Achala B.Henly

Abstract Classics Inspirational

4.2  

Achala B.Henly

Abstract Classics Inspirational

ಸಂಶಯ ಪಿಶಾಚಿ

ಸಂಶಯ ಪಿಶಾಚಿ

4 mins
399


ವಿಭಾಳ ಗಂಡ ಇತ್ತೀಚಿಗೇಕೋ ಸಂಶಯ ಪಿಶಾಚಿಯಂತೆ ಆಡುತ್ತಿದ್ದ. ತನ್ನ ಆಫೀಸಿನ ವೇಳೆಯಲ್ಲಿಯೂ ನಾಲ್ಕೈದು ಸಲ ಅವಳ ಮೊಬೈಲಿಗೆ ಕರೆ ಮಾಡಿ "ಏನು ಮಾಡುತ್ತಿದ್ದೀಯ, ಎಲ್ಲಿದ್ದೀಯ?" ಎಂದು ವಿಚಾರಿಸುವುದು, ಆಕೆ ಮೊಬೈಲಿನ ಕರೆ ತುಂಡರಿಸುವವರೆಗೂ ಮೆಲ್ಲನೆ ಕೇಳಿಸಿಕೊಳ್ಳುತ್ತಲೇ ಇರುವುದು, ತರಕಾರಿ-ಸೊಪ್ಪು ಮಾರುವವರು ಮನೆಯ ಮುಂದೆ ಬಂದಾಗ ಅವಳು ತೆಗೆದುಕೊಳ್ಳಲು ಹೋದರೆ, ಎಲ್ಲಿ ಯಾರಾದರೂ ಅವಳ ಮೇಲೆ ಕಣ್ಣು ಹಾಕಿಬಿಡುತ್ತಾರೋ ಎಂದು ಆತಂಕದಿಂದಲೇ ಕಿಟಕಿಯಿಂದ ನೋಡುತ್ತಲೇ ಇರುವುದು, ಹೀಗೆ ಒಂದೆರಡಲ್ಲ ಅವನ ಅತಿರೇಕದ ಬುದ್ಧಿ!!


ಮೊದಮೊದಲು ವಿಭಾಳಿಗೆ ಗಂಡ ತನ್ನ ಮೇಲೆ ಇಟ್ಟಿರುವುದು ಅತಿಯಾದ ಪ್ರೀತಿ ಅಂದುಕೊಂಡು ಖುಷಿಯಾಗುತ್ತಿದ್ದಳು. ಆದರೆ ಅದು ಪ್ರೀತಿಗಿಂತ ಹೆಚ್ಚು ಅನುಮಾನದ ಧಾಟಿಯಲ್ಲಿಯೇ ಇದೆ ಎಂದು ಬರುಬರುತ್ತಾ ಅರ್ಥವಾಯಿತು. ಈಗಂತೂ ಅವಳಿಗೆ ತನ್ನ ಗಂಡ ಮನೆಯಲ್ಲಿ ಇದ್ದರೆ ಉಸಿರುಗಟ್ಟಿಸುವಂತೆ ಆಗುತ್ತಿತ್ತು.


ಸದಾ ಎಲ್ಲದರ ಮೇಲೆಯೂ ಸಂಶಯ ಅವನಿಗೆ. ವಿಭಾ ಅಡುಗೆ ಮನೆಗೆ ಹೋದ ತಕ್ಷಣ ಅವಳ ಫೋನನ್ನು ತೆಗೆದುಕೊಂಡು ಅವಳು ಯಾರು ಯಾರಿಗೆ ಕರೆ ಮಾಡಿದ್ದಾಳೆ, ಯಾರಿಂದ ಕರೆ ಬಂದಿತ್ತು ಎಂದು ಚಾಚೂ ತಪ್ಪದೇ ಚೆಕ್ ಮಾಡುತ್ತಿದ್ದ. ನಂತರ ವಾಟ್ಸಾಪ್ ತೆಗೆದು ಯಾವುದಾದರೂ ಗೊತ್ತಿಲ್ಲದ ನಂಬರ್ ನಿಂದ ಮೆಸೇಜು ಬಂದಿದೆಯಾ ಎಂದು ಪರೀಕ್ಷಿಸುತ್ತಿದ್ದ.


ಈ ರೀತಿ ಅವನ ಅನುಮಾನದ ಹುತ್ತ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಲೇ ಇತ್ತು. ಆದರೆ ಇದರಿಂದ ಅವನ ಮತ್ತು ಅವನ ಪತ್ನಿಯ ಸಂಬಂಧದಲ್ಲಿ ಬಿರುಕು ಮೂಡುತ್ತಿದೆ ಎಂಬ ಸಂಗತಿ ಮಾತ್ರ ಅವನಿಗೆ ತಿಳಿಯುತ್ತಿರಲಿಲ್ಲ!


ಆ ದಿನವೂ ಸಹ ಎಂದಿನಂತೆ ಮಧ್ಯಾಹ್ನದ ವೇಳೆಗೆ ವಿಭಾಳಿಗೆ ಫೋನು ಮಾಡಿ "ಊಟ ಆಯ್ತಾ, ಮನೆಯಲ್ಲೇ ಇದ್ದೀಯ?" ಎಂದು ವಿಚಾರಿಸಿದ. ಇನ್ನು ಅಡುಗೆಯಾಗುತ್ತಿದ್ದರೂ ಚುಟುಕಾಗಿ "ಹೂಂ ಮಾಡಿದೆ" ಎಂದು ಉತ್ತರಿಸಿದಳು ವಿಭಾ. ಅಷ್ಟೊತ್ತಿಗೆ ಪೇಪರ್ ಬಿಲ್ ಹುಡುಗ ಬಂದನೆಂದು ಕರೆಯನ್ನು ತುಂಡರಿಸದೆ ಅವನಿಗೆ ಎರಡು ತಿಂಗಳ ದುಡ್ಡು ಕೊಟ್ಟು, ಚಿಲ್ಲರೆ ತೆಗೆದುಕೊಂಡು, ಗೇಟ್ ಹಾಕಿ, ಮನೆಯ ಒಳಗೆ ಬಂದು "ಉಸ್ಸಪ್ಪ ಇನ್ನು ಅನ್ನ ಮಾಡಿ ಊಟ ಮಾಡಿದರಾಯ್ತು" ಎಂದುಕೊಂಡು ಅಡುಗೆ ಮನೆಗೆ ಹೋದಳು.


ತಟ್ಟನೆ ಗಂಡನಿಂದ ಮತ್ತೊಂದು ಕರೆ ಬಂದಿತು. ಇವನೇಕೆ ಮತ್ತೆ ಫೋನು ಮಾಡುತ್ತಿದ್ದಾನೆ ಎಂದು "ಹಲೋ" ಎಂದಳು ವಿಭಾ. "ಏನೇ ಇನ್ನೂ ಅನ್ನವನ್ನೇ ಮಾಡಿಲ್ಲ, ಆಗಲೇ ಊಟ ಆಯ್ತು ಎಂದು ಫೋನ್ ಮಾಡಿದಾಗ ಹೇಳಿದೆ! ಅದೆಷ್ಟು ಸುಳ್ಳು ಹೇಳ್ತಿ ನೀನು? ಎಲ್ಲವನ್ನೂ ಕೇಳಿಸಿಕೊಂಡೆ ಕಣೆ ನಾನು. ಇನ್ನೂ ಏನೇನು ಸುಳ್ಳು ಇಲ್ಲಿಯವರೆಗೂ ಹೇಳಿ, ನಂಬಿಸಿ ನನಗೆ ಮೋಸ ಮಾಡಿದ್ದೀಯಾ?" ಎಂದು ರೇಗಿದನು.


ಗಾಬರಿ ಮತ್ತು ಬೇಸರದಿಂದ ವಿಭಾಳಿಗೆ ಏನು ಮಾಡಬೇಕೆಂಬುದು ತೋಚಲಿಲ್ಲ. ಮಧ್ಯಾಹ್ನದ ಊಟವನ್ನು ಸಹ ಮಾಡದೆ, ಹಾಗೆಯೇ ನಿದ್ದೆಗೆ ಜಾರಿದಳು. ಸಂಜೆ ಎದ್ದವಳೇ "ದೇವರೇ ಮತ್ತೆ ಇವತ್ತು ಮನೆಯಲ್ಲಿ ಜಗಳವಾ? ನನ್ನ ಗಂಡನೇಕೆ ಹೀಗೆ ಅನುಮಾನದ ಪಿಶಾಚಿ ಆದ? ಅಲ್ಲ, ಅಷ್ಟು ಹೊತ್ತು ಕರೆಯನ್ನು ಕಟ್ ಮಾಡದೆ ಕಳ್ಳನಂತೆ ನನ್ನ ಮಾತುಗಳನ್ನು ಕೇಳಿಸಿಕೊಂಡದ್ದು ಅವನಿಗೆ ತಪ್ಪು ಎನಿಸಲಿಲ್ಲ. ಆದರೆ ಊಟ ಮಾಡಿದೆ ಎಂದು ಹೇಳಿದ್ದು ಇವನಿಗೆ ದೊಡ್ಡ ತಪ್ಪಾಯಿತಂತೆ!".


"ಈ ಅನುಮಾನವೆಂಬ ಕಳೆ ಬೇಡವೆಂದರೂ ನನ್ನ ಗಂಡನ ತಲೆಯಲ್ಲಿ ಈಗೀಗ ಹೆಚ್ಚಾಗಿಯೇ ಬೆಳೆದುಬಿಟ್ಟಿದೆ. ಬೇಡವೆಂದರೂ ಈ ಅನುಮಾನದ ಭೂತದಿಂದಾಗಿ ಚೆನ್ನಾಗಿದ್ದ ನಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಈಗ ಈ ಸಂಶಯದ ಕಳೆಯನ್ನು ಬೇರು ಸಹಿತ ನಾನೇ ಹೇಗಾದರೂ ಕಿತ್ತು ಹಾಕಬೇಕು. ಇನ್ನೂ ಹೆಚ್ಚಿಗೆ ಬೆಳೆಯಲು ಬಿಟ್ಟರೆ ಡಾಕ್ಟರ್ ತನಕ ಹೋಗಬೇಕಾಗಬಹುದು..!" ಎಂದುಕೊಂಡು ಮನಸ್ಸಿನಲ್ಲಿಯೇ ಒಂದು ಸ್ಪಷ್ಟ ಯೋಜನೆಯನ್ನು ರೂಪಿಸಿ ಅದರಂತೆ ನಡೆಯಲು ಸನ್ನಧಳಾದಳು..!


ಮೊದಲಿನ ಹಂತವಾಗಿ "ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆಂಬ" ಸತ್ಯವನ್ನು ಅರಿತುಕೊಂಡಳು. ಇದರ ಪರಿಣಾಮ ತನ್ನ ಫೋನಿಗೆ ಒಂದು ಮೊಬೈಲ್ ಪಾಸ್ವರ್ಡ್ ಹಾಕಿದಳು. ಸಂಜೆ ಎಂದಿನಂತೆ ಜಗಳ ತೆಗೆದ ಗಂಡ, ನಂತರ ವಿಭಾ ಅಡುಗೆ ಮನೆಗೆ ಹೋದ ತಕ್ಷಣ ಅವಳ ಫೋನನ್ನು ಚೆಕ್ ಮಾಡಲು ಶುರು ಮಾಡಿದ. ಫೋನ್ ಗೆ ಪಾಸ್ವರ್ಡ್ ಹಾಕಿದ್ದರಿಂದ ಎಷ್ಟೇ ಪ್ರಯತ್ನಪಟ್ಟರೂ ಓಪನ್ ಮಾಡಲು ಸಾಧ್ಯವಾಗಲಿಲ್ಲ.


ವಿಭಾಳ ಹತ್ತಿರ ಕೋಪದಿಂದಲೇ ಹೋದ ಅವಳ ಗಂಡ, "ಇದೇನು ವಿಭಾ, ಎಂದೂ ಪಾಸ್ವರ್ಡ್ ಹಾಕದವಳು ಇವತ್ತು ಫೋನಿಗೆ ಹಾಕಿದ್ದೀಯಾ?" ಎಂದು ಕೇಳಿದಳು. ಏನೂ ಗೊತ್ತಿಲ್ಲದವಳಂತೆ "ಇಲ್ಲ ರೀ, ನಿಮ್ಮ ಪುಟ್ಟ ಮಗ ಸ್ಕೂಲಿಂದ ಬಂದ ತಕ್ಷಣ ನನ್ನ ಮೊಬೈಲಿನಲ್ಲಿ ಆಟ ಆಡಲು ಶುರು ಮಾಡಿದರೆ, ನನಗೆ ವಾಪಸ್ಸು ಕೊಡು ಎಂದು ಎಷ್ಟೇ ಹೇಳಿದರೂ ಕೊಡುವುದಿಲ್ಲ!".


"ಸ್ಕೂಲ್ ನಲ್ಲಿ ಅವನ ಟೀಚರ್ ಸಹ ಮೊಬೈಲ್ ಆಟದಿಂದ ಓದಿನ ಕಡೆಗೆ ಅವನ ಗಮನ ಕಡಿಮೆಯಾಗಿದೆ" ಎಂದರು. ಹಾಗಾಗಿ ನೀವು ನಿಮ್ಮ ಮೊಬೈಲ್ ಫೋನ್ ಗೆ ಹಾಕಿದಂತೆ ನಾನು ಸಹ ಪಾಸ್ವರ್ಡ್ ಹಾಕಿಟ್ಟೆ!" ಎಂದಳು.


ಅವಳ ಸ್ಪಷ್ಟ ನುಡಿಗಳನ್ನು ಕೇಳಿಯೇ ಅವನಿಗೆ ಮತ್ತೂ ಮಾತು ಮುಂದುವರಿಸಲು ಆಗಲಿಲ್ಲ. ಮತ್ತೆ ಅವಳ ಹತ್ತಿರ ಫೋನ್ ಅನ್ಲಾಕ್ ಮಾಡು ಎಂದು ಕೇಳಿ, ಚೆಕ್ ಮಾಡುವುದು ಮುಜುಗರದ ಸಂಗತಿ ಎನಿಸಿತು ಅವನಿಗೆ. ಕಷ್ಟಪಟ್ಟು ಅಂತೂ ಸುಮ್ಮನಾದನು.


ಮಾರನೇ ದಿನ ಭಾನುವಾರ. ರಜೆ ಇದ್ದುದ್ದರಿಂದ ಬೆಳಗ್ಗೆಯಿಂದಲೇ ಮನೆಯಲ್ಲಿ ಇದ್ದ ವಿಭಾಳ ಗಂಡ. ಎಂದಿನಂತೆ ಸೊಪ್ಪು-ತರಕಾರಿ ಮಾರುವವ ಬಂದ ತಕ್ಷಣ, ಪೇಪರ್ ಓದುತ್ತಿದ್ದವ ಕಿಟಕಿ ಹತ್ತಿರ ಚೇರ್ ಹಾಕಿ ಕುಳಿತ. ತನ್ನ ಚಿನ್ನದಂತಹ ಹೆಂಡತಿಯ ಮೇಲೆ, ತರಕಾರಿ ಖರೀದಿಸುವಾಗ ಯಾರಾದರೂ ಕೆಟ್ಟ ಕಣ್ಣು ಹಾಕಿದರೆ ಎಂಬ ಭಯದಿಂದ!


ಹೀಗೆಯೇ ಮಾಡಬಹುದು ಎಂದು ಮೊದಲೇ ಗೊತ್ತಿದ್ದರಿಂದ ವಿಭಾ ನಗುತ್ತಾ ಬಂದು ಬುಟ್ಟಿ ಮತ್ತು ದುಡ್ಡನ್ನು ಗಂಡನ ಕೈಗೆ ಕೊಟ್ಟು, "ರೀ ಮಧ್ಯಾಹ್ನಕ್ಕೆ ಸ್ಪೆಷಲ್ ಅಡುಗೆ ಮಾಡುತ್ತಿದ್ದೇನೆ. ನೀವೇ ಹೋಗಿ ಈ ಚೀಟಿಯಲ್ಲಿ ಬರೆದಿರುವ ತರಕಾರಿ ತನ್ನಿ" ಎಂದಳು. ಅಲ್ಲಿಗೆ ವಿಭಾಳ ಗಂಡನಿಗೆ ಮತ್ತೊಂದು ಶಾಕ್.


"ಇವಳೇನು ಬರುಬರುತ್ತಾ ನನ್ನನ್ನೇ ಮಂಗ ಮಾಡುತ್ತಿದ್ದಾಳೆಯೇ..? ಯಾವಾಗಲೂ ನನ್ನ ಮಾತಿಗೆ ಹೆದರುತ್ತಿದ್ದವಳು, ಈಗೇಕೆ ಹೀಗೆ ನನಗೆ ಕೆಲಸ ಹೇಳುತ್ತಾಳಲ್ಲಾ..?! ನನ್ನ ಯೋಜನೆಗಳೆಲ್ಲ ಇವಳಿಗೆ ಹೇಗೆ ಗೊತ್ತಾಗುತ್ತಿದೆ..? ಎಂದೂ ಕಾಣದ ಸ್ಪಷ್ಟತೆಯೊಂದು ಇತ್ತೀಚಿಗೆ ನನಗೆ ಅವಳಲ್ಲಿ ಗೋಚರಿಸುತ್ತಿದೆಯಲ್ಲ..!!" ಎಂದು ಮನಸ್ಸಿನಲ್ಲಿ ಅಂದುಕೊಂಡು ಅವಳು ಹೇಳಿದ ಎಲ್ಲಾ ತರಕಾರಿಗಳನ್ನು ತಂದುಕೊಟ್ಟ.


ಮಾರನೇ ದಿನವಾಯ್ತು. ಎಂದಿನಂತೆ ವಿಭಾಳ ಗಂಡ ಹನ್ನೊಂದು ಗಂಟೆಯ ಸುಮಾರಿಗೆ ವಿಭಾಳಿಗೆ ಕಾಲ್ ಮಾಡೋಣ ಎಂದುಕೊಂಡನು. ಅಷ್ಟರೊಳಗೆ ವಿಭಾ ಎರಡು ಸಲ ಫೋನ್ ಮಾಡಿ, "ತಿಂಡಿ ಆಯ್ತಾ ರೀ, ಊಟ ಆಯ್ತಾ ರೀ?" ಎಂದು ಪ್ರೀತಿಯಿಂದ ಉಲಿದಳು.


ಆಫೀಸಿನ ಕೆಲಸದ ನಡುವೆ ತನ್ನ ಪತ್ನಿಯ ಈ ಸರ್ಪ್ರೈಸ್ ಕರೆಗಳು ಅವನನ್ನು ಕಂಗೆಡಿಸಿದವು. ಮತ್ತೆ ಮಧ್ಯಾಹ್ನ ಊಟದ ನಂತರ ಕಂಪ್ಯೂಟರ್ ಮುಂದೆ ಕುಳಿತವನಿಗೆ, ಸಣ್ಣಗೆ ತೂಕಡಿಕೆ ಬಂದಿತು. ಅಷ್ಟೊತ್ತಿಗೆ ಮತ್ತೊಂದು ಕರೆ ವಿಭಾಳಿಂದ. "ರೀ ಹೇಗೆ ನಡೀತಾ ಇದೆ ಕೆಲಸವೆಲ್ಲ?" ಎಂದು ಕೇಳಿದಳು.


"ನೀನು ಪದೇ ಪದೇ ಫೋನು ಮಾಡುತ್ತಿದ್ದರೆ, ನಾನು ಕೆಲಸವನ್ನು ಹೇಗೆ ಮಾಡಲಿ? ಇಡೇ ಫೋನು!" ಎಂದು ಬೈದನು. ಆದರೆ ವಿಭಾ ಕರೆಯನ್ನು ತುಂಡರಿಸಲಿಲ್ಲ. ಲೈನ್ ನಲ್ಲಿಯೇ ಇದ್ದಳು. ಹತ್ತು ನಿಮಿಷಗಳ ಆಫೀಸಿನ ಮಾತು ಕಥೆಗಳನ್ನೆಲ್ಲ ಕೇಳಿಸಿಕೊಂಡಳು. ನಂತರ ಕರೆ ಇನ್ನೂ ಕಟ್ ಆಗಿಲ್ಲ ಎಂದು ಅವನಿಗೆ ತಿಳಿದಾಗ, ತರತುರಿಯಲ್ಲಿಯೇ ಕರೆಯನ್ನು ಕತ್ತರಿಸಿದನು. ಈ ರೀತಿ ಗಂಡನಲ್ಲಿ ಬೆಳೆದಿದ್ದ ಸಂಶಯದ ಕಳೆಗಳನ್ನೆಲ್ಲ ಯಶಸ್ವಿಯಾಗಿ ಕತ್ತರಿಸಿ ಹಾಕಲು ಪ್ರಯತ್ನಿಸಿದಳು ವಿಭಾ.


ಕೆಲವು ತಿಂಗಳುಗಳೇ ಕಳೆದಿವೆ ಈಗ. ವಿಭಾಳ ಗಂಡನಿಗೆ ಮೊದಲಿದ್ದ ಹಾಗೆ ಅನುಮಾನಪಡುವ ದುರಭ್ಯಾಸ ಈಗ ಅಷ್ಟಾಗಿ ಕಾಣುತ್ತಿಲ್ಲ. ತನ್ನ ಗಂಡನ ಈ ಕೆಟ್ಟ ಗುಣ ಕ್ರಮೇಣ ಕಡಿಮೆಯಾಗುತ್ತಿದೆ ಎಂದು ವಿಭಾ ಖುಷಿಯಾಗಿದ್ದಾಳೆ. ಒಂದೊಮ್ಮೆ ಅವಳ ಗಂಡನಿಗೆ, ಅವಳಿಗೆ ಅಥವಾ ಅವಳ ಪುಟ್ಟ ಮಗನಿಗೆ ಎಂದಾದರೊಮ್ಮೆ ಬೇಡದ ದುರಭ್ಯಾಸಗಳು ಹುಲ್ಲುಗಾವಲಿನ ಕಳೆಗಳಂತೆ ಮೈಮನಸ್ಸುಗಳಿಗೆ ಹತ್ತಿದರೂ, ಅದನ್ನು ಹೇಗೆ ಕೊನೆಗಾಣಿಸಬೇಕೆಂಬ ತಿಳುವಳಿಕೆ ಮತ್ತು ಸ್ಪಷ್ಟತೆ ಅವಳಿಗೆ ಇದೆ.


ಸ್ಪಷ್ಟ ಚಿತ್ರಣವನ್ನು ರೂಪಿಸಿಕೊಂಡು, ಆತ್ಮವಿಶ್ವಾಸದಿಂದ ಅವಳು ಮಾಡುವ ಯೋಜನೆಗಳು, ಅವಳಿಗೆ ಗೆಲುವನ್ನು ತಂದುಕೊಡಲು ಸಹಾಯಕವಾಗಿವೆ..!!


Rate this content
Log in

Similar kannada story from Abstract