sowmya shree

Romance Classics Inspirational

4  

sowmya shree

Romance Classics Inspirational

ನೀನೆ ನನ್ನ ಸ್ಫೂರ್ತಿ

ನೀನೆ ನನ್ನ ಸ್ಫೂರ್ತಿ

8 mins
488


"ಅಬ್ಬಬ್ಬಾ ಅದೆಂತಹ ಸುಡುಬಿಸಿಲು! ಗಂಟೆ ಎರಡಾದ್ರೂ ಇವತ್ತು ಒಂದೇ ಒಂದು ಸಾಲಿನ ಕಳೆ ಕೀಳೋಕೂ ಸಾಧ್ಯ ಆಗ್ಲಿಲ್ವಲ್ಲ?" ಎಂದುಕೊಂಡು ಹಣೆಯಲ್ಲಿದ್ದ ಬೆವರಸಾಲನ್ನು ಹೆಗಲ ಮೇಲಿದ್ದ ವಸ್ತ್ರದಲ್ಲಿ ಒತ್ತುತ್ತಾ ಮೇಲೆದ್ದ ಕೌಸ್ತುಭ್ ಕಣ್ಣಾಯಿಸುವಷ್ಟು ದೂರದವರೆಗೂ ಹಸನಾಗಿ ಬೆಳೆದಿದ್ದ ಭತ್ತದ ಗದ್ದೆ, ಸಮೃದ್ಧವಾಗಿ ಫಲಕೊಡುವ ತೆಂಗುಬಾಳೆ ,ವಿಧವಿಧ ಮಾದರಿಯ ತರಕಾರಿ,ಹಣ್ಣುಗಳ ಕೈತೋಟ, ಅಲ್ಲಲ್ಲಿ ಅರಳಿ ನಿಂತಿದ್ದ ರಂಗುರಂಗಿನ ಗುಲಾಬಿ ಹೂಗಳ ಅಂದವನ್ನು ನೋಡುತ್ತ ಮೈಮರೆತ..

"ಹೌದು! ಇವತ್ತು ಇಷ್ಟರ ಮಟ್ಟಿಗೆ ನಾನೇನಾದರೂ ಸಾಧಿಸಿದ್ದೇನೆ ಎಂದರೆ ಅದು ನನ್ನ ಸಂಗಾತಿ ಸೌರಭಿಯಿಂದಲೇ....'ನನ್ನ ಸೌರಭಿ' ಎಂದು ಹೆಮ್ಮೆಯಿಂದ ಪಿಸುಗುಟ್ಟಿದವನು ತನ್ನ ಗತಜೀವನದ ಘಟನೆಗಳ ಉಗಿಬಂಡಿಯನ್ನೇರಿದ್ದ...

ಅವಳು ನೊರೆಹಾಲಿನಲ್ಲಿ ಎರಕಹೊಯ್ದಂತಿದ್ದ ಸುಕುಮಾರಿ, ಸಮುದ್ರದ ಪಾತಾಳದಲ್ಲಿ ಅಡಗಿ ಕುಳಿತ ಅಪೂರ್ವ ಮುತ್ತೊಂದರ ಮೆರಗನ್ನು ಸಾಲ ಪಡೆದಂತಿದ್ದ ಕನ್ಯಾಮಣಿ..... ಮರದ ಬಟ್ಟಲಿನಲ್ಲಿ ಕಲಸಿಟ್ಟಿದ್ದ ಅರಿಶಿಣವನ್ನು ತನ್ನ ಮುದ್ದಾದ ಮುಖಕ್ಕೆ,ದೇಹಸಿರಿಗೆ ಲೇಪಿಸಿ, ಹಂಡೆಯಲ್ಲಿ ಹಬೆಯಾಡುತ್ತಿದ್ದ ಬಿಸಿನೀರನ್ನು ಮೈಗೆ ಎರೆದುಕೊಂಡು ಹೊರ ಬಂದವಳು ತನಗೊಪ್ಪುವ ತಿಳಿಗುಲಾಬಿ ಬಣ್ಣದ ಸೀರೆಯನ್ನುಟ್ಟು, ದೇವರ ಮುಡಿಗೆ ಗಮಗುಡುವ ಮಲ್ಲಿಗೆಯ ಪುಷ್ಪವನ್ನೇರಿಸಿ ಕೈಮುಗಿದಿದು ನಿಂತಳು "ಭಗವಂತ ನಿಂಗೆ ಗೊತ್ತ? ಇವತ್ತು ನನ್ನನ್ನು ನೋಡೋಕೆ ಗಂಡಿನ ಕಡೆಯವ್ರು ಬರುತ್ತಿದ್ದಾರಂತೆ ಹಾಗಂತ ಅಮ್ಮ ಹೇಳಿದ್ಲು. ನೆನೆಸಿಕೊಂಡರೇನೇ ಹೃದಯದ ಬಡಿತ ಜಾಸ್ತಿಯಾಗುತ್ತೆ ದಯವಿಟ್ಟು ನಾನು ಅಂದು ಕೊಂಡಂತ ಎಲ್ಲಾ ಗುಣಗಳಿರೋ ಹುಡುಗನನ್ನ ಕರೆಸಪ್ಪಾ, ನನ್ನ ಮುದ್ದು ಅಲ್ವಾ ನೀನು"

"ಸೌರಭಿ ಇನ್ನೂ ಮುಗಿಯಲಿಲ್ವ ನಿಂದು, ಗಂಡಿನ ಮನೆಯವರು ಬರೋ ಹೊತ್ತಾಯ್ತು ಸ್ವಲ್ಪ ಅಡಿಗೆಮನೆಯ ಕಡೆ ಬಂದು ಕೈ ಜೋಡಿಸಬಾರದ?"

"ಹು ಅಮ್ಮಾ ಈಗ್ ಬಂದೆ, ಲೋ ಮುದ್ದು ನಿನ್ನನ್ನ ಆಮೇಲೆ ಮಾತಾಡಿಸ್ತೀನಿ ಸರೀನಾ" ಎಂದು ನೆಲಕ್ಕೆ ಸಾರಿಸುತ್ತಿದ್ದ ತನ್ನ ಸೀರೆಯನ್ನು ಮೊಣಕಾಲಿನ ತನಕ ಮೇಲೆತ್ತಿ ಅಡುಗೆಮನೆಯ ಕಡೆ ಓಡಿದಳು...........

"ಕೌಸ್ತುಭ ಸ್ವಲ್ಪ ನಿಧಾನಕ್ಕೆ ಓಡಿಸಬಾರ್ದ? ಪಕ್ಕದಲ್ಲಿ ಕುಳಿತಿರೋ ನಿನ್ನ ತಾತನಿಗೆ ವಯಸ್ಸಾಗಿದೆ ಕಣಯ್ಯ"

"ಓಹ್.... ಗೋಪ್ಸ್ ಲೈಫಲ್ಲಿ ಥ್ರಿಲ್ ಇರಬೇಕು ಈ ಥರ ಫಾಸ್ಟಾಗಿ ಗಾಡಿ ಓಡಿಸೋದ್ರಲ್ಲಿ ಸಿಗೋ ಮಜಾ ಇದ್ಯಲ್ಲ ಇಟ್ಸ್ ಇನ್ಕ್ರೆಡಿಬಲ್, ಅದನ್ನ ಫೀಲ್ ಮಾಡಿದ್ರೇನೆ ಗೊತ್ತಾಗೋದು. ಕಮಾನ್ ಲೆಟ್ಸ್ ಡ್ಯಾನ್ಸ್ ತಾತ ಎಂಜಾಯ್" ಎಂದು ರೇಡಿಯೋದಲ್ಲಿ ಪ್ರಸಾರವಾಗುತ್ತಿದ್ದ ಆಂಗ್ಲ ಹಾಡಿನ ದನಿಯನ್ನು ಹೆಚ್ಚಿಸಿ ಕುಳಿತಲ್ಲೇ ಕುಣಿಯಲು ಶುರುಮಾಡಿದ್ದ.....

"ಹ್ಮ್ ಕೋತಿಗೆ ಹೆಂಡ ಕುಡಿಸಿದಾಗ ಥೇಟ್ ನಿನ್ನಾಗೆ ಆಡೋದು, ಅಲ್ಲಾ ತಾಯಿ ಇಂತವನು ನಮ್ಮ ಹಳ್ಳಿಯ ಹೆಣ್ಣುಮಗಳನ್ನ ಬಾಳಿಸುತ್ತಾನ? ಸುಮ್ನೇ ಬಂದ ದಾರಿಗೆ ಸುಂಕ ಇಲ್ಲ ಅಂತ ಇವತ್ತೇ ಹೊಂಟು ಬಿಡಿ" ಎಂದ ಗೋಪಾಲರಾಯರು ಕಣ್ಣಿಗೆ ಹಾಕಿದ್ದ ಕನ್ನಡಕವನ್ನು ತೆಗೆದು ಹಿಂದುಗಡೆ ಸೀಟಿನಲ್ಲಿ ಕುಳಿತಿದ್ದ ತಮ್ಮ ಮಗಳ ಕಡೆ ನೋಡಿದ್ದರು...

"ಅಪ್ಪಯ್ಯ ನೀನೇನೇ ಹೇಳಿದ್ರೂ ಸರಿ ನಮ್ ಕೌಶ್ ಗೆ ಸಂಪ್ರದಾಯಸ್ಥ ಮನೆತನದ ಹುಡುಗಿಯನ್ನೇ ತಂದುಕೊಳ್ಳುವುದು ಅಂತ ನಾವಿಬ್ಬರು ಡೆಸೈಡ್ ಮಾಡಿಯಾಗಿದೆ, ಅಲ್ವೇನ್ರೀ" ಎಂದ ಪದ್ಮಜಾರವರು ತಮ್ಮ ಪತಿ ಶೇಖರ್ ರತ್ತ ನೋಡಿದ್ದರು....

"ಹೌದು ಮಾವ ಆ ಹುಡುಗಿ ಕಾಲ್ಗುಣದಿಂದಾದ್ರೂ ಇವನ ಮೋಜುಮಸ್ತಿಗೆ ಒಂದು ಬ್ರೇಕ್ ಬಿದ್ದು ಒಳ್ಳೇ ಬುದ್ದಿ ಕಲಿತರೆ ಅಷ್ಟೇ ಸಾಕಾಗಿದೆ ನಮಗೆ" ಎಂದಿದ್ದರು ಶೇಖರ್..........

ಅದೊಂದು ಹಳ್ಳಿಮನೆ, ಮನೆಯ ಅಕ್ಕಪಕ್ಕ ಒಣಹುಲ್ಲಿನ ಬಣವೆಗಳು, ಅಂಗಳದ ಮುಂದೆ ಸಗಣಿಯಿಂದ ಸಾರಿಸಿ ಅಂದವಾಗಿ ಬಿಡಿಸಿದ್ದ ದೊಡ್ಡದಾದ ಎಳೆಯ ರಂಗವಲ್ಲಿ , ಪಕ್ಕದಲ್ಲೇ ಇದ್ದ ಸಿಹಿ ನೀರಿನ ಬಾವಿ, ಬಚ್ಚಲು ಮನೆಯಲ್ಲಿ ಉರಿಯುತ್ತಿದ್ದ ಸೌದೆಯ ಒಲೆಯಿಂದ ಬರುತ್ತಿದ್ದ ಹೊಗೆ ಅವರನ್ನು ವಧುವಿನ ಮನೆಯೊಳಗೆ ಸ್ವಾಗತಿಸುತ್ತಿದ್ದವು...

ಕಾರಿನಿಂದ ಕೆಳಗಿಳಿದಿದ್ದ ಕೌಸ್ತುಭ ಅಲ್ಲಿನ ವಾತಾವರಣವನ್ನೆಲ್ಲ ಸೋಜಿಗದಂತೆ ಬಾಯಿ ತೆರೆದು ನೋಡುತ್ತ ಬರುತ್ತಿದ್ದ. ಆ ತಕ್ಷಣ ಅವನ ಕೈಯಲ್ಲಿದ್ದ ಪೋನ್ ರಿಂಗಣಿಸಿ ಕಿವಿಯಲ್ಲಿಟ್ಟುಕೊಂಡ "ಕ್ರಿಶ್ ಎಲ್ಲಿದ್ಯೋ? ನೀನಿಲ್ದೇ ಈ ವೀಕೆಂಡ್ ಎಷ್ಟು ಬೋರಾಗ್ತಿದೆ ಗೊತ್ತ?"  

"ಓಹ್ ಇಸ್ ಇಟ್, ಏನ್ ಮಾಡೋದು ಬೇಬಿ? ನನ್ನ ಮಾಮ್ ಎಷ್ಟೇ ಹೇಳಿದ್ರೋ ಕೇಳದೇ ಅವಳ ಹಳ್ಳಿಯಲ್ಲಿರೋ ಹುಡುಗೀನ ನೋಡೋಕೆ ಅಂತ ಎಳೆದುಕೊಂಡು ಬಂದಿದ್ದಾಳೆ" ಎಂದು ಬೇಸರದ ಮೊಗವೊತ್ತ..

ಅವನ ಮಾತಿಗೆ ಪ್ರತಿಕ್ರಿಯೆಯಾಗಿ ಅತ್ತಕಡೆಯಿಂದ ಜೋರಾದ ನಗುವೊಂದು ತೇಲಿಬರುತ್ತಲೇ ಇತ್ತು...

"ಜಸ್ಟ್ ಸ್ಟಾಪ್ ಇಟ್ ರೋಸಿ" ಎಂದ ಅಸಮಧಾನದಲ್ಲಿ

"ಅಲ್ವೋ ಕ್ರಿಶ್ ನೀನು ಹಳ್ಳಿ ಹುಡುಗಿಯನ್ನ ಮದುವೆಯಾಗ್ತೀಯಾ?! ಓ ಗಾಡ್ ಐ ಕಾಂಟ್ ಬಿಲೀವ್ ದಿಸ್"

"ಹಲೋ ಮೇಡಂ, ನನಗೇನು ತಲೆ ಕೆಟ್ಟಿದೆ ಅಂದ್ಕೊಡಿದ್ದೀಯಾ? ಮಾಮ್ ಬಲವಂತಕ್ಕೆ ಬಂದಿದ್ದೇನೆ ಅಷ್ಟೇ, ಏನಾದ್ರೂ ಒಂದು ನೆಪ ಹೇಳಿ ರಿಜೆಕ್ಟ್ ಮಾಡೋದು ಗೊತ್ತು ನಂಗೆ. ಓಕೆ ಲೀವ್ ದಟ್ ಇವತ್ತು ಪ್ರೆಂಡ್ಸ್ ಎಲ್ಲ ಸೇರಿ ಲೇಟ್ ನೈಟ್ ಪಾರ್ಟಿಗೆ ಅರೇಂಜ್ ಮಾಡಿ ವಿಲ್ ಜಾಯ್ನ್ ಯೂ ಗಾಯ್ಸ್ ಸೂನ್" ಎಂದು ಕರೆ ತುಂಡರಿಸಿ ಮನೆಯವರಿಂದೆ ಹೊರಟ...

ಅವರನ್ನೆಲ್ಲ ಆದರದಿಂದ ಬರಮಾಡಿಕೊಂಡಿದ್ದ ಶಂಕರರು ಕೂರಲೆಂದು ಬೆತ್ತದ ಖುರ್ಚಿಗಳನ್ನು ಹಾಕಿದರು...

"ನಮ್ಮ ಹುಡುಗನಿಗೆ ಆಫಿಸ್ನಲ್ಲಿ ಅರ್ಜೆಂಟ್ ಮೀಟಿಂಗ್ ಇದೆಯಂತೆ ಆದಷ್ಟು ಬೇಗ ಹೆಣ್ಣುನೋಡೋ ಶಾಸ್ತ್ರ ಮುಗಿದು ಹೋಗಲಿ ಏನಂತೀಯ ಶಂಕರ" ತಮ್ಮ ಮೊಮ್ಮಗನ ಅತಿಯಾದ ಬಲವಂತಕ್ಕೆ ಬಡಬಡಿಸಿ ನುಡಿದಿದ್ದರು ಗೋಪಾಲರಾಯರು...

"ಹಾಗೇ ಆಗ್ಲೀ ಪಾಪ ಸಿಟಿಯಲ್ಲಿರೋರು, ಏನೇನು ಕೆಲಸಗಳಿರುತ್ತವೋ ಏನೋ? ವಸು ಸೌರಭಿಯನ್ನ ಕರೆದುಕೊಂಡು ಬಾ"

ಡವಗುಡುವ ಮನಹೊತ್ತು, ತಾಯಿಕೊಟ್ಟ ಬೆಲ್ಲದ ಪಾನಕವನ್ನಿಡಿದು ಹೊರ ಬಂದ ಸೌರಭಿ ನಿರ್ಲಿಪ್ತ ಮುಖಭಾವ ತಳೆದು ಎಲ್ಲರಿಗೂ ಕೊಟ್ಟು ತನ್ನಪ್ಪನ ಪಕ್ಕದಲ್ಲಿ ನಿಂತವಳು ಅಪ್ಪಿತಪ್ಪಿಯೂ ಸಹ ಕೌಸ್ತುಭನ ಕಡೆ ಕಣ್ಣೆತ್ತಿ ನೋಡಲಿಲ್ಲ...

ಅವಳ ಅವರ್ಣನೀಯ ಅಂದ ಕೌಸ್ತುಭನನ್ನು ಅಪ್ರತಿಮನನ್ನಾಗಿ ಮಾಡಿತ್ತು...ಅಬ್ಬಾ ಹೌ ಕ್ಯೂಟ್ ಶಿ ಇಸ್!? ಜೀವನದಲ್ಲಿ ಮದುವೆ ಅಂತ ಆದ್ರೆ ಅದು ಇವಳನ್ನೇ! ಅದೆಷ್ಟು ದಿನದಿಂದ ಹುಡುಕುತ್ತಿದ್ದೆ ಇವಳನ್ನು! ಎಂದು ಅವಳ ರೂಪರಾಶಿಯನ್ನೇ ನೋಡುತ್ತ ಮೈಮರೆತು ಹೋಗಿದ್ದ...

"ಈ ಮದುವೆಗೆ ನಾವು ನೀವು ಒಪ್ಪುವುದಕ್ಕಿಂತ ಜೀವನ ಪೂರ್ತಿ ಜೊತೆಯಾಗಿ ಸಂಸಾರ ಮಾಡಬೇಕಾದ ಹುಡುಗ ಹುಡುಗಿಯರ ಒಪ್ಪಿಗೆ,ಅಭಿಪ್ರಾಯ ಬಹಳ ಮುಖ್ಯ ಕೌಶ್, ಸೌರಭಿ ನಿಮ್ಮ ಅನಿಸಿಕೆ ಏನು?" ಎಂದರು ಪದ್ಮಜ....

"ಮಾಮ್ ಬಿಪೋರ್ ದಟ್, ಐ ವಾಂಟ್ ಟು ಟಾಕ್ ವಿತ್ ಹರ್" ಎಂದ ಕೌಸ್ತುಭ...

"ಅದಕ್ಕೇನಂತೆ ಸೌರಭಿ ಅವರನ್ನು ಹೊರಗಡೆ ಕರೆದುಕೊಂಡು ಹೋಗಮ್ಮ" ಎಂದ ಶಂಕರರ ಆಣತಿಯಂತೆ ಹಿತ್ತಲ ಕಡೆ ಹೆಜ್ಜೆ ಹಾಕಿದವಳನ್ನು ಹಿಂಬಾಲಿಸುತ್ತ ನಡೆದ ಕೌಸ್ತುಭ.....

ಬಹಳ ಹೊತ್ತು ಮಾತಿಗಾಗಿ ತಡವರಿಸುತ್ತ ನಿಂತಿದ್ದ ಕೌಸ್ತುಭ ಬಾವಿಯಕಟ್ಟೆಯ ಮೇಲೆ ಕುಳಿತು ಅದರೊಳಗಿನ ನೀರಿನಲ್ಲಿ ತನ್ನ ಪ್ರತಿಬಿಂಬವನ್ನೇ ದಿಟ್ಟಿಸುತ್ತಿದ್ದವಳಿಗೆ "ನಿಮ್ ಮನೆ ತುಂಬಾ ಹಿಸ್ಟಾರಿಕಲ್ ಆಗಿದೆ, ಯೂ ನೋ ಇದರ ಪೋಟೋಸ್ಗಳನ್ನ ಫೇಸ್ ಬುಕ್ ಗೆ ಹಾಕಿದ್ರೆ ಸಾವಿರಾರು ಲೈಕ್ಸ್ ಬರುತ್ತೆ ಗೊತ್ತ" ಎಂದ..

"ಕ್ಷಮಿಸಿ ನನಗೆ ಅದರಲ್ಲೆಲ್ಲ ಆಸಕ್ತಿ ಇಲ್ಲ" ಎಂದು ನಿರಾಸಕ್ತಿಯಿಂದ ನುಡಿದಿದ್ದಳು... 

"ಐ ಸೀ...ಓಕೆ ಅದು ಬಿಡಿ ನಾನು ಸುಮಾರು ವರ್ಷಗಳ ಹಿಂದೆಯೇ ನಿಮ್ಮನ್ನ ಇದೇ ಊರಲ್ಲಿ ನೋಡಿದ್ದೆನೇ, ಅಂದಿನಿಂದ ಇಂದಿನವರೆಗೂ ನಿಮಗಾಗಿ ಅದೆಷ್ಟು ಹುಡುಕಾಡಿದ್ದೆನೆ ಗೊತ್ತ" ಎಂದು ಮುಖವರಳಿಸಿದ...

"ಹೌದು ನನಗೂ ನಿಮ್ಮ ಮುಖ ಪರಿಚಯ ತುಂಬಾ ಚೆನ್ನಾಗಿದೆ ಆದರೆ ಎಲ್ಲಿ? ಯಾವಾಗ? ನೋಡಿದ್ದು ಎಂದು ಸರಿಯಾಗಿ ನೆನಪಾಗುತ್ತಿಲ್ಲ" ಎಂದು ಹಣೆಯ ಮೇಲೆ ಬೆರಳಿಟ್ಟು ಉಜ್ಜಿಕೊಂಡಳು...

"ಆವತ್ತು ಒಂದಿನ" ಎಂದು ತನ್ನ ನೆನಪಿನ ಬುತ್ತಿಯನ್ನು ಅವಳ ಮುಂದೆ ಬಿಚ್ಚಿಡುತ್ತ ಹೋದ...

"ಲೋ ಸೀನ ಈ ಹಳ್ಳಿಯಲ್ಲಿ ಅದೇಗೋ ಕಾಲ ಕಳೀತೀರಾ ನೀವೆಲ್ಲ? ಉಫ್ ನನಗಂತೂ ಇಲ್ಲಿ ಒಂದು ದಿನ ಕಳೆಯೋದು ಸಹಾ ಒಂದು ಯುಗ ಕಳೆದಂತೆ" ಎನ್ನುತ್ತ ಅಲ್ಲಿನ ಹಸಿರು ವಾತವರಣವನ್ನು ತನ್ನ ಕ್ಯಾಮೆರಾದಲ್ಲಿ ಸೆರೆಯಿಡಿಯುತ್ತ ಮುಂದೆ ಸಾಗುತ್ತಿದ್ದ.....

" ಸೌರಭಿ ಬೇಗ ಕಿತ್ಕೊಳ್ಳೇ, ಆ ದಡಿಯ ಸೀನಾ ಏನಾದ್ರೂ ಬಂದ್ರೇ ಮುಗೀತು ನಮ್ ಕಥೇ" ಎಂದು ಅವಳು ಕೊಯ್ದು ಕೆಳಗೆ ಹಾಕುತ್ತಿದ್ದ ಮಾವಿನಕಾಯಿಗಳನ್ನು ಬ್ಯಾಗಿಗೆ ತುಂಬುತ್ತಿದ್ದಳು ಸೌರಭಿಯ ಗೆಳತಿ ಶೃಂಗ

"ಅಪ್ಪಣ್ಣಿ ಕೆಳಗೆ ಕೂತ್ಕೊಂಡು ಮಾತಾಡಿದಷ್ಟು ಸುಲಭ ಅಂದ್ಕೊಂಡ್ಯಾ ಕೀಳೋದು" ಎಂದು ಮಾವಿನಕಾಯಿಯನ್ನು ಎಟುಕಿಸಿಕೊಳ್ಳಲು ಏದುಸಿರು ಬಿಡುತ್ತ ಮೇಲಕ್ಕೆ ನೆಗೆಯುತ್ತಿದ್ದವಳನ್ನು ಕಂಡ ಕೌಸ್ತುಭ ಅವಳ ಸೌಂದರ್ಯರಾಶಿಗೆ ಸೋತು ಶರಣಾಗಿದ್ದ. ಅವಳು ಪ್ರತೀಬಾರಿ ಮೇಲಕ್ಕೆ ಜಿಗಿಯುತ್ತಿದ್ದರೆ ಕಾಲ್ ಗೆಜ್ಜೆಯಿಂದ ಹಿಡಿದು ಅವಳ ನೀಳಜಡೆಗೆ ಮುಡಿದಿದ್ದ ಮಲ್ಲಿಗೆ ಹೂವಿನ ತನಕ ಅವಳ ಜೊತೆಯಲ್ಲಿಯೇ ಮೇಲಕ್ಕೆ ಸಾಗಿ ಕೆಳಗೆ ಬರುತ್ತಿದ್ದವು...

ಅವಳ ಆ ವೈಖರಿಯನ್ನೇ ನೋಡುತ್ತ ಮೈಮರೆತಂತೆ ಹತ್ತಿರ ಹತ್ತಿರಕ್ಕೆ ಬರುತ್ತಿದ್ದ ಕೌಸ್ತುಭ ತಕ್ಷಣ ಅವಳ ನೀಳಸೊಂಟವನ್ನಿಡಿದು ಮೇಲೆತ್ತಿದ್ದ.ಆ ಕೂಡಲೇ ಮಾವಿನಕಾಯಿಯನ್ನು ಸಲೀಸಾಗಿ ಕಿತ್ತುಕೊಂಡವಳು ತನ್ನನ್ನು ಯಾರೋ ಮೇಲಕ್ಕೆತ್ತಿದ್ದಾರೆ ಎಂದರಿವಾಗಿ ಕೆಳಗೆ ನೋಡಿ ಗಾಬರಿಯಲ್ಲಿ ಅವನಿಂದ ಬಿಡಿಸಿಕೊಳ್ಳಲು ಕೊಸರಾಡುತ್ತ "ರೀ ಬಿಡ್ರೀ" ಎಂದು ಉಸುರಿದ್ದಳು..

"ಎಲಾ ಮುಂಡೇವ ಎಷ್ಟ್ ಕಿತಾ ಯೋಳದು ನಿಮ್ಕೆ? ನಮ್ ತೋಟುಕ್ ಕಾಲ್ ಮಡ್ಗ್ ಬ್ಯಾಡಿ ಅಂತ ಇವೊತ್ ಅದೆ ನಿಮ್ಗೆ ನಿತ್ಕಳಿ ವಸಿ" ಎಂದ ಸೀನ ಗದ್ದೆ ಪಾತಿ ಮಾಡಲೆಂದು ಹಿಡಿದಿದ್ದ ಸನಿಕೆಯನ್ನು ಅಲ್ಲೇ ಬಿಸಾಡಿ ಅವರ ಕಡೆಯೇ ಬೈದಾಡಿಕೊಂಡು ಬರುತ್ತಿದ್ದ...

ಅವನ ಬಿಗಿಯಾದ ಹಿಡಿತದಿಂದ ಬಿಡಿಸಿಕೊಳ್ಳಲಾಗದೇ ಕಂಗಾಲಾದ ಸೌರಭಿ ಅವನ ಎರಡೂ ಭುಜಕ್ಕೆ ಜೋರಾಗಿ ಜಿಗುಟಲು ಶುರುಮಾಡಿದ್ದಳು. ನೋವಿನ ಅನುಭವವಾದಂತೆನಿಸಿ ಅವಳನ್ನು ಕೆಳಗಿಳಿಸಿದ ಕೌಸ್ತುಭ ಅವಳಂದದ ಮಾಯಜಾಲದಿಂದ ಬಿಡುಗಡೆ ಹೊಂದಿ ವಾಸ್ತವ ಪ್ರಪಂಚಕ್ಕೆ ಬಂದಿಳಿದಿದ್ದ...

"ಸುಭೀ ಬಾರೇ ಬೇಗ, ಈ ಪೇಟೇ ಮಂದಿ ಹುಡುಗಿಯರನ್ನಿಡಿದು ಸೇಲ್ ಮಾಡಿಬಿಡುತ್ತಾರಂತೆ" ಎಂದೇಳಿ ಅಲ್ಲಿಂದ ಓಟ ಕಿತ್ತಿದ ಶೃಂಗಾಳ ಹಿಂದೆಯೇ ದಿಗಿಲಿನಲ್ಲಿ ಓಡಲು ಶುರುಮಾಡಿದ್ದಳು ಸೌರಭಿ...

"ಹೇ ಹುಡುಗಿ ಸ್ಟಾಪ್.... ನಿನ್ನ ಹೆಸರೇನು?" ಅಂತ ನಿಮ್ ಹಿಂದೆ ಓಡಿ ಬರುವಷ್ಟರಲ್ಲಿ ನೀವು ಸೈಕಲ್ ಹತ್ತಿ ಅಲ್ಲಿಂದ ಮಾಯ ಆಗಿದ್ರಿ. ಅವತ್ತಿದ್ದ ಇವತ್ತಿನವರೆಗೂ ಈ ಹಳ್ಳಿಗೆ ಬಂದ್ರೇ ಸಾಕು ನಿಮ್ಮ ನೆನಪು ತುಂಬಾ ಕಾಡಿಸುತ್ತಿತ್ತು ನನ್ನನ್ನ, ಆದ್ರೇ ಈಗ ಮಾಮ್ ನನ್ನ ಲೈಫ್ ಪಾರ್ಟನರ್ ಆಗಿ ಬರಲು ಹುಡುಕಿರುವ ಹುಡುಗಿ ನೀವೇ ಅಂತ ನೆನೆಸಿಕೊಂಡ್ರೇ ಆ್ಯಮ್ ಸೋ ಲಕ್ಕಿ ಅನ್ನಿಸುತ್ತೆ ನಂಗೆ" ಎಂದು ಒಂದೇ ಉಸಿರಿಗೆ ತನ್ನ ಮನದಿಂಗಿತವನ್ನು ಅವಳ ಮುಂದೆ ಅರುಹಿದ್ದ....

"ಆದ್ರೇ ನೀವು ನನಗೆ ಇಷ್ಟ ಇಲ್ಲ" ಎಂದು ಖಡಾಖಂಡಿತವಾಗಿ ನುಡಿದಿದ್ದಳವಳು

"ಯಾಕೆ ಅಂತ ಕೇಳಬಹುದಾ?" ದೈನ್ಯ ತುಂಬಿದ ಧನಿ ಇವನದು..

"ನೋಡಿ ನೀವು ತುಂಬಾ ಓದಿಕೊಂಡಿದ್ದೀರಿ, ಒಳ್ಳೇ ಉದ್ಯೋಗದಲ್ಲಿದ್ದೀರಿ ಕೂಡ ಆದ್ರೇ ನಾನು ನಮ್ಮ ಹಳ್ಳಿಯಲ್ಲಿರೋ ಸರ್ಕಾರಿ ಕಾಲೇಜಿನಲ್ಲಿ ಓದಿಕೊಂಡಿರೋ ಸಾಮಾನ್ಯ ಹುಡುಗಿ, ನಿಮಗೂ ನನಗೂ ಯಾವ ವಿಧದಲ್ಲೂ ಹೊಂದಾಣಿಕೆಯಾಗೋಲ್ಲ ದಯವಿಟ್ಟು ತಾವು ಇಲ್ಲಿಂದ ಹೊರಟು ಬಿಡುವುದು ಉತ್ತಮ" ಅವನ ಪ್ರತ್ಯುತ್ತರಕ್ಕೂ ಕಾಯದೇ ಅಲ್ಲಿಂದ ಹೊರಡಲು ಅನುವಾದಳು.. 

ಕೂಡಲೇ ಅವಳ ಎದುರಿಗೆ ನಿಂತು ಕೈ ಅಡ್ಡಲಾಗಿಡಿದವನು "ನಿಮ್ಮನ್ನು ನೋಡಿದ ಮೊದಲ ದಿನವೇ ಪ್ರೀತಿಯ ಶಾಲೆಗೆ ಅಡ್ಮೀಶನ್ ಪಡೆದ ಸ್ಟೂಡೆಂಟ್ ನಾನು ...ನನಗಿರೋ ಜಾಬ್, ನೇಮ್, ಫೇಮ್ ನೋಡಿ ನೂರಾರು ಹುಡುಗಿಯರು ನನ್ನಿಂದೆ ಬಿದ್ರೂ ಸಹ ಅವರ್ಯಾರ ಮೇಲೂ ಮನಸ್ಸಾಗಲಿಲ್ಲ ನಂಗೆ...ಆದ್ರೇ ನೀವು? ಗೊತ್ತಿಲ್ಲ ರೀ!....ನನ್ನ ಲೈಫ್ ನಲ್ಲಿ ಮದುವೆ ಅಂತ ಆದ್ರೇ ಅದು ನಿಮ್ಮನ್ನು ಮಾತ್ರ, ವಿಲ್ ಯೂ ಮ್ಯಾರೀ ಮೀ?" ಎಂದು ಅವಳ ಕೈಯನ್ನು ತನ್ನ ಕೈಗೆ ತೆಗೆದುಕೊಂಡಿದ್ದ...

"ಕ್ಷಮಿಸಿ" ಅವನ ಕೈಯಿಂದ ತನ್ನ ಕೈಗಳನ್ನು ಹಿಂದಕ್ಕೆ ತೆಗೆದುಕೊಂಡಿದ್ದಳು..

"ಹೇಯ್ ಗರ್ಲ್ ಬಹುಶಃ ನಾನೇನು? ನನ್ನ ಸ್ಟೇಟಸ್ ಏನು? ಅಂತ ಗೊತ್ತಿಲ್ಲದೇ ಮಾತಾಡ್ತಿದ್ದೀಯಾ ನೀನು?... ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಬಳ, ಅರಮನೆಯಂತ ಮನೆ, ಕೆಲಸ ಮಾಡಲು ಆಳುಕಾಳು ಮಹಾರಾಣಿಯಂತಿರಬಹುದು ನೀನು, ಇನ್ನೊಂದು ಸಾರ್ತಿ ಯೋಚಿಸು" ಎಂದು ಸಿಟ್ಟಿನಲ್ಲಿ ಅವಳ ಬಟ್ಟಲುಕಂಗಳಲ್ಲಿದ್ದ ತನ್ನ ಪ್ರತಿಬಿಂಬವ ದಿಟ್ಟಿಸಿದ್ದ...

"ನಿಮ್ಮ ಸಿಟಿಯವರ ಜೀವನಶೈಲಿಯೇ ಒಂದು ಯಾಂತ್ರಿಕತೆ ಎನ್ನಿಸುತ್ತೆ ನನಗೆ, ವಾರವೆಲ್ಲ ದುಡಿಯೋದು, ವಾರದ ಕೊನೆಯಲ್ಲಿ ವೀಕೆಂಡ್ನ ಹೆಸರು ಹೇಳಿ ಕುಡಿತ, ಮೋಜುಮಸ್ತಿ ಮಾಡುತ್ತ ಕಾಲ ಕಳೆಯೋದು. ಆಕಾಶದೆತ್ತರಕ್ಕೆ ಬೆಳೆದುನಿಂತ ಕಟ್ಟಡಗಳೊಳಗಿನ ಜೀವನ ಅದರೊಳಗೆ ಬೆಳಗಿನ ಸೂರ್ಯೋದಯದ ಕಿರಣಗಳು ಬರಲು ಅವಕಾಶವಿಲ್ಲ, ರಾತ್ರಿಯ ಚಂದ್ರನ ಕಾಣುವ ಭಾಗ್ಯವಂತೂ ಇಲ್ಲವೇ ಇಲ್ಲ....ಆದ್ರೇ ನಾವು ಹಳ್ಳಿಯವರು ನಿಮ್ಮ ತರಹ ಅಲ್ಲ, ದಿನಪೂರ್ತಿ ಬೆವರು ಸುರಿಸಿ ದುಡಿತೀವಿ ಕೊನೆಗೊಂದು ದಿನ ನಮ್ಮ ಶ್ರಮಕ್ಕೆ ಫಲವಾಗಿ ಬರೋ ಪಸಲನ್ನು ಬೊಗಸೆಯಲ್ಲಿಡಿಯುತ್ತೇವಲ್ಲ ಆಗ ನಮಗಾಗುವ ಸಂತಸವನ್ನು ವರ್ಣಿಸಿ ಹೇಳಲು ಸಾಧ್ಯವಿಲ್ಲ...ನೋಡಿ ನಾನು ಮದುವೆ ಅಂತ ಆದ್ರೇ ಒಬ್ಬ ರೈತನನ್ನು ಮಾತ್ರ ಅದು ಬಿಟ್ಟು ಸ್ವಲ್ಪ ಮೀಸೆ ಚಿಗುರಿದರೆ ಸಾಕು ವಂಶ ಪಾರಂಪರಿಕವಾಗಿ ಅನ್ನ ಹಾಕಿದ ನೇಗಿಲನ್ನು ಮರೆತು, ಹುಟ್ಟಿದ ಹಳ್ಳಿಯನ್ನು ಬಿಟ್ಟು ಪಟ್ಟಣ ಸೇರೋ ನಿಮ್ಮಂತವರನ್ನಲ್ಲ...ಕ್ಷಮಿಸಿ ಬೇರೆಯವರ ಅಭಿಪ್ರಾಯ ಹೇಗೋ ಏನೋ ಅದು ನನಗೆ ಬೇಕಾಗಿಲ್ಲ ಇದು ನನ್ನ ಅಭಿಮತ ಅದರಂತೆ ನಡೆಯುವವಳು ನಾನು" ಎಂದಳು ದಿಟ್ಟತನದಲ್ಲಿ...

"ಆದ್ರೇ ನಾನು ನಿಮ್ಮನ್ನು ತುಂಬಾ ಪ್ರೀತಿಸ್ತಾ ಇದೀನಿ ನಿಮ್ಮನ್ನು ನೋಡಿದ ದಿನದಿಂದ......ಎಂದು ಮತ್ತಿನ್ನೇನನ್ನೋ ಹೇಳ ಹೊರಟಿದ್ದವನನ್ನು ಅರ್ಧದಲ್ಲೇ ತಡೆದವಳು "ಕ್ಷಮಿಸಿ ತಾವಿನ್ನು ಹೊರಡಬಹುದು" ಎಂದು ಕೈ ಮುಗಿದಿದ್ದಳು.....................

"ಏನೆಂದುಕೊಂಡಿದ್ದಾರೆ ಅವಳು? ಅವಳಲ್ಲ ಅವಳ ಅಪ್ಪನಂಥ ಹುಡುಗಿಯನ್ನು ತಂದು ನಿನಗೆ ಮದುವೆ ಮಾಡುತ್ತೇನೆ ಯು ಡೋಂಟ್ ವರಿ ಕೌಶಿ ನಡೀ ನಾವಿಲ್ಲಿಂದ ಹೊರಡೋಣ" ಎಂದು ಹುಬ್ಬುಗಂಟಿಕ್ಕದ್ದರು ಪದ್ಮಜಾರವರು

"ಸಾರಿ ಮಾಮ್ ನಾನು ನಿರ್ಧಾರ ಮಾಡಿಯಾಗಿದೆ, ಐ ಕ್ವಿಟ್ ಮೈ ಜಾಬ್ ಅ್ಯಂಡ್ ಐ ಬಿಕಮ್ ಎ ಪಾರ್ಮರ್ ನಾನು ತಾತನ ಮನೆಯಲ್ಲೇ ಇರುತ್ತೇನೆ ಪ್ಲೀಸ್ ಬಲವಂತ ಮಾಡಬೇಡಿ" ಎಂದ ಮನೆಯ ಮೇಲ್ಚಾವಣಿಯನ್ನು ದಿಟ್ಟಿಸುತ್ತ ನುಡಿದಿದ್ದ..

"ಕೌಸ್ತುಭ ರಿಯಾಲಿಟಿಯನ್ನ ಅರ್ಥ ಮಾಡಿಕೊಳ್ಳದೇ ಮಾತಾಡ್ತಿದ್ದೀಯ ನೀನು, ಹುಟ್ಟಿದಂದಿನಿಂದ ಇಲ್ಲಿಯವರೆಗೂ ವೈಭೋಗದ ಜೀವನದಲ್ಲೇ ಬೆಳೆದಿರೋ ನೀನು ಇಲ್ಲಿ ಬಂದು ಹೊಲ ಉಳುವುದು, ಕಷ್ಟದ ಕೆಲಸಗಳನ್ನು ಮಾಡುವುದು ಎಂದರೆ!? ಅದೆಲ್ಲ ನಿನ್ನಿಂದಾಗದು ನಡೀ ಇಲ್ಲಿಂದ" ಎಂದರು ಶೇಖರ್...

"ಡ್ಯಾಡ್ ಇಷ್ಟು ದಿನ ನೀವು ಹೇಳಿದಂತೆ ಕೇಳಿದ್ದೇನೆ, ನೀವು ಇಷ್ಟಪಟ್ಟಿರೆಂದು ಇಂಜಿನಿಯರಿಂಗ್ ಕೋರ್ಸ್ ಓದಿದೆ, ನಿಮ್ಮಿಚ್ಛೆಯಂತೆ ಜಾಬ್ ಸೇರಿದೆ, ಕೊನೆಗೆ ನೀವು ಆರಿಸಿದ ಹುಡುಗಿಯನ್ನು ನೋಡೋಕೆ ನಿಮ್ಮೊಟ್ಟಿಗೆ ಬಂದೆ ಕೂಡ....ಪ್ಲೀಸ್ ಈಗಲಾದ್ರೂ ನನಗಿಷ್ಟವಾದ ಜೀವನ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಕೊಡಿ, ತಾತ ನಾನು ಇಲ್ಲೇ ಇದ್ದು ನಮ್ಮ ಜಮೀನಿನಲ್ಲಿ ವ್ಯವಸಾಯ ಮಾಡೋಕೆ ನಿರ್ಧಾರ ಮಾಡಿದ್ದೇನೆ ಹಾಗೇ ಅಗ್ರಿಕಲ್ಚರ್ನ್ನಲ್ಲಿ ಪದವಿ ಪಡೆಯೋ ಆಸೆ ಕೂಡ ಇದೆ, ತಾತ ನಿಮ್ಮ ಜೊತೆ ಇದೇ ಮನೆಯಲ್ಲಿದ್ದು ನಿಮಗೆ ಊರುಗೋಲಾಗಿರಲು ಅವಕಾಶ ಮಾಡಿಕೊಡುತ್ತೀರ?" ಎಂದು ಅವರ ಭುಜವನ್ನು ಬಳಸಿ ನುಡಿದಿದ್ದ.....

ಅವನ ಮಾತುಗಳನ್ನು ಕೇಳುತ್ತಿದ್ದ ಗೋಪಾಲರಾಯರು ಮಹದಾನಂದದಿಂದ ಬೀಗುತ್ತ "ಮಗು ಭೂತಾಯಿಯನ್ನು ನಂಬಿ ಬದುಕುತ್ತಿರುವವರನ್ನು ಅವಳು ಕೈ ಬಿಟ್ಟ ಪುರಾವೆಗಳೇ ಇಲ್ಲ, ನಿನ್ನ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿ ಸುತ್ತೂರು ಮೆಚ್ಚುವಂತ ಆದರ್ಶ ರೈತ ಎನಿಸಿಕೋ" ಎಂದು ಮನತುಂಬಿ ಹರಸಿದ್ದರು..

ಅಂದು ಮುಂಜಾವು ಗುದ್ದಲಿ ಹಿಡಿದು ಬಂದವನು ಸುಮಾರು ವರ್ಷಗಳಿಂದ ಉಳುಮೆಯೇ ಕಾಣದೇ ಬಂಜರಾಗಿದ್ದ ಬಯಲು ಭೂಮಿಯನ್ನೇ ನೋಡುತ್ತ "ನಿಜವಾಗಿಯೂ ಇಲ್ಲಿ ಬೆಳೆ ಬೆಳಯಲು ನನ್ನಿಂದ ಸಾಧ್ಯನಾ? ದೈಹಿಕಶ್ರಮದ ಜೊತೆಗೆ ತಾಳ್ಮೆ,ಮಾನಸಿಕ ಕ್ಷಮತೆಯ ಅವಶ್ಯಕತೆಯೂ ಸಹ ತುಂಬಾ ಮುಖ್ಯ. ಮಳೆ-ಪ್ರವಾಹ,ಬಿಸಿಲು-ಬರಗಾಲ,ರೋಗ-ರುಜಿನ,ಆಳು-ಕಾಳು, ರೇಟು-ಗೀಟು ಹೀಗೆ ನೂರಾರು ಅಂಶಗಳ ಜೊತೆ ಅಖಾಡಕ್ಕಿಳಿದು ಗೆದ್ದು ಬಂದಾಗ ಮಾತ್ರ ಒಬ್ಬ 'ಆದರ್ಶ ರೈತ' ಎಂಬ ಪದಪಟ್ಟಿಯನ್ನು ಗಿಟ್ಟಿಸಿಕೊಳ್ಳಲು ಸಾಧ್ಯ" ಎಂದು ಕೈಚೆಲ್ಲಿದವನಿಗೆ ತಟ್ಟನೆ ಸೌರಭಿಯ ಮುಖ ನೆನಪಾಗಿ ತಕ್ಷಣವೇ ಧೃಡನಿರ್ಧಾರ ತಳೆದು 'ಮನಸ್ಸಿದ್ದರೆ ಮಾರ್ಗ' ಎಂದು ಮುನ್ನುಗ್ಗಿದ್ದ...

ಹೌದು ಇಂದು, ಈ ಕ್ಷಣಕ್ಕೆ ನಾನೊಬ್ಬ 'ರೈತ' ಎಂದು ಕೆಚ್ಚೆದೆಯಿಂದ ಹೇಳಿಕೊಳ್ಳುತ್ತೇನೆ. ನನ್ನ ಪ್ರಕಾರ ಡಾಕ್ಟರ್,ಇಂಜಿನಿಯರ್,ವಿಜ್ಞಾನಿ,ಉದ್ಯಮಿ, ಮಂತ್ರಿ ಅಥವಾ ಇನ್ಯಾವುದೇ ಬಿರುದುಬಾವಲಿಗಳಿಗಿಂತ ರೈತನೆಂಬ ಬಿರುದೇ ಸರ್ವಶ್ರೇಷ್ಠ, ಜಗತ್ತಿನ ಹೊಟ್ಟೆ ತುಂಬಿಸುವ ಈ ಪದವಿ ಬೇರೆಲ್ಲ ಪದವಿಗಳಿಗಿಂತ ಒಂದು ಕೈ ಮೇಲಿನದು...

ಸಮಯ ಸಿಕ್ಕಿದರೇ ಸಾಕು ಪೇಸ್ಬುಕ್, ವಾಟ್ಸಪ್ ನಲ್ಲಿ ಕೆಲಸವಿಲ್ಲದ ಕಾಡು ಹರಟೆಯಲ್ಲೇ ತಲ್ಲೀನನಾಗಿರುತ್ತಿದ್ದ ನಾನು ಅದನ್ನೇಕೆ ನಮ್ಮಂತಹ ಸಾವಿರಾರು ರೈತರ ಉಪಯೋಗಕ್ಕೆ ಬರುವ ರೀತಿಯಲ್ಲಿ ಬಳಸಿಕೊಳ್ಳಬಾರದು ಎಂದು ಯೋಚಿಸಿದಾಗ ಉಪಾಯವೊಂದು ಹೊಳೆದಿತ್ತು. ಆ ಕೂಡಲೇ ಪೇಸ್ಬುಕ್ನಲ್ಲಿ ಕೃಷಿಗೆ ಸಂಬಂಧಿಸಿದ ಪೇಜ್ ಒಂದನ್ನು ಸೃಷ್ಟಿಸಿ ಅದರಲ್ಲಿ ಕೃಷಿಗೆ ಸಂಬಂಧಿಸಿದ ಮಾಹಿತಿಗಳನ್ನು ಪೋಸ್ಟ್ ಮಾಡಲು ಶುರು ಮಾಡಿದೆ.ರೈತರ ಸಮಸ್ಯೆಗಳನ್ನು ಆಲಿಸುವ ಕಿವಿಯಾಗಿ ನಿಂತೆ..

ಯಾವ ತಳಿಗೆ ಎಷ್ಟು ಪ್ರಮಾಣದ ಗೊಬ್ಬರ, ನೀರು ಹಾಯಿಸಿದರೆ ಉತ್ತಮ ಬೆಳೆ ತೆಗೆಯಬಹುದು, ಸಸ್ಯಗಳಿಗೆ ತಗುಲುವ ಕೀಟ ಮತ್ತು ರೋಗವನ್ನು ಪತ್ತೆಹಚ್ಚಿ ಯಾವ ರೀತಿಯ ಚಿಕಿತ್ಸಾಕ್ರಮಗಳನ್ನು ಕೈಗೊಳ್ಳಬಹುದು, ಸಾವಾಯವ ಗೊಬ್ಬರವನ್ನು ನಾವೇ ತಯಾರಿಸಿ ರಾಸಾಯನಿಕಗಳಿಂದ ಮುಕ್ತವಾದ ಉತ್ಪನ್ನಗಳನ್ನು ಉತ್ಪಾದಿಸುವುದು ಹೇಗೆ?, ತರಕಾರಿ ಮತ್ತು ಬೇಳೆಕಾಳುಗಳ ದಿನದ ರೇಟಿನ ಬಗ್ಗೆ ರೈತರಿಗೆ ಮಾಹಿತಿಯೊದಗಿಸುವ ಬಗ್ಗೆ, ಯಾವುದೇ ಕೃಷಿ ಸಂಬಂಧಿ ಸಮಸ್ಯೆಗಳ ಕುರಿತು ಮುಕ್ತವಾಗಿ ಚರ್ಚಿಸಲು ಈ ಪೇಜಿನಿಂದ ಸಾಧ್ಯವಾಯ್ತು..ಹಾಗೇ 'ವರ್ಷದ ಉತ್ತಮ ರೈತ' ಎಂಬ ಬಿರುದು ಸಹ ಲಭಿಸಿತು....

ಇಂದು ನಾನೊಬ್ಬ 'ಆದರ್ಶ ರೈತ' ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ.... ಹೆಚ್ಚು ಅಂಕಗಳಿಸಿ ಉತ್ತೀರ್ಣರಾದ ತಕ್ಷಣ ಪಟ್ಟಣ ಸೇರಿಬಿಡಬೇಕು, ಹೇಗೋ ಅಲ್ಲೊಂದು ಒಳ್ಳೇ ಕೆಲಸ ಗಿಟ್ಟಿಸಿಕೊಂಡರೆ ಒಳ್ಳೇ ಸಂಬಳ ಸಿಗುತ್ತದೆ! ಅಲ್ಲಿಗೆ ನಮ್ಮ ಲೈಪ್ ಸೆಟಲ್ ಎಂದುಕೊಳ್ಳುವ ನನ್ನಂತಹ ಮನಃಸ್ಥಿತಿಯವನನ್ನು ಹೊರಗಡೆ ಕರೆದುಕೊಂಡು ಬಂದ ಸೌರಭಿ ಇಂದು ನನ್ನ ಸಂಗಾತಿ, ನನ್ನೆಲ್ಲ ಸಾಧನೆಗೆ ಸ್ಪೂರ್ತಿಯವಳು, ನನ್ನ ಜೀವನದ ದಿಕ್ಕನ್ನು ಅರ್ಥಪೂರ್ಣ ಹಾದಿಯತ್ತ ನಡೆಸಿದ ನನ್ನವಳನ್ನು ಕೈ ಹಿಡಿದಿದ್ದಕ್ಕೆ ಹೆಮ್ಮೆ ಎನಿಸುತ್ತದೆ ನನಗೆ.....

"ಹೋಯ್ ಹೈದಾ,..... ಮುಸ್ಸಂಜೆಯಾಯ್ತು ಮನೇಲಿ ಒಬ್ಬಳು ಹೆಂಡತಿ ಇರುತ್ತಾಳೆ, ನಿಮ್ಮ ದಾರಿಯನ್ನೇ ಕಾಯುತ್ತಿರುತ್ತಾಳೆ ಅನ್ನೋ ಪರಿಜ್ಞಾನ ಇಲ್ಲವೇನು? " ಎಂದೆನ್ನುತ್ತ ನನ್ನತ್ತಲೇ ಬರುತ್ತಿದ್ದ ಸೌರಭಿಯನ್ನು ಕಣ್ತುಂಬಿಕೊಂಡೆ..

"ಹೇ ಸೌರಭಿ ನಿನ್ನ ಮಡಿಲಲ್ಲಿ ಮಲಗಲ?"

"ಅದಕ್ಕೇನಂತೆ" ಎಂದು ನನ್ನನ್ನು ಮಗುವಿನಂತೆ ಅವಳ ತೊಡೆಯ ಮೇಲೆ ಮಲಗಿಸಿಕೊಂಡವಳು ನನ್ನ ಕೂದಲುಗಳಲ್ಲಿ ನವಿರಾಗಿ ಬೆರಳಾಡಿಸುತ್ತಿದ್ದಳು...

ಅವಳ ಮಡಿಲಲ್ಲಿ ಮಲಗಿ ಪೂರ್ಣ ಚಂದ್ರನನ್ನು ದಿಟ್ಟಿಸುತ್ತ "ಸೌರಭಿ ಅವತ್ತು ನೀನೇಳಿದ ಮಾತು ಅಕ್ಷರಶಃ ನಿಜ ಎನಿಸುತ್ತಿದೆ ನನಗೆ, ಈ ಹುಲ್ಲಸಿರಿನ ಮೇಲೆ, ತಂಪಾದ ಗಾಳಿಯಲ್ಲಿ, ನಿನ್ನ ಹೂವಂತ ಮಡಿಲಲ್ಲಿ ಮಲಗಿ ಆಗಸದ ಚಂದ್ರನನ್ನು ದಿಟ್ಟಿಸುತ್ತಿರುವ ನಾನೇ ಅದೃಷ್ಟಶಾಲಿ. ಪಟ್ಟಣದ ಯಾಂತ್ರಿಕತೆಗಿಂತ ಹಳ್ಳಿಯ ಸೊಗಡೇ ಮನಸ್ಸಿಗೆ ಹಿತವೆನ್ನಿಸುತ್ತಿದೆ. ಈ ಸಮಯದಲ್ಲಿ ಒಂದು ಸಾಲು ನೆನಪಿಗೆ ಬರುತ್ತಿದೆ ನನಗೆ, ಹೇಳ್ಲ?

"ಹೇಳಿ ಯಜಮಾನರೇ ಕೇಳೋಣ" ಎಂದು ಮೂಗನ್ನು ಹಿಂಡಿದ್ದಳು...

ಬೆಚ್ಚನೆಯ ಮನೆ ಇರಲು

ವೆಚ್ಚಕೆ ಹೊನ್ನಿರಲು

ಇಚ್ಚೆಯನರಿವ ಸತಿಯಿರಲು

ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ

ಸರ್ವಜ್ಞ...

"ಹೊಗಳಿದ್ದು ಮುಗಿದಿದ್ದರೆ, ನಿಮಗೋಸ್ಕರ ಅಂತ ಬಿಸಿಬಿಸಿ ಹೋಳಿಗೆ ಮಾಡಿದ್ದೇನೆ ತಿನ್ನುವಿಯರಂತೆ ಬನ್ನಿ ಹೋಗೋಣ" ಎಂದು ಮೇಲೆಳಲು ಹೊರಟವಳನ್ನು ಅರ್ಧಕ್ಕೆ ತಡೆದು "ಸೌರಭಿ ಕುತೂಹಲಕ್ಕೆ ಕೇಳ್ತೀನಿ ನಿಜ ಹೇಳು ಮೊದಲ ಸಾರ್ತಿ ನನ್ನನ್ನ ಮಾವಿನತೋಟದಲ್ಲಿ ನೋಡಿದಾಗ ಏನೆನ್ನಿಸಿತತ್ತು ನಿನಗೆ?"

"ನಿಜ ಹೇಳ್ಲ?"

"ಖಂಡಿತ"

"ಹುಡುಗಿಯರ ಕಳ್ಳ ಎನ್ನಿಸಿತ್ತು" ಎಂದು ಬಾಯಿಯ ಮೇಲೆ ಬೆರಳಿಟ್ಟು ನಗಾಡುತ್ತ ಅವನಿಂದ ತಪ್ಪಿಸಿಕೊಂಡು ದೂರಕ್ಕೆ ಓಡಿದ್ದಳು...

"ಏಯ್ ತರ್ಲೇ ನಿಂತ್ಕೋ ಅಲ್ಲಿ ಇದೇ ನಿಂಗೆ ಇವತ್ತು" ಎಂದು ಅವಳನ್ನು ಅಟ್ಟಾಡಿಸಿಕೊಂಡು ಹೊರಟೆ.......

*********************************************

ರೈತನ ಅಷ್ಟೂ ಬೆರಳುಗಳು ಮಣ್ಣೊಳಗಿಳಿದಾಗ ಮಾತ್ರ ನಮ್ಮ ಐದೂ ಬೆರಳುಗಳನ್ನು ಸರಾಗವಾಗಿ ಬಾಯೊಳಗಿಳಿಸಲು ಸಾಧ್ಯ, ಅವನ ಒಂದೊಂದು ಶ್ರಮದ ಬೆವರಕಣವೂ ಒಂದೊಂದು ಅನ್ನದ ಅಗುಳಿಗೆ ಸಮಾನ.. ಶೋಕಿಗೆಂದು ತಟ್ಟೆಯಲ್ಲಿ ಊಟ ಬಿಡುವುದನ್ನು ನಿಲ್ಲಿಸಿ, ತಿನ್ನಲು ಇಲ್ಲದ ಬಡಪಾಯಿಗಳಿಗೆ ಅನ್ನವನ್ನಿಕ್ಕುದ್ಧರಿಸಿ.


 



Rate this content
Log in

Similar kannada story from Romance