ಕಳೆದದು ಸಿಕ್ಕಾಗ
ಕಳೆದದು ಸಿಕ್ಕಾಗ
ಅಂದು ಬೆಳಗಿನ ಗಡಿಬಿಡಿಯಲ್ಲಿ ತನ್ನ ಕೆಲಸದಲ್ಲಿ ಮುಳುಗಿದ್ದ ಅರ್ಚನಾಳಿಗೆ , ತನ್ನ ವ್ಯಾನಿಟಿ ಬ್ಯಾಗ್ ಎಲ್ಲಿ ಇಟ್ಟಿದ್ದೀನೆಂಬ ಗಮನವೇ ಇರಲಿಲ್ಲ . ನಾಲ್ಕು ಡಬ್ಬಿಗಳನ್ನು ಸಿದ್ಧಮಾಡಿ, ಗಂಡ ಮತ್ತು ಮಕ್ಕಳ ಲಂಚ್ ಬ್ಯಾಗ್ ಗಳನ್ನು ಹೊರಗೆ ಡೈನಿಂಗ್ ಟೇಬಲ್ ಬಲ್ ಮೇಲೆ ತಂದಿಟ್ಟ ನಂತರ, ಅವಳು ತನ್ನ ಬ್ಯಾಗ್ ಗಾಗಿ ಮನೆಯೆಲ್ಲ ಹುಡುಕಾಡಿ ಕೊನೆಗೆ ಅದು ಮುಂದೆ ವರಾಂಡದ ಟಿ ಪಾಯಿಯ ಮೇಲಿರುವುದನ್ನು ನೋಡಿ, ಅದನ್ನು ತಂದು, ತನ್ನ ಲಂಚ್ ಬಾಕ್ಸ್ ಅನ್ನು ಸೇರಿಸಿದಳು. ಆ ಬ್ಯಾಗ್ ನೋಡುತ್ತಿದ್ದಂತೇ, ಅವಳಿಗೆ ಪರ್ಸ್ ಕಡೆ ಗಮನ ಹೋಯಿತು. ನಿನ್ನೆ ತಂದಿದ್ದ ಸಂಬಳದ ಹಣದ ಪರ್ಸ್ ಅನ್ನು ಬೀರುವಿಗೆ ಸೇರಿಸುವುದನ್ನೇ ಮರೆತು ಬಿಟ್ಟಿದ್ದಳು. ಈಗ ಅವಳಿದೆ ಅದು ಇದ್ದಕ್ಕಿದ್ದಂತೆ ನೆನಪಾಗಿ, ಇಂದು ಆ ಹಣದಿಂದ ಕೆಲವು ನಿಯತಕಾಲಿಕ ಉಳಿತಾಯ ಖಾತೆಗೆ ಈ ತಿಂಗಳ ಕಂತನ್ನು ಕಟ್ಟಬೇಕಾಗಿದ್ದ ವಿಷಯ ನೆನಪಾಗಿ, ಆ ಹಣ ಇಟ್ಟಿದ್ದ ಪರ್ಸ್ ಗಾಗಿ ಬ್ಯಾಗ್ ನ ಎಲ್ಲಾ ಕಾಲಂ ಗಳಲ್ಲಿ ಹುಡುಕುತ್ತಾ ಹೋದಾಗ, ಆ ಪರ್ಸ್ ಕಣ್ಣಿಗೆ ಬೀಳದಿದ್ದಾಗ, ಅವಳಿಗೆ ಆತಂಕವಾಗುತ್ತದೆ. ಸುಮಾರು ಎರಡರಿಂದ ಮೂರು ಸಾವಿರದಷ್ಟು ಹಣ ಅದರಲ್ಲಿ ಇಟ್ಟಿದ್ದರ ನೆನಪಾಗಿ, ಅರ್ಚನಾ, ಆ ಪರ್ಸ್ ಬಗ್ಗೆ ತನ್ನ ಗಂಡ ನನ್ನು ವಿಚಾರಿಸಿದಾಗ, ಅವನು ಅದನ್ನು ನೋಡಲಿಲ್ಲವೆಂದು ತಲೆಯಾಡಿಸಿ ಬಿಟ್ಟಾಗ, ಅಲ್ಲೇ ನಿಂತಿದ್ದ ಅತ್ತೆಯನ್ನು ವಿಚಾರಿಸಿದಳು. ಅವರೂ ಸಹ ತಾವು ಅವಳ ಪರ್ಸ್ ನೋಡಲಿಲ್ಲವೆಂದು ಬಿಟ್ಟಾಗ, ಅರ್ಚನಾಳಿಗೆ ತುಂಬಾ ಯೋಚನೆಯಾಗಿ, ಗಂಡ ಮಕ್ಕಳ ಮೇಲೆ ತನ್ನ ಸಿಟ್ಟನ್ನು ಹರಿ ಬಿಡಲು ಶುರು ಮಾಡಿದಾಗ, ಅವಳ ಗಂಡ ಅವಳಿಗೆ
"ಅಚ್ಚು, ನೀನು ಸಮಾಧಾನವಾಗಿ ಹುಡುಕು ಸಿಗುತ್ತದೆ, ಗಾಬರಿ ಮಾಡಿಕೊಂಡು ಹುಡುಕಬೇಡ. ಈಗ ಆಫ಼ಿಸ್ ಗೆ ಹೊತ್ತಾಗುತ್ತದೆ, ನನ್ನ ಜೇಬಿನಲ್ಲಿರುವ ಸಾವಿರ ರೂಪಾಯಿಯನ್ನು ನೀನು ತೆಗೆದುಕೊಂಡು ಹೋಗು, ಸಾಯಂಕಾಲ ಆಫ಼ಿಸ್ ನಿಂದ ಬಂದ ನಂತರ ನಿಧಾನವಾಗಿ ಪರ್ಸ್ ಹುಡುಕೋಣ, ಎಲ್ಲಿ ಹೋಗಿರುತ್ತದೆ? ಇದ್ದರೆ ಮನೆಯಲ್ಲಿಯೇ ಒಂದು ಕಡೆ ಇರುತ್ತದೆ." ಅಂತ ಹೇಳಿ, ಅವನು ಬ್ಯಾಗ್ ಹ್ಡಿದು ತನ್ನ ಕೆಲಸಕ್ಕೆ ಹೊರಟೆ ಬಿಟ್ಟಾಗ, ಅರ್ಚನ ತಲೆ ಚಚ್ಚಿಕೊಂಡಳು. ಆದರೆ ಈಗ ಅವಳಿಗೂ ಆಫ಼ಿಸ್ ಗೆ ಹೊತ್ತಾಗುತ್ತಿತ್ತು. ಸಧ್ಯಕ್ಕೆ ಆ ಮನಿ ಪರ್ಸ್ ನ ಬಗ್ಗೆ ಯೋಚಿಸುವುದನ್ನು ಪಕ್ಕಕ್ಕಿಟ್ಟು, ಮನೆಯ ಪರ್ಸ್ ನಿಂದ ಸ್ವಲ್ಪ ಹಣ ತೆಗೆದುಕೊಂಡು, ತನ್ನ ಬ್ಯಾಗ್ ಹಿಡಿದು ಗಾಡಿ ಸ್ಟಾರ್ಟ್ ಮಾಡಿದಳು. ಅಂದೆಲ್ಲಾ ಅವಳ ತಲೆಯಲ್ಲಿ ಆ ಪರ್ಸ್ ಎಲ್ಲಿ ಕಳೆದು ಹೋಯಿತೆಂಬುದರ ಬಗ್ಗೆಯೇ ಯೋಚನೆಯಾಗಿತ್ತು. ಹೇಗೋ ಅಂದಿನ ಕೆಲಸ ಮುಗಿಸಿ ಮನೆಗೆ ಬಂದ ಅವಳು, ಮನೆಯ ಇಂಚು ಇಂಚಿನಲ್ಲೂ ಆ ಪರ್ಸ್ ಗಾಗಿ ಹುಡುಕಿದ್ದೇ ಹುಡುಕಿದ್ದು. ಆದರೆ ಅವಳ ಪರ್ಸ್ ಪತ್ತೆಯಾಗಲೇ ಇಲ್ಲ. ಅನ್ಯಾಯವಾಗಿ ಮೂರು ಸಾವಿರ ಹಾಳಾಗಿ ಹೋಯಿತಲ್ಲ ಅಂತ ಅವಳು ಕೊರಗಿದ್ದೇ ಕೊರಗಿದ್ದು.
ಈ ಘಟನೆ ಕಳೆದು ಸುಮಾರು ಎರಡು ತಿಂಗಳುಗಳೇ ಕಳೆದಿರಬಹುದು, ಅರ್ಚನಾ ಕಳೆದು ಹೋದ ಮನಿ ಪರ್ಸ್ ಅನ್ನು ಮರೆತು ಬಿಟ್ಟಿದ್ದಳು. ಒಂದು ಭಾನುವಾರ, ಬೆಳಿಗ್ಗೆ ಮನೆಯನ್ನು ಕ್ಲೀನ್ ಮಾಡುತ್ತಾ ಇದ್ದಾಗ, ಅಲ್ಲೇ ಇದ್ದಕೇರಂ ಬೋರ್ಡ್ ಅನ್ನು ತೆಗೆದಿಟ್ಟು, ಅದರ ಕೆಳಗೂ ಗುಡಿಸಿಕೊಳ್ಳಲು, ಕೇರಂ ಬೋರ್ಡ್ ಮೇಲೆ ಹರಡಿದ್ದ ಪಾನ್ಸ್ ಗಳನ್ನು ಡಬ್ಬದಲ್ಲಿ ಹಾಕಿಟ್ಟು, ಬೋರ್ಡ್ ಅನ್ನು ಎತ್ತಿ ಗೋಡೆಗೆ ಒರಗಿಸಿಟ್ಟು ನೋಡಿದಾಗ, ಅವಳಿಗೊಂದು ಆಶ್ಚರ್ಯ ಕಾದಿತ್ತು. ಕೇರಂ ಬೋರ್ಡ್ ಕೆಳಗೆ ಅವಳು ಹುಡುಕುತ್ತಿದ್ದ ಮನಿ ಪರ್ಸ್ ದಿಡಿರ್ ಅಂತ ಕಣ್ಣಿಗೆ ಬಿದ್ದಾಗ, ಅವಳಿಗೆ ಖುಷಿಯಿಂದ ಕುಣಿದಾಡುವಂತಾಯಿತು. ಅವಳು ಕೂಡಲೇ ತನ್ನ ಗಂಡನನ್ನು ಕರೆದು ಆ ಪರ್ಸ್ ಅಲ್ಲಿರುವುದನ್ನು ತೋರಿಸಿದಾಗ, ಅವಳ ಗಂಡ ಅವಳನ್ನು ಛೇಡಿಸದೇ ಬಿಡಲಿಲ್ಲ.
ಮಕ್ಕಳು ಕೂಡ ಅಲ್ಲಿಗೆ ಬಂದಿದ್ದರು. ಅವಳು ,ಇದು ತನ್ನ ಮನೆಕೆಲಸದವಳ ಕೈ ಚಳಕವೇ ಅಂತ ಅಂದುಕೊಳ್ಳುತ್ತಾ, ಅದರಲ್ಲಿ ಇರಿಸಿದ್ದ ಹಣ ಇರುವುದೋ ಇಲ್ಲವೋ ಎಂಬ ಅಪನಂಬಿಕೆಯಿಂದಲೇ ಆ ಪರ್ಸ್ ನ ಜಿಪ್ ತೆಗೆದು ನೋಡಿದಾಗ, ಅದರಲ್ಲಿ ಅವಳು ಜೋಡಿಸಿಟ್ಟಿದ್ದ ಅಷ್ಟು ಹಣ ಹಾಗೇ ಇರುವುದನ್ನು ನೋಡಿ, ಅವಳಿಗೆ ತುಂಬಾ ಆಶ್ಚರ್ಯವಾಯಿತು. ಮತ್ತು ಎಂದೋ ಕಳೆದು ಹೋಯಿತೆಂದು ಕೊಂಡಿದ್ದ ಪರ್ಸ್ ಮತ್ತು ಅದರಲ್ಲಿಟ್ಟಿದ್ದ ಅಷ್ಟು ಹಣ ಮತ್ತೆ ಸಿಕ್ಕಾಗ, ಅವಳಿಗೆ ಈ ಖುಷಿಯನ್ನು ಸೆಲಿಬ್ರೇಟ್ ಮಾಡಬೇಕೆನಿಸಿ,ಅಲ್ಲೇ ನಿಂತಿದ್ದ ಅವಳ ಗಂಡ ಮತ್ತು ಮಕ್ಕಳಿಗೆ
"ಹಾಂ, ಇವತ್ತು ನನ್ನ ಕಳೆದು ಹೋದ ಪರ್ಸ್ ಹಣದ ಸಮೇತ ಸಿಕ್ಕಿದೆ. ಇದರಿಂದ ನನಗೆ ತುಂಬಾ ಖುಷಿ ಯಾಗಿದೆ. ಈ ಖೂಷಿಯನ್ನು ಖಂಡಿತ ಸೆಲಿಬ್ರೇಟ್ ಮಾಡಲೇ ಬೇಕು. ರಿ, ಇವತ್ತುಸಂಜೆ ನಾವೆಲ್ಲರೂ ಹೋಟೆಲ್ ಗೆ ಹೋಗಿ ಪಾರ್ಟಿ ಮಾಡೋಣ" ಅಂದಾಗ್ಗ, ಮಕ್ಕಳು ಖುಷಿಯಿಂದ ಕುಣಿದಾಡಿದರು. ಅವಳ ಗಂಡ ಕನ್ನಡಕದ ಸಂಧಿಯಿಂದ ಅವಳನ್ನು ಓರೆಗಣ್ಣಿನಲ್ಲಿ ನೋಡುತ್ತಾ ಮುಗುಳ್ನಗುತ್ತಿದ್ದ. ಆದರೆ ಅರ್ಚನಾ ಕಳೆದು ಹೋದ ಆ ಪರ್ಸ್ ಅನ್ನೇ ನೋಡುತ್ತಾ ಇದ್ದಳು.
ವಿಜಯಭಾರತೀ ಎ.ಎಸ್.
