ಆಚಾರ್ಯ ದೇವೋಭವ
ಆಚಾರ್ಯ ದೇವೋಭವ


ಕಿಕ್ಕಿರಿದ ಟ್ರಾಫಿಕ್'ನಲ್ಲಿ ನಿಧಾನವಾಗಿ ಕಾರು ಚಲಾಯಿಸುತ್ತಾ ಬರುತ್ತಿದ್ದ ಡಾ.ಸುದರ್ಶನ್ ನ ಕಾರಿಗೆ ಅಡ್ಡಲಾಗಿ ಬಂದ ವಯೋವೃದ್ಧರೊಬ್ಬರು , ಅವನ ಕಾರಿನ ಪಕ್ಕದಲ್ಲೇ ಪ್ರಜ್ಞಾ ಶೂನ್ಯರಾಗಿ ಬಿದ್ದು ಬಿಟ್ಟಾಗ, ಕಾರನ್ನು ಪಕ್ಕಕ್ಕೆ ಪಾರ್ಕ್ ಮಾಡಿ ಕೆಳಕ್ಕಿಳಿದ ಡಾ.ಸುದರ್ಶನ್, ಆ ಹಿರಿಯರ ಬಳಿಗೆ ಬರುವವೇಳೆಗೆ, ಜನರು ಜಮಾಯಿಸಿಬಿಟ್ಟಿದ್ದರು. ಡಾ.ಸುದರ್ಶನ್ ಎಲ್ಲರಿಗೂ ಹಿಂದೆ ಸರಿಯಲು ಹೇಳುತ್ತಾ, ತಾನೊಬ್ಬ ವೈದ್ಯನೆಂದು ಹೇಳಿ, ತನ್ನ ಕತ್ತಿನಲ್ಲಿ ನೇತಾಡುತ್ತಿದ್ದ ಗುರುತಿನ ಚೀಟಿಯನ್ನು ತೋರಿಸಿ, ಆ ವೃದ್ಧರ ಬಳಿಗೆ ಬಂದು ’ಅವರಿಗೇನಾಗಿದೆ’? ಎಂದು ಚೆಕ್ ಮಾಡಲು, ಮಗ್ಗುಲಾಗಿ ಬಿದ್ದಿದ್ದ ಅವರನ್ನು ಸರಿಯಾಗಿ ತಿರುಗಿಸಿದಾಗ, ಅವನಿಗೆ ಆ ವೃದ್ಧರನ್ನು ತಾನೆಲ್ಲೋ ನೋಡಿರುವ ನೆನಪಾಗತೊಡಗಿತು. ಪ್ರಜ್ಞಾಹೀನರಾಗಿದ್ದ ಅವರನ್ನು ಅಲ್ಲಿ ನೆರದಿದ್ದವರ ಸಹಾಯದಿಂದ, ತನ್ನ ಕಾರಿನಲ್ಲಿ ಕೂರಿಸಿಕೊಂಡು, ತನ್ನ ಹಾಸ್ಪಿಟಲ್ಗೆ ಕರೆದೊಯ್ದ. ತನ್ನ ಮುಂದಿದ್ದ ಮಿರರ್ನಿಂದ ಇನ್ನೊಮ್ಮೆ ಆ ವ್ಯಕ್ತಿಯನ್ನೇ ದಿಟ್ಟಿಸಿ ನೋಡಿದಾಗ, ಅವನ ಮಸ್ತಿಷ್ಕದಲ್ಲಿ ನೆನಪುಗಳು ಸುರಳಿ ಸುರಳಿಯಾಗಿ ಬಿಚ್ಚಿಕೊಳ್ಳತೊಡಗಿದವು.
"ಹೋ ಇವರು ನನ್ನ ಕಾಲೇಜಿನ ಬಯಾಲಜಿ ಪ್ರಾಧ್ಯಾಪಕರಾಗಿದ್ದ ಪ್ರೊ. ರಾಮಮೂರ್ತಿಯಲ್ಲವೇ? ಪಾಪ, ಈಗೇಕೆ ಹೀಗಾಗಿ ಹೋಗಿದ್ದಾರೆ? ಗುರುತೇ ಸಿಗದಷ್ಟು ಬದಲಾಗಿದ್ದಾರೆ. ಏನು ಕಷ್ಟವೋ ಏನೋ? ತುಂಬಾ ವಯಸ್ಸಾಗಿರುವ ಇವರು ಇಂತಹ ಜನದಟ್ಟಣಿಯಿರುವ ಸ್ಥಳದಲ್ಲಿ ಒಬ್ಬರೇ ಏಕೆ ಬಂದರು? ಏನಾದರೂ ಹೆಚ್ಚು ಕಡಿಮೆಯಾಗಿದ್ದರೆ? ಸಧ್ಯ ನನ್ನ ಕಾರ್ ಗೇ ಸಿಕ್ಕಿಹಾಕಿಕೊಂಡದ್ದು ಒಂದು ರೀತಿ ಒಳ್ಳೆಯದೇ ಆಯಿತು. ಸೂಕ್ತವಾದ ಕಾಲಕ್ಕೆ ಸೂಕ್ತ ಚಿಕಿತ್ಸೆ ನೀಡಬಹುದು. ಮೊದಲು ತುರ್ತು ಘಟಕದಲ್ಲಿಟ್ಟು ನಿಗಾವಹಿಸಬೇಕು.
ತಾನೊಬ್ಬ ಒಳ್ಳೆಯ ವೈದ್ಯನಾಗಬೇಕೆಂಬ ಮಹದಾಸೆಯನ್ನು ಹೊತ್ತು, ಕಡುಬಡತನದಿಂದ ಬಂದಿದ್ದ ನನಗೆ ಆರ್ಥಿಕವಾಗಿ, ಹಾಗೂ ನೈತಿಕವಾಗಿ ಬೆಂಬಲಗಳನ್ನು ಕೊಟ್ಟು, ನನ್ನ ಏಳ್ಗೆಯನ್ನು ನೋಡಿ ತುಂಬಾ ಸಂತೋಷ ಪಡುತ್ತಿದ್ದ ಮಹಾನುಭಾವರಲ್ಲವೆ? ಅಷ್ಟೇ ಅಲ್ಲದೆ, ನಾನು ಊರಿಗೆ ಹೊಸಬನಾಗಿ ಬಂದಾಗ, ಅವರ ಮನೆಯಲ್ಲೇ ಇರಲು ಅವಕಾಶ ನೀಡಿ, ಅನ್ನದಾನ ನೀಡಿದ ನನ್ನ ಅನ್ನದಾತರಲ್ಲವೆ? ಅಶನ ವಸನಗಳನ್ನು ಕೊಟ್ಟು, ಕವಲುದಾರಿಯಲ್ಲಿ ದಿಕ್ಕು ಕಾಣದೆ ನಿಂತಾಗ, ಸರಿಯಾದ ಮಾರ್ಗವನ್ನು ತೋರಿಸಿದ ಮಾರ್ಗದರ್ಶಕರಲ್ಲವೇ? ನನ್ನನ್ನು ಮೆಡಿಕಲ್ ಗೇ ಸೇರಬೇಕೆಂದು ಒತ್ತಾಯಿಸಿ, ಪಿ.ಯು.ಸಿ.ಯಲ್ಲಿ ಒಂದು ಬಾರಿ ಕಡಿಮೆ ಅಂಕ ಬಂದಾಗ, ನನ್ನ ಬೆನ್ನು ತಟ್ಟಿ ಮತ್ತೊಮ್ಮೆ ಪರೀಕ್ಷೆಗೆ ಕುಳಿತುಕೊಳ್ಳುವಂತೆ ಒತ್ತಾಯ ಮಾಡಿ, ನಾನು ಉತ್ತಮ ಅಂಕಗಳನ್ನು ಗಳಿಸುವಂತೆ ಮಾಡಿದ ಅವರು ನನಗೆ ದಾರಿ ತೋರಿದ ಗುರುಗಳಲ್ಲವೆ? ಅಂದು ಅವರ ಸಹಾಯ ಸಹಕಾರಗಳಿಲ್ಲದಿದ್ದಿದ್ದರೆ, ಇಂದು ನಾನು ಇಂತಹ ಒಳ್ಳೆಯ ವೈದ್ಯನಾಗುವುದಕ್ಕೆ ಸಾಧ್ಯವಾಗುತ್ತಿತ್ತೆ? ಏನಾದರಾಗಲಿ, ಇವರಿಗೆ ಸರಿಯಾದ ಚಿಕಿತ್ಸೆ ನೀಡಿ, ಆರೋಗ್ಯವಂತರನ್ನಾಗಿ ಮಾಡುತ್ತೇನೆ. ಇದು ಇಂದು ನನಗೆ ದೊರೆತಿರುವ ಗುರುಸೇವಾಭಾಗ್ಯ. ಅವರಿಗೆ ಪ್ರಜ್ಞೆ ಬಂದ ಮೇಲೆ ಎಲ್ಲವನ್ನೂ ಕೇಳಿದರಾಯಿತು"
ಹಳೆಯ ನೆನಪುಗಳ ಗುಂಗಿನಲ್ಲೇ ಕಾರ್ ಚಲಾಯಿಸುತ್ತಿದ್ದ ಡಾ.ಸುದರ್ಶನ್ ಗೆ ಹಾಸ್ಪಿಟಲ್ ಬಂದುದೇ ತಿಳಿಯಲಿಲ್ಲ. ಕಾರ್ ಅನ್ನು
ಮಾಮುಲು ಜಾಗದಲ್ಲಿ ಪಾರ್ಕ್ ಮಾಡಿ, ತುರ್ತು ನಿಗಾ ಘಟಕದ ಸ್ಟಾಫ್ ಗಳಿಗೆ ಫೋನ್ ಹಚ್ಚಿದ. ನಂತರ ಅವನ ಹೊಸ ಪೇಷಂಟ್ ಅನ್ನು ತುರ್ತು ನಿಗಾ ಘಟಕದಲ್ಲಿ ದಾಖಲಿಸಿ, ಸ್ವಯಂ ತಾನೇ ಅವರ ಚೆಕಪ್ ಗೆ ನಿಂತ.
ಎಂಭತ್ತರ ಹರೆಯದಲ್ಲಿದ್ದ ಪ್ರೊ. ರಾಮಮೂರ್ತಿಯವರ ತಲೆಗೆ ಆಳವಾದ ಗಾಯವಾಗಿದ್ದರಿಂದ, ಇನ್ನೂ ಪ್ರಜ್ಞೆ ಬಂದಿರಲಿಲ್ಲ. ಹೊರಗಡೆ ಸ್ವಲ್ಪ ಬ್ಲೀಡಿಂಗ್ ಆಗಿ ರಕ್ತ ಒಸರುತ್ತಿತ್ತು.
ಸೂಕ್ತ ಚಿಕಿತ್ಸೆಯನ್ನು ಪ್ರಾರಂಭಿಸಿದ. ಅವರ ಹ್ಯಾಂಡ್ ಬ್ಯಾಗ್ ಅನ್ನು ನೋಡಿದಾಗ, ಅದರಲ್ಲಿ "ಜೀವನ ಸಂಧ್ಯಾ " ವೃದ್ಧಾಶ್ರಮದ ಕಾರ್ಡ್ ದೊರಕಿ, ಅಲ್ಲಿದ್ದ ಫೋನ್ ನಂಬರ್ ಅನ್ನು ಸಂಪರ್ಕಿಸಿದಾಗ, ಅವನಿಗೆ ಮತ್ತೂ ಶಾಕ್ ಆಯಿತು. ಅಲ್ಲಿಯ ಮ್ಯಾನೆಜರ್ ಪ್ರತಾಪ್ ನ ಜೊತೆಗೆ ಮಾತನಾಡಿ ಅವರಿಗೆ ಹಾಸ್ಪಿಟಲ್ ನ ವಿಳಾಸ ತಿಳಿಸಿ, ತನ್ನನ್ನು ಸಂಪರ್ಕಿಸುವಂತೆ ಸೂಚಿಸಿದ. ತನ್ನ ಹೊಸ ಪೇಷೇಂಟ್ ಬಗ್ಗೆ ಕಾಲಕಾಲಕ್ಕೆ ತನಗೆ ವಿವರಗಳನ್ನು ಕೊಡುತ್ತಿರಬೇಕೆಂದು ಅಲ್ಲಿಯ ನರ್ಸಗಳಿಗೆ ತಿಳಿಸಿ, ತನ್ನ ಮಾಮೂಲು ಕೆಲಸಗಳತ್ತ ಗಮನಹರಿಸಿದ.
ಅಂದು , ರೌಂಡ್ಸನಲ್ಲಿರಲಿ, ಒ.ಪಿ.ಡಿಯಲ್ಲಿರಲಿ, ಎಲ್ಲೇ ಇರಲಿ, ಡಾ.ಸುದರ್ಶನ್ ಗೆ ತನ್ನ ಗುರುಗಳದೇ ಚಿಂತೆಯಾಯಿತು.’ ಅಷ್ಟೊಂದು ಚೆನ್ನಾಗಿದ್ದ, ಗುರುಗಳಿಗೆ ಈ ಪರಿಸ್ಥಿತಿಯೆ? ನನ್ನಂತಹ ಅನೇಕ ಬಡ ವಿದ್ಯಾರ್ಥಿಗಳಿಗೆ ಅನ್ನದಾನ, ವಿದ್ಯಾದಾನಗಳನ್ನು ನೀಡಿರುವ ಆ ಪುಣ್ಯಾತ್ಮರಿಗೆ ಇಂದು ವೃದ್ಧಾಶ್ರಮವೆ? ಅವರ ಹೆಂಡತಿ, ಮಕ್ಕಳು ಎಲ್ಲಿ ಹೋದರು? ಇವರೊಬ್ಬರು ಮಾತ್ರ "ಜೀವನ ಸಂಧ್ಯ" ದಲ್ಲಿ ಇದ್ದಾರೆಯೆ? ವಿಷಯ ಏನೆಂದು ತಿಳಿದುಕೊಳ್ಳಲೇಬೇಕು. ನನ್ನ ಜೀವನದ ದಾರಿದೀಪವಾಗಿದ್ದ ನನ್ನ ಗುರುಗಳ ಬಾಳಿನಲ್ಲಿ ಇರುವ ಕತ್ತಲನ್ನು ಹೋಗಲಾಡಿಸಬೇಕಾಗಿರುವುದು ನನ್ನ ಕರ್ತವ್ಯವೇ ಸರಿ.'
ತಲೆಯ ತುಂಬಾ ಗುರುಗಳ ಬಗೆಗೇ ಯೋಚಿಸುತ್ತಲೇ ತನ್ನ ಕೆಲಸಗಳನ್ನೂ ಮಾಡುತ್ತಿದ್ದ ಡಾ.ಸುದರ್ಶನ್ ಗೆ ಐ.ಸಿ.ಯು.ವಿನಿಂದ ಕರೆ ಬಂದಾಗ ದಡದಡನೆ ಓಡಿದ. ಪ್ರೊ.ರಾಮಮೂರ್ತಿಯವರಿಗೆ ನಿಧಾನವಾಗಿ ಪ್ರಜ್ಞೆ ಬರುತ್ತಿತ್ತು. ಒಮ್ಮೆ ಕಣ್ಣು ಬಿಟ್ಟು ಸುತ್ತಲೂ ನೋಡಿದ ಅವರನ್ನು ಸುದರ್ಶನ್ ಮಾತನಾಡಿಸಿದ.
’ಸರ್,ಹೇಗಿದ್ದೀರಿ?"
"ಯಾರು? ನಾನೆಲ್ಲಿದ್ದೀನಿ?" ಹಳ್ಳದಿಂದ ಧ್ವನಿ ಬಂದಾಗ, ಸುದರ್ಶನ್ ಗೆ
ಎಷ್ಟೋ ನೆಮ್ಮದಿಯಾಯಿತು. ಅವರ ಕಿವಿಯ ಹತ್ತಿರ ಬಗ್ಗಿ,
"ಸರ್, ನಾನು ನಿಮ್ಮ ಶಿಷ್ಯ ಸುದರ್ಶನ್, ನೆನಪಾಯಿತ?" ಕೇಳಿದ.
"ಯಾರು ಯಾರು ನನಗೆ ನೆನಪಾಗುತ್ತಿಲ್ಲ, ಆದರೆ ನಾನು ಇಲ್ಲಿ ಯಾಕೆ ಇದ್ದೀನಿ?" ಮಾತು ತೊದಲುತ್ತಾ, ಮತ್ತೆ ಪ್ರಜ್ಞೆ ತಪ್ಪಿದಾಗ, ಅವರಿಗೆ ಸೂಕ್ತ ಚಿಕಿತ್ಸೆ ನೀಡಲು ದಿಗ್ದರ್ಶನ ನೀಡಿ, ಮತ್ತೆ ತನ್ನ ಕಂಸಲ್ಟಿಂಗ್ ರೂಂ ಕಡೆ ಹೊರಟ. ಅಲ್ಲಿಯ ಡ್ಯೂಟಿ ಮುಗಿಸಿದ ಕೂಡಲೇ ಮತ್ತೆ ಐ.ಸಿ.ಯು.ಕಡೆ ನಡೆದ. ತನ್ನ ಗುರುಗಳಿಗೆ ಪ್ರಜ್ಞೆ ಬರುವುದನ್ನೇ ಕಾಯುತ್ತಾ ಅಲ್ಲೇ ಕುಳಿತ.
’ಡಾಕ್ಟರ್, ನಿಮ್ಮನ್ನು ಕೇಳಿಕೊಂಡು ಪ್ರತಾಪ್ ಅನ್ನುವವರು
ಬಂದಿದ್ದಾರೆ" ನರ್ಸ್ ಬಂದು ಹೇಳಿದಾಗ, ಪ್ರೊ.ರಾಮಮೂರ್ತಿಯವರ ಗುರುತಿನ ಚೀಟಿ ಹಿಡಿದು ಹೊರಟ. ಇವನಿಗಾಗಿ ಕಾಯುತ್ತಿದ್ದ, ಮ್ಯಾನೇಜರ್ ಪ್ರತಾಪ್ ನ ಹತ್ತಿರ ಬಂದು, ತನ್ನ ಪರಿಚಯ ಮಾಡಿಕೊಂಡು,ಅವರನ್ನು ತನ್ನ ಚೇಂಬರ್ ಗೆ ಕರೆದುಕೊಂಡು ಹೊರಟ.
"ಸರ್, ನಾನು ಡಾ.ಸುದರ್ಶನ್, ಇಂದು ಬೆಳಿಗ್ಗೆ ನನ್ನ ಕಾರಿಗೆ ಪ್ರೊ.ರಾಮಮೂರ್ತಿ ಡಿಕ್ಕಿ ಹೊಡೆದು ಕೆಳಗೆ ಬಿದ್ದು ಪ್ರಜ್ಞಾಹೀನರಾಗಿ
ಐ.ಸಿಯು.ನಲ್ಲಿದ್ದಾರೆ.ಅವರ ಹ್ಯಾಂಡ್ ಬ್ಯಾಗ್ ನಲ್ಲಿ ಈ ಗುರುತಿನ ಚೀಟಿ ಸಿಕ್ಕಿತು. ಅದರಿಂದ ಅವರು ನಿಮ್ಮ "ಜೀವನ್ ಸಂಧ್ಯಾ" ಆಶ್ರಮದಲ್ಲಿ ಇದ್ದಾರೆಂದು ತಿಳಿಯಿತು. ಹೀಗಾಗಿ ನಿಮ್ಮನ್ನು ಕರೆಸಬೇಕಾಯಿತು. ಇದರ ಜೊತೆಗೆ ಇವರು ನನ್ನ ಕಾಲೇಜ್ ನ ಗುರುಗಳೂ ಹೌದು. ನನಗೆ ಇವರ ಬಗ್ಗೆ ತಿಳಿಯಬೇಕಾಗಿದೆ. ಒಳ್ಳೆಯ ಹುದ್ದೆ, ಸ್ವಂತ ಮನೆ, ಸುಖವಾಗಿದ್ದ ಸಂಸಾರದಲ್ಲಿ ನೆಮ್ಮದಿಯಿಂದ ಇರಬೇಕಾಗಿದ್ದ ಇವರು ಹೀಗೆ ನಿಮ್ಮ ಆಶ್ರಮದಲ್ಲಿ ಇರಬೇಕಾದ ಪರಿಸ್ಥಿತಿಯಾದರೂ ಹೇಗೆ ಬಂತು? ಹೇಳುತ್ತೀರ?’"
"ಸರ್, ಈಗ ಐದು ವರ್ಷಗಳ ಹಿಂದೆ ಒಂದು ದಿನ ಬೆಳ್ಳಂಬೆಳಗ್ಗೆ ಈ ವಯೋವೃದ್ಧರು ನಮ್ಮ ಆಶ್ರಮಕ್ಕೆ ಬಂದು ಸೇರಿದರು. ಅಂದು ಅವರು ತುಂಬಾ ನೊಂದುಕೊಂಡು ಬಂದಿದ್ದರು. ದಿನಗಳೆದಂತೆ, ನಮ್ಮ ಆಶ್ರಮಕ್ಕೆ ಹೊಂದಿಕೊಳ್ಳುತ್ತಾ ಬಂದರು. ತಿಂಗಳುಗಳು ಕಳೆದ ನಂತರ, ಇವರ ಪತ್ನಿಯ ಸಾವಿನ ನಂತರ, ಇವರೊಬ್ಬರನ್ನೇ ಬಿಟ್ಟು ವಿದೇಶಕ್ಕೆ
ಹೊರಟ ಮಕ್ಕಳ ಮೇಲೆ ಬೇಸರಮಾಡಿಕೊಂಡು, ಮನಸ್ಸಿನಲ್ಲಿ ತುಂಬಾ ನೊಂದು, ಕಡೆಗೆ ಯಾರ ಹಂಗೂ ಬೇಡವೆಂದು ನಿರ್ಧರಿಸಿ ಇಲ್ಲಿ ತಮ್ಮ ಕೊನೆಗಾಲವನ್ನು ನೆಮ್ಮದಿಯಿಂದ ಕಳೆಯಬೇಕೆಂದು ಇಲ್ಲಿಗೆ ಸೇರಿಕೊಂಡಿರುವ ವಿಷಯ ನಮಗೆ ತಿಳಿಯಿತು. ಹೇಗೋ ಜೀವನ್ ಸಂಧ್ಯಾದಲ್ಲಿರುವ ತಮ್ಮ ಸಮವಯಸ್ಕರೊಂದಿಗೆ ಸಂತೋಷದಿಂದಲೇ ಇದ್ದರು ಸರ್, ಆದರೆ ಈಗ ಒಂದು ವರ್ಷದಿಂದ ಅವರಿಗೆ ಸ್ವಲ್ಪ ಅರಳು ಮರಳಾಗಿದೆ. ಕೆಲವು ಬಾರಿ ಯಾರಿಗೂ ಹೇಳದೆ ಹೊರಗಡೆ ಬಂದುಬಿಡುತ್ತಾರೆ. ಆಗ ಇವರನ್ನು ಹುಡುಕಿಕೊಂಡು ಬರುವುದೇ ನಮಗೆ ಕಷ್ಟವಾಗುತ್ತದೆ. ನೀವೇನೋ ಇವರ ಬಗ್ಗೆ ಫೋನ್ ಮಾಡಿ ಹೇಳಿದ್ದರಿಂದ ಗೊತ್ತಾಯಿತು. ಇಲ್ಲವಾಗಿದ್ದರೆ, ಇವರನ್ನು ಹುಡುಕುವುದೇ ತುಂಬಾ ಕಷ್ಟ ಆಗುತ್ತಿತ್ತು. ಎನಿ ವೆ ಈಗ ಅವರು ಹೇಗಿದ್ದಾರೆ ಡಾಕ್ಟರ್"
ತನ್ನ ಗುರುಗಳ ಇಂದಿನ ಅವಸ್ಥೆಯನ್ನು ನೋಡಿ, ಸುದರ್ಶನ್ ಗೆ ತುಂಬಾ ದುಃಖವಾಯಿತು.
"ಅವರು ಸ್ಟೇಬಲ್ ಆಗಿದ್ದಾರೆ. ಒಮ್ಮೆ ಸ್ವಲ್ಪ ಹೊತ್ತು ಪ್ರಜ್ಞೆ ಬಂದಿತ್ತು. ಮತ್ತೆ ಹೋಗಿದೆ. ನಾನು ಅವರ ಬಗ್ಗೆ ಕೇರ್ ತೆಗೆದುಕೊಳ್ಳುತ್ತೇನೆ. ಅವರ ಮಕ್ಕಳ ಫೋನ್ ನಂಬರ್ ಇದ್ದರೆ ನನಗೆ ಬೇಕು." ಸುದರ್ಶನ್ ಕೇಳಿದಾಗ,
"ಸಾರಿ ಸರ್, ಅವರು ತಮ್ಮ ಮಕ್ಕಳ ಕಾಂಟಾಕ್ಟ್ಸ್ ಗಳನ್ನು ಆಶ್ರಮಕ್ಕೆ ಕೊಟ್ಟಿಲ್ಲ,"
ಮ್ಯಾನೇಜರ್ ಹೇಳಿದ್ದನ್ನು ಕೇಳಿ ಸುದರ್ಶನ್ ಗೆ ತುಂಬಾ ದುಃಖವಾಯಿತು. ಅತಿಯಾದ ಒಳ್ಳೆಯತನಕ್ಕೆ ಸಿಗುವ ಬೆಲೆ ಇಷ್ಟೇನಾ ಎಂದುಕೊಂಡು ನಿಟ್ಟುಸಿರಿಟ್ಟ.
" ಮಿಸ್ಟರ್ ಪ್ರತಾಪ್ , ರಾಮಮೂರ್ತಿಯವರು ನನಗೆ ಕಾಲೇಜಿನಲ್ಲಿ ಬಯಾಲಜಿ ಉಪನ್ಯಾಸಕರಾಗಿದ್ದುದರ ಜೊತೆಗೆ, ನನ್ನ ಜೀವನದ ಸರ್ವಸ್ವವೂ ಆಗಿದ್ದವರು. ಅವರ ಪಾಠ ಪ್ರವಚನಗಳು, ಸಹಾಯ ಸಹಕಾರಗಳ ಬೆಂಬಲಗಳಿಂದಲೇ ಇಂದು ನಾನು ಹೆಸರಾಂತ ನರರೋಗ ತಜ್ಞನಾಗಿರುವುದು. ಇಂದು ಬೆಳೆಗ್ಗೆ ನನ್ನ ಕಾರ್ ಗೆ ಸಿಕ್ಕಿಹಾಕಿಕೊಂಡು ಬಿದ್ದಾಗ, ಇವರನ್ನು ಈ ರೀತಿ ನೋಡಿ ನನಗೆ ಶಾಕ್ ಆಯಿತು. ಇರಲಿ, ಇವರ ಬಗ್ಗೆ ನೀವು ಚಿಂತೆ ಮಾಡುವ ಅಗತ್ಯವಿಲ್ಲ. ಇನ್ನು ಮುಂದೆ ನನ್ನ ಗುರುಗಳ ರಕ್ಷಣೆಯ ಭಾರ ನನ್ನದು. ಗುರುಗಳು ಸಂಪೂರ್ಣವಾಗಿ ಗುಣಮುಖರಾದ ನಂತರ ನಾನು ನಿಮ್ಮನ್ನು ಭೇಟಿ ಮಾಡುತ್ತೇನೆ."
ಡಾ.ಸುದರ್ಶನ್ ರವರ ಈ ಮಾತುಗಳನ್ನು ಕೇಳಿ , ಪ್ರತಾಪ್ ಗೆ ತುಂಬಾ ಆಶ್ಚರ್ಯವಾಯಿತು. ಈಗಿನ ಕಾಲದಲ್ಲಿಯೂ ಇಂತಹ ಶಿಷ್ಯರಿದ್ದಾರಲ್ಲ ಎಂದುಕೊಳ್ಳುತ್ತಾ, ಮೇಲೆದ್ದ.
ಜೀವನ್ ಸಂಧ್ಯದ ಮ್ಯಾನೇಜರ್ ನ್ನು ಕಳುಹಿಸಿಕೊಟ್ಟ ನಂತರ, ಸುದರ್ಶನ್, ಮತ್ತೆ ಐ.ಸಿ.ಯು.ಗೆ ಬರುವ ವೇಳೆಗೆ ಸರಿಯಾಗಿ, ರಾಮಮೂರ್ತಿಯವರಿಗೆ ಪ್ರಜ್ಞೆ ಬಂದಿತ್ತು. ಅವರು ಕಣ್ಣು ಬಿಟ್ಟುಕೊಂಡು ತಾನೆಲ್ಲಿದ್ದೇನೆ ಎಂದು ಸುತ್ತಲೂ ನೋಡುತ್ತಿದ್ದರು.
"ಹೇಗಿದ್ದೀರ ಸರ್, ಆರ್ ಯು ಒ.ಕೆ.?" ಡಾ.ಸುದರ್ಶನ್ ಅವರ ಹತ್ತಿರ ಬಂದು ಎಲ್ಲಾ ರೀತಿಯ ಚೆಕಪ್ ಮಾಡಿ ನೋಡಿದಾಗ, ಗುರುಗಳು ಚೇತರಿಸಿಕೊಳ್ಳುತ್ತಿರುವುದು ಕಂಡು ಬಂದಿತು. ಅವರ ಮುಂದಿನ ಚಿಕಿತ್ಸೆಗಳ ಬಗ್ಗೆ ಸಂಬಂಧಪಟ್ಟವರಿಗೆ ತಿಳಿಸಿ, ಡಾ.ಸುದರ್ಶನ್ ಮನೆಗೆ ಹೊರಡುವಾಗ, ರಾತ್ರಿ ಹತ್ತು ಗಂಟೆಯೇ ಆಗಿ ಹೋಗಿತ್ತು. ಅಂದು ರಾತ್ರಿ ಮನೆಯಲ್ಲಿ ತನ್ನ ಮಡದಿ ಸುಷ್ಮಳಿಗೆ ಬೆಳಗ್ಗಿನಿಂದ ನಡೆದ ಎಲ್ಲಾ ವಿಷಯ ತಿಳಿಸಿ, ತನ್ನ ಗುರುಗಳಿಗೆ ಒಂದು ಸರಿಯಾದ ವ್ಯವಸ್ಥೆ ಮಾಡಬೇಕೆಂದು ಹೇಳಿಕೊಂಡಾಗ, ಸುಷ್ಮಾ ಕೂಡ ಗಂಡನನ್ನು ಬೆಂಬಲಿಸಿದಳು. ತನ್ನ ಗಂಡನ ಬಾಯಿಯಿಂದ ಆಗಾಗ್ಗೆ ಈ ಗುರುಗಳ ಗುಣಗಾನವನ್ನು ಕೇಳುತ್ತಿದ್ದ ಅವಳಿಗೆ, ಗಂಡನ ನಿರ್ಧಾರವನ್ನು
ಕೇಳಿ ಖುಷಿಯಾಯಿತು.
ಡಾ.ಸುದರ್ಶನ್ ನ ನಿರಂತರ ಚಿಕಿತ್ಸೆ ಹಾಗೂ ವೈದ್ಯೋಪಚಾರಗಳಿಂದ ಪ್ರೊ.ರಾಮಮೂರ್ತಿಯವರಿಗೆ ಹಳೆಯದೆಲ್ಲವೂ ನೆನಪಾಗಿ ಸುದರ್ಶನ್ ಯಾರೆಂದು ತಿಳಿಯಿತು. ಕಡುಬಡತನದ ಕುಟುಂಬದ ಹಿನ್ನಲೆಯಿದ್ದರೂ , ಮಹತ್ವಾಕಾಂಕ್ಷೆಯನ್ನು ಹೊತ್ತು ಕೊಂಡು ಬೆಂಗಳೂರಿಗೆ ಬಂದಿದ್ದ ಹದಿನೈದರ ಹುಡುಗ ಸುದರ್ಶನ್ ಗೆ ತಮ್ಮ
ಮನೆಯಲ್ಲೇ ಇರಲು ಹೇಳಿದ್ದು, ಅವನಿಗೆ ಪಾಠ ಪ್ರವಚನಗಳಿಗೆ ವ್ಯವಸ್ಥೆ ಮಾಡಿಕೊಟ್ಟಿದ್ದು, ಅವನನ್ನು ಮೆಡಿಕಲ್ ಸೇರಲು ಪ್ರೊತ್ಸಾಹಿಸಿದ್ದು, ಒಟ್ಟಾರೆ ಅವನು ತಮ್ಮ ಮನೆಯ ಮಗನಂತೆಯೇ ಇದ್ದುದ್ದು, ಎಲ್ಲವೂ ಅವರ ಮನಃಪಟಲದಲ್ಲಿ ಹಾದು ಹೋದವು. ಈಗ ತಾವು ಅವನ ಪೇಷೆಂಟ್ ಆಗಿರುವುದು ಅವರಿಗೆ ಹೆಮ್ಮೆ ಎನಿಸಿತು. ಬಹಳ ಬುದ್ಧಿವಂತ, ಚುರುಕುಗಣ್ಣಿನ ಹುಡುಗ, ಜೊತೆಗೆ ವಿನಯಶೀಲನಾದ ಸುದರ್ಶನ್, ಅಂದು ಹೇಗಿದ್ದನೋ ಇಂದಿಗೂ ಅದೇ ರೀತಿ ಇದ್ದಾನೆ. ದೊಡ್ಡ ಡಾಕ್ಟರ್ ಎಂಬ ಗರ್ವ ಕಿಂಚಿತ್ತೂ ಇಲ್ಲ. ಆದರೆ ನನ್ನ ಸ್ವಂತ ಮಕ್ಕಳು ನನ್ನನ್ನು ಜೀವನಸಂಧ್ಯಾ ಆಶ್ರಮಕ್ಕೆ ಸೇರಿಸಿ ನೆಮ್ಮದಿಯಾಗಿ ವಿದೇಶದಲ್ಲಿ ನೆಲೆಸಿಬಿಟ್ಟಿದ್ದಾರೆ. ರಾಮಮೂರ್ತಿಗಳ ನೆನಪುಗಳು ಬಿಚ್ಚಿಕೊಳ್ಳುತ್ತ ಹೋದಂತೆ ತಮ್ಮ ಇಂದಿನ ದೈನ್ಯಸ್ಥಿತಿಗೆ ನಿಟ್ಟುಸಿರು ಬಿಟ್ಟರು.
ಪ್ರತಿದಿನವೂ ಡಾ.ಸುದರ್ಶನ್ ಸಮಯ ಮಾಡಿಕೊಂಡು ತನ್ನ ಗುರುಗಳ ಬಳಿಗೆ ಬಂದು ಅವರೊಂದಿಗೆ ತುಂಬಾ ಸಮಯ ಕಳೆಯುತ್ತಿದ್ದುದು, ರಾಮಮೂರ್ತಿಯವರಿಗೆ ತುಂಬಾ ಸಂತೋಷವಾಗುತ್ತಿತ್ತು.
ಒಂದು ವಾರದ ನಂತರ, ರಾಮಮೂರ್ತಿಯವರಿಗೆ ಹಾಸ್ಪಿಟಲ್ ನಿಂದ ಡಿಸ್ಚಾರ್ಜ್ ಮಾಡುವ ವ್ಯವಸ್ಥೆ ಆಗಿತ್ತು. ಅವರು ಜೀವನ್ ಸಂಧ್ಯ ಆಶ್ರಮದ ಮ್ಯಾನೆಜರ್ ಪ್ರತಾಪ್ ಗಾಗಿ ಕಾಯುತ್ತಿದ್ದರು. ಆ ವೇಳೆಗೆ ಸರಿಯಾಗಿ, ಡಾ.ಸುದರ್ಶನ್ ತನ್ನ ಕಾರಿನಲ್ಲಿ ಕರೆದೊಯ್ಯಲು ಬಂದಾಗ, ಅವರಿಗೆ ಆಶ್ಚರ್ಯವಾಯಿತು. ಅವರ ಪ್ರಶ್ನೆಗಳಿಗೆ ಹೆಚ್ಚು ಉತ್ತರಿಸದೇ ಅವರನ್ನು ತಮ್ಮ ಕಾರಿನಲ್ಲಿ ಕೂರಿಸಿಕೊಂಡ ಅವನು, ಕಾರನ್ನು ಸ್ಟಾರ್ಟ್ ಮಾಡಿದಾಗ, ಗುರುಗಳಿಗೆ ಶಿಷ್ಯನ ಮೌನ ಪ್ರಶ್ನೆಯಾಯಿತು.
ಶಿಷ್ಯನ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಅವರು, ಇಂದು ತಮ್ಮ ಪ್ರಶ್ನೆಯ ಉತ್ತರಕ್ಕಾಗಿ ಶಿಷ್ಯನನ್ನೇ ನೋಡುತ್ತಿದ್ದರು. ಆದರೆ ಶಿಷ್ಯ ತನ್ನ ಮೌನವನ್ನು ಮುರಿಯಲೇ ಇಲ್ಲ.
ಡಾ.ಸುದರ್ಶನ್ ನ ಕಾರು, ಜೀವನ್ ಸಂಧ್ಯ ಆಶ್ರಮದ ಮುಂದೆ ನಿಂತಾಗ, ಡಾ.ಸುದರ್ಶನ್ ಅಲ್ಲಿಯ ಮ್ಯಾನೆಜರ್ ಜೊತೆ ಚರ್ಚಿಸಿ, ರಾಮಮೂರ್ತಿಯವರ ವಸ್ತುಗಳನ್ನೆಲ್ಲಾ ತನ್ನ ಕಾರಿಗೆ ಸಾಗಿಸಿದ.
"ಸುದರ್ಶನ್ ಏನಿದೆಲ್ಲಾ? ನನ್ನ ಸಾಮಾನುಗಳನ್ನೆಲ್ಲಾ ಎಲ್ಲಿಗೆ ಸಾಗಿಸುತ್ತಿದ್ದೀಯ?" ರಾಮಮೂರ್ತಿಯವರು ಆಶ್ಚರ್ಯದಿಂದ ಕೇಳಿದರು.
"ಸರ್, ನೀವು ಇನ್ನು ಮುಂದೆ ಇಲ್ಲಿ ಇರುವಂತಿಲ್ಲ. ನನ್ನ ಮನೆಯಲ್ಲಿ ಇರಬೇಕು. ನಾನು ಈಗ ನಿಮ್ಮ ಒಂದು ಮಾತನ್ನೂ ಕೇಳುವುದಕ್ಕೆ ತಯಾರಿಲ್ಲ. ನಾನು ಇಲ್ಲಿ ಎಲ್ಲಾ ಫಾರ್ಮಾಲಿಟೀಸ್ ಮುಗಿಸುತ್ತೇನೆ. ಅಷ್ಟರೊಳಗೆ ನೀವು ಇಲ್ಲಿರುವ ನಿಮ್ಮ ಸ್ನೇಹಿತರೊಂದಿಗೆ ಮಾತನಾಡಿ ಮುಗಿಸಿಕೊಳ್ಳಿ" ಸುದರ್ಶನ್ ಕಡ್ಡಿ ತುಂಡು ಮಾಡಿದಂತೆ ಹೇಳಿದಾಗ, ರಾಮಮೂರ್ತಿಯವರೂ ಸಹ ತಾನು ಇಲ್ಲಿಂದ ಎಲ್ಲಿಗೂ ಬರುವುದಿಲ್ಲವೆಂದು ತುಂಬಾ ಹಠ ಮಾಡಿದರು.
ಕಡೆಗೆ ಸುದರ್ಶನ್ ಅವರ ಮಾತಿಗೆ ಬಗ್ಗದೆ, ತನ್ನದೇ ಆದ ವಾದಗಳನ್ನು ಮುಂದಿಟ್ಟ.
"ಸರ್, ಪ್ರತಿಯೊಬ್ಬ ಮನುಷ್ಯನಿಗೂ, ದೇವಋಣ, ಪಿತೃಋಣ ಮತ್ತು ಆಚಾರ್ಯ ಋಣ ಅಂತ ಇರುತ್ತದೆ. ಅದನ್ನು ತೀರಿಸಲೇಬೇಕೆನ್ನುತ್ತದೆ ನಮ್ಮ ಧರ್ಮಶಾಸ್ತ್ರಗಳು. ಮಾತೃ ದೇವೋ ಭವ, ಪಿತೃ ದೇವೋಭವ, ಆಚಾರ್ಯ ದೇವೋಭವ ಎನ್ನುತ್ತದೆ ಉಪನಿಷತ್ತುಗಳು. ನನಗೆ ಈಗ ತಂದೆ ತಾಯಿ ಎಲ್ಲವೂ ನೀವೇ ಆಗಿದ್ದಿರ. ನೀವು ನಮ್ಮ ಮನೆಯಲ್ಲೇ ಇರಬೇಕು. ನನ್ನ ಇಂದಿನ ಏಳ್ಗೆಗೆ ಕಾರಣರಾದ ನಿಮ್ಮನ್ನು ನಾನು ಇಲ್ಲಿ ಇರಲು ಬಿಡುವುದಿಲ್ಲ. ದಯವಿಟ್ಟು ನನ್ನ ಜೊತೆ ಹೊರಡಿ"
ಗುರು ಶಿಷ್ಯರ ವಾದದಲ್ಲಿ ಶಿಷ್ಯನೇ ಗೆದ್ದು, ಡಾ.ಸುದರ್ಶನ್ ತನ್ನ ಮನೆಗೆ ತನ್ನ ಗುರುಗಳನ್ನು ಕರೆದುಕೊಂಡು ಬಂದಾಗ, ಅವನ ಧರ್ಮಪತ್ನಿ, ಸುಷ್ಮಾ ನಗುಮುಖದಿಂದ ಗುರುಗಳನ್ನು ಸ್ವಾಗತಿಸಿದರೆ, ಅವನ ಎರಡು ಪುಟ್ಟ ಮಕ್ಕಳು, ರಾಮಮೂರ್ತಿಯವರ ಹತ್ತಿರ ಬಂದು ,’ತಾತ,ತಾತ" ಎಂದಾಗ, ಅವರ ಕಣ್ಣುಗಳಿಂದ ಆನಂದ ಭಾಷ್ಪಗಳು ಹನಿಹನಿಯಾಗಿ ಇಳಿದವು.