ಮಡಿಲು
ಮಡಿಲು


ಚೈತ್ರ ಮತ್ತು ಚೇತನ್ ಇಬ್ಬರೂ ಒಬ್ಬರನ್ನೊಬ್ಬರು ಮೆಚ್ಚಿ ಮದುವೆಯಾದ ಜೋಡಿ. ಕಾಲೇಜೊಂದರಲ್ಲಿ ಜೊತೆಯಾಗಿ ಕೆಲಸ ಮಾಡುತ್ತಿದ್ದ ಇವರಿಬ್ಬರ ಪರಿಚಯ ಸ್ನೇಹವಾಗಿ, ಸ್ನೇಹ ಪ್ರೇಮವಾಗಿ ತಿರುಗಿ, ಕಡೆಗೆ ಮದುವೆಯಲ್ಲಿ ಸುಖಾಂತಗೊಡಿತ್ತು. ಮನಮೆಚ್ಚಿದ ಸಂಗಾತಿಯೊಂದಿಗೆ ಇಬ್ಬರ ವೈವಾಹಿಕ ಜೀವನವು ಯಾವ ತಕರಾರಿಲ್ಲದೆ ಸಂತೋಷವಾಗಿ ಸಾಗುತ್ತಾ ಹೋಗುತ್ತಿತ್ತು. ಮನುಷ್ಯ ಸಂತೋಷವಾಗಿದ್ದಾಗ, ಸಮಯ ಸರಿದು ಹೋಗುವುದು ಅರಿವೇ ಆಗುವುದಿಲ್ಲ. ಇವರ ಜೀವನದಲ್ಲೂ ಸಹ ಹಾಗೇ ಆಗಿತ್ತು. ಮದುವೆಯಾಗಿ ನಾಲ್ಕು ವರುಷ ಹೇಗೆ ಕಳೆದು ಹೋಗಿದ್ದುದು ಇವರಿಗೆ ಗೊತ್ತಾಗಲಿಲ್ಲ..
ಬೆಳಗ್ಗಿನಿಂದ ಸಂಜೆಯವರೆಗೂ ಯಾವಾಗಲೂ ಒಂದಲ್ಲ ಒಂದು ಕೆಲಸದಲ್ಲಿ ತೊಡಗಿಸಿಕೊಡಿರುತ್ತಿದ್ದ, ಚೈತ್ರಳಿಗೆ , ತನ್ನ ಮದುವೆಯಾಗಿ ನಾಲ್ಕು ವರುಷಗಳು ಕಳೆದುದ್ದರ ಕಡೆ ಗಮನವಿರದಿದ್ದರೂ, ಅವಳ ಅತ್ತೆ ಜಾನಕಿ ಹಾಗೂ ಅವಳ ಅಮ್ಮ ಪದ್ಮಿನಿ, ಅವಳ ಗಮನವನ್ನು ಸೆಳೆಯುವ ಕೆಲಸ ಮಾಡಿದ್ದರು.
"ಚೇತು, ನಿಮ್ಮಬ್ಬರಿಗೂ ಮದುವೆಯಾಗಿ,ನಾಲ್ಕು ವರ್ಷಗಳಾಗಿ ಹೋದುವು. ನೀವು ಇನ್ನಾದರೂ ಮಕ್ಕಳ ಬಗ್ಗೆ ಯೋಚನೆ ಮಾಡುತ್ತೀರಾ? ಹೇಗೆ?" ಎಂದು ಚೇತನ್ ಅಮ್ಮ ಮಗನನ್ನು ಎಚ್ಚರಿಸಿದರೆ,
"ಚೈತ್ರ, ನಿಮ್ಮ ಇಷ್ಟದಂತೆ, ನಿಮ್ಮ ಮದುವೆಯಾಗಿ, ನಾಲ್ಕು ವರ್ಷಗಳನ್ನು ನಿಮಗೆ ಬೇಕಾದ ಹಾಗೆ ಸಂತೋಷದಿಂದ ಕಳೆದಿದ್ದೀರಿ. ಇನ್ನಾದರೂ ಮಕ್ಕಳ ಬಗ್ಗೆ ಯೋಚನೆ ಮಾಡಿ.ಇನ್ನೂ ಮುಂದಕ್ಕೆ ಹಾಕಬೇಡಿ."
ಚೈತ್ರಳ ಅಮ್ಮ ಪದ್ಮಿನಿ ಮಗಳಿಗೆ ನೆನೆಪು ಮಾಡಿದ್ದರು.
ತಮ್ಮ ಅಮ್ಮಂದಿರ ಬಾಯಿಂದ ಮಗುವಿನ ಪ್ರಸ್ತಾಪ ಬಂದಾಗ,ಚೈತ್ರ ಹಾಗೂ ಚೇತನ್ ಎಚ್ಚೆತ್ತುಕೊಂಡು, ಇದರ ಬಗ್ಗೆ ಗಮನ ಕೊಡುವುದಕ್ಕೆ ಇದು ಸೂಕ್ತ ಕಾಲವೆಂದು ಕೊಂಡರು.ಆದರೆ ಇದುವರೆಗೂ ಅವರು ಯಾವುದೇ ರೀತಿಯ ಪ್ಲಾನಿಂಗ್ ಮಾಡಿರಲಿಲ್ಲವೆಂಬುದು ಅವರಿಬ್ಬರಿಗೆ ಮಾತ್ರ ಗೊತ್ತಿದ್ದರಿಂದ, ತಮಗೆ ಇನ್ನೂ ಯಾಕೆ ಮಕ್ಕಳಾಗಿಲ್ಲವೆಂಬುದರ ಬಗ್ಗೆ ಸೀರಿಯಸ್ ಆಗಿ ಯೋಚಿಸಲು ಪ್ರಾರಂಭಿಸಿದರು.ಈ ಬಗ್ಗೆ ಯೋಚನೆ ಬಂದ ಕೂ ಡಲೇ ಹಲವಾರು ಡಾಕ್ಟರ್ ಬಳಿ ಹೋಗಿ, ಎಲ್ಲಾ ರೀತಿಯ ತಪಾಸಣೆಗಳನ್ನೂ ಮಾಡಿಸಿಕೊಂಡರು. ಇಂತಹ ಓಡಾಟದಲ್ಲಿ ಮತ್ತೊಂದು ವರುಷವೂ ಸದ್ದಿಲದೇ ಸರಿದು ಹೋದಾಗ, ಅವರಿಗೆ ನಿಜಕ್ಕೂ ಆತಂಕ ಶುರುವಾಯಿತು. ಇವರನ್ನು ಪರೀಕ್ಷಿಸಿದ ವೈದ್ಯರೆಲ್ಲರೂ,ಇಬ್ಬರಲ್ಲಿ ಯಾವುದೇ ದೋಷಗಳಿಲ್ಲವೆಂದು ಹೇಳುತ್ತಿದ್ದರೂ,ಇವರಿಗೆ ಇನ್ನೂ ಮಕ್ಕಳಾಗದಿದ್ದಾಗ, ಮನೆಯ ಹಿರಿಯರು ಹಲವು ದೇವರಿಗೆ ಹರಕೆ ಹೊತ್ತರು.ಆದರೆ ಅದೇಕೋ ದೇವರ ಕೃಪೆ ಇವರ ಮೇಲೆ ಬಿದ್ದಂತೆ ಕಾಣಲಿಲ್ಲ.
ಮತ್ತೆರಡುರಡು ವರುಷಗಳೂ ಇದೇ ರೀತಿ ಉರುಳಿದಾಗ, ಚೈತ್ರ ಹಾಗೂ ಚೇತನ್ಇಬ್ಬರಿಗೂ ಇದೇ ಚಿಂತೆ ಯಾಗಿ ಕಾಡತೊಡಗಿತು.ಬಂಧು ಬಾಂಧವರಿಗೆ, ಸ್ನೇಹಿತರಿಗೆ ಉತ್ತರ ಹೇಳಿ ಹೇಳಿ ಸಾಕಾಗಿ ಹೋಗುತ್ತಿತ್ತು.
ಹೀಗಿರುವಾಗ,ಒಂದುದಿನ ಚೇತನ್ ನ ಆಪ್ತಗೆಳೆಯ ಪುನೀತ್,ಅವರ ಮನೆಗೆ ಬಂದು, ತಾನೊಂದು ಮಗುವನ್ನು ಬಾಪೂಜಿ ಆಶ್ರಮದಿಂದ ದತ್ತು ಪಡೆದ ವಿಷಯವನ್ನು,ಚೇತನ್ ಗೆ ತಿಳಿಸಿದಾಗ, ಚೇತನ್ ಮನಸಿನಲ್ಲಿ ಒಂದು ಹೊಸ ಆಶಾಕಿರಣ ಮೂಡಿತು. ಅವನು ಪುನೀತ್ ನೊಂದಿಗೆ ದತ್ತಕದ ವಿವರಗಳನ್ನು ಪಡೆದುಕೊಂಡನು.
ಅಂದುರಾತ್ರಿ ಮನೆಯವರೊಂದಿಗೆ ತಾನು ಒಂದು ಮಗುವನ್ನು ದತ್ತು ಪಡೆಯುವ ವಿಷಯದ ಬಗ್ಗೆ ಎಲ್ಲರೊಂದಿಗೆ ಚರ್ಚಿಸಿದಾಗ,ಅವನ ತಾಯಿ ಅವನನ್ನು ವಿರೋಧಿಸಿದರು.ಆದರೆ ಚೈತ್ರಳಿಗೆ ತುಂಬಾ ಖುಶಿಯಾಗಿತ್ತು.ಹೇಗೋ ನಮ್ಮ ದಾಗಿ ಒಂದು ಮಗು ಜೀವನದುದ್ದಕ್ಕೂಜೊತೆಯಾಗಿ ಇರುತ್ತದಲ್ಲ ಎಂಬ ಸಮಾಧಾನ ಅವಳಿಗೆ ಸಿಕ್ಕಿತ್ತು.
ವೈದ್ಯಕೀಯವಾಗಿ ಎಲ್ಲಾ ಸರಿಯಾಗಿದೆ ಎಂದು ಹೇಳುತ್ತಿದ್ದರೂ,ವರುಷಗಳು ಕಳೆಯುತ್ತಿದ್ದವೇ ವಿನಾ,ತಾನು, ಇನ್ನೂ ತಾಯಿಯಾಗುವ ಯಾವ ಸೂಚನೆಯೂ ತನ್ನಲ್ಲಿ ಕಂಡು ಬರುತ್ತಿಲ್ಲವಾದ್ದರಿಂದ, ಸುಮ್ಮನೆ ಕಾಯುವ ಬದಲು, ಒಂದು ಅನಾಥ ಮಗುವನ್ನು ತಂದು ಸಾಕುವುದರಿಂದ, ಎಲ್ಲಾ ರೀತಿಯಿಂದಲೂ ಒಳ್ಳೇಯದು ಎಂದು ಯೋಚಿಸಿದ ಚೈತ್ರ, ಚೇತನ್ಗೆ ತನ್ನ ಒಪ್ಪಿಗೆಯನ್ನು ಸೂಚಿಸಿದಳು.ಅಷ್ಟೇ ಅಲ್ಲ, ಒಂದು ಮಗುವನ್ನು ದತ್ತು ತೆಗೆದುಕೊಳ್ಳಬೇಕಾದಾಗ, ಕಾನೂನಿನ ಪ್ರಕಾರ, ತಂದೆಯ ವಯಸ್ಸು ನಲವತ್ತು ವರ್ಷ ದೊಳಗೆ ಇರಬೇಕಾಗಿರುವುದರಿಂದ, ಇನ್ನು ಸುಮ್ಮನೆ ಕಾಯುವುದು ಸರಿಯಲ್ಲವೆಂದು ಅವರಿಬ್ಬರೂ ಮಗುವನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಿಬಿಟ್ಟರು.
ಹೇಗೋ ತಾಯಿಯನ್ನು ಒಪ್ಪಿಸಿದ ಚೇತನ್, ಮಗುವನ್ನು ಲೀಗಲ್ ಆಗಿ ದತ್ತು ಸ್ವೀಕರಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡನು.
ಶುಭ ಮುಹೂರ್ತವೊಂದರಲ್ಲಿ
ಚೇತನ್ ಹಾಗೂ ಚೈತ್ರ ಇಬ್ಬರೂ, ಪುನೀತ್ ನೊಂದಿಗೆ ಬಾಪೂಜಿ ಆಶ್ರಮಕ್ಕೆ ಹೋಗಿ, ಒಂದು ಮುದ್ದಾದ ಹದಿನೈದು ದಿನದ ಹೆಣ್ಣುಮಗುವನ್ನು ,ಕಾನೂನು ರೀತ್ಯಾ,ದತ್ತು ಪಡೆದುಕೊಂಡು ಮನೆಗೆ ಕರೆದುಕೊಂಡು ಬಂದೇಬಿಟ್ಟರು.
ಹಸುಗೂಸು ಮಡಿಲು ತುಂಬಿದಾಗ, ಚೈತ್ರ ಪುಳಕಗೊಂಡಳು.ತಾನು ಹೊತ್ತು ಹೆರದಿದ್ದರೂ, ಆಗ ತಾನೇ ಭೂಮಿಗೆ ಬಂದಿರುವ ಹಾಲುಗೆನ್ನೆಯ ಹಸುಗೂಸು ತನ್ನದೆಂಬ ಹೆಮ್ಮೆಯಿಂದ ಅವಳು ಹಿಗ್ಗತೊಡಗಿದಳು.ಅದರ ಸ್ನಿಗ್ಧ ನಗು, ಮೆತ್ತಮೆತ್ತಗಿನ ಮೈನ ಹಿತ ಸ್ಪರ್ಷದಿಂದ ಪುಳಕಗೊಳ್ಳುತ್ತಿದ್ದಳು. ಒಂದಾರು ತಿಂಗಳು ಕಾಲೇಜ್ಗೆ ರಜೆ ಹಾಕಿ, ಮಗುವಿನ ಆರೈಕೆಗೆ ನಿಂತಳು. ಅಚ್ಚುಕಟ್ಟಾಗಿ ಮಗುವಿನ ಲಾಲನೆ ಪಾಲನೆ ಮಾಡುತ್ತಿದ್ದಳು. ದತ್ತು ತೆಗೆದುಕೊಳ್ಳಲು ಮೊದಮೊದಲು ವಿರೋಧಿಸುತ್ತಿದ್ದ, ಚೇತನ್ ನ ಅಮ್ಮ ಅಪ್ಪ ಇಬ್ಬರೂ ಮುದ್ದುಮಗುವಿನ ಆಟಪಾಟಗಳಿಗೆ ಮನಸೋತು, ಅದು ತಮ್ಮ ಮಗನ ಮಗು ಎಂಬುದನ್ನು ಒಪ್ಪಿಕೊಂಡು ,ಖುಶಿಯಾಗಿದ್ದರು.
ಆ ಮುದ್ದುಮಗುವಿಗೆ "ಮನಸ್ವಿನಿ" ಎಂದು ಹೆಸರಿಟ್ಟು,ಅದ್ದೂರಿಯಾಗಿ ನಾಮಕರಣವನ್ನೂ ಮಾಡಿದರು. ಬಂದವರೆಲ್ಲಾ, ಚೇತನ್ ಚೈತ್ರಳ ದೊಡ್ಡ ಗುಣವನ್ನು ಹೊಗಳಿ ಹೋಗುತ್ತಿದ್ದರು.
ಮನಸ್ವಿನಿ, ಎಲ್ಲರ ಮುದ್ದಿನ "ಮನು"ವಾದಳು.ಮುದ್ದಿನ ಮಗಳು ಮನುವಿನ ಆಟ ಪಾಟಗಳನ್ನು ನೋಡುತ್ತ, ಮುದ್ದು ಮಾತುಗಳನ್ನು ಕೇಳುತ್ತ,ಚೇತನ್ ಹಾಗೂ ಚೈತ್ರ ಆನಂದದಿಂದ ಕಾಲ ಕಳೆಯುತ್ತಾ, ತಮ್ಮದೇ ಆದ ಪ್ರಪಂಚದಲ್ಲಿ ಇದ್ದುಬಿಟ್ಟರು. ಅವರಿಗೆ ವರುಷಗಳುರುಳಿದ್ದೇ ಗೊತ್ತಾಗಲಿಲ್ಲ. ಮುಂದೆ,ಮನಸ್ವಿನಿ ಬೆಳೆದು ,ಪ್ರೌಢಳಾದಳು. ಅವಳೀಗ ಪ್ರೌಢಶಾಲೆ ಯು ಕೊನೆಯ ಹಂತದಲ್ಲಿ ದ್ದ ಕಿಶೋರಿ.ಎಲ್ಲವೂ ಅರ್ಥ ವಾಗುವ ವಯಸ್ಸು. ತಂದೆ ತಾಯಿಯ ಮನದಿಂಗಿತವನ್ನರಿತು ನಡೆವ ಮುದ್ದು ಮಗಳು.ಆಟಪಾಠಗಳಲ್ಲಿ ಮುಂಚೂಣಿಯಲ್ಲಿದ್ದು, ತರಗತಿಗೇ ಮೊದಲಾಗಿ ತೇರ್ಗಡೆಯಾಗುತ್ತಿದ್ದಳು. ಮಗಳ ಏಳ್ಗೆಯನ್ನು ಕಂಡು ಚೇತನ್ ಹಾಗೂ ಚೈತ್ರಳಿಗೆ ಹೃದಯ ತುಂಬಿ ಬರುತ್ತಿತ್ತು. ಮಗಳು ಕೇಳಿದ್ದನ್ನೆಲ್ಲಾ ಪೂರೈಸುತ್ತಿದ್ದರು.
ಅದು ಏಕೋ ಗೊತ್ತಿಲ್ಲ, ಇದ್ದಕ್ಕಿದ್ದಂತೆ ಅವರಿಬ್ಬರನ್ನೂ ಒಂದೊಂದು ಬಾರಿ ಆತಂಕದ ಕಾರ್ಮೋಡ ಆವರಿಸುತ್ತಿತ್ತು.
"ಇಷ್ಟು ಚೆನ್ನಾಗಿರುವ ಮಗಳಿಗೆ ಯಾರಾದರೂ ನಿಜವನ್ನು ತಿಳಿಸಿಬಿಟ್ಟರೆ? ನಿಜವಾದ ತಂದೆ ತಾಯಿ ನಾವಲ್ಲವೆಂಬ ವಿಷಯ ತಿಳಿದು ಹೋದರೆ? " ಆಗಾಗ ಅವರನ್ನು ಕಾಡುತ್ತಿತ್ತು.
ಅಷ್ಟೇ ಅಲ್ಲದೆ,ಮಗುವನ್ನು ಮನೆಗೆ ಕರೆದುಕೊಂಡು ಬರುವಾಗ ಬಾಪೂಜಿ ಆಶ್ರಮದ ವ್ಯವಸ್ಥಾಪಕರು,
"ಮಗು ಪ್ರೌಡಾವಸ್ಥೆಗೆ ಬಂದಾಗ,ಅದಕ್ಕೆ ನಿಜವಾದ ವಿಷಯವನ್ನು ತಿಳಿಸಿಬಿಡಿ,ಇಲ್ಲವಾದರೆ ಬೇರೆಯವರಿಂದ ವಿಷಯ ತಿಳಿದರೆ, ಅದಕ್ಕೆ ಆಘಾತವಾಗಬಹುದು,ಹೇಗೆ ಬೇಕಾದರೂ ಪ್ರತಿಕ್ರಿಯಿಸಬಹುದು" ಎಂದು ಹೇಳಿದ ಮಾತು, ಇವರಿಬ್ಬರನ್ನೂ ಆಗಾಗ್ಗೆ ಎಚ್ಚರಿಸುತ್ತಿತ್ತು. ಆದರೆ ಅವರಿಗೆ ಸತ್ಯವನ್ನು ಮಗುವಿಗೆ ತಿಳಿಸುವ ಧೈರ್ಯ ವಿರದೆ,ಸಂದರ್ಭ ಬಂದಾಗ ತಿಳಿಸಿದರಾಯಿತು ಎಂದುಕೊಂಡುಸುಮ್ಮನಿದ್ದರು.
ಎಲ್ಲವೂ ಸರಿ ಹೋಯಿತೆಂದು ಸಂತೋಷದಿಂದ ಇದ್ದಾಗ,ಏನಾದರೊಂದು ಏರುಪೇರು ಆಗಲೇಬೇಕಲ್ಲ. ಹಾಗೆಯೇ ಇವರ ಸಂಸಾರದಲ್ಲೂ ಚಿಂತೆ ಮೆಲ್ಲಗೆ ಇಣುಕತೊಡಗಿತು.
ಈಗ ಕೆಲವು ದಿನಗಳಿಂದಲೂ ಮನುವಿನಲ್ಲಿ ಏನೋ ಒಂದುರೀತಿಯಬದಲಾವಣೆಯಾಗಿರುವುದನ್ನು ,
ಚೇತನ್ ಹಾಗೂ ಚೈತ್ರ ಗಮನಿಸುತ್ತಿದ್ದರು. ಅವಳು ಇತ್ತೀಚೆಗೆ ತಾನೊಬ್ಬಳೆ ಒಂದು ಕಡೆ ಕುಳಿತು,ಏನನ್ನೋ ಯೋಚಿಸುತ್ತಾಕುಳಿತುಬಿಡುತ್ತಿದ್ದಳು.ಮಾತಿಲ್ಲ ಕಥೆಯಿಲ್ಲ, ಚೇತನ್ ಮಾತನಾಡಿಸಿದರೂ ಮಾತನಾಡುತ್ತಿರಲಿಲ್ಲ, ಚೈತ್ರ ಕರೆದರೂ ಉತ್ತರ ಕೊಡುತ್ತಿರಲಿಲ್ಲ. ಊಟ ತಿಂಡಿಗಳ ಕಡೆಗೆ ಗಮನ ಕಡಿಮೆಯಾಗಿ, ಓದಿನಲ್ಲೂ ಆಸಕ್ತಿ ಕಳೆದುಕೊಳ್ಳ ತೊಡಗಿದಳು. ಇದರ ಪರಿಣಾಮವಾಗಿ, ಈ ಬಾರಿಯ ಟೆಸ್ಟ್ ಗಳಲ್ಲೆಲ್ಲಾ ಫೇಲ್ ಆಗಿದ್ದಳು. ಇವಳೆನಾಗಿಹೋಗಿದೆ? ಎಂಬುದು ಯಾರಿಗೂ ಗೊತ್ತಾಗಲಿಲ್ಲ.ಮನುವಿನ ಈ ನಡವಳಿಕೆಗಳಿಂದ ಚೇತನ್ ಹಾಗೂ ಚೈತ್ರಳಿಗೆ ಆತಂಕವಾಯಿತು.ಎಷ್ಟು ಬಗೆಯಲ್ಲಿ ಕೇಳಿದರೂ ಮನು ಬಾಯೇ ಬಿಡುತ್ತಿರಲಿಲ್ಲ. ಮನುವಿನ ಈ ರೀತಿಯ ಬದಲಾವಣೆ ಯಿಂದ ಚೇತನ್ ಹಾಗೂ ಚೈತ್ರ ಅಸಹಾಯಕತೆಯಿಂದ, ಬಳಲುತ್ತಿದ್ದರು.ಮನಸ್ವಿನಿಯನ್ನು ಹೇಗೆ ಸರಿಪಡಿಸುವುದೆಂಬುದು ಇಬ್ಬರಿಗೂ ಸವಾಲಾಗಿತ್ತು. ಏನು ಮಾಡಿದರೂ ಬಾಯಿ ಬಿಡದೆ, ಏನೋ ಯೋಚಿಸುತ್ತಾಕುಳಿತಿರುತ್ತಿದ್ದ ಮಗಳನ್ನು ಕಂಡು ಚೈತ್ರಳಿಗೆ ದಿಕ್ಕೇತೋಚದ್ಂತಾಯಿತು.ಮಗಳೊಂದಿಗೆಅನುನಯದಿಂದ ಮಾತನಾಡುತ್ತ ಅವಳನ್ನು ಬದಲಿಸುವ ಪ್ರಯತ್ನ ಮಾಡುತ್ತಿದ್ದಳು. ಕೆಲವೊಮ್ಮೆ ನಗು ನಗುತ್ತಾ ಮಾತನಾಡಿದರೆ,ಮತ್ತೊಮ್ಮೆ ಮಂಕಾಗಿರುತ್ತಿದ್ದಳು.ಮನು ಹೀಗೇಕೆ ಇರುತ್ತಾಳೆ ? ಎಂಬ ಚಿಂತೆಯಿಂದ ಚೈತ್ರ ಕಂಗಾಲಾದಳು.
ಆದರೆ ಇತ್ತೀಚೆಗೆ ಮನಸ್ವಿನಿಯ ಮನಸ್ಸಿನ ತುಂಬಾ ಗೊಂದಲ.. ಅವಳ ಮನಸ್ಸಿನ ತುಂಬಾ,ಅವಳ ಸ್ನೇಹಿತೆ ಶಶಿಯಮಾತುಗಳೇ ತುಂಬಿ ಹೋಗಿದ್ದವು. ತಾನು ಚೇತನ್ ಹಾಗೂ ಚೈತ್ರ ರವರ ದತ್ತುಪುತ್ರಿಯೆಂಬ ವಿಷಯ ,ತನ್ನ ಸ್ಕೂಲ್ನಲ್ಲಿ ದಿನದಿಂದ ದಿನಕ್ಕೆ ಹರಡುತ್ತಿರುವುದನ್ನು ಕಂಡು, ಅವಳಿಗೆ ಗೊಂದಲ ವಾಗಿತ್ತು. ತನ್ನ ನಿಜವಾದ ತಂದೆ ತಾಯಿ ಬೇರೆಯವರು ಎಂಬ ವಿಷಯ ತಿಳಿದಾಗ ,ಆ ಮಗುವಿನ ಮನಸ್ಥಿತಿ ಹೇಗಿರಬೇಡ? ಯಾಕೋ ಅವಳಿಗೆ ಇತ್ತೀಚೆಗೆ ತನ್ನ ಅಪ್ಪ ಅಮ್ಮನ ಜೊತೆ ಮುಕ್ತವಾಗಿ ಬೆರೆಯಲು ಹಿಂಜರಿಕೆಯಾಗುತ್ತಿತ್ತು.
ಆದಷ್ಟು ಅವಳು ಅವರಿಂದ ದೂರವಿರುವ ಪ್ರಯತ್ನ ಮಾಡುತ್ತಿದ್ದಳು. ಶಾಲೆಯಿಂದ ಬಂದ ಕೂಡಲೇ,ತನ್ನ ಪಾಡಿಗೆ ತಾನು ತನ್ನ ರೂಂ ಸೇರಿಬಿಡುತ್ತಿದ್ದಳು. ಒಬ್ಬಳೇ ಕುಳಿತು ಆಲೋಚಿಸುತ್ತಿದ್ದಳು.
"ಹಾಗಾದರೆ ನಾನು ಇವರ ಸ್ವಂತ ಮಗಳಲ್ಲ, ದತ್ತುಪುತ್ರಿ,ನನ್ನ ಹೆತ್ತ ತಾಯಿ ತಂದೆ ಎಲ್ಲಿದ್ದಾರೋ? ಅವರನ್ನು ನೋಡಲೇಬೇಕೆನಿಸಿದೆ. ಅವರಾದರೂ ಯಾಕೆ ಹೀಗೆ ಮಾಡಿದರು? ನನಗೆ ಇವರು ಯಾವುದಕ್ಕೂ ಕೊರತೆ ಮಾಡಿಲ್ಲ, ಆದರೂ ನನ್ನ ಹೆತ್ತವರನ್ನು ನೋಡಲೇ ಬೇಕು, ಅವರೊಂದಿಗೆ ಜಗಳಮಾಡಬೇಕು.ಆದರೆ ಅವರನ್ನು ಹುಡುಕುವುದಾದರೂ ಹೇಗೆ? ಯಾರ ಸಹಾಯ ಕೇಳಲಿ? ನನ್ನ ಆತ್ಮೀಯ ಗೆಳತಿ ಶಶಿಯನ್ನು ಕೇಳಿದರೆ ಹೇಗೆ?"
ಈ ಯೋಚನೆಯಲ್ಲೇ ಮನು ಕಾಲಕಳೆಯುತ್ತಾ ,ಎಲ್ಲದರಲ್ಲೂ ಆಸಕ್ತಿ ಕಳೆದುಕೊಳ್ಳುತ್ತಿದ್ದಾಗ,
ಚೇತನ್ ಹಾಗೂ ಚೈತ್ರಳಿಗೆ ನಿಜಕ್ಕೂ ಚಿಂತೆಯಾಯಿತು. ಇದಕ್ಕೆ ಆದಷ್ಟು ಬೇಗ
ಒಂದು ಪರಿಹಾರ ಹುಡುಕಬೇಕೆಂದು ಅವರು ನಿರ್ಧರಿಸಿದರು.
ಅಂದು ಬೆಳಗ್ಗೆ ಎದ್ದ ಕೂಡಲೇ ಬೀದಿ ಬಾಗಿಲಿಗೆ ನೀರು ಹಾಕಲು ಬಂದ ಚೈತ್ರಳಿಗೆ,ಬೀದಿಬಾಗಿಲು,
ಗೇಟ್ ಎಲ್ಲವೂ ಹಾರುಹೊಡದಂತೆ ತೆಗೆದಿರುವುದನ್ನು ಕಂಡು, ಗಾಬರಿಯಾಯಿತು. ಅವಳು ಮೊದಲು ಚೇತನ್ ಗೆ ವಿಷಯ ತಿಳಿಸಿ, ಮನುವಿನ ರೂಂನತ್ತ ಓಡಿದಳು. ಅಲ್ಲಿ ಮಗಳು ಇಲ್ಲದಿರುವುದನ್ನು ಗಮನಿಸಿ, ಅವಳ ಆತಂಕ ಇಮ್ಮುಡಿಸಿತು.
ಇಡೀಮನೆ,ಹಿತ್ತಲು,ಬಚ್ಚಲು,ಕಾಪೌಂಡ್ ಎಲ್ಲಾ ಕಡೆ ಹುಡುಕಾಡಿದರು. ಆದರೆ ಮನು ಎಲ್ಲೂ ಕಾಣದಿದ್ದಾಗ, ಚೈತ್ರ ಕುಸಿದು ಹೋದಳು.ಅಕ್ಕ ಪಕ್ಕದ ಮನೆ, ಸ್ನೇಹಿತೆಯರ ಮನೆ,ಎಲ್ಲಾ ಕಡೆಯೂ ವಿಚಾರಿಸಿದರು.ಎಲ್ಲೂ ಕಾಣದಿದ್ದಾಗ,ಚೈತ್ರ ಜೋರಾಗಿ ಅಳತೊಡಗಿದಳು.ಚೇತನ್ ಮುಂದೇನು ಮಾಡಬೇಕೆಂದು ಯೋಚಿಸುತ್ತಿದ್ದನು. ಅವನಿಗೆ ಮೊದಲು ಪುನೀತ್ ನ ನೆನಪಾಯಿತು.
ಅವನಿಗೆ ಫೋನ್ ಮಾಡಿ ವಿಷಯ ತಿಳಿಸಿದನು. ಸಧ್ಯಕ್ಕೆ ಪೋಲಿಸ್ ಕಂಪ್ಲೈನ್ಟ್ ಏನೂ ಬೇಡ ಎಂದುಕೊಂಡರು.ಇವತ್ತು ಸಂಜೆಯವರೆಗೂ ಕಾದು ನೋಡಿ, ನಂತರ ಪೋಲಿಸ್ ಕಂಪ್ಲೈನ್ಟ್ ಕೊಟ್ಟರಾಯಿತೆಂದುಕೊಂಡರು.
ವಿಷಯ ತಿಳಿದ ಕೂಡಲೇ, ಚೇತನ್ ತಂದೆ ತಾಯಿಯರು ರೂಂನಿಂದ ಏದುತ್ತಾ ಬಂದರು,.
"ನನಗೆ ಇದು ಹೀಗೇ ಅಗಬಹ್ದು ಅಂತ ಅನ್ನಿಸುತ್ತಿತ್ತು ಕಣೊ ಚೇತು,ಯಾವ ರಕ್ತವೋ ಏನೋ? ಬೇರೆ ಮಕ್ಕಳನ್ನು ಕರೆದುಕೊಂಡು ಬಂದು,ಅದ್ಧೂರಿಯಾಗಿ ಸಾಕಿದರೂ, ಅವರ ಹುಟ್ಟು ಅವರಿಗೆ, ನೀವು ಶ್ರಮಪಡೊದು ಅಷ್ಟೆ ನಿಮಗೆ ದಕ್ಕೋದು,..." ಚೇತನ್ ತಾಯಿ ಜಾನಕಮ್ಮ ತಮ್ಮ ವರಸೆಯನ್ನು ಪ್ರಾರಭಿಸಿದಾಗ, ಅವನ ತಂದೆ ಮಧ್ಯೆ ಪ್ರವೇಶಿಸಿ,
"ಈಗ ಎಲ್ಲರೂ ಸ್ವಲ್ಪ ಸಮಾಧಾನದಿಂದ ವರ್ತಿಸಬೇಕು, ಜಾನಕಿ, ನೀನು ಬಾಯಿಗೆ ಬಂದದ್ದನ್ನು ಹರಟಬೇಡ. ಸಧ್ಯಕ್ಕೆ ಮನುವನ್ನು ಹುಡುಕುವ ಕೆಲಸ ಆಗಬೇಕು, ಅದರ ಬಗ್ಗೆ ಯೋಚಿಸೋಣ".
ಎಂದಾಗ, ಎಲ್ಲರೂ ತೆಪ್ಪಗಾದರು.
ಎಲ್ಲರೂ ಒಂದೊಂದು ಕಡೆ ಕುಳಿತು,ತಮ್ಮದೇ ಯೋಚನೆಯಲ್ಲಿ ಮುಳುಗಿದ್ದಾಗ, ಮನೆಯ ಕೆಲಸದವಳು ಬಂದಿದ್ದರಿಂದ, ಚೈತ್ರ ಮೇಲೆದ್ದಳು. ಅವಳು ಕೆಲಸದವಳ ಹಿಂದೆ ಮನುವಿನ ರೂಂ ಗೆ ಹೋಗಿ, ಸೂಕ್ಷ್ಮವಾಗಿ ಗಮನಿಸುತ್ತಿದ್ದಳು, ಏನಾದರೂ ಸುಳಿವು ಸಿಗಬಹುದೇನೋ ಎಂಬ ಆಸೆಯಿಂದ ಸುತ್ತಲೂ ಕಣ್ಣಾಡಿಸತೊಡಗಿದಳು.
ಕೆಲಸದವಳು ಹಾಸಿಗೆ ಸರಿಮಾಡುತ್ತಿದ್ದಾಗ, ಸಿಕ್ಕಿದ ಬಿಳಿಯ ಹಾಳೆಯನ್ನು ಚೈತ್ರ ಳಿಗೆ ಕೊಟ್ಟಾಗ, ಚೈತ್ರ ಅದನ್ನು ಬಿಡಿಸಿ ಓದತೊಡಗಿದಳು.
ಬಿಳಿಯ ಹಾಳೆಯನ್ನು ಬಿಡಿಸಿ ಓದುತ್ತಾ ಹೋದ ಚೈತ್ರಳಿಗೆ ದಿಗ್ಭ್ರಮೆಯಾಗಿತ್ತು.
"ಅಮ್ಮಾ,ಅಪ್ಪಾ,ನನ್ನನ್ನು ದಯವಿಟ್ಟು ಕ್ಷಮಿಸಿ,ನನಗೆ ಇತ್ತೀಚೆಗೆ ಶಾಲೆಯ ಗೆಳತಿಯರಿಂದ, ’ನಾನು ನಿಮಗೆ ದತ್ತು ಮಗಳು,ನನ್ನ ನಿಜವಾದ ತಂದೆ ತಾಯಿ ನೀವಲ್ಲ' ವೆಂಬ ಸತ್ಯ ತಿಳಿದಾಗಲಿಂದ ನಾನು ಗೊಂದಲದಲ್ಲಿ ಒದ್ದಾಡುತ್ತಿದ್ದೆ. ನನಗೆ ಏನೂ ಬೇಡವೆನಿಸಿ, ಎಲ್ಲದರಲ್ಲೂ ಆಸಕ್ತಿ ಕಳೆದುಕೊಂಡೆ, ಇತ್ತೀಚೆಗಂತೂ ನನಗೆ ನನ್ನ ಹೆತ್ತ ತಾಯಿ ತಂದೆಯರನ್ನು ನೋಡಬೇಕೆಂಬ ಹಂಬಲ ಹೆಚ್ಚುತ್ತಿದೆ. ಅವರ ಆನ್ವೇಷಣೆಗಾಗಿ ಹೊರಟಿದ್ದೇನೆ. ಕೆಲಸ ಮುಗಿದ ನಂತರ ಬರುತ್ತೇನೆ. ದಯವಿಟ್ಟು ಕ್ಷಮಿಸಿಬಿಡಿ.
ಇತಿ ನಿಮ್ಮ ಪ್ರೀತಿಯ ಮನು"
ಪತ್ರವನ್ನು ಓದಿದ ಚೈತ್ರ, ಚೇತನ್ ಹತ್ತಿರ ಓಡಿದಳು.ಹಾಲ್ ನಲ್ಲಿ ಕುಳಿತ್ತಿದ್ದ ಚೇತನ್ ಕೈಲಿ ಪತ್ರ ಕೊಟ್ಟಳು. ಪತ್ರವನ್ನು ಓದಿದ ಚೇತನ್ ಗೂ ಶಾಕ್ ಆಯಿತು.
"ಅಲ್ಲ,ಹದಿನೈದು ದಿನಗಳ ಮಗುವನ್ನು ತಂದು ನಮ್ಮದೆಂದೇ ಸಾಕಿ ಸಲಹಿದ ಮಗುವು ಇಂದು ಇಷ್ಟು ಬೇಗ ಹೇಗೆಲ್ಲಾ ಯೋಚಿಸುವ ಶಕ್ತಿ ಬೆಳೆಸಿಕೊಂಡು ಹೊರಟುಬಿಟ್ಟಿತಲ್ಲ, ಅವಳಿಗೆ ನಾವು ಏನು ಕಡಿಮೆ ಮಾಡಿದ್ದೆವು? ಅವಳಿಗೆ ಯಾರು ವಿಷಯ ತಿಳಿಸಿರಬಹುದು?" ಚೇತನ್ ಪೇಚಾಡಿಕೊಂಡಾಗ,ಚೈತ್ರಳಿಗೆ ಇದ್ದಕ್ಕಿದ್ದಂತೆ ಅಂದಿನ ಆ ಘಟನೆ ನೆನಪಾಯಿತು. ಈಗ ವಾರದ ಹಿಂದೆ ಚೈತ್ರ ಒಂದು ದಿನ ತಲೆನೋವೆಂದು ಮನೆಗೆ ಬಂದಿದ್ದಾಗ,.ಮನು ಶಾಲೆಯಿಂದ ಬಂದವಳು, ತುಂಬಾ ಸಮಯ ತನ್ನ ಗೆಳತಿ ಶಶಿಯೊಂದಿಗೆ ಗೇಟ್ ಬಳಿ ನಿಂತು ಏನೋ ಮಾತನಾಡುತ್ತಿದ್ದುದು, ಅದನ್ನು ಗಮನಿಸಿ ತಾನು ಹೊರಗೆ ಬಂದಾಗ,ತನ್ನನ್ನು ನೋಡಿದ ತಕ್ಷಣ ಮನು ಗಾಬರಿಗೊಂಡಿದ್ದು, ನಂತರ ಮನು ಇದ್ದಕ್ಕಿದ್ದಂತೆ ಬದಲಾದದ್ದು ಎಲ್ಲವೂ ನೆನಪಾದವು. ಹೀಗಾಗಿ ಮನುವಿನ ಬದಲಾವಣೆ ಯ ಹಿಂದೆ ಯಾರದೋ ಕೈವಾಡವಿದೆ ಎಂಬುದು ಅವಳಿಗೆ ಅರ್ಥವಾಯಿತು.
"ಮನು ದು ತಪ್ಪಿಲ್ಲ ರಿ, ಬೆಳೆಯುತ್ತಿರುವ ಅವಳಲ್ಲಿ ಹಲವಾರು ಗೊಂದಲಗಳು ಏಳುವುದು ಸಹಜ, ಅವಳ ತಿಳಿಯಾದ ಮನಸ್ಸಿನ ಮೇಲೆ ಯಾರೋ ಕಲ್ಲು ಹೊಡೆಯುವ ಕೆಲಸ ಮಾಡಿದ್ದಾರೆ.ಹೇಗೋ, ಒಟ್ಟಾರೆ ತಾನೇನು ಮಾಡುತ್ತಿದ್ದೇನೆಂಬುದನ್ನು ಬರೆದಿಟ್ಟು
ಹೋ ಗಿದ್ದಾಳಲ್ಲ ಬಿಡಿ"
ಚೈತ್ರ ಮಂಕಾಗಿ ಕುಳಿತಳು.
ಚೇತನ್ ತಾಯಿ ಜಾನಕಮ್ಮನವರಂತೂ ಬಾಯಿಗೆ ಬಂದಂತೆ ಮನುವಿನ ವಿರುದ್ಧವಾಗಿ ವಟಗುಟ್ಟುತ್ತಲೇ ಇದ್ದರು.
"ಯಾರಿಂದಲೋ ವಿಷಯ ತಿಳಿಯುವ ಬದಲು ,ನಾವೇ ತಿಳಿಸಿಬಿಡಬೇಕಿತ್ತು, ಅದಕ್ಕಾಗಿ ನಾನು ಇನ್ನು ಸ್ವಲ್ಪ ಕಾಲಾವಕಾಶಕ್ಕಾಗಿ ಕಾಯುತ್ತಿದ್ದೆ, ಅಷ್ಟರೊಳಗೆ ಈ ಅನಾಹುತ ಆಗಿ ಹೋಯಿತು," ಚೇತನ್ ಪೇಚಾಡಿಕೊಂಡ. ಮಗುವನ್ನು ಪಡೆಯುವಾಗ ಬಾಪೂಜಿ ಆಶ್ರಮದ ಮ್ಯಾನೆಜೆರ್ ,ಮಗುವು ಪ್ರೌಡಳಾದಾಗ, ನಿಜ ತಿಳಿಸಿಬಿಡಬೇಕೆಂದು ಹೇಳಿದ್ದ ಮಾತುಗಳು ಅವನಿಗೆ ನೆನಪಾದವು.
ಮನು ತಾನೇ ಮನೆಗೆ ಹಿಂದಿರುಗಿ ಬರುವುದಾಗಿ ತಿಳಿಸಿದ್ದುದರಿಂದ,ಎಲ್ಲರೂ ಒಂದು ರೀತಿ ಸಮಾಧಾನಗೊಂಡಿದ್ದರೂ,ವಯಸ್ಸಿಗೆ ಬಂದ ಹುಡುಗಿ ಎಲ್ಲಿ ಅಲೆಯುತ್ತಿದ್ದಾಳೋ ಏನೋ? ಎಂಬ ಆತಂಕ ಚೈತ್ರ ಳನ್ನು ಕಾಡದಿರಲಿಲ್ಲ.ಅವಳು ಎಲ್ಲಿ ಹೋಗಿರಬಹುದೆಂಬುದನ್ನು ಹೇಗಾದರೂ ಪತ್ತೆ ಮಾಡಬೇಕೆಂದು, ಅವಳನ್ನು ತಂದಿದ್ದ ’ಬಾಪೂಜಿ ಆಶ್ರಮ’ಕ್ಕೆ ವಿಷಯ ತಿಳಿಸಿದ್ದರು. ಚೈತ್ರ ಅವಳ ಶಾಲೆಗೆ ಹೋಗಿ ,ಪ್ರಿನ್ಸಿಪಾಲ್ ರ ಜೊತೆ ಮಾತನಾಡಿದಾಗ, ಅವರು, "ಇತ್ತೀಚೆಗೆ ಮನಸ್ವಿನಿ ಯಾರೊಂದಿಗೂ ಬೆರೆಯದೆ, ಪಾಠದ ಕಡೆಗೂ ಗಮನ ಕೊಡದೆ ಯಾವಾಗಲೂ ಒಬ್ಬಳೆ ಮಂಕಾಗಿ ಇರುತ್ತಿದ್ದುದನ್ನು ಅವಳ ಟಿಚರ್ಸ್ ಗಮನಿಸಿ,ನನಗೆ ವಿಷಯ ತಿಳಿಸುತ್ತಿದ್ದರು. ನಾನು ನಿಮ್ಮನ್ನು ಕರೆಸುವಂತೆ ಅವಳ ಕ್ಲಾಸ್ ಟಿಚರ್ಸ್ ಹತ್ತಿರ ಹೇಳಿದ್ದೆ. ಅಷ್ಟರಲ್ಲಿ ನೀವೇ ಬರುವಂತಾಯಿತು. ಸೊ ಸಾರಿ" ಎಂದು ಹೇಳಿದಾಗ, ಚೈತ್ರ ಳ ಅನುಮಾನ ಹೆಚ್ಛಾಯಿತು.
ಕಡೆಗೆ ಅವಳ ಕ್ಲೋಸ್ ಫ್ರೆಂಡ್ ಶಶಿಯನ್ನು ವಿಚಾರಿಸೋಣವೆಂದು , ಅವಳು ಶಶಿಯ ಬಳಿಗೆ ಬಂದು ಕೇಳಿದಳು.ಮುಂದೆ ತನಗೇನಾಗುತ್ತದೋ ಎಂಬ ಭಯದಿಂದ ಶಶಿ, ಎಲ್ಲವನ್ನೂ ಬಾಯಿಬಿಟ್ಟಳು.
"ಆಂಟಿ, ಈಗ ಒಂದೆರಡು ತಿಂಗಳಿನಿಂದ ಅವಳಿಗೆ ತಾನು ದತ್ತುಪುತ್ರಿ ಎಂಬ ವಿಷಯ ತಿಳಿದುಹೋಗಿ, ಅವಳ ನಿಜವಾದ ತಂದೆತಾಯಿಯನ್ನು ನೋಡಬೇಕೆಂದು ಹಂಬಲಿಸುತ್ತಲೇ ಇದ್ದಳು. ಹಾಗಾಗಿ ಅವಳು ಎಲ್ಲಾ ಅನಾಥಾಶ್ರಮಗಳಿಗೂ ಹೋಗಿ, ತನ್ನ ನಿಜವಾದ ತಂದೆ ತಾಯಿಯ ಬಗ್ಗೆ ತಿಳಿದುಕೊಳ್ಳಬೇಕೆಂದು ಆಗಾಗ್ಗೆ ನನ್ನ ಬಳಿ ಹೇಳುತ್ತಿದ್ದಳು. ಇಷ್ಟೇ ನನಗೆ ಗೊತ್ತಿರುವ ವಿಷಯ".
"ಅವಳಿಗೆ ಈ ವಿಷಯ ಹೇಗೆ ಗೊತ್ತಾಯಿತು?"ಚೈತ್ರ ಶಶಿಯನ್ನು ಮತ್ತೆ ಕೇಳಿದಾಗ,
"ಆಂಟಿ, ಒಂದು ದಿನ ನಮ್ಮ ಅಪ್ಪ ಅಮ್ಮ ಇಬ್ಬರೂ ಮನುವನ್ನು ಬಾಪೂಜಿ ಆಶ್ರಮದಿಂದ ದತ್ತು ತಂದ ವಿಷಯ ಮಾತನಾಡಿಕೊಳ್ಳುತ್ತಿದ್ದಾಗ,ನಾನು ಕೇಳಿಸಿಕೊಂಡಿದ್ದೆ. ಒಂದು ದಿನ ಮನುವಿಗೆ ಈ ವಿಷಯವನ್ನು ಗುಟ್ಟಾಗಿ ತಿಳಿಸಿ ಬಿಟ್ಟೆ.ಐ ಆಮ್ ಸಾರಿ ಆಂಟಿ,ನನ್ನನ್ನು ಕ್ಷಮಿಸಿ ಬಿಡಿ"ಇಷ್ಟು ಹೇಳಿದ ಶಶಿ ಮುಂದಿನ ಮಾತುಕತೆಗೆ ಅವಕಾಶ ನೀಡದೆ ಮನೆಗೆ ಓಡಿಬಿಟ್ಟಳು.
ಶಶಿಯಿಂದ ವಿಷಯ ತಿಳಿದ ಮೇಲೆ ಚೈತ್ರಳಿಗೆ ಇನ್ನೊಂದು ರೀತಿ ಯೋಚನೆಯಾಯಿತು. ಮನೆಯ ನಾಲ್ಕುಗೋಡೆಯ ಒಳಗೆ ಗೌಪ್ಯವಾಗಿಟ್ಟಿದ್ದ ವಿಷಯ ಹೇಗೆ ಹೊಸಿಲು ದಾಟಿ,ನಮ್ಮ ಮನೆಗೇ ಮುಳುವಾಯಿತು.ಆಗತಾನೆ ಪ್ರಪಂಚಕ್ಕೆ ಬಂದಿಳಿದಿದ್ದ, ಹಸುಗೂಸನ್ನು ಸ್ವಂತ ಮಗುವಿನಂತೆ ಯಾವುದೇ ಕೊರತೆ ಇಲ್ಲದೆ, ಪ್ರೀತಿ ಅಕ್ಕರೆಗಳನ್ನು ತೋರಿಸಿ ಬೆಳಸಿದ್ದೆವು. ಪ್ರೀತಿಯ ಮಡಿಲಿಗಿಂತ, ಹೆತ್ತ ಒಡಲೇ ಹೆಚ್ಚೆ?ಕರುಳಸಂಬಂಧಕ್ಕೆ ಇಷ್ಟು ಶಕ್ತಿ ಇದೆಯ ?.
ಇದೇ ಯೋಚನೆಯಲ್ಲೇ ಹಗಲು ಕಳೆದು ಇರುಳು ಬಂದಿತ್ತು.ರಾತ್ರಿ ಹತ್ತುಗಂಟೆಯ ಹತ್ತಿರ ಸಮಯ ಸರಿದಿತ್ತು. ಆದರೂ ಮನಸ್ವಿನಿಯ ಸುಳಿವಿಲ್ಲ. ಎಲ್ಲರ ಆತಂಕ ಎಲ್ಲೆ ಮೀರಿತ್ತು.
ಇತ್ತ ಪುನೀತ್ ನ ಸಹಕಾರದಿಂದ, ಬಾಪೂಜಿ ಆಶ್ರಮಕ್ಕೆ ಫೋನ್ ಮಾಡಿ,’ ಹದಿನಾರು ವರ್ಷದ ಹುಡುಗಿ, ತನ್ನ ತಂದೆ ತಾಯಿಯ ಬಗ್ಗೆ ಕೇಳಿಕೊಂಡು ಬಂದಿದ್ದಳ’ಎಂದು ವಿಚಾರಿಸಿದಾಗ, ಅಲ್ಲಿಯ ಮುಖ್ಯಸ್ಥರು,
"’ಒಂದು ಹುಡುಗಿ ಮಧ್ಯಾಹ್ನ ಇಲ್ಲಿಗೆ ಬಂದಿದ್ದಳು,ನಾವು ಅವಳಿಗೆ ತಿಳುವಳಿಕೆ ಹೇಳಿ ಕಳುಹಿಸಿದ್ದೇವೆ. ನೀವು ಇದುವರೆಗೂ ನಿಜವನ್ನು ಆ ಹುಡುಗಿಗೆ ಯಾಕೆ ತಿಳಿಸಿಲ್ಲ, ಅದಕ್ಕೇ ಹೀಗಾಗಿರೋದು, ನಾವು ನಮ್ಮ ಆಶ್ರಮದ ಒಬ್ಬರ ಜೊತೆ ನಿಮ್ಮ ಮಗಳನ್ನು ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದೇವೆ."
ಎಂದು ಎಲ್ಲಾ ವಿಚಾರವನ್ನೂ ತಿಳಿಸಿದಾಗ, ಚೇತನ್ ಹಾಗೂ ಚೈತ್ರಳಿಗೆ ನಿರಾಳವಾಯಿತು.
ಚೇತನ್ ಫೋನ್ ಇಟ್ಟ ಐದು ನಿಮಿಷಕ್ಕೆ, ಮನೆಯ ಮುಂದೆ ಜೀಪ್ ನಿಂತತಾಗಿ, ಎಲ್ಲರೂ ಮುಂಬಾಗಿಲಿನತ್ತ ಧಾವಿಸಿದರು. ಬಾಪೂಜಿ ಆಶ್ರಮದ ಒಬ್ಬ ಹಿರಿಯರು, ಮನಸ್ವಿನಿಯೊಂದಿಗೆ ಜೀಪಿನಿಂದ ಇಳಿದು ಬಂದಾಗ, ಎಲ್ಲರ ಮನಸ್ಸಿನ ಆತಂಕಗಳು ದೂರಾದವು.
ನಿಧಾನಗತಿಯಲ್ಲಿ,ತಲೆ ಬಗ್ಗಿಸಿಕೊಂಡು ಬರುತ್ತಿದ್ದ ಮನಸ್ವಿನಿ, ಚೈತ್ರಳನ್ನು ಕಂಡ ಕೂಡಲೇ ಬಿಗಿದಪ್ಪಿಕೊಂಡು ಜೋರಾಗಿ ಅಳಲು ಪ್ರಾರಂಭಿಸಿದಾಗ, ಎಲ್ಲರೂ ಒಳಕ್ಕೆ ನಡೆದರು. ಮನಸ್ವಿನಿ ಒಳಗೆ ಹೋದ ನಂತರ, ಆಶ್ರಮದ ಹಿರಿಯರು ಚೇತನ್ ಗೆ ವಂದಿಸಿ, ಹೊರಟುಬಿಟ್ಟರು.
ತನ್ನ ಮನದ ದುಃಖದ ಆವೇಗ ಕಡಮೆಯಾಗುವ ತನಕ, ಅತ್ತು ಅತ್ತು ಹಗುರವಾದ ನಂತರ, ಮನಸ್ವಿನಿ ಎಲ್ಲರಲ್ಲೂ ಕೈಮುಗಿದು ಕ್ಷಮೆ ಯಾಚಿಸಿದಳು.
"ಅಪ್ಪ,ಅಮ್ಮ ನನ್ನನ್ನು ಕ್ಷಮಿಸಿಬಿಡಿ. ನನಗೆ ನನ್ನ ಗೆಳತಿಯರಿಂದ ನಾನು ನಿಮ್ಮ ದತ್ತುಪುತ್ರಿ ಎಂಬ ತಿಳಿದಾಗಲಿಂದ, ನನ್ನ ನಿಜವಾದ ತಂದೆ ತಾಯಿಯ ಬಗ್ಗೆ ತಿಳಿದುಕೊಳ್ಳಬೇಕೆಂಬ ಕುತೂಹಲ ಹಾಗು ಹಂಬಲ ಹೆಚ್ಚಾಗುತ್ತಿತ್ತು. ನನಗೆ ಇದನ್ನು ಬಿಟ್ಟು ಬೇರೆ ಏನೂ ಬೇಡವೆನಿಸಿ, ಎಲ್ಲದರಲ್ಲೂ ಆಸಕ್ತಿ ಕಳೆದುಕೊಂಡೆ. ಆ ಸಮಯದಲ್ಲಿ ನನ್ನ ಆಪ್ತ ಗೆಳತಿ ಶಶಿ, ನನ್ನ ಸಹಾಯಕ್ಕೆ ನಿಂತು, ಇಲ್ಲಿಯ ಎಲ್ಲಾ ಅನಾಥಾಶ್ರಮದ ವಿವರಗಳನ್ನು ತಂದುಕೊಟ್ಟಳು. ನಂತರ ನಾನು ನನ್ನ ಹೆತ್ತವರನ್ನು ಅರಸುತ್ತಾ ಹೊರಟೆ. ಒಂದೆರಡು ಮೂರು ಆಶ್ರಮಗಳನ್ನು ಮುಗಿಸಿ,ಬಾಪೂಜಿ ಆಶ್ರಮಕ್ಕೆ ಬಂದಾಗ, ಅಲ್ಲಿಯ ಮ್ಯಾನೇಜರ್ ನನ್ನ ಕಣ್ಣು ತೆರೆಸಿ ಬುದ್ಧಿ ಹೇಳಿದರು." ಹೇಳುತ್ತ ಹೇಳುತ್ತ ಮನು ಬಿಕ್ಕಲು ಶುರು ಮಾಡಿದಾಗ, ಚೇತನ್ ಅವಳಿಗೆ ನೀರು ತಂದು ಕುಡಿಯಲು ಕೊಟ್ಟ.ಚೈತ್ರ ಅವಳ ಬೆನ್ನನ್ನು ನೇವರಿಸುತ್ತಿದ್ದಳು.ಸ್ವಲ್ಪ ಹೊತ್ತು ಅವಳಿಗೆ ಸಮಾಧಾನ ವಾದ ನಂತರ, ಎಲ್ಲರೂ ಅವಳಿಗೆ ಧೈರ್ಯ ಹೇಳಿ, ಊಟಕ್ಕೆ ಎಬ್ಬಿಸಿದಾಗ, ಮನು ಮತ್ತೆ ತನ್ನ ಮಾತುಗಳನ್ನು ಮುಂದುವರಿಸಿದಳು.
"ಅಮ್ಮ, ಆಶ್ರಮದ ಮ್ಯಾನೆಜರ್ ನನ್ನನ್ನು ಕರೆದುಕೊಂಡು ಇಡೀ ಆಶ್ರಮವನ್ನು ಸುತ್ತಿಸಿ, ಮಿಕ್ಕ ಹುಡುಗರನ್ನು ತೋರಿಸುತ್ತ,’ ಇವರಾರಿಗೂ ಇನ್ನೂ ಯಾವ ತಂದೆ ತಾಯಿಯರು ಸಿಕಿಲ್ಲ,ನಿನಗೆ ಕೇವಲ ನೀನು ಹುಟ್ಟಿದ ಹದಿನೈದು ದಿನಗಳಲ್ಲಿ ತಂದೆ ತಾಯಿ ಸಿಕ್ಕಿದ್ದಾರೆ,ನಿನಗಾಗಿ ಒಂದು ಮನೆ ಸಿಕ್ಕಿದೆ, ಸಮಾಜದಲ್ಲಿ ಒಂದು ಸ್ಥಾನ ಸಿಕ್ಕಿದೆ, ಪ್ರೀತಿ ವಿಶ್ವಾಸ ಸಿಕ್ಕಿದೆ, ಆದರೂ ನೀನು ಯಾಕೆ ನಿನ್ನ ಹೆತ್ತವರ ಬಗ್ಗೆ ತಲೆಕೆಡಿಸಿಕೊಳ್ಳುತ್ತೀಯ,? ಅವರಾರೆಂದು ನಮಗೂ ಗೊತ್ತಿಲ್ಲ, ನೀನು ಹುಟ್ಟಿದ ಕೆಲವೇ ಘಂಟೆಗಳೊಳಗೆ ನಿನ್ನನ್ನು ನಮ್ಮ ಆಶ್ರಮದ ಮುಂದೆ ಮಲಗಿಸಿ ಹೋಗಿದ್ದರು. ನಿನ್ನನ್ನು ಮಡಿಲಲ್ಲಿಟ್ಟುಕೊಂಡು, ಅಕ್ಕರೆಯಿಂದ ಮನೆಗೆ ಕೊಂಡೊಯ್ದು,ತಮ್ಮ ಮಗಳಾಗಿಸಿಕೊಂಡು ಪ್ರೀತಿಯಿಂದ ನೋಡಿಕೊಳ್ಳುತ್ತಿರುವ ನಿನ್ನ ಈಗಿನ ತಂದೆ ತಾಯಿಯೇ ನಿನಗೆ ನಿಜವಾದ ತಂದೆ ತಾಯಿಯರು, ಬೇಡದ ಯೋಚನೆಗಳನ್ನು ಬಿಟ್ಟು,ಇಷ್ಟು ವರ್ಷಗಳು ಇದ್ದಂತೆ ಮುಂದೆಯೂ ಇರು. ಅಂತಹ ತಂದೆ ತಾಯಿಯರು ನಿನಗೆ ಸಿಕ್ಕಿರುವುದು ನಿನ್ನ ಪುಣ್ಯ,ಇನ್ನು ಮುಂದೆ, ನಿನ್ನ ಹೆತ್ತವರನ್ನು ಹುಡುಕುವ ಪ್ರಯತ್ನ ಮಾಡಬೇಡ.ಕೇವಲ ಹೆತ್ತುಬಿಟ್ಟು ಬೀದಿಗೆ ಇಟ್ಟು ಹೋದ ನಿನ್ನ ನಿಜವಾದ ಹೆತ್ತವರಿಗಿಂತ, ನಿನ್ನನು ಎದೆಗಾನಿಸಿಕೊಂಡು ಅಕ್ಕರೆಯನ್ನುನೀಡುತ್ತಾ ನಿನಗಾಗಿ ಹಂಬಲಿಸುವ ನಿನ್ನ ಸಾಕು ತಂದೆ ತಾಯಿಯರೇ ನಿಜವಾಗಿ ನಿನ್ನ ತಂದೆ ತಾಯಿಯರು’ಎಂದು ನನ್ನ ಕಣ್ಣು ತೆರೆಸಿದರು.ಇನ್ನು ಮುಂದೆ ಎಂದಿಗೂ ಇಂತಹ ತಪ್ಪು ಮಾಡುವುದಿಲ್ಲ, ನನಗೆ ದೇವಕಿ ಅಮ್ಮನಿಗಿಂತ ಯಶೋದೆ ಅಮ್ಮನೇ ಸರ್ವಸ್ವ. ಹೆತ್ತ ಒಡಲಿಗಿಂತ ಸಾಕಿದ ಮಡಿಲೇ ನನಗೆ ಹಿತವಾದದ್ದು ಎಂಬುದು ನನಗೆ ಈಗ ಅರ್ಥವಾಯಿತು.ದಯವಿಟ್ಟು ನನ್ನ ತಪ್ಪನ್ನು ಕ್ಷಮಿಸಿಬಿಡಿ"
ಮನಸ್ವಿನಿ ಕೈಮುಗಿದು ಕೇಳಿಕೊಂಡಾಗ.ಚೇತನ್ ಹಾಗೂ ಚೈತ್ರ ಅವಳನ್ನು ಅಪ್ಪಿಕೊಂಡು ಸಂತೈಸಿದರು.ಬೆಳಿಗ್ಗಿನಿಂದ ಇದ್ದ ಎಲ್ಲರ ಆತಂಕಗಳೂ ದೂರವಾಗಿ, ಎಲ್ಲರ ಮನಸ್ಸೂ ಹಗುರವಾದವು.