ಜೀವನ ಬದಲಿಸಿದ ಪುಸ್ತಕ
ಜೀವನ ಬದಲಿಸಿದ ಪುಸ್ತಕ
ಬಹಳ ಚಿಕ್ಕ ವಯಸ್ಸಿನಿಂದಲೂ ಸಿಕ್ಕಿದ ಪುಸ್ತಕ ಮತ್ತು ವಾರಪತ್ರಿಕೆ ಮಾಸಪತ್ರಿಕೆ ಹಾಗೂ ದಿನಪತ್ರಿಕೆಗಳನ್ನು ಓದುತ್ತಲೇ ಬೆಳೆದ ನನಗೆ ಓದುವ ಹವ್ಯಾಸ ಬೆಳೆಯುತ್ತಾ ಹೋಯಿತು. ಕಾಲೇಜಿನ ದಿನಗಳಿಂದಲೂ ಹತ್ತಿರದ ಸಂಚಾರಿ ಗ್ರಂಥಾಲಯದಲ್ಲಿ ಸದಸ್ಯೆಯಾಗಿ, ಪ್ರತಿದಿನವೂ ಯಾವುದಾದರೂ ಕಥೆ ಕಾದಂಬರಿಗಳನ್ನು ತಂದು ಓದುತ್ತಾ ಇದ್ದೆ. ಈಗ ಐದು ದಶಕಗಳ ಹಿಂದೆ ದೃಶ್ಯ ಮಾಧ್ಯಮಗಳು ಇನ್ನೂ ಪ್ರಚಲಿತವಾಗದಿರುವ ಆ ದಿನಗಳಲ್ಲಿ ಕಥೆ ಪುಸ್ತಕಗಳನ್ನು ಓದಿಕೊಂಡಿರುವುದೇ ನಮ್ಮ ಎಂಟರ್ಟೈನ್ ಮೆಂಟ್ ಕೂಡ ಆಗಿತ್ತು.
ಆ ಪುಸ್ತಕಗಳನ್ನು ಓದುವಾಗ ಅದರ ಪಾತ್ರಗಳಲ್ಲಿ ಮುಳುಗಿ, ನನ್ನದೇ ಆದ ಒಂದು ಕಲ್ಪನಾಲೋಕದಲ್ಲಿ ವಿಹರಿಸುತ್ತಿದ್ದುದೂ ಉಂಟು.
ಇಂತಹ ಒಂದು ದಿನ, ನನ್ನ ಕಣ್ಣಿಗೆ ಒಂದು ಉತ್ತಮೋತ್ತಮವಾದ ಗ್ರಂಥ ಕಾಣಿಸಿ, ಅದರ ಕಡೆ ನನ್ನ ನೋಟ ಸರಿದು, ಆ ಪುಸ್ತಕವನ್ನು ತೆಗೆದುಕೊಂಡು ನೋಡಿದೆ. ಕನ್ನಡದ ಹೆಸರಾಂತ ಲೇಖಕರಾಗಿದ್ದ ಶ್ರೀಮಾನ್ ಡಿ.ವಿ.ಗುಂಡಪ್ಪ(ಡಿ.ವಿ.ಜಿ.) ಯವರು ಬರೆದಿದ್ದ ಭಗವದ್ಗೀತಾ ತಾತ್ಪರ್ಯದ ಪುಸ್ತಕ ಅದಾಗಿತ್ತು. ಅದರ ಮತ್ತೊಂದು ಹೆಸರು "ಜೀವನ ಧರ್ಮಯೋಗ " ಎಂದಿತ್ತು. ಅದುವರೆವಿಗೂ ಕೇವಲ ಕಥೆ ಕಾದಂಬರಿಗಳನ್ನು ಮಾತ್ರ ಓದುತ್ತಿದ್ದ ನನಗೆ ಅದೇಕೋ ಈ ಪುಸ್ತಕ ಬೇಡವೆನಿಸಿ ಮತ್ತೆ ರ್ಯಾಕ್ ನಲ್ಲಿ ಇಡಲು ಹೋದಾಗ, ಅಲ್ಲೇ ಇದ್ದ ಒಬ್ಬ ಹಿರಿಯರು ನನ್ನನ್ನು ಗಮನಿಸುತ್ತಿದ್ದ್ದುದು ನನಗೆ ಗೊತ್ತಾಗಲಿಲ್ಲ. ಕಡೆಗೆ ಅವರು ನನ್ನ ಹತ್ತಿರ ಬಂದು, ಆ ಪುಸ್ತಕವನ್ನು ನನ್ನ ಕೈಯ್ಯಲ್ಲಿ ಇಡುತ್ತ,
"ಮಗು, ಇದನ್ನು ನಿಮ್ಮಂತಹ ಚಿಕ್ಕ ವಯಸ್ಸಿನವರೂ ಸಹ ಓದಬಹುದು. ಇದರಲ್ಲಿ ಡಿ.ವಿ.ಜಿ.ಯವರು ಎಲ್ಲರಿಗೂ ಅರ್ಥವಾಗುವಂತಹ ಭಾಷೆಯಲ್ಲಿ ಭಗವದ್ಗೀತೆಯ ತಾತ್ಪರ್ಯವನ್ನು ತುಂಬಾ ಸರಳವಾಗಿ ನಿರೂಪಿಸಿದ್ದಾರೆ. ಒಂದು ಬಾರಿ ಓದಿ ನೋಡು." ಅಂತ ಹೇಳಿದಾಗ, ಅವರ ಮಾತಿಗೆ ಗೌರವ ಕೊಟ್ಟು, ನಾನು ಆ ಪುಸ್ತಕವನ್ನು ಮನೆಗೆ ತಂದೆ.
ಆದರೆ ಅದೇಕೋ ಬಹಳ ದಿವಸ ಅದನ್ನು ಓದುವುದಕ್ಕೆ ಮನಸ್ಸೇ ಆಗಲಿಲ್ಲ.
ಕಡೆಗೆ ನನಗೊಂದು ದಿವಸ ಮನಸ್ಸಿಗೆ ತುಂಬಾ ಬೇಸರವಾಗಿದ್ದಾಗ, ಇದ್ದಕ್ಕಿದ್ದಂತೆ ಆ ಪುಸ್ತಕದ ಹಾಳೆಗಳನ್ನು ಸುಮ್ಮನೆ ತಿರುಗಿಸುತ್ತಾ ಹೋದೆ. ಹಾಗೇ ಹಾಳೆ ತಿರುಗಿಸುತ್ತಾ ಹೋದಾಗ, ಅದರ ಬಗ್ಗೆ ಆಸಕ್ತಿ ಮೂಡಿ, ನಿಧಾನವಾಗಿ ಓದುವುದಕ್ಕೆ ಪ್ರಾರಂಭಿಸಿದೆ. ಅದೇನು ಸಮ್ಮೋಹಕತೆಯೋ ಆ ಪುಸ್ತಕದಲ್ಲಿ? ಮುಂದೆ ಸುಮಾರು ಆರು ನೂರು ಪುಟಗಳಿಗೂ ಮೀರಿರುವ ದೊಡ್ಡ ಗಾತ್ರದ ಆ ಪುಸ್ತಕವನ್ನು ಒಂದು ಸಾಲು ಬಿಡದೆ ಓದಿ ಮುಗಿಸಿದಾಗ, ನನ್ನ ಅನೇಕ ಪ್ರಶ್ನೆಗಳಿಗೆ ಉತ್ತರಗಳು ದೊರಕಿದ್ದವು.
ಹಾಗಾದರೆ ಆ ಪುಸ್ತಕದ ವಿಶೇಷತೆಯ ಬಗ್ಗೆ ತಿಳಿಸಲೇ ಬೇಕು.
ಇಪ್ಪತ್ತು ಪ್ರಕರಣಗಳು, ಹತ್ತು ಪರಿಶಿಷ್ಠಗಳಿಂದ ಕೂಡಿರುವ 635 ಪುಟಗಳ ಈ ಮಹಾಗ್ರಂಥ , ಭಗವದ್ಗೀತೆಯ ತಾತ್ಪರ್ಯವನ್ನು ಹೇಳುವುದೇ ಆಗಿದ್ದರೂ, ನಮ್ಮ ಜೀವನಕ್ಕೆ ಬೇಕಾಗಿರುವ ಜೀವನಧರ್ಮವನ್ನು ಸಾರಿ ಹೇಳುತ್ತಾ , ಉತ್ತಮವಾದ ಜೀವನಕ್ಕೆ ಒಂದು ಹೊಸನೋಟವನ್ನು ಕೊಡುತ್ತಾ ಹೋಗುತ್ತದೆ. ಭಗವದ್ಗೀತೆ ಅಂದರೆ ಇದು ಕೇವಲ ಮೋಕ್ಷಸಾಧಕ ಗ್ರಂಥ ಎನ್ನುವವರಿಗೆ , ಈ ಪುಸ್ತಕ ಹೊಸದೃಷ್ಟಿ ಕೋಣವನ್ನು ನೀಡುತ್ತದೆ. ಭಗವದ್ಗೀತೆ ಎನ್ನುವುದು ಮುಖ್ಯವಾಗಿ ನಿವೃತ್ತಿ ಮಾರ್ಗವನ್ನು ಹೇಳುವಂತಹುದು ಎನ್ನುವುದು ನಿಜವೇ ಆದರೂ, ಇದು ನಮ್ಮ ಈ ಬದುಕಿನಲ್ಲಿ ಜೀವನ ವೆಂದರೇನು? ಅದರ ಧರ್ಮವೇನು? ಜೀವನ ಸುಖಮಯವಾಗಿರುವುದಕ್ಕೆ ಹೇಗೆ ನಡೆದುಕೊಳ್ಳಬೇಕೆನ್ನುವುದನ್ನು ಹೇಳುತ್ತಾ, ಪ್ರವೃತ್ತಿ ಮಾರ್ಗದ ನಿತ್ಯ ಜೀವನದ ಸುಖಮಯ ಬದುಕಿನ ಬಗ್ಗೆಯೂ ಹೇಳಿರುವುದರಿಂದ ಈ ಪುಸ್ತಕ ಕ್ಕೆ "ಜೀವನಧರ್ಮಯೋಗ ವೆಂದೇ ಹೆಸರು ಕೊಟ್ಟಿದ್ದಾರೆ.
ನನ್ನ ಇಪ್ಪತ್ತನೇ ವಯಸ್ಸಿನಲ್ಲಿ ಓದಿದ್ದ ಈ ಪುಸ್ತಕವನ್ನು ಮುಂದೆ ನಾನು ಪ್ರೌಢಾವಸ್ತೆಯಲ್ಲಿಎರಡು ಮೂರು ಬಾರಿ ಓದಿದೆ. ಪ್ರತಿ ಬಾರಿ ಓದುವಾಗಲೂ ನನ್ನ ಮನಸ್ಸಿಗೆ ಒಂದು ಹೊಸ ಹೊಳಹು ಮೂಡುತ್ತಲೇ ಹೋಗುತ್ತಿದೆ.
ನನಗೆ ಈಗ ಪುಸ್ತಕ ಓದುವ ಸಾರ್ಥಕತೆ ಏನೆಂಬುದು ಅನುಭವವಾಗಿದೆ. ಪುಸ್ತಕವು ಹಸ್ತದಲ್ಲಿ ಮಾತ್ರ ಉಳಿಯದೇ, ನಮ್ಮ ಮಸ್ತಕದಲ್ಲಿ ಅಚ್ಚೊತ್ತಬೇಕು. ಇದು ನನ್ನ ಜೀವನದಲ್ಲಿ ಈ ಪುಸ್ತಕ ಕಲಿಸಿದ ಪಾಠ.
