ನೀರು-ಕಣ್ಣೀರು
ನೀರು-ಕಣ್ಣೀರು
(ಗೆಳತಿಯರಾದ ಸುಮಿ, ಗೌರಿ ಮತ್ತು ಕಮಲಿ ನಡುವೆ ಹೀಗೊಂದು ಕಾಲ್ಪನಿಕ ಹಾಸ್ಯ ಸಂಭಾಷಣೆ)
ಸುಮಿ: ಲೇ ಗೌರಿ - ಕಮಲಿ ಏನಂತೆ ಗೊತ್ತಾ ವಿಷ್ಯ..? ನಾಳೆಯಿಂದ ಪ್ರತಿದಿನ ಫ್ರೀಯಾಗಿ ನೀರು ಕೊಡ್ತಾರಂತೆ..!! ಇಷ್ಟು ದಿನ ಕರೆಂಟ್ ಫ್ರೀಯಾಗಿ ಕೊಟ್ಟರಲ್ಲ..? ಹಾಗೆಯೇ ಇನ್ನು ಮೇಲೆ ನೀರು ಸಹ ಫ್ರೀಯಾಗಿ ದಿನ ಬರುತ್ತಂತೆ ಕಣೆ..!!
ಕಮಲಿ : ಏನು, ನೀರನ್ನು ಫ್ರೀಯಾಗಿ ಕೊಡ್ತಾರಂತ..? ಏನು ಒಳ್ಳೆ ವಿಷ್ಯ ಹೇಳ್ದೆ, ಬೆಳ್ಳಗೆನೇ ಸುಮಿ..? ಖುಷಿಗೆ ಒಂದು ಲೋಟ ನೀರು ಗಟಗಟ ಅಂತ ಕುಡೀಬೇಕು ಅನಿಸ್ತಾ ಇದೆ..!!
ಸುಮಿ: ಹೂಂ ಕಣೆ ಅನ್ಸತ್ತೆ ನಿಂಗೆ..?! ಒಳ್ಳೆ ವಿಷಯ ಹೇಳಿದವಳು ನಾನು. ನಿಂಗೆ ನೀರು ಕುಡೀಬೇಕು ಅನ್ಸುತ್ತೆ..!! ಹೋಗೆ...
ಕಮಲಿ: ಅಯ್ಯೋ ಬೇಸರ ಮಾಡ್ಕೋಬೇಡವೆ ಮಾರಾಯ್ತಿ..!! ನಿನಗೂ ಒಂದು ಲೋಟ ನೀರು ಕೊಡ್ತೀನಿ. ಸಿಹಿ ಸುದ್ದಿ ಹೇಳಿದ್ಯಾ ಅಂತ. ಎರಡು ಸ್ಪೂನ್ ಸಕ್ರೆ ಸಹ ಹಾಕಿಕೊಡ್ತೀನಿ ಆಯ್ತಾ..?!
ಸುಮಿ: ಹೋಗೆ ಕಮಲಿ... ನೀರು ಜೊತಗೆ ಸಕ್ರೆನಾ..!! ಅದೇನು ಹಾಲು-ಸಕ್ರೆ ಕುಡಿದ ಹಾಗೆ ಅಂದುಕೊಂಡ್ಯಾ..!! ಜುಗ್ಗಿ ಕಣೆ ನೀನು. ಬೇಕಿದ್ರೆ ಒಂಚೂರು ನಿಂಬೆಹಣ್ಣು ಹಿಂಡು, ನಿಂಬೆ ಜ್ಯೂಸು ಅಂತಾದ್ರೂ ಕುಡಿತೀನಿ..!
ಕಮಲಿ: ಅಯ್ಯೋ ನೀನು ಮನೆಗೆ ಫ್ರೀಯಾಗಿ ಹಾಲು ಕೊಡ್ತಾರೆ ಅಂದಿದ್ರೆ, ಆಗ ಸಕ್ಕರೆ ಹಾಕಿದ ಹಾಲೇ ಒಂದು ಲೋಟ ಕೊಡ್ತಿದ್ದೆ. ನೀನು ಹಾಗೆ ಹೇಳಿಲ್ಲವಲ್ಲ. ನೋಡೋಣ ನಿಂಬೆಹಣ್ಣಿದ್ರೆ ಒಂಚೂರು ಹಾಕಿಕೊಡಕ್ಕೆ ಟ್ರೈ ಮಾಡ್ತೀನಿ..!!
ಗೌರಿ: ಓಹ್ ಸರಿ ಬಿಡಿ. ಬಿಟ್ರೆ ಹೀಗೆ ಬೀದಿ ಮಧ್ಯೆ ಕಿತ್ತಾಡ್ತಾ ಇರ್ತೀರಾ..!! ಒಂಚೂರು ಲಾಜಿಕ್ ಇಲ್ಲ. ಸುಮ್ನೆ ಬಾಯಿಗೆ ಬಂದ ಹಾಗೆ, ತನ್ನದೇ ಸರಿಯಂತ ಮಾತಾಡೋದು..!
ಸುಮಿ: ಯಾಕೆ ಗೌರಿ ಲಾಜಿಕ್ಕು- ಮಾಜಿಕ್ಕು ಅಂತ ನಮ್ಮನ್ನ ಬಯ್ತಿಯಾ..? ಫ್ರೀ ಆಗಿ ಮನೆಗೆ ನೀರು ಬರ್ತದೆ ಅಂದ್ರೆ ನೀನೂ ಖುಷಿಪಡೋದು ತಾನೇ..!!
ಗೌರಿ: ಮೊದ್ಲು ನಿಂಗೆ ಸರಿಯಾಗಿ ಒಂದು ಕೊಡಬೇಕು. ಮಧ್ಯದಲ್ಲಿ ಇದ್ಯಾ ಅಂತ, ನೀನೇ ಲೀಡರ್ ಅಂದುಕೊಂಡಿದ್ಯಾ..! ಅದಕ್ಕೆ ಮನ್ಸಿಗೆ ತೋಚಿದ್ದು ಹೇಳ್ತಿಯಾ..! ಅಲ್ವೇ ಅದ್ಯಾವಾಗ ನಿನ್ನೊಬ್ಬಳಿಗೆ ಮಾತ್ರ ನೀರು ಫ್ರೀ ಅಂತ ಸರಕಾರದವರು ಅಂದ್ರು..? ಯಾವ್ದೋ ಕನಸು ಬಿದ್ದಿರಬೇಕು, ಅದನ್ನೇ ಹೇಳ್ತಾ ಇದ್ಯಾ...
ಕಮಲಿ: ಹೌದಾ ಗೌರಿ, ನಂಗೆ ಗೊತ್ತು ಇವಳು ಯಾವಾಗಲೂ ಹೀಗೆ ಅಂತ. ಯಾರಾದ್ರೂ ಕೇಳಿಸ್ಕೋತಾರೆ ಅಂದ್ರೆ ರೈಲು ಚೆನ್ನಾಗಿ ಬಿಡ್ತಾಳೆ..!!
ಗೌರಿ: ಹೂಂ ಮತ್ತೆ. ನಿನ್ನಂತವರು ಇದ್ರೆ, ಬರೀ ರೈಲಲ್ಲ ಬುಲೆಟ್ ಟ್ರೈನ್ ಅನ್ನು ಬಿಡ್ತಾಳೆ ಇವಳು..! ಸರಿಯಾಗಿ ಕುಡಿಯೋದಕ್ಕೆ ನೀರಿಲ್ಲ ಅಂತ ಒದ್ದಾಡ್ತಾ ಇದ್ದೀವಿ, ಇವಳಿಗೆ ಫ್ರೀಯಾಗಿ ದಿನಾ ನೀರು ಬಿಡ್ತಾರಂತೆ. ಅಲ್ವೇ ಸುಮಿ ಎರಡು ದಿನಕ್ಕೆ ಬರ್ತಾ ಇದ್ದ ನೀರು, ನಾಲ್ಕು ದಿನಕ್ಕೊಮ್ಮೆ ಬರ್ತಾ ಇದೆ. ಅದು ಕಣ್ಣೀರು ಬರುವ ರೀತಿ ನಿಧಾನಕ್ಕೆ..!! ಇನ್ನು ಫ್ರೀಯಾಗಿ ಬೇರೆ ನೀರು ಕೊಡ್ತಾರಾ..?! ಇರೋ ನೀರನ್ನೇ ಕೊಡ್ತಾ ಇಲ್ಲ. ಸರಿಯಾಗಿ ಮಳೆ ಬಂದಿಲ್ಲ ಅಂತ. ನಮ್ಮನೆಲಂತೂ ನಾಲ್ಕು ದಿನಕ್ಕೆ ಒಬ್ಬೊಬ್ಬರು ಸ್ನಾನ ಮಾಡ್ತಾ ಇದ್ದೀವಿ..! ಹೀಗೆ ಆದ್ರೆ, ಮುಂದೆ ನಾಲ್ಕು ದಿನಕ್ಕೆ ಒಬ್ಬರಂತೆ ತಿಂಡಿ ಊಟ ಅನ್ಸುತ್ತೆ..!! ಈ ಟೈಮಲ್ಲಿ ಈ ತರ ಬುರುಡೆ ಬಿಟ್ರೆ ಫ್ರೆಂಡ್ ಅಂತಾನೂ ನೋಡ್ದೆ, ಒಂದು ಕೊಡ್ತೀನಿ ಹುಷಾರ್..!!
ಕಮಲಿ: ಹಾಗೆ ಮಾಡು ಗೌರಿ ಇವಳಿಗೆ, ಬುದ್ಧಿ ಬರುತ್ತೆ. ಯಾವಾಗಲೂ ಜೋಕು ಜೋಕು..!! ನಗ್ತಾ ಇರೋದು ನೋಡು ಇವಳು. ಬನ್ನಿ ಎಲ್ಲಾರು ಮನೆಗೆ ಹೋಗೋಣ. ನೀರು ದೊಡ್ಡವರ ಕಣ್ಣೀರ ತರ ಬರ್ತಾ ಇದ್ಯಾ, ಅಥವಾ ಚಿಕ್ಕ ಮಕ್ಕಳ ಕಣ್ಣೀರ ತರ ಜೋರಾಗಿ ಬಿಟ್ಟಿದ್ದಾನಾ ನೋಡೋಣ..! ಇವತ್ತೇನಾದ್ರೂ ನೀರು ಬರದೇ ಇರಬೇಕು, ನೋಡ್ತಾ ಇರು ಸುಮಿ ಏನು ಮಾಡ್ತೀನಿ ಅಂತ..!!
