Ashwini Desai

Romance Classics Others

4  

Ashwini Desai

Romance Classics Others

ಹೇಳದೇ ಉಳಿದ ಪ್ರೀತಿ

ಹೇಳದೇ ಉಳಿದ ಪ್ರೀತಿ

12 mins
290


ಮನೆಯಲ್ಲಿ ಸಂಭ್ರಮ ಇಲ್ಲ. ಸಡಗರ ಇಲ್ಲ. ಮನೆಗೆ ನವ ವಧುವಿನ ಆಗಮನದ ಸಂತಸ ಇಲ್ಲ. ಹೊಸ ಜೋಡಿಯ ತುಂಟಾಟ ಕಳ್ಳ ನೋಟ, ಹುಸಿ ಮುನಿಸು, ಮುದ್ದಾಟ ಗುದ್ದಾಟಗಳು ಇಲ್ಲ. ನವ ವಧು ವರರ ಛೇಡಿಸಿ, ಕಾಲು ಎಳೆದು ಗೋಳು ಹೊಯ್ದುಕೊಳ್ಳುವ ಸ್ನೇಹಿತರ ಬಳಗ ಇಲ್ಲ, ದೃಷ್ಟಿ ನಿವಾಳಿಸಿ ಹೊಸ ಬಾಳಿಗೆ ಮುನ್ನುಡಿ ಇಡಲು ಉಪದೇಶಿಸುವ ಹಿರಿಯರು ಇಲ್ಲ. ಒಟ್ಟಿನಲ್ಲಿ ಮದುವೆಯಾದ ಹೊಸ ಜೋಡಿ ಹೊತ್ತ ಸೂತಕದ ಮನೆಯಾಗಿದೆ. ಎಲ್ಲೆಲ್ಲೂ ನಗು ಕೀಟಲೆ ಕೇಳಬೇಕಾದ ಮನೆಯಲ್ಲಿ ಈಗ ನೀರವ ಮೌನ. ಇರುವವರು ಇಬ್ಬರೇ, ಅವರೂ ಇಂದು ಮೂರು ಗಂಟಿನ ನಂಟಲ್ಲಿ ಬೆಸೆದ ಸತಿ ಪತಿಗಳು. ಆದರೂ ಇಬ್ಬರ ಹೃದಯದಲ್ಲೂ ಈ ಸಂಭ್ರಮವನ್ನು ಅನುಭವಿಸದ ಅವ್ಯಕ್ತ ಭಯ........

ಆ ಮನೆಯ ನವ ವಧು ರೂಮ್ ಅಲ್ಲಿ ಮಲಗಿ ಆದ ಮದುವೆಯ ಬಗ್ಗೆ ಖುಷಿ ಪಡುವುದೋ ಅಥವಾ ವಾಸ್ತವಕ್ಕೆ ಅಳುವುದೋ, ತನ್ನ ಮುಂದಿನ ಬದುಕು ಹೇಗೆ ಎಂದು ಯೋಚಿಸುತ್ತಾ ಕುಳಿತರೆ,

ಇನ್ನು ನಮ್ಮ ಕಥಾನಾಯಕ ಈ ಮದುವೆಯ ಶಾಕ್ ನಿಂದ ಇನ್ನೂ ಆಚೇನೆ ಬಂದಿಲ್ಲ. ಇದೆಲ್ಲ ಕನಸೋ ನಿಜವೋ ಎಂಬ ಗೊಂದಲದಲ್ಲಿಯೇ ತನ್ನ ಗತ ಜೀವನದ ಒಳಗೆ ನುಗ್ಗುತ್ತಿದ್ದಾರೆ...

ಅಷ್ಟಕ್ಕೂ ಆದದ್ದಾದರೂ ಏನು????

ಬನ್ನಿ ನೋಡೋಣ

   ***** ***** ***** ***** ***** ***** ***** *****

ಸುಮಾರು 20 ವರ್ಷಗಳ ಹಿಂದೆ......

ಸುಮಾರು 8-10 ವರ್ಷದ ಬಾಲಕನೊಬ್ಬ ರಸ್ತೆಯ ಬದಿ ಪ್ರಜ್ಞೆ ಇಲ್ಲದೇ ಬಿದ್ದಿದ್ದಾನೆ. ಜಗತ್ತು ಯಾರಿಗಾಗಿಯೂ ಕಾಯದೇ ಮುನ್ನಡೆಯುತ್ತದೆ. ನಮ್ಮ ಜನರೂ ಅಷ್ಟೇ ತುಂಬಾ ಬಿಝಿ. ತಮ್ಮ ಅಕ್ಕ ಪಕ್ಕದಲ್ಲಿ ಏನಾಗುತ್ತೆ ಅಂತ ತಿಳಿದುಕೊಳ್ಳಲು ಅವರ ಬಳಿ ಸಮಯ ಇಲ್ಲ. ಅಂತದ್ದರಲ್ಲಿ ರಸ್ತೆಯ ಬದಿ ಪ್ರಜ್ಞೆ ಇಲ್ಲದೇ ಮಲಗಿದ ಬಾಲಕನ ಬಗ್ಗೆ ಗಮನ ಹರಿಸಲು ಸಮಯ ಎಲ್ಲಿದೆ.... ಎಲ್ಲರೂ ತಮ್ಮ ತಮ್ಮ ಕೆಲಸದಲ್ಲಿ ತೊಡಗಿದ್ದಾರೆ. ಆಗ ಬಂತು ಒಂದು ಪುಟ್ಟ ಆಕೃತಿ ಆ ಬಾಲಕನ ಹತ್ತಿರ.

ಸುಮಾರು 4-5 ವರ್ಷದ ಆ ಆಕೃತಿ ಆ ಬಾಲಕನನ್ನು ಎಚ್ಚರ ಪಡಿಸುವ ಪ್ರಯತ್ನದಲ್ಲಿ ತೊಡಗಿದೆ. ದೂರದಲ್ಲಿ ಯಾರೋ ಸಾನು ಸಾನು ಎಂದು ಕೂಗುತ್ತಿದ್ದಾರೆ. ಆದರೆ ಆ ಆಕೃತಿಗೆ ಅದ್ಯಾವುದರ ಪರಿವೆಯೂ ಇಲ್ಲದೇ ತನ್ನ ಕಾರ್ಯದಲ್ಲಿ ಮಗ್ನವಾಗಿದೆ. ಆದರೆ ಅದರ ಪ್ರಯತ್ನ ಫಲ ನೀಡುತ್ತಿಲ್ಲ.

"ಇಲ್ಲೇನು ಮಾಡುತ್ತಿದ್ದೆ ಪುಟ್ಟ. ಇದು ಪೇಟೆ. ರೋಡ್ ಅಲ್ಲಿ ತುಂಬಾ ಗಾಡಿ ಓಡಾಡ್ತಾ ಇರ್ತಾವೆ. ನೀನು ಒಬ್ಬೊಬ್ಬಳೆ ಹೀಗೆ ಬಂದ್ರೆ ನಂಗೆ ಭಯ ಆಗಲ್ವಾ ಹೇಳು. ತುಂಟೆ ನೀನು. ಅಪ್ಪಂಗೆ ಎಷ್ಟು ಗಾಬರಿ ಮಾಡಿಬಿಟ್ಟೆ... "

"ಕ್ಷಮಿಸಿ ಅಪ್ಪ. ಇಲ್ಲಿ ಯಾರೋ ಬಿದ್ದಿದ್ದಾರೆ. ನಂಗೆ ಪಾಪ ಅನ್ನಿಸ್ತು. ಎದ್ದೆಳ್ಸೋಕೆ ತುಂಬಾ ಪ್ರಯತ್ನ ಮಾಡಿದೆ ಆದ್ರೆ ಅವ್ರಿಗೆ ಎಚ್ಚರ ಆಗ್ತಾ ಇಲ್ಲ" ಅಂತ ಅಳೋಕೆ ಶುರು ಮಾಡಿದ್ಲು ನಮ್ಮ ಪುಟ್ಟ ಶಾರ್ವರಿ.

(ಸಿರಿವಂತೆಯ ಊರ ಗೌಡರು ಚಂದ್ರಕಾಂತ. ಹೆಸರಿಗೆ ತಕ್ಕಂತೆ ಚಂದ್ರನ ತೇಜಸ್ಸು ಹಾಗೂ ಶಾಂತ ಸ್ವಭಾವದವರು. ಇವರಿಗೆ ತಕ್ಕ ಭೂಮಿ ತೂಕದ ಹೆಣ್ಣು, ಭೂದೇವಿ ಇವರ ಧರ್ಮಪತ್ನಿ. ಇವರ ಏಕೈಕ ಸಂತಾನ 5 ವರ್ಷದ ಶಾರ್ವರಿ. ಊರಿನ ಜನಕ್ಕೆಲ್ಲ ಮುದ್ದು ಗೊಂಬೆ. ನಾಳೆ ಅವಳ ಹುಟ್ಟಿದ ಹಬ್ಬ ಎಂದು ತಂದೆಯೊಂದಿಗೆ ಬಟ್ಟೆ, ಗೊಂಬೆ, ಆಟಿಕೆ ತರಲು ಪೇಟೆಗೆ ಬಂದಿದ್ದಾಳೆ. ತಂದೆ ಅಂಗಡಿಯವರಿಗೆ ಹಣ ನೀಡುತ್ತಿದ್ದಾಗ ರಸ್ತೆ ಬದಿಯ ಬಾಲಕನನ್ನು ನೋಡಿ ಅವನ ಬಳಿ ಓಡಿ ಬಂದಿದ್ದಾಳೆ)

"ಅಯ್ಯೋ ನನ್ನ ಬಂಗಾರ, ನಿನ್ನ ನೋಡಿದ ಗಾಬರಿಯಲ್ಲಿ ನಾನು ನೋಡಲೇ ಇಲ್ವೇ. ಯಾರೋ ಇದು. ಎನ್ ಆಗಿರಬಹುದು. ನೀನು ಅಳಬೇಡ ಗೊಂಬೆ. ನಾನು ನೋಡ್ತೀನಿ ತಾಳು" ಎಂದು ಮಗಳಿಗೆ ಸಮಾಧಾನ ಮಾಡಿ ಹುಡುಗನನ್ನು ಎಚ್ಚರಿಸಲು ಪ್ರಯತ್ನ ಮಾಡಿ, ಎಚ್ಚರ ಆಗದಿದ್ದಾಗ ಕೊನೆಗೆ ಆ ಹುಡುಗನನ್ನು ಎತ್ತಿ ಕಾರಲ್ಲಿ ಮಲಗಿಸಿ ಮಗಳೊಂದಿಗೆ ಆಸ್ಪತ್ರೆಗೆ ಹೋಗುತ್ತಾರೆ.

ವೈದ್ಯರ ಉಪಚಾರದಿಂದ ಸ್ವಲ್ಪ ಸಮಯಕ್ಕೆ ಆ ಹುಡುಗನಿಗೆ ಪ್ರಜ್ಞೆ ಬರುತ್ತದೆ.

"ಯಾರಪ್ಪ ನೀನು? ನಿನ್ನ ಹೆಸರು ಏನು? ಯಾಕೆ ರಸ್ತೇಲಿ ಬಿದ್ದಿದ್ದೆ? ಎನ್ ಆಯ್ತು?" ಎಂದು ಚಂದ್ರಕಾಂತ್ ಕಕ್ಕುಲತೆಯಿಂದ ಕೇಳಿದರು.

"ನನ್ನ ಹೆಸರು ಸೋಮು ಅಂತ. ನಂಗೆ ತುಂಬಾ ಹೊಟ್ಟೆ ಹಸೀತಾ ಇತ್ತು. ಯಾರು ಊಟಕ್ಕೆ ಕೊಡಲಿಲ್ಲ. 2-3 ದಿನದಿಂದ ತಿನ್ನೋಕೆ ಏನು ಸಿಕ್ಕಿಲ್ಲ. ಬೆಳಗ್ಗೆ ಆ ರಸ್ತೆ ಬದಿ ಹೋಗೋವಾಗ ತಲೆ ಸುತ್ತಿದಂತಾಗಿ ಬಿದ್ದು ಬಿಟ್ಟೆ" ಎಂದು ಅಳಲು ಶುರು ಮಾಡ್ತಾನೆ

"ಅಳಬೇಡ ಪುಟ್ಟ. ನಿನ್ನ ಊರು? ತಂದೆ ತಾಯಿ? "

"ನಾನೊಬ್ಬ ಅನಾಥ. ನಂಗೆ ಯಾರೂ ಇಲ್ಲ" ಎಂದು ಬಿಕ್ಕುತ್ತಾನೆ

"ಸಧ್ಯಕ್ಕೆ ಇದು ತಿನ್ನು. ಆಮೇಲೆ ಅಪ್ಪ ನಿಂಗೆ ಊಟ ಕೊಡಿಸ್ತಾರೆ" ಅಂತ ಪುಟ್ಟ ಶಾರ್ವರಿ ತಂದೆ ತನಗೆ ಅಂತ ಕೊಡಿಸಿದ್ದ ಕೇಕ್, ಹಣ್ಣು ಚಾಕೊಲೇಟ್ ಅವನಿಗೆ ನೀಡುತ್ತಾಳೆ.

ಆದರೆ ಸೋಮು ಅದನ್ನ ತಗೊಳೋಕೆ ಹಿಂದೇಟು ಹಾಕಿ ಚಂದ್ರಕಾಂತ್ ರ ಮುಖ ನೋಡುತ್ತಾನೆ. ಅವರು ಮಗಳ ತಲೆ ನೇವರಿಸಿ, ಜಾಣ ಕಂದ ಎಂದು, ಸೋಮು ಗೆ ಅದನ್ನ ತಗೋ ಅಂತ ಕಣ್ಣಲ್ಲೇ ಹೇಳುತ್ತಾರೆ

   ***** ***** ***** ***** ***** ***** ***** *****

ಅಪ್ಪ ಸೋಮುನ ನಾವು ನಮ್ಮ ಮನೆಗೆ ಕರ್ಕೊಂಡು ಹೋಗೋಣ ಅಪ್ಪ. ನಂಗೆ ಆಡೋಕೆ ಜೊತೆ ಆಗ್ತಾನೆ ಅಂತ ಶಾರ್ವರಿದು ಒಂದೇ ಹಠ. ಮುದ್ದು ಮಗಳ ಹಟಕ್ಕೆ ಸೋತು ಸೋಮು ಚಂದ್ರಕಾಂತ್ ಹಾಗೂ ಶಾರ್ವರಿ ಒಟ್ಟಿಗೆ ಅವರ ಮನೆ ಸೇರುತ್ತಾನೆ. ಅಂದಿನಿಂದ ಸೋಮು ಅವರಲ್ಲೇ ಒಬ್ಬನಾಗಿ, ಚಂದ್ರಕಾಂತ್ ಹಾಗೂ ಭೂದೇವಿಗೆ ಮಗನಾಗಿ, ಶಾರ್ವರಿ ಗೆ ಜೊತೆಗಾರ, ಅಂಗ ರಕ್ಷಕ, ಸಹಾಯಕ ಆಗುತ್ತಾನೆ. ಒಟ್ಟಿಗೆ ಶಾಲೆಗೆ ಹೋಗುವುದು, ಆಡುವುದು, ಊಟ ಮಾಡುವುದು, ಎಲ್ಲದರಲ್ಲೂ ಶಾರ್ವರಿಗೆ ಸೋಮು ಜೊತೆ ಬೇಕೇ ಬೇಕು. ಸೋಮುವು ಕೂಡ ಶಾರ್ವರಿಯನ್ನು ಅಂಗೈ ಅಲ್ಲಿ ಇಟ್ಟು ನೋಡ್ಕೋತಾ ಇದ್ದ. ಹೀಗೆ ಮಕ್ಕಳಿಬ್ಬರೂ ಒಬ್ಬರನ್ನ ಬಿಟ್ಟು ಒಬ್ಬರು ಅಗಲದ ಹಾಗೆ ಬೆಳೆದು ದೊಡ್ಡವರು ಆದರು.

   ***** ***** ***** ***** ***** ***** ***** *****

ಸೋಮು ಕೃಷಿಯಲ್ಲಿ ಎಂಎಸ್ಸಿ ಮಾಡಿ ಚಂದ್ರಕಾಂತರ ಹೊಲ ತೋಟದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ. ಶಾರ್ವರಿ ಕೂಡಾ mbbs ಮಾಡಿ ಊರಿನ ಬಡ ಜನರ ಸೇವೆ ಮಾಡುವ ಕನಸು ಹೊತ್ತಿದ್ದಾಳೆ.

ಶಾರ್ವರಿಯ ಸಹಪಾಠಿ ಪಕ್ಕದ ಹುಳೆಗಾರಿನ ಪಟೇಲರ ಮಗ ಹರಿಯೊಂದಿಗೆ ಶಾರ್ವರಿಯ ವಿವಾಹವನ್ನು ಗುರು ಹಿರಿಯರು ನಿಶ್ಚಯಿಸುತ್ತಾರೆ. ಆದರೆ ಯಾರೊಬ್ಬರೂ ಮಕ್ಕಳ ಅಭಿಪ್ರಾಯ ಕೇಳೋದೆ ಇಲ್ಲ.

ಮದುವೆಯ ಪ್ರಸ್ತಾಪದ ನಂತರ ಶಾರ್ವರಿ ಪೂರ್ಣ ಮೌನಿ ಆಗುತ್ತಾಳೆ. ಸದಾ ಚಿನುಕುರುಳಿಯಂತೆ ಮನೆ ತುಂಬಾ ಓಡಾಡುತ್ತಾ ಎಲ್ಲರಿಗೂ ತರಲೆ ಮಾಡುತ್ತಾ ಸೋಮುವಿನೊಂದಿಗೆ ಕಿತ್ತಾಡುತ್ತಾ ಬಾಯಿಗೆ ಪುರುಸೊತ್ತೇ ಇಲ್ಲದೇ ಮಾತಾಡುತ್ತಾ ಮನೆ ಎಲ್ಲಾ ಗಲಿಬಿಲಿ ಮಾಡುವ ಶಾರ್ವರಿ ಪೂರ್ಣ ಮೌನದ ಮೊರೆ ಹೋಗಿದ್ದಾಳೆ. ಮದುವೆಯ ನಂತರ ನಮ್ಮನ್ನೆಲ್ಲಾ ಆಗಲಿ ಹೋಗುವ ಬೇಸರವೇ ಇದಕ್ಕೆ ಕಾರಣ ಎಂದು ಮನೆಯವರೂ ತಾವೇ ತೀರ್ಮಾನಕ್ಕೆ ಬರುತ್ತಾರೆ. ಇತ್ತ ಸೋಮುವೂ ಕೂಡಾ ಹೆಚ್ಚು ಹೊತ್ತು ಹೊಲ ತೋಟದ ಕೆಲಸದಲ್ಲೇ ನಿರತರಾಗಿದ್ದು ಮನೆಗೆ ಹೋಗುವುದು ಅಪರೂಪವಾಗಿತ್ತು.

ಗೌಡರ ಮನೆ ಮದುವೆ, ಅಲ್ಲದೇ ಊರಿನ ಎಲ್ಲರ ಕಣ್ಮಣಿ ಶಾರ್ವರಿ ಮದುವೆ ಅಂದ್ರೆ ಕೇಳಬೇಕೆ, ಊರಿಗೆ ಊರೇ ಮದುವಣಗಿತ್ತಿಯಂತೆ ಸಿಂಗಾರಗೊಂಡು ತಯಾರಾಗಿ ನಿಂತಿತು. ಎಲ್ಲಿ ನೋಡಿದರಲ್ಲಿ ತಳಿರು ತೋರಣ, ಹೂವಿನ ಸಿಂಗಾರ, ದೀಪಗಳ ಅಲಂಕಾರ, ಇಂದ್ರನ ಸ್ವರ್ಗವೇ ಧರೆಗಿಳಿದು ಸಿರಿವಂತೆಗೆ ಬಂದಂತಿದೆ...

ಮದುವೆ ಮನೆಯಲ್ಲಿ ಎಲ್ಲರದ್ದೂ ಸಡಗರ ಸಂಭ್ರಮ. ಎಲ್ಲರೂ ತಮ್ಮ ತಮ್ಮ ಕೆಲಸದಲ್ಲಿ ತೊಡಗಿ ಅತ್ತಿಂದಿತ್ತ ಇತ್ತಿಂದತ್ತ ಒಡಾಡುತ್ತಿದ್ದಾರೆ. ವರನ ಸ್ವಾಗತಕ್ಕೆ ಸಿದ್ಧತೆ ಬರದಿಂದ ಸಾಗುತ್ತಿದೆ. ವಧು ಸಿಂಗರಿಸಿಕೊಂಡು ಕೊಣೆಯಲ್ಲಿ ಕಾಯುತ್ತಿದ್ದಾಳೆ. ಗೆಳತಿಯರ ಛೇಡಿಸುವಿಕೆ, ಕೀಟಲೆ ಕಿತಾಪತಿಗಳ ಮಧ್ಯೆ ಆಗೊಮ್ಮೆ ಈಗೊಮ್ಮೆ ಮುಗುಳು ನಗುತ್ತಿದ್ದ ಅವಳ ಮನದ ವೇಧನೆ ಅಲ್ಲಿ ಬಲ್ಲವರಾರು... ಅವಳ ಮೌನಕ್ಕೆ ನಾಚಿಕೆಯ ರೂಪ ಕೊಟ್ಟವರು ಆಕೆಯ ಗೆಳತಿಯರು..

ವರನ ದಿಬ್ಬಣ ಬರುವ ಸಮಯ ಮೀರಿದರೂ ಇನ್ನೂ ಯಾರೂ ಬಂದಿಲ್ಲ. ಊರ ಹಿರಿಯರಿಗೆ ಏನೋ ಕೇಡಿನ ಸಂಶಯ. ಆದರೆ ಊರ ಗೌಡರ ಮನೆ ಮದುವೆ. ಮಾತನಾಡಲು ಅಂಜಿಕೆ. ಆಗ ಬಂತೊಂದು ಕಾರು. ಎಲ್ಲರೂ ಕಾತರಿಸಿ ನೋಡುವವರೆ. ಬಂದಿದ್ದೇನೋ ವರನ ಕಡೆಯವರೇ. ಅಂದರೆ ಅವರ ತಂದೆ. ಹುಳೆಗಾರೀನ ಪಟೇಲರು. ಆದರೆ ಅವರೊಟ್ಟಿಗೆ ದಿಬ್ಬಣವಿಲ್ಲ, ವರನೂ ಕೂಡಾ ಇಲ್ಲ.

ಸೋತ ಮುಖ ಹೊತ್ತು ಬಂದ ಪಟೇಲರು ಗೌಡರ ಕಾಲಿಗೆ ಬಿದ್ದು ಅಳಲು ಶುರು ಮಾಡಿದರು. ಎಲ್ಲರಿಗೂ ಆಶ್ಚರ್ಯ ಹಾಗೂ ಏನಾಯಿತೋ ಎಂಬ ಆತಂಕ. ಗೌಡರಿಗಿಂತ ಹಿರಿಕರಾದ ಪಟೇಲರ ಈ ವರ್ತನೆ ಒಂದು ಕ್ಷಣ ಎಲ್ಲರನ್ನೂ ದಿಘ್ಮೂಡರನ್ನಾಗಿಸಿತು. ತಕ್ಷಣ ಸಾವರಿಸಿಕೊಂಡ ಗೌಡರು ಪಟೇಲರನ್ನು ಹಿಡಿದೆತ್ತಿ ವಿಷಯ ಏನೆಂದು ಕೇಳಿದರು. ಇಡೀ ಮಂಟಪವೇ ಪಟೇಲರ ಮಾತು ಕೇಳಲು ಕಾತರಿಸಿ ಕಾಯುತ್ತಾ ನಿಂತಿದ್ದಾರೆ.

   ***** ***** ***** ***** ***** ***** ***** *****

"ಮೊದಲು ನನ್ನನ್ನು ಕ್ಷಮಿಸಿ ಚಂದ್ರಕಾಂತ್. ಮಕ್ಕಳು ಹಿರಿಯರ ಮಾತು ಮೀರರು ಎಂಬ ನಂಬಿಕೆ ಇಟ್ಟು ಈ ಮದುವೆ ಪ್ರಸ್ತಾಪ ನಿಮ್ಮ ಬಳಿ ತಂದೆ. ನಿಮ್ಮ ಬಂಧು ಆಗಲು ಆಶಿಸಿದೆ. ಆದರೆ ಮಕ್ಕಳು ದೊಡ್ಡವರಾಗಿದ್ದಾರೆ. ಜೊತೆಗೆ ಸ್ವತಂತ್ರರು ಆಗಿದ್ದಾರೆ ಎಂಬುದನ್ನು ಮರೆತು ಬಿಟ್ಟಿದ್ದೆ. ನಿಮ್ಮಂತ ಸುಶಿಕ್ಷಿತ ಬಂಧುಗಳ ಜೊತೆ ಸಂಭಂದ ಮಾಡುವ ಯೋಗ್ಯತೆ ನಮಗಿಲ್ಲ. ನಿಮ್ಮ ಮಗಳು ಪೂಟಕ್ಕಿಟ್ಟ ಚಿನ್ನ. ಅಂತಹ ಚಿನ್ನದ ಪುತ್ತಳಿ ಗೊಂಬೆಯನ್ನು ನಮ್ಮ ಮನೆ ತುಂಬಿಸಿಕೊಳ್ಳಲು ಸಾಧ್ಯವಾಗದ ನಿರ್ಭಾಗ್ಯರು ನಾವು" ಎಂದು ಮುಖ ಮುಚ್ಚಿ ಅಳಲು ಶುರು ಮಾಡಿದರು.

ಅವರ ಮಾತುಗಳ ತಾತ್ಪರ್ಯ ತಿಳಿಯದ ಪ್ರತಿಯೊಬ್ಬರೂ ಅವರ ಮುಂದಿನ ಮಾತುಗಳಿಗೆ ಕಾಯುತ್ತಿದ್ದರು. ಸ್ವಲ್ಪ ಸುಧಾರಿಸಿ ಪಟೇಲರು ತಮ್ಮ ಮಾತನ್ನು ಮುಂದುವರೆಸಿದರು,

"ಹರಿಗೆ ಈ ಮದುವೆ ಇಷ್ಟವಿಲ್ಲವಂತೆ. ಅವನು ಬೇರೊಂದು ಹುಡುಗಿಯನ್ನು ಮದುವೆಯಾಗಲು ತೀರ್ಮಾನಿಸಿ, ನಮಗೆ ಒಂದು ಮಾತು ಹೇಳದೆ ಪತ್ರ ಬರೆದಿಟ್ಟು ಓಡಿ ಹೋಗಿದ್ದಾನೆ. ಮೊದಲೇ ಈ ವಿಷಯ ನಮಗೆ ತಿಳಿಸಿದ್ದರೆ ನಾವು ಇನ್ನೊಂದು ಹೆಣ್ಣಿನ ಬದುಕಲ್ಲಿ ಆಟ ಆಡುವಂತಾಗುತ್ತಿರಲಿಲ್ಲ. ಅವನನ್ನು ಹುಡುಕಿ ಬೈದು ಬುದ್ಧಿ ಹೇಳಿ ಈ ಮದುವೆ ಮಾಡಬಹುದು. ಆದರೆ ಪ್ರೀತಿಯನ್ನು ಒತ್ತಾಯಕ್ಕೆ ಬರಿಸಲು ಸಾಧ್ಯವಿಲ್ಲ. ಇದರಿಂದ ನಿಮ್ಮ ಮಗಳು ಸಂತೋಷದಿಂದ ಇರಲು ಸಾಧ್ಯವಿಲ್ಲ. ಹಾಗಾಗಿ ನಿಮಗೆ ವಿಷಯ ತಿಳಿಸಲು ಬಂದೆ. ದಯಮಾಡಿ ನನ್ನನ್ನು ಕ್ಷಮಿಸಿ" ಎಂದು ಕೈ ಮುಗಿದು ನಿಂತರು.

ಇಡೀ ಮಂಟಪವೇ ಸ್ಮಶಾನ ಮೌನ. ಯಾರಿಗೆ ಏನು ಹೇಳುವುದು ಹೇಗೆ ಸಂಬಾಳಿಸುಹುದು ಎಂದೇ ಯಾರಿಗೂ ತಿಳಿಯದು. ಸ್ವಲ್ಪ ಸಾವರಿಸಿಕೊಂಡು ಚಂದ್ರಕಾಂತರೇ ಪಟೇಲರಿಗೆ ಕೈ ಮುಗಿದು ಬೀಳ್ಕೊಟ್ಟರು. ನಂತರ ಬಂದು ಸೋಮುವನ್ನು ಕರೆದು ಈ ಮದುವೆ ಯಾವ ಕಾರಣಕ್ಕೂ ನಿಲ್ಲದು. ಸಾನುನ ನೀನೇ ಮದುವೆ ಆಗ್ತಿಯ? ನನ್ನ ಮಗಳ ಜೀವನ ಕಾಪಡ್ತೀಯ? ನನ್ನ ಮಾನ ಉಳಿಸ್ತೀಯ? ಎಂದು ತಮ್ಮ ನಿರ್ಧಾರ ತಿಳಿಸಿ, ಎಲ್ಲರಿಗೂ ಮುಂದಿನ ತಯಾರಿ ಮಾಡಲು ತಿಳಿಸಿ ಸೋಮುವಿನ ಗೆಳೆಯರಿಗೆ ಸೊಮುವನ್ನು ಸಿಂಗರಿಸಲು ಹೇಳಿ ಕಳಿಸಿ ತಾವು ತಮ್ಮ ಪತ್ನಿ ಹಾಗೂ ಮಗಳ ಕೊಣೆಗೆ ಹೋಗುತ್ತಾರೆ.

ಗೌಡರ ಮಾತು ಕೇಳಿ ಸೋಮುವಿಗೆ ಒಂದು ಕ್ಷಣ ತನ್ನ ಹೃದಯ ಬಡಿತ ನಿಂತಂತ ಅನುಭವ. ತನಗೆ ಬದುಕು ಕೊಟ್ಟ ದೇವರ ಋಣ ತೀರಿಸಲು ಒಂದು ಅವಕಾಶ. ತನಗೆ ಹೊಸ ಜೀವನ ಕೊಟ್ಟ ತನ್ನ ಭಾಗ್ಯ ದೇವತೆಗೆ ಜೀವನ ಸಂಗಾತಿ ಆಗುವ ಅವಕಾಶ, ಆದರೆ ಇದಕ್ಕೆಲ್ಲಾ ನಾನು ಅರ್ಹನೇ? ಎಂಬ ದ್ವಂದ್ವ ಮನಸ್ಥಿತಿಲಿ ಹಸೆಮಣೆ ಏರುತ್ತಾನೆ.

ಇತ್ತ ಕೋಣೆಗೆ ಬಂದ ಗೌಡರು ಪತ್ನಿ ಮತ್ತು ಮಗಳಿಗೆ ವಿಷಯದ ಸೂಕ್ಷ್ಮತೆ ತಿಳಿಸಿ ತಮ್ಮ ನಿರ್ಧಾರ ತಿಳಿಸುತ್ತಾರೆ. ಒಂದು ಕ್ಷಣ ಬೇಸರ, ದುಃಖ ಆದರೂ ಮದುವೆ ನಿಲ್ಲದೇ ಯೋಗ್ಯ ವರನೇ ತಮ್ಮ ಮಗಳ ಕೈ ಹಿಡೀತಾ ಇರೋದು ಎಂದು ತಿಳಿದು ತಾಯಿ ಹೃದಯ ಸಂತೋಷಿಸಿತು.

ಶಾರ್ವರಿಗೆ ಎಲ್ಲವೂ ಅಯೋಮಯ. ತನ್ನ ಬದುಕಲ್ಲಿ ಏನಾಗುತ್ತಿದೆ ಎಂದೇ ತಿಳಿಯದೆ ಮತ್ತೂ ಮೌನವಾಗಿ ತಾಯ್ತಂದೆ ಜೊತೆ ಮಂಟಪಕ್ಕೆ ಬಂದು ಹಸೆಮಣೆ ಏರಿ ಬಾಲ್ಯ ಸಖ ಸೊಮುವಿನ ಮಡದಿ ಆದಳು.

ಸೋಮುವಿನ ಪತ್ನಿ ಆಗಿ ಅವನ ಮನೆ ಬೆಳಗಿದಳು. ಆದರೆ ಸರಿ ತಪ್ಪುಗಳ ಪರಾಮರ್ಶೆ ಇಬ್ಬರಲ್ಲೂ. ತಂದೆಯ ಒತ್ತಾಯಕ್ಕೆ ಮಣಿದು ಅವರ ಋಣ ತೀರಿಸಲು ಸೋಮು ತನ್ನನ್ನು ಮದುವೆ ಆಗಿದ್ದಾನೆ. ಅವನಲ್ಲಿ ನನ್ನ ಬಗ್ಗೆ ಒಲವಿಲ್ಲ. ಒಲವಿಲ್ಲದ ಜೀವನ ಸುಖಮಯ ಹಾಗೂ ನೆಮ್ಮದಿ ಇಂದ ಇರಲು ಹೇಗೆ ಸಾಧ್ಯ. ನನ್ನ ಜೀವನದ ದಿಕ್ಕೇ ಬದಲಾಯಿತು ಎಂದು ಕೋಣೆಯಲ್ಲಿ ಮಲಗಿ ಶಾರ್ವರಿ ಚಿಂತಿಸುತ್ತಿದ್ದರೇ,

ಇಷ್ಟ ಪಟ್ಟು ಸಹಪಾಠಿಯ ಜೊತೆಗಿನ ಬದುಕಿನ ಬಗ್ಗೆ ಸಾವಿರ ಕನಸು ಕಂಡು ಅನಿರೀಕ್ಷಿತ ಘಟನೆ ಇಂದ ಶಾರ್ವರಿ ನನ್ನ ಮದುವೆ ಆಗುವಂತಾಯಿತು. ಅವಳಲ್ಲಿ ನನ್ನ ಬಗ್ಗೆ ಒಲವಿಲ್ಲ. ಸಮಯದ ಕೈ ಗೊಂಬೆ ಆಗಿ ನನ್ನೊಟ್ಟಿಗೆ ಈ ವಿವಾಹ ಬಂಧನದಲ್ಲಿ ಸಿಲುಕುವಂತಾಗಿದೆ. ನಾನು ಅವಳಿಗೆ ಯಾವುದಕ್ಕೂ ಒತ್ತಾಯ ಮಾಡಬಾರದು. ಅವಳೆಂದಿದ್ದರೂ ನನಗೆ ಬದುಕು ಕೊಟ್ಟ ಆ ಪುಟ್ಟ ಶಾರ್ವರಿಯೇ. ಅವಳು ಎಂದೆಂದೂ ನಗು ನಗುತ್ತಾ ಬಾಳಬೇಕು. ನನಗೆ ಬದುಕು ಕೊಟ್ಟವಳ ಬದುಕು ನನ್ನಿಂದ ಹಾಳಾಗಬಾರದು ಎಂದು ಯೋಚಿಸುತ್ತ ಕುಳಿತಿದ್ದಾನೆ.

   ***** ***** ***** ***** ***** ***** ***** *****

ಯಾರಿಗೆ ಏನೇ ಆದರೂ ಆ ನೇಸರ ತನ್ನ ಕರ್ತವ್ಯದಿಂದ ವಿಮುಖನಾಗಲಾರ. ಮನ ಬಿಚ್ಚಿ ಮಾತನಾಡದ ಎರೆಡು ಆತ್ಮಗಳು ಮೌನ ತಾಳಿ ದಿನ ದೂಡುತ್ತಿದ್ದಾರೆ. ಕಾಲ ಯಾರ ಅಪ್ಪಣೆಗೂ ಕಾಯದು. ಎಲ್ಲವನ್ನೂ ಕಾಲವೇ ನಿರ್ಧರಿಸಬೇಕು. ಯಾರ ಬದುಕು ಯಾರೊಂದಿಗೋ.....

ಕೆಲವು ದಿನಗಳ ನಂತರ

ಶಾರ್ವರಿ ಮಧ್ಯಾಹ್ನ ಮಲಗಿದ್ದಾಗ ಸೋಮುವಿನ ಕೊಠಡಿಯ ಕಪಾಟಿನ ಮೇಲೆ ಎರೆಡು ಬೆಕ್ಕುಗಳು ಚಿನ್ನಾಟ ಆಡುತ್ತಾ ಗಲಾಟೆ ಮಾಡುತ್ತಿರುತ್ತವೆ. ಅವಗಳ ಶಬ್ದಕ್ಕೆ ಎಚ್ಚರ ಆದ ಶಾರ್ವರಿ ಅವನ್ನು ಓಡಿಸಲು ಪ್ರಯತ್ನಿಸಿದಾಗ ಅವು ಓಡಿ ಹೋಗುವ ಅವಸರದಲ್ಲಿ ಕಪಾಟಿನ ಮೇಲಿನ ಒಂದು ಪೆಟ್ಟಿಗೆ ಕೆಳಗೆ ಬೀಳುತ್ತದೆ. ಬೆಕ್ಕುಗಳಿಗೆ ಬೈಯುತ್ತಾ ಆ ಪೆಟ್ಟಿಗೆಯನ್ನು ಎತ್ತಿ ಇಡಲು ಹೋದ ಶಾರ್ವರಿಗೆ ಒಂದು ಡೈರಿ ಕಾಣುತ್ತದೆ. ನೋಡಿ ಕುತೂಹಲಕ್ಕೆ ಪುಟ ತೆರೆದಾಗ ಮೊದಲ ಪುಟದಲ್ಲಿ "ನನ್ನೊಲವಿನ ಭಾಗ್ಯ ದೇವತೆ ನನ್ನ ಹೃದಯ ನಿವಾಸಿನಿ" ಎಂದು ಬರೆದಿರುತ್ತದೆ.

ಅದನ್ನು ನೋಡಿ ಶಾರ್ವರಿಗೆ ಒಂದು ಕ್ಷಣ ನಿಂತ ನೆಲವೇ ಕುಸಿದಂತೆ ಭಾಸವಾಗುತ್ತದೆ. ಅಂದರೆ ಇದು ಸೋಮುವಿನ ಡೈರಿ. ಅವನು ಬೇರೆ ಯಾರನ್ನೋ ಮೆಚ್ಚಿದ್ದ. ಅಪ್ಪನ ಒತ್ತಾಯಕ್ಕೆ, ಋಣ ಸಂದಾಯಕ್ಕೆ ನನ್ನನ್ನು ವಿವಾಹ ಆಗಿದ್ದಾನೆ. ಅವನ ಮನದಲ್ಲಿ ನನಗೆ ಯಾವ ಸ್ಥಾನವೂ ಇಲ್ಲ ಎಂದು ಅವಳ ಮನ ಶೋಕಿಸಿತು. ಅದನ್ನು ಹಾಗೇ ಮುಚ್ಚಿ ಎತ್ತಿ ಇಡಲು ಹೋದವಳು, ಒಮ್ಮೆ ಅದನ್ನು ತೆಗೆದು ನೋಡಿ ಅವನ ಮನ ಕದ್ದ ಚೋರಿ ಯಾರು ಎಂದು ತಿಳಿದುಕೊಳ್ಳಲೆ ಎಂದು ಯೋಚಿಸಿದಳು. ಛೇ ಛೇ ನನ್ನದು ಇದೆಂತಾ ಹುಚ್ಚು ಯೋಚನೆ, ಇನ್ನೊಬ್ಬರ ಡೈರಿ ಓದುವುದು ಅಕ್ಷಮ್ಯ ಅಪರಾಧ ಎಂದು ಅವಳ ಮನ ಚುಚ್ಚಿತು. ಆದರೆ ಬುದ್ದಿ ನೋಡು ಪರವಾಗಿಲ್ಲ. ಅವನು ನಿನ್ನ ಗಂಡ, ಮೇಲಾಗಿ ಅವನು ನಿನ್ನ ಬಾಲ್ಯದ ಗೆಳೆಯ. ನಿಮ್ಮ ನಡುವೆ ಈ ಮುಚ್ಚು ಮರೆ ಎಂತದ್ದು ಎಂದಿತು.

ಆ ಮಾತು ಯಾಕೋ ಅವಳ ಮನ ಚುಚ್ಚಿತು. ಹೌದು. ನಾನು ಸೋಮುವೀನ ಬಾಲ್ಯ ಗೆಳತಿ. ಅವನು ಒಂದೇ ಒಂದು ಸಾರಿಯೂ ನನ್ನಲ್ಲಿ ಅವನ ಒಲವ ಬಗ್ಗೆ ಹೇಳೆ ಇಲ್ಲ. ಅಂದರೆ ಅವನಿಗೆ ನಾನು ಸಾಮಾನ್ಯ ಗೆಳತಿ ಕೂಡಾ ಅಲ್ಲ ಎಂದು ಅವಳ ಮನ ಮೂಕವಾಗಿ ರೋಧಿಸಿತು. ಕೆಲ ಸಮಯದ ನಂತರ ಸಾವರಿಸಿಕೊಂಡು, ಅವನ ಒಲವಿನ ಗೆಳತಿ ಯಾರೆಂದು ನಾ ತಿಳಿದು ಅವನ ಬದುಕಿಗೆ ಅವಳ ಜೊತೆ ಮಾಡಿ ಅವನಿಂದ, ಅವನ ಬದುಕಿನಿಂದ ನಾನು ಶಾಶ್ವತವಾಗಿ ದೂರ ಸರಿಯಬೇಕು. ಇದೇ ಎಲ್ಲರಿಗೂ ಒಳ್ಳೆಯದು. ಸೋಮುವಿನ ಜೀವನ ಹಾಳು ಮಾಡುವ ಅಧಿಕಾರ ನಮಗಿಲ್ಲ ಎಂದು ಒಂದು ಗಟ್ಟಿ ನಿರ್ಧಾರಕ್ಕೆ ಬಂದು ಆ ಡೈರಿ ಓದಲು ಶುರು ಮಾಡುತ್ತಾಳೆ.

ಡೈರಿ ಓದುತ್ತಾ ಹೋದಂತೆ ಶಾರ್ವರಿಯ ಮುಖ ಕಮಲದಂತೆ ಅರಳುತ್ತದೆ. ಅವಳಿಗೆ ಸಂತೋಷಕ್ಕೆ ಹುಚ್ಚೆದ್ದು ಕುಣಿಯುವಂತೆ ಆಗುತ್ತದೆ. ಅದನ್ನು ನಂಬಲೇ ಅವಳಿಂದ ಸಾಧ್ಯವಾಗದು. ತಾನು ನೋಡುತ್ತಿರುವುದು ಓದುತ್ತಿರುವುದು ನಿಜವೋ ಭ್ರಮೆಯೋ ತಿಳಿಯದು. ಸೋಮು ನಿನ್ನ ಪ್ರೀತಿ ನಿನಗೆ ಖಂಡಿತಾ ಸಿಗುತ್ತದೆ. ನನ್ನ ಬಾಲ್ಯ ಸ್ನೇಹಿತ ನನ್ನ ಸೋಮು ಇನ್ನು ತನ್ನ ಜೀವನದಲ್ಲಿ ಯಾವಾಗಲೂ ಸಂತೋಷದಿಂದ ಇರುವಂತಾಗುತ್ತೆ. ನಾನು ನಿನ್ನ ಕಳೆದು ಹೋದ ಸಂತೋಷವನ್ನು ನಿನಗೆ ಹಿಂತಿರುಗಿಸಿ ಕೊಡುತ್ತೇನೆ ಎಂದು ರೂಮಿನ ತುಂಬಾ ಪುಟ್ಟ ಮಗುವಿನಂತೆ ಕುಣಿದಾಡುತ್ತಾಳೆ.

ರಾತ್ರಿ ಊಟದ ಸಮಯಕ್ಕೆ ಮನೆಗೆ ಬಂದ ಸೋಮುವಿಗೆ ಶಾರ್ವರಿ ವಿವಾಹ ಪೂರ್ವ ಶಾರ್ವರಿನ ನೋಡಿದಂತೆ ಭಾಸವಾಗುತ್ತದೆ. ಮನೆ ತುಂಬಾ ಕಳಕಳಿ ಯಾಗಿ ಓಡಾಡುವ ಶಾರ್ವರಿಯನ್ನು ಕಣ್ ತುಂಬಿಕೊಳ್ಳುವುದು ಅವನಿಗೆ ಹಬ್ಬ. ವಿವಾಹ ನಂತರ ತನ್ನ ಸ್ನೇಹಿತೆ ಯಾವಾಗಲೂ ಏನನ್ನೋ ಕಳೆದುಕೊಂಡವರಂತೆ ಚಿಂತೆಯಲ್ಲೇ ಮುಳುಗಿದ್ದನ್ನು ಕಂಡು ಅವನ ಮನ ಮರುಗುತ್ತಿತ್ತು. ಆದರೆ ಇಂದು ತನ್ನ ಭಾಗ್ಯ ದೇವತೆ ನಗು ಸಂತೋಷ ಕಂಡು ಅವನ ಮನ ತುಂಬಿ ಬಂತು. ಅವನ ಕಣ್ ತುಂಬಿ ಬಂದಿತು.

"ಸೋಮು ಬಿಸಿ ನೀರು ರೆಡಿ ಇದೆ, ಬೇಗ ಫ್ರೆಷ್ ಆಗಿ ಬಾ. ನಾವು ಇವತ್ತು ಬೆಳದಿಂಗಳ ಊಟ ಮಾಡುವ. ನಿನಗೆ ಬೆಳದಿಂಗಳ ಊಟ ತುಂಬಾ ಇಷ್ಟ ಅಲ್ವಾ, ನಾನು ಟೆರೆಸ್ ಮೇಲೆ ಎಲ್ಲಾ ರೆಡಿ ಮಾಡಿದ್ದೇನೆ ಬೇಗ ಬಾ". ಎಂದು ಒಂದೇ ಉಸಿರಲ್ಲಿ ಹೇಳಿ, "ಹಾ ಸೋಮು ಬೆಡ್ ಮೇಲೆ ನಿಂಗೆ ಬಟ್ಟೆ ಇಟ್ಟಿದೀನಿ ಅದನ್ನೇ ಹಾಕಿ ಬಾ" ಎಂದು ಆಜ್ಞೆ ಮಾಡಿ ಅವನು ಉತ್ತರಿಸುವ ಮೊದಲೇ ಅಡುಗೆ ಮನೆ ಕಡೆ ಓಡಿದಳು.

ಏನಾಗಿದೆ ಇವತ್ತು ನನ್ನ ಸಾನು ಬೇರೆ ರೀತಿಯಲ್ಲಿ ಇದಾಳೆ. ನಾನ್ ಏನಾದ್ರೂ ಕನಸು ಕಾಣ್ತಾ ಇದೀನ ಎಂದು ಸ್ವಗತ ನುಡಿದು. ಏನೋ ಒಟ್ಟಿನಲ್ಲಿ ನನ್ನ ಸಾನು ಯಾವಾಗಲೂ ಖುಷಿ ಆಗಿದ್ದರೆ ಅಷ್ಟೇ ಸಾಕು ಎಂದು ರೂಮಿಗೆ ಹೋಗಿ ಸ್ನಾನ ಮಾಡಿ ಸಾನು ತೆಗೆದಿರಿಸಿದ್ದ ಬಟ್ಟೆ ತೊಟ್ಟು ಟೆರೆಸ್ ಕಡೆ ಹೊರಟ.

ಟೆರೆಸ್ ಗೆ ಬಂದ ಸೋಮು ಒಂದು ಕ್ಷಣ ಅವಕ್ಕಾಗಿ ನಿಂತು ಬಿಟ್ಟ. ಅಲ್ಲಿನ ಅಲಂಕಾರ ನೋಡಿ ಅವನು ಮೂಕವಿಸ್ಮಿತ. ಸುತ್ತಲೂ ಬಣ್ಣ ಬಣ್ಣದ ಲೈಟಿಂಗ್ಸ್ ಹಾಕಿ, ಅಲ್ಲಲ್ಲಿ ಹಾರ್ಟ್ ಶೇಪ್ ಬಲೂನ್ ಇಂದ ದೆಕೋರೆಟ್ ಮಾಡಿ, ಗುಲಾಬಿ ಹೂಗಳಿಂದ ಅಲಂಕರಿಸಿ, ಎಲ್ಲೆಲ್ಲೂ ಸುವಾಸನೆ ಬೀರುವಂತೆ ಸಿಂಗರಿಸಲಾಗಿತ್ತು. ಮಧ್ಯದಲ್ಲಿ ಒಂದು ಟೇಬಲ್ ಮೇಲೆ ಗುಲಾಬಿ ದಳದಿಂದ ಹಾರ್ಟ್ ಶೇಪ್ ಬರೆದು, ಸುತ್ತಲೂ ಕ್ಯಾಂಡಲ್ ಹಚ್ಚಿಟ್ಟು, ಎರೆಡು ಕುರ್ಚಿ ಇಟ್ಟು ತಟ್ಟೆ ರೆಡಿ ಮಾಡ್ತಾ ಸೊಮುವಿಗೆ ಬೆನ್ನು ಮಾಡಿ ನಿಂತಿದ್ದಾಳೆ ಅವನ ಭಾಗ್ಯ ದೇವತೆ.

ಸೋಮುಗೆ ತಾನು ಬೇರೆ ಪ್ರಪಂಚಕ್ಕೆ ಬಂದಂತೆ ಭಾಸವಾಗುತ್ತದೆ. ಸಾನು ಏನಿದು ಎಂದು ಆಶ್ಚರ್ಯದಿಂದ ಕೇಳುತ್ತಾನೆ. ಯಾಕೆ ಸೋಮು ಇಷ್ಟ ಆಗ್ಲಿಲ್ಲ ಅಂತ ಅನುಮಾನ ವ್ಯಕ್ತಪಡಿಸುತ್ತಾಳೆ. ಅವಳ ಸಪ್ಪೆ ಮುಖ ನೋಡಿ ಸೋಮು ಗೆ ಬೇಸರ ಆಗುತ್ತದೆ. ಹಾಗಲ್ಲ ಸೋನು ನಂಗೆ ತುಂಬಾ ಇಷ್ಟ ಆಯ್ತು ಅಂದ ಕೂಡಲೇ ಅವಳ ಮುಖ ಅರಳುತ್ತದೆ.

ಅವನನ್ನು ಕುರ್ಚಿಯ ಮೇಲೆ ಕೂರಿಸಿ, ಸೋಮು ಇವತ್ತು ನಾನೇ ನಿನಗೆ ಕೈ ತುತ್ತು ನೀಡಲಾ ಎಂದು ಬೇಡಿಕೆ ಇತ್ತಳು. ಅವಳ ಬೇಡಿಕೆ ಧ್ವನಿ ಕೇಳಿ ಅವನಿಗೆ ಕಸಿವಿಸಿ ಆಗಿ, ಸರಿ ಎಂದು ತಲೆ ಅಲ್ಲಾಡಿಸುತ್ತಾನೆ. ಸಾನು ಎಲ್ಲಾ ಅವನಿಷ್ಟದ ಅಡುಗೆಯನ್ನೇ ಮಾಡಿದ್ದಳು. ಭಾಗ್ಯ ದೇವತೆ ನೀಡಿದ ಕೈ ತುತ್ತು ಎರೆಡು ತುತ್ತು ಹೆಚ್ಚೇ ಹೊಟ್ಟೆ ಸೇರಿತು. ಅವಳು ತಿನ್ನಿಸಿದಷ್ಟು ಅವ ಬೇಡ ಎನ್ನದೆ ವಿಧೇಯನಾಗಿ ತಿಂದನು. ಮಕ್ಕಳಿಗೆ ಕತೆ ಹೇಳುತ್ತಾ ಊಟ ಮಾಡಿಸುವಂತೆ ಏನೇನೋ ಮಾತಾಡುತ್ತಾ ಊಟ ಮಾಡಿಸುತ್ತಾ ಇದ್ದರೆ, ಅವಳನ್ನೇ ನೋಡುತ್ತಾ ಅವಳು ಕೊಟ್ಟದ್ದನ್ನು ಸುಮ್ಮನೆ ತಿನ್ನುವ ಕಾಯಕ ಮಾತ್ರ ಸೋಮುದು. ಅವಳ ಯಾವ ಮಾತು ಅವನ ಕರ್ಣ ದಾಟವು. ಅವನ ಕಣ್ಣಲ್ಲಿ ಆನಂದ ಭಾಷ್ಪ ಕಣ್ ತುಂಬಿ ಹೊರ ಬರಲು ತಾ ಮುಂದು ನಾ ಮುಂದು ಎಂದು ಪೈಪೋಟಿ ಮಾಡುತ್ತಾ ಯಜಮಾನನ ಆಜ್ಞೆಗಾಗಿ ಕಾಯುತ್ತಿವೆ.

ಸಾನು ನಾನು ನಿಂಗೆ ತಿನ್ನಿಸ್ಲಾ ಎಂದು ಅಂಜಿಕೆಯ ಧ್ವನಿಯಲ್ಲಿ ಕೇಳಿದ. ಅವಳೂ ತಾನು ಕೇಳುತ್ತಿರುವುದು ನಿಜವಾ ಎಂದು ಒಂದು ಕ್ಷಣ ಅವನ ಮುಖ ನೋಡಿ ಹೂ ಎಂದು ತಲೆ ಅಲ್ಲಾಡಿಸಿದಳು. ಅವನು ಅವಳಿಗೆ ತುತ್ತು ನೀಡಿದ. ಅವಳೂ ಸಂತೃಪ್ತಿ ಇಂದ ಅವ ಕೊಟ್ಟಷ್ಟನ್ನೂ ತಿಂದಳು. ಇಬ್ಬರ ಕಣ್ಣಲ್ಲೂ ಸಂತೃಪ್ತಿಯ ಭಾವ. ಅವಳೇ ಮೊದಲು ಎಚ್ಚೆತ್ತು, ಇಲ್ಲೇ ಇರು ಸೋಮು ನಾನು ಇದೆಲ್ಲ ಒಳಗೆ ಇಟ್ಟು ಬರುತ್ತೇನೆ ಎಂದು ಹೋದಳು. ಇತ್ತ ತನಗೆ ಆದ ಸಂತೋಷದ ಕ್ಷಣಗಳನ್ನು ಆ ಬಾನ ಚಂದಿರನೊಂದಿಗೆ ಮೆಲುಕು ಹಾಕುತ್ತಾ ನಿಂತಿದ್ದನು.

ಎಲ್ಲಾ ತೆಗೆದಿರಿಸಿ, ತನ್ನ ಕೆಲಸ ಮುಗಿಸಿ ಟೆರೆಸ್ ಮೇಲೆ ಬಂದ ಶಾರ್ವರಿ ತಾನು ಗೋಡೆಗೆ ಒರಗಿ ಕೂತು ಕಾಲು ಚಾಚಿ ಕುಳಿತು, ಸೋಮುವನ್ನು ಕರೆದು ಅವಳ ಪಕ್ಕ ಕೂರುವಂತೆ ಹೇಳಿ, ಅವನ ತಲೆಯನ್ನು ತನ್ನ ಮಡಿಲಿಗೆ ಹಾಕಿಕೊಂಡು ಅವನ ತಲೆ ಕೂದಲಲ್ಲಿ ಬೆರಳು ಆಡಿಸಿದಳು. ಅವನಿಗೆ ಇದೆಲ್ಲ ಅಯೋಮಯ. ಏನಾಗುತ್ತಿದೆ ಎಂಬ ವಾಸ್ತವ ಕಲ್ಪನೆಯೇ ಇಲ್ಲ. ಎಲ್ಲಾ ಕನಸಿನಂತೆ.

"ಸೋಮು ನಾನು ನಿನ್ನ ಬಾಳಲ್ಲಿ ಏನು"?

ತಕ್ಷಣ ಬಂದ ಪ್ರಶ್ನೆ ಇಂದ ಸ್ವಲ್ಪ ವಿಚಲಿತನಾದ ಸೋಮು, "ನೀನು ನನ್ನ ಭಾಗ್ಯ ದೇವತೆ, ನನ್ನ ಪಾಲಿಗೆ ಎಲ್ಲವೂ ನೀನೇ. ಇಂದು ನಾನು ಏನಾಗಿದ್ದರೂ ಅದು ನಿನ್ನ ಬಿಕ್ಷೆ. ಎಲ್ಲೋ ರಸ್ತೆ ಬದಿ ಬಿದ್ದಿದ್ದ ನನ್ನನ್ನು ಮನೆಗೆ ಕರೆತಂದು ಒಂದು ಸುಂದರ ಜೀವನ ರೂಪಿಸಿ ಬದುಕು ಕಟ್ಟಿ ಕೊಟ್ಟ ದೇವತೆ ನೀನು. ಹೆಚ್ಚಾಗಿ ನನ್ನ ಜೀವದ ಗೆಳತಿ ನೀನು" ಎಂದು ಹೇಳುವಾಗ ಅವನ ಧ್ವನಿ ಗದ್ಗದಿತವಾಯಿತು.

"ಅಷ್ಟೇನಾ ಸೋಮು"?

ಸೋಮು ಗೆ ಏನು ಹೇಳಬೇಕೋ ತಿಳಿಯದು. ಸುಮ್ಮನೆ ಶಾರ್ವರಿ ಮಡಿಲಲ್ಲಿ ಮುಖ ಮುಚ್ಚಿ ಒಳಗೆ ದುಃಖಿಸಿದನು.

"ಯಾಕೆ ಸೋಮು ನನ್ನ ಪ್ರಶ್ನೆಗೆ ಉತ್ತರ ಕೊಡಲಿಲ್ಲ"?

"ಇದೇನು ಸಾನು ಹೀಗೆ ಕೇಳ್ತಾ ಇದೀಯ? ಏನಾಗಿದೆ ನಿನಗೆ? ನಡಿ ಚಳಿ ಜಾಸ್ತಿ ಆಗ್ತಾ ಇದೆ ಮಲಗೋಣ. ನಿಂಗೆ ಶೀತ ಆಗುತ್ತೆ" ಅಂತ ಮಾತು ಮರೆಸಲು ನೋಡಿದ

"ಸಾಕು ಸೋಮು ಇನ್ನಾದರೂ ನಿನ್ನ ನಾಟಕದ ಮುಖವಾಡ ಕಿತ್ತೋಗೆ. ನಿನ್ನ ಮನಸಿನ ಮಾತನ್ನು ಹೊರ ಹಾಕು. ಇನ್ನು ಎಷ್ಟು ದಿನ ಅಂತ ನನ್ನ ಕತ್ತಲೆಯಲ್ಲೇ ಇಡುವ ಪ್ರಯತ್ನ. ನಾನು ನಿನ್ನ ಬಾಲ್ಯ ಗೆಳತಿ ಅಂತ ಹೇಳಿದೆ ಅಲ್ವಾ, ನನ್ನ ಬಳಿ ಯಾಕೆ ನಿನ್ನ ಒಲವು ಹೇಳಲಿಲ್ಲ. ಅಪ್ಪನ ಒತ್ತಾಯಕ್ಕೆ ನನ್ನ ವಿವಾಹ ಆಗುವ ಅವಶ್ಯಕತೆ ಏನಿತ್ತು. ನಿನ್ನ ಪ್ರೀತಿಗೆ ಮೋಸ ಮಾಡಿ ನನ್ನನ್ನು ಏಕೆ ಮದುವೆ ಆದೆ, ನಿನ್ನ ಪ್ರೀತಿಯ ಬಗ್ಗೆ ಒಂದು ಮಾತು ನನ್ನಲ್ಲಿ ಹೇಳಿದ್ದರೆ ನೀನು ನಾನು ಇಷ್ಟು ಮೂಕರೋಧನೆ ಅನುಭವಿಸುವ ಪ್ರಮೇಯವೇ ಇರಲಿಲ್ಲ.ಇನ್ನೂ ನಿನಗೆ ಕೊನೆ ಅವಕಾಶ ನಿನ್ನ ಒಲವಿನ ಗೆಳತಿಯೊಂದಿಗೆ ಸುಖವಾಗಿರು. ನಾನು ನಿನಗೆ ತೊಂದರೆ ಮಾಡಲಾರೆ. ನನ್ನಿಂದ ನನ್ನ ಬಾಲ್ಯ ಸಖನ ಸಂತೋಷಕ್ಕೆ ಯಾವುದೇ ಕುಂದು ಬಾರದು" ಇಷ್ಟು ಹೇಳುವ ಹೊತ್ತಿಗೆ ಅವಳ ಗಂಟಲ ಸೆರೆ ಉಬ್ಬಿ ಧ್ವನಿ ಗದ್ಗದಿತವಾಯಿತು.

ಅವಳ ಮಾತುಗಳನ್ನೇ ಕೇಳುತ್ತಾ ಅವಳ ಮಡಿಲಲ್ಲಿ ಮಲಗಿದ್ದ ಸೋಮು ಗಕ್ಕನೆ ಎದ್ದು ಕೂತು "ಸಾನು ನೀನು ಏನು ಹೇಳ್ತಾ ಇದ್ದೀಯ, ಯಾವ ಪ್ರೀತಿ, ಯಾವ ಹುಡುಗಿ, ನನ್ನ ಬಾಳಲ್ಲಿ ಯಾವ ಹುಡುಗಿಯೂ ಪ್ರವೇಶಿಸಿಲ್ಲ. ನನ್ನ ಬಾಲ್ಯ ದಿಂದ ಇಲ್ಲಿಯವರೆಗೂ ನನಗಿರುವ ಏಕೈಕ ಗೆಳತಿ ನೀನು ಒಬ್ಬಳೇ"...

ಅವನ ಮಾತನ್ನು ಅರ್ಧಕ್ಕೇ ತಡೆದು, "ಗೆಳತಿ ಮಾತ್ರ ಅಲ್ವಾ ಸೋಮು, ನೀನು ನಿಜವಾಗಲೂ ಯಾರನ್ನೂ ಪ್ರೇಮಿಸಿಲ್ಲ ಎಂದು ನನ್ನ ಮೇಲೆ ಆಣೆ ಮಾಡು" ಎಂದು ಕೈ ಚಾಚುತ್ತಾಳೆ

"ಇದೇನು ಹುಚ್ಚು ಸಾನು ನಿನಗೆ, ಇಂದು ಹೀಗೇಕೆ ಮಾಡುತ್ತಿರುವೆ. ಇಲ್ಲ. ನಾನು ಆಣೆ ಮಾಡಲಾರೆ"

"ಹಾಗಾದರೆ ನೀನು ಒಬ್ಬಳನ್ನು ಪ್ರೆಮಿಸಿದ್ದು ನಿಜ. ನನ್ನ ಊಹೆ ಸತ್ಯ. ನೋಡು ಸೋಮು ಯಾರು ಏನು ಎನ್ನುತ್ತಾರೆ ಅನ್ನೋ ಯೋಚನೆ ನಿನಗೆ ಬೇಡಾ, ಇನ್ನು ಮುಂದೆ ನೀನು ನಿನ್ನ ಒಲವಿನ ಗೆಳತಿಯೊಂದಿಗೆ ನಿನ್ನ ಪ್ರೀತಿಯೊಂದಿಗೆ ನಿನ್ನ ಮುಂದಿನ ಭವಿಷ್ಯ ಸುಖವಾಗಿರಲಿ. ನೀನು ನನ್ನ ಬಾಲ್ಯ ಸ್ನೇಹಿತ. ನಿನ್ನ ಸುಖ ನನಗೆ ಮುಖ್ಯ"

ಇನ್ನೂ ಏನನ್ನೋ ಹೇಳುತ್ತಿದ್ದವಳ ಮಾತು ತಡೆದ ಸೋಮು ಅವಳನ್ನು ಗಟ್ಟಿಯಾಗಿ ತಬ್ಬಿಕೊಂಡು "ನನ್ನ ಕ್ಷಮಿಸು ಸಾನು. ನನ್ನ ಯೋಗ್ಯತೆಗೆ ಮೀರಿ ನಾ ಆಸೆ ಪಟ್ಟೆ, ಬದುಕು ನೀಡಿದ ಮನೆಯ ಸಂತೋಷ ನನ್ನಿಂದ ಹಾಳಾಗಬಾರದು. ಬದುಕು ನೀಡಿದ ಭಾಗ್ಯ ದೇವತೆ ಯನ್ನು ಒಲವಿನ ದೇವತೆಯಾಗಿ ಬಯಸಿದ್ದು ನನ್ನ ತಪ್ಪು. ನನ್ನನ್ನು ಕ್ಷಮಿಸು ಎಂದು ಕೇಳಲು ನನಗೆ ಅರ್ಹತೆ ಇಲ್ಲ. ಹೌದು ಸಾನು ನಾನು ಪ್ರಿಮಿಸಿದ್ದು ನಿನ್ನನ್ನೇ. ನಿನ್ನ ಮೊದಲ ದಿನ ಕಂಡಾಗಲೇ ನಂಗೆ ನೀನು ಹಸಿದ ಹೊಟ್ಟೆ ತುಂಬಿಸಿ ನನ್ನ ಪಾಲಿನ ಅನ್ನಪೂರ್ಣೆ ಆದೆ. ಅನಾಥನಾದ ನನ್ನ ಮನೆಗೆ ಕರೆ ತಂದು ಒಂದು ಕುಟುಂಬ ಕೊಟ್ಟು ಭಾಗ್ಯ ದೇವತೆ ಆದೆ. ಜೊತೆಗೆ ಕೂಡಿ ಆಡಿ ಕಷ್ಟ ಸುಖ ಕೇಳುವ ಸ್ನೇಹಿತೆ ಆದೆ. ನನ್ನ ಪ್ರತಿ ಹಂತದಲ್ಲೂ ನನ್ನ ಜೊತೆಗಾತಿ ಆದೆ. ಅಂತಹ ನಿನ್ನನ್ನು ಈ ಪಾಮರ ಬಯಸುವುದು ತಪ್ಪು. ಅದು ನನಗೆ ತಿಳಿದೂ ನಿನ್ನ ಹಾಗೂ ಮನೆಯವರ ನಂಬಿಕೆಗೆ ನಾನು ದ್ರೋಹ ಮಾಡಿದ್ದೇನೆ. ನನ್ನಂತ ದುಷ್ಟ ಜೀವಿ ಮತ್ತೊಂದು ಇಲ್ಲ. ನನ್ನಂತವನಿಗೆ ಬದುಕಲು ಯೋಗ್ಯತೆ ಇಲ್ಲ" ಎಂದು ಎದ್ದು ಅಳುತ್ತಾ ಅವಳ ಪ್ರತಿಕ್ರಿಯೆಗೂ ಕಾಯದೇ ಸರಸರ ಮೆಟ್ಟಿಲು ಇಳಿದು ತನ್ನ ಕೋಣೆಗೆ ಓಡಿ ಹೋದ.

ಇತ್ತ ಅವನ ಬಾಯಿ ಇಂದಲೇ ಅವನಿಗೆ ತನ್ನ ಮೇಲಿನ ಒಲವಸುಧೆ ತಿಳಿದು ಖುಷಿಯಾಗಿ, ಅವನ ಹಿಂಜರಿಕೆಯ ಕಾರಣ ತಿಳಿದು ಹುಚ್ಚು ಸೋಮು ಎಂದು ನಗುತ್ತಾ ರೂಮ್ ಕಡೆ ಹೋಗುತ್ತಾಳೆ.

ಇತ್ತ ರೂಮಿಗೆ ಬಂದ ಸೋಮು ಕೋಣೆಯ ಅಲಂಕಾರ ಕಂಡು ಗಾಬರಿಯಾಗಿ ಹಿಂದೆ ತಿರುಗಿದಾಗ ಅಲ್ಲೇ ನಗುತ್ತಾ ನಿಂತ ತನ್ನ ಹೃದಯ ನಿವಾಸಿನಿ ಕಂಡು, ಒಂದೆರೆಡು ಕ್ಷಣಗಳ ಹಿಂದೆ ತಾನು ಅವಳ ತಬ್ಬಿ ಹಿಡಿದದ್ದು ನೆನಸಿ ನಾಚಿಕೆಯಾಗಿ ತಲೆ ತಗ್ಗಿಸಿ ನಿಲ್ಲುತ್ತಾನೆ.

"ತಬ್ಕೊಳೋವಾಗ ಇಲ್ದೆ ಇರೋ ನಾಚಿಕೆ ಇವಾಗ ಯಾಕೋ"? ಎಂದು ಚೇಡಿಸಿ ಅವನ ಕೈ ಹಿಡಿದು ಕೋಣೆಗೆ ಕರೆದೊಯ್ಯುತ್ತಾಳೆ

"ಸೋಮು ನೀನು ನನ್ನ ಪ್ರೀತಿ ಮಾಡಿದ್ದು ತಪ್ಪಲ್ಲ. ಆದ್ರೆ ಅದನ್ನ ಮುಚ್ಚಿಟ್ಟು ನೀನು ನೋವು ತಿನ್ನೋದಲ್ದೆ ನನ್ನನ್ನು ನೋಯಿಸಿದ್ದು ತಪ್ಪು. ಅದಕ್ಕೆ ನಿನಗೆ ಶಿಕ್ಷೆ ಆಗಲೇ ಬೇಕು"

"ಏನು ಹೇಳು ಸಾನು. ನಾ ಮಾಡಿದ ತಪ್ಪಿಗಾಗಿ ನೀ ಏನೇ ಶಿಕ್ಷೆ ಕೊಟ್ಟರೂ ನಾನು ಸ್ವೀಕರಿಸುತ್ತೇನೆ"p

"ಮಾತು ತಪ್ಪಬಾರದು"

"ಖಂಡಿತ ಇಲ್ಲ"

"ನಾನು ಏನು ಕೇಳಿದ್ರೂ ಕೊಡ್ತೀಯಾ"

"ಶಿಕ್ಷೆ ಕೊಡು ಅಂದ್ರೆ ಏನೋ ಕೇಳ್ತೀನಿ ಅಂತಿದೀಯ"

"ಹೂ ಪೆನಾಲ್ಟಿ ಅನ್ಕೊ"

"ಸರಿ ಹೇಳು. ಏನು ಬೇಕು. ಅದೆಷ್ಟೇ ಕಷ್ಟ ಆದ್ರೂ ನೀ ಕೇಳಿದ್ದು ನಿಂಗೆ ತಂದು ಕೊಡ್ತೀನಿ"

"ಸರಿ, ಆಮೇಲೆ ಆಗಲ್ಲ ಅಬ್ಬಾರ್ದು"

"ಇಲ್ವೇ, ಹೇಳಲ್ಲ. ಕೇಳು"

"ನಗಬಾರದು"

"ಇಲ್ಲ ಹೇಳಮ್ಮ"

"ಅದೂ.... ಅದೂ.... ನಂಗೆ...."

"ಹೂ ಮುಂದೆ ಹೇಳು"

"ನಂಗೆ ಒಂದು ಮುತ್ತು ಬೇಕು" ಬೇಗ ಹೇಳಿ ತನ್ನೆರಡು ಕೈ ಇಂದ ಮುಖ ಮುಚ್ಚಿದಳು

ಅವಳು ಕೇಳಿದ್ದು ಏನು ಎಂದು ಅವನಿಗೆ ಅರಿವಾಗಲು ಒಂದು ಕ್ಷಣವೇ ಬೇಕಾಯ್ತು. ತುಂಟ ಸೋಮು ತನ್ನ ಸಾನುವಿನ ಮನ ಅರಿತು ಸ್ವಲ್ಪ ತುಂಟಾಟ ಮಾಡುವ ಮನಸ್ಸಾಗಿ, ಓಹ್ ಅಷ್ಟೇನಾ ಎಂದನು

ಅವನಿಗೆ ನಾನು ಕೇಳಿದ್ದು ಅರ್ಥ ಆಗಿದೆಯೋ ಇಲ್ವೋ ಎನ್ನೋ ಗೊಂದಲ ಈಗ ಸಾನುಗೆ.

"ಸೋಮು ನಾನು ಏನು ಕೇಳ್ದೆ ಅಂತ ತಿಳೀತಾ"

"ಹೂ"

"ಏನು"

"ನಾಳೆ ಒಂದು ಚಾಕಲೇಟ್ ತಂದು ಕೊಡು ಅಂದೆ ಅಲ್ವಾ ಸರಿ ಅಂದೆ"

ಅವಳಿಗೋ ಕೋಪ ನೆತ್ತಿಗೇರಿತು. ಅವನಿಗೆ ನಗು ತಡೆಯಲಾಗದು.

"ನಿನ್ ತಲೆ. ಚಾಕಲೇಟ್, ಪಪ್ಪರ್ಮೆಂಟ್, ಎಲ್ಲಾ ನೀನೇ ತಿನ್ನು. ನಂಗೆ ಏನು ಬೇಡ" ಅಂತ ಮುಖ ಉಬ್ಬಿಸಿ ತಿರುಗಿ ಕೂತಳು.

ಅವಳ ತೀರಾ ಸನಿಹ ಬಂದು ಅವಳ ಭುಜದ ಮೇಲೆ ಗದ್ದ ಊರಿ ನಿಜವಾಗಲೂ ಏನು ಬೇಡ್ವಾ ಎಂದು ಪಿಸು ಧ್ವನಿಯಲ್ಲಿ ಕೇಳಿ ಅವಳ ಕೊರಳ ಒನಪಲ್ಲಿ ಒಂದು ಸಿಹಿ ಮುದ್ರೆ ಒತ್ತಿದ. ಮೊದಲ ಚುಂಬನ, ಅವನ ಪಿಸು ಮಾತಿನ ಮಾದಕತೆ, ಅವನ ಬಿಸಿ ಉಸಿರು ಮುಖಕ್ಕೆ ಬಡಿದು ಅವಳ ಮೈ ಶಾಖ ಹೆಚ್ಚಾಗಿ ಹುಚ್ಚಾಗಿ, ಅವನ ಕಡೆ ತಿರುಗಿ, ಅವನನ್ನು ಗಟ್ಟಿಯಾಗಿ ಆಲಂಗಿಸಿದಳು. ಅವನು ಕೂಡ ಅವಳನ್ನು ಅವನ ತೋಳಿನಲ್ಲಿ ಬಂದಿಸಿ ಅವಳು ಕೇಳಿದ ಪೆನಾಲ್ಟಿ ಗಿಂತ ಹೆಚ್ಚಿನ ಸುಂಕವನ್ನು ಸಂತೋಷದಿಂದಲೇ ಸಂದಾಯ ಮಾಡಿದ.

ಅವಳೂ ಅಷ್ಟೇ, ಕಟ್ಟಿದ ತೆರಿಗೆಗೆ ಸರಿಯಾದ ಮರು ಶುಲ್ಕ ಸಂದಾಯ ಮಾಡಿ ಅವನಿಂದ ಇನ್ನೂ ಹೆಚ್ಚಿನ ಸುಂಕವನ್ನು ವಸೂಲಿ ಮಾಡಿದಳು. ಮುತ್ತಿನ ಮಳೆಗೆರೆದಳು. ಅವನ ತುಟಿಗಳು ಅವಳ ದೇಹದ ತುಂಬಾ ಅಚ್ಚೆ ಒತ್ತಿದವು. ಅಡ್ಡವಾದ ಅರಿವೆಗಳು ನೆಲ ಕಂಡವು. ಬಾನ ಚಂದಿರ ನಾಚಿ ಮೋಡದ ಮಧ್ಯೆ ಅಡಗಿ ಇವರ ಶೃಂಗಾರ ಕಾವ್ಯವನ್ನು ಆಗೊಮ್ಮೆ ಈಗೊಮ್ಮೆ ಕದ್ದು ನೋಡುವ ಆಟ ಶುರು ಮಾಡಿದ. ಪ್ರಕೃತಿ ಸಹಜ ಸ್ತ್ರೀ ಪುರುಷ ಮಿಲನ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ಇಬ್ಬರ ಮೈ ಬೆವರಿನಿಂದ ಹಾಸಿದ ಹಾಸಿಗೆ ಹೊದೆದ ಹೊದಿಕೆ ಹಸಿ ಆಗಿದ್ದವು. ಹೇಳದೇ ಉಳಿದ ಪ್ರೀತಿ ಉತ್ತುಂಗ ಶಿಖರ ಸೇರಿ ಒಂದಾಗಿತ್ತು... ಪ್ರೀತಿಗೆ ಸಾವಿಲ್ಲ. ಒಲವಿಗೆ ಕೊನೆ ಇಲ್ಲ



Rate this content
Log in

Similar kannada story from Romance