STORYMIRROR

Achala B.Henly

Abstract Romance Inspirational

4  

Achala B.Henly

Abstract Romance Inspirational

ಬದುಕು ಸಿಹಿ ಕಹಿಗಳ ಹೂರಣವಿದ್ದಂತೆ

ಬದುಕು ಸಿಹಿ ಕಹಿಗಳ ಹೂರಣವಿದ್ದಂತೆ

7 mins
479



             

ಅಂದು ನನ್ನ ಹುಡುಗ ದೂರದ ದುಬೈಯಿಂದ ಫೋನಾಯಿಸಿ "ಇನ್ನು ಹದಿನೈದು ದಿನಗಳಲ್ಲಿ ಬೆಂಗಳೂರಿಗೆ ಬರುತ್ತಿದ್ದೇನೆ. ನಿಶ್ಚಿತಾರ್ಥದ ತಯಾರಿ ಆಗಿದೆಯಲ್ಲವೇ...? ಸೀರೆ ಒಡವೆಗಳೆಲ್ಲಾ ಇಟ್ಟುಕೊಂಡು ರೆಡಿಯಾಗಿದ್ದೀಯಾ ತಾನೇ..?" ಎಂದು ಕೇಳಿದ್ದ. ಖುಷಿಯಿಂದಲೇ ಉತ್ತರಿಸಿದ ನಾನು "ಹೂಂ ಮೋಹನ್, ನಿಮ್ಮ ಮನೆಯವರು ಕೊಡಿಸಿರುವ ಸೀರೆಗೆ ಬ್ಲೌಸ್ ಹೊಲೆಯಲು ಕೊಟ್ಟಿದ್ದೇನೆ. ಒಂದೊಂದೇ ತಯಾರಿ ಸದ್ದಿಲ್ಲದೆ ನಡೆಯುತ್ತಿದೆ. ನೀವು ನಿಶ್ಚಿಂತೆಯಿಂದ ಹೊರಟು ಬನ್ನಿ" ಎಂದು ಹೇಳಿದ್ದೆ. ದೂರದ ದುಬೈನಲ್ಲಿ ಹೋಟೆಲ್ ಮ್ಯಾನೇಜರ್ ಆಗಿ ದುಡಿಯುತ್ತಿರುವ ಮೋಹನ್, ನನ್ನ ದೂರದ ಸಂಬಂಧಿಯು ಹೌದು. ಗುರುಹಿರಿಯರು ನಿಂತು ನಿಶ್ಚಯಿಸಿರುವ ಮದುವೆಯಿದು. ಇನ್ನಾರು ತಿಂಗಳಿಗೆ ಮದುವೆ. ಮುಂದಿನ ತಿಂಗಳೇ ನಿಶ್ಚಿತಾರ್ಥ.



ಮದುವೆಯಾಗಿ ಸ್ವಲ್ಪ ದಿನಗಳು ಕಳೆದ ಮೇಲೆ ನನ್ನನ್ನು ದುಬೈಗೆ ಕರೆದುಕೊಂಡು ಹೋಗುತ್ತೇನೆ ಎಂದೆನ್ನುತ್ತಾನೆ. ಕಾಣದ ಮಾಯಾಲೋಕಕ್ಕೆ ಹೋದ ಮೇಲೆ ನನ್ನ ಬದುಕು ಹೇಗೋ..? ಎಂಬ ಅಳುಕು ನನ್ನಲ್ಲಿದೆ. ಅದರೊಟ್ಟಿಗೆ ಮದುವೆ ಯಾವ ರೀತಿ ಆಗಬೇಕೆಂಬ ಬಣ್ಣ ಬಣ್ಣದ ಕನಸುಗಳೂ ನನ್ನ ಜೊತೆಗಿವೆ. ಅಪ್ಪ ಅಮ್ಮ ಮತ್ತು ಅಕ್ಕನೂ ಸಹ ನನ್ನ ಯಾವ ಕನಸುಗಳಿಗೂ ಬೇಡ ಎನ್ನುತ್ತಿಲ್ಲ..!! ಅಕ್ಕನ ಮದುವೆಗಿಂತ ಹೆಚ್ಚು ವಿಜೃಂಭಣೆಯಿಂದ ಮದುವೆ ಮಾಡಿ ಗಂಡನ ಮನೆಗೆ ಮಗಳನ್ನು ಕಳಿಸಿಕೊಡಬೇಕೆಂದು, ಸಕಲ ರೀತಿಯಲ್ಲಿ ತಯಾರಿ ಮಾಡುತ್ತಿದ್ದಾರೆ.



ಮೊದಲಿನಿಂದಲೂ ಅಲಂಕಾರಪ್ರಿಯೆ ನಾನು. ಅದರೊಂದಿಗೆ ಫಂಕ್ಷನ್ ಗಳೆಂದರೆ ಬಲು ಇಷ್ಟ. ಇನ್ನು ನನ್ನದೇ ಮದುವೆ ಎಂದರೆ ಕೇಳಬೇಕೆ..!! ನನ್ನ ಕನಸುಗಳಿಗೆ ರೆಕ್ಕೆ ಪುಕ್ಕ ಕಟ್ಟಿ, ಆನಂದಲೋಕದಲ್ಲಿ ಸದಾ ವಿಹರಿಸುತ್ತಿದ್ದೇನೆ. ಮದುವೆಯ ಹಿಂದಿನ ದಿನದ ಅರಿಶಿಣ ಶಾಸ್ತ್ರ, ಬಳೆ ಶಾಸ್ತ್ರ, ಮೆಹೆಂದಿ ಶಾಸ್ತ್ರ, ಸಂಗೀತ ಕಾರ್ಯಕ್ರಮ ಇವೆಲ್ಲದಕ್ಕೂ ಬಗೆ ಬಗೆಯ ಒಡವೆ ಉಡುಪು ಕೊಂಡುಕೊಳ್ಳಬೇಕೆಂದು ನಾನು ಮತ್ತು ನನ್ನ ಅಕ್ಕ ಪಟ್ಟಿ ಮಾಡುತ್ತಲೇ ಇದ್ದೇವೆ. ನನ್ನಮ್ಮನಂತೂ "ಬಹುಶಃ ನಿನ್ನ ಮದುವೆ ಮುಗಿದರೂ ನಿನ್ನ ಪಟ್ಟಿ ತಯಾರಿ ಮುಗಿದಿರುವುದಿಲ್ಲ ವೀಣಾ...!!" ಎಂದು ಛೇಡಿಸುತ್ತಾರೆ.



ಇವೆಲ್ಲದರ ಮಧ್ಯೆ ಒಬ್ಬ ಕಳ್ಳ ಆಗಾಗ ಇಣುಕಿ ಹಾಕಿ ನನಗೆ ಉಪದ್ರವ ಕೊಡುತ್ತಿದ್ದಾನೆ. ಸರಿಯಾಗಿ ತಿಂಗಳಿಗೊಮ್ಮೆ ಬಾ ಎಂದರೆ ಬರದೇ, ಇಷ್ಟ ಬಂದಾಗ ಬಂದು ಹಾಜರಿಯನ್ನು ಹಾಕಿ ಹೋಗುತ್ತಾನೆ..!! ನನಗಂತೂ ಅದೇ ಒಂದು ಟೆನ್ಶನ್ ಆಗಿಬಿಟ್ಟಿದೆ. "ಪೀರಿಯಡ್ಸ್ ಸೈಕಲ್" ಸರಿಯಾಗಿ ತಿಂಗಳಿಗೊಮ್ಮೆ ಆಗಲಿ ಎಂದು ಬೇಡಿದ ದೇವರಿಲ್ಲ, ಕಾಣದ ಡಾಕ್ಟರ್ ಇಲ್ಲ. ಆದರೆ ಯಾಕೋ ಇನ್ನೂ ಮುಟ್ಟು ಸರಿಯಾಗಿಲ್ಲ. ಒಂದೊಂದು ಸಲ ಇಪ್ಪತೈದು ದಿನಕ್ಕೆ ಆದರೆ, ಕೆಲವೊಮ್ಮೆ ಮೂವತ್ತೈದು ದಿನಕ್ಕೆ, ಮತ್ತೂ ಕೆಲವೊಮ್ಮೆ ಐವತ್ತು ದಿನಗಳಾದರೂ ಆಗುವುದಿಲ್ಲ..!!



ಯಾವುದೇ ಪಥ್ಯವನ್ನು ಮಾಡಿದರೂ ಇದು ಸರಿಯಾಗುವ ಸೂಚನೆಯೂ ಸಿಗುತ್ತಿಲ್ಲ. "ನೀವು ನಿಮ್ಮ ಡಯಟ್ ಮತ್ತು ವ್ಯಾಯಾಮವನ್ನು ಮುಂದುವರಿಸುತ್ತಲೇ ಇರಿ. ಮದುವೆಯಾದ ಮೇಲೆ ಸರಿಯಾಗಬಹುದು" ಎಂದು ಒಂದಿಬ್ಬರು ಡಾಕ್ಟರ್ ಹೇಳಿದರು. "ದೇವರೇ ಪೀರಿಯಡ್ಸ್ ಸರಿಯಾಗಲಿ ಎಂದು ಗಂಡನ್ನು ಹುಡುಕಿ ಇಷ್ಟು ಬೇಗ ಮದುವೆಯಾಗಬೇಕೆ..?" ಎಂದು ಮೂರು ವರ್ಷಗಳ ಹಿಂದೆ ಅಂದುಕೊಂಡಿದ್ದೆ. ಅಂತೂ ನನ್ನ ಮದುವೆ ಈಗ ಫಿಕ್ಸ್ ಆಗಿದೆ.



ಮೋಹನ ರಾಗಕ್ಕೆ ಜುಗಲ್ಬಂದಿಯಾಗಿ ಇರುವುದಕ್ಕೆ ವೀಣೆಯ ನಾದ ಸೇರುತ್ತಿದೆ. ಮುಂದೆ ಮಕ್ಕಳು ಹುಟ್ಟಿದಾಗ ನಮ್ಮ ಗಾನ ಬಜಾನ ಕೇಳಿ ಅವರೂ ಖಂಡಿತ ನೃತ್ಯ ಮಾಡುತ್ತಾರೆ...!! ಎಂದು ನನ್ನವ ಮೋಹನ ಆಗಾಗ ರೇಗಿಸುತ್ತಾನೆ.



ಆದರೆ ಈ ನನ್ನ ಪೀರಿಯಡ್ಸ್ ಅನ್ನು ಮದುವೆ ಸಮಯದಲ್ಲಿ ಸರಿದಾರಿಗೆ ತರುವುದು ಹೇಗೆ..? ಮತ್ತೆ ಡಾಕ್ಟರ್ ಹತ್ತಿರ ಹೋಗುವುದಾ ಅಥವಾ ಯಾವುದಾದರೂ ಮನೆಮದ್ದನ್ನೇ ಪ್ರಯತ್ನಿಸಲಾ..!! ಬಿಡು ಇನ್ನೂ ಆರು ತಿಂಗಳ ಸಮಯಾವಕಾಶವಿದೆ. ಸಧ್ಯಕ್ಕೆ ನಿಶ್ಚಿತಾರ್ಥದ ಬಗ್ಗೆ ಯೋಚಿಸಿ, ಮನಸ್ಸು ಹಗುರ ಮಾಡಿಕೊಳ್ಳೋಣ..!!



        ********************



ಅಯ್ಯೋ ನಾಳೆಯೇ ನಿಶ್ಚಿತಾರ್ಥ. ನಾನೇನು ಮಾಡಿಕೊಂಡುಬಿಟ್ಟೆ..!! ಬರೀ ಶಾಪಿಂಗ್, ಹೊರಗಡೆ ತಿಂಡಿ, ಹೋಟೆಲ್ ಊಟವೆಂದು ಸುತ್ತಾಡಿ, ಆರೋಗ್ಯ ಕೆಡಿಸಿಕೊಂಡುಬಿಟ್ಟೆನಲ್ಲ..!! ಅಮ್ಮ ಅಕ್ಕ ಎಷ್ಟೋ ಸಲ ಎಚ್ಚರಿಸಿದರೂ ಕೇಳದೆ, ಈ ರೀತಿ ಮಾಡಿಕೊಂಡುಬಿಟ್ಟೆನಲ್ಲ..!! ಫಂಕ್ಷನ್ ಹತ್ತಿರ ಬಂದಂತೆಲ್ಲ "ಓಡಾಟ ಕಡಿಮೆ ಮಾಡು ವೀಣಾ. ಇನ್ನೊಂದು ವಾರಕ್ಕೆ ನಿನ್ನ ಎಂಗೇಜ್ಮೆಂಟ್. ಹೊರಗಡೆ ಹೀಗೆ ಸುತ್ತುತ್ತಿದ್ದರೆ ನಿನ್ನ ಮೈ ಹೊಳಪು ಕಡಿಮೆಯಾಗುತ್ತದೆ ಮತ್ತು ನೀನೂ ಸುಸ್ತಾಗುತ್ತೀಯಾ" ಎಂದು ಹೇಳಿದಳಲ್ಲವೇ ನನ್ನಮ್ಮ..!!



ನಾನೇ ಅವಳ ಮಾತನ್ನು ಉಪೇಕ್ಷಿಸಿ ಬೋಟಿಕ್, ಮಾಲ್, ಬ್ಯೂಟಿ ಪಾರ್ಲರ್, ಹಸಿವಾದಾಗ ಚಾಟ್ಸ್, ಹೋಟೆಲ್ ಊಟವೆಂದು ಗೆಳತಿಯರೊಂದಿಗೆ ಸುತ್ತಲು ಶುರುಮಾಡಿದೆ. ಮೊದಲು ಅಕ್ಕ ಬರುತ್ತಿದ್ದವಳು ಕೊನೆಗೆ, "ನಿನ್ನ ತಿರುಗಾಟ ಏಕೋ ಮುಗಿಯುವಂತೆ ಕಾಣುತ್ತಿಲ್ಲ. ನಾನು ಬೇರೆ ನನ್ನ ಪುಟ್ಟ ಮಗಳನ್ನು ನೋಡಿಕೋಬೇಕು" ಎಂದು ನನ್ನ ಜೊತೆ ಬರಲು ನಿಲ್ಲಿಸಿದಳು. "ಅಯ್ಯೋ ಅವಳು ಬರೆದಿದ್ದರೇನಂತೆ..? ನನ್ನ ಇಬ್ಬರು ಗೆಳತಿಯರೊಂದಿಗೆ ಸುತ್ತಾಡಿ ನನಗೆ ಬೇಕಾದ ವಸ್ತುಗಳನ್ನು ತೆಗೆದುಕೊಂಡು, ಎಂಗೇಜ್ಮೆಂಟ್ ದಿನ ಮೋಹನ್ ಮುಂದೆ ಮಿಂಚುತ್ತೇನೆ" ಎಂದು ಪೂರ್ತಿ ಆರೋಗ್ಯವನ್ನು ಕಡೆಗಣಿಸಿಬಿಟ್ಟೆ.



ಮೊದಲೇ ಬೇಸಿಗೆಗಾಲ. ನನ್ನದು "ಹೀಟ್ ಬಾಡಿ" ಬೇರೆ. ನೀರು ಕುಡಿಯುವುದನ್ನು ಕಡೆಗಣಿಸಿ, ಚಾಟ್ಸ್ ಮತ್ತು ಹೋಟೆಲ್ ಸ್ಪೈಸಿ ಊಟಕ್ಕೆ ಜೋತುಬಿದ್ದೆ. ಪರಿಣಾಮವಾಗಿ ಅವಿತುಕೊಂಡಿದ್ದ "ಅಸಿಡಿಟಿ" ಶುರುವಾಗಿ, ನೆನ್ನೆ ರಾತ್ರಿಯಿಂದ ಎದೆಯುರಿ ಪ್ರಾರಂಭವಾಯಿತು. ಅಮ್ಮ ನಿಂಬೆ ಪಾನಕ ಮಾಡಿಕೊಟ್ಟರು. ಅದನ್ನು ಕುಡಿದೇಟಿಗೆ ವಾಂತಿ. ನಂತರ ನೀರನ್ನಾದರೂ ಕುಡಿ ಎಂದರು. ಕುಡಿದರೆ ಅದೂ ಕೂಡ ವಾಂತಿ. ಏನು ತಿಂದರೂ, ಕುಡಿದರೂ ವಾಂತಿಯಾಗುತ್ತಿದೆ..!!



ಕೊನೆಗೆ ಡಾಕ್ಟರ್ "ಇವರ ಹೊಟ್ಟೆಯೊಳಗೆ ಔಷಧಿ ಹೋಗದಷ್ಟು ಅಸಿಡಿಟಿ ಜಾಸ್ತಿಯಾಗಿದೆ. ಎಲ್ಲವೂ ವಾಂತಿ ಆಗುತ್ತಿದೆ. ಡ್ರಿಪ್ಸ್ ಮೂಲಕ ಔಷಧಿ ಹಾಕುವುದೇ ಸರಿ" ಎಂದು ಅಡ್ಮಿಟ್ ಮಾಡಿಕೊಂಡರು. ನಾನಂತೂ ನಿಲ್ಲಲು ಕೂರಲೂ ಆಗದಷ್ಟು ನಿತ್ರಾಣಳಾಗಿದ್ದೆ. ಅದರ ಜೊತೆ ಸಾಕಷ್ಟು ಕನಸು ಕಂಡ ನಿಶ್ಚಿತಾರ್ಥ ನಾಳೆಯೇ ಇದೆ..!!



"ಮೊದಲು ನಾನು ಸರಿಯಾದರೆ ಸಾಕಪ್ಪಾ ದೇವರೇ..!!" ಎಂದು ಡ್ರಿಪ್ಸ್ ಹಾಕಿಸಿಕೊಂಡೆ. ಮೋಹನನು ವಿಡಿಯೋ ಕಾಲ್ ಮಾಡಿ "ಏನೂ ಚಿಂತಿಸಬೇಡ, ನಾಳೆಗೆ ಸರಿಹೋಗಿರುತ್ತೀಯಾ" ಎಂದು ಸಮಾಧಾನಪಡಿಸಿದನು. ದಣಿದಿದ್ದ ದೇಹ ಕಣ್ರೆಪ್ಪೆಗಳನ್ನು ಮುಚ್ಚುವಂತೆ ಮಾಡಿತು. ಎರಡು ದಿನಗಳಿಂದ ನಿದ್ದೆಯಿಲ್ಲದೆ ಚಡಪಡಿಸುತ್ತಿದ್ದ ದೇಹ, ಹಾಗೆಯೇ ನಿದ್ರೆಗೆ ಜಾರಿತು...!!



********************************

       

           

ಇನ್ನು ಹದಿನೈದೇ ದಿನ. ನಾನು ನನ್ನವನಿಗೆ ಅಧಿಕೃತವಾಗಿ ಪತ್ನಿ ಎನಿಸಿಕೊಳ್ಳಲು. ಆಮೇಲಿಂದ ನಾನು ಮಿಸ್ಸೆಸ್ ವೀಣಾ ಮೋಹನ್ ಆಗುತ್ತೇನೆ..!! "ದೇವರೇ ಎಂಗೇಜ್ಮೆಂಟ್ ಫೋಟೋ ಆಲ್ಬಮ್ ನೋಡುವಾಗ, ನಾನಂದು ಪಟ್ಟ ಕಷ್ಟವೆಲ್ಲ ಧುತ್ತನೇ ಕಣ್ಣೆದುರಿಗೆ ಬರುತ್ತದೆ. ಎಷ್ಟು ಕನಸುಗಳನ್ನು ಕಂಡಿದ್ದೆನಲ್ಲವೇ..? ಅವೆಲ್ಲವೂ ಹಾಳು ಎಸಿಡಿಟಿಯಿಂದ ನೀರಿನಲ್ಲಿ ಹೋಮ ಮಾಡಿದ ಹಾಗಾಯಿತು..!! ಈ ಫೋಟೋಗಳಲ್ಲಿ ಮೇಕಪ್ ಮಾಡಿದರೂ ಸಹ ದಣಿವಿನಿಂದ ಕೂಡಿದೆ ನನ್ನ ಮುಖ. ಎಲ್ಲಾ ನನ್ನ ಅತಿಯಾದ ತಿರುಗಾಟದಿಂದಲ್ಲವೇ..!! ಮನೆಯವರೆಲ್ಲ ಹೇಳಿದರೂ ಅವರ ಮಾತುಗಳನ್ನು ಕಿವಿಗೆ ಹಾಕಿಕೊಳ್ಳದ ಕಾರಣ, ನನ್ನ ಕನಸಿನ ನಿಶ್ಚಿತಾರ್ಥದ ದಿನದಂದು ನಿಲ್ಲಲೂ ಸುಸ್ತಾಗುತ್ತಿತ್ತು..!! ಅಂತೂ ಅದು ಹೇಗೋ ನನ್ನ ಮತ್ತು ಗಂಡಿನ ಮನೆಯವರ ನೆರವಿನಿಂದ ಆ ದಿನ ಕಳೆಯಿತು. ಆದರೆ ನಾನಂದುಕೊಂಡಂತೆ ಆಗಲಿಲ್ಲವಲ್ಲ ಎಂಬ ವ್ಯಥೆಯಷ್ಟೇ".



ಇನ್ನೂ ನನ್ನ ಪೀರಿಯಡ್ಸ್ ಆಗಿಯೇ ಇಲ್ಲವಲ್ಲ..? ಅಕ್ಕ "ಡಾಕ್ಟರ್ ಬಳಿ ಹೋಗಿ ಕೇಳೋಣ. ಅವರೇನಾದರೂ ಮದುವೆಗೆ ಮುಂಚಿತವಾಗಿ ಆಗುವಂತೆ ಟ್ಯಾಬ್ಲೆಟ್ಸ್ ಕೊಟ್ಟರೆ, ದಯಮಾಡಿ ತೆಗೆದುಕೋ. ಯಾವಾಗಲೂ ನಿನ್ನದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಡ" ಎಂದಿದ್ದಳಲ್ಲವೇ... ಆದರೆ ಅವಳ ಮುಂದೆ ನಾನು ಹೂಂಗುಟ್ಟಿದರೂ, ನಂತರ ಗೂಗಲ್ ಮೊರೆಹೋದೆ..!! ಅವಧಿಗೆ ಮುಂಚಿತವಾಗಿ ಪೀರಿಯಡ್ಸ್ ಆಗಬೇಕೆಂದರೆ ಏನು ಮಾಡಬೇಕು, ಯಾವ ಮನೆಮದ್ದನ್ನು ತೆಗೆದುಕೊಳ್ಳಬೇಕು ಎಂದು ನೋಡಿದೆ. ಅಂತೂ ನನ್ನ ಪ್ರಶ್ನೆಗೆ ಉತ್ತರ ಸಿಕ್ಕಿತ್ತು. "ಪಪ್ಪಾಯಿ ಕಾಯಿಯನ್ನು" ತಿನ್ನುತ್ತಿದ್ದರೆ ಪೀರಿಯಡ್ಸ್ ಆಗುತ್ತದೆ ಎಂದು ಗೂಗಲ್ ಹಲವು

ಲೇಖನಗಳಲ್ಲಿ ಬರೆದಿತ್ತು..!!



ನಾನೂ ಏಕೆ ಇದನ್ನು ಪ್ರಯತ್ನಿಸಬಾರದು..? ಎಂದು ಅನಿಸಿತು. ಅದರೊಂದಿಗೆ ನಿಶ್ಚಿತಾರ್ಥದ ಸಮಯದಲ್ಲಿ "ಅಸಿಡಿಟಿಯಿಂದ" ಆದ ಎಡವಟ್ಟಿನ ಬಗ್ಗೆಯೂ ನೆನಪಾಗಿ ಭಯವಾಗುತ್ತಿತ್ತು. ಇನ್ನೂ ಒಂದು ವಾರ ಕಾಯೋಣ. ಆಗದಿದ್ದರೆ ಪಪ್ಪಾಯಿ ಕಾಯಿಯನ್ನು ತಿನ್ನೋಣ ಎಂದುಕೊಂಡೆ. ದಿಢೀರನೆ ಇನ್ನೊಂದು ಕಡೆಗೆ ನನ್ನ ಯೋಚನೆ ವಾಲಿತು. ಇನ್ನೆರಡು ತಿಂಗಳಿಗೆ ಮೋಹನ್ ನೊಂದಿಗೆ ನಾನು ದುಬೈಗೆ ಸ್ಥಳಾಂತರವಾಗಬೇಕೆಲ್ಲವೇ..!! ಹುಟ್ಟಿದ ಈ ಊರು, ನನ್ನ ಮನೆ, ನನ್ನ ಕುಟುಂಬವನ್ನು ಬಿಟ್ಟು ಕಾಣದ ಆ ದೂರದ ದುಬೈಗೆ ಹೇಗಪ್ಪಾ ಹೋಗಲಿ..? ಹೋದ ನಂತರ ಕೆಲಸಕ್ಕೆ ಮೋಹನ್ ತೆರಳಿದಾಗ, ಮನೆಯಲ್ಲಿ ನಾನು ಒಬ್ಬಳೇ ಹೇಗೆ ಇರಲಿ..? ಎಂಬ ಚಿಂತೆ ಶುರುವಾಯಿತು.



ಮುಂದಿನ ಪರದೇಶದ ಜೀವನವನ್ನು ಕಲ್ಪಿಸಿಕೊಳ್ಳಲು ಬೇಸರವಾಗಿ, ಹಾಗೆಯೇ ನಿದ್ರೆಗೆ ಜಾರಿದೆ. ನಿದ್ದೆಯಲ್ಲಿ ಮೋಹನ್ ಬೆಂಗಳೂರಿಗೆ ಶಿಫ್ಟ್ ಆದಂತೆ ಕನಸು ಬಿತ್ತು..!! ಥಟ್ಟನೇ ಎದ್ದು "ಭಗವಂತ ಇದೊಂದು ನನ್ನ ಆಸೆಯನ್ನು ಹೇಗಾದರೂ ಈಡೇರಿಸಿಬಿಡು..!!" ಎಂದುಕೊಂಡು ಸಂಜೆಯ ವಾಕಿಂಗ್ ಗೆ ಹೋದೆ.



       ***********************



ಇನ್ನೆಂಟು ದಿನಗಳಲ್ಲಿ ನನ್ನ ಮದುವೆ. ಕಹಿಯಾದರೂ ಸರಿಯೇ ಇಂದಿನಿಂದ ಈ ಪಪ್ಪಾಯಿ ಕಾಯಿಯನ್ನು ತಿನ್ನಲು ಶುರು ಮಾಡುತ್ತೇನೆ. ಪೀರಿಯಡ್ಸ್ ಆಗಿ, ನಾನು ನನ್ನ ಮದುವೆ ಸಮಯದಲ್ಲಿ ಫ್ರೀಯಾಗಿ ಇದ್ದರೆ ಅಷ್ಟೇ ಸಾಕು..!! ಎಂದು ಯಾರಿಗೂ ಗೊತ್ತಾಗದ ಹಾಗೆ, ನನ್ನ ರೂಮಿನಲ್ಲಿ ಒಂದೊಂದೇ ಪಪ್ಪಾಯಿ ತುಂಡನ್ನು ತಿನ್ನಲು ಶುರುಮಾಡಿದೆ. ಕಾಯಿ ಬಹಳ ಕಹಿಯಾಗಿ ಒಗೊರೊಗರಾಗಿ ಇತ್ತು. ಆದರೂ ನಾನು ನನ್ನ ಎಕ್ಸ್ಪರಿಮೆಂಟ್ ನಲ್ಲಿ ಗೆಲ್ಲಬೇಕೆಂಬ ಅತಿಯಾದ ಆಸೆಯಿಂದ, ಎರಡ್ಮೂರು ದಿನ ನನ್ನ ರೂಮಿನಲ್ಲಿ ಆಗಾಗ ತಿನ್ನುತ್ತಿದ್ದೆ..!! ಅದರೊಂದಿಗೆ ನನ್ನ ಮದುವೆಯ ತಯಾರಿಯೂ ಸಂಭ್ರಮ ಸಡಗರದಿಂದ ನಡೆಯುತ್ತಿತ್ತು..!!



ಅಂದು ಬೆಳಿಗ್ಗೆ ಎದ್ದಾಗಲೇ ಒಂದು ರೀತಿಯ ಹೊಟ್ಟೆಯ ನೋವು. "ಅಬ್ಬಾ ಅಂತೂ ನನ್ನ ಮುಟ್ಟು ಈ ಸಲ ಕೈ ಕೊಡದೆ, ಪಪ್ಪಾಯಿ ಕಾಯಿಯ ದಯೆಯಿಂದ ಶುರುವಾಯಿತು" ಎಂದು ಖುಷಿಪಟ್ಟೆ. ಆದರೆ ಆ ಖುಷಿ ಕೆಲವೇ ನಿಮಿಷಗಳಲ್ಲಿ ಮಾಯವಾಗುತ್ತದೆ ಎಂದು ನಂತರ ಗೊತ್ತಾಯಿತು..!! ಬರುಬರುತ್ತಾ ನನ್ನ ಹೊಟ್ಟೆ ನೋವು ಜಾಸ್ತಿಯಾಗಲು ಶುರುವಾಯ್ತು. ಎಷ್ಟೆಂದರೆ ನಾನು ಬಿದ್ದು ಹೊರಳಾಡುವಷ್ಟು..!! ಹೇಗೋ ಬಾಗಿಲನ್ನು ಕಷ್ಟಪಟ್ಟು ತೆಗೆದು ಅಮ್ಮನನ್ನು ಕರೆದು ವಿಚಾರ ತಿಳಿಸಿದೆ. ಗಾಬರಿ ಬಿದ್ದ ಅಮ್ಮ ಕೂಡಲೇ ಖರೀದಿಗೆಂದು ಹೊರಗೆ ಹೋಗಿದ್ದ ಅಪ್ಪನನ್ನು ಫೋನ್ ಮಾಡಿ ಕರೆದರು. ಅಕ್ಕನೂ ಅವಳ ಮನೆಯಿಂದ ಬಂದಳು.



ಕೂಡಲೇ ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ನನ್ನ ತೀವ್ರವಾದ ಹೊಟ್ಟೆ ನೋವು ಇನ್ನೂ ನಿಂತಿರಲಿಲ್ಲ. ಕಿರುಚಾಡುತ್ತಲೇ ಇದ್ದೆ..!! ಕೊನೆಗೆ ಡಾಕ್ಟರ್ ಒಂದು ಇಂಜೆಕ್ಷನ್ ಕೊಟ್ಟ ಮೇಲೆ, ಹಾಗೆಯೇ ಮಂಪರಿಗೆ ಜಾರಿದೆ. "ಅತಿಯಾಗಿ ಪಪ್ಪಾಯಿ ಕಾಯಿ ತಿಂದಿದ್ದರಿಂದ ನನ್ನ ದೇಹದ ಉಷ್ಣ ಜಾಸ್ತಿಯಾಗಿ ಈ ರೀತಿಯಾಯಿತು" ಎಂದು ಡಾಕ್ಟರ್ ತಿಳಿಸಿದರು. ಮತ್ತೆ ಪ್ರಜ್ಞೆ ಬಂದಾಗ ಡಾಕ್ಟರ್ ನನಗೆ ಸರಿಯಾಗಿ ಬೈದು "ಇಷ್ಟು ತಿಳುವಳಿಕೆ ಉಳ್ಳವರಾಗಿ ಏಕೆ ಈ ರೀತಿ ಯಾರಿಗೂ ತಿಳಿಸದೆ, ಡಾಕ್ಟರನ ಅಡ್ವೈಸ್ ತೆಗೆದುಕೊಳ್ಳದೆ, ಇಂತಹ ಸಾಹಸಕ್ಕೆ ಕೈ ಹಾಕುತ್ತೀರಿ..? ಅದೂ ಬೇರೆ ನಾಲ್ಕು ದಿನಗಳಲ್ಲಿ ನಿಮ್ಮ ಮದುವೆಯಂತೆ, ಹುಷಾರಾಗಿ ಇರಬೇಕಲ್ಲವೇ..?" ಎಂದು ಎಚ್ಚರಿಸಿದರು. ನನ್ನ ಮೂರ್ಖತನಕ್ಕೆ ನನಗೇ ಅವಮಾನವಾಯಿತು.



ಎಂಗೇಜ್ಮೆಂಟ್ ಸಮಯದಲ್ಲಿ ಸುತ್ತಾಡಿ ಎಸಿಡಿಟಿ ಬರಿಸಿಕೊಂಡೆ. ಈ ಸಲ ಇಲ್ಲದ ಜಾಣತನ ಪ್ರದರ್ಶಿಸಿ ಹೊಟ್ಟೆ ನೋವು ಅನುಭವಿಸಿದೆ. ಅಂತೂ ಡಾಕ್ಟರ್ ಕೊಟ್ಟ ಮಾತ್ರೆಗಳಿಂದ ಬೇಗ ಸಾವರಿಸಿಕೊಂಡೆ. ಅದರೊಂದಿಗೆ ಅವರು ಕೊಟ್ಟ ಇನ್ನೊಂದು ಮಾತ್ರೆಯಿಂದ ನನ್ನ ಮುಟ್ಟು ಕೂಡ ಶುರುವಾಯಿತು..!!



ಉಗುರಲ್ಲಿ ಹೋಗುವುದಕ್ಕೆ ಕೊಡಲಿಯನ್ನು ತೆಗೆದುಕೊಂಡೆನಲ್ಲ ಎಂದುಕೊಂಡೆ..!! ಸುಸ್ತು ಆಯಾಸ ಕ್ರಮೇಣ ಕಡಿಮೆಯಾಗಿ ಮದುಮಗಳ ಕಳೆ ನನ್ನಲ್ಲಿ ಬಂದುಬಿಟ್ಟಿತು..!! ನಾನು ಅಂದುಕೊಂಡಂತೆ ಅರಿಶಿನ, ಬಳೆ, ಮೆಹಂದಿ, ಸಂಗೀತ ಕಾರ್ಯಕ್ರಮಗಳು ಎಲ್ಲವೂ ಸಾಂಗವಾಗಿ ನೆರವೇರಿ ಮದುವೆ, ರಿಸೆಪ್ಷನ್ ಗಳೂ ಸಂಭ್ರಮದಿಂದ ನಡೆಯಿತು.



ಮದುವೆಯ ನಂತರದ ದಿನಗಳು ಬಹಳ ಸಂತೋಷಕರವಾಗಿದ್ದವು. ಹೊಸ ಮನೆ, ಹೊಸ ಜಾಗ, ಗಂಡನ ಸಾಮೀಪ್ಯ ಎಲ್ಲವೂ ನನ್ನಲ್ಲಿ ನವೋಲ್ಲಾಸ ತುಂಬುತ್ತಿತ್ತು. ಮದುವೆಯಾಗಿ ಒಂದು ತಿಂಗಳು ಕಳೆಯುವಷ್ಟರಲ್ಲಿ ನಾನು ಸಂಪೂರ್ಣವಾಗಿ ಗಂಡನ ಮನೆಗೆ ಹೊಂದಿಕೊಂಡುಬಿಟ್ಟೆ..!! ಅತ್ತೆ, ಮಾವ, ಮೈದುನ ಎಲ್ಲರೂ ಬಹಳ ಒಳ್ಳೆಯವರು. ನನಗೆ ಇನ್ನೊಂದು ಅಮ್ಮನ ಮನೆ ಸಿಕ್ಕಿದೆ ಎನ್ನುವಂತೆ ನೋಡಿಕೊಳ್ಳುತ್ತಿದ್ದರು. ಆದರೆ ಇನ್ನೆಷ್ಟು ದಿನ..? ಬರುವ ತಿಂಗಳು ನಾನು ದುಬೈಗೆ ಹೋಗಿ ಅಲ್ಲಿ ಒಂಟಿಯಾಗಿ ಬಾಳಬೇಕಲ್ಲವೇ..? "ಇವರಾರೂ ಇಲ್ಲದೆ ಹೇಗಪ್ಪಾ ನಾನಲ್ಲಿ ಸಂತೋಷವಾಗಿ ಇರಲಿ..?" ಎಂದು ಯೋಚಿಸುತ್ತಾ ಚಿಂತಿತಳಾಗುತ್ತಿದೆ.



"ಇನ್ನೆರಡು ವಾರಕ್ಕೆ ಮೋಹನ್ ಬಂದು ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗುತ್ತಾನೆ" ಎಂದುಕೊಳ್ಳುತ್ತಾ ದುಬೈಗೆ ಲಗ್ಗೇಜ್ ಪ್ಯಾಕ್ ಮಾಡಿಕೊಳ್ಳುತ್ತಿದ್ದೆ. ಸಂಜೆ ಆರರ ಸಮಯ. ವಿಡಿಯೋ ಕಾಲ್ ಮಾಡಿದ ಮೋಹನ್ "ನಿನಗೊಂದು ಗುಡ್ ನ್ಯೂಸ್ ಇದೆ. ನಿನ್ನ ಭಾವನೆಗಳನ್ನು ಕಣ್ಣಾರೆ ನೋಡುವ ಎಂದು ವಿಡಿಯೋ ಕಾಲ್ ಮಾಡಿದೆ" ಅಂದ. "ಹೌದೇನು..? ಅದೇನೆಂದು ಬೇಗ ಹೇಳು ಮೋಹನ್..!! ನನಗೀಗಾಗಲೇ ಎದೆ ಹೊಡೆದುಕೊಳ್ಳುತ್ತಿದೆ. ಕೆಲಸದಲ್ಲಿ ಪ್ರಮೋಷನ್ ಸಿಕ್ಕಿ, ಸಂಬಳ ಜಾಸ್ತಿಯಾಯ್ತಾ..?" ಎಂದು ಕೇಳಿದೆ.



"ಇಲ್ಲ ವೀಣಾ, ಅದಕ್ಕಿಂತಲೂ ಮೇಲು..!! ಏನೆಂದು ಹೇಳುತ್ತೇನೆ ಕೇಳು..!! ಇಲ್ಲಿಯ ಹೋಟೆಲ್ ಮ್ಯಾನೇಜರ್ ಕೆಲಸ ನನಗೆ ಸಾಕಷ್ಟು ಅನುಭವ ಕೊಟ್ಟಿದೆ. ಕಳೆದ ಎಂಟು ವರುಷಗಳಿಂದ ಇಲ್ಲೇ ಒಬ್ಬಂಟಿಗನಾಗಿ ದುಡಿಯುತ್ತಿದ್ದೇನೆ. ಮತ್ತೆ ನಿನ್ನನ್ನು ಸಹ ಇಲ್ಲಿಗೆ ಕರೆದುಕೊಂಡು ಬಂದು, ಎಲ್ಲರಿಂದ ಬೇರ್ಪಡಿಸಿ ಒಬ್ಬಳಾಗಿಸುವುದನ್ನು ಊಹಿಸಲೂ ನನಗೆ ಸಾಧ್ಯವಾಗಲಿಲ್ಲ..!! ಹಾಗಾಗಿ ನಿನ್ನ ಜೊತೆಗೆ ನನ್ನ ಮದುವೆ ಗೊತ್ತಾದಾಗಿನಿಂದಲೂ ನಾನು ಬೆಂಗಳೂರಿಗೇ ಬಂದು, ಅಲ್ಲೇ ಒಂದು ಹೋಟೆಲ್ ಯಾಕೆ ಮಾಡಬಾರದು..!!" ಎಂದು ಯೋಚಿಸುತ್ತಿದ್ದೆ.



"ನನಗೆ ಗೊತ್ತು ನಿನಗೂ ಸಹ ಪರದೇಶದ ಬಗ್ಗೆ ಒಲವಿಲ್ಲ ಎಂದು..!! ಸ್ವದೇಶದಲ್ಲೇ ಇದ್ದು, ಏನಾದರೂ ಮಾಡಬೇಕು ಎನ್ನುವವಳು ಅಂತ. ಹಾಗಾಗಿ ನಿನ್ನ ಆಸೆಯೂ ಪೂರೈಸಿದಂತಾಗುತ್ತದೆ, ನನ್ನ ಅನುಭವದ ಮೇಲೆ ನನ್ನದೇ ಹೋಟೆಲ್ ಅನ್ನು ತೆಗೆದು, ಒಳ್ಳೆಯ ಸರ್ವಿಸ್ ಅನ್ನು ಜನರಿಗೆ ಕೊಟ್ಟು, ನನ್ನ ದುಡಿಮೆಗೂ ಒಂದು ದಾರಿಯಾಗುತ್ತದೆ ಎಂದುಕೊಂಡು ಹೀಗೆ ಮಾಡಿದೆ..!! ಇದರ ಬಗ್ಗೆ ನನ್ನ ಅಪ್ಪಅಮ್ಮ ಮತ್ತು ನಿನ್ನ ತಂದೆತಾಯಿಯರ ಬಳಿಯೂ ಅಭಿಪ್ರಾಯ ಹಿಂದೆಯೇ ಕೇಳಿದ್ದೆ..!! ಆದರೆ ನಿನಗೆ ಈ ಬಗ್ಗೆ ತಿಳಿಸಬೇಡಿ ಎಂದು ನಾನೇ ಹೇಳಿದ್ದೆ. ಅಕಸ್ಮಾತ್ ಅಂದುಕೊಂಡಿದ್ದು ನೆರವೇರದಿದ್ದರೆ ಎಂಬ ಭಯವಷ್ಟೇ, ಹಾಗಾಗಿ..!!"



"ಈಗ ಎಲ್ಲವೂ ಕನ್ಫರ್ಮ್ ಆಗಿದೆ. ಇನ್ನು ಇಪ್ಪತ್ತು ದಿನಗಳಲ್ಲಿ ನಾನು ಬೆಂಗಳೂರಿಗೆ ಪರ್ಮನೆಂಟ್ ಆಗಿ ಶಿಫ್ಟ್ ಆಗುತ್ತಿದ್ದೇನೆ..!! ಜಾಗದ ಬಗ್ಗೆಯೂ ವಿಚಾರಿಸಿಯಾಗಿದೆ. ಒಳ್ಳೆಯ ದಿನವನ್ನು ನೋಡಿ, ಮುಂದಿನ ತಿಂಗಳಿಂದ ಹೊಸ ಹೋಟೆಲ್ ಪ್ರಾರಂಭಿಸಿಯೇ ಬಿಡೋಣ..!!" ಎಂದು ನನ್ನ ಉತ್ತರಕ್ಕಾಗಿ ಕಾಯುತ್ತಾ ನೋಡಿದ ಮೋಹನ್.



ನನಗಂತೂ ಮಾತನಾಡಲು ಪದಗಳೇ ಉಳಿದಿರಲಿಲ್ಲ. ಆ ದಿನ ಕಂಡ ಕನಸು, ಇಂದು ನಿಜವಾಗಲೂ ನನಸಾಯಿತಲ್ಲ..!! ಎಂದು ದೇವರಿಗೆ ತುಪ್ಪದ ದೀಪ ಹಚ್ಚಿದೆ. ಪುನಃ ಮೋಹನ್ ಗೆ ಕಾಲ್ ಮಾಡಿ "ನೀನು ಹೇಳುತ್ತಿರುವುದು ನಿಜವೇ ತಾನೇ..?" ಎಂದು ಮತ್ತೊಮ್ಮೆ ಕೇಳಿದೆ. "ಹೂಂ ಮಾರಾಯ್ತಿ, ನಿಜ". ಎಂದಾಗ "ಥಾಂಕ್ಯು ಮೋಹನ್. ತಡೆಯಲಾರದ ಖುಷಿ ಸಂತೋಷ ಇಂದು ನನ್ನದಾಗಿದೆ. ಯುಗಾದಿ ಕಳೆದು ಒಂದು ತಿಂಗಳಾಗಿರಬಹುದು. ಆದರೆ ನನಗಿಂದೇ ಯುಗಾದಿ.



ಹೊಸ ವಿಷಯ, ಹೊಸ ಖುಷಿ, ಹೊಸ ಹುರುಪು, ಹೊಸ ಆನಂದವನ್ನು ನನಗೆ ನೀನಿಂದು ನೀಡುತ್ತಿದ್ದೀಯ..!! ಹಸಿರು ಮರದಲ್ಲಿ ಹೊಸ ಚಿಗುರು ಮೂಡಿದಂತೆ, ನಮ್ಮ ಬದುಕಿನಲ್ಲೂ ನೀನು ತೆರೆಯುವ ಪುಟ್ಟ ಕೂಸಾದ ನಮ್ಮದೇ ಹೊಸ ಹೋಟೆಲ್, ಎಲ್ಲರ ಬದುಕಿನ ಉನ್ನತಿಗೆ ಕಾರಣವಾಗಲಿ..!!"



"ನಿನ್ನ ಬರುವಿಕೆಗಾಗಿ ನಾನು ಕಾಯುತ್ತಿರುತ್ತೇನೆ. ಆದಷ್ಟು ಬೇಗ ಬಾ. ನೀ ಬರುವ ದಿನವೇ ನಮಗಿಲ್ಲಿ ಸಂಭ್ರಮದ ಯುಗಾದಿ. ನೀ ಇಷ್ಟಪಡುವ ಕಾಯಿ ಒಬ್ಬಟ್ಟು ಹಾಗೂ ಮಾವಿನಕಾಯಿ ಚಿತ್ರಾನ್ನವನ್ನು ನನ್ನ ಕೈಯ್ಶಾರೆ ಮಾಡಿ ಬಡಿಸುತ್ತೇನೆ..!! ಈಗಲೇ ಈ ಖುಷಿಯ ವಿಷಯವನ್ನು ಮನೆಯವರಿಗೆಲ್ಲಾ ಹೇಳುತ್ತೇನೆ..!!" ಎಂದು ಫೋನಿಟ್ಟು ಅಡುಗೆ ಮನೆಯಲ್ಲಿದ್ದ ಅತ್ತೆಯ ಹತ್ತಿರ ಓಡಿದೆ...!!







Rate this content
Log in

Similar kannada story from Abstract