮ-ಅಪ್ಪ ಪದಗಳನ್ನು ಉಚ್ಚರಿಸಿದಾಗ ಈಗ ಚರಣ್ ಎದುರಿಗೆ ಇರಬೇಕಾಗಿತ್ತು ಎನಿಸತೊಡಗಿತ್ತು. ತವರುಮನೆಯಲ್ಲಿ ಎಷ್ಟು ದಿನ ತಾನು ಮತ್ತು ತನ್ನ ಮಗು ಉಳಿಯುವುದು? ಎಂದು ತಮ್ಮ ಪುಟ್ಟಗೂಡಿಗೆ ಹಿಂದಿರುಗೋಣ ಎಂದುಕೊಂಡರೆ; ಕಂದನೊಂದಿಗೆ ಅಲ್ಲಿ ತಾನು ಒಂಟಿಯಾಗುವ ಭಯ ಕಾಡತೊಡಗಿತ್ತು. ಅತ್ತೆಮನೆಗೆ ಹೋಗೋಣವೆಂದರೆ ಚರಣ್ ಇಲ್ಲದ ಮನೆಯಲ್ಲಿ ಏನು ಕೆಲಸ? ಎಂದು ಭಾಸವಾಯಿತು.
ತವರು ಮನೆಯಲ್ಲಿ ತನ್ನ ಸಹೋದರರು, ಅತ್ತೆಯ ಮನೆಯಲ್ಲಿ ತನ್ನ ಭಾವನವರು ಮತ್ತು ಹೊರಗೆ ಸುತ್ತಲಿನ ಸಮಾಜದಲ್ಲಿ ಇತರ ಗಂಡ-ಹೆಂಡತಿ ಮಕ್ಕಳು ಒಟ್ಟೊಟ್ಟಾಗಿ ಪಾರ್ಕುಗಳಲ್ಲಿ, ಮಾಲುಗಳಲ್ಲಿ, ಕಾರ್ಯಕ್ರಮಗಳಲ್ಲಿ ಓಡಾಡುವುದನ್ನು ಕಂಡ ಶ್ರುತಿಗೆ ತಾನೇನೋ ಕಳೆದುಕೊಂಡ ಅನುಭವವಾಗತೊಡಗಿತು. ಆಗಾಗ ವಿಡಿಯೋ ಕರೆಯ ಮೂಲಕ ತನ್ನ ಪತಿಯೊಂದಿಗೆ ಮಾತನಾಡಿ ಎಲ್ಲಾ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಳು. ಹಿಂತಿರುಗಿ ಬರುವಂತೆ ಕೋರುತ್ತಿದ್ದಳು. ಆದರೂ ಒಮ್ಮೆ ಸಂಪಾದನೆಯ ರುಚಿ ನೋಡಿದ ಚರಣ್ ಇನ್ನೂ ಕೆಲವು ವರ್ಷ ವಿದೇಶದಲ್ಲಿಯೇ ಇದ್ದು, ಮತ್ತಷ್ಟು ಸಂಪಾದಿಸುವ ಮಾತುಗಳನ್ನು ಆಡತೊಡಗಿದ. ಕೆಲವೊಮ್ಮೆ ಕೆಲಸದ ಒತ್ತಡದಿಂದಾಗಿ ಇವಳ ದೂರವಾಣಿ ಕರೆಗೂ ಸ್ಪಂದಿಸುತ್ತಿರಲಿಲ್ಲ.
ಮೊದಲೇ ಒಂಟಿತನ ಅನುಭವಿಸುತ್ತಿದ್ದ ಶೃತಿ, ಚರಣ್ ಮಾತನಾಡಲು ಸಿಗದಾದಾಗ ಖಿನ್ನತೆಗೆ ಒಳಗಾಗಿ ಹುಚ್ಚು ಆಲೋಚನೆಗಳನ್ನು ತಲೆಗೆ ತಂದುಕೊಂಡಳು. ಎಲ್ಲಿ ತನ್ನಿಂದ ಅವನು ದೂರಾಗುವನೋ ಎಂಬ ಆತಂಕದಲ್ಲಿ ದಿನಗಳನ್ನು ದೂಡತೊಡಗಿದಳು. ದಿನೇದಿನೇ ಮಂಕಾದಳು. ಅಂದು ತನ್ನಿಂದ ದೂರ ಹೋಗಲು ಚರಣ್ ಗೆ ಅವಕಾಶ ಮಾಡಿಕೊಟ್ಟದ್ದು ತನ್ನದೇ ತಪ್ಪೆಂದು ತನ್ನ ಮೇಲೆ ತಾನೇ ಬೇಸರಗೊಳ್ಳುತ್ತಿದ್ದಳು. ಮನೆಯವರ ಸಾಂತ್ವನದ ನುಡಿಗಳು, ಚರಣ್ ಗೆ ನೀಡಿದ ಮನೆಯವರ ಆಮಂತ್ರಣಗಳು ಫಲಿಸದಾದಾಗ ಎಲ್ಲರೂ ಕೈಚೆಲ್ಲಿ ಕುಳಿತರು. ಕೊನೆಗೆ ಇವಳನ್ನೇ ಅಲ್ಲಿಗೆ ಕಳಿಸೋಣವೆಂಬ ತೀರ್ಮಾನಕ್ಕೂ ಬಂದರಾದರೂ; ಅದಕ್ಕೂ ಚರಣ್ ಸಮ್ಮತಿಸಲಿಲ್ಲ. ವಿನಾಕಾರಣ ಹೆಂಡತಿ ಮಕ್ಕಳನ್ನು ಅಲ್ಲಿಗೆ ಕರೆಸಿಕೊಂಡರೆ ಖರ್ಚು ದುಬಾರಿಯಾಗಿ, ಹಣಉಳಿಸಲು ಸಾಧ್ಯವಾಗುವುದಿಲ್ಲ! ಆದ್ದರಿಂದ ಸ್ವಲ್ಪ ಕಾಲ ಹೀಗೆಯೇ ಮುಂದುವರಿಯಲು ಬಿಡಿ: ಎಂದು ಖಡಾಖಂಡಿತವಾಗಿ ಹೇಳಿದ್ದ.
ಇಷ್ಟೆಲ್ಲಾ ಆದರೂ ಶೃತಿ ಮಾತ್ರ ಒಮ್ಮೆ ಅವನು ಇಲ್ಲಿಗೆ ಬಂದರೆ ಸಾಕು ಮತ್ತೆ ತನ್ನ ಪರಿಪೂರ್ಣ ಪ್ರೇಮದ ಗುಂಗಿನಲ್ಲಿ ಅವನನ್ನು ಕಟ್ಟಿ ಹಾಕಿ ತಮ್ಮೊಂದಿಗೇ ಉಳಿಸಿಕೊಳ್ಳಬಹುದು! ಇಲ್ಲವಾದರೆ ಅವನ ಕಾಲಿಗೆ ಬಿದ್ದಾದರೂ ಅವನ ಜೊತೆ ತಾನು ಮತ್ತು ತನ್ನ ಕಂದ ಹೋಗುವ ವ್ಯವಸ್ಥೆಯಾದರೂ ಮಾಡಿಕೊಳ್ಳಬಹುದು! ಎಂದು ದೃಢಸಂಕಲ್ಪಿಸಿ ಅವಕಾಶ ಸಿಕ್ಕಾಗಲೆಲ್ಲ ಪ್ರತಿದಿನ ತನ್ನ ಪತಿಗೆ ಕರೆ ಮಾಡಿ ಈ ಜೀವ ನಿನಗಾಗಿ ಕಾದಿದೆ ಎಂದು ಅರುಹುತ್ತಿರುತ್ತಾಳೆ........!